ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 57: ಮಾನವ ಹಕ್ಕುಗಳ ಪರಿಕಲ್ಪನೆ ಎಲ್ಲಾ ಸಂಸ್ಕೃತಿಗಳಲ್ಲೂ ಇದೆಯೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

 

ಮನುಷ್ಯನು ಹುಟ್ಟುತ್ತಲೇ ಅನೇಕ ಹಕ್ಕುಗಳನ್ನು ಪಡೆದುಕೊಂಡು ಹುಟ್ಟಿರುತ್ತಾನೆ ಎಂಬುದಾಗಿ ನಮಗೆ ಸ್ಕೂಲುಗಳಲ್ಲಿ ಕಲಿಸಲಾಗಿದೆ. ಆಧುನಿಕ ಸಂವಿಧಾನಗಳು ತಮ್ಮ ಪ್ರಜೆಗಳಿಗೆಲ್ಲ ಕೆಲವು ಮೂಲಭೂತ ಹಕ್ಕುಗಳನ್ನು ನೀಡುತ್ತವೆ. ಇವುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ರಿಲಿಜನ್ನಿನ ಹಕ್ಕು, ಶೋಷಣೆಯನ್ನು ವಿರೋಧಿಸುವ ಹಕ್ಕು ಇತ್ಯಾದಿಗಳಿವೆ. ಇಂಥ ಮೂಲಭೂತ ಹಕ್ಕುಗಳನ್ನು ಪಾಶ್ಚಾತ್ಯ ಸಂವಿಧಾನಗಳಿಂದ ಸ್ವೀಕರಿಸಿ ನಮ್ಮ ಸಂವಿಧಾನದಲ್ಲಿ ಕೂಡ ಅಳವಡಿಸಿಕೊಳ್ಳಲಾಗಿದೆ. ಅನ್ಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದರೆ ಅಪರಾಧವಾಗುತ್ತದೆ. ಏಕೆಂದರೆ ಪ್ರಭುತ್ವವೊಂದು ಕಾನೂನುಗಳ ಮೂಲಕ ಈ ಹಕ್ಕನ್ನು ತನ್ನ ಪ್ರಜೆಗಳಿಗೆ ನೀಡಿರುತ್ತದೆ. ಪ್ರಜೆಗಳು ಈ ಹಕ್ಕುಗಳನ್ನು ಕಾನೂನು ಬದ್ಧ ಅಧಿಕಾರದಿಂದ ಚಲಾಯಿಸಬಹುದು. ಉದಾಹರಣೆಗೆ ಚುನಾವಣೆಯಲ್ಲಿ ಮತಹಾಕುವ ಪ್ರಜೆಯೊಬ್ಬನು ತನ್ನ ಮತದಾನದ ಹಕ್ಕನ್ನು ಚಲಾಯಿಸುತ್ತಾನೆ.

ಆದರೆ ಇಂದು ಇಂಥ ಪ್ರಭುತ್ವಗಳಲ್ಲೂ ಕೂಡ ಸಾರ್ವಜನಿಕ ಕ್ಷೇತ್ರದಲ್ಲಿ ಈ ಹಕ್ಕುಗಳ ಜೊತೆಗೇ ಮತ್ತೊಂದು ರೀತಿಯ ಹಕ್ಕುಗಳ ವಿಚಾರವು ಪದೇ ಪದೇ ಪ್ರಸ್ತಾಪವಾಗುತ್ತದೆ. ಅದೆಂದರೆ ಮಾನವ ಹಕ್ಕು. ಇದು ಸಾಧಾರಣವಾಗಿ ಪ್ರಭುತ್ವಗಳ ವಿರುದ್ಧದ ಹೋರಾಟವೇ ಆಗಿರುತ್ತದೆ. ಈ ಮಾನವ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ವಿಶ್ವಸಂಸ್ಥೆಯು ಟೊಂಕ ಕಟ್ಟಿ ನಿಂತಿದೆ. ವಿಶ್ವಾದ್ಯಂತ ಸರ್ಕಾರೇತರ ಸಂಘಟನೆಗಳು ಹುಟ್ಟಿಕೊಂಡಿವೆ. ವಿಭಿನ್ನ ರಾಷ್ಟ್ರಗಳು, ಸರ್ಕಾರೀ ಸಂಸ್ಥೆಗಳು ಹಾಗೂ ಆಡಳಿತಗಾರರು ತೆಗೆದುಕೊಂಡ ನೀತಿಗಳನ್ನು ಖಂಡಿಸಿ ಅವುಗಳ ವಿರುದ್ಧ ಹೊರಾಟಕ್ಕೆ ಬೆಂಬಲ ನೀಡುವುದೇ ಅವುಗಳ ಗುರಿ. ಯಾವುದೋ ದೇಶದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಅನ್ಯ ದೇಶಗಳ ಮಾನವ ಹಕ್ಕುಗಳ ಸಂಘಟನೆಗಳು ಹೋರಾಡಬಹುದು. ಅಂದರೆ ಈ ಮಾನವ ಹಕ್ಕು ಎನ್ನುವುದು ನಿರ್ದಿಷ್ಟ ಪ್ರಭುತ್ವಕ್ಕೆ ಸೀಮಿತವಾಗಿಲ್ಲ. ಅದು ಸಮಸ್ತ ಮಾನವ ಜನಾಂಗಕ್ಕೇ ಇರುವ ಹಕ್ಕು ಎನ್ನಲಾಗುತ್ತದೆ. ಹಾಗಾಗಿ ಮಾನವ ಹಕ್ಕುಗಳ ಸಲುವಾಗಿ ಹೋರಾಟ ನಡೆಸುವ ಹಕ್ಕನ್ನು ಯಾವ ಪ್ರಭುತ್ವಗಳೂ ನಿರಾಕರಿಸುವಂತಿಲ್ಲ. ಏಕೆಂದರೆ ಇವುಗಳು ಕಾನೂನಿನಿಂದ ದತ್ತವಾದ ಹಕ್ಕುಗಳಲ್ಲ. ಇಂಥ ಹಕ್ಕುಗಳು ಪ್ರಜೆಯೊಬ್ಬನಿಗೆ ಹುಟ್ಟಿನಿಂದಲೇ ಬರುತ್ತವೆ ಹಾಗೂ ಅವನಿಂದ ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎನ್ನಲಾಗುತ್ತದೆ.

ಇದಕ್ಕಿಂತ ವಿಚಿತ್ರವೆಂದರೆ ಪ್ರಜೆಗಳ ಮಾನವ ಹಕ್ಕುಗಳನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವೇ ಆಗಿದೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಮೂಲಭೂತ ಹಕ್ಕುಗಳನ್ನು ಕಾನೂನಿನಿಂದ ಮಾನ್ಯಮಾಡಲಾಗಿದೆ. ಈ ಕಾನೂನುಗಳನ್ನು ಆಯಾ ಪ್ರಭುತ್ವಗಳು ರಚಿಸಿಕೊಂಡಿರುತ್ತವೆ. ಮೂಲಭೂತ ಹಕ್ಕುಗಳನ್ನು ಏಕೆ ಪಾಲಿಸಬೇಕು ಎಂಬ ಪ್ರಶ್ನೆಗೆ ಅದು ಕಾನೂನು ಬದ್ಧವಾದುದು, ಅವನ್ನು ಉಲ್ಲಂಘಿಸುವುದು ಕಾನೂನಿನ ಉಲ್ಲಂಘನೆ ಎಂಬುದೇ ಕಾರಣ. ಆದರೆ ಮಾನವ ಹಕ್ಕುಗಳ ಹೋರಾಟಗರರ ಹೋರಾಟವು ಅನೇಕ ಬಾರಿ ಪ್ರಭುತ್ವದ ವಿರುದ್ಧವೇ ನಡೆಯಬೇಕಾದ ಅನಿವಾರ್ಯತೆಯಿದೆ. ಉದಾಹರಣೆಗೆ ನಿರಂಕುಶವಾದೀ ಪ್ರಭುತ್ವಗಳಲ್ಲಿ ಜನರು ತಮ್ಮ ಕಾನೂನುಗಳನ್ನು ಭಂಗಮಾಡಿದರೆ ಅದು ನ್ಯಾಯಸಮ್ಮತ ಹಾಗೂ ಸ್ವಾತಂತ್ರ್ಯ ಹೋರಾಟ ಎಂದು ಪಶ್ಚಿಮದ ದೇಶಗಳು ಹೇಳುತ್ತವೆ. ಆದರೆ ತಮ್ಮ ಪ್ರಜೆಗಳು ಕಾನೂನನ್ನು ಧಿಕ್ಕರಿಸಿದರೆ ಮಾತ್ರ ಅದು ದೇಶದ್ರೋಹ ಎಂದು ಶಿಕ್ಷೆ ನೀಡುತ್ತವೆ. ಭಾರತದಲ್ಲಿ ಪೋಲೀಸರಿಂದ ಅಪರಾಧಿಗಳ ಮೇಲೆ ನಡೆಯುವ ದೌರ್ಜನ್ಯಗಳು, ನಕಲಿ ಎನ್ಕೌಂಟರ್ಗಳು, ಲಾಕಪ್ ಸಾವುಗಳು, ಕೋಮುಗಲಭೆ ಹಾಗೂ ಭಯೋತ್ಪಾದನೆಯನ್ನು ಅಡಗಿಸುವಾಗ ಅವರು ತೆಗೆದುಕೊಂಡ ತಪ್ಪು ಕ್ರಮಗಳು, ಇತ್ಯಾದಿಗಳನ್ನು ವಿರೋಧಿಸುವಾಗ ಅದು ಕೆಲವು ಪ್ರಜೆಗಳ ಮೂಲಭೂತ ಹಕ್ಕಿಗೆ ಚ್ಯುತಿ ತಂದಿದೆ ಎಂಬುದು ಹೋರಾಟಗಾರರ ಆರೋಪ.

ಮಾನವ ಹಕ್ಕುಗಳನ್ನು ರಕ್ಷಿಸುತ್ತಿರುವ ಪ್ರಭುತ್ವ ಹಾಗೂ ಕಾನೂನುಗಳೇ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂಬ ಧೋರಣೆ ಇಲ್ಲಿ ಕೆಲಸಮಾಡುತಿರುವುದು ಸ್ಪಷ್ಟ. ಅಂದರೆ ಮೂಲಭೂತ ಹಕ್ಕುಗಳು ಕಾನೂನು ಹಾಗೂ ಪ್ರಭುತ್ವಕ್ಕೂ ಅತೀತವಾಗಿವೆ ಎಂಬ ನಂಬಿಕೆ ಇದರ ಹಿಂದೆ ಇದೆ. ಏಕೆಂದರೆ ಅವು ಮನುಷ್ಯನು ಹುಟ್ಟಿನಿಂದ ಪಡೆಯುವ ಹಕ್ಕುಗಳು. ಕಾನೂನುಗಳು ಹಾಗೂ ಪ್ರಭುತ್ವಗಳು ಸೃಷ್ಟಿಸಿದ ಹಕ್ಕುಗಳಲ್ಲ. ಒಂದೊಮ್ಮೆ ಅವು ಕಾನೂನಿನ ಸೃಷ್ಟಿಗಳಾಗಿದ್ದಲ್ಲಿ ಮತ್ತೊಂದು ಕಾನೂನಿನಿಂದ ಅವುಗಳನ್ನು ರದ್ದು ಮಾಡುವ ಸಾಧ್ಯತೆ ಇರುತ್ತದೆ. ಆದರೆ ಮಾನವ ಹಕ್ಕುಗಳನ್ನು ರಕ್ಷಿಸುವುದು ಮಾನವನ ನೈತಿಕ ಕರ್ತವ್ಯವೇ ಹೊರತೂ ಕಾನೂನಿನ ಪಾಲನೆಯಲ್ಲ.

ಕಾನೂನುಗಳ ತಳಹದಿಯಿಲ್ಲದ ಹಕ್ಕುಗಳನ್ನೆಲ್ಲ ಕಾನೂನುಗಳನ್ನಾಗಿ ಮಾಡಿ ಮಾನ್ಯಮಾಡಲೇನು ತೊಂದರೆ? ಆದರೆ ಮಾನವನಿಗೆ ಯಾವ ಯಾವ ಹಕ್ಕುಗಳು ಇವೆ? ಎಷ್ಟೆಷ್ಟಿವೆ? ಇತ್ಯಾದಿಗಳು ಮಾನವರಿಗೇ ತಿಳಿದಿಲ್ಲ. ಈ ಹಕ್ಕುಗಳು ಕೇವಲ ರಾಜಕೀಯ, ನಾಗರಿಕ ಜೀವನಕ್ಕೆ ಮಾತ್ರವೇ ಸೀಮಿತವಾಗದೇ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಜೀವನಕ್ಕೂ ವ್ಯಾಪಿಸಿಕೊಂಡಿವೆ ಎಂದು ಚಿಂತಕರು ಹೇಳುತ್ತಾರಾದರೂ ಅವುಗಳ ಸ್ವರೂಪವೇನು? ಎಂಬುದು ಗೊತ್ತಿಲ್ಲ. ನಿರ್ದಿಷ್ಟ ಉದಾಹರಣೆಗಳಲ್ಲಿ ಹಕ್ಕುಗಳ ಚ್ಯುತಿಯಾಗಿದೆ ಎಂಬುದು ಅರಿವಿಗೆ ಬಂದಾಗ ಮಾತ್ರವೇ ಅಂಥದ್ದೊಂದು ಹಕ್ಕು ಮನುಷ್ಯರಿಗೆ ಇದೆ ಎಂಬ ಜ್ಞಾನೋದಯ ಉಂಟಾಗುತ್ತದೆ. ಅಂದರೆ ಈ ಮಾನವ ಹಕ್ಕುಗಳ ಭಾಷೆಯ ಪ್ರಕಾರ ಮಾನವರು ಒಂದಷ್ಟು ಹಕ್ಕುಗಳನ್ನು ತಮ್ಮ ಅವಿಭಾಜ್ಯ ಅಂಗವಾಗಿ ಪಡೆದುಕೊಂಡು ಹುಟ್ಟಿರುತ್ತಾರೆ. ಅವು ಸಾರ್ವತ್ರಿಕವಾಗಿ ಎಲ್ಲ ಮಾನವರಿಗೂ ಇರತಕ್ಕ ಹಕ್ಕುಗಳು. ಅವುಗಳನ್ನು ರಕ್ಷಿಸಲೆಂದು ಕಂಕಣಬದ್ಧವಾದ ಪ್ರಭುತ್ವ ಹಾಗೂ ಕಾನೂನುಗಳು ಕೂಡ ಅಂಥ ಹಕ್ಕುಗಳನ್ನು ಉಲ್ಲಂಘಿಸುವ ಸಾಧ್ಯತೆ ಇರುತ್ತದೆ. ಹಾಗೂ ಸಾಂಪ್ರದಾಯಿಕ ಕಟ್ಟಳೆಗಳೂ ಕೂಡ ಅವನ್ನು ಉಲ್ಲಂಘಿಸುವ ಸಾಧ್ಯತೆ ಇರುತ್ತದೆ. ಇಂಥ ಹಕ್ಕುಗಳಿಗಾಗಿ ಹೋರಾಡಿ ಸಂತ್ರಸ್ತರಾದ ಜನರಿಗೆ ನ್ಯಾಯ ಒದಗಿಸುವುದು ಮಾನವ ಹಕ್ಕು ಸಂಘಟನೆಗಳ ಕರ್ತವ್ಯವಾಗಿದೆ.

ಈ ರೀತಿಯಲ್ಲಿ ನಿರ್ದಿಷ್ಟವಾಗಿ ಮಾನವರಿಗೆ ಯಾವ ಯಾವ ಹಕ್ಕುಗಳು ಇವೆ ಎನ್ನುವುದೇ ಗೊತ್ತಿಲ್ಲದಿದ್ದಾಗ ಅವರಿಗೆ ಆ ಹಕ್ಕುಗಳು ಹುಟ್ಟಾ ಇರುತ್ತವೆ ಎಂಬುದು ಚಿಂತಕರಿಗೆ ಹೇಗೆ ತಿಳಿಯಿತು? ಎಂಬ ಪ್ರಶ್ನೆಯೊಂದು ಏಳುತ್ತದೆ. ಅದಕ್ಕೂ ಮುಖ್ಯ ಪ್ರಶ್ನೆಯೆಂದರೆ ಈ ಹಕ್ಕುಗಳನ್ನು ಹುಟ್ಟಾ ಅವರಿಗೆ ಯಾರು ನೀಡಿದವರು? ಎಂಬುದು. ಈ ಕುರಿತು ಪಾಶ್ಚಾತ್ಯ ರಾಜಕೀಯ ಚಿಂತಕರು ಇನ್ನೂ ಬಗೆಹರಿಯದ ಚಚರ್ೆಯನ್ನು ನಡೆಸುತ್ತಿದ್ದಾರೆ. ಅವರ ಒಟ್ಟಾರೆಯಾದ ಅಭಿಪ್ರಾಯವೆಂದರೆ ಮನುಷ್ಯನಿಗೆ ಇವು ನಿಸರ್ಗದತ್ತವಾಗಿ ಬಂದಿರುತ್ತವೆ. ಅವು ನಿಸರ್ಗದತ್ತವಾಗಿ ಬಂದಿವೆ ಎಂಬುದೇ ನಿಜವಾದಲ್ಲಿ ಅವು ಯಾವ ಯಾವ ಹಕ್ಕುಗಳು ಎಂಬುದೂ ಮಾನವರಿಗೆ ಗೊತ್ತಿರಲೇಬೇಕು. ನಮಗೆಲ್ಲ ಈ ಹಕ್ಕುಗಳು ಅನುಭವಕ್ಕೆ ಬರುತ್ತಿಲ್ಲದಿದ್ದರೆ ಅವು ಹುಟ್ಟಾ ಬಂದಿವೆ ಎಂಬುದಕ್ಕಾದರೂ ಪ್ರಮಾಣವೆಲ್ಲಿದೆ? ಅಥವಾ ಅಧ್ಯಯನಗಳಿಂದ ಅವುಗಳನ್ನು ಕಂಡುಕೊಳ್ಳಲಿಕ್ಕಾದರೂ ಸಾಧ್ಯವಾಗಬೇಕು. ಇದ್ಯಾವುದೂ ಸಾಧ್ಯವಿಲ್ಲ ಅಂತಾದರೆ ಇದೊಂದು ಅನಿಸಿಕೆಯಾಗಿ ಮಾತ್ರವೇ ಉಳಿದುಕೊಳ್ಳುತ್ತದೆ. ಹಕ್ಕುಗಳ ವಿಷಯದಲ್ಲಿ ಸಧ್ಯಕ್ಕೆ ಹಾಗೇ ಆದಂತೇ ಕಾಣಿಸುತ್ತದೆ.

ಈ ಮೇಲಿನ ಗೊಂದಲಗಳಿಗೆ ಕಾರಣವೆಂದರೆ ಪಾಶ್ಚಾತ್ಯ ರಾಜಕೀಯ ಚಿಂತಕರು ಕ್ರೈಸ್ತ ಥಿಯಾಲಜಿಯ ಪರಿಕಲ್ಪನೆಯನ್ನು ಸೆಕ್ಯುಲರೀಕರಿಸಿದ್ದಾರೆ. ಅಂದರೆ ಹಕ್ಕು ಎನ್ನುವ ಪರಿಕಲ್ಪನೆಯನ್ನು ಅರ್ಥ ಮಾಡಬೇಕಾದರೆ ಅದನ್ನು ಥಿಯಾಲಜಿಯ ಮೂಲದಲ್ಲೇ ಇಟ್ಟು ನೋಡಬೇಕಾಗುತ್ತದೆ. ಮಾನವ ಹಕ್ಕುಗಳ ಕಲ್ಪನೆ ಹುಟ್ಟಿಕೊಂಡಿದ್ದು ಸಾರ್ವಭೌಮತ್ವದ ಕುರಿತ ಜಿಜ್ಞಾಸೆಯಲ್ಲಿ. ಗಾಡ್ ಈ ಪ್ರಪಂಚವನ್ನು ಸೃಷ್ಟಿಸಿರುವುದರಿಂದ ಅದರ ಒಡೆಯ ಕೂಡ ಆಗಿದ್ದಾನೆ. ಅವನ ಇಚ್ಛೆಯ ಪ್ರಕಾರ ಈ ಪ್ರಪಂಚ ನಡೆಯುತ್ತಿದೆ, ಹಾಗಾಗಿ ಅವನೇ ಸಾರ್ವಭೌಮ. ಅವನೇ ಕಾನೂನನ್ನು ಮಾಡುತ್ತಾನೆ ಹಾಗೂ ಆಳ್ವಿಕೆಯನ್ನು ನಡೆಸುತ್ತಾನೆ. ಇದು ಯುರೋಪಿನ ಸೆಕ್ಯುಲರ್ ಚಿಂತನೆಗಳಲ್ಲಿನ ಮನುಷ್ಯನ ಸಾರ್ವಭೌಮತ್ವಕ್ಕೆ ಮಾದರಿಯಾಯಿತು. ಭೂಮಿಯ ಮೇಲೆ ಮನುಷ್ಯನ ಅಧಿಕಾರವೇನು? ಅದರ ಸ್ವರೂಪವೇನು? ಈ ಪ್ರಶ್ನೆಯು ಥಿಯಾಲಜಿಯನ್ನಾಧರಿಸಿ ರೂಪುಗೊಂಡಿತು: ಗಾಡ್ ಆಡಂನ ಸಂತತಿಗೆ ಭೂಮಿಯ ಮೇಲೆ ಯಾವ ಹಕ್ಕನ್ನು ನೀಡಿದ್ದಾನೆ? ಅವನು ಭೂಮಿಯ ಮೇಲಿನ ಅಧಿಪತ್ಯವನ್ನೇ ಮನುಷ್ಯನಿಗೆ ನೀಡಿದನೆ? ಇಲ್ಲ ತನ್ನ ಸಾರ್ವಭೌಮತ್ವವನ್ನೇ ವರ್ಗಾಯಿಸಿದನೆ? ಈ ಚರ್ಚೆಯು ಸೆಕ್ಯುಲರ್ ರೂಪವನ್ನು ಪಡೆದಾಗ ಮಾನವ ಹಕ್ಕುಗಳ ಕಲ್ಪನೆಯ ಉಗಮವಾಯಿತು. ಸೆಕ್ಯುಲರ್ ಚಿಂತಕರು ಮಾನವ ಹಕ್ಕುಗಳನ್ನು ಎರಡು ಪ್ರಕಾರದಲ್ಲಿ ಗ್ರಹಿಸುತ್ತಾರೆ. ಒಂದು ಪ್ರಕಾರದ ಹಕ್ಕುಗಳು ನಿಸರ್ಗದತ್ತವಾಗಿ ಬಂದಿರುತ್ತವೆ. ಬೇರೆಯವರು ಅವನ್ನು ನಡೆಸಿಕೊಡಬೇಕು ಎಂಬ ಬಾಧ್ಯತೆಗೆ ಒಳಪಟ್ಟಿವೆ. ಅಂದರೆ ಅನ್ಯರ ಹಕ್ಕುಗಳನ್ನು ಒಪ್ಪಿಕೊಳ್ಳುವುದು ಮನುಷ್ಯರ ನೈತಿಕತೆಗೆ ಸಂಬಂಧಪಟ್ಟ ವಿಷಯವಾಗಿದೆ. ಮತ್ತೊಂದು ಪ್ರಕಾರದವುಗಳನ್ನು ನಾವೇ ಚಲಾಯಿಸಬೇಕು. ಅಂದರೆ ಹಕ್ಕುಗಳನ್ನು ಚಲಾಯಿಸುವ ಸ್ವಾತಂತ್ರ್ಯ, ಹಾಗೂ ಪರಮಾಧಿಕಾರವು ಅನ್ಯರನ್ನು ಅವಲಂಬಿಸಿ ಬಂದುದಲ್ಲ. ಅದು ಜನ್ಮಸಿದ್ಧವಾಗಿ ನಮಗೆ ಬಂದಿದೆ. ವ್ಯಕ್ತಿಯಲ್ಲಿರುವ ಸ್ವಂತಿಕೆ ಅದನ್ನು ಅಭಿವ್ಯಕ್ತಿಸುತ್ತದೆ.

ಮೊದಲನೆಯ ಪ್ರಕಾರದ ಹಕ್ಕುಗಳಿಗೆ ಈ ಮುಂದಿನ ಚರ್ಚೆಯು ಮೂಲದಲ್ಲಿದೆ: ಕೆಲವು ನ್ಯಾಯ ಪಂಡಿತರು ಗಾಡ್ ಮನುಷ್ಯರಿಗೆ ಕೆಲವು ಜನ್ಮಜಾತ ಹಕ್ಕುಗಳನ್ನು ನೀಡಿದ್ದಾನೆ ಎಂಬುದಾಗಿ ನಿರ್ಣಯಿಸಿದರು. ಈ ಭೂಮಿಯು ಗಾಡ್ನ ಸೃಷ್ಟಿ, ಮನುಷ್ಯರೂ ಅವನದೇ ಸೃಷ್ಟಿ. ಈ ಭೂಮಿಯನ್ನು ಸೃಷ್ಟಿಸಿದ ಗಾಡ್ ಅದರ ಉಪಭೋಗದ ಹಕ್ಕನ್ನು ಮನುಷ್ಯನಿಗೆ ನೀಡಿದ್ದಾನೆ. ಇಂಥ ಹಕ್ಕುಗಳನ್ನು ಸೃಷ್ಟಿಸುವುದು ಗಾಡ್ಗೆ ಮಾತ್ರ ಸಾಧ್ಯ. ಅವನೇ ಭೂಮಿಯ ಅಧಿಪತಿಯಾಗಿರುವುದರಿಂದ ಅವನ್ನು ನೀಡಲು ಅವನೊಬ್ಬನಿಗೇ ಅಧಿಕಾರವಿದೆ. ಅಂದರೆ ಗಾಡ್ ಪ್ರತಿಯೊಬ್ಬನಿಗೂ ಈ ಹಕ್ಕುಗಳನ್ನು ನೀಡಿರುವುದರಿಂದ ಅವನ್ನು ಒಪ್ಪಿಕೊಂಡು ರಕ್ಷಣೆ ಮಾಡುವುದು ಎಲ್ಲಾ ಮನುಷ್ಯರ ಕರ್ತವ್ಯ. ಹಾಗೂ ಅದು ಮನುಷ್ಯನ ನೈತಿಕ ಕರ್ತವ್ಯವಾಗಿದೆ. ತಮ್ಮನ್ನು ಸೃಷ್ಟಿಸಿದ ಒಡೆಯನ ಇಚ್ಛೆಯಂತೇ ನಡೆದುಕೊಳ್ಳದೇ ವಿಧಿ ಇಲ್ಲ. ಈ ವಿವರಣೆಯ ಪ್ರಕಾರ ಮನುಷ್ಯನಿಗೆ ಹಕ್ಕುಗಳು ಎಲ್ಲಿಂದ ಬಂದಿವೆ ಹಾಗೂ ಅವನ್ನು ಏಕೆ ಇತರರು ರಕ್ಷಿಸಬೇಕು ಎಂಬುದು ಸ್ಪಷ್ಟ. ಆದರೆ ಈ ವಿವರಣೆಯನ್ನು ತೆಗೆದುಹಾಕಿದರೆ ಅದು ನಿಗೂಢವಾಗುತ್ತದೆ. ಅಂದರೆ ನೀವು ಗಾಡ್ನ ಕಥೆಯನ್ನು ಒಪ್ಪದಿದ್ದರೆ ನಾನೇಕೆ ಅನ್ಯರ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯವನ್ನು ಒಪ್ಪಿಕೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಕ್ಕುಗಳ ಕುರಿತು ಸೆಕ್ಯುಲರ್ ನೈತಿಕ ನಿರೂಪಣೆಗಳು ಆ ಕಾರಣದಿಂದ ನಿಗೂಢವಾಗುತ್ತವೆ.

ಎರಡನೆಯ ಪ್ರಕಾರದ ಹಕ್ಕುಗಳ ಮೂಲದಲ್ಲಿ ಥಿಯಾಲಜಿಯ ಮತ್ತೊಂದು ಥರದ ಚರ್ಚೆಯಿದೆ. ಅದೆಂದರೆ, ಗಾಡ್ ಮನುಷ್ಯನಿಗೆ ಈ ಭೂಮಿಯ ಅಧಿಪತ್ಯವನ್ನೇ ನೀಡಿದ್ದಾನೆ ಎಂಬ ನಿರೂಪಣೆ. ಅಧಿಪತ್ಯದ ಜೊತೆಗೆ ಭೂಮಿಯ ಒಡೆತನವು ಗಾಡ್ನಿಂದ ಮನುಷ್ಯನಿಗೆ ಬಂದಿದೆ. ಹಾಗಾಗಿ ಭೂಮಿಯಲ್ಲಿ ಮನುಷ್ಯನೇ ಸಾರ್ವಭೌಮ. ಹಾಗಾಗಿ ಅವನಿಗೆ ತನ್ನ ಇಚ್ಛೆಯ ಪ್ರಕಾರ ನಡೆಯುವ ಸ್ವಾತಂತ್ರ್ಯವಿದೆ. ಈ ಅಭಿಪ್ರಾಯವು ಸೆಕ್ಯುಲರ್ ರೂಪವನ್ನು ತಳೆದಾಗ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಇಚ್ಛೆಯ ಪ್ರಕಾರ ನಡೆದುಕೊಳ್ಳುವ ಹಕ್ಕಿದೆ ಎಂಬ ಪ್ರತಿಪಾದನೆ ಹುಟ್ಟಿಕೊಂಡಿತು. ಆದರೆ ಅದರ ಜೊತೆಗೇ ಒಂದು ಸಮಸ್ಯೆ ಕೂಡ ಹುಟ್ಟಿಕೊಂಡಿತು. ಅದೆಂದರೆ, ಥಿಯಾಲಜಿಯಲ್ಲಿ ಗಾಡ್ ಒಬ್ಬನೇ ಪರಮಾಧಿಕಾರಿ. ಅವನಿಗೆ ಬೇಕಾದಂತೇ ಅವನು ನಡೆದರೆ ಯಾವ ಸಮಸ್ಯೆಯೂ ಇಲ್ಲ. ಹಾಗೂ ಅವನು ತಪ್ಪು ಮಾಡಲು ಸಾಧ್ಯವೇ ಇಲ್ಲ. ಆದರೆ, ಗಾಡ್ನನ್ನು ಕೈಬಿಟ್ಟು ಪ್ರತೀ ಮನುಷ್ಯನನ್ನೂ ಪರಮಾಧಿಕಾರಿ ಎಂದು ಕಲ್ಪಿಸಿದರೆ ಸಮಸ್ಯೆ ಬರುತ್ತದೆ. ಏಕೆಂದರೆ ಮನುಷ್ಯನು ತಪ್ಪು ಮಾಡಬಹುದು. ಅನೇಕ ಪರಮಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ. ಯಾರ ಮಾತನ್ನು ಯಾರೂ ಕೇಳುವ ಪ್ರಶ್ನೆ ಇಲ್ಲ. ಅನೇಕ ಪರಮಾಧಿಕಾರಿಗಳು ಪರಸ್ಪರ ಹಕ್ಕುಗಳನ್ನು ಉಲ್ಲಂಘಿಸದೇ ಒಟ್ಟಿಗೇ ಇರಲಿಕ್ಕೆ ಹೇಗೆ ಸಾಧ್ಯ? ಇತರರ ಪರಮಾಧಿಕಾರವನ್ನು ನಾನೇಕೆ ಒಪ್ಪಬೇಕು? ಹಾಗೆ ಒಪ್ಪಿಯೂ ನಾನು ನನ್ನ ಪರಮಾಧಿಕಾರವನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯ?

ಈ ಅರ್ಥದಲ್ಲಿ ನೋಡಿದರೆ ಮೂಲಭೂತ ಹಕ್ಕುಗಳು ಕೂಡ ಮೂಲಭೂತ ಹೇಗಾಗಲು ಸಾಧ್ಯ?. ಅವು ಗಾಡ್ ಅಥವಾ ನಿಸರ್ಗವು ನಮಗೆ ಕೊಟ್ಟವುಗಳು ಅಂದರೆ ಬೇರೆಯವರಿಂದ ಬಂದವುಗಳಲ್ಲವೆ? ಎಂಬ ಪ್ರಶ್ನೆ ಏಳುತ್ತದೆ. ಇವೆಲ್ಲ ಮಾನವ ಹಕ್ಕುಗಳ ಕುರಿತ ಬಗೆಹರಿಯದ ಚರ್ಚೆಗಳು. ಇನ್ನು ಇವನ್ನು ಭಾರತೀಯರು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಬೇಕೆಂಬುದಂತೂ ಈಡೇರದ ನಿರೀಕ್ಷೆಯೇ ಆಗುತ್ತದೆ. ಏಕೆಂದರೆ ಏಶಿಯಾದ ಸಂಸ್ಕೃತಿಗಳಲ್ಲಿ ಒಬ್ಬನೇ ಸತ್ಯ ದೇವನಿಲ್ಲ ಅಥವಾ ಸೃಷ್ಟಿಕರ್ತನಿಲ್ಲ. ಹಾಗಾಗಿ ನಮ್ಮ ದೇವರುಗಳು ಪರಮಾಧಿಕಾರವನ್ನು ಹೊಂದಿಲ್ಲ. ಅವು ಕಾನೂನುಗಳನ್ನು ಮಾಡಿ ನಮಗೆ ಕೊಟ್ಟಿಲ್ಲ. ಅಥವಾ ಆಜ್ಞೆಗಳನ್ನೂ ಮಾಡಿಲ್ಲ. ಭೂಮಿಯ ಮೇಲಿನ ಒಡೆತನ ದೇವರದ್ದೋ ಮನುಷ್ಯರದ್ದೋ ಎಂಬ ಚರ್ಚೆಗಳನ್ನೂ ನಮ್ಮವರು ನಡೆಸಿಲ್ಲ. ದೇವರು ಸರ್ವಾಂತರ್ಯಾಮಿ ಎನ್ನುತ್ತೇವೆಯೇ ಹೊರತೂ ನಮ್ಮನ್ನೂ ಹಿಡಿದು ಈ ಪ್ರಪಂಚವೇ ಆತನ ಖಾಸಗಿ ಆಸ್ತಿ ಎಂಬ ನಿರೂಪಣೆ ನಮ್ಮಲ್ಲಿಲ್ಲ. ಅಂದರೆ ಮಾನವ ಹಕ್ಕುಗಳ ಚರ್ಚೆಗಳು ಸಾರ್ವತ್ರಿಕ ಸಮಸ್ಯೆಯ ಕುರಿತು ಇವೆ ಎಂಬುದು ಸುಳ್ಳು. ಅದು ಕ್ರಿಶ್ಚಿಯಾನಿಟಿ ಹಾಗು ಅದರ ಸೆಕ್ಯುಲರ್ ಆವೃತ್ತಿಗಳಿಗೆ ಮಾತ್ರ ಪ್ರಸ್ತುತವಾಗಬಲ್ಲ ಒಂದು ಚರ್ಚೆ.

ಮಾನವ ಹಕ್ಕು ನಮ್ಮ ಸಂಸ್ಕೃತಿಗೆ ಪರಕೀಯವಾದದ್ದು ಎಂದಾಕ್ಷಣ ನಾನು ಅದರ ಪರ ಅಥವಾ ವಿರೋಧವಾಗಿ ಮಾತನಾಡುತ್ತಿದ್ದೇನೆ ಎಂಬುದಾಗಿ ತಪ್ಪು ತಿಳಿಯಬಾರದು. ‘ಬದುಕುವ ಹಕ್ಕು’ ಎಂಬುದು ನಮ್ಮ ಸಂಸ್ಕೃತಿಗೆ ಪರಕೀಯವಾದದ್ದು ಎಂದಾಕ್ಷಣ ಕೊಲೆ ಮಾಡಿದರೆ ತಪ್ಪಿಲ್ಲ ಎಂಬುದಾಗಿ ಹೇಳಿದಂತಲ್ಲ. ಅದರಂತೇ, ಬದುಕುವ ಹಕ್ಕಿನ ಕಲ್ಪನೆ ಇರದ ಸಮಾಜವೊಂದಕ್ಕೆ ಜೀವ ದಯೆಯೇ ಇಲ್ಲ ಎಂದು ವಾದ ಮಾಡುವುದೂ ಸರಿಯಲ್ಲ ಎಂಬುದನ್ನು ನೆನಪಿಡಬೇಕು. ಇಂದು ನಾವು ವಿದ್ಯಾವಂತರು ಅದನ್ನೇ ಮಾಡುತ್ತಿದ್ದಂತಿದೆ. ಅಂದರೆ ನಮಗೆ ಮಾನವ ಹಕ್ಕುಗಳ ಕಲ್ಪನೆ ಇರದ ಸಮಾಜ ವ್ಯವಸ್ಥೆಗಳು ಅನೀತಿಯುತವಾಗಿವೆ ಹಾಗೂ ನ್ಯಾಯಸಮ್ಮತವಾಗಿರಲು ಸಾಧ್ಯವಿಲ್ಲ ಎಂಬ ಪೂರ್ವಾಗ್ರಹವಿದೆ. ಮಾನವ ಹಕ್ಕುಗಳಿಗೆ ಅಷ್ಟೇ ಉತ್ಕೃಷ್ಟವಾದ ಪರ್ಯಾಯಗಳು ನಮ್ಮ ಸಂಸ್ಕೃತಿಯಲ್ಲಿ ಇರಲು ಸಾಧ್ಯ ಹಾಗೂ ಅದು ಇದೆ ಎಂಬುದು ನನ್ನ ವಾದ.

ಪಾಶ್ಚಾತ್ಯ ಹಕ್ಕುಗಳಿಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುವ ಪರಿಕಲ್ಪನೆಯೊಂದು ನಮ್ಮ ಸಂಸ್ಕೃತಿಯಲ್ಲಿದೆ. ಅದೇ ಕರ್ತವ್ಯ. ನಮ್ಮ ಕರ್ತವ್ಯಕ್ಕೂ ಇಂಗ್ಲೀಷಿನ ಡ್ಯೂಟಿ ಎಂಬ ಪರಿಭಾಷೆಗೂ ಮೂಲಭೂತ ವ್ಯತ್ಯಾಸವಿದೆ. ಡ್ಯೂಟಿ ಎಂದರೆ ಒಬ್ಲಿಗೇಶನ್ ಅಥವಾ ಒತ್ತಾಯಪೂರ್ವಕವಾಗಿ ಮಾಡುವಂಥದ್ದು. ಅದೊಂದು ನಿಬಂಧನೆ. ಕರ್ತವ್ಯವು ನಮ್ಮ ಸ್ವಂತಿಕೆಯನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಸ್ವ ಇಚ್ಛೆಯಿಂದ ಆರೋಪಿಸಿಕೊಳ್ಳುವ ನಡತೆಯಾಗಿದೆ. ಅಂದರೆ ಭಾರತೀಯ ಸಮಾಜದಲ್ಲಿ ಸ್ವಂತಿಕೆ ಎಂಬುದು ಮನುಷ್ಯ ಸಂಬಂಧಗಳಲ್ಲಿ ಆಕಾರ ತಳೆಯುವ ಸಂಗತಿಯಾಗಿದೆ. ನಾನು ತಂದೆ, ಮಗ, ಅಣ್ಣ, ಗುರು, ಶಿಷ್ಯ, ಇತ್ಯಾದಿಯಾಗಿ ನನ್ನ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತೇನೆ ಎನ್ನುವುದರ ಮೇಲೆ ನನ್ನ ಸುತ್ತುಮುತ್ತಲಿನ ಸಂಬಂಧಗಳಲ್ಲಿ ನನ್ನ ಸ್ವಂತಿಕೆ ಆಕಾರ ತಳೆಯುತ್ತದೆ. ಈ ಕರ್ತವ್ಯಗಳು ನಿರ್ದಿಷ್ಟ ಸಂಬಂಧಗಳಿಗೆ ನೀಡುವ ಭರವಸೆಗಳು ಎಂಬುದಾಗಿಯೂ ವರ್ಣಿಸಬಹುದು.

ಈ ಭರವಸೆಯೇ ನನ್ನ ಸ್ವಂತಿಕೆಯನ್ನು ಕಟ್ಟಿಕೊಡುತ್ತದೆ ಅಂತಾದಲ್ಲಿ ‘ನಾನೇಕೆ ಇಂತಿಂಥ ಸಂಬಂಧದ ಜೊತೆ ಇಂತಿಂಥ ಕರ್ತವ್ಯವನ್ನು ಮಾಡಬೇಕು?’ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರಗಳಿವೆ. ಅದೇ ರೀತಿಯಲ್ಲಿ ನಾನು ನಿರ್ವಹಿಸುವ ಕರ್ತವ್ಯಗಳು ಉಳಿದವರು ನಿರ್ವಹಿಸುವ ಕರ್ತವ್ಯಗಳ ಜೊತೆಗೆ ಸಂಘರ್ಷಿಸುವ ಸಾಧ್ಯತೆಯೂ ಇಲ್ಲ. ಏಕೆಂದರೆ ಅನ್ಯರು (ನನ್ನ ಮಗ, ಶಿಷ್ಯ, ಗೆಳೆಯ ಇತ್ಯಾದಿ) ನನ್ನ ಕುರಿತು ನಿಭಾಯಿಸುವ ಕರ್ತವ್ಯಗಳನ್ನು ಪ್ರೋತ್ಸಾಹಿಸುವುದೂ ನನ್ನ ಸ್ವಂತಿಕೆಗೆ ನಿರ್ಣಾಯಕವೇ ಆಗಿರುತ್ತದೆ. ಹಾಗಾಗಿ ಆ ಕೆಲಸವನ್ನೂ ನಾನು ಸ್ವ ಇಚ್ಛೆಯಿಂದಲೇ ಮಾಡುತ್ತಿರುತ್ತೇನೆ. ಅದೇ ರೀತಿಯಲ್ಲಿ ಅವರು ನನ್ನ ಕರ್ತವ್ಯವನ್ನು ನಡೆಸಲು ಸಹಕರಿಸುವಂತೇ ಮನವೊಲಿಸುವುದೂ ನನ್ನ ಸ್ವಂತಿಕೆಗೆ ನಿರ್ಣಾಯಕವಾಗಿರುತ್ತದೆ. ಉದಾಹರಣೆಗೆ, ಒಬ್ಬ ವೈದ್ಯನು ರೋಗಿಯ ಕುರಿತ ತನ್ನ ಕರ್ತವ್ಯವನ್ನು ನಿಭಾಯಿಸಬೇಕಾದರೆ ರೋಗಿಯು ಸಹಕಾರ ನೀಡುವಂತೆ ಕೂಡ ನೋಡಿಕೊಳ್ಳಬೇಕಾಗುತ್ತದೆ. ಸಹಕಾರ ನೀಡುವುದು ರೋಗಿಯ ಕರ್ತವ್ಯವಾಗುತ್ತದೆ. ಅಂದರೆ ಈ ಕರ್ತವ್ಯಗಳನ್ನು ಆರೋಪಿಸಿಕೊಳ್ಳುವಂತೆ ಹಾಗೂ ಗುರುತಿಸುವಂತೆ ಮಾಡುವುದೇ ನಮ್ಮ ಸಂಸ್ಕೃತಿ ಹಾಗೂ ಶಿಕ್ಷಣದ ಕಾರ್ಯವಾಗಿರುತ್ತದೆ.

ಹಾಗಾಗಿ ಪಾಶ್ಚಾತ್ಯ ಹಕ್ಕುಗಳ ಕುರಿತ ಬಗೆಹರಿಯದ ಚರ್ಚೆ ಅಥವಾ ಅವರ ಗೊಂದಲಗಳು ನಮ್ಮ ಕರ್ತವ್ಯದ ಸಂದರ್ಭದಲ್ಲಿ ಏಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಾಶ್ಚಾತ್ಯ ಚಿಂತನೆಗಳಿಂದ ಎರವಲು ಪಡೆದು ಅಪಾರ್ಥಗೊಳಿಸಿದ ಅರೆಬೆಂದ ವಿಚಾರಗಳನ್ನಿಟ್ಟುಕೊಂಡು ಎಷ್ಟೇ ತಿಣುಕಾಡಿದರೂ ನಮಗೆ ಅವರ ಚರ್ಚೆ ಬಗೆಹರಿಯುವುದಿಲ್ಲ. ಏಕೆಂದರೆ ಅವರಿಗೇ ಅದು ಬಗೆಹರಿದಿಲ್ಲ. ಅದಕ್ಕೆ ಬದಲಾಗಿ ಅದೇ ಶ್ರಮವನ್ನು ನಮ್ಮ ಕರ್ತವ್ಯದ ಕಲ್ಪನೆಯನ್ನು ಸಿದ್ಧಾಂತೀಕರಿಸಲು ವಿನಿಯೋಗಿಸಿದಲ್ಲಿ ಇನ್ನೂ ಉತ್ತಮ ಪ್ರತಿಫಲಗಳು ಸಿಗುವುದರಲ್ಲಿ ಸಂದೇಹವಿಲ್ಲ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: