ಮುಖ ಪುಟ > Uncategorized > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 60: ಮನುಷ್ಯರೆಲ್ಲರೂ ಯಾವುದರಲ್ಲಿ ಸಮಾನರು?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದು ಜಗತ್ತಿನಾದ್ಯಂತ ನಡೆಯುತ್ತಿರುವ ಸಾಮಾಜಿಕ ಚಳವಳಿಗಳಿಗಳು ಒಂದಿಲ್ಲೊಂದು ಅಸಮಾನತೆಗಳನ್ನು ತೊಡೆಯಲು ಕಂಕಣಬದ್ಧವಾಗಿವೆ, ‘ಲಿಂಗ ಅಸಮಾನತೆ’, ‘ಜಾತಿ ಅಸಮಾನತೆ’, ‘ಜನಾಂಗ ಅಸಮಾನತೆ’, ‘ವರ್ಗ ಅಸಮಾನತೆ’ ಇತ್ಯಾದಿಗಳು ನಾಶವಾದರೆ ಮಾತ್ರವೇ ಮನುಕುಲದ ಕಲ್ಯಾಣ ಸಾಧ್ಯ ಎಂಬುದಾಗಿ ಇಂಥ ಹೋರಾಟಗಳನ್ನು ಬೆಂಬಲಿಸುವ ಚಿಂತಕರೂ ಕೂಡ ಭದ್ರವಾಗಿ ನಂಬಿಕೊಂಡಿದ್ದಾರೆ. ಯುರೋಪಿನಲ್ಲಿ ಆಗಿಹೋದ ಸಾಮಾಜಿಕ ಚಿಂತಕರು ಇಂಥ ಅಸಮಾನತೆಗಳನ್ನು ತೊಡೆಯುವುದು ಹೇಗೆ ಎಂಬ ಕುರಿತು ಗಹನವಾದ ಜಿಜ್ಞಾಸೆಗಳನ್ನು ನಡೆಸಿದ್ದಾರೆ ಹಾಗೂ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅಂದರೆ ಸಮಾನತೆ ಎಂಬುದೊಂದು ಮಾನವ ಕಲ್ಯಾಣದ ಸಾಧನೆಗಾಗಿ ಆಧುನಿಕರು ಆವಿಷ್ಕರಿಸಿದ ಮಂತ್ರವಾಗಿದೆ. ‘ಮನುಷ್ಯರಲ್ಲಿ ತಾರತಮ್ಯ ಮಾಡುವುದು ತಪ್ಪು, ಎಲ್ಲರೂ ಸಮಾನರು’ ಎಂದು ಹೇಳಲಾಗುತ್ತದೆ. ಎಲ್ಲಿ ಅಸಮಾನತೆ ಇರುತ್ತದೆಯೋ ಅಲ್ಲಿ ಶೋಷಣೆ, ಅನ್ಯಾಯ ಇರುತ್ತವೆ ಎಂದೂ ಹೇಳಲಾಗುತ್ತದೆ. ಹಾಗಾಗಿ ಸಮಾನತೆ ಮನುಷ್ಯನ ಒಂದು ಹಕ್ಕು ಎಂಬುದಾಗಿ ನಮ್ಮ ಸಂವಿಧಾನವೂ ಮಾನ್ಯಮಾಡಿದೆ. ಇದನ್ನೇ ಆದರ್ಶವಾಗಿಟ್ಟುಕೊಂಡು ‘ನಾವೆಲ್ಲರೂ ಒಂದೇ’ ಎಂಬ ಘೋಷಣೆಗಳು ಹುಟ್ಟಿವೆ.

ಸ್ವಾತಂತ್ರ್ಯ, ಸಮಾನತೆ ಇತ್ಯಾದಿ ಮೌಲ್ಯಗಳು ನಮಗೆ ಯುರೋಪಿನ ಜ್ಞಾನೋದಯ ಯುಗದ ಚಿಂತಕರ ಕೊಡುಗೆಗಳಾಗಿವೆ. ಪ್ರತೀ ಮನುಷ್ಯನು ಇತರ ಮನುಷ್ಯರೂ ಕೂಡ ತನ್ನಷ್ಟೇ ಸಮಾನ ಎಂದು ಭಾವಿಸಬೇಕು. ಹಾಗೆ ಭಾವಿಸದಿರುವುದು ಅಮಾನುಷ ಎಂಬುದಾಗಿ ಇಂದಿನ ನಾವಿಂದು ನಂಬಿದ್ದೇವೆ. ಸಮಾಜದಲ್ಲಿ ತರ ತಮಗಳನ್ನು ಪ್ರತಿಪಾದಿಸುವವರು ರಾಕ್ಷಸರೇ ಸರಿ ಎಂಬುದಾಗಿ ಬೊಬ್ಬೆ ಹೊಡೆಯುವವರೂ ಇದ್ದಾರೆ. ಭಾರತೀಯರಿಗೆ ಅಸಮಾನತೆ ಎಂದಕೂಡಲೇ ನೆನಪಿಗೆ ಬರುವುದೇ ಜಾತಿ ವ್ಯವಸ್ಥೆ. ಜಗತ್ತಿನ ಯಾವ ಸಮಾಜದಲ್ಲೂ ಇಲ್ಲದ ಒಂದು ಕ್ರೂರ ವ್ಯವಸ್ಥೆ ಇಲ್ಲಿದೆ ಎನ್ನಲಾಗುತ್ತದೆ ಹಾಗೂ ಅದೇ ಜಾತಿ ತರತಮದ ವ್ಯವಸ್ಥೆ. ಪಾಶ್ಚಾತ್ಯರು ಭಾರತೀಯ ಸಮಾಜವನ್ನು ಚಿತ್ರಿಸತೊಡಗಿದ ದಿನದಿಂದಲೂ ಈ ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆಯ ಕರಾಳತೆಯ ಕುರಿತು ಸಾಕಷ್ಟು ಕಥೆಗಳನ್ನು ಪ್ರಚಲಿತದಲ್ಲಿ ತಂದಿದ್ದಾರೆ.

ಎಲ್ಲ ಮನುಷ್ಯರೂ ಸಮಾನರು ಎಂಬ ಹೇಳಿಕೆ ಕೇಳಲಿಕ್ಕೆ ತುಂಬಾ ಹಿತವಾಗಿದೆ. ಹಾಗೂ ನ್ಯಾಯಯುತವಾದದ್ದು ಎಂದೂ ಅನ್ನಿಸುತ್ತದೆ. ‘ಸರ್ವರಿಗೂ ಸಮಪಾಲು ಸಮಬಾಳು’, ‘ಕಾನೂನಿಗೆ ಬಡವ ಬಲ್ಲಿದ ಅಂತ ಇಲ್ಲ, ಎಲ್ಲರೂ ಒಂದೇ’, ಎನ್ನುವಂಥ ಆಧುನಿಕ ಘೋಷಣೆಗಳು ಎಲ್ಲರ ಹಿತದೃಷ್ಟಿಯಿಂದ ಅಗತ್ಯ ಎನ್ನಿಸುವುದರಲ್ಲಿ ಸಂದೇಹವಿಲ್ಲ. ಜೊತೆಗೇ ನಮ್ಮ ಸಂಸ್ಕೃತಿಯಲ್ಲೇ ‘ಶುನಿ ಚೈವ ಶ್ವಪಾಕೇಚ ಪಂಡಿತಃ ಸಮದರ್ಶಿನಃ’ (ತಿಳಿದವನು ಬ್ರಾಹ್ಮಣ, ಗೋವು, ಆನೆ, ನಾಯಿ ಹಾಗೂ ನಾಯಿಯನ್ನು ತಿನ್ನುವವನು ಎಲ್ಲರನ್ನೂ ಸಮನಾಗಿ ನೋಡುತ್ತಾನೆ) ಎಂಬ ಹೇಳಿಕೆಯಿದೆ. ನಮ್ಮ ಅಧ್ಯಾತ್ಮದಲ್ಲಿ ಆತ್ಮಜ್ಞಾನವನ್ನು ಹೊಂದಿದವನೇ ನಿಜವಾದ ಜ್ಞಾನಿ ಹಾಗೂ ಅವನ ಲಕ್ಷಣವೆಂದರೆ ಅವನು ಎಲ್ಲರಲ್ಲೂ ಒಂದೇ ರೀತಿ ನೋಡುತ್ತಾನೆ, ಏಕೆಂದರೆ ಅವನಲ್ಲಿ ಭೇದ ಭಾವ ಅಳಿದಿರುತ್ತದೆ ಎಂಬುದಾಗಿ ಹೇಳಿದೆ. ‘ತನ್ನಂತೆ ಪರರ ಬಗೆದೊಡೆ ಕೈಲಾಸ’ ಎಂಬ ಹೇಳಿಕೆಗಳು ಕೂಡ ಇವೆ. ಇವೆಲ್ಲವೂ ನಮ್ಮ ಪೂರ್ವಜರು ಕೂಡ ಈ ಸಮಾನತೆಯನ್ನು ಒಂದು ಮೌಲ್ಯ ಎಂದು ಪ್ರತಿಪಾದಿಸಿದ್ದಕ್ಕೆ ಸಾಕ್ಷಿಗಳು ಎಂದು ಇಂದಿನ ಭಾರತೀಯರು ತಿಳಿದಿದ್ದಾರೆ. ಅದರಲ್ಲೂ ಬರೀ ಮನುಷ್ಯರೊಂದೇ ಅಲ್ಲ ಸಮಸ್ತ ಜೀವರಾಶಿಗಳನ್ನೂ ಸಮಾನವಾಗಿ ನೋಡಬೇಕು ಎಂಬುದಾಗಿ ನಮ್ಮವರು ಹೇಳಿದ್ದಾರೆ ಎಂದು ಅವರ ಹೆಚ್ಚುಗಾರಿಕೆಯನ್ನು ತಿಳಿಸಿ, ನಮಗೆ ಈ ಮೌಲ್ಯವನ್ನು ಯುರೋಪಿಯನ್ನರೇ ತಿಳಿಸಿ ಕೊಡಬೇಕಿಲ್ಲ ಎನ್ನುವವರೂ ಇದ್ದಾರೆ. ಇನ್ನೂ ಕೆಲವರು ಬ್ರಾಹ್ಮಣರ ಜಾತಿ ವ್ಯವಸ್ಥೆಯ ತರತಮದ ವಿರುದ್ಧ ಹೋರಾಡಲಿಕ್ಕೆ ಇತಿಹಾಸ ಕಾಲದಲ್ಲಿ ಕೆಲವು ಚಳವಳಿಗಳು ನಡೆದಿದ್ದವು ಹಾಗೂ ಅವು ಸಮಾನತೆಯನ್ನು ಎತ್ತಿ ಹಿಡಿದಿದ್ದವು ಎನ್ನುತ್ತಾರೆ. ಈ ಕಾರಣದಿಂದಲೇ ಕೆಲವು ಅಧ್ಯಾತ್ಮಿಕ ಸಂಪ್ರದಾಯಗಳನ್ನು ಜಾತಿ ವಿರೋಧಿ ಚಳವಳಿಗಳು ಎಂದು ಪ್ರತಿಪಾದಿಸುವವರು ಭೇದ ಭಾವಗಳನ್ನು ನಿರಾಕರಿಸುವ ಇಂಥ ವಾಕ್ಯಗಳನ್ನೇ ಎತ್ತಿ ಹೇಳುತ್ತಾರೆ.

ಆದರೆ ಭಾರತೀಯ ಸಂಪ್ರದಾಯಗಳಲ್ಲಿ ಬರುವ ಹೇಳಿಕೆಗಳನ್ನು ಪಾಶ್ಚಾತ್ಯ ಸಮಾನತೆಯ ಕಲ್ಪನೆ ಎಂದು ಭಾವಿಸುವಲ್ಲಿ ತೊಡಕುಗಳಿವೆ. ಜಾತಿವಿರೋಧಿ ಚಳವಳಿಗಳು ಎಂದು ಯಾವುದನ್ನು ಗುರುತಿಸಿದ್ದಾರೆಯೋ ಅವುಗಳಲ್ಲಿ ಮಾತ್ರವೇ ಈ ಸಮಾನತೆಯು ಕಾಣಿಸಿಕೊಳ್ಳುವುದಲ್ಲ. ಜಾತಿ ವ್ಯವಸ್ಥೆಯ ಪ್ರತಿಪಾದಕರು ಎನ್ನಲಾದ ಬ್ರಾಹ್ಮಣ ಸಂಪ್ರದಾಯಗಳಲ್ಲೂ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ, ಯಾವುದೇ ಜಾತಿ ವಿರೋಧಿ ಚಳವಳಿಗಳಿಗಿಂತಲೂ ಹಿಂದೆಯೇ ಅಸ್ತಿತ್ವಕ್ಕೆ ಬಂದ ವೈದಿಕ ಸಾಹಿತ್ಯದಲ್ಲೇ ಇಂಥ ವಾಕ್ಯಗಳು ಬರುತ್ತವೆ. ಇಂಥ ವಾಕ್ಯಗಳನ್ನು ಬರೆದವರೇ ಜಾತಿ ವ್ಯವಸ್ಥೆ ಎನ್ನಲಾದ ವರ್ಣಗಳ ಕಲ್ಪನೆಯನ್ನೂ ಪ್ರತಿಪಾದಿಸಿದ್ದಾರೆ. ಹಾಗಾಗಿ ಜಾತಿ ಪರ-ವಿರೋಧ ಎಂಬ ಪಕ್ಷಗಳನ್ನು ಬಿಟ್ಟು ಈ ಹೇಳಿಕೆಗಳನ್ನು ಅಧ್ಯಾತ್ಮದ ಸಂದರ್ಭದಲ್ಲಿ ಅರ್ಥೈಸದಿದ್ದರೆ ಅವು ಅರ್ಥವಾಗಲಾರವು. ಈ ಹೇಳಿಕೆಗಳು ಆತ್ಮಜ್ಞಾನದ ಅವಸ್ಥೆಯನ್ನು ಸೂಚಿಸುತ್ತವೆ. ಆ ಅವಸ್ಥೆಯಲ್ಲಿರುವವನಿಗೆ ಪ್ರತಿಯೊಬ್ಬರಲ್ಲಿ ಇರುವುದೂ ಬ್ರಹ್ಮನ್/ಪರಮಾತ್ಮ(ವಿಷ್ಣು, ಶಿವ ಇತ್ಯಾದಿ) ಎಂಬ ಜ್ಞಾನ ಉದಿಸಿರುತ್ತದೆ. ಅಂಥವನು ಎಲ್ಲಾ ತರತಮಗಳನ್ನೂ ದಾಟಿರುತ್ತಾನೆ. ಹಾಗಾಗಿ ಆಧ್ಯಾತ್ಮಿಕ ಜ್ಞಾನದ ಪರಿಣಾಮವಾಗಿ ಈ ಸರ್ವಸಮಾನತೆಯ ಭಾವ ಉದಿಸುತ್ತದೆ. ಅದರರ್ಥ ಪ್ರಪಂಚದಲ್ಲಿ ಭೇದಭಾವಗಳು ಅಳಿದುಹೋಗಿವೆಯೆಂದಲ್ಲ. ಈ ಭೇದಗಳು ಜ್ಞಾನಿಯಲ್ಲಿ ಅಳಿದಿರುತ್ತವೆ.

‘ಎಲ್ಲಾ ಮನುಷ್ಯರನ್ನೂ ಸಮಾನವಾಗಿ ನೋಡಬೇಕು’ ಎನ್ನುವುದಕ್ಕೂ ‘ಎಲ್ಲಾ ಮನುಷ್ಯರು ಸಮಾನರು’ ಎಂಬ ಹೇಳಿಕೆಗೂ ವ್ಯತ್ಯಾಸವಿದೆ. ಮೊದಲನೆಯ ಹೇಳಿಕೆಯು ಅವರಲ್ಲಿರುವ ಅಸಮಾನತೆಯನ್ನು ಹಾಗೂ ಭೇದಗಳನ್ನು ಪ್ರಶ್ನಿಸುವುದಿಲ್ಲ. ಆದರೆ ಜ್ಞಾನಿಯೊಬ್ಬನು ಅವೆಲ್ಲವನ್ನೂ ಒಂದೇ ರೀತಿ ಕಾಣುತ್ತಾನೆ ಎನ್ನುತ್ತದೆ. ಎರಡನೆಯ ಹೇಳಿಕೆಯು ಒಂದು ಪ್ರಾಪಂಚಿಕ ಸತ್ಯದ ಕುರಿತ ಹೇಳಿಕೆಯಂತೇ ಇದೆ. ಅದರ ಪ್ರಕಾರ ಮನುಷ್ಯರಲ್ಲಿ ಭೇದಭಾವ ಇಲ್ಲ. ಎಲ್ಲ ಮನುಷ್ಯರೂ ಒಂದೇ ರೀತಿ ಇದ್ದಾರೆ, ನೀವು ಹೇಗೇ ನೋಡಿ, ಅದು ಸತ್ಯ. ಆ ಕಾರಣಕ್ಕಾಗೇ ಅವರನ್ನು ಸಮಾನವಾಗಿ ನೋಡಬೇಕು. ಈ ಹೇಳಿಕೆಯು ನಮ್ಮ ಸಹಜ ಜ್ಞಾನಕ್ಕೆ ವಿರುದ್ಧವಾದುದು. ನಾವು ನೋಡುವ ಯಾವ ಮನುಷ್ಯರೂ ಒಂದೇ ರೀತಿ ಕಾಣುವುದಿಲ್ಲ. ಅವರೆಲ್ಲ ಮನುಷ್ಯರು ಎನ್ನುವುದೇನೋ ಸರಿ. ಆದರೆ ಅದು ಎಲ್ಲರ ಗಮನಕ್ಕೂ ಬರುವ ಒಂದು ಸಾಮಾನ್ಯ ವಿಷಯವೇ ಆಗಿದೆ. ಆದರೆ ನಮಗ್ಯಾರಿಗೂ ಅವರನ್ನು ಮನುಷ್ಯರು, ಮೃಗಗಳಲ್ಲ ಎಂದು ಈ ಮೇಲಿನ ಹೇಳಿಕೆಯು ನಿರ್ದೆೇಶಿಸುತ್ತಿಲ್ಲ. ಅವರ ನಡುವೆ ಅನ್ಯ ವ್ಯತ್ಯಾಸಗಳೇ ಇಲ್ಲ ಎಂದು ಅದು ಸೂಚಿಸುವಂತಿದೆ. ಆದರೆ ಅವರು ಮನುಷ್ಯರು ಅನ್ನುವ ಕಾರಣಕ್ಕಾಗಿ ಅವರೆಲ್ಲಾ ಒಂದೇ ಎಂದು ಏಕೆ ಆಗ್ರಹಿಸಬೇಕು ಎಂಬ ವಿಷಯವು ನಾನಾ ಕಾರಣಗಳಿಗಾಗಿ ನಮಗೆ ಮನದಟ್ಟಾಗುವುದಿಲ್ಲ. ಅವರ ದೈಹಿಕ ಆಕಾರದಲ್ಲಾಗಲೀ, ಗುಣ ಸ್ವಭಾವಗಳಲ್ಲಾಗಲೀ ಅವರಲ್ಲಿ ಒಬ್ಬನಿದ್ದಂತೇ ಮತ್ತೊಬ್ಬನಿಲ್ಲ. ಮತ್ತೂ ಆದನ್ನಾಧರಿಸಿಯೇ ನಮ್ಮ ಪ್ರಪಂಚ ವ್ಯವಹಾರ ರೂಪುಗೊಂಡಿದೆ. ಈ ದೃಷ್ಟಿಯಿಂದ ನೋಡಿದಾಗ ‘ಲಿಂಗಗಳ ಸಮಾನತೆ ಎಂದರೆ ಅವುಗಳ ನಡುವಿನ ಭೇದವನ್ನು ತೊಡೆಯುವುದು’ ಎಂಬಂಥ ಹೇಳಿಕೆಗಳೇ ಕಗ್ಗಂಟಾಗಿಬಿಡುತ್ತವೆ. ಹಾಗಾಗಿ ಇದು ನಮ್ಮ ಕಣ್ಣಿಗೆ ಕಾಣುವ ಹಾಗೂ ಅನುಭವಕ್ಕೆ ಬರುವ ಸತ್ಯವಂತೂ ಅಲ್ಲ.

ಇನ್ನು ಕಾನೂನಿನ ಎದುರು ಎಲ್ಲ ಮನುಷ್ಯರೂ ಸಮಾನರು ಎಂಬ ವಾಕ್ಯ ಅರ್ಥವಾಗಲು ಕಷ್ಟವಿಲ್ಲ. ಅಂದರೆ ಒಂದು ಪ್ರಭುತ್ವವು ತಾನು ಅಳವಡಿಸಿಕೊಂಡ ಕಾನೂನು ಅಲ್ಲಿಯ ರಾಜನಿಗೂ, ಪ್ರಜೆಗೂ ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ ಅಂತ ಅರ್ಥ. ಉದಾಹರಣೆಗೆ ಕಳ್ಳತನವನ್ನು ಮಾಡುವುದು ಕಾನೂನಿನ ಪ್ರಕಾರ ಅಪರಾಧ ಅಂತಾದಲ್ಲಿ ಒಬ್ಬ ಪ್ರಭು ಅದನ್ನು ಮಾಡಿದರೂ, ಭಿಕ್ಷುಕ ಅದನ್ನು ಮಾಡಿದರೂ, ಒಬ್ಬ ಸನ್ಯಾಸಿ ಅಥವಾ ಮಠಾಧೀಶ ಅದನ್ನು ಮಾಡಿದರೂ ಅದು ಅಪರಾಧವೇ ಆಗುತ್ತದೆ. ಅಂದರೆ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ ಎಂಬುದು ಈ ವಾಕ್ಯದ ನಿಜವಾದ ಅರ್ಥ. ಅದೇ ರೀತಿಯಲ್ಲಿ, ‘ನಮ್ಮ ಸರ್ಕಾರಕ್ಕೆ ಪ್ರಜೆಗಳೆಲ್ಲರೂ ಒಂದೇ’ ‘ಅಪ್ಪ ಅಮ್ಮನಿಗೆ ಎಲ್ಲಾ ಮಕ್ಕಳೂ ಒಂದೇ, ಭೇದ ಭಾವ ಮಾಡಬಾರದು’ ಎಂದರೂ ಅರ್ಥವಾಗಲು ಕಷ್ಟವಿಲ್ಲ. ಆದರೆ ‘ನಾವೆಲ್ಲರೂ ಸಮಾನರು’ ಎಂಬ ಹೇಳಿಕೆ ಈ ಮೇಲಿನ ಹೇಳಿಕೆಗಳಂತಿಲ್ಲ. ಈ ಹೇಳಿಕೆಯ ಪ್ರಕಾರ, ಕಾನೂನು ಇರಲಿ, ಇಲ್ಲದಿರಲಿ, ಸರ್ಕಾರ, ಅಪ್ಪ ಅಮ್ಮ ಇರಲಿ, ಇಲ್ಲದಿರಲಿ, ‘ನಾವೆಲ್ಲರೂ ಸಮಾನರು’ ಎಂಬುದಾಗಿ ಈ ಘೋಷಣೆ ತಿಳಿಸುತ್ತದೆ.

ಎಲ್ಲಾ ಮನುಷ್ಯರೂ ಸಮಾನವಾಗಿರುವ ಸಮಾಜವಾದರೂ ಈ ಭೂಮಿಯ ಮೇಲೆ ಇದೆಯೆ? ಅಥವಾ ಇರುವುದು ಸಾಧ್ಯವೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಏಕೆಂದರೆ ಸಮಾನತೆಯ ಮಂತ್ರವನ್ನು ಬೋಧಿಸಿದ ಪಾಶ್ಚಾತ್ಯ ಆಧುನಿಕ ಸಮಾಜದಲ್ಲೇ ಅದು ಕಂಡುಬರುವುದಿಲ್ಲ. ಈ ಪ್ರಪಂಚದಲ್ಲಿರುವ ವಿಭಿನ್ನ ಸಮಾಜಗಳು ಒಂದೇ ಎಂಬುದಾಗಿ ಪಾಶ್ಚಾತ್ಯರು ಕೂಡ ನಂಬಿಲ್ಲ. ಅವರಲ್ಲಿ ಆದಿವಾಸಿಗಳು, ಹಿಂದುಳಿದವರು ಹಾಗೂ ಮುಂದುವರಿದವರಿದ್ದಾರೆ. ಇದೇ ಕಲ್ಪನೆಯಿಂದಲೇ ಪಾಶ್ಚಾತ್ಯರು ಅನ್ಯ ದೇಶಗಳ ಮೇಲೆ ತಮ್ಮ ವಸಾಹತು ಶಾಹಿಯನ್ನು ಸಮರ್ಥಿಸಿಕೊಂಡರು. ಅದೂ ಈ ಮಂತ್ರವನ್ನು ಕಂಡುಕೊಂಡ ಮೇಲೆ. ವಸಾಹತು ಆಳ್ವಿಕೆ ಎಂದರೆ ತರತಮದ ವ್ಯವಸ್ಥೆಯೇ ಆಗಿದೆ. ಅದೂ ಹೋಗಲಿ, ಮನುಕುಲದ ಅತ್ಯಂತ ಉತ್ಕೃಷ್ಟ ವ್ಯವಸ್ಥೆಗಳು ಎನ್ನುವಂಥ ಪಾಶ್ಚಾತ್ಯ ಪ್ರಭುತ್ವಗಳು ಶೋಷಣೆ, ತರ ತಮದ ಶ್ರಣೀಕರಣವಿಲ್ಲದೇ ರಚನೆಯಾಗಿವೆಯೆ? ಈ ಕಾರಣದಿಂದಲೇ ಕಮ್ಯೂನಿಸಂನಂಥ ಮನುಷ್ಯ ಸಮಾನತೆಯ ಕಲ್ಪನೆಗಳು ಅವರಿಗೆ ಭವಿಷ್ಯದ ಆದರ್ಶಗಳಾದವು. ಅದನ್ನು ಸಾಧಿಸಲು ಪ್ರಯತ್ನಿಸಿ ಸಾಧ್ಯವಿಲ್ಲ ಎಂದು ಆ ಸಂಸ್ಕೃತಿಯು ಕೈಚೆಲ್ಲಿ ಕುಳಿತಿದೆ. ಹಾಗಾಗಿಯೇ ‘ಎಲ್ಲಾ ಮನುಷ್ಯರೂ ಸಮಾನರು, ಆದರೆ ಕೆಲವರು ಇತರರಿಗಿಂತ ಹೆಚ್ಚು ಸಮಾನರು’ ಎಂಬಂಥ ವ್ಯಂಗೋಕ್ತಿಗಳು ಪಾಶ್ಚಾತ್ಯರಲ್ಲಿ ಪ್ರಚಲಿತದಲ್ಲಿವೆ.

ಪಾಶ್ಚಾತ್ಯರಿಂದ ಸಮಾನತೆ ಹಾಗೂ ಅದನ್ನು ಪ್ರತಿಪಾದಿಸುವ ಪ್ರಭುತ್ವ ಮಾದರಿಗಳನ್ನು ನಾವು ಕೂಡ ಅಳವಡಿಸಿಕೊಂಡಿದ್ದೇವೆ. ಈ ಪ್ರಭುತ್ವ ಹೇಗಿದೆ? ಇದೊಂದು ಸುವ್ಯವಸ್ಥಿತವಾದ ಅಧಿಕಾರ ಶ್ರೇಣೀಕರಣವಾಗಿದೆ ಎಂಬುದು ನಮ್ಮೆಲ್ಲರ ಅನುಭವ. ಅಂದರೆ ಈ ಶ್ರೇಣೀಕರಣವು ಕಾನೂನಿನ ಮೇಲೆ ನಿಂತಿದ್ದು, ಅದನ್ನು ಮೀರುವುದು ಅಪರಾಧ ಕೂಡಾ ಆಗಿದೆ. ಇದಕ್ಕೆ ಹೋಲಿಸಿದರೆ ನಮ್ಮ ಸಾಂಪ್ರದಾಯಿಕ ಸಮಾಜವೇ ಹೆಚ್ಚು ಮುಕ್ತವಾಗಿರುವಂತೆ ತೋರುತ್ತದೆ. ಇಂಥ ಅಧಿಕಾರ ಶ್ರೇಣೀಕರಣವೇ ಆಧುನಿಕ ಪ್ರಭುತ್ವಗಳ ಹೆಗ್ಗಳಿಕೆ ಎಂಬುದಾಗಿ ಕೂಡ ನಾವೇ ವಾದಿಸುತ್ತೇವೆ.

ಅಂದರೆ ಎಲ್ಲ ಮನುಷ್ಯರೂ ಸಮಾನರಾಗಿ ಇರುವ ಸಮಾಜವೊಂದು ಕಾಲ್ಪನಿಕ ಸಮಾಜವೇ ಹೊರತೂ ವಾಸ್ತವಿಕ ಸಮಾಜವಲ್ಲ ಎಂಬುದನ್ನು ನಮ್ಮ ಅನುಭವವೇ ತಿಳಿಸುತ್ತದೆ. ಹಾಗಾದರೆ ‘ಮನುಷ್ಯರೆಲ್ಲರೂ ಸಮಾನರು’ ಎನ್ನುವಂಥ ಹೇಳಿಕೆಯ ಅರ್ಥ ಹಾಗೂ ಔಚಿತ್ಯವೇನು? ಏಕೆ ಈ ಅರ್ಥವಾಗದ ವಾಕ್ಯವು ಪಾಶ್ಚಾತ್ಯ ರಾಜನೀತಿಯ ತಳಹದಿಯಾಗಿದೆ? ಏಕೆ ಈ ವಾಕ್ಯವನ್ನು ಘೋಷಿಸುವುದು ಮಾನವೀಯತೆಯ ಲಕ್ಷಣವಾಗಿದೆ?

‘ಮನುಷ್ಯರೆಲ್ಲರೂ ಸಮಾನರು’ ಎಂಬ ವಾಕ್ಯವು ನಾನು ಈಗಾಗಲೇ ತಿಳಿಸಿದಂತೆ ಆಧುನಿಕ ಯುಗದಲ್ಲಿ ಪ್ರಚಲಿತದಲ್ಲಿ ಬಂದ ಕಲ್ಪನೆಯಾಗಿದೆ. ಈ ವಾಕ್ಯವು ಥಿಯಾಲಜಿಯ ‘ಗಾಡ್ನ ದೃಷ್ಟಿಯಲ್ಲಿ ಎಲ್ಲಾ ಮನುಷ್ಯರೂ ಸಮಾನರು’ ಎಂಬ ವಾಕ್ಯದ ಸೆಕ್ಯುಲರ್ ರೂಪವಾಗಿದೆ. ಈ ವಾಕ್ಯವು ಪ್ರೊಟೆಸ್ಟಾಂಟ್ ಚಳವಳಿಯ ಕಾಲದಲ್ಲಿ ವಿಶೇಷ ಮಹತ್ವವನ್ನು ಪಡೆಯಿತು. ಈ ವಾಕ್ಯಕ್ಕೆ ಸೆಕ್ಯುಲರ್ ರೂಪವನ್ನು ನೀಡುವಾಗ ಗಾಡ್ನನ್ನು ಕಿತ್ತು ಹಾಕಲಾಯಿತು. ಗಾಡ್ ತಾನು ಸೃಷ್ಟಿಸಿದ ಮನುಷ್ಯರಿಗೆ ಕಾನೂನನ್ನು ಕೂಡ ಕೊಟ್ಟಿದ್ದಾನೆ. ಅವನ ಕಾನೂನಿಗೆ ಎಲ್ಲ ಮನುಷ್ಯರೂ ಸಮಾನವಾಗಿ ಒಳಪಟ್ಟಿದ್ದಾರೆ. ಏಕೆಂದರೆ ಅವನಿಗೆ ಅವನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ಮನುಷ್ಯರೂ ಒಂದೇ. ಅಂದರೆ, ಎಲ್ಲಾ ಮನುಷ್ಯರೂ ಒಂದೇ ರೀತಿಯಲ್ಲಿ ಅವನ ಆಳ್ವಿಕೆಗೆ ಒಳಪಟ್ಟಿದ್ದಾರೆ ಅಥವಾ ಒಂದೇ ರೀತಿಯಲ್ಲಿ ಅವನಿಗೆ ಆಧೀನರಾಗಿದ್ದಾರೆ. ಇದೇ ಮನುಷ್ಯನಿಗೆ ಅವನು ಕೃಪೆ ಮಾಡಿರುವ ಸಮಾನತೆ. ಗಾಡ್ನನ್ನು ಕೈಬಿಟ್ಟು ಮನುಷ್ಯನನ್ನು ಲಕ್ಷಣೀಕರಿಸಲು ಹೊರಟ ಆಧುನಿಕ ಚಿಂತಕರು ಥಿಯಾಲಜಿಯ ವಾಕ್ಯದ ವೇಷ ಬದಲಿಸಿದ್ದಾರೆ ಅಷ್ಟೆ. ಗಾಡ್ನ ಪ್ರಭುತ್ವದ ಕಲ್ಪನೆಯನ್ನಿಟ್ಟುಕೊಂಡು ಮಾನವ ಪ್ರಭುತ್ವವನ್ನು ಅವರು ರಚಿಸಿಕೊಂಡರು. ಅವನ ಆಜ್ಞೆಯ ಬದಲು ಮಾನವ ಕಾನೂನುಗಳನ್ನು ತಮ್ಮ ಪ್ರಭುತ್ವಕ್ಕೆ ಆಧಾರವಾಗಿ ಕಲ್ಪಿಸಿಕೊಂಡರು. ಈ ಪ್ರಭುತ್ವಕ್ಕೆ ಹಾಗೂ ಕಾನೂನಿಗೆ ಒಳಪಟ್ಟ ಮಾನವರೆಲ್ಲರೂ ಅವಕ್ಕೆ ಒಂದೇ. ಅಂದರೆ ಅವರಲ್ಲಿ ಬಡವ ಶ್ರೀಮಂತ, ಅಥವಾ ಗಂಡು ಹೆಣ್ಣು ಎಂಬ ಭೇದ ಇರಬಾರದು ಎನ್ನುವುದನ್ನು ಸಾರುವುದೇ ಈ ಪ್ರಭುತ್ವಗಳ ಆದರ್ಶವಾಯಿತು. ಅಂದರೆ ಗಾಡ್ನ ಬದಲಾಗಿ ಮನುಷ್ಯ ಪ್ರಭುತ್ವಕ್ಕೆ ಈಗ ಎಲ್ಲರೂ ಸಮಾನವಾಗಿ ಆಧೀನರಾಗಿದ್ದಾರೆ. ಇದು ಮನುಷ್ಯ ಪ್ರಭುತ್ವಗಳು ನಮಗೆ ಕೃಪೆ ಮಾಡಿರುವ ಸಮಾನತೆಯಾಗಿದೆ.

ಅಂದರೆ ಈ ಹೇಳಿಕೆಯನ್ನು ಮಾಡಿದ ಕ್ರಿಶ್ಚಿಯಾನಿಟಿಯಾಗಲೀ, ಪಾಶ್ಚಾತ್ಯ ಪ್ರಭುತ್ವಗಳಾಗಲೀ ಅದಕ್ಕೊಂದು ಸಂದರ್ಭವನ್ನು ರಚಿಸುತ್ತವೆ. ಆ ಸಂದರ್ಭದೊಳಗೆ ಮಾತ್ರ ಅವುಗಳು ಅರ್ಥ ನೀಡುತ್ತವೆ. ಗಾಡ್ನಿಗೆ ಎಲ್ಲಾ ಮಾನವರೂ ಸಮಾನರಾಗಿದ್ದಲ್ಲಿ ಕ್ರಿಶ್ಚಿಯನ್ನರೇಕೆ ಪೇಗನ್ನರು ಹಾಗೂ ಹೀದನ್ನರನ್ನು ಶಾಶ್ಚತ ನರಕಕ್ಕೆ ಹೋಗುವವರು ಎಂದು ಭಾವಿಸಿದರು? ಅಂದರೆ ಗಾಡ್ ದೃಷ್ಟಿಯಲ್ಲಿ ಕ್ರಿಶ್ಚಿಯನ್ನರು ಅಥವಾ ಸತ್ಯವಾದ ರಿಲಿಜನ್ನಿನ ಅನುಯಾಯಿಗಳು ಮಾತ್ರವೇ ಸಮಾನರು ಅಂತ ಅದರ ನಿರ್ದಿಷ್ಟಾರ್ಥ. ವಿಶ್ವ ಭ್ರಾತೃತ್ವವೆಂಬುದು ಸತ್ಯವಾದ ರಿಲಿಜನ್ನನ್ನು ಸ್ವೀಕರಿಸಿದವರ ಭ್ರಾತೃತ್ವವಾಗಿದೆ. ಸುಳ್ಳು ರಿಲಿಜನ್ನಿನ ಅನುಯಾಯಿಗಳು ಅದರಲ್ಲಿ ಸೇರುವುದಿಲ್ಲ. ಅದೇ ರೀತಿಯಲ್ಲಿ ಮನುಷ್ಯರೆಲ್ಲರೂ ಸಮಾನರು ಎಂದು ಆಧುನಿಕ ಪ್ರಭುತ್ವಗಳು ಹೇಳುವಾಗ ‘ತಮ್ಮ ಕಾನೂನಿನ ದೃಷ್ಟಿಗೆ ತಮ್ಮ ಪ್ರಜೆಗಳೆಲ್ಲರೂ ಸಮಾನರು’ ಎಂಬ ಅರ್ಥವಲ್ಲದೇ ಬೇರೆ ಅರ್ಥ ಏನಿದೆ ಎಂಬುದು ಸ್ಪಷ್ಟವಾಗುವುದಿಲ್ಲ. ಪ್ರಜೆಗಳನ್ನೆಲ್ಲ ಅಧಿಕಾರದ ತರತಮಗಳ ಶ್ರೇಣೀಕರಣಕ್ಕೆ ಒಳಪಡಿಸಿದರೂ ಕೂಡ ಕಾನೂನನ್ನು ಅವರಿಗೆ ಸಮಾನವಾಗಿ ಅನ್ವಯ ಮಾಡಬೇಕು. ಅಂದರೆ ಈ ಪ್ರಭುತ್ವಗಳಲ್ಲಿ ಬಡವ-ಶ್ರೀಮಂತ, ಗಂಡು-ಹೆಣ್ಣು, ಅಧಿಕಾರಿ-ಜವಾನ, ಜಮೀನ್ದಾರ-ಕೂಲಿ, ಮಾಲಿಕ-ಕಾಮರ್ಿಕ, ಇತ್ಯಾದಿ ತರತಮಗಳೆಲ್ಲವೂ ಸಕ್ರಮವಾಗಿಯೇ ಅಸ್ತಿತ್ವದಲ್ಲಿರುತ್ತವೆ. ಆದರೆ ಅವರೆಲ್ಲರಿಗೂ ಕಾನೂನು ಏಕಪ್ರಕಾರವಾಗಿ ಚಾಲ್ತಿಯಲ್ಲಿರುತ್ತದೆ. ಯಾರೊಬ್ಬನೂ ಕೂಡ ಮತ್ತೊಬ್ಬನಿಗೆ ಕಾನೂನಿನಲ್ಲಿ ರಿಯಾಯತಿಯನ್ನು ನೀಡಿದರು ಎಂದು ದೂಷಿಸುವಂತಿಲ್ಲ. ಇದು ಅವರಿಗೆ ದಯಪಾಲಿಸಲಾದ ಸಮಾನತೆ. ಹಾಗಾಗಿಯೇ ಸಮಾನತೆ ಎಂಬ ಪರಿಕಲ್ಪನೆಯೇ ಅಸಮಾನತೆಯನ್ನು ಮುಚ್ಚಿಟ್ಟುಕೊಳ್ಳುವ ಉಪಾಯ ಎಂದು ಟೀಕಿಸಿದವರೂ ಇದ್ದಾರೆ.

ಈ ಸಂದರ್ಭಗಳನ್ನು ಬಿಟ್ಟು ಸಾರ್ವತ್ರಿಕ ಹೇಳಿಕೆಯೆಂಬಂತೇ ‘ಮನುಷ್ಯರೆಲ್ಲರೂ ಸಮಾನರು’ ಎಂಬ ಹೇಳಿಕೆಯನ್ನು ತೆಗೆದುಕೊಂಡಾಗ ಗೊಂದಲ ಹುಟ್ಟಿಕೊಳ್ಳುತ್ತದೆ. ಹಾಗಾಗೇ ಮನುಷ್ಯ ಸಮಾನತೆ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಅದರ ಅರ್ಥ ಹಾಗೂ ಅನ್ವಯಕ್ಕೆ ಸಂಬಂಧಿಸಿದಂತೇ ಪಾಶ್ಚಾತ್ಯ ಚಿಂತಕರು ಸಾಕಷ್ಟು ಗುದ್ದಾಡಿದ್ದಾರೆ. ಅಷ್ಟಾಗಿಯೂ ಅದನ್ನು ಸ್ಪಷ್ಟಪಡಿಸಲು ಸೋತಿದ್ದಾರೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: