ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 53: ನ್ಯಾಯ ನಿರ್ಣಯ: ಪೂರ್ವ-ಪಶ್ಚಿಮ ಮಾದರಿಗಳು
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದು ನಮ್ಮ ಸಮಾಜದಲ್ಲಿ ಸಂಘರ್ಷಗಳು ಹುಟ್ಟಿಕೊಂಡರೆ ಅದು ಒಂದೇ ರೀತಿಯಲ್ಲಿ ಬಗೆಹರಿದರೆ ಮಾತ್ರ ಸರಿ ಎಂಬ ಒತ್ತಾಯ ಹೆಚ್ಚುತ್ತಿದೆ. ಅದೆಂದರೆ ಆಧುನಿಕ ನ್ಯಾಯಾಲಯಗಳು. ಏಕೆಂದರೆ ನ್ಯಾಯಾಲಯಗಳು ಆಧುನಿಕ ಕಾನೂನು ಸಂಹಿತೆಯನ್ನು ಆಧರಿಸಿ ನಿರ್ಣಯ ನೀಡುತ್ತವೆ. ಅದಕ್ಕೆ ಪ್ರತಿಯಾಗಿ ಭಾರತದಲ್ಲಿ ಚಾಲ್ತಿಯಲಿರುವ ಅಸಂಖ್ಯಾತ ದೇಶೀ ಸಾಂಪ್ರದಾಯಿಕ ಪದ್ಧತಿಗಳು ಇಂಥ ಕಾನೂನಿನ ತಳಹದಿಯನ್ನೇ ಹೊಂದಿಲ್ಲ. ಈ ಕಾರಣದಿಂದ ಅವು ಮೌಢ್ಯ, ಬರ್ಬರ, ಪಕ್ಷಪಾತೀ ವ್ಯವಸ್ಥೆಗಳು ಎಂಬುದಾಗಿ ಬಿಂಬಿಸಲಾಗುತ್ತದೆ. ಅವು ಬರ್ಬರ ಎಂಬುದಕ್ಕೆ ಹರಿಯಾಣದ ಖಾಪ್ ಪಂಚಾಯತಿಗಳನ್ನು ಉದಾಹರಣೆಯಾಗಿ ನೀಡಿದರೆ, ಅವು ಹೇಗೆ ಪಕ್ಷಪಾತಿ ಎಂಬುದಕ್ಕೆ ಜಾತಿ ವ್ಯವಸ್ಥೆಯನ್ನು ನಿದರ್ಶನವಾಗಿ ತರಲಾಗುತ್ತದೆ. ಇವುಗಳಲ್ಲೆಲ್ಲ ನಿಜವಾದ ಜಸ್ಟೀಸ್ ಸಿಗುವುದಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಜಸ್ಟೀಸ್ ಎನ್ನುವುದು ಕಾನೂನನ್ನು ಆಧರಿಸಿಯೇ ಇರಬೇಕು ಎಂಬ ನಂಬಿಕೆ ಇದೆ. ನ್ಯಾಯಾಲಯಗಳು ಜಸ್ಟೀಸ್ ನೀಡುವ ಸ್ಥಳಗಳು. ಅದನ್ನು ನೀಡುವವನು ನ್ಯಾಯಾಧೀಶ. ಅದಕ್ಕಾಗಿ ವಾದಿಸುವವರು ನ್ಯಾಯವಾದಿಗಳು. ಹೀಗೆ ನಾವು ನ್ಯಾಯ ಎಂಬುದಾಗಿ ಯಾವ ಶಬ್ದವನ್ನು ಆಧುನಿಕ ನ್ಯಾಯಾಲಯಗಳ ಸಂದರ್ಭದಲ್ಲಿ ಬಳಸುತ್ತೇವೆಯೋ ಅದು ಜಸ್ಟೀಸ್ ಎಂಬ ಮೂಲ ಕಲ್ಪನೆಯಿಂದಾಗಿ ತನ್ನ ಪಾವಿತ್ರ್ಯತೆಯನ್ನು ಗಳಿಸಿಕೊಳ್ಳುತ್ತದೆ. ಸಾಂಪ್ರದಾಯಿಕವಾಗಿ ನ್ಯಾಯವನ್ನು ನೀಡಿಕೊಂಡು ಬಂದಿರುವ ಸಂಸ್ಥೆಗಳೆಲ್ಲವೂ ಈ ಜಸ್ಟೀಸ್ ಇಲ್ಲದ ಕಾರಣ ಅನ್ಯಾಯಗಳಾಗುತ್ತವೆ.

ಈ ಮೇಲಿನ ಅಂಶಗಳನ್ನು ಗಮನಿಸಿದಾಗ ಕಾನೂನಿಂದ ಜಸ್ಟೀಸ್ ಸಿಗುತ್ತದೆ ಎಂಬ ನಂಬಿಕೆ ಇರುವುದು ಸ್ಪಷ್ಟ. ಆದರೆ ಈ ನಂಬಿಕೆ ನಿರಾಧಾರವಾದುದು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕಾನೂನು ಮತ್ತು ಜಸ್ಟೀಸ್ಗಳ ನಡುವೆ ಒಂದು ಅಂತರವಿದೆ. ಕಾನೂನು ಇರುವುದು ಜಸ್ಟೀಸನ್ನು ನೀಡಲಿಕ್ಕೆ ಎಂದು ಯಾವ ಪಾಶ್ಚಾತ್ಯ ಕಾನೂನು ಪಂಡಿತರೂ ಹೇಳುವುದಿಲ್ಲ. ಜಸ್ಟೀಸ್ ಎನ್ನುವ ಕಲ್ಪನೆಯು ಗಾಡ್ನನ್ನು ಅವಲಂಬಿಸಿ ಇದೆ. ಗಾಡ್ ಮನುಷ್ಯನನ್ನು ತನ್ನ ಪ್ರತಿರೂಪವಾಗಿ ಸೃಷ್ಟಿಸಿದನು. ಅವನು ಪ್ರತೀ ಮನುಷ್ಯನಿಗೂ ಒಂದು ಆಂತರಿಕ ಪರಿಪೂರ್ಣತೆಯನ್ನು ನೀಡಿದ್ದಾನೆ. ಅಥವಾ ಒಂದು ಪರಿಪೂರ್ಣವಾದ ಆಂತರಿಕ ಸಮತೋಲನವನ್ನು ನೀಡಿದ್ದಾನೆ. ಅದು ನ್ಯಾಯೋಚಿತವಾದುದು ಹಾಗೂ ಯಾರಿಗೂ ಅವನು ಅನ್ಯಾಯ ಮಾಡಿಲ್ಲ. ಹಾಗಾಗಿ ಅವನು ನೈತಿಕವಾಗಿ ಸರಿಯಾಗಿಯೇ ಇದ್ದಾನೆ. ಆ ಕಾರಣದಿಂದ ಗಾಡ್ ಜಸ್ಟೀಸಿನ ಮೂರ್ತಿವೆತ್ತ ರೂಪವೇ ಆಗಿದ್ದಾನೆ. ಜಸ್ಟ್ ಎಂದರೆ ಇಲ್ಲಿ ನೈತಿಕವಾಗಿ ಸರಿಯಾದ ಕ್ರಿಯೆ ಎಂಬರ್ಥ ಬರುತ್ತದೆ. ಗಾಡ್ ನೀಡಿದ ಸಮತೋಲನೆಗೆ ಧಕ್ಕೆ ತರುವ ಯಾವುದೇ ಕೃತ್ಯವೂ ಕೂಡ ಮಾನವನಿಗೆ ತುಂಬಲಾರದ ಹಾನಿಯನ್ನು ಉಂಟುಮಾಡುತ್ತದೆ. ಹಾಗೂ ಅದು ಅನ್ಜಸ್ಟ್ ಎನಿಸಿಕೊಳ್ಳುತ್ತದೆ. ಅಂಥ ಕೃತ್ಯವನ್ನು ಎತ್ತಿಹಿಡಿಯುವುದು ಇನ್ಜಸ್ಟೀಸ್ ಆಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ಕಾನೂನು ಬೆಳೆದು ಬಂದಿದ್ದೇ ದೈವೀ ಕಾನೂನುಗಳ ಮೂಲ ಮಾದರಿಯನ್ನಿಟ್ಟುಕೊಂಡು. ಗಾಡ್ ಮನುಷ್ಯನಿಗೆ ಪರಿಪೂರ್ಣ ಆಂತರಿಕ ಸಮತೋಲನವನ್ನು ನೀಡಿದ್ದಷ್ಟೇ ಅಲ್ಲದೇ ಅದರ ರಕ್ಷಣೆಗಾಗಿ ಮಾನವರಿಗೆ ಹತ್ತು ಆಜ್ಞೆಗಳನ್ನೂ ನೀಡಿದ್ದಾನೆ. ಅವುಗಳನ್ನಾಧರಿಸಿ ಯೆಹೂದಿ ಹಾಗೂ ಕ್ರೈಸ್ತರ ಪ್ರೀಸ್ಟ್ ವರ್ಗವು ದೈವೀ ಕಾನೂನುಗಳನ್ನು ಕಾಲದಿಂದ ಕಾಲಕ್ಕೆ ನಿರೂಪಿಸಿಕೊಂಡು ಬಂದಿತು. ಅಂದರೆ ದೈವೀ ಕಾನೂನುಗಳು ಗಾಡ್ ಮನುಷ್ಯನಿಗೆ ನೀಡಿದ ಸಮತೋಲನವನ್ನು ರಕ್ಷಿಸುವ ಕೈಂಕರ್ಯಕ್ಕೆ ಬದ್ಧವಾಗಿವೆ. ಇದೇ ಮಾದರಿಯನ್ನಿಟ್ಟುಕೊಂಡು ಯುರೋಪಿನಲ್ಲಿ ಸೆಕ್ಯುಲರ್ ಪ್ರಭುತ್ವಗಳ ಕಾನೂನುಗಳು ಕೂಡ ಬೆಳೆದು ಬಂದವು. ಯಾವ ಕ್ರಿಯೆಗಳು ಮಾನವನ ಆಂತರಿಕ ಸಮತೋಲನವನ್ನು ರಕ್ಷಿಸುತ್ತವೆಯೋ, ಅಂಥ ಕ್ರಿಯೆಗಳನ್ನು ರಕ್ಷಿಸಿಕೊಂಡು ಬರುವ ಕೆಲಸವನ್ನು ಕಾನೂನು ಮಾಡುತ್ತದೆ. ಅಂಥ ಕಾನೂನುಗಳನ್ನು ಉಲ್ಲಂಘಿಸುವ ಕ್ರಿಯೆಯನ್ನು ಮಾಡಿದಾಗ ಅನ್ಯ ಮನುಷ್ಯನ ಆಂತರಿಕ ಸಮತೋಲನೆಗೆ ಧಕ್ಕೆ ಬರುತ್ತದೆ, ಹಾಗಾಗಿ ಕಾನೂನಿನ ಉಲ್ಲಂಘನೆಯು ಆಗುತ್ತದೆ.

ಪಾಶ್ಚಾತ್ಯ ಕಾನೂನುಗಳು ಸೆಕ್ಯುಲರೀಕರಣಕ್ಕೆ ಒಳಪಟ್ಟಾಗ ಜಸ್ಟೀಸನ್ನು ನೀಡುವ ಕ್ರಮಗಳೂ ರೂಪಗೊಂಡವು. ಸಾಧಾರಣವಾಗಿ ಒಬ್ಬ ಮನುಷ್ಯನಿಂದ ಮತೊಬ್ಬ ಮನುಷ್ಯನಿಗೆ ಉಂಟಾದ ಹಾನಿಯನ್ನು ನಿರ್ಣಯಿಸುವಾಗ ಅವನು ಯಾವ ಕಾನೂನನ್ನು ಉಲ್ಲಂಘಿಸಿದ್ದಾನೆ, ಹಾಗೂ ಅಂಥ ಉಲ್ಲಂಘನೆಯು ಅವನ ಆಂತರಿಕ ಸಮತೋಲನಕ್ಕೆ ಯಾವ ರೀತಿಯಲ್ಲಿ ಧಕ್ಕೆ ತಂದಿದೆ ಎಂಬುದನ್ನು ಅರ್ಥೈಸುವುದು ಈ ಕ್ರಮದ ಅತೀ ಮುಖ್ಯ ಘಟ್ಟವಾಗಿತ್ತು. ಆಗ ಮನುಷ್ಯ ಕಾನೂನುಗಳನ್ನು ದೈವೀ ಕಾನೂನುಗಳ ಮೂಲಕ ಪ್ರಮಾಣೀಕರಿಸಲಾಗುತ್ತಿತ್ತು. ಹಾಗೂ ಈ ಇಡೀ ಪ್ರಕ್ರಿಯೆಯು ಒಂದು ತರ್ಕ ಅಥವಾ ವಿವೇಚನೆಯ ಮೂಲಕ ನಡೆಯತೊಡಗಿತು. ಆರೋಪಿಯು ನಿಜವಾಗಿಯೂ ಅಪರಾಧಿಯೆ? ಅಪರಾಧಧ ಸ್ವರೂಪ ನಿರ್ದಿಷ್ಟವಾಗಿ ಏನು? ಎಂಬುದೇ ಆ ವಿವೇಚನೆ. ಪರ ಹಾಗೂ ವಿರೋಧಿ ಪಕ್ಷಗಳೆರಡೂ ಈ ವಿವೇಚನೆಯನ್ನು ನಡೆಸಿ ಸಾಕ್ಷ್ಯಾಧಾರಗಳ ಮೂಲಕ ತಮ್ಮ ಆರೋಪವನ್ನು ಮಂಡಿಸಬೇಕಾಗಿತ್ತು ಇಲ್ಲ ಅಲ್ಲಗಳೆಯಬೇಕಾಗಿತ್ತು. ಈ ವಿವೇಚನೆಯನ್ನು ನಡೆಸಲೆಂದೇ ಅಡ್ವೋಕೇಟ್ ಅಥವಾ ವಕೀಲ ವೃತ್ತಿ ಅಸ್ತಿತ್ವಕ್ಕೆ ಬಂದಿತು. ಹಾಗಾಗಿ ಪಾಶ್ಚಾತ್ಯರ ನ್ಯಾಯದಾನ ಪದ್ಧತಿಯಲ್ಲಿ ನಿರ್ಣಯ ನೀಡುವವನಿಗೆ (ಜಡ್ಜ್) ಅಪರಾಧದ ಕುರಿತು ಮನದಟ್ಟುಮಾಡಿಕೊಡುವ ಕೆಲಸವು ಬಹಳ ಮುಖ್ಯವಾಯಿತು. ಹಾಗೂ ವಕೀಲರು ಪ್ರಾಮುಖ್ಯತೆ ಗಳಿಸಿದರು.

ಪಾಶ್ಚಾತ್ಯ ಕಾನೂನುಗಳು ಅವುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡಬಲ್ಲವೇ ವಿನಃ ಧಕ್ಕೆಯಾದ ಆಂತರಿಕ ಸಮತೋಲನವನ್ನು ಎಂದಿಗೂ ತುಂಬಿಕೊಡಲಾರವು. ಕಾನೂನುಗಳು ಜಸ್ಟೀಸನ್ನು ನೀಡಲಾರವು. ಗಾಡ್ ಒಬ್ಬನೇ ಅದನ್ನು ನೀಡಬಲ್ಲ. ಅಂದರೆ ಏನು ಇನ್ಜಸ್ಟೀಸ್ ಆಗಿದೆಯೋ ಅದು ತುಂಬಲಾರದ್ದು. ಆಂತರಿಕ ಸಮತೋಲನವನ್ನು ಕಳೆದುಕೊಂಡ ವ್ಯಕ್ತಿ ಮತ್ತೆ ಅದನ್ನು ಮರಳಿ ಪಡೆಯಲಾರ ಎಂದೇ ಆ ಸಂಸ್ಕೃತಿ ನಂಬುತ್ತದೆ. ಒಂದು ಉದಾಹರಣೆಯ ಮೂಲಕ ಇದನ್ನು ವಿವರಿಸುವುದಾದರೆ: ಅಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವಾದರೆ ಗಾಡ್ ಆಕೆಗೆ ನೀಡಿದ ಆಂತರಿಕ ಸಮತೋಲನವು ಭಂಗವಾದಂತೇ. ಅತ್ಯಾಚಾರಿಗಳಿಗೆ ಏನು ಶಿಕ್ಷೆಯನ್ನು ವಿಧಿಸಿದರೂ ಆ ಸಮತೋಲನವು ಆಕೆಗೆ ಮರಳಿ ಬರುವುದಿಲ್ಲ ಎಂದು ಆ ಸಮಾಜವು ನಂಬುವುದರಿಂದ ಆಕೆಯು ಜೀನವವಿಡೀ ತಾನು ಕಳೆದುಕೊಂಡದ್ದಕ್ಕಾಗಿ ಕೊರಗುತ್ತ ಮಾನಸಿಕ ವಿಷಣ್ಣತೆಯಲ್ಲಿ ಬಳಲುತ್ತಾಳೆ. ಆದರೆ ಭಾರತೀಯ ಸಂಪ್ರದಾಯಗಳಲ್ಲಿ ಇಂಥ ನಂಬಿಕೆಗಳಿಲ್ಲ. ಗಾಡ್ ಇಲ್ಲದ ಭಾರತೀಯ ಸಂಸ್ಕೃತಿಗೆ ಈ ಆಂತರಿಕ ಸಮತೋಲನವಾಗಲೀ, ಅದಕ್ಕೆ ಧಕ್ಕೆ ಬಂದರೆ ಏಕೆ ಅನ್ಯಾಯವಾಗುತ್ತದೆ ಎಂಬುದಾಗಲೀ ಅರ್ಥವಾಗದ ಮಾತು. ಆ ಮಟ್ಟಿಗೆ ಜಸ್ಟೀಸ್, ಇನ್ ಜಸ್ಟೀಸ್ ಎಂಬ ಶಬ್ದಗಳೆಲ್ಲವೂ ನಮಗೆ ಅರ್ಥವಿಲ್ಲದ ಶಬ್ದಗಳೇ ಸರಿ. ಹಾಗಾಗಿ ಅತ್ಯಾಚಾರಕ್ಕೆ ಒಳಪಟ್ಟ ಮಹಿಳೆಯು ತಾನೇನೋ ತುಂಬಲಾರದ ಹಾನಿಗೆ ಒಳಗಾಗಿದ್ದೇನೆ ಎಂಬ ವಿಷಣ್ಣತೆಗೆ ಒಳಗಾಗಿ ಜೀವನ ಪರ್ಯಂತ ಕೊರಗುವುದಿಲ್ಲ. ಅವಳ ಸುತ್ತಲಿನ ಸಮಾಜ ಕೂಡ ಅವಳಿಗೇನೋ ತುಂಬಲಾರದ ಹಾನಿಯಾಗಿದೆ ಎಂದೂ ಭಾವಿಸುವುದಿಲ್ಲ. ಅವಳ ಆಪ್ತೇಷ್ಟರು ಅದೊಂದು ದೈಹಿಕ ಅಪಘಾತ ಎಂಬಂತೇ ಪರಿಗಣಿಸಿ ಆದಷ್ಟು ಬೇಗನೆ ಅವಳನ್ನು ಆ ಆಘಾತದಿಂದ ಹೊರತಂದು ಅವಳ ಜೀವನವನ್ನು ಹದಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಾರೆ. ಬಹು ಬೇಗನೆ ಅವಳು ಎಲ್ಲರಂತೇ ಜೀವನ ನಡೆಸತೊಡಗುತ್ತಾಳೆ.

ನಾವು ಜಸ್ಟೀಸನ್ನು ನ್ಯಾಯ ಅಥವಾ ಧರ್ಮ ಎಂದು ಭಾಷಾಂತರಿಸಿಕೊಂಡಾಗ ಅದು ನಮಗೆ ಅರ್ಥವಾದಂತೆನಿಸುತ್ತದೆ. ಆದರೆ ಈ ನ್ಯಾಯ ಅಥವಾ ಧರ್ಮವನ್ನು ಕಾನೂನುಗಳಿಂದಲೇ ಸಾಧಿಸುವ ಷರತ್ತಿಗೆ ಒಳಪಟ್ಟಾಗ ಮತ್ತೆ ಅದು ಮರೀಚಿಕೆಯಾಗಿಯೇ ಉಳಿಯುತ್ತದೆ. ಏಕೆಂದರೆ ನಮ್ಮ ನ್ಯಾಯ ಎನ್ನುವುದು ಜಸ್ಟೀಸ್ ಅಲ್ಲ. ನ್ಯಾಯ ಎನ್ನುವುದು ಒಂದು ಪ್ರಕಾರದ ತರ್ಕ ಅಥವಾ ವಿವೇಚನೆ ಎಂಬುದಾಗಿ ನಮ್ಮ ಪಂಡಿತರು ಹೇಳುತ್ತಾರೆ. ಆದರೆ ನಮ್ಮ ಸಾಂಪ್ರದಾಯಿಕ ಪಂಚಾಯತಿಗಳು ನಮ್ಮ ಹಳ್ಳಿಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ವೈಖರಿಯನ್ನು ಗಮನಿಸಿದಾಗ ನನಗೆ ಹೊಳೆಯುವುದಿಷ್ಟು: ಈ ಪಂಚಾಯತಿಗಳಲ್ಲಿ ನ್ಯಾಯ ತೀರ್ಮಾನ ಎನ್ನುವುದು ಸಮಸ್ಯೆಗಳನ್ನು ಪರಿಹರಿಸುವ ಒಂದು ಉಪಾಯವಾಗಿದೆ. ಅದು ಒಂದು ರೀತಿಯ ಆಲೋಚನಾ ಕ್ರಮ. ಕೊಟ್ಟ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎನ್ನುವುದರ ಕುರಿತ ಆಲೋಚನೆ. ಆ ಸಮಸ್ಯೆಯನ್ನು ಆದಷ್ಟೂ ಯುಕ್ತವಾಗಿ ಪರಿಹರಿಸಬೇಕು. ಯುಕ್ತವಾಗಿ ಪರಿಹರಿಸುವುದೆಂದರೆ ಸಂಘರ್ಷಕ್ಕೆ ತೊಡಗಿಕೊಂಡ ಪಕ್ಷಗಳೆರಡಕ್ಕೂ ಆ ಪರಿಹಾರವೇ ಸಧ್ಯಕ್ಕೆ ಅತ್ಯುತ್ತಮ ಎಂದು ಅನಿಸಬೇಕು. ಈ ಕೆಲಸವನ್ನು ಸಾಂದರ್ಭಿಕ ವಿವೇಚನೆಯಿಂದ, ತರ್ಕದಿಂದ ಸಾಧಿಸಲಾಗುತ್ತದೆಯೇ ವಿನಃ ಯಾವುದೋ ಕಾನೂನಿನ ಪ್ರಕಾರ ಅದು ಸರಿ ಎಂದು ಮನದಟ್ಟುಮಾಡುವ ಮೂಲಕವಲ್ಲ.

ಹಳ್ಳಿಯ ನ್ಯಾಯ ಪಂಚಾಯತಿಗಳ ಪ್ರಕಾರ ಈ ಸಂಘರ್ಷಗಳು ಸಮದಾಯದ ಸಹಬಾಳ್ವೆಗೆ ತೊಡಕುಗಳು. ಹಾಗಾಗಿ ಅವನ್ನು ಬಗೆಹರಿಸುವುದು ಹಳ್ಳಿಯ ಸಹಬಾಳ್ವೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಕಾಳಜಿಯಾಗುತ್ತದೆ. ಆದರೆ ಅವುಗಳನ್ನು ಕಾನೂನಿನ ಸಮಸ್ಯೆಗಳೆಂಬುದಾಗಿ ನೋಡಲು ಅವರು ಬಯಸುವುದಿಲ್ಲ. ಏಕೆಂದರೆ ಹಾಗೆ ಅವುಗಳನ್ನು ನೋಡುವುದರಿಂದ ಸಹಬಾಳ್ವೆಯ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ಅವರ ಅನುಭವ. ಹಾಗಾಗಿ ಅವರು ಇಂಥ ವಿವಾದಗಳು ಕೋರ್ಟುಗಳಿಗೆ ಹೋಗುವುದನ್ನು ಬಯಸುವುದಿಲ್ಲ. ಕೋರ್ಟಿಗೆ ಹೋದರೆ ಕಾನೂನಿನ ಪ್ರಕಾರ ಸಮಸ್ಯೆ ಬಗೆಹರಿಯಬಹುದು, ಆದರೆ ಎರಡು ಪಕ್ಷದವರ ನಡುವಿನ ವೈರತ್ವ ಹಾಗೂ ಸಂಘರ್ಷ ಉಪಶಮನವಾಗುವುದಿಲ್ಲ. ಹಾಗಾಗಿ ಪಂಚಾಯತಿಗಳು ಕಾನೂನಿನ ಚೌಕಟ್ಟಿನ ಕುರಿತ ಅಜ್ಞಾನದಿಂದ ಕಾನೂನುಗಳನ್ನು ಬಳಸುವುದಿಲ್ಲ ಎಂಬ ಧೋರಣೆ ತಪ್ಪು. ಕಾನೂನಿನ ಚೌಕಟ್ಟಿನ ನಿರುಪಯುಕ್ತತೆ ಹಾಗೂ ಅದು ಹುಟ್ಟಿಸಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟು ಅದನ್ನು ಉದ್ದೇಶಪೂರ್ವಕವಾಗಿ ದೂರ ಇಡಲಾಗುತ್ತದೆ.

ಅಷ್ಟೊಂದೇ ಅಲ್ಲ, ಇಂಥ ಪಂಚಾಯತಿ ತೀರ್ಮಾನಗಳು ತಮ್ಮ ಮುಂದಿರುವ ಸಮಸ್ಯೆಯನ್ನು ಅರ್ಥೈಸಲಿಕ್ಕೆ ಯಾವ ಸಾಧಾರಣೀಕರಿಸಿದ ನಿಯಮಾವಳಿಗಳನ್ನೂ ಆಧರಿಸುವುದಿಲ್ಲ. ಏಕೆಂದರೆ ಸಮಸ್ಯೆಗಳು ಯಂತ್ರದಲ್ಲಿ ತಯಾರಿಸಿದ ವಸ್ತುಗಳಲ್ಲ. ಹಾಗಾಗಿ ಒಂದು ಸಮಸ್ಯೆಯನ್ನು ನೋಡಿದ ಕೂಡಲೇ ಅದರ ಪ್ರಭೇದ ಅಥವಾ ಸ್ವರೂಪ ಗೋಚರಿಸಿ ಬಿಡುವುದಿಲ್ಲ. ಪ್ರತ್ಯೇಕ ಉದಾಹರಣೆಯನ್ನು ಇಟ್ಟುಕೊಂಡು ಅಲ್ಲಿನ ಸಮಸ್ಯೆ ನಿರ್ದಿಷ್ಟವಾಗಿ ಏನು ಎಂಬುದನ್ನು ಪ್ರತ್ಯೇಕವಾಗಿಯೇ ಗುರುತಿಸಬೇಕಾಗುತ್ತದೆ. ಸಂಘರ್ಷ ನಡೆಸುತ್ತಿರುವ ಎರಡೂ ಪಕ್ಷಗಳಿಗೂ ಸಮ್ಮತವಾಗುವಂತೇ ಅದನ್ನು ಗುರುತಿಸಲಾಗುತ್ತದೆ. ಒಮ್ಮೆ ಎರಡೂ ಪಕ್ಷಗಳೂ ತಮ್ಮ ಸಮಸ್ಯೆಯನ್ನು ಪಂಚರು ಗುರುತಿಸಿದ ರೀತಿಯಲ್ಲಿ ಒಪ್ಪಿಕೊಂಡರಾದರೆ ಅದು ಪರಿಹಾರದ ಘಟ್ಟವನ್ನು ತಲುಪಿದಂತೇ. ಏಕೆಂದರೆ ಸಮಸ್ಯೆಗಳ ಪರಿಹಾರದಲ್ಲಿ ಏಳಬಹುದಾದ ದೊಡ್ಡ ತೊಡಕೆಂದರೆ ಅವುಗಳನ್ನು ತಪ್ಪಾಗಿ ಸೂತ್ರೀಕರಿಸುವುದು. ಹಾಗಾಗಿ ಸಮಸ್ಯೆಯನ್ನು ಸರಿಯಾಗಿ ಗುರುತಿಸಿಕೊಳ್ಳುವುದು ಮೂಲಭೂತವಾಗಿ ವೈಜ್ಞಾನಿಕ ವಿಧಾನವಾಗಿದೆ. ಸಮಸ್ಯೆಯನ್ನು ಸರಿಯಾಗಿ ಗುರುತಿಸಿದರೆ ನ್ಯಾಯ ಏನೆಂಬುದು ಗೊತ್ತಾಗುತ್ತದೆ. ಪಂಚರ ತೀರ್ಮಾನವು ನ್ಯಾಯಯುತವಾಗಿದೆ ಎಂದು ಹೊಡೆದಾಡುವ ಪಕ್ಷಗಳಿಗೆ ಅನ್ನಿಸಿದರೆ ಸಮಸ್ಯೆ ಸರಿಯಾಗಿ ಸೂತ್ರೀಕರಣವಾಗಿದೆ ಅಂತ ಅರ್ಥ. ಆಗ ಪರಿಹಾರ ಸುಲಭ. ಯಾವುದಾದರೂ ಪಕ್ಷಕ್ಕೆ ಅನ್ಯಾಯವಾಗಿದೆ ಎನಿಸಿದರೆ ಅವನ್ನು ತಪ್ಪಾಗಿ ಗುರುತಿಸಲಾಗಿದೆ ಅಂತಲೇ ಅರ್ಥ. ಅದು ಅವೈಜ್ಞಾನಿಕ ಕೂಡ. ಅಂದರೆ ಸಾಂಪ್ರದಾಯಿಕ ನ್ಯಾಯ ಪಂಚಾಯತಿಗಳಲ್ಲಿ ನಡೆಯುವ ತೀರ್ಮಾನವು ವೈಜ್ಞಾನಿಕ ವಿಧಾನವನ್ನು ಅನುಸರಿಸುತ್ತದೆ.

ಪಾಶ್ಚಾತ್ಯ ಕಾನೂನು ಕೂಡ ಸಮಸ್ಯೆಗಳನ್ನು ಪರಿಹರಿಸುವ ಒಂದು ವಿಧಾನವೇ ಆಗಿದೆ. ಆದರೆ ಆ ವಿಧಾನವು ಕಾನೂನುಗಳ ಸಾರ್ವತ್ರಿಕತೆಯ ಕುರಿತ ನಂಬಿಕೆಯನ್ನು ಆಧರಿಸಿದೆ. ಅಂದರೆ ಯಾವುದೇ ವ್ಯತ್ಯಾಸಗಳಿಲ್ಲದೇ ಕಾನೂನುಗಳು ಎಲ್ಲೆಡೆಯಲ್ಲೂ ಸಮಾನವಾಗಿ ಅನ್ವಯವಾಗುವಂತಿರಬೇಕು, ಅಂದರೇ ಅದು ಒಳ್ಳೆಯದು. ಈ ಕಾರಣದಿಂದಲೇ ನಿಷ್ಪಕ್ಷಪಾತೀ ನ್ಯಾಯ ತೀರ್ಮಾನಕ್ಕೆ ಅದೇ ಸೂಕ್ತವಾದ ತಳಹದಿ ಎನ್ನಲಾಗುತ್ತದೆ. ಅಂದರೆ ದೇಶೀ ಪದ್ಧತಿಗಳಿಗೆ ಹೋಲಿಸಿದರೆ ಪಾಶ್ಚಾತ್ಯ ಕಾನೂನುಗಳ ಶ್ರೇಷ್ಠತೆ ಈ ನಿರ್ದಿಷ್ಟ ಲಕ್ಷಣದಲ್ಲೇ ಇದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನ್ಯಾಯ ತೀರ್ಮಾನಕ್ಕೆ ಬರುವ ಪ್ರತೀ ಸಮಸ್ಯೆಯೂ ಕೂಡ ಒಂದೇ ರೀತಿಯಲ್ಲಿ ಇರುವುದಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಸಮಾನತೆಯ ನಿಯಮವಂತೂ ಅವುಗಳಿಗೆ ಅನ್ವಯವಾಗುವುದೇ ಇಲ್ಲ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಕಾನೂನಿನ ಉಪಾಯವೆಂದರೆ ಒಂದೇ ಥರದ ಸಮಸ್ಯೆಗಳನ್ನು ಒಂದೇ ಥರದ ಕಾನೂನಿನಲ್ಲಿ ಪರಿಗಣಿಸಬೇಕು. ಒಂದೇ ರೀತಿ ಇಲ್ಲದ ಸಮಸ್ಯೆಗಳನ್ನು ಒಂದೇ ರೀತಿಯ ಕಾನೂನಿನಲ್ಲಿ ಪರಿಗಣಿಸಲೇಬಾರದು. ಈ ನಿಟ್ಟಿನಿಂದ ಸಮಸ್ಯೆಗಳನ್ನು ಗುರುತಿಸಲಿಕ್ಕೆ ಪ್ರಯತ್ನಿಸಿದಾಗ ಒಂದಿಲ್ಲೊಂದು ಕಾನೂನಿನ ಚೌಕಟ್ಟಿಗೆ ಸಮಸ್ಯೆಗಳನ್ನು ಹೊಂದಿಸುವುದೇ ಸಮಸ್ಯೆಗಳನ್ನು ಗುರುತಿಸುವ ವಿಧಾನವಾಗುತ್ತದೆ. ಆದರೆ ಒಂದೇ ಥರದ ಸಮಸ್ಯೆಗಳನ್ನು ಒಂದೇ ಥರ ನೋಡಬೇಕು ಎಂಬ ಸೂತ್ರವು ನ್ಯಾಯ ತೀರ್ಮಾನಕ್ಕೆ ಇಲ್ಲಿ ಬಹಳ ಸಹಾಯಕ್ಕೇನೂ ಬರದು. ಒಂದೊಂದು ಸಮಸ್ಯೆಯೂ ಅನನ್ಯವಾಗಿರುವಾಗ ಸಾರ್ವತ್ರಿಕ ಕಾನೂನುಗಳು ಪ್ರತೀ ಸಮಸ್ಯೆಯನ್ನು ನ್ಯಾಯಯುತವಾಗಿ ಗುರುತಿಸಲು ಸಹಾಯ ಮಾಡಲಾರವು. ಹಾಗಾಗಿ ಇದು ಅವೈಜ್ಞಾನಿಕ ವಿಧಾನ. ಅದರಿಂದ ಏನು ದುಷ್ಪರಿಣಾಮವಾಗುತ್ತದೆಯೆಂದರೆ ಅನನ್ಯವಾದ ಸಮಸ್ಯೆಗಳನ್ನು ಸಾಮಾನ್ಯ ಚೌಕಟ್ಟಿಗೆ ಹೊಂದಿಸುವ ಪ್ರಕ್ರಿಯೆಯಲ್ಲಿ ಸಮಸ್ಯೆಯೇ ವಿಕೃತವಾಗುತ್ತದೆ. ಅದಕ್ಕೆ ಸುಳ್ಳುಗಳು ಬಂದು ಸೇರಿಕೊಳ್ಳುತ್ತವೆ. ಸತ್ಯ ಮರೆಮಾಚುತ್ತದೆ. ಈ ವಿಧಾನದಲ್ಲಿ ಸಮಸ್ಯೆಯನ್ನು ವೈಜ್ಞಾನಿಕವಾಗಿ ಗುರುತಿಸುವ ಕೆಲಸವೇ ನಡೆಯುವುದಿಲ್ಲ. ಬದಲಾಗಿ ಸಮಸ್ಯೆಯನ್ನು ಗುರುತಿಸುವರಿಗೆ ದಿಕ್ಕೇ ತಪ್ಪಿಹೋಗಬಹುದು. ಹಾಗಾಗಿ ಗುರುತಿಸುವ ಕೆಲಸದಲ್ಲೇ ಅನ್ಯಾಯ ಹುಟ್ಟಿಕೊಳ್ಳುತ್ತದೆ.

ಇದನ್ನೆಲ್ಲ ಪರಿಗಣಿಸಿದಾಗ ಮನುಷ್ಯ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಪಾಶ್ಚಾತ್ಯ ಕಾನೂನುಗಳು ಹೆಚ್ಚು ಜಡವಾದ ಚೌಕಟ್ಟುಗಳು ಹಾಗೂ ಹೊಂದಾಣಿಕೆಯ ಗುಣ ಇಲ್ಲದವು ಎಂಬುದು ಸ್ಪಷ್ಟ. ಅವು ನ್ಯಾಯದ ಹೆಸರಿನಲ್ಲಿ ಅನ್ಯಾಯವನ್ನು ಹುಟ್ಟುಹಾಕುವ ಸಂಭವವೇ ಹೆಚ್ಚು. ಆದರೆ ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಸಮಸ್ಯೆಗಳನ್ನು ಪ್ರವೇಶಿಸುವ ದಿಕ್ಕೇ ಬೇರೆ. ಅವು ನಿರ್ದಿಷ್ಟ ಸಮಸ್ಯೆಗಳನ್ನು ಯಾವುದೇ ಸಾರ್ವತ್ರಿಕ ಸೂತ್ರಗಳನ್ನು ಇಟ್ಟುಕೊಳ್ಳದೇ ಅಧ್ಯಯನಕ್ಕೆ ಒಳಪಡಿಸುತ್ತವೆ. ಹಾಗಾಗಿ ಪಂಚಾಯತಿ ಎಂಬುದು ತೀರ್ಮಾನ ಕೊಡುವ ವ್ಯವಸ್ಥೆ ಎಂದು ವರ್ಣಿಸುವುದೇ ಸರಿಯಲ್ಲ. ಅವು ಸಮಸ್ಯೆಗಳನ್ನು ಗುರುತಿಸುವುದನ್ನು ಕಲಿಯುವ ಪ್ರಕ್ರಿಯೆ ಎಂದರೇ ಹೆಚ್ಚು ಸೂಕ್ತ. ಪಂಚರು ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ಪ್ರತೀ ಸಮಸ್ಯೆಯನ್ನು ಪರಿಹರಿಸುವಾಗಲೂ ಅದರ ಸಂದರ್ಭಕ್ಕೆ ಹೊಸದಾಗಿ ಕಲಿಯುತ್ತಿರುತ್ತಾರೆ. ಯಾವುದೇ ಒಂದು ಸಮಸ್ಯೆಯ ಪರಿಹಾರ ಅಥವಾ ಸೂತ್ರೀಕರಣವು ಮತ್ತೊಂದು ಉದಾಹರಣೆಗೆ ತದ್ವತ್ತಾಗಿ ಅನ್ವಯವಾಗುವುದಿಲ್ಲವಾದ್ದರಿಂದ ಈ ಕಲಿಕೆ ನಿರಂತರವಾಗಿರುತ್ತದೆ. ಅದು ಸಂದರ್ಭ ಸೂಕ್ಷ್ಮತೆಯನ್ನು ಗುರುತಿಸುವ ಗುಣವನ್ನು ಹೊಂದಿರುವುದರಿಂದ ಕಾನೂನಿನ ಚೌಕಟ್ಟಿನಂತೇ ಜಡವಲ್ಲ.

ಭಾರತೀಯ ಸಾಂಪ್ರದಾಯಿಕ ನ್ಯಾಯ ತೀರ್ಮಾನ ಪದ್ಧತಿಯನ್ನು ಇಲ್ಲ ಸಲ್ಲದ ನೆಪಗಳನ್ನು ಹೇಳಿ ಕಡೆಗಣಿಸುವ ಪೃವೃತ್ತಿಯು ನಮ್ಮ ಕಾನೂನು ತಜ್ಞರಲ್ಲಿ ಹಾಗೂ ವಿದ್ಯಾವಂತರಲ್ಲಿದೆ. ನಿಜವಾಗಿಯೂ ಅಲ್ಲಿ ಏನಿದೆ? ಅದನ್ನು ನಮ್ಮ ಪರಿಭಾಷೆಗಳಿಗೆ ಒಗ್ಗಿಸಿಕೊಂಡರೆ ಮನುಷ್ಯ ಸಂಘರ್ಷಗಳನ್ನು ಬಗೆಹರಿಸುವಲ್ಲಿ ಅದು ಯಾವ ಹೊಸ ಉಪಾಯಗಳನ್ನು ನಮಗೆ ನೀಡಬಲ್ಲದು? ಎಂಬ ಸಂಶೋಧನೆ ನಮಗಿಂದು ಅಗತ್ಯವಾಗಿದೆ. ಈ ಮೇಲಿನ ಅಂಶಗಳನ್ನು ಗಮನಿಸಿದರೆ ನಮ್ಮ ಸಾಂಪ್ರದಯಿಕ ನ್ಯಾಯ ತೀರ್ಮಾನ ಪದ್ಧತಿಗಳು ಪಾಶ್ಚಾತ್ಯ ಪದ್ಧತಿಗಿಂತ ಹೆಚ್ಚು ವೈಜ್ಞಾನಿಕವಾಗಿವೆ, ಹಾಗಾಗಿ ಹೆಚ್ಚು ನ್ಯಾಯಯುತವಾಗಿವೆ, ಹಾಗೂ ಮನುಷ್ಯ ಸಂದರ್ಭಕ್ಕೆ ಸ್ಪಂದಿಸುವ ಗುಣವನ್ನು ಹೊಂದಿವೆ ಎಂಬುದು ಖಚಿತವಾಗುತ್ತದೆ. ಯಾವ ಸಂಪ್ರದಾಯಗಳು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಸೂತ್ರೀಕರಿಸಿ ಅವುಗಳನ್ನು ಪರಿಹರಿಸುವ ಮಾರ್ಗಗಳನ್ನು ಹೊಂದಿವೆಯೋ ಅವು ಜಡವಾದ ಚೌಕಟ್ಟುಗಳನ್ನು ಬಳಸಿ ಸಮಸ್ಯೆಗಳನ್ನು ಪರಿಹರಿಸುವ ಸಂಪ್ರದಾಯಗಳಿಗಿಂತ ಖಂಡಿತವಾಗಿಯೂ ಉತ್ತಮ ಮಾದರಿಗಳೆಂಬುದು ನಿಸ್ಸಂಶಯ. ಈ ನಿಟ್ಟಿನಿಂದ ನೋಡಿದಾಗ ಸಂಘರ್ಷ ಪರಿಹಾರದಲ್ಲಿ ನಮ್ಮ ಸಾಂಪ್ರದಯಿಕ ನ್ಯಾಯ ಪದ್ಧತಿಗಳು ಕೇವಲ ಇಂದಿನ ಭಾರತಕ್ಕೊಂದೇ ಅಲ್ಲ ಮನುಕುಲಕ್ಕೇ ಪರ್ಯಾಯ ಮಾರ್ಗಗಳನ್ನು ನೀಡುವ ಸಾಧ್ಯತೆಯನ್ನು ಹೊಂದಿವೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: