ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 1: ಬದುಕಲಿಕ್ಕೆ ಆತಂಕಗಳು ಬೇಕೋ ಭರವಸೆಗಳು ಬೇಕೊ?

ಪ್ರೊ. ರಾಜಾರಾಮ ಹೆಗಡೆ.

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಒಂದು ಲೇಖನವನ್ನು ನೋಡುತ್ತಿದ್ದೆ. ಅದರಲ್ಲಿ ನರೇಂದ್ರ ಮೋದಿಯವರ ಜಯಭೇರಿಯಿಂದ ಭಾರತೀಯ ಮುಸ್ಲಿಮರಲ್ಲಿ ಆತಂಕ ಹಾಗೂ ಅಸ್ಥಿರತೆ ಹುಟ್ಟಿಕೊಂಡಿದೆ ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಕೇವಲ ಮುಸ್ಲಿಮರಿಗೊಂದೇ ಅಲ್ಲ, ಹಿಂದೂಗಳಲ್ಲೂ ಸೆಕ್ಯುಲರಿಸಂನ ಕಟ್ಟಾ ಪ್ರತಿಪಾದಕರಿಗೆ ಕೂಡಾ ಅದು ಅಷ್ಟೇ ಆತಂಕವನ್ನು ಸೃಷ್ಟಿಸಿದೆ ಎನ್ನುವುದು ಮೋದಿಯವರ ಕುರಿತ ಇವರ ಅಸಭ್ಯ ಪ್ರತಿಕ್ರಿಯೆಗಳಲ್ಲಿ ಕಂಡುಬಂದಿದೆ. ಇವೆರಡೂ ವಲಯಗಳಲ್ಲೂ ಹುಟ್ಟಿಕೊಂಡ ಆತಂಕಗಳಿಗೂ ನೆಲೆಯೊಂದೇ, ಸೆಕ್ಯುಲರ್ ತರ್ಕಗಳು. ಈ ಸಂದರ್ಭದಲ್ಲಿ ಏಳಬಹುದಾದ ಒಂದು ಪ್ರಶ್ನೆ ಎಂದರೆ, ಭಾರತೀಯ ರಾಜಕಾರಣದ ಕುರಿತ ಕಾಳಜಿಗಳಿಗೆ ಹಾಗೂ ವಿಶ್ಲೇಷಣೆಗೆ ಮತೀಯ ಚೌಕಟ್ಟನ್ನು ಬಿಟ್ಟರೆ ಬೇರೆ ನೆಲೆಯೇ ಇಲ್ಲವೆ? ಅದಕ್ಕೂ ಆದ್ಯವಾದ ಸಮಸ್ಯೆಗಳೇ ಇಲ್ಲಿನ ಹಿಂದೂ ಮುಸ್ಲಿಂ ಪ್ರಜಾಕೋಟಿಗೆ ಇಲ್ಲವೆ? ನಮ್ಮ ರಾಜಕೀಯ ಚಿಂತಕರಿಗೆ ಯಾವಾಗಲೂ ಅದೇ ಧ್ಯಾನವಾದರೆ ಈ ರಾಜಕಾರಣದಿಂದ ಹೊರಬರುವುದು ಹೇಗೆ?

          ಆ ಆತಂಕಗಳು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬುದನ್ನು ಪರಿಶೀಲಿಸುವುದಕ್ಕೂ ಮುನ್ನ ಒಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಅದೆಂದರೆ ಈ ಆತಂಕವು ಸೆಕ್ಯುಲರ್ ದೃಷ್ಟಿಕೋನವು ಹುಟ್ಟಿಸುವ ಆತಂಕವೇ ವಿನಃ ಸಾಮಾನ್ಯ ಹಿಂದೂ, ಮುಸ್ಲಿಮರದಲ್ಲ. ಅದು ಸಾಮಾನ್ಯರ ಆತಂಕವಾಗಿದ್ದರೆ ಎಲ್ಲರೂ ಕೂಗಿ ಕೂಗಿ ಎಚ್ಚರಿಸುತ್ತಿದ್ದರೂ ಕೂಡ ಭಾರತದ ಬಹುಸಂಖ್ಯಾತ ಮತದಾರರು ಕಳೆದ ಚುನಾವಣೆಯಲ್ಲಿ ಕೋಮುವಾದಿ ಎಂದು ಕರೆಸಿಕೊಂಡ ಪಕ್ಷವೊಂದನ್ನು ಬೆಂಬಲಿಸುವ ಮೂಲಕ ಹೀಗೆ ಹಳ್ಳಕ್ಕೆ ಬೀಳುತ್ತಿದ್ದರೆ? ಹಿಂದೂಗಳು ಹಿಂದೂ ಮತೀಯವಾದಕ್ಕೆ ವಾಲಿದರೆ ಆಶ್ಚರ್ಯವಿಲ್ಲ. ಆದರೆ ಸಾಕಷ್ಟು ಮುಸ್ಲಿಮರೂ ಕೂಡ ಬಿಜೆಪಿಗೆ ಮತ ಚಲಾಯಿಸಿರುವುದು ಸೋಜಿಗವಾಗಿದೆ. ಅಂದರೆ ಮುಸ್ಲಿಮರೂ ಕೂಡ ಹಿಂದೂ ಮತೀಯವಾದಕ್ಕೆ ವಾಲುತ್ತಿದ್ದಾರೆ ಅಂತಲೆ? ಕಣ್ಣೆದುರು ನಡೆದ ಸಂಗತಿಗಳನ್ನು ಅರ್ಥೈಸುತ್ತ ನಮ್ಮ ಲೋಕಜ್ಞಾನ ರೂಪುಗೊಳ್ಳಬೇಕೇ ವಿನಃ ಯಾವುದೋ ಕಲ್ಪನೆಗಳನ್ನಿಟ್ಟುಕೊಂಡು ನಮ್ಮ ಮೂಗಿನ ನೇರಕ್ಕೆ ಅರ್ಥಹಚ್ಚುವುದರಿಂದಲ್ಲ. ಮುಸ್ಲಿಮರಿಗೆ ಬಿಜೆಪಿ ಪರವಾಗಿ ಮತಚಲಾಯಿಸಲು ಏನೇ ಕಾರಣಗಳಿರಬಹುದು. ಒಂದು ಸತ್ಯವಂತೂ ಸ್ಪಷ್ಟವಾಗಿದೆ, ಅವರಿಗೆ ಆ ಕಾರಣಗಳ ಎದುರು ಹಿಂದೂ-ಮುಸ್ಲಿಂ ಎಂಬ ಸಂಗತಿಗಳು ಗೌಣವಾದವು ಎಂಬುದು. ಇದೇ ಬೆಳಕಿನಲ್ಲಿ ಹುಡುಕುತ್ತ ಹೋದರೆ ಬಿಜೆಪಿ ಪರವಾಗಿ ಮತಹಾಕಿದ ಹಿಂದೂಗಳಿಗೂ ಹಾಗೇ ಏಕೆ ಆಗಿರಲಾರದು? ಅಂದರೆ ಈ ಮತದಾನದಲ್ಲಿ ಬಹುತೇಕ ಮತದಾರರಿಗೆ ಮತೀಯವಾದವು ಗೌಣವಾಯಿತು ಎಂಬುದಾಗಿ ತರ್ಕ ಮಾಡಿದರೆ ತಪ್ಪೇನಿಲ್ಲ.    

          ಆದರೆ ಆತಂಕ ಪಡುವ ಮನಸ್ಸುಗಳಿಗೆ ಕಾರಣವೊಂದು ಯಾವಾಗಲೂ ಸಿದ್ಧವಾಗಿರುತ್ತದೆ. ಅದೊಂದು ಮಾನಸಿಕ ಸಮಸ್ಯೆ.      ಈ ಮಾನಸಿಕ ಸಮಸ್ಯೆಯು ಹತ್ತೊಂಭತ್ತನೆಯ ಶತಮಾನದಲ್ಲಿ ಭಾರತೀಯರ ರಾಷ್ಟ್ರೀಯ ರಾಜಕಾರಣ ಹುಟ್ಟಿದಾಗಲೇ ಹುಟ್ಟಿತು. ಏಕೆಂದರೆ ಭಾರತೀಯ ರಾಷ್ಟ್ರೀಯ ರಾಜಕಾರಣವೇ ಬ್ರಿಟಿಷ್ ಸೆಕ್ಯುಲರ್ ರಾಜಕಾರಣದ ಸೃಷ್ಟಿ. ಈ ರಾಜಕಾರಣವು ಕೆಲವು ಮೂಲಭೂತ ಗ್ರಹಿಕೆಗಳ ಮೇಲೆ ನಿಂತಿದೆ, ಅದೆಂದರೆ: 1. ಭಾರತದಲ್ಲಿ ಬಹುಸಂಖ್ಯಾತರ ರಿಲಿಜನ್ನು ಹಿಂದೂಯಿಸಂ. 2. ಹಿಂದೂಯಿಸಂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳ ಹಾಗೇ ಒಂದು ರಿಲಿಜನ್ನು. 3. ಒಂದು ರಿಲಿಜನ್ನು ಮತ್ತೊಂದು ರಿಲಿಜನ್ನಿಗೆ ಸದಾ ಅಪಾಯಕಾರಿಯಾಗಿದೆ. ಏಕೆಂದರೆ ಅದು ಮತೀಯ ದಬ್ಬಾಳಿಕೆ ಮಾಡಬಹುದು, ಮತ ಪರಿವರ್ತನೆ ಮಾಡಬಹುದು. ಅದಕ್ಕಿಂತ ಹೆಚ್ಚಾಗಿ ತನ್ನ ಮತವನ್ನೇ ಪ್ರಭುತ್ವದ ಮತವನ್ನಾಗಿ ಮಾಡಿದರೆ ಉಳಿದ ಮತದವರು ಅಧಿಕಾರ ಹೀನರಾಗತ್ತಾರೆ. ವಾಸ್ತವಿಕವಾಗಿ ನೋಡಿದರೆ ಈ ಯಾವ ಗ್ರಹಿಕೆಗಳಿಗೂ ಭಾರತೀಯ ಇತಿಹಾಸದಲ್ಲಿ ನಿದರ್ಶನಗಳಿಲ್ಲ. ನಮ್ಮ ಇತಿಹಾಸದಲ್ಲಿ ಆಗಿಹೋದ ರಾಜ್ಯಗಳು ಎಲ್ಲಾ ಮತಗಳನ್ನೂ ಪೋಷಣೆ ಮಾಡಿದ್ದವು. ಸೆಕ್ಯುಲರಿಸಂ ಎಂಬ ನೀತಿಯು ಭಾರತೀಯರಿಗೆ ಗೊತ್ತಾಗುವುದಕ್ಕೂ ಪೂರ್ವದಲ್ಲೇ ಮುಸ್ಲಿಂ ಹಾಗೂ ಕ್ರೈಸ್ತ ಮತಗಳನ್ನೂ ಇಲ್ಲಿನ ರಾಜರು ಪೋಷಣೆ ಮಾಡಿದ್ದರು. ಒಂದು ಮತವನ್ನು ಕಾರಣವನ್ನಾಗಿ ಇಟ್ಟುಕೊಂಡು ಅದರ ಅನುಯಾಯಿಗಳನ್ನು ಪ್ರಭುತ್ವವು ಹತ್ತಿಕ್ಕಿದ್ದಕ್ಕೆ ಒಂದು ಉದಾಹರಣೆಯೂ ಹಿಂದೂ ಇತಿಹಾಸದಲ್ಲಿ ಸಿಗುವುದಿಲ್ಲ. ಏಕೆಂದರೆ ಮತೀಯ ಪ್ರಭುತ್ವವೆಂಬುದು ಇವರಿಗೆ ಗೊತ್ತಿಲ್ಲದ ವಿಷಯ. ಮತಪರಿವರ್ತನೆಯಂತೂ ಇವರಿಗೆ ಇಂದಿಗೂ ಅರ್ಥವಾಗದ ವಿಷಯ. ಏಕೆಂದರೆ ಹಿಂದೂಯಿಸಂ ಒಂದು ರಿಲಿಜನ್ನಲ್ಲ.

          ಆದರೆ ಕ್ರೈಸ್ತ ಇಸ್ಲಾಂ ರಿಲಿಜನ್ನುಗಳಿಗೆ ಇಂಥವು ತುಂಬಾ ಚೆನ್ನಾಗಿ ಗೊತ್ತಿರುವ ವಿಷಯಗಳಾಗಿವೆ. ಈ ಹಿನ್ನೆಲೆಯಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರು ಹಿಂದೂಯಿಸಂ ಎಂಬ ಒಂದು ರಿಲಿಜನ್ನನ್ನು ಭಾವಿಸಿಕೊಂಡಾಗ ಅವುಗಳಿಗೆ ಅದರ ಕುರಿತ ನಿರೀಕ್ಷೆಗಳು, ಆತಂಕಗಳು ಏನೇನಿರುತ್ತವೆ ಎಂಬುದು ಸ್ಪಷ್ಟ. ಇಂಥ ಆತಂಕಗಳಿಗೆ ಪ್ರತಿಬಂಧಕವಾಗಿ ಪಾಶ್ಚಾತ್ಯರು ರಚಿಸಿಕೊಂಡ ಸೆಕ್ಯುಲರಿಸಂ ಭಾರತದಲ್ಲಿ ನೀತಿಯಾದಾಗ ಹಿಂದೂ ವಿದ್ಯಾವಂತರೂ ಕೂಡ ಆ ಆತಂಕವನ್ನು ಬಳುವಳಿಯಾಗಿ ಪಡೆದರು. ಆದರೆ ಅವರಿಗೆ ಹಿಂದೂಯಿಸಂ ಒಂದು ಇಸ್ಲಾಂ ಥರದ ರಿಲಿಜನ್ನಾಗಿ ಕಾಣಿಸಲಿಲ್ಲ. ಅದು ಹಿಂದೂಯಿಸಂನ ದೌರ್ಬಲ್ಯ ಎಂಬುದಾಗಿ ಭಾವಿಸಿ ಅದರ ಪುನರುತ್ಥಾನಕ್ಕೆ ಪ್ರಯತ್ನಿಸತೊಡಗಿದರು.           ಹತ್ತೊಂಭತ್ತನೆಯ ಶತಮಾನದ ಅಂತ್ಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಸ್ಥಾಪನೆಯಾದಾಗಲೇ ಸರ್ ಸಯ್ಯದ್ ಅಹ್ಮದ್ ಖಾನ್ ಎಂಬ ಮುಂದಾಳು ಅದು ಹಿಂದೂಗಳ ಪಕ್ಷ, ಅದು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಅನ್ಯಾಯವಾಗುತ್ತದೆ ಎಂದು ಭೀತಿಗೊಂಡದ್ದು ಕಂಡುಬರುತ್ತದೆ. ಅಲ್ಲಿಂದ ಮುಸ್ಲಿಂ ಪ್ರತ್ಯೇಕತಾವಾದ ಪ್ರಾರಂಭವಾಯಿತು. ಮುಸ್ಲಿಂ ಮುಂದಾಳುಗಳು ರಿಲಿಜನ್ನನ್ನು ಜನಾಂಗಕ್ಕೆ ತಳಕುಹಾಕಿದ್ದು ಕಂಡುಬರುತ್ತದೆ. ಒಂದು ರಿಲಿಜನ್ನನ್ನು ಹೊಂದಿದವರು ಒಂದು ಜನಾಂಗ ಎಂದು ಈ ಮುಂದಾಳುಗಳು ಭದ್ರವಾಗಿ ನಂಬಿದ್ದರು. ಅದಕ್ಕೆ ಕಾರಣ ಅವರ ಭ್ರಾತೃತ್ವದ ಕಲ್ಪನೆ. ಹಿಂದೂಗಳೂ ಕೂಡ ಒಂದೇ ರಿಲಿಜನ್ನಿಗೆ ಸೇರಿದ್ದರಿಂದ ಒಂದೇ ಜನಾಂಗ ಎಂದು ಭಾವಿಸುತ್ತಾರೆ ಎಂಬುದಾಗಿ ಅವರು ತಿಳಿದಿದ್ದರು. ಹಾಗಾಗಿ ತಮ್ಮ ಜನಾಂಗಕ್ಕೆ ಪ್ರತ್ಯೇಕ ರಾಷ್ಟ್ರ ಬೇಕು, ಅದಿಲ್ಲದಿದ್ದರೆ ಅದು ಹಿಂದೂ ಜನಾಂಗಕ್ಕೆ ಅಧೀನವಾಗಬೇಕಾಗುತ್ತದೆ ಎಂಬುದಾಗಿ ಅವರು ಪ್ರತಿಪಾದಿಸಿದರು. (ಜಿನ್ನಾರ ಬರವಣಿಗೆಗಳಲ್ಲಿ ಈ ವಿಚಾರವು ಸ್ಪಷ್ಟವಾಗಿದೆ.) ಮುಸ್ಲಿಮರ ಹಿತರಕ್ಷಣೆಗಾಗಿ ಮುಸ್ಲಿಂ ಲೀಗು ಸ್ಥಾಪನೆಯಾಯಿತು. ಆದರೆ ಹಿಂದೂಗಳು ರಾಷ್ಟ್ರೀಯ ಕಾಂಗ್ರೆಸ್ಸನ್ನು ಹಿಂದೂ ಲೀಗು ಎಂದೇಕೆ ಕರೆದುಕೊಂಡಿರಲಿಲ್ಲ ಎಂಬುದರ ಕುರಿತು ಅವರು ಗಮನ ಹರಿಸಲಿಲ್ಲ. ಮುಸ್ಲಿಂ ಜನಾಂಗದ ಹಿತರಕ್ಷಣೆಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಪಡೆದುಕೊಂಡರು. ನಂತರ ಪ್ರತ್ಯೇಕ ರಾಷ್ಟ್ರವನ್ನೇ ಪಡೆದುಕೊಂಡರು.

          ಅಷ್ಟಾಗಿಯೂ ಮುಸ್ಲಿಂ ಮುಂದಾಳುಗಳ ಹಾಗೂ ಚಿಂತಕರ ಆತಂಕ ದೂರವಾಗಲಿಲ್ಲ. ಸ್ವತಂತ್ರ ಭಾರತದಲ್ಲಿರುವ ಮುಸ್ಲಿಮರ ಗತಿ ಮುಂದೇನು? ಆ ಆತಂಕವನ್ನೂ ಪರಿಹರಿಸುವಂತೆ ಸ್ವಾತಂತ್ರ್ಯಾನಂತರ ಭಾರತವು ಹಿಂದೂ ರಾಷ್ಟ್ರವಾಗಲಿಲ್ಲ, ಸೆಕ್ಯುಲರ್ ರಾಷ್ಟ್ರವಾಯಿತು. ಅಲ್ಪಸಂಖ್ಯಾತ ರಿಲಿಜನ್ನುಗಳಿಗೆ ಬಹುಸಂಖ್ಯಾತ ರಿಲಿಜನ್ನಿನಿಂದ ಅಪಾಯವಾಗಬಾರದು ಎಂದು ಭಾವಿಸಿ ವಿಶೇಷ ನೀತಿಯನ್ನು ಅಳವಡಿಸಿಕೊಳ್ಳಲಾಯಿತು. ಅಷ್ಟಾಗಿಯೂ ಇಂದಿಗೂ ಕೂಡ ಪ್ರತೀ ಚುನಾವಣೆಯಲ್ಲೂ ಈ ಬಹುಸಂಖ್ಯಾತರ ಕುರಿತ ಭಯವು ಜಾಗೃತವಾಗುತ್ತದೆ ಹಾಗೂ ಅದು ಚುನಾವಣೆಗಳಿಗೆ ಒಂದು ಅಘೋಷಿತ ನೆಲೆಯಾಗುತ್ತದೆ. ಒಂದು ಬಾರಿ ಕಾಂಗ್ರೆಸ್ಸು ಆಳ್ವಿಕೆಗೆ ಬರಲಿಲ್ಲ ಎಂದರೆ ಏನೋ ಆತಂಕ. ಹಿಂದುತ್ವವನ್ನು ಎತ್ತಿಹಿಡಿಯುವ ಪಕ್ಷಗಳು ಬಂದರಂತೂ ಆ ಆತಂಕವು ಇಮ್ಮಡಿಯಾಗುತ್ತದೆ. ಇದೊಂದು ಶಾಶ್ವತ ಆತಂಕವೇ ಸರಿ. ಏಕೆಂದರೆ ಪ್ರಜಾ ಪ್ರಭುತ್ವದ ನಿಯಮಕ್ಕನುಸಾರವಾಗಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯಲೇಬೇಕಲ್ಲ. ಒಂದೇ ಪಕ್ಷವೇ ಆಡಳಿತಕ್ಕೆ ಬರಲು ಇದೇನು ವಂಶಪಾರಂಪರ್ಯವಾದ ಆಳ್ವಿಕೆಯಲ್ಲವಲ್ಲ. ವಿರೋಧೀ ಪಕ್ಷಗಳಿಗೂ ಅವುಗಳ ಕಾಲ ಇದ್ದೇ ಇದೆ. ಹಾಗಾಗಿ ಪ್ರಜಾಪ್ರಭುತ್ವದ ತರ್ಕವನ್ನೊಪ್ಪಿಕೊಂಡರೆ ಮುಸ್ಲಿಮರ ಆತಂಕ ನಿವಾರಣೆಯಾಗುವ ಸೂಚನೆಗಳಿಲ್ಲ. ಬದಲಾಗಿ ಇಂಥ ನಿರೀಕ್ಷೆಗಳಲ್ಲೇ ತೊಂದರೆಯಿದೆ ಎಂಬುದನ್ನು ಆತಂಕಪಡುವವರು ಅರಿಯುವ ಅಗತ್ಯವಿದೆ.

           ಹಿಂದೂ ಮುಸ್ಲಿಂ ಗಲಭೆಗಳು ಸ್ವತಂತ್ರ ಭಾರತದ ದುರಂತಗಳು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವು ಸೆಕ್ಯುಲರ್ ರಾಜಕಾರಣದ ಸೃಷ್ಟಿಗಳು ಎಂಬುದೂ ಅಷ್ಟೇ ನಿಜ. ಈ ಮೇಲೆ ತಿಳಿಸಿದ ಆತಂಕವೇ ಇವರಿಬ್ಬರ ನಡುವಣ ಪರಸ್ಪರ ಸಂದೇಹ ಹಾಗೂ ವೈರತ್ವಕ್ಕೆ ಬುನಾದಿಯಾಗಿದೆ ಅಷ್ಟೇ ಅಲ್ಲ ಅದನ್ನು ನೀರೆರೆದು ಪೋಷಿಸುತ್ತಿದೆ. ಆದರೆ ಈ ಗಲಭೆಗಳು ತನ್ನದೇ ಸೃಷ್ಟಿ ಎಂಬುದನ್ನು ಸೆಕ್ಯುಲರ್ ರಾಜಕಾರಣ ಗಮನಿಸುವುದಿಲ್ಲ. ಈ ರಾಜಕಾರಣದ ಜಪವೆಂದರೆ ಹಿಂದೂಯಿಸಂ ಎನ್ನುವ ರಿಲಿಜನ್ನಿನಿಂದ ಅಲ್ಪಸಂಖ್ಯಾತ ರಿಲಿಜನ್ನುಗಳನ್ನು ಬಚಾವು ಮಾಡಬೇಕು. ಹಿಂದೂ ಬಹುಸಂಖ್ಯಾತರು ಯಾವುದೇ ಸಮಯದಲ್ಲೂ ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಹತ್ತಿಕ್ಕುವ ಸಾಧ್ಯತೆ ಇರುತ್ತದೆ. ನಮ್ಮ ಸೆಕ್ಯುಲರ್ ಸರ್ಕಾರವು ಈ ಜಪವನ್ನು ಬೆಳಿಗ್ಗೆ ಸಂಜೆ ಮಾಡಿದ್ದರಿಂದ ಅಲ್ಪಸಂಖ್ಯಾತರಿಗೇನೂ ಆತ್ಮ ವಿಶ್ವಾಸ ಬಂದಂತೆ ಕಾಣುವುದಿಲ್ಲ. ಬದಲಾಗಿ ಅವರಲ್ಲಿ ದಿನೇ ದಿನೇ ಅಸ್ಥಿರತೆ ಹೆಚ್ಚುತ್ತಿದೆ. ಅವರೊಂದೇ ಅಲ್ಲ ಅವರ ಬೆಂಬಲಕ್ಕೆ ನಿಂತ ಸೆಕ್ಯುಲರ್ ವಾದಿಗಳು ಕೂಡ ವಿನಾ ಕಾರಣವಾಗಿ ಹಿಂದೂಯಿಸಂ ಕುರಿತು ಭೀತರಾಗಿದ್ದಾರೆ. ಹಿಂದೂಯಿಸಂ ಎಂಬ ಹುಲಿಯು ಹಿಂದುತ್ವ ಎಂಬ ರೂಪಧರಿಸಿ ಅಲ್ಪಸಂಖ್ಯಾತ ಹುಲ್ಲೆಗಳ ಮೇಲೆ ಈಗ ಎರಗುತ್ತದೆ, ಆಗ ಎರಗುತ್ತದೆ ಎಂಬುದಾಗಿ ಊಹಿಸಿಕೊಳ್ಳುತ್ತ ಇರುವುದೊಂದು ಜೀವನ ಕ್ರಮವಾಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ನರೇಂದ್ರ ಮೋದಿ ಎಂಬ ರೂಪದಲ್ಲಿ ಅದು ಭಾರತವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೇ ಕಾಣಿಸಿದರೆ ಆಶ್ಚರ್ಯವಿಲ್ಲ.

          ಆದರೆ ಇದೇ ನಿಜವಾಗಿದ್ದರೆ ಪರಿಸ್ಥಿತಿ ಬೇರೆ ಥರ ಇರುತ್ತಿತ್ತು. ಅದು ಈಗ ಇರುವ ಥರವನ್ನು ಗಮನಿಸಿದರೆ ಈ ಮೇಲಿನ ತರ್ಕದಲ್ಲಿ ಏನೋ ಎಡವಟ್ಟಾಗಿದೆ ಅನ್ನಿಸದೇ ಇರದು. ಹಿಂದುಗಳಿಗೂ ಅಲ್ಪಸಂಖ್ಯಾತರಷ್ಟೇ ಅಥವಾ ಅವರಿಗಿಂತಲೂ ಹೆಚ್ಚಿಗೆ ಅಸ್ಥಿರತೆಯನ್ನು ಹಾಗೂ ಭೀತಿಯನ್ನು ಈ ರಾಜಕಾರಣವು ಹುಟ್ಟುಹಾಕಿದೆ. ಅಂದರೆ ಬಹುಸಂಖ್ಯಾತರೆನ್ನಿಸಿಕೊಂಡ ಹಿಂದೂಗಳ ಮುಂದಾಳುಗಳೂ ಭಯಭೀತರಾಗಿದ್ದಾರೆ. ಇದು ಹೇಗಿದೆಯೆಂದರೆ ಹುಲ್ಲೆ ಮಾತ್ರ ಹುಲಿಗೆ ಭೀತವಾಗಿಲ್ಲ, ಹುಲಿಯೇ ಹುಲ್ಲೆಯನ್ನು ಕಂಡು ನಡುಗುತ್ತಿದೆ ಎಂಬುದು ಅದಕ್ಕೂ ಹೆಚ್ಚಿನ ವಾಸ್ತವ. ಅದು ಹುಲಿಯ ಆಕ್ರಮಣದ ಲಕ್ಷಣ ಎಂದು ಭ್ರಮಿಸುವುದಕ್ಕಿಂತ ಅವೆರಡನ್ನೂ ಹುಲಿ ಹುಲ್ಲೆ ಎಂದು ಭಾವಿಸಿರುವುದರಲ್ಲೇ ಎಡವಟ್ಟಾಗಿದೆ ಎಂಬುದನ್ನು ಮೊದಲು ಗುರುತಿಸಬೇಕು. ಅಂದರೆ ಈ ಎರಡು ಸಮುದಾಯಗಳ ನಡುವೆ ಪರಸ್ಪರ ಭಯ, ಪೈಪೋಟಿ, ಅಸೂಯೆ, ವೈರತ್ವ ಹಾಗೂ ಸಂದೇಹಗಳನ್ನು ಬೆಳೆಸುವಲ್ಲಿ ಈ ರಾಜಕಾರಣವು ಯಶಸ್ವಿಯಾಗಿದೆ. ಒಂದು ರಾಷ್ಟ್ರದ ಪ್ರತೀ ಪ್ರಜೆಯನ್ನೂ ಭೀತಿಯಲ್ಲಿ ಕೆಡವಿರುವ ಈ ಸೆಕ್ಯುಲರ್ ತರ್ಕಗಳೇ ಗೋದ್ರೋತ್ತರ ಗಲಭೆಯ ಹಿಂದಿವೆ ಎಂಬುದನ್ನು ಗಮನಿಸಬೇಕು. ಅದರ ಬದಲಾಗಿ ಬಹುಸಂಖ್ಯಾತರ ದುಷ್ಟತನ ಎಂದು ಅದನ್ನು ಬಣ್ಣಿಸಿದರೆ ಮುಸ್ಲಿಮರಿಗೆ ಉಪಕಾರವಾಗುವುದು ಅಷ್ಟರಲ್ಲೇ ಇದೆ.

          ಈ ಆತಂಕದಿಂದ ಮುಸ್ಲಿಮರನ್ನು ಹಾಗೂ ಹಿಂದೂಗಳನ್ನು ಹೊರತರಬೇಕಾದರೆ ಭಾರತೀಯ ಸೆಕ್ಯುಲರ್ ರಾಜಕೀಯವು ಒಂದು ಅಜ್ಞಾನದ ಮೇಲೆ ನಿಂತಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಅದೆಂದರೆ ಹಿಂದೂಯಿಸಂ ಕೂಡ ಕ್ರೈಸ್ತ, ಇಸ್ಲಾಂಗಳಂತೇ ಒಂದು ರಿಲಿಜನ್ನು ಎಂಬ ಅಜ್ಞಾನ. ಈ ದೇಶದಲ್ಲಿರುವ ಮುಸ್ಲಿಮರು ತಮ್ಮ ನೆರೆಹೊರೆಯವರ ಜೊತೆಗೆ ಸಾವಿರಾರು ವರ್ಷ ತಮ್ಮ ಸಹಬಾಳ್ವೆಯನ್ನು ರೂಪಿಸಿಕೊಂಡು ಬಂದಿರುವುದಕ್ಕೆ ಸೆಕ್ಯುಲರ್ ನೀತಿ ಕಾರಣವಲ್ಲ. ಹಿಂದೂ ಸಮಾಜದ ಸಹಬಾಳ್ವೆಯ ಪರಂಪರೆಯೇ ಕಾರಣ. ವೈವಿಧ್ಯತೆಗಳು ಈ ಸಮಾಜಕ್ಕೆ ಎಂದೂ ಸವಾಲೇ ಆಗಿಲ್ಲ. ವೈವಿಧ್ಯತೆಯನ್ನೇ ತನ್ನ ಸ್ವರೂಪವನ್ನಾಗಿ ಉಳ್ಳ ಸಂಸ್ಕೃತಿಯೊಂದಕ್ಕೆ ವೈವಿಧ್ಯತೆ ಸವಾಲಾಗುವುದು ಹೇಗೆ ಸಾಧ್ಯ? ಇಸ್ಲಾಂ ಭಾರತಕ್ಕೆ ಬಂದು ಸಾವಿರ ವರ್ಷಗಳಾಗಿವೆ. ಬಂದ ಹೊಸದರಲ್ಲಿ ಅದು ಹಿಂದೂ ಸಂಸ್ಕೃತಿಯ ಮೇಲೆ ಸಾಕಷ್ಟು ದಾಳಿಗಳನ್ನು ನಡೆಸಿತು. ಪೂಜಾಸ್ಥಳಗಳನ್ನು ಹಾಳುಗೆಡವಿತು. ಆದರೆ ಈ ಯಾವ ಘಟನೆಗಳು ಕೂಡ ಈ ಸಂಸ್ಕೃತಿಯ ಸಹಬಾಳ್ವೆಗೆ ಸವಾಲಾಗಿಲ್ಲ. ಇಸ್ಲಾಂ ಕೂಡ ಭಾರತದ ಒಂದು ಸಂಪ್ರದಾಯವಾಗಿ ಇಲ್ಲಿ ಬೆರೆತು ಹೋಯಿತು. ಮುಸ್ಲಿಂ ರಾಜರು ಕೂಡ ಹಿಂದೂ ದೇವಾಲಯಗಳನ್ನು, ಮಠಗಳನ್ನು ಪೋಷಿಸುವುದನ್ನು ಈ ಸಂಸ್ಕೃತಿಯಲ್ಲಿ ಕಲಿತರು. ಹಿಂದೂ ಮುಸ್ಲಿಮರೆಲ್ಲ ಸೇರಿ ಆಚರಿಸುವ ಪೂಜಾಸ್ಥಳಗಳು ಭಾರತದ ತುಂಬೆಲ್ಲ ತಲೆಯೆತ್ತಿದವು. ನಮ್ಮ ದಾರ್ಶನಿಕರೆಲ್ಲ ಮೋಕ್ಷಕ್ಕೆ ಇಸ್ಲಾಂ ಕೂಡ ತಮ್ಮಂಥದ್ದೇ ಒಂದು ಮಾರ್ಗ ಎಂದೇ ಪ್ರತಿಪಾದಿಸಿದ್ದಾರೆ. ಇದೆಲ್ಲ ಸೆಕ್ಯುಲರ್ ಆದರ್ಶಗಳಲ್ಲ. ಅದಕ್ಕೂ ಪೂರ್ವದಲ್ಲಿ ನಡೆದ ಸಂಗತಿ. ಬಹುಶಃ ಭಾರತೀಯ ರಾಜಕೀಯದಲ್ಲಿ ತೀರಾ ಅಪ್ರಸ್ತುತ ವಿಚಾರವೊಂದಿದ್ದರೆ ಅದು ಮತೀಯ ಸಾಮರಸ್ಯದ ಕುರಿತ ಆತಂಕ. ರಿಲಿಜನ್ನುಗಳಿರುವ ಪ್ರಭುತ್ವಗಳನ್ನು ತ್ರಾಹಿ ತ್ರಾಹಿ ಎನ್ನಿಸುವ ಸಮಸ್ಯೆಯೊಂದು ನಮಗೆ ಪ್ರಸ್ತುತವೇ ಆಗದಂತೆ ನಮ್ಮ ಪೂರ್ವಜರು ನಮ್ಮ ಸಮಾಜವನ್ನು ರೂಪಿಸಿಕೊಟ್ಟಿದ್ದಾರೆ ಎಂಬುದನ್ನು ವಿದ್ಯಾವಂತ ಹಿಂದೂ ಮುಸ್ಲಿಮರಿಬ್ಬರೂ ಗುರುತಿಸಬೇಕು.

          ಹಿಂದೂ ಸಂಸ್ಕೃತಿಯನ್ನು ಕೇವಲ ನಕಾರಾತ್ಮಕವಾಗಿ ನೋಡುವ ಆಧುನಿಕ ಪೃವೃತ್ತಿಯಿಂದಾಗಿ ನಮ್ಮ ಈ ಸಾಂಪ್ರದಾಯಿಕ ತಿಳುವಳಿಕೆಯ ಕುರಿತು ಅನೇಕರಿಗೆ ವಿಶ್ವಾಸ ಹೊರಟುಹೋದಂತೇ ಕಾಣುತ್ತದೆ. ಆದರೆ ನಮ್ಮ ಇತಿಹಾಸವನ್ನು ಗಮನಿಸಿದವನೊಬ್ಬನಿಗೆ ಮತೀಯ ಸಹಬಾಳ್ವೆಗೆ ಸಂಬಂಧಿಸಿದಂತೇ ಭಾರತೀಯ ಸಂಪ್ರದಾಯಗಳ ಕುರಿತು ಅವಿಶ್ವಾಸ ಮೂಡಲು ಸಾಧ್ಯವಿಲ್ಲ. ಯಾವ ಸಂಸ್ಕೃತಿಯು ಕೂಡ ಇದಕ್ಕೂ ಹೆಚ್ಚು ರಕ್ಷಣೆಯನ್ನು ಹಾಗೂ ಭರವಸೆಯನ್ನು ತನ್ನ ವೈವಿಧ್ಯಪೂರ್ಣ ಸಮಾಜಗಳಿಗೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಜಗತ್ತಿನ ಇತಿಹಾಸ ತೋರಿಸಿದೆ. ಹಿಂದೂ ಸಮಾಜದಲ್ಲಿ ಫ್ಯಾಸಿಸಂ, ನಾಝಿಸಂಗಳು, ಮತಯುದ್ಧಗಳು ಹುಟ್ಟಿಲ್ಲ, ಹುಟ್ಟಲು ಸಾಧ್ಯವಿಲ್ಲ. ರಿಲಿಜನ್ನಿನ ಹೆಸರನ್ನು ಹೇಳಿಕೊಂಡು ಭಯೋತ್ಪಾದನೆಯಾಗಲೀ, ದಮನಗಳಾಗಲೀ ಆಗಿಲ್ಲ, ಆಗಲು ಕೂಡ  ಸಾಧ್ಯವಿಲ್ಲ. ಏಕೆಂದರೆ ಇದು ರಿಲಿಜನ್ನಲ್ಲ. ಯಾವುದೋ ಒಂದು ಗೋದ್ರೋತ್ತರ ಗಲಭೆಯನ್ನು ಹಿಡಿದುಕೊಂಡು ಭಾರತೀಯ ಇತಿಹಾಸವನ್ನು ಅಳೆಯಲು ಸಾಧ್ಯವಿಲ್ಲ. ಭಾರತೀಯ ಸಾಮಾನ್ಯ ಹಿಂದೂಗಳು ಮುಸ್ಲಿಂ ಭಯೋತ್ಪಾದಕರ ದಾಳಿಯ ಅನೇಕ ಉದಾಹರಣೆಗಳಲ್ಲಿ ಸಾಕಷ್ಟು ಆಘಾತವನ್ನು, ಸಾವು ನೋವನ್ನು ಅನುಭವಿಸಿದ್ದಾರೆ. ಅಷ್ಟಾಗಿಯೂ ಕೂಡ ಇಸ್ಲಾಂ ಭಯೋತ್ಪಾದನೆಯನ್ನು ಮುಸ್ಲಿಮರಿಂದ ಪ್ರತ್ಯೇಕಿಸಿ ನೋಡಬಲ್ಲಷ್ಟು ವಿವೇಕವನ್ನು ಉಳಿಸಿಕೊಂಡಿದ್ದಾರೆ ಎಂಬುದು ಬನಾರಸ್, ಬಾಂಬೆ ಇತ್ಯಾದಿ ಸ್ಥಳಗಳಲ್ಲಿ ನಡೆದ ದಾಳಿಗಳ ನಂತರ ಅವರು ತಮ್ಮನ್ನು ಸಂಯಮಿಸಿಕೊಂಡ ರೀತಿಯಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ಭಾರತೀಯ ಮುಸ್ಲಿಮರೂ ಕೂಡ ಬಹಿರಂಗವಾಗಿ ಭಯೋತ್ಪಾದಕರಿಂದ ತಮ್ಮನ್ನು ದೂರವಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿರುವುದೂ, ಹಿಂದುತ್ವದ ಹಿನ್ನೆಲೆಯಿರುವ ಪಕ್ಷದೊಂದಿಗೆ ಕೂಡ ತಮ್ಮನ್ನು ಗುರುತಿಸಿಕೊಳ್ಳುವುದನ್ನೂ ಕಾಣಬಹುದು. ನೂರಾರು ವರ್ಷಗಳ ಸಹಬಾಳ್ವೆಯಿಂದ ಹುಟ್ಟಿದ ಪರಸ್ಪರರ ಕುರಿತ ತಿಳುವಳಿಕೆ ಇವರಿಬ್ಬರ ನಡೆಯನ್ನು ನಿರ್ಧರಿಸಿದೆ. ಈ ತಿಳುವಳಿಕೆಯ ಮೇಲೆ ವಿಶ್ವಾಸ ಬೆಳೆಸುವ ನಿಟ್ಟಿನಲ್ಲಿ ಯೋಚಿಸಿದರೆ ಮಾತ್ರ ಭಾರತೀಯ ಸಮಾಜವು ಸಮಕಾಲೀನ ಭಯೋತ್ಪಾದನೆಯ ಸವಾಲುಗಳನ್ನು ಎದುರಿಸಿ ದಾಟಬಲ್ಲದು.

          ಬಹುಶಃ ಪ್ರಜೆಗಳು ಮತೀಯ ರಾಜಕಾರಣದ ಈ ಹಳೆಯ ಪ್ರಯೋಗಗಳ ಮಿತಿಗಳನ್ನು ಕಂಡುಕೊಂಡಿದ್ದಾರೆ ಹಾಗೂ ಹೊಸ ಭರವಸೆಗಳಿಗೆ ಹಾಗೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ನಮ್ಮ ರಾಜಕೀಯ ಹಾಗೂ ಸಾಮಾಜಿಕ  ಚಿಂತಕರು ಈ ಚಲನಶೀಲತೆಯನ್ನು ಗುರುತಿಸಿ ಸ್ಪಂದಿಸುವಷ್ಟು ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ.

Advertisements
Categories: Uncategorized
 1. ಜನವರಿ 21, 2015 ರಲ್ಲಿ 2:04 ಅಪರಾಹ್ನ

  ಹಿಂದುಗಳು ಕುರಿಗಳಂತಾಗಿರುವುದೇ ನಮ್ಮೆಲ್ಲಾ ಸಮಸ್ಯೆಗಳ ಮೂಲ ಕಾರಣ.
  ಹಿಂದು ಸಮಾಜವು ಸಂಘಟಿತವಾಗಿದ್ದಿದ್ದಲ್ಲಿ 1947ರ ವಿಭಜನೆ ಆಗುತ್ತಿರಲಿಲ್ಲ.
  ಹಿಂದು ಸಮಾಜವು ಸಂಘಟಿತವಾಗಿದ್ದಿದ್ದಲ್ಲಿ ಬ್ರಿಟಿಷರಾಗಲೀ ಅಥವಾ ಯೂರೋಪಿನ ಇನ್ಯಾವುದೇ ದೇಶವಾಗಲೀ ನಮ್ಮನ್ನಾಳಲು ಆಗುತ್ತಲೇ ಇರಲಿಲ್ಲ.

  ಗೋಧ್ರಾ ಘಟನೆಯ ನಂತರ ಯಾವುದೇ ಹಿಂಸಾತ್ಮಕ ಘಟನೆಗಳು ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.
  ಅದೇ ಸಮಯದಲ್ಲಿ, ಬಿಹಾರ್, ಉತ್ತರ ಪ್ರದೇಶ ಮುಂತಾದ ಸ್ಥಳಗಳಲ್ಲಿ ಅನೇಕ ಧಂಗೆಗಳು ನಡೆದವು.
  ಹಿಂದು ಸಮಾಜವು ಸಂಘಟಿತವಾಗಿದೆ, ತನ್ನ ಮೇಲಾದ ಆಕ್ರಮಣಗಳನ್ನು ತೆಪ್ಪಗೆ ಸಹಿಸದು ಎನ್ನುವ ಸಂದೇಶ ಗೋಧ್ರಾ ಘಟನೆಯ ಸಂದರ್ಭದಲ್ಲಿ ಮುಸಲ್ಮಾನ ಸಮಾಜಕ್ಕೆ ಹೋಗಿದೆ. ಹೀಗಾಗಿಯೇ, ಮತ್ತೊಮ್ಮೆ ಅಲ್ಲಿ ಗಲಭೆ ಮಾಡುವ ಪ್ರಯತ್ನ ಮಾಡಿಲ್ಲ.

  ಹೇಡಿಯಾದವನ ಮೇಲೆ ಗೂಂಡಾ ಆಕ್ರಮಣ ಮಾಡುತ್ತಲೇ ಇರುತ್ತಾನೆ. ಆಕ್ರಮಣ ಮಾಡಬೇಡ ಎಂದು ಗೂಂಡಾಗೆ ಉಪದೇಶಿಸಿದ ಮಾತ್ರಕ್ಕೆ ಆತ ಆಕ್ರಮಣ ನಿಲ್ಲಿಸಲಾರ. ಹೇಡಿಗೆ ಆಕ್ರಮಣ ಮಾಡಬೇಡ ಎಂದು ಉಪದೇಶಿಸುವುದೂ ವ್ಯರ್ಥ. ಬದಲಾಗಿ, ಹೇಡಿಯನ್ನು ಧೀರನನ್ನಾಗಿ ಮಾಡುವುದು, ಆಕ್ರಮಣಗಳಾದಾಗ ಅದನ್ನು ತಡೆಯುವಂತೆ ಪರಾಕ್ರಮಶಾಲಿಯನ್ನಾಗಿ ಮಾಡುವುದೇ ಆಕ್ರಮಣಗಳನ್ನು ತಡೆಯಲಿರುವ ಏಕೈಕ ಮಾರ್ಗೋಪಾಯ.

  ನಮ್ಮ ದೇಶದಲ್ಲಿ ಕೋಮುಗಲಭೆಗಳು ನಿಲ್ಲಬೇಕಾದರೆ, ಗಲಭೆ ಮಾಡಬೇಡಿ ಎಂಬ ಉಪದೇಶ ಮಾಡುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಹಿಂದುಗಳನ್ನು ಸಂಘಟಿಸುವ ಕೆಲಸ ಮಾಡಿ ಮತ್ತು ಅವರು ಆ ರೀತಿ ಸಂಘಟಿತರಾಗುವುದು ಆಕ್ರಮಣಕಾರಿಗಳಾಗಲು ಅಲ್ಲ, ಬದಲಾಗಿ ಹಿಂದು ಸಮಾಜದ ಮೇಲೆ ಆಕ್ರಮಣಗಳಾಗದಂತೆ ಮಾಡಲು ಮಾತ್ರ.

  Liked by 1 person

 2. ಅಭಿನವ ಚನ್ನಬಸವಣ್ಣ
  ಮಾರ್ಚ್ 9, 2015 ರಲ್ಲಿ 10:34 ಫೂರ್ವಾಹ್ನ

  ಹೆಗಡೆ ಅವರೇ, ಹಿಂದೂ ಮತೀಯವಾದಿಗಳು ತಮ್ಮ ತೀವ್ರಗಾಮಿ ಚಟುವಟಿಕೆಗಳಿಂದ ಅಲ್ಪಸಂಖ್ಯಾತರನ್ನು ಭಯಭೀತರಾಗಿರಿಸಿರುವ ಈ ಸಂದರ್ಭದಲ್ಲಿ ಹಿಂದೂ ಮತೀಯವಾದವನ್ನು ವಿರೋಧಿಸುವುದು ಪ್ರಜ್ಞಾವಂತರ ಎಲ್ಲರ ನೈತಿಕ ಕರ್ತವ್ಯ. ಹಿಂದೂ ಮತೀಯವಾದಿಗಳ ವಿರುದ್ಧ ಪ್ರಜ್ಞಾವಂತರು ನಡೆಸುತ್ತಿರುವ ನೈತಿಕ ಹೋರಾಟವನ್ನು ಹಿಂದೂ ಧರ್ಮದ ಬಗ್ಗೆ ನಕಾರಾತ್ಮಕವಾದ ಭಾವನೆ ಅಂತ ನೋಡುವುದು ತೀರಾ ಸಂಕುಚಿತ ದೃಷ್ಟಿಕೋನ. ಹಿಂದೂ ಮತೀಯವಾದ ಜ್ವಾಲೆಗೆ ಹವಿಸ್ಸು ಹಾಕುವ ಕೆಲಸವನ್ನು ಬಿಡತಕ್ಕದ್ದು.

  Like

 3. Manohar Naik
  ಮಾರ್ಚ್ 12, 2015 ರಲ್ಲಿ 10:44 ಫೂರ್ವಾಹ್ನ

  ದರ್ಗಾ ಅವರೆ
  ನಿಮಗೆ ಇರುವ ಮತೀಯವಾದ, ಅಲ್ಪಸಂಖ್ಯಾತ ಎಂಬ ಭ್ರಮೆಯಿಂದ ಹೊರಬಂದು ವಾಸ್ತವವನ್ನು ನೋಡತಕ್ಕದ್ದು

  Like

 4. ಅಭಿನವ ಚನ್ನಬಸವಣ್ಣ
  ಮಾರ್ಚ್ 14, 2015 ರಲ್ಲಿ 10:04 ಅಪರಾಹ್ನ

  ಹೆಗಡೆ ಅವರೇ, ಖ್ಯಾತ ಸಂವಿಧಾನ ತಜ್ಞ ಮತ್ತು ಹಿರಿಯ ರಾಜಕೀಯ ವಿಶ್ಲೇಷಕರಾದ ಎ ಜಿ ನೂರಾನಿಯವರ ‘ಆರೆಸ್ಸೆಸ್ ಮತ್ತು ಬಿಜೆಪಿ : ಒಂದೇ ಹಾದಿ ಭಿನ್ನ ಶ್ರಮ’ ಪುಸ್ತಕದ ಬಿಡುಗಡೆ (ಅನುವಾದ : ಸುರೇಶ ಭಟ್ ಬಾಕ್ರಾಬೈಲ್) ಮಾರ್ಚ್ 16 ರ ಸೋಮವಾರ ಸಂಜೆ 4.30 ಕ್ಕೆ ಮಂಗಳೂರಿನ CODP ಸಭಾಂಗಣದಲ್ಲಿ (ಪದವು ಶಾಲೆಯ ಬಳಿ, ನಂತೂರ ಪದವು) ದಿನೇಶ್ ಅಮೀನ್ ಮಟ್ಟು ಅವರು ಬಿಡುಗಡೆ ಮಾಡಲಿದ್ದಾರೆ. ರಂಜಾನ ದರ್ಗಾ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕೆ. ಎಲ್ ಅಶೋಕ ಅವರ ಅಧ್ಯಕ್ಷತೆ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: