ಮುಖ ಪುಟ > Uncategorized > ಅಂಕಣ: ವಸಾಹತುಶಾಹಿಯ ವಿಶ್ವರೂಪ

ಅಂಕಣ: ವಸಾಹತುಶಾಹಿಯ ವಿಶ್ವರೂಪ

ಕಂತು 62: ಭಾರತೀಯರಿಗೆ ಸಾಂಸ್ಥಿಕ ಧ್ಯೇಯೋದ್ದೇಶಗಳು ಅರ್ಥವಾಗುತ್ತವೆಯೆ?

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತಕ್ಕೆ 1947 ಅಗಸ್ಟ್ 15ರಂದು ವಸಾಹತು ಪ್ರಭುತ್ವದಿಂದ ಮುಕ್ತಿ ದೊರೆತು ಅದು ಸ್ವತಂತ್ರವಾಗಿ 67 ವರ್ಷಗಳಾಗಿವೆ. ಈ ಸ್ವತಂತ್ರ ರಾಷ್ಟ್ರಕ್ಕೆ ಪ್ರಜಾಪ್ರಭುತ್ವವೆಂಬ ಸರ್ಕಾರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಪ್ರತೀ ವರ್ಷ ಅಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಆದಿನ ಭಾಷಣಕಾರರು ಹಿಂದಿನ ವರ್ಷಗಳ ಸಫಲತೆ-ವಿಫಲತೆಗಳ ಪಟ್ಟಿಯನ್ನು ನೀಡಿ ಮುಂದೆ ಏನೇನು ಸಾಧಿಸಬೇಕಾಗಿದೆ ಎಂಬುದನ್ನು ನಮಗೆ ತಿಳಿಸುತ್ತಾರೆ. ಹೆಚ್ಚಿನ ಭಾಷಣಗಳಲ್ಲಿ ವಿಫಲತೆಯ ಕುರಿತು ವಿಷಾದವೇ ತುಂಬಿರುತ್ತದೆ. ವರ್ಷದಿಂದ ವರ್ಷಕ್ಕೆ ನಮ್ಮ ವಿಫಲತೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಕಾನೂನು-ರಕ್ಷಣೆಯ ವ್ಯವಸ್ಥೆ ದಯನೀಯವಾಗಿ ಹಾಳಾಗುತ್ತಿದೆ. ಬಡತನ, ಶೋಷಣೆ, ಭ್ರಷ್ಟಾಚಾರ, ಜಾತಿ ಹಾಗೂ ಮಹಿಳಾ ದೌರ್ಜನ್ಯ, ಕೋಮು ಘರ್ಷಣೆ, ಇವೆಲ್ಲ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿವೆ. ಇವುಗಳ ಜೊತೆಗೆ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ರಾಜಕಾರಣ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ರಾಜಕಾರಣದಲ್ಲಿ ಅಪರಾಧಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಚುನಾವಣೆಗಳಲ್ಲಿ ಹಣ ಹೆಂಡದ ಚೆಲ್ಲಾಟ ಜಾಸ್ತಿಯಾಗುತ್ತಿದೆ. ಸರ್ಕಾರೀ ವಲಯವು ವಿಫಲವಾಗಿ ಹಿಮ್ಮೆಟ್ಟುತ್ತಿದೆ. ಸರ್ಕಾರೀ ಉದ್ಯಮಗಳು ಹಾಗೂ ಕೈಗಾರಿಕೆಗಳು ಒಂದೊಂದಾಗಿ ಮುಚ್ಚಿವೆ. ಖಾಸಗೀಕರಣ ಇನ್ನಿಲ್ಲದಂತೇ ಪ್ರಬಲವಾಗುತ್ತಿದೆ. ಸರ್ಕಾರೀ ಶಾಲೆಗಳು ಮುಚ್ಚುತ್ತಿವೆ, ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ರಾಜಕೀಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವು ತಾಂಡವವಾಡುತ್ತಿವೆ. ಹೀಗೆ ವೈಫಲ್ಯತೆಗಳ ಪಟ್ಟಿ ಬೆಳೆಯುತ್ತಲೇ ಇದೆ.

‘ನಮ್ಮ ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಸ್ವಾತಂತ್ರ್ಯ ಹೋರಾಟಗಾರರು ಜೀವ, ಮನೆ ಮಠ ಕಳೆದುಕೊಂಡರು, ಅವರೆಲ್ಲರೂ ಈ ಭಾಗ್ಯಕ್ಕಾಗಿ ಜೀವತೆತ್ತರೆ?’ ಎಂದು ಅಳಿದುಳಿದ ಸ್ವಾತಂತ್ರ್ಯ ಹೋರಾಟಗಾರರು ಅಲವತ್ತುಗೊಳ್ಳುವುದನ್ನು ನಾವು ನೋಡುತ್ತೇವೆ. ‘ಸರ್ಕಾರ ಎನ್ನುವುದು ಭಸ್ಮಾಸುರ ಇದ್ದಹಾಗೇ, ಅದು ಕೈಯಿಟ್ಟ ಸಂಸ್ಥೆಯೇ ನಾಶವಾಗುತ್ತದೆ’ ಎಂಬ ಸಿನಿಕ ಹೇಳಿಕೆಗಳೂ ಕೇಳಲಿಕ್ಕೆ ಸಿಗುತ್ತವೆ. ರಾಜಕಾರಣವು ಇಂದು ಒಂದು ಲಾಭದಾಯಕ ಉದ್ಯಮವಾಗಿದೆ. ನಮ್ಮ ರಾಜಕಾರಣಿಗಳು ಹಾಗೂ ಅಧಿಕಾರ ಶಾಹಿಗಳು ಒಟ್ಟಿಗೇ ಸೇರಿ ಸಾಕಷ್ಟು ಪರಿಶ್ರಮ ಪಟ್ಟು ಅಂತೂ ಅದನ್ನು ಲಾಭದಾಯಕ ಉದ್ದಿಮೆಯನ್ನಾಗಿ ಮಾಡಲು ಯಶಸ್ವಿಯಾಗಿದ್ದಾರೆ. ಮೊದಮೊದಲು ನಮ್ಮ ಜನಪ್ರತಿನಿಧಿಗಳು ನಮ್ಮೆಲ್ಲರಂತೇ ಬಸ್ಸುಗಳಲ್ಲಿ ಓಡಾಡಿಕೊಂಡಿದ್ದರು. ಇತ್ತೀಚೆಗೆ ಅವರು ಹೋಗಲಿ, ಅವರ ಚೇಲಾಗಳ ಚೇಲಾಗಳೂ ಕೂಡ ಕೋಟ್ಯಾಧೀಶರಾಗುತ್ತಿದ್ದಾರೆ. ಮಂತ್ರಿಮಂಡಲವನ್ನು ರಚಿಸುವಾಗ ಲಾಭದಾಯಕ ಖಾತೆಗಳಿಗಾಗಿ ಪೈಪೋಟಿ ಎಷ್ಟು ತೀವ್ರವಾಗಿ ನಡೆಯುತ್ತದೆಯೆಂದರೆ ಆ ಸಲುವಾಗಿ ಪಕ್ಷಗಳು ಒಡೆದದ್ದೂ ಇದೆ, ಸರ್ಕಾರಗಳು ಬಿದ್ದದ್ದೂ ಇದೆ. ಈ ಲಾಭ ಎಲ್ಲಿಂದ ಬರುತ್ತದೆ? ನಮ್ಮ ಪ್ರಭುತ್ವವು ಜನಕಲ್ಯಾಣದ ಹಾಗೂ ಆಡಳಿತದ ಸಲುವಾಗಿ ರಚಿಸಿಕೊಂಡ ಸಂಸ್ಥೆಗಳು ಹಾಗೂ ವಿಭಾಗಗಳಿಂದ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಶಿಕ್ಷಕರಿಂದ ಹಿಡಿದು ನ್ಯಾಯಾಧೀಶರವರೆಗೆ ನೇಮಕಾತಿಗಳಿಂದ ಅದು ಹರಿದು ಬರುತ್ತದೆ, ವರ್ಗಾವರ್ಗಿಯಿಂದ ಹರಿದು ಬರುತ್ತದೆ. ಅಭಿವೃದ್ಧಿ ಕಾಮಗಾರಿಯಿಂದ ಬರುತ್ತದೆ, ಜನಕಲ್ಯಾಣದ ಯೋಜನೆಗಳಿಂದ ಬರುತ್ತದೆ. ಸರ್ಕಾರದ ಉಸ್ತುವಾರಿಗೆ ಒಂದು ಸಂಸ್ಥೆಯನ್ನೋ, ಅಧಿಕಾರವನ್ನೋ ನೀಡಿರಿ, ಅಲ್ಲಿ ನಡೆಯುವ ಆಡಳಿತವೆಂದರೆ ಈ ಸಂಪನ್ಮೂಲವನ್ನು ಒಟ್ಟುಗೂಡಿಸುವ ಕೆಲಸ. ಈ ಕೆಲಸವನ್ನು ಎಷ್ಟು ಭರಾಟೆಯಿಂದ ಮಾಡುತ್ತಾರೆಂದರೆ ಆ ಹೊಡೆತಕ್ಕೆ ಸಂಸ್ಥೆಯ ಗುಣಮಟ್ಟವೇ ಕಿತ್ತುಕೊಂಡು ಹೋಗಿರುತ್ತದೆ.

ಈ ಪರಿಸ್ಥಿತಿಯು ಒಂದು ವಿಲಕ್ಷಣ ಸನ್ನಿವೇಶವನ್ನು ಸೃಷ್ಟಿಸಿದೆ. ಅದೆಂದರೆ ಸರ್ಕಾರದ ಯಂತ್ರವು ನಡೆಯಬೇಕಾದರೆ ಈ ಮೇಲಿನ ಆಕರ್ಷಣೆ ಅನಿವಾರ್ಯ. ನಮ್ಮ ಜನಕಲ್ಯಾಣ ಯೋಜನೆಗಳು, ಅಭಿವೃದ್ಧಿ ಯೋಜನೆಗಳಿಗೆ ಕಾರಣೀಭೂತವಾಗಿ ಅವು ಇರುತ್ತವೆ. ರಸ್ತೆ ಮಾಡುವುದು, ಕಟ್ಟಡಗಳನ್ನು ಕಟ್ಟುವುದು, ಯೋಜನೆಗಳನ್ನು ಹಮ್ಮಿಕೊಳ್ಳುವುದು, ಇತ್ಯಾದಿ ಹತ್ತು ಹಲವು ಕಾರ್ಯಗಳನ್ನು ಮಾಡಲಿಕ್ಕೆ ಸರ್ಕಾರದ ಸಂಸ್ಥೆಗಳಿಗೆ ಬೇರೆ ಯಾವುದೇ ಮಹತ್ವದ ಕಾರಣಗಳು ಇದ್ದಂತೆ ಕಾಣುವುದಿಲ್ಲ. ಬಹುಶಃ ಇದ್ದರೆ ಅದು ಮತದಾರರ ಓಲೈಕೆಗಾಗಿ ಇರುತ್ತದೆ. ಅದೂ ಕೂಡ ಅಪ್ರತ್ಯಕ್ಷವಾಗಿ ಮತ್ತೆ ಆರಿಸಿ ಬಂದು ಇಂಥ ಕೆಲಸಗಳನ್ನು ಅನೂಚಾನಗೊಳಿಸುವ ಉದ್ದೇಶವನ್ನೇ ಹೊಂದಿದೆ. ರಾಜಕಾರಣವು ನಷ್ಟದ ಉದ್ದಿಮೆಯಾದರೆ ಮತ್ತೆ ಮತ್ತೆ ಆರಿಸಿಬರಲಿಕ್ಕೆ ಯಾರು ತಯಾರಿದ್ದಾರೆ? ನಾವು ಜನತೆಯೂ ಈ ವಾಸ್ತವವನ್ನು ಒಪ್ಪಿಕೊಂಡಿದ್ದೇವೆ. “ಏನೇ ಹೇಳಿ, ಅವನು ರೊಕ್ಕ ಮಾಡಿರಬಹುದು, ಆದರೆ ಆ ನೆಪದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾನಲ್ಲ, ಅದು ಮುಖ್ಯ. ನಮ್ಮ ಹಿಂದಿನ ಶಾಸಕನು ತಾನೂ ತಿನ್ನಲಿಲ್ಲ, ಜನರಿಗೂ ಉಪಕಾರ ಮಾಡಲಿಲ್ಲ” ಎಂಬ ಉದ್ಗಾರಗಳು ಸಾಮಾನ್ಯ.

ಇದು ರಾಜಕಾರಣಿಗಳು ಹಾಗೂ ಆಳುವವರದೊಂದೇ ಕಥೆಯಲ್ಲ. ಅಷ್ಟಕ್ಕೂ ಅವರಿಬ್ಬರೇ ಏನು ಮಾಡಲಿಕ್ಕೆ ಸಾಧ್ಯ? ಅದಕ್ಕೆ ಸರ್ಕಾರೀ ಸಂಸ್ಥೆಗಳ ನೌಕರಶಾಹಿ ಹಾಗೂ ಉದ್ದಿಮೆದಾರರು, ದಲ್ಲಾಳಿಗಳು, ಗುತ್ತಿಗೆದಾರರಿಂದ ಹಿಡಿದು ಸಾಮಾನ್ಯ ಪುಡಿ ಪುರವಟೆದಾರನ ವರೆಗೆ ಜಾಲ ನಿರ್ಮಾಣಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನ್ಯಾಯಾಲಯ ಕ್ಷೇತ್ರದಲ್ಲಿ ಕೂಡ ಆ ಕ್ಷೇತ್ರಗಳ ಕಾರ್ಯಕ್ಷಮತೆಯನ್ನೇ ಪಣಕ್ಕಿಟ್ಟು ಈ ಪ್ರಯೋಗಗಳು ನಡೆಯುತ್ತಿವೆ. ಬಹುತೇಕ ಜನರಿಗೆ ಸರ್ಕಾರ ಎಂದರೆ ಯಾರಿಗೂ ಸೇರದ ಕ್ಷೇತ್ರ, ಅಲ್ಲಿ ನಾವು ಬಾಚಿಕೊಂಡಷ್ಟೂ ನಮ್ಮ ಭವಿಷ್ಯವಿದೆ ಎಂಬ ಸತ್ಯದರ್ಶನವಾದಂತೆ ಕಾಣುತ್ತದೆ. ಹಾಗೂ ಸರ್ಕಾರೀ ಕ್ಷೇತ್ರ ಎನ್ನುವುದು ತಮ್ಮ ಕುಲಕೋಟಿಗಳನ್ನು ಉದ್ಧರಿಸಿಕೊಳ್ಳುವ ಸಾಧನ ಎಂಬುದಾಗಿ ಬಹುತೇಕ ಜನರು ನಂಬಿರುವಂತೆ ಕಾಣುತ್ತದೆ. ಅದರಾಚೆಗೆ, ಆ ಕ್ಷೇತ್ರದಲ್ಲಿ ಸಾರ್ವಜನಿಕ ಸಂಸ್ಥೆಗಳು ಕಾರ್ಯಕ್ರಮಗಳು ಇವೆ, ಅವುಗಳ ಹಿಂದೆ ಒಂದು ಉದ್ದೇಶ ಹಾಗೂ ಗುರಿಗಳಿವೆ, ಅವು ಒಟ್ಟೂ ಜನತೆಯ ಉದ್ಧಾರಕ್ಕಾಗಿ ಇರುವ ಸಾಧನಗಳು, ಹಾಗೂ ಸರ್ಕಾರ ಎನ್ನುವುದು ಈ ಗುರಿಯನ್ನು ತಲುಪಲು ಹಾಕಿಕೊಂಡ ಒಂದು ವ್ಯವಸ್ಥೆಯಾಗಿದೆ ಎಂಬ ಪರಿಜ್ಞಾನ ದಿನದಿಂದ ದಿನಕ್ಕೆ ನಶಿಸಿಹೋಗುತ್ತಿರುವಂತೇ ಕಾಣುತ್ತದೆ.

ಈಗ ಏನು ನಡೆಯುತ್ತಿದೆಯೋ ಅದನ್ನು ಯಾವ ರೀತಿಯ ಪ್ರಭುತ್ವವೆನ್ನಬಹುದು? ಇದು ಇಂದು ನಮಗೆ ಕಾಣುವಂತೆ ನಾವು ರಾಜ್ಯಶಾಸ್ತ್ರದಲ್ಲಿ ಓದುವ ಯಾವ ಪ್ರಭುತ್ವವೂ ಆಗಿರುವ ಸಾಧ್ಯತೆ ಇಲ್ಲ. ಭಾರತವು ಸ್ವಾತಂತ್ರ್ಯಾನಂತರ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಹಾಕಿಕೊಂಡಿತು ಎನ್ನಲಾಗುತ್ತದೆ. ಅಲ್ಲಿ ಪ್ರಭುತ್ವ ಎಂದರೆ ಸ್ಟೇಟ್ ಎಂಬ ಸಂಸ್ಥೆ. ಈ ಸ್ಟೇಟ್ ಎಂಬುದಕ್ಕೆ ನಿರ್ದಿಷ್ಟ ಅರ್ಥವಿದೆ, ಉದ್ದೇಶವಿದೆ. ಅದನ್ನು ನಮ್ಮ ಸಂವಿಧಾನದಲ್ಲಿ ಸ್ಪಷ್ಟಗೊಳಿಸಲಾಗಿದೆ. ಈ ಸಂವಿಧಾನವನ್ನು ಬರೆದವರು ಭಾರತೀಯ ಜನತೆ. ಈ ಜನತೆಯು ತಮ್ಮ ಶ್ರೇಯೋಭಿವೃದ್ಧಿಗಾಗಿ ಸ್ಟೇಟ್ ಎಂಬ ವ್ಯವಸ್ಥೆಯನ್ನು ರಚಿಸಿಕೊಂಡಿದ್ದಾರೆ. ಅಂದರೆ ಈ ಸಮಸ್ತ ಜನತೆಗೂ ಶ್ರೇಯಸ್ಕರ ಎನ್ನಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಅದರ ಅಂಗ ಸಂಸ್ಥೆಗಳನ್ನು ರಚಿಸಿಕೊಳ್ಳಲಾಗಿದೆ. ಈ ಸ್ಟೇಟ್ ಒಂದು ಸಾರ್ವಭೌಮ ವ್ಯವಸ್ಥೆ ಹಾಗೂ ಅದು ಕಾನೂನುಗಳನ್ನಾಧರಿಸಿ ಅನುಷ್ಠಾನಕ್ಕೆ ಬರುತ್ತದೆ. ಇದು ಹೌದೇ ಆದರೆ ಭಾರತದಲ್ಲಿ ಆ ಹೆಸರಿನಲ್ಲಿ ಬೇರೇನೋ ನಡೆಯುತ್ತಿರುವುದು ಸ್ಪಷ್ಟ.

ಇಂಥ ಪ್ರಭುತ್ವದಲ್ಲಿ ಸಾರ್ವಜನಿಕ ಹಾಗೂ ಖಾಸಗೀ ವಲಯಗಳನ್ನು ಬೇರ್ಪಡಿಸಿ ಗುರುತಿಸುವುದು ಮುಖ್ಯ. ಒಬ್ಬ ಮಂತ್ರಿ ಅಥವಾ ಅಧಿಕಾರಿಯು ಮನೆಯಲ್ಲಿ ಖಾಸಗಿ ವ್ಯಕ್ತಿ, ಆದರೆ ಆಫೀಸಿನಲ್ಲಿ ಸಾರ್ವಜನಿಕ ವ್ಯಕ್ತಿ. ಅಲ್ಲಿ ಅವನು ಮಾಡುವ ಕೆಲಸವು ಸಮಸ್ತ ಜನತೆಯ ಸಾಮುದಾಯಿಕ ಗುರಿಯನ್ನು ಸಾಧಿಸುವ ಸಲುವಾಗಿ ಇದೆ. ಅಲ್ಲಿ ಅವನು ಎಲ್ಲರಿಗಾಗಿ ಕೆಲಸ ಮಾಡುತ್ತಾನೆ. ಅಂದರೆ ತನ್ನ ಹೆಂಡತಿ ಮಕ್ಕಳಿಗಾಗಿ ಮಡುವ ಕೆಲಸ ವಯಕ್ತಿಕ ಹಿತಾಸಕ್ತಿಗಾಗಿ, ಆದರೆ ಆಫೀಸಿನಲ್ಲಿ ಮಾಡುವ ಕೆಲಸ ಸಾರ್ವಜನಿಕ ಹಿತಾಸಕ್ತಿಗಾಗಿ ಇರುತ್ತದೆ. ಅಂದರೆ ಸ್ಟೇಟ್ ಎನ್ನುವುದು ಸಾರ್ವಜನಿಕ ಇಚ್ಛೆಯನ್ನು ನಡೆಸುವ ಶಕ್ತಿ. ಅದು ಆಡಳಿತಶಾಹಿಯ ಸ್ವಾರ್ಥದಿಂದ ಕೆಲವೇ ಆಳುವವರ ಹಿತಾಸಕ್ತಿಗಾಗಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂಬುದನ್ನು ಮನಗಂಡು ಇಂಥ ಸ್ಟೇಟ್ಗಳಿಗೆ ಒಂದು ನಾಗರಿಕ ಸಮಾಜವು ಅತ್ಯಗತ್ಯ ಎಂಬುದಾಗಿ ಪಾಶ್ಚಾತ್ಯ ರಾಜಕೀಯ ಚಿಂತಕರು ಹೇಳಿದ್ದಾರೆ. ಈ ನಾಗರಿಕ ಸಮಾಜವು ಆಡಳತಶಾಹಿಯನ್ನು ನಿಯಂತ್ರಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಒತ್ತಾಯಿಸಿ ಸ್ಟೇಟ್ನ ಸಾಂಸ್ಥಿಕ ಗುರಿಯತ್ತ ಅದನ್ನು ಒಯ್ಯಲು ಕಾರಣೀಭೂತವಾಗುತ್ತದೆ. ಇಂಥ ನಾಗರಿಕ ಸಮಾಜವು ತನ್ನದೇ ಚಳವಳಿಗಳನ್ನು,  ಒತ್ತಡ ಗುಂಪುಗಳನ್ನು ನಿರ್ಮಿಸಿಕೊಂಡು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತದೆ.

ಭಾರತದಲ್ಲಿನ ಪರಿಸ್ಥಿತಿ ಇದಾವುದನ್ನೂ ಹೋಲುತ್ತಿಲ್ಲ. ಬಹುತೇಕ ಭಾರತೀಯರಿಗೆ ಸಾರ್ವಜನಿಕ ಕ್ಷೇತ್ರವು ಕೂಡ ತಮ್ಮ ಜೀವನದ ಒಂದು ಭಾಗವಾಗಿ ಕಾಣಿಸುವುದಿಲ್ಲ. ಅದಕ್ಕೆ ಎದ್ದುಕಾಣುವ ಉದಾಹರಣೆ ಎಂದರೆ ಸಾರ್ವಜನಿಕ ಜಾಗದಲ್ಲಿ ಅವರು ಕಸ ಕೊಳೆಗಳನ್ನು ರಾಶಿಹಾಕುವುದು. ಅವರಿಗೆ ಅದೊಂದು ಚಟವಾಗಿ ಪರಿಣಮಿಸಿದೆ. ಇತ್ತೀಚೆಗೆ ಮೋದಿಯವರ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಉನ್ನತ ಅಧಿಕಾರಿಗಳಿಗೇ ಸಾರ್ವಜನಿಕ ಜಾಗವನ್ನು ಸ್ವಚ್ಛಗೊಳಿಸುವ ಪರಿಕಲ್ಪನೆ ಇಲ್ಲ ಎಂಬುದು ಅನೇಕ ವಿಧದಲ್ಲಿ ದೃಷ್ಟಾಂತವಾಗಿದೆ. ಕೆಲವರು ಕಸ ಕೊಳೆಗಳನ್ನು ತಾವೇ ಚೆಲ್ಲಿಕೊಂಡು ಗುಡಿಸುತ್ತಿದ್ದರು. ಅವರ ಪ್ರಕಾರ ಇದೊಂದು ರಾಜಕೀಯ ಕಾರ್ಯಕ್ರಮ, ಬಹುಶಃ ವೋಟಿಗಾಗಿ ಇರಬಹುದು. ಹಾಗಾಗಿ ಟೀವಿಯಲ್ಲಿ ಬರುವುದು ಮುಖ್ಯ. ದೆಹಲಿಯ ಇಂಡಿಯಾ ಗೇಟ್ ಬಳಿ ಮೋದಿ ಈ ಅಭಿಯಾನವನ್ನು ಉದ್ಘಾಟಿಸಿ ಹೋದನಂತರ ಎಲ್ಲಾ ಅಧಿಕಾರಿಗಳು ಅಲ್ಲಿದ್ದ ಕಸ ಕಳೆಯನ್ನೆಲ್ಲಾ ಅಲ್ಲೇ ಬೀಸಾಡಿ ಹೊರಟುಹೋಗಿದ್ದರು. ಕಾರ್ಯಕ್ರಮ ಮುಗಿಯಿತಲ್ಲ ಇನ್ನು ಕಸ ಹಾಕಿದರೆ ತೊಂದರೆಯಿಲ್ಲ ಎಂಬ ಧೋರಣೆಯಿರಬಹುದು. ನಮ್ಮಲ್ಲಿ ಮನೆ ಅಂಗಳವನ್ನು ಸ್ವಚ್ಛಗೊಳಿಸುವುದೆಂದರೆ ಕಸವನ್ನು ಬೀದಿಗೆ ಚೆಲ್ಲುವುದು ಅಂತಲೇ ಅರ್ಥ. ಈ ಹಂತದಿಂದ ಶಿಕ್ಷಣವನ್ನು ಪಡೆದವರು ಉನ್ನತ ಹುದ್ದೆಗಳಿಗೆ ಹೋದಾಕ್ಷಣ ಹೊಸ ಅರಿವು ಬಂದು ಬಿಡುತ್ತದೆಯೆ?

ಇದು ಸಾರ್ವಜನಿಕ ಕ್ಷೇತ್ರದ ಕುರಿತು ಸಾಮಾನ್ಯ ಭಾರತೀಯನೊಬ್ಬನ ತಿಳುವಳಿಕೆಗೆ ದೃಷಾಂತವಾದರೆ, ನಮ್ಮ ನಾಗರಿಕ ಹೋರಾಟಗಳು, ಒತ್ತಡದ ಗುಂಪುಗಳು ಹೇಗಿವೆ? ಯಾವುದೇ ಚಳುವಳಿಗಾರರನ್ನು ಕೇಳಿದರೂ ತಮ್ಮ ಚಳುವಳಿ ಮುಳುಗಿ ಹೋಯಿತೆಂದೇ ಗೋಳಾಡುತ್ತಾರೆ. ತಮ್ಮ ಮುಖಂಡರು ರಾಜಕಾರಣಿಗಳ ಜೊತೆಗೆ ಶಾಮೀಲಾಗಿ ಸಕತ್ತು ಹಣ ಮಾಡಿಕೊಂಡಿದ್ದಾರೆ ಅಂತಲೋ, ತಮ್ಮ ಸಮಾಜಕ್ಕೆ ಬಂದ ಸರ್ಕಾರಿ ಹಣವನ್ನು ತಮ್ಮ ನಿರ್ವಾಹಕರು, ಮುಂದಾಳುಗಳು ಸೇರಿ ಲಪಟಾಯಿಸುತ್ತಿದ್ದಾರೆ ಅಂತಲೋ ಹೇಳುತ್ತಾರೆ. ಅಪ್ಪಿ ತಪ್ಪಿ ಯಾವುದೇ ಚಳವಳಿಯಾದರೂ ಗಾದಿ ಹಿಡಿಯಿತೆಂದರೆ ಅವರು ಹಿಂದಿನವರನ್ನೂ ಮೀರಿಸುವಂತೇ ಇದ್ದರೂ ಆಶ್ಚರ್ಯವಿಲ್ಲ. ಒತ್ತಡದ ಗುಂಪು ಎಂದರೆ, ತಮ್ಮ ನಿರ್ದಿಷ್ಟ ಅನುಯಾಯಿಗಳ ಪ್ರಯೋಜನಕ್ಕಾಗಿ ರಾಜಕಾರಣಿಗಳ ಮೇಲೆ ಒತ್ತಡ ತರುವ ಗುಂಪಾಗಿದೆಯೇ ವಿನಃ ಸಮಸ್ತ ನಾಗರಿಕರ ಹಿತಾಸಕ್ತಿಯ ಕಲ್ಪನೆ ಅಲ್ಲಿ ನಾಪತ್ತೆಯಾಗಿದೆ. ನಮ್ಮಲ್ಲಿ ಕಾಯ್ದೆ ಕನೂನುಗಳನ್ನು ಕೂಡ ನಿರ್ದಿಷ್ಟ ಗುಂಪುಗಳ ಹಿತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮಾಡಲಾಗುತ್ತದೆಯೇ ವಿನಃ ಸಮಸ್ತ ನಾಗರಿಕರದ್ದಲ್ಲ. ಮೇಲಿಂದ ಅಂಥ ನೀತಿಗಳಿಗೆ ನ್ಯಾಯ ಹಾಗೂ ಮಾನವೀಯತೆಯ ಪ್ರತೀಕಗಳು ಎಂಬ ಹೆಗ್ಗಳಿಕೆಯೂ ಇದೆ. ಒಟ್ಟಿನಲ್ಲಿ ಒಂದು ಪ್ರಭುತ್ವದ ಸಮಗ್ರ ಸಾರ್ವಜನಿಕ ಇಚ್ಛೆ, ಅಥವಾ ಹಿತಾಸಕ್ತಿ ಎಂಬುದು ನಾಗರಿಕ ಸಮಾಜದಲ್ಲೆಲ್ಲೂ ಕಾಣುವುದಿಲ್ಲ.

ಏಕೆ ಹೀಗೆ? ಒಂದು ತಥಾಕಥಿತ ವಿವರಣೆ ಎಂದರೆ ಅದು ಭಾರತೀಯರ ಸ್ವಭಾವಕ್ಕೆ ಸಂಬಂಧಿಸಿದ್ದು. ವಸಾಹತುಕಾಲದಲ್ಲಿ ಭಾರತೀಯ ಸಮಾಜವೇ ಭ್ರಷ್ಟವಾಗಿದೆ, ಇಲ್ಲಿನ ಜನರು ಸುಳ್ಳರು, ಅನೈತಿಕತೆ ಉಳ್ಳವರು, ಅಪರಾಧ ಪೃವೃತ್ತಿಯವರು ಅಥವಾ ಅವರಿಗೆ ನಾಗರಿಕ ಸದ್ಗುಣಗಳ ಕೊರತೆ ಇದೆ ಎಂಬುದಾಗಿ ಬ್ರಿಟಿಷರು ವರ್ಣಿಸಿದ್ದರು. ಈ ಮೇಲಿನ ವಿವರಗಳು ಅದನ್ನು ಸಮರ್ಥಿವಂತೇ ಇವೆ ಎಂದು ಯಾರಾದರೂ ತರ್ಕಿಸುವ ಸಾಧ್ಯತೆಯಿದೆ. ಆದರೆ ನಾನು ಆ ಹಾದಿಯನ್ನು ಹಿಡಿಯುವುದಿಲ್ಲ. ಇದು ಸಂಸ್ಕೃತಿಗಳ ವ್ಯತ್ಯಾಸದಿಂದಾಗಿ ಹುಟ್ಟಿಕೊಂಡ ಗೊಂದಲವಾಗಿದೆ. ಅಂದರೆ ನಾವು ಪಾಶ್ಚಾತ್ಯರಿಂದ ಪಡೆದು ಅಳವಡಿಸಿಕೊಂಡ ಈ ಸ್ಟೇಟ್ ಎಂಬ ವ್ಯವಸ್ಥೆ ಹಾಗೂ ಅದಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ನಮ್ಮ ಜನರಿಗೆ ಅರ್ಥವಾಗುತ್ತಿಲ್ಲ. ಭಾರತೀಯ ಸಮಾಜವು ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದ ಜೀವನ ಕ್ರಮಕ್ಕೆ ಈ ಹೊಸ ರಿವಾಜುಗಳು ಇನ್ನೂ ಅಪರಿಚಿತವಾಗಿವೆ. ಈ ಹೊಸ ವ್ಯವಸ್ಥೆ ಏನು ಮಾಡಿದೆಯೆಂದರೆ ಹಳೆಯ ಜೀವನಕ್ರಮವನ್ನು ಹಾಳುಮಾಡಿದೆ, ಹೊಸ ಜೀವನಕ್ರಮದ ಹಿಂದಿರುವ ಅರ್ಥಪ್ರಪಂಚವು ನಮ್ಮ ಜನರಿಗೆ ದಕ್ಕುತ್ತಿಲ್ಲ. ಏಕೆಂದರೆ, ಅದು ಶಬ್ದಗಳನ್ನು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ, ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಕೆಲಸವಾಗಿದೆ. ಈ ಪರಿಕಲ್ಪನೆಗಳು ಅರ್ಥವಾಗಬೇಕಾದರೆ ಕ್ರೈಸ್ತ ಥಿಯಾಲಜಿ ಗೊತ್ತಿರಲೇಬೇಕು. ಭಾರತೀಯ ರಾಜಕೀಯದ ವಿಶ್ಲೇಷಣೆಯನ್ನು ನಡೆಸಲು ಈ ವಾಸ್ತವದ ಅರಿವು ಅತ್ಯಗತ್ಯ.

ಪಾಶ್ಚಾತ್ಯ ರಾಜಕೀಯ ಚಿಂತನೆಗೆ ಮೂಲಾಧಾರವಾಗಿ ಹಲವು ಪರಿಕಲ್ಪನೆಗಳಿವೆ. ಅವುಗಳ ನಡುವಿನ ಪರಸ್ಪರ ಸಂಬಂಧ ತಿಳಿಯದೇ ನಾವು ಹಾಕಿಕೊಂಡ ವ್ಯವಸ್ಥೆ ನಮಗೆ ಅರ್ಥವಾಗಲೂ ಸಾಧ್ಯವಿಲ್ಲ. ವಿಪರ್ಯಾಸವೆಂದರೆ ಪಾಶ್ಚಾತ್ಯರಿಗೇ ಅವುಗಳ ಅರ್ಥ ಸರಿಯಾಗಿ ತಿಳಿದಿಲ್ಲ ಎಂಬುದು. ಏಕೆಂದರೆ ಈ ಪರಿಕಲ್ಪನೆಗಳೆಲ್ಲವೂ ಕ್ರೈಸ್ತ ಥಿಯಾಲಜಿಯ ಸೆಕ್ಯುಲರ್ ರೂಪಗಳು. ಥಿಯಾಲಜಿಯಲ್ಲಿ ಅವು ಸುಸಂಬದ್ಧವಾಗಿ ಅರ್ಥವಾಗುತ್ತವೆ, ಅದರಿಂದ ಬೇರ್ಪಟ್ಟಾಗ ಕಬ್ಬಿಣದ ಕಡಲೆಗಳಾಗುತ್ತವೆ. ನಾನು ಈ ಅಂಕಣಕ್ಕೆ ಮುಖ್ಯವಾದ ಒಂದೇ ಒಂದು ಪರಿಕಲ್ಪನೆಯನ್ನು ಪ್ರಸ್ತಾಪಿಸುತ್ತೇನೆ. ಅದೆಂದರೆ ಸಾರ್ವಜನಿಕ ಹಿತಾಸಕ್ತಿ ಎಂಬ ಕಲ್ಪನೆ. ಭಾರತೀಯರಿಗೆ ಇದು ಅರ್ಥವಾಗದ ವಿಷಯ. ಹಾಗಾಗಿ ಸಾಂಸ್ಥಿಕ ಗುರಿ ಎಂದರೆ ಏನೆಂಬುದೇ ಅವರಿಗೆ ಎಟುಕದು.

ಥಿಯಾಲಜಿಯಲ್ಲಿ ಚರ್ಚು ಉದ್ದೇಶಿತ ಸಂಸ್ಥೆಯಾಗಿ ಬರುತ್ತದೆ. ಈ ಚರ್ಚೆಗೆ ಒಂದು ಧ್ಯೇಯವಿದೆ. ಅದೆಂದರೆ ಎಲ್ಲಾ ಕ್ರೈಸ್ತರನ್ನೂ ರಿಲಿಜನ್ನಿನ ಮಾರ್ಗದಲ್ಲಿ ನಡೆಸಿ ಗಾಡ್ನ ಬಳಿ ಕರೆದುಕೊಂಡು ಹೋಗುವುದು. ಕ್ರೈಸ್ತರಲ್ಲದವರನ್ನೂ ಕೂಡ ಪರಿವರ್ತಿಸಿ ಚರ್ಚಿನೊಳಗೆ ತರುವುದೂ ಅದರ ಕಾರ್ಯಕ್ರಮವಾಗಿದೆ. ಅಂದರೆ ಸಮಸ್ತ ಮಾನವರೆಲ್ಲರೂ ಗಾಡ್ನ ಸೃಷ್ಟಿಯಾಗಿದ್ದು, ಅವನಿಂದ ಬೇರ್ಪಟ್ಟು ಪಾಪಿಗಳಾಗಿ ಡೆವಿಲ್ಲನ ಪ್ರಭಾವದಲ್ಲಿ ಇದ್ದಾರೆ. ಅವರನ್ನು ಗಾಡ್ನೊಂದಿಗೆ ಸಂಲಗ್ನಗೊಳಿಸುವುದೇ ರಿಲಿಜನ್ನಿನ ಧ್ಯೇಯ. ಮಾನವರು ಐಹಿಕ ಸುಖೋಪಭೋಗದಲ್ಲಿ ಮುಳುಗಿ ಪಾಪಕಾರ್ಯಗಳನ್ನು ಮಾಡುತ್ತಿದ್ದರೂ ಕೂಡ ಅವರೊಳಗಿರುವ ಸ್ಪಿರಿಟ್ ಗಾಡ್ನ ಕ್ಷೇತ್ರವಾಗಿದೆ. ಈ ಸಂದರ್ಭದಲ್ಲಿ ಇಂಟರೆಸ್ಟ್ ಎಂಬ ಶಬ್ದ ಬರುತ್ತದೆ. ಈ ಶಬ್ದಕ್ಕೆ ಹಿತಾಸಕ್ತಿ ಎಂಬುದಾಗಿ ನಾವು ತರ್ಜುಮೆ ಮಾಡಿಕೊಂಡಿದ್ದೇವೆ. ಆದರೆ ಅದು ಸರಿಯಾದ ಅರ್ಥವನ್ನು ಕೊಡುವುದಿಲ್ಲ. ಇಂಟರೆಸ್ಟ್ ಎಂದರೆ ಅಂತಿಮ ಹಿತ/ಗುರಿ ಎಂಬ ಅರ್ಥ ಬರುತ್ತದೆ. ಪ್ರತೀ ಮನುಷ್ಯನ ಇಂಟರೆಸ್ಟ್ ಅನ್ನು ಅಥವಾ ಅಂತಿಮ ಗುರಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿನ ವ್ಯವಸ್ಥೆಯನ್ನು ಹಾಕಿಕೊಳ್ಳಲಾಗಿದೆ. ಅಂತಿಮ ಗುರಿಯೇ ಗಾಡ್ನ ಲೋಕ. ಮನುಷ್ಯನೊಬ್ಬನಿಗೆ ಐಹಿಕ ಆಸಕ್ತಿಗಳೇ ಪ್ರಧಾನ ಎನ್ನಿಸುವುದು ಸ್ವಾಭಾವಿಕ. ಆದರೆ ಅದು ಡೆವಿಲ್ಲನ ಕ್ಷೇತ್ರ. ಅದು ಅವನ ಇಂಟರೆಸ್ಟ್/ಅಂತಿಮ ಗುರಿ ಆಗುವುದಿಲ್ಲ. ಅಂತಿಮ ಗುರಿ ಸಮಸ್ತ ಮಾನವರಿಗೇ ಸಾಮಾನ್ಯವಾದುದು. ಚರ್ಚು ಈ ಗುರಿಯನ್ನು ತಲುಪುವ ಸಂಸ್ಥೆಯಾಗಿದೆ. ಜನರ ಇಂಟರೆಸ್ಟ್ ಅನ್ನು ಗಮನದಲ್ಲಿಟ್ಟುಕೊಂಡು ಚರ್ಚೆಂಬ ಸಂಸ್ಥೆ ಹುಟ್ಟಿಕೊಂಡಿದೆ.

ಈ ಥಿಯಾಲಜಿಯ ಪರಿಕಲ್ಪನೆಯನ್ನಾಧರಿಸಿಯೇ ಆಧುನಿಕ ರಾಜಕೀಯ ವ್ಯವಸ್ಥೆಗಳು ಹಾಗೂ ಸೆಕ್ಯುಲರ್ ರಾಜಕೀಯ ಚಿಂತನೆಗಳು ಯುರೋಪಿನಲ್ಲಿ ಬೆಳೆದುಬಂದವು. ಆದರೆ ಅವುಗಳ ಭಾಷೆಯಲ್ಲಿ ಗಾಡ್ ಹಾಗೂ ಅವನ ಲೋಕ ಕಾಣೆಯಾದವು. ಸ್ಟೇಟ್ ಎಂಬುದು ಚರ್ಚಿಗೆ ಪರ್ಯಾಯವಾದ ಲೌಕಿಕ ವ್ಯವಸ್ಥೆಯಾಗಿ ರೂಪುಗೊಂಡಿತು. ಚರ್ಚಿನ ಪರಿಭಾಷೆಯನ್ನೇ ಮುಂದುವರಿಸಿದ ಈ ಸ್ಟೇಟ್ ಕೂಡ ತನ್ನ ಪ್ರಜೆಗಳಿಗೆ ಅಂತಿಮಗುರಿಯನ್ನು ತಲುಪಿಸುವುದು ತನ್ನ ಧ್ಯೇಯವೆಂಬುದಾಗಿ ಘೋಷಿಸಿಕೊಂಡಿತು. ಅಥವಾ ಪ್ರಜೆಗಳ ಇಂಟರೆಸ್ಟ್ ಅನ್ನು ಈಡೇರಿಸುವುದು ತನ್ನ ಸಂಸ್ಥೆಗಳ ಧ್ಯೇಯ ಎಂದಿತು. ಗಾಡ್ನನ್ನು ಬಿಟ್ಟು ಇಂಟರೆಸ್ಟ್ ಎಂಬ ಶಬ್ದಕ್ಕೆ ಏನು ಅರ್ಥ ಎಂಬುದು ಇಂದಿಗೂ ಜಿಜ್ಞಾಸೆಯಲ್ಲಿದೆ. ಆದರೂ ಕೂಡ ಕ್ರಿಶ್ಚಿಯಾನಿಟಿಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷ ಬೆಳೆದುಬಂದ ಭಾಷೆ ಹಾಗೂ ಅರ್ಥಪ್ರಪಂಚವನ್ನು ಪಾಶ್ಚಾತ್ಯ ಸೆಕ್ಯುಲರ್ ವಾದಿಗಳು ಬಳುವಳಿಯಾಗಿ ಪಡೆದಿದ್ದಾರೆ. ಹಾಗಾಗಿ ಸಮಸ್ತ ಮಾನವರಿಗೂ ಸಾಮಾನ್ಯವಾದ ಅಂತಿಮ ಗುರಿಯೊಂದಿದೆ ಎಂಬುದು ಅವರಿಗೆ ಪರಿಚಿತವಾದ ಪರಿಕಲ್ಪನೆಯಾಗಿದೆ. ಆದರೆ ಅದರ ಸೆಕ್ಯುಲರ್ ಸ್ವರೂಪ ಹೇಗಿರುತ್ತದೆ ಎಂಬುದನ್ನು ಕಂಡುಹಿಡಿಯುವ ಕೆಲಸವೊಂದು ಮಾತ್ರ ಬಾಕಿ ಇದೆ. ಆ ಮಟ್ಟಿಗೆ ಅದು ಅವರಿಗೂ ಅರ್ಥವಾಗಿಲ್ಲ.

ಪಾಶ್ಚಾತ್ಯ ಚಿಂತಕರ ತಲೆಯನ್ನೇ ಇಷ್ಟೊಂದು ತಿನ್ನುವ ಪರಿಕಲ್ಪನೆಯೊಂದು ಭಾರತೀಯರಿಗೆ ಅರ್ಥವಾಗಿಬಿಡಬೇಕು ಎಂಬುದು ಸ್ವಲ್ಪ ಅತಿಯಾದ ನಿರೀಕ್ಷೆಯೇ ಆಗುತ್ತದೆ. ರಿಲಿಜನ್ನುಗಳನ್ನು ಬಿಟ್ಟು ನೋಡುವಾಗ ನಿಜವಾಗಿಯೂ ಸಮಸ್ತ ಮಾನವರಿಗೆಲ್ಲ ಸಾಮಾನ್ಯವಾದ ಅಂತಿಮ ಗುರಿ ಇದೆಯೆ? ಖಾಸಗಿಯಾಗಿ ಈ ಹೇಳಿಕೆ ಅರ್ಥವಾಗಬಹುದು. ಆದರೆ ನಮ್ಮ ದೇಶದ ಎಲ್ಲಾ ಜನರಿಗೂ ಅದು ಇದೆ ಹಾಗೂ ಅದನ್ನು ತಲುಪುವುದೇ ಪ್ರಭುತ್ವದ ಗುರಿ, ಪ್ರಭುತ್ವದ ಸಂಸ್ಥೆಗಳ ಗುರಿ ಕೂಡ ಅದೇ ಆಗಿದೆ ಎಂದಾಕ್ಷಣ ‘ಅದು’ ಯಾವುದು ಎಂಬುದು ತಿಳಿವಿಗೆ ಬರಲಾರದು. ಕಡೇ ಪಕ್ಷ ನಮ್ಮಲ್ಲೂ ಒಂದು ರಿಲಿಜನ್ನು ಇದ್ದಿದ್ದರೆ ‘ಓ ಇದು ಅದಂತೆ’ ಎಂದು ಊಹೆಯನ್ನಾದರೂ ಮಾಡಬಹುದಿತ್ತು. ಇಂಥ ಸನ್ನಿವೇಶದಲ್ಲಿ ಆ ಪರಿಕಲ್ಪನೆಯನ್ನು ನಮ್ಮ ರಾಜಕೀಯದ ರಚನೆಗೆ ಬುನಾದಿಯಾಗಿ ಮಾಡಿಕೊಂಡಿದ್ದೇವೆ. ನಮ್ಮ ಹಿಂದಿನ ರಾಜಕೀಯ ರಚನೆಗಳನ್ನು ಕಿತ್ತು ಮೂಲೆಗೆ ಹಾಕಿದ್ದೇವೆ. ನಮಗೆ ಸಾಧ್ಯವಿರುವ ಒಂದೇ ಕ್ರಿಯೆಯೆಂದರೆ ಅರ್ಥವಾಗದ ಹೊಸ ರಚನೆಗಳನ್ನು ಹಿಡಿದುಕೊಂಡು ಹಳೆ ಕ್ರಮವನ್ನು ಅದರಲ್ಲಿ ಮುಂದುವರಿಸುವುದು.

ಉದಾಹರಣೆಗೆ ನಮ್ಮ ಜನರು ಪುರುಷಾರ್ಥ ಸಾಧನೆ ಎಂಬ ಪರಿಕಲ್ಪನೆಗೆ ಒಗ್ಗಿಕೊಂಡಿದ್ದಾರೆ. ಅಂದರೆ ಉದ್ಧಾರ/ಮೋಕ್ಷ ಎಂಬುದು ನಮ್ಮಲ್ಲಿ ವೈಯಕ್ತಿಕವಾದುದು. ವೈಯಕ್ತಿಕ ಪ್ರಯತ್ನದಿಂದ ಹಾಗೂ ಸಾಧನೆಯಿಂದ ಮಾತ್ರವೇ ಅದು ಸಾಧ್ಯ. ಪುರುಷಾರ್ಥಗಳಲ್ಲಿ ಅರ್ಥಸಾಧನೆ ಕೂಡ ಒಂದು. ಅಂದರೆ ಸಂಪತ್ತನ್ನು ಗಳಿಸುವುದು. ಸಾರ್ವಜನಿಕ ಇಂಟರೆಸ್ಟ್ ಎಂಬ ಕಲ್ಪನೆಯೇ ಇಲ್ಲದವರು ಬಹುಶಃ ನಮ್ಮ ಪ್ರಭುತ್ವವನ್ನು ತಮ್ಮ  ಪುರುಷಾರ್ಥದ ಸಾಧನೆಗಾಗಿ ಇರುವ ಹೊಸದೊಂದು ಅವಕಾಶ ಎಂಬಂತೇ ನೋಡುತ್ತಿದ್ದಾರೆ. ಅಂಥ ಸಂಪತ್ತನ್ನು ಧರ್ಮಕಾರ್ಯಗಳಿಗೆ ಅಷ್ಟೇ ಉತ್ಸಾಹದಿಂದ ವಿನಿಯೋಗಿಸುತ್ತಾರೆ. ಸ್ಪರ್ಧೆಯ ಮೇಲೆ ದೇವಾಲಯಗಳನ್ನು ಕಟ್ಟಿಸುತ್ತಾರೆ. ಹಾಗಾಗಿಯೇ ನಮ್ಮ ಸಾಂಪ್ರದಾಯಿಕ ಸಮಾಜ ಕೂಡ ಇಂಥ ಭ್ರಷ್ಟರನ್ನು ಗೌರವದಿಂದ, ಅಭಿಮಾನದಿಂದ ನೋಡುತ್ತದೆಯೇ ಹೊರತೂ ಅನೀತಿವಂತರೆಂದಲ್ಲ. ಆದರೆ ಏನು ಎಡವಟ್ಟಾಗಿದೆಯೆಂದರೆ ಇದು ಖಂಡಿತವಾಗಿಯೂ ನಮ್ಮ ಪ್ರಾಚೀನರು ಹೇಳಿದ ಆದರ್ಶವಂತೂ ಅಲ್ಲ. ಹೊಸ ಅರ್ಥವಾಗದ ರಚನೆಯನ್ನು ಸಾಂಪ್ರದಾಯಿಕ ಸಮಾಜದ ಮೇಲೆ ಹಾಕಿದಾಗ ಹೊಸ ವ್ಯವಸ್ಥೆಯಲ್ಲಿ ವಿಕೃತಿ ಉಂಟಾಗುವುದು ಹೇಗೆ ಸಹಜವೋ, ಹಾಗೇ ಹಳೆಯ ಜೀವನ ಕ್ರಮದಲ್ಲೂ ವಿಕೃತಿ ಉಂಟಾಗುವುದೂ ಅಷ್ಟೇ ಸಹಜ. ಅಂದರೆ ಇಂದು ನಾವು ಕಾಣುತ್ತಿರುವುದು ಭಾರತೀಯ ರಾಜ್ಯ ವ್ಯವಸ್ಥೆಯೂ ಅಲ್ಲ, ಪಾಶ್ಚಾತ್ಯ ರಾಜ್ಯ ವ್ಯವಸ್ಥೆಯೂ ಅಲ್ಲ, ಅವುಗಳ ಮಿಲನದಿಂದ ಹುಟ್ಟಿದ ಅವ್ಯವಸ್ಥೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: