ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 59: ಪಾಶ್ಚಾತ್ಯ ನೈತಿಕ ಸಿದ್ಧಾಂತಗಳು ಮತ್ತು ಭಾರತೀಯರ ನೈತಿಕತೆ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ನಮ್ಮ ಸುತ್ತ ಇರುವ ಜನರಲ್ಲಿ ಎರಡು ಪ್ರಕಾರದವರನ್ನು ನೋಡುತ್ತೇವೆ: 1. ಮೊದಲನೆಯವರು ತಾವು ಜನರೊಂದಿಗೆ ಒಡನಾಡುವಾಗ ಅಥವಾ ವಿಚಾರ ವಿನಿಮಯ ಮಾಡಿಕೊಳ್ಳುವಾಗ ನೀತಿ ಜಿಜ್ಞಾಸೆಯನ್ನು ಅಡ್ಡತರುವುದಿಲ್ಲ. ಬಹುತೇಕ ಭಾರತೀಯರು ಹಾಗೇ ವರ್ತಿಸುತ್ತಾರೆ. ಸಂಪ್ರದಾಯಸ್ಥ ಭಾರತೀಯನೊಬ್ಬನು ಅನ್ಯ ಮನುಷ್ಯರನ್ನು ಹಾಗೂ ವಿಚಾರಗಳನ್ನು ಅನ್ಯ ಎಂದಷ್ಟೇ ಗ್ರಹಿಸುತ್ತಾನೆ. ಹಾಗೂ ಒಂದೊಮ್ಮೆ ತನಗೆ ಸಮ್ಮತವಲ್ಲದಿದ್ದರೆ ಉದಾಸೀನರಾಗಿದ್ದುಬಿಡುತ್ತಾನೆ. ಸಂಪರ್ಕವನ್ನೇ ಕಡಿದುಕೊಳ್ಳುತ್ತಾನೆ. ಆದರೆ ಅಂಥ ಜನರ ವಿರುದ್ಧ ಹೋರಾಟಕ್ಕಿಳಿಯುವುದಿಲ್ಲ ಅಥವಾ ತನಗಾಗದ ವಿಚಾರಗಳನ್ನು ಹತ್ತಿಕ್ಕಲು ಪ್ರಯತ್ನಿಸುವುದಿಲ್ಲ. ಇಂಥವರಲ್ಲಿ ಯಾವುದೇ ಧೂರ್ತತೆಯಾಗಲೀ, ಅವಕಾಶವಾದವಾಗಲೀ ಇರುವುದಿಲ್ಲ. ಅದು ಅವರ ಜೀವನಕ್ರಮ ಅಷ್ಟೆ. ಇದು ಭಾರತೀಯ ಸಾಂಪ್ರದಾಯಿಕ ಸಮಾಜದ ಸದಸ್ಯರಲ್ಲಿ ಕಂಡುಬರುವ ಪ್ರತಿಕ್ರಿಯೆ.

2. ಎರಡನೆಯ ಪ್ರಕಾರದವರು ಪ್ರತೀ ವಿಚಾರದ ಕುರಿತೂ, ನಿರ್ಣಯದ ಕುರಿತೂ ನೀತಿ ಜಿಜ್ಞಾಸೆಯನ್ನು ತರುತ್ತಾರೆ. ಹಾಗೂ ತಮ್ಮ ಧೋರಣೆಗೆ ಅವು ವಿರುದ್ಧವಾಗಿದ್ದರೆ ಅದು ಅನೈತಿಕ ಎಂದೂ ಭದ್ರವಾಗಿ ನಂಬಿರುತ್ತಾರೆ. ಅಷ್ಟೇ ಅಲ್ಲ, ಅಂಥ ವಿಚಾರಗಳನ್ನು ಮಂಡಿಸಿದವರನ್ನು ದ್ವೇಷಿಸುವ ಮಟ್ಟಕ್ಕೂ ಹೋಗುತ್ತಾರೆ. ಅಂಥ ವಿಚಾರಗಳನ್ನು ಹತ್ತಿಕ್ಕಲು ಯಾವ ಮಾರ್ಗವನ್ನಾದರೂ ಅವರು ಹಿಡಿಯುತ್ತಾರೆ. ತಾವು ನಂಬಿಕೊಂಡ ನೈತಿಕತೆಯ ಬಗ್ಗೆ ಅವರಿಗೆಷ್ಟು ಅಚಲ ಶ್ರದ್ಧೆ ಇರುತ್ತದೆಯೆಂದರೆ ವಿರೋಧಿಗಳನ್ನು ಮಟ್ಟ ಹಾಕಲು ಯಾವ ಮಾರ್ಗವನ್ನು ಹಿಡಿದರೂ ಅದು ಸಮರ್ಥನೀಯ ಎಂಬುದು ಅವರ ಧೋರಣೆ. ಇವರು ನೈತಿಕ ಕಾಳಜಿಗಳನ್ನು ಹೊಂದಿದವರು. ಇಂಥವರು ಬಹುತೇಕವಾಗಿ ಪಾಶ್ಚಾತ್ಯ ಚಿಂತನೆಗಳಿಂದ ಪ್ರಭಾವಿತರಾದ ಬುದ್ಧಿಜೀವಿಗಳು ಹಾಗೂ ವಿಭಿನ್ನ ವಿಮೋಚನಾ ಹೋರಾಟಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಈ ಒಂದು ವಿಷಯಕ್ಕೆ ಸಂಬಂಧಿಸಿದಂತೇ ಸಾಮಾನ್ಯ ಭಾರತೀಯನೊಬ್ಬನ ವರ್ತನೆಗೂ ಈ ಮೇಲಿನ ಪ್ರಕಾರದವರಿಗೂ ಮೂಲಭೂತ ವ್ಯತ್ಯಾಸವಿದ್ದಂತೇ ತೋರುತ್ತದೆ.

ಎರಡನೆಯ ಪ್ರಕಾರದವರು ಅನ್ಯರ ವಿಚಾರಗಳನ್ನು ನೈತಿಕ ಪ್ರಶ್ನೆಯನ್ನಾಗಿಸಿ ಅರ್ಥೈಸುತ್ತಿರುತ್ತಾರೆ. ಅದಕ್ಕೆ ಅನೇಕ ಕಾರಣಗಳಿರಬಹುದು. ಅವನ್ನು ನಾನಿಲ್ಲಿ ಚರ್ಚೆಗೆತ್ತಿಕೊಳ್ಳುವುದಿಲ್ಲ. ಇದು ಪಾಶ್ಚಾತ್ಯ ನೈತಿಕ ನಿರ್ಣಯಗಳ ಒಂದು ವೈಶಿಷ್ಟ್ಯತೆಯನ್ನು ಪರಿಚಯಿಸಲು ಪೀಠಿಕೆ ಅಷ್ಟೆ. ಇವರ ಪ್ರತಿಕ್ರಿಯೆಗಳಲ್ಲಿ ಒಂದು ಸಂಗತಿಯ ಕುರಿತು ಗಮನ ಸೆಳೆಯಲು ಬಯಸುತ್ತೇನೆ. ಅದೆಂದರೆ, ಅವರು ಸ್ವೀಕೃತವಾದ ಒಂದು ನೈತಿಕ ಸಿದ್ಧಾಂತವನ್ನು ಬಿಟ್ಟು ನೀತಿ ನಿರ್ಣಯ ಮಾಡಲು ಅಸಮರ್ಥರಾಗಿದ್ದಾರೆ. ಹಾಗಾಗಿ ಅವರದೇ ಇತರ ಕ್ರಿಯೆಗಳು ಅನೀತಿಯುತವಾಗಿದ್ದರೂ ಅವರಿಗೆ ಅದು ಅನೀತಿಯುತವಾಗಿ ಕಾಣಿಸುವುದಿಲ್ಲ. ಅಂದರೆ ಅವರು ಒಂದು ನಿರ್ದಿಷ್ಟ ಸಿದ್ಧಾಂತವನ್ನು ಪ್ರಮಾಣವಾಗಿಟ್ಟುಕೊಂಡು ವ್ಯವಹರಿಸುತ್ತಿರುವುದು ಕಂಡುಬರುತ್ತದೆ ಹಾಗೂ ತಾವು ನೈತಿಕವಾಗಿ ಪರಿಶುದ್ಧರು ಎಂಬ ಭಾವನೆ ಅದರಿಂದ ಹುಟ್ಟುತ್ತದೆ ಅಷ್ಟೇ ಅಲ್ಲ ಅದಕ್ಕೆ ವ್ಯತಿರಿಕ್ತವಾದುದು ಅನೈತಿಕ ಎಂಬಂತೇ ಕಾಣಿಸುತ್ತದೆ.

ಪಾಶ್ಚಾತ್ಯರ ನಾರ್ಮೇಟಿವ್ ಎಥಿಕ್ಸ್ ಎಂಬುದು ನೀತಿಗೆ ಸಂಬಂಧಿಸಿದ ಒಂದು ಸೈದ್ಧಾಂತಿಕ ಚೌಕಟ್ಟು. ಅದು ನೀತಿ ಹಾಗೂ ಅನೀತಿಗಳನ್ನು ಕಟ್ಟು ನಿಟ್ಟಾಗಿ ವಿಂಗಡಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿದೆ. ಅದು ನೈತಿಕ ನಿಯಮಗಳನ್ನು ಕಡ್ಡಾಯವಾದ (oughtಎಂಬರ್ಥದಲ್ಲಿ) ಸ್ವರೂಪದಲ್ಲಿ ಕಲ್ಪಿಸುತ್ತದೆ. ಈ ನಿಯಮಗಳು ಮನುಕುಲಕ್ಕೆ ಸಾರ್ವತ್ರಿಕವಾಗಿ ಅನ್ವಯವಾಗುತ್ತವೆ. ಆ ಪ್ರಕಾರ ಕೆಲವು ಕ್ರಿಯೆಗಳು ಕಡ್ಡಾಯವಾಗಿ ಪಾಲಿಸಲೇಬೇಕಾದವುಗಳು ಹಾಗೂ ಕೆಲವು ಕ್ರಿಯೆಗಳು ನಿಷೇಧಕ್ಕೊಳಪಡತಕ್ಕವು. ಪಾಶ್ಚಾತ್ಯರ ಪ್ರಕಾರ ನೈತಿಕವಾಗಿರುವುದೆಂದರೆ ಒಂದಿಲ್ಲೊಂದು ನೈತಿಕ ಸಿದ್ಧಾಂತದ ಪ್ರಕಾರ ನಡೆದುಕೊಳ್ಳಬೇಕು. ಒಂದು ಉದಾಹರಣೆಯನ್ನು ನೀಡುವುದಾದರೆ, ಎಕ್ಸ್ ಎಂಬವನಿಗೆ ವೈ ಎಂಬವನು ಭ್ರಷ್ಟನಾಗಿ ಕಾಣಿಸುತ್ತಾನೆ ಅಂತಿಟ್ಟುಕೊಳ್ಳಿ. ಅವನದು ಅನೈತಿಕ ವ್ಯವಹಾರ ಹೌದೋ ಅಲ್ಲವೋ ಎಂಬುದನ್ನು ಹೇಗೆ ನಿರ್ಣಯಿಸುವುದು? ಅದಕ್ಕೆ ಅವನು ನಂಬಿಕೊಂಡ ಎಥಿಕಲ್ ಸಿದ್ಧಾಂತವು ಈ ಮುಂದಿನಂತೆ ಸಹಾಯಕ್ಕೆ ಬರುತ್ತದೆ: 1. ಎಕ್ಸ್ ಪ್ರಕಾರ ಭ್ರಷ್ಟತೆಗೆ ಒಂದು ವ್ಯಾಖ್ಯೆಯಿರುತ್ತದೆ. 2. ಎಕ್ಸ್ ಪ್ರಕಾರ ಎಥಿಕಲ್ ನಿಯಮಗಳು ಹೀಗೆ ಹೀಗೆ ಇರುತ್ತವೆ. 3. ಭ್ರಷ್ಟ ಕ್ರಿಯೆಗಳು ಈ ಎಥಿಕ್ಸಿನ ನಿಯಮಗಳನ್ನು ಉಲ್ಲಂಘಿಸುವುದರಿಂದ ಅವು ಅನೈತಿಕವಾಗಿವೆ. 4. ವೈ ಭ್ರಷ್ಟನಾಗಿದ್ದಾನೆಂಬುದು ಎಕ್ಸ್ನ ವ್ಯಾಖ್ಯೆಯಿಂದ ಸಿದ್ಧವಾಗುತ್ತದೆ. 5. ಎಲ್ಲಾ ಭ್ರಷ್ಟ ಕ್ರಿಯೆಗಳೂ ಅನೈತಿಕವಾಗಿವೆ. 6. ಹಾಗಾಗಿ ವೈ ನ ಕ್ರಿಯೆಯು ಅನೈತಿಕವಾದುದು.

ಎಥಿಕಲ್ ಸಿದ್ಧಾಂತದ ಒಂದು ಲಕ್ಷಣ ಇದಾದರೆ, ಮತ್ತೊಂದು ಅದು ಪ್ರತೀ ವ್ಯಕ್ತಿಯ ಮುಕ್ತ ಆಯ್ಕೆಯಾಗಿರಬೇಕು. ಪಾಶ್ಚಾತ್ಯರ ಪ್ರಕಾರ ಪ್ರತೀ ವ್ಯಕ್ತಿಯಲ್ಲೂ ಒಂದು ಸ್ವಾಯತ್ತವಾದ ಆಂತರಿಕ ಸತ್ವವು ಇರುತ್ತದೆ. ಅದೇ ಸೆಲ್ಪ್ ಅಥವಾ ಸ್ವಂತಿಕೆ. ಅದು ಅನನ್ಯವಾದುದು. ಅದು ತನ್ನ ಅನನ್ಯತೆಯನ್ನು ಕಾಯ್ದುಕೊಳ್ಳಲು ತನ್ನದೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ. ಸ್ವಂತಿಕೆಯಲ್ಲಿ ಬಹುತ್ವವಿರುವುದರಿಂದ ಏಕಮೇವ ಸಿದ್ಧಾಂತವು ವ್ಯಕ್ತಿಗಳೆಲ್ಲರ ಅಗತ್ಯವನ್ನು ಪೂರೈಸುವುದಿಲ್ಲ. ಹಾಗಾಗ ಪರ್ಯಾಯ ನೈತಿಕ ಸಿದ್ಧಾಂತಗಳೂ ಇರಬೇಕು. ಅವುಗಳಲ್ಲಿ ಆಯಾ ವ್ಯಕ್ತಿಯು ತನಗೆ ಸೂಕ್ತವಾದ ಸಿದ್ಧಾಂತವನ್ನು ಬಳಸಿಕೊಂಡು ವೈಜ್ಞಾನಿಕವಾಗಿ ನೀತಿಯ ಆಯ್ಕೆ ಮಾಡಬೇಕು. ಇದು ಮೇಲ್ನೋಟಕ್ಕೆ ಮುಕ್ತ ವ್ಯವಹಾರವಾಗಿ ಕಂಡರೂ, ಆಯ್ಕೆ ನಡೆಯುವುದು ಸಿದ್ಧಾಂತಗಳ ವಲಯದಲ್ಲಿ ಮಾತ್ರ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗಾಗಿ ಎಥಿಕಲ್ ಸಿದ್ಧಾಂತಗಳಿಗೂ ದೈನಂದಿನ ಜೀವನಕ್ಕೂ ನೇರ ಸಂಬಂಧವಿಲ್ಲ. ಅಂದರೆ ಜೀವನಾನುಭವವನ್ನು ಕುರಿತು ಆಲೋಚಿಸುವ ಕೆಲಸದ ಬದಲು ಸಿದ್ಧಾಂತಗಳ ಕುರಿತು ಆಲೋಚಿಸುವ ಕೆಲಸ ಇಲ್ಲಿ ಪ್ರಾಧಾನ್ಯತೆ ಪಡೆಯುತ್ತದೆ. ಹಾಗಾಗಿ ನಮ್ಮ ಅನುಭವಕ್ಕೂ ಆಲೋಚನೆಗೂ ಕಂದರ ಉಂಟಾಗುವುದು ಸ್ವಾಭಾವಿಕ.

ದೈನಂದಿನ ಜೀವನದ ಎಲ್ಲಾ ಅಗತ್ಯವನ್ನು ಪೂರೈಸಬಲ್ಲ ಎಥಿಕ್ಸಿನ ಸಿದ್ಧಾಂತವನ್ನು ಪಾಶ್ಚಾತ್ಯರಿನ್ನೂ ರಚಿಸಿಕೊಂಡಿಲ್ಲ. ಆದರೆ ನೀತಿ ಅನೀತಿಯನ್ನು ಅವರು ಎಥಿಕ್ಸಿನ ಸಿದ್ಧಾಂತಗಳ ಮೂಲಕವೇ ನಿಷ್ಕರ್ಷಿಸುವುದನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ದೈನಂದಿನ ನೈತಿಕ ಸಮಸ್ಯೆಗಳನ್ನು ಪರಿಹರಿಸಲಾಗದಿದ್ದರೂ ಕೂಡ ನಾರ್ಮೇಟಿವ್ ಎಥಿಕ್ಸೇ ನೀತಿ ಜಿಜ್ಞಾಸೆಯ ತಳಹದಿ ಎಂಬ ಧೋರಣೆಯಂತೂ ಅವರ ತಲೆಯೊಳಗೆ ಭದ್ರವಾಗಿ ಕುಳಿತಿದೆ. ಅಂದರೆ ನೀತಿ-ಅನೀತಿ ಎಂಬ ಸ್ಪಷ್ಟ ವಿಭಜನೆಗಳನ್ನು ಸಾರ್ವತ್ರಿಕವಾಗಿ ಅನ್ವಯಮಾಡಬೇಕು ಹಾಗೂ ನೈತಿಕ ನಿಯಮಗಳ ಪ್ರಕಾರ ನಡೆದುಕೊಳ್ಳಲೇಬೇಕು ಎಂಬ ನಂಬಿಕೆ. ಇದರ ಪರಿಣಾಮವಾಗಿ ತಾವು ನಂಬಿಕೊಂಡ ಸೈದ್ಧಾಂತಿಕ ಚೌಕಟ್ಟು ನೀಡುವ ನೈತಿಕ ನಿರ್ಣಯಗಳೇ ಸತ್ಯ ಎಂಬುದೊಂದು ಕುರುಡು ನಂಬಿಕೆ ಹುಟ್ಟುವ ಸಾಧ್ಯತೆ ಇರುತ್ತದೆ. ಅದಕ್ಕೂ ದೈನಂದಿನ ಜೀವನಕ್ಕೂ ಸಂಬಂಧವಿರಬೇಕೆಂದೇನೂ ಇಲ್ಲ. ಒಂದು ನಿರ್ದಿಷ್ಟ ಸಿದ್ಧಾಂತವನ್ನೊಪ್ಪಿಕೊಂಡು ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಂಡವನೊಬ್ಬನಿಗೆ ಅವನ ಸಿದ್ಧಾಂತವು ಒಂದು ನಿರ್ದಿಷ್ಟ ರೀತಿಯ ನೈತಿಕ ನಿರೂಪಣೆಗಳನ್ನು ಮಾತ್ರವೇ ನೀಡಿರುತ್ತದೆ. ಅವನಿಗೆ ತನ್ನ ಇತರ ಅನೇಕ ವರ್ತನೆಗಳು ನೈತಿಕ ಪ್ರಶ್ನೆಯಾಗಿ ಕಾಡುವುದೇ ಇಲ್ಲ. ಹಾಗಾಗಿ ಅಲ್ಲಿ ಅವನು ತೀರಾ ಅನೈತಿಕವಾಗಿ ವರ್ತಿಸುತ್ತಿದ್ದರೂ ಕೂಡ ತಾನು ನೈತಿಕವಾಗಿ ಸರಿ ಇದ್ದೇನೆ ಎಂಬ ಭ್ರಮೆಯಲ್ಲೇ ಇರುತ್ತಾನೆ. ಇದು ಪಾಶ್ಚಾತ್ಯ ಎಥಿಕ್ಸಿನ ಸಿದ್ಧಾಂತಗಳ ಮಿತಿಯಾಗಿದೆ.

ಈ ಮಿತಿಯಿಂದಾಗಿಯೇ ಯಾವ ನಿರ್ಧಾರವನ್ನಾದರೂ ಒಂದಿಲ್ಲೊಂದು ನೈತಿಕ ಸಿದ್ಧಾಂತಗಳಿಂದ ಸಮರ್ಥನೆ ಮಾಡಿಕೊಳ್ಳುವ ಅವಕಾಶವಾದಿಗಳೂ ಹುಟ್ಟಿಕೊಳ್ಳುತಾರೆ. ಬಹಳಷ್ಟು ಪಾಶ್ಚಾತ್ಯ ನೈತಿಕ ತತ್ವಶಾಶ್ತ್ರಜ್ಞರು ಹಾಗೂ ಅವರ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಎದ್ದು ಕಾಣಿಸುವ ರೀತಿಯಲ್ಲಿ ಅನೈತಿಕ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಅವರ ಕ್ರಿಯೆಗಳಲ್ಲಿ ಸಾಮಾನ್ಯವಾದ ಅಂಶವೇನಾದರೂ ಇದ್ದರೆ ಅದು ಸ್ವಾರ್ಥ ಹಾಗೂ ವಯಕ್ತಿಕ ಹಿತಾಸಕ್ತಿ. ಇವರು ಹೇಳುವುದೊಂದು ಮಾಡುವುದೊಂದು ಏಕಾಗುತ್ತದೆಯೆಂದರೆ ಎಥಿಕಲ್ ಸಿದ್ಧಾಂತಗಳ ಮಿತಿಯಿಂದಾಗಿ. ಅಂದರೆ ಪಾಶ್ಚಾತ್ಯ ಎಥಿಕಲ್ ಸಿದ್ಧಾಂತಗಳು ದೈನಂದಿನ ಜೀವನವನ್ನು ಅನೈತಿಕಗೊಳಿಸಿಬಿಟ್ಟಿವೆ.

ಇದರ ಜೊತೆಗೆ ಎಥಿಕ್ಸಿನ ನಿಯಮಗಳು ಮತ್ತೂ ಒಂದು ಧೋರಣೆಯನ್ನು ಹುಟ್ಟುಹಾಕುತ್ತವೆ. ನೈತಿಕ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕಾದಂಥವುಗಳು ಎಂದು ಅವು ಒತ್ತಾಯಿಸುತ್ತವೆ. ಅಂದರೆ, ನೈತಿಕ ನಿಯಮಗಳು ಕಡ್ಡಾಯವಾಗದಿದ್ದರೆ ವ್ಯಕ್ತಿಗಳು ಅನೀತಿಗೆ ಜಾರಿಕೊಳ್ಳುತ್ತಾರೆ ಎಂಬ ನಂಬಿಕೆ. ಹಾಗಾಗಿಯೇ ಇಂಥ ನಿಯಮಗಳನ್ನು ನಮ್ಮ ಪ್ರಭುತ್ವಗಳು ಕಾನೂನುಗಳ ರೂಪದಲ್ಲಿ ವಿಧಿಸುತ್ತವೆ. ಅದರರ್ಥ ಮಾನವನು ನೈತಿಕ ನಿಯಮಗಳ ಬಲವಂತವಿಲ್ಲದಿದ್ದರೆ ನೀತಿವಂತನಾಗಿ ನಡೆದುಕೊಳ್ಳಲಾರನು ಅಂತ. ಇದು ನೈತಿಕ ನಿಯಮಗಳನ್ನು ವ್ಯಕ್ತಿಗಳು ಸ್ವ ಇಚ್ಛೆಯಿಂದ ಪಾಲಿಸುವುದಿಲ್ಲ, ಎಂಬ ನಿರ್ಣಯವನ್ನೂ ಹುಟ್ಟುಹಾಕುತ್ತದೆ. ಪಾಶ್ಚಾತ್ಯ ತತ್ವಶಾಶ್ತ್ರಜ್ಞರು ‘ನೈತಿಕ ನಿಯಮಗಳನ್ನು ವ್ಯಕ್ತಿಯೊಬ್ಬನು ಏಕೆ ಉಲ್ಲಂಘಿಸಬಾರದು?’ ಎಂಬ ಪ್ರಶ್ನೆಯ ಕುರಿತು ಬಹಳ ತಲೆಕೆಡಿಸಿಕೊಂಡಿದ್ದಾರೆ, ಆದರೆ ಸರಿಯಾದ ಉತ್ತರ ನೀಡಲು ಸೋತಿದ್ದಾರೆ. ಆದರೆ ಈ ಧೋರಣೆಯು ಚರ್ಚಾಸ್ಪದವಾಗಿದೆ. ಏಕೆಂದರೆ ನೈತಿಕ ನಿಯಮಗಳ ನಿರ್ಬಂಧವಿಲ್ಲದಿದ್ದರೆ ವ್ಯಕ್ತಿಗಳು ಅನೀತಿಯನ್ನೇ ಆಚರಿಸುತ್ತಾರೆ ಎಂಬ ನಂಬಿಕೆಯು ಅನುಭವದಿಂದ ಹುಟ್ಟಿದ್ದಲ್ಲ. ಉದಾಹರಣೆಗೆ ಕಳ್ಳತನವು ಅನೈತಿಕ ಎಂಬ ನಿಯಮವನ್ನು ಕಡ್ಡಾಯ ಮಾಡದಿದ್ದರೆ ಪ್ರತಿಯೊಬ್ಬ ಮನುಷ್ಯನೂ ಕಳ್ಳತನ ಮಾಡುತ್ತಾನೆಯೆ? ಅದರಷ್ಟು ಅಸಹಜವಾದ ಹಾಗೂ ನಿರಾಧಾರವಾದ ಹೇಳಿಕೆ ಮತ್ತೊಂದಿರಬಹುದೆ?

ಎಥಿಕ್ಸಿನ ಸಿದ್ಧಾಂತಗಳ ಮೂಲಕ ನೈತಿಕತೆಯನ್ನು ಬೆಳೆಸಿಕೊಂಡ ಪಾಶ್ಚಾತ್ಯರು ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿ ಅಂಥ ಸಿದ್ಧಾಂತಗಳು ಕಂಡುಬರಲಿಲ್ಲ. ಇದರ ಪರಿಣಾಮವಾಗಿ ಭಾರತೀಯರಿಗೆ ನೈತಿಕತೆಯೇ ಇಲ್ಲ ಎಂಬ ತೀರ್ಮಾನಕ್ಕೂ ಅವರು ಬಂದರು. ಆದರೆ ಕ್ರಮೇಣ ಅಂಥ ನಿರ್ಣಯ ಕೂಡ ಸರಿಯಲ್ಲ ಎಂಬುದಾಗಿ ಅವರಿಗನಿಸಿತು. ಇಂದಿಗೂ ಕೂಡ ಭಾರತೀಯರ ಎಥಿಕ್ಸ್ನ ಸ್ವರೂಪವೇನು ಹಾಗೂ ಅದಕ್ಕೆ ಪ್ರಮಾಣಗಳೇನು ಎಂಬುದನ್ನು ತಿಳಿಯಲು ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಹಾಗೂ ತತ್ವಶಾಶ್ತ್ರಜ್ಞರು ಹುಡುಕಾಟ ಮುಂದುವರೆಸಿದ್ದಾರೆ. ಆದರೆ ಈ ಎಲ್ಲ ಅಧ್ಯಯನಗಳೂ ಮಾನವ ಸಮಾಜದಲ್ಲಿ ಎಥಿಕ್ಸ್ನ ಸಿದ್ಧಾಂತಗಳು ಸಾರ್ವತ್ರಿಕವಾಗಿರುತ್ತವೆ ಎಂಬ ನಂಬಿಕೆಯಿಂದ ಹೊರಡುತ್ತವೆ. ಪಾಶ್ಚಾತ್ಯ ಚಿಂತನೆಗಳನ್ನು ಹಾಗೂ ಸಮಾಜ ಶಾಸ್ತ್ರೀಯ ಸಿದ್ಧಾಂತಗಳನ್ನು ಒಪ್ಪಿಕೊಂಡ ಭಾರತೀಯರಿಗೂ ಕೂಡ ಅವುಗಳ ಮಾನದಂಡದಲ್ಲಿ ನಮ್ಮ ಸಮಾಜವು ಅನೈತಿಕವಾಗಿಯೇ ಕಾಣಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಪಾಶ್ಚಾತ್ಯರ ನೈತಿಕ ಸಿದ್ಧಾಂತವೊಂದೇ ಅವರಿಗೆ ಪರ್ಯಾಯವಾಗಿ ಕಾಣಿಸುತ್ತದೆ. ಅದರ ಜೊತೆಗೇ ಅವರ ನೈತಿಕ ಧೋರಣೆಯು ಕೂಡ ಇವರನ್ನು ಪ್ರಭಾವಿಸುತ್ತದೆ.

ಭಾರತೀಯರ ನೈತಿಕತೆಯ ಸ್ವರೂಪವೇನು? ಭಾರತೀಯ ವ್ಯಕ್ತಿಯೊಬ್ಬನಲ್ಲಿ ಪಾಶ್ಚಾತ್ಯರು ಗುರುತಿಸುವ ಸ್ವಂತಿಕೆ (ಸೆಲ್ಫ್) ಕಂಡುಬರುವುದಿಲ್ಲ ಎಂಬುದಾಗಿ ಹಿಂದೆ ಚರ್ಚಿಸಿದ್ದೆ. ನೈತಿಕತೆಯ ಕುರಿತು ಭಾರತೀಯರ ವೈಶಿಷ್ಟ್ಯತೆಯನ್ನು ಅರಿಯಲು ಈ ವ್ಯತ್ಯಾಸವು ನಿರ್ಣಾಯಕವಾಗಿದೆ ಎಂಬುದು ನನ್ನ ಅಭಿಪ್ರಾಯ. ಭಾರತೀಯರು ಅನೈತಿಕ ಕ್ರಿಯೆಯಿಂದ ಅನ್ಯರ ದೃಷ್ಟಿಯಲ್ಲಿ ತಾವು ಹಗುರಾಗುತ್ತೇವೆ ಅಥವಾ ನಗೆಪಾಟಲಿಗೀಡಾಗುತ್ತೇವೆ ಎಂಬುದಾಗಿ ಭಾವಿಸುತ್ತಾರೆ. ಅದು ಒಬ್ಬನ ನೈತಿಕತೆಯನ್ನು ಕಳೆಯುತ್ತದೆ ಎಂದು ನಂಬುತ್ತಾರೆ. ಹಾಗಾಗಿ ಒಬ್ಬ ಅಗಸನ ಮಾತನ್ನು ಕೇಳಿ ಲೋಕಾಪವಾದದ ಭೀತಿಯಿಂದ ಗರ್ಭಿಣಿ ಹೆಂಡತಿಯನ್ನು ಕಾಡಿಗೆ ಕಳುಹಿಸಿದ ರಾಮನದು ಆದರ್ಶ ವ್ಯಕ್ತಿತ್ವವಾಗುತ್ತದೆ. ಭಾರತೀಯ ಸಮಾಜದಲ್ಲಿ ಒಬ್ಬನ ಸ್ವಂತಿಕೆಯು ಮತ್ತೊಬ್ಬನು ಅದನ್ನು ಹೇಗೆ ಚಿತ್ರಿಸುತ್ತಾನೆ ಎಂಬುದನ್ನವಲಂಬಿಸಿ ರೂಪುಗೊಳ್ಳುತ್ತದೆ ಎಂಬುದನ್ನು ನೋಡಿದ್ದೇವೆ. ಇಲ್ಲಿ ಒಬ್ಬನು ಮತ್ತೊಬ್ಬನನ್ನು ಚಿತ್ರಿಸುವುದೆಂದರೆ ಮತ್ತೊಬ್ಬನ ಕ್ರಿಯೆಯನ್ನು ಚಿತ್ರಿಸುವುದು. ಮತ್ತೊಬ್ಬನ ಸದ್ಗುಣವನ್ನು ತಿಳಿಸಬೇಕಾದರೂ ಕೂಡ ಕ್ರಿಯೆಯನ್ನೇ ಎತ್ತಿ ಹೇಳುತ್ತಾರೆ.

ಉದಾಹರಣೆಗೆ, ಎ ಎನ್ನುವ ವ್ಯಕ್ತಿ ಯಾವ ಥರದವನು? ಎಂದು ನೀವು ಸಾಂಪ್ರದಾಯಿಕ ಭಾರತೀಯನೊಬ್ಬನಿಗೆ ಕೇಳಿದರೆ ಅವನ ಉತ್ತರ ಹೀಗಿರುತ್ತದೆ ‘ಅವನಿಗೆ ಹಿರಿಯರನ್ನು ಕಂಡರೆ ಭಯ ಭಕ್ತಿ/ ಅವನು ಪ್ರತೀ ಬಾರಿಯೂ ಕಾಲಿಗೆ ನಮಸ್ಕರಿಸಿಯೇ ಹೋಗುತ್ತಾನೆ,..’ ಇತ್ಯಾದಿ. ಈ ಪ್ರಶ್ನೆಯನ್ನೇ ಪಾಶ್ಚಾತ್ಯನೊಬ್ಬನಿಗೆ ಕೇಳಿದರೆ ಸಿಗುವ ಉತ್ತರ ಹೀಗಿರುತ್ತದೆ: ‘ಅವನು ಒಳ್ಳೆಯ ನಡತೆಯವನು/ ವಿನಯವಂತ..’ ಇತ್ಯಾದಿ. ಈ ಉತ್ತರಗಳು ಏಕೆ ಭಿನ್ನವಾಗಿವೆಯೆಂದರೆ ಭಾರತೀಯರು ನೈತಿಕತೆಯ ಸಂದರ್ಭದಲ್ಲಿ ಕ್ರಿಯೆಯನ್ನು ಉಲ್ಲೇಖಿಸುತ್ತಾರೆ. ಪಾಶ್ಚಾತ್ಯರು ಅದನ್ನೊಂದು ನೈತಿಕ ಗುಣ ಎಂಬಂತೇ ಹಾಗೂ ಸ್ವಂತಿಕೆಯ ಲಕ್ಷಣವೆಂಬಂತೇ ಗುರುತಿಸುತ್ತಾರೆ. ಒಬ್ಬ ವ್ಯಕ್ತಿಯ ಸ್ವಂತಿಕೆಯಿಂದಾಗಿ ಅವನು ಆ ನಿರ್ದಿಷ್ಟ ಗುಣವನ್ನು ರೂಢಿಸಿಕೊಂಡಿದ್ದಾನೆ ಅಂತರ್ಥ. ಭಾರತೀಯರು ಅವನು ತಮ್ಮ ಜೊತೆಗೆ ಹೇಗೆ ಒಡನಾಡುತ್ತಾನೆ ಎಂಬುದನ್ನು ಚಿತ್ರಿಸುವ ಮೂಲಕ ಅವನ ಒಳ್ಳೆಯತನವನ್ನು ಸೂಚಿಸುತ್ತಾರೆ.

ಅಂದರೆ ಭಾರತೀಯರಿಗೆ ಒಳ್ಳೆಯತನವು ಕ್ರಿಯೆ ಮತ್ತು ಸಂಬಂಧಗಳನ್ನು ಹೊರತು ಪಡಿಸಿ ಪ್ರಸ್ತುತವಾಗುವುದಿಲ್ಲ. ಭಾರತೀಯರ ಸ್ವಂತಿಕೆ ಕೂಡ ಅನ್ಯರು ತಮ್ಮ ಬಗ್ಗೆ ನೀಡುವ ಈ ಚಿತ್ರಣವನ್ನೇ ಅವಲಂಬಿಸಿ ರೂಪುಗೊಳ್ಳುತ್ತದೆ ಅಂತಾದಲ್ಲಿ ‘ನಾನೇಕೆ ಒಳ್ಳೆಯವನಾಗಿರಬೇಕು?’ ಎಂಬ ಪ್ರಶ್ನೆ ಅವರಿಗೆ ಪ್ರಸ್ತುತವಾಗುವುದಿಲ್ಲ. ಹಾಗಾಗಿ ಅಂಥ ಪ್ರಶ್ನೆಗಳನ್ನೂ ನಮ್ಮವರು ಎತ್ತಿಲ್ಲ. ಪಾಶ್ಚಾತ್ಯರಲ್ಲಿ ಒಳ್ಳೆಯತನ ಎನ್ನುವುದು ಸ್ವಂತಿಕೆಗೆ ಹೊರಗಿನಿಂದ ಜೋಡಿಸಿಕೊಳ್ಳಬೇಕಾದ ಗುಣವಾಗಿದೆ. ಹಾಗೂ ಅದು ಸ್ವಂತಿಕೆಯ ಆಯ್ಕೆ ಎಂದಾಗ ಮಾತ್ರವೇ ‘ಅದೇಕೆ ಬೇಕು?’ ಎಂಬ ಪ್ರಶ್ನೆ ಹುಟ್ಟಲು ಸಾಧ್ಯ. ಅದಕ್ಕೆ ಹೊರತಾಗಿ ಸ್ವಂತಿಕೆಯೇ ಇಲ್ಲ ಎಂದಾದರೆ ಆ ಪ್ರಶ್ನೆ ಏಕೆ ಏಳುತ್ತದೆ? ಹಾಗಾಗಿ ಯಾವುದೋ ನೈತಿಕ ನಿಯಮಕ್ಕೆ ಕಟ್ಟು ಬಿದ್ದು ಬಲವಂತವಾಗಿ ಅವಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುವ ಅನುಭವ ಭಾರತೀಯರಿಗಾಗುವುದಿಲ್ಲ. ನೈತಿಕ ಕ್ರಿಯೆಗಳು ಸ್ವ ಇಚ್ಛೆಯಿಂದ, ಸ್ವಂತಿಕೆಯನ್ನು ಕಟ್ಟಿಕೊಳ್ಳಲು ನಡೆಯುತ್ತವೆ. ಯಾವುದದರೂ ವ್ಯಕ್ತಿಯು ಮನಸೋ ಇಚ್ಛೆ ಸಂಪ್ರದಾಯವನ್ನು ಮುರಿದರೆ ಅವನಿಗೆ ಭಾರತೀಯರು ಕೊಡುವ ಶಿಕ್ಷೆಯೆಂದರೆ ಆತನ ಸ್ವಂತಿಕೆಯನ್ನು ಗುರುತಿಸದೇ ಇರುವುದು, ಅಂದರೆ ಅವನಿಗೆ ಸಮುದಾಯದಿಂದ ಬಹಿಷ್ಕಾರ ಹಾಕುವುದು. ಅದು ಈ ಸಂಸ್ಕೃತಿಯ ಬತ್ತಳಿಕೆಯಲ್ಲಿರುವ ಕೊನೆಯ ಅಸ್ತ್ರವಾಗಿದೆ. ಅಂದರೆ ನಮ್ಮಲ್ಲಿ ಅನೈತಿಕತೆಗೆ ಶಿಕ್ಷೆಯೆಂದರೆ ಅವಮಾನ.

ಅಂದರೆ ನಾವು ಭಾರತೀಯ ನೈತಿಕತೆಯ ಕುರಿತು ಈ ಕೆಳಗಿನ ತೀರ್ಮಾನಗಳಿಗೆ ಬರಬಹುದು: 1. ನಮ್ಮಲ್ಲೂ ನೀತಿ ಅನೀತಿ ಕಲ್ಪನೆ ಇದೆ. ಆದರೆ ಅದು ಒಬ್ಬನ ಕ್ರಿಯೆಗಳಿಂದ ಹೊರತಾಗಿ ನಮಗೆ ಕಾಣುವುದಿಲ್ಲ ಹಾಗೂ ಇಂಥ ಕ್ರಿಯೆಗಳೇ ಒಬ್ಬ ವ್ಯಕ್ತಿಯ ಸ್ವಂತಿಕೆಯನ್ನು ರಚಿಸುತ್ತವೆ. 2. ನಮ್ಮ ನೈತಿಕ ನಿಯಮಗಳು ಸಂದರ್ಭಾತೀತವಾಗಿ ಕಡ್ಡಾಯವಾಗಿಲ್ಲ ಅಥವಾ ಅವು ನಾರ್ಮೇಟಿವ್ ಆಗಿಲ್ಲ. ಅಂದರೆ ಯಾವ ಸಂದರ್ಭದಲ್ಲೂ ಮಾಡಲೇಬಾರದ ಕ್ರಿಯೆಗಳು ಹಾಗೂ ಎಲ್ಲಾ ಸಂದರ್ಭದಲ್ಲೂ ಮಾಡಲೇಬೇಕಾದ ಕ್ರಿಯೆಗಳು ಅಂತ ಯಾವುದೂ ನಮ್ಮಲ್ಲಿಲ್ಲ. ಅದರ ನಿರ್ಣಯವು ಸಂದರ್ಭಕ್ಕೆ ತಕ್ಕಂತೇ ನಡೆಯುತ್ತದೆ. 3. ನಮ್ಮ ಕರ್ಮ ಸಿದ್ಧಾಂತದಲ್ಲಿ ಸಮಸ್ತ ಜೀವಿಗಳನ್ನೂ ಸೇರಿಸುವುದರಿಂದ ನಮ್ಮ ಸಂಸ್ಕೃತಿಯಲ್ಲಿ ಸ್ವಂತಿಕೆ ಎನ್ನುವುದು ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ, ನಿಸರ್ಗವನ್ನೂ ಒಳಗೊಳ್ಳುತ್ತದೆ. 4. ಸ್ವಂತಿಕೆ ಹಾಗೂ ಕ್ರಿಯೆಗಳ ನಡುವೆ ಒಂದು ಅವಿನಾಭಾವೀ ಸಂಬಂಧ ಏರ್ಪಡುತ್ತದೆಯಾದ್ದರಿಂದ ಒಬ್ಬನ ಜೀವಿತ ಕಾಲದ ಎಲ್ಲ ಕ್ರಿಯೆಗಳನ್ನೂ ಅವನ ನೈತಿಕ ಬದುಕು ಒಳಗೊಳ್ಳುತ್ತದೆ. ನಿಸರ್ಗದೊಡನೆ ಮನುಷ್ಯನ ಸಂಬಂಧವೂ ಕೂಡ ನೈತಿಕ ಸಂಬಂಧವಾಗಿಬಿಡುತ್ತದೆ.

ಇದಕ್ಕೆ ವಿರುದ್ಧವಾಗಿ ಪಾಶ್ಚಾತ್ಯ ಎಥಿಕ್ಸಿನಲ್ಲಿ ಮನುಷ್ಯ ಮನುಷ್ಯನ ನಡುವಿನ ಸಂಬಂಧವು ಮಾತ್ರವೇ ನೈತಿಕ ವಲಯಕ್ಕೆ ಸೇರುತ್ತದೆ. ಅದರಲ್ಲೂ ಕೂಡ ನಿರ್ದಿಷ್ಟ ಸಿದ್ಧಾಂತಗಳಿಗೆ ಅದು ಮಿತವಾಗುತ್ತಾ ಹೋಗುವುದರಿಂದ ಮನುಷ್ಯ ಜೀವನದ ಅನೇಕ ಕ್ಷೇತ್ರಗಳಿಗೆ ಅದರ ಅನ್ವಯವೇ ಆಗುವುದಿಲ್ಲ. ಉದಾಹರಣೆಗೆ ತಂತ್ರಜ್ಞಾನ ಕ್ಷೇತ್ರದ ಕ್ರಿಯೆಗಳು ಇಂದಿಗೂ ಅವರಿಗೆ ತನ್ನಷ್ಟಕ್ಕೆ ತಾನೇ ಒಂದು ನೈತಿಕ ಕ್ರಿಯೆಯಾಗಿ ಕಾಣುವುದೇ ಇಲ್ಲ. ಏಕೆಂದರೆ ಪಾಶ್ಚಾತ್ಯ ನೈತಿಕತೆಯು ಎಥಿಕ್ಸಿನ ಸಿದ್ಧಾಂತಗಳಿಂದ ಸಂಕುಚಿತವಾಗಿರುವುದರಿಂದ ಅದಕ್ಕೆ ಮನುಷ್ಯನ ಕೆಲವು ಕ್ರಿಯೆಗಳನ್ನು ಬಿಟ್ಟು ಉಳಿದವನ್ನು ನೈತಿಕ ಪರಿಕಲ್ಪನೆಯೊಳಗೆ ತರಲು ಸಾಧ್ಯವಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯರಲ್ಲಿ ನೈತಿಕ ನಿಯಮಗಳು ಕಡ್ಡಾಯವಾದ ಚೌಕಟ್ಟುಗಳಲ್ಲ. ಅಂದರೆ ನೀತಿ/ಅನೀತಿಯ ಕುರಿತು ಪ್ರತಿಪಾದನೆಗಳಿರುತ್ತವೆ, ಆದರೆ ಅವು ಸಾರ್ವತ್ರಿಕ ನಿಯಮಗಳಲ್ಲ. ಅವುಗಳಿಗೆ ಸಂದರ್ಭವಿದೆ. ಅಲ್ಲೂ ಕೂಡ ಅವು ತಲುಪಬೇಕಾದ ಆದರ್ಶಗಳಾಗಿವೆ. ಆಯಾ ವ್ಯಕ್ತಿ ಹಾಗೂ ಸಂದರ್ಭಗಳಿಗನುಗುಣವಾಗಿ ಅದು ತಿದ್ದುಪಡಿಗೊಳ್ಳುವ ಸಾಧ್ಯತೆಯನ್ನು ಹೊಂದಿದೆ. ಎಲ್ಲಾ ಮನುಷ್ಯ ಕ್ರಿಯೆಗಳನ್ನೂ ಅದರ ಪರಿಧಿಯೊಳಗೆ ತಂದು ಕ್ರಮಬದ್ಧಗೊಳಿಸಬಹುದು. ಅಂದರೆ ಪಾಶ್ಚಾತ್ಯ ಸಿದ್ಧಾಂತಗಳಿಗಿಂತ ಮನುಷ್ಯನ ಬದುಕಿಗೆ ಉಪಯುಕ್ತವಾಗಬಲ್ಲ ಉತ್ಕೃಷ್ಟವಾದ ಸಿದ್ಧಾಂತಗಳನ್ನು ರಚಿಸಲು ನಮ್ಮ ಪರಿಕಲ್ಪನೆಗಳು ಸಹಾಯ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ನಾನು ಕಂಡುಕೊಂಡ ಸತ್ಯ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: