ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 2: ಭಕ್ತಿ ಮಾರ್ಗವನ್ನೇ ನಿರಾಕರಿಸುವವರಿಗೆ ಭಕ್ತರು ಹೇಗೆ ಅರ್ಥವಾದಾರು?

ಪ್ರೊ. ರಾಜಾರಾಮ ಹೆಗಡೆ.

   ಇತ್ತೀಚೆಗೆ ಕನಕದಾಸರ ಜಯಂತಿಯ ಆಚರಣೆ ನಡೆಯಿತು. ಹಾಗೂ ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟವಾದವು. ಜೊತೆಗೇ ರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ನೀಡಿದ ಹೇಳಿಕೆಗಳೂ ವರದಿಯಾದವು. ಅವುಗಳಲ್ಲಿ ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಗತಿಪರ ಧೋರಣೆಯೊಂದರ ಕುರಿತು ಇಲ್ಲಿ ಚರ್ಚಿಸುತ್ತೇನೆ. ನಮ್ಮ ವಚನಕಾರರು, ದಾಸರು ಇವರೆಲ್ಲರೂ ಶಿವ ಭಕ್ತರು, ವಿಷ್ಣು ಭಕ್ತರು ಎಂಬುದಾಗಿ ತಿಳಿದಿದ್ದೇವೆ. ಆದರೆ ಆಶ್ಚರ್ಯದ ವಿಷಯವೆಂದರೆ  ಈ ಶರಣರ, ದಾಸರ ಭಕ್ತಿಯ ಪರಿಕಲ್ಪನೆಯ ಕುರಿತಾಗಲೀ, ಅವರು ಭಗವಂತನ ಕುರಿತು ಏನು ಹೇಳುತ್ತಾರೆ ಎಂಬುದರ ಕುರಿತಾಗಲೀ ಕುತೂಹಲವೇ ನಮ್ಮ ಬಹುತೇಕ ಸಾಮಾಜಿಕ ಚಿಂತಕರಿಗೆ ಅಪ್ರಸ್ತುತವಾದಂತಿದೆ. ಹಾಗೂ ಅಂಥ ಚಿತ್ರಣದ ಅಗತ್ಯವೇ ಇಲ್ಲ ಎಂಬ ಧೋರಣೆಯನ್ನು ಇಂಥ ಚಿಂತಕರು ಹಾಗೂ ಅವರಿಂದ ಪ್ರಭಾವಿತರಾದ ರಾಜಕಾರಣಿಗಳು ತಳೆದಂತಿದೆ. ಆ ಶರಣರು ಹಾಗೂ ದಾಸರೆಲ್ಲ ಲಿಂಗ, ಜಾತಿ, ವರ್ಗ ಸಮಾನತೆಗಾಗಿ ಹೋರಾಡಿದರು ಎಂಬುದೊಂದೇ ವಿಷಯ ಅಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಅವರು ಜಾತಿಯ ತುಳಿತಕ್ಕೊಳಗಾಗಿದ್ದರು, ಹಾಗೂ ಅದರ ವಿರುದ್ಧ ಹೋರಾಡುವ ಏಕಮೇವ ಉದ್ದೇಶಕ್ಕಾಗಿಯೇ ಅವರು ಸಂತರಾದರು ಎಂದು ಬಿಂಬಿಸಲಾಗುತ್ತದೆ. ಇಂಥವರು ನಮ್ಮ ಭಕ್ತಿಯುಗದ ಸಂತರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ?

   ಭಕ್ತಿಯುಗದ ಸಂತರ ಸಾಲುಗಳನ್ನು ಸಾಮಾಜಿಕ ನಿರೂಪಣೆಗೊಳಪಡಿಸುವ ಮೇಲಿನ ಚಿಂತಕರಲ್ಲಿ ಒಂದು ವಿಶೇಷತೆ ಕಂಡುಬರುತ್ತದೆ. ಭಕ್ತಿಯುಗದ ಸಂತರು ತಮ್ಮ ಜೀವನವಿಡೀ ಯಾವುದಕ್ಕಾಗಿ ಹುಡುಕಾಡಿದ್ದರೋ ಆಧುನಿಕ ಚಿಂತಕರು ಅದನ್ನೇ ನಿರಾಕರಿಸುತ್ತಾರೆ. ಇಂಥ ಚಿಂತಕರೆಲ್ಲ ಇಂದು ಬೇರೆ ಬೇರೆ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಇಲ್ಲವೆ ಇಂಥ ಹೋರಾಟಗಳನ್ನಾಧರಿಸಿದ ರಾಜಕೀಯದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಇವರೆಲ್ಲ ತಮ್ಮನ್ನು ವಿಚಾರವಾದಿಗಳು ಎಂದು ಕರೆದುಕೊಳ್ಳುತ್ತಾರೆ. ಇವರು ನಮ್ಮ ಪೂಜಾಚರಣೆಗಳನ್ನು ಮೂಢನಂಬಿಕೆಗಳು ಎನ್ನುವವರು, ದೇವರು, ಅಧ್ಯಾತ್ಮ ಇವೆಲ್ಲ ಪುರೋಹಿತಶಾಹಿಯ ಕಣ್ಕಟ್ಟುಗಳು ಎಂದು ಪ್ರತಿಪಾದಿಸುವವರು. ಮನುಷ್ಯನ ಜೀವನದ ಪರಮಗುರಿಯೆಂದರೆ ಜನನ ಮರಣಗಳ ಬಂಧನದಿಂದ ಬಿಡುಗಡೆ ಅಥವಾ ಪರಮಾತ್ಮ ಸಾಯುಜ್ಯವಾಗಿದೆ ಎಂಬ ಭಕ್ತಿ ಪಂಥದ ಪ್ರತಿಪಾದನೆಯನ್ನು ಕೇಳಿದರೇ ನಕ್ಕುಬಿಡುವವರು. ಅಷ್ಟೇ ಅಲ್ಲ, ಆ ಭ್ರಾಂತಿಯಿಂದ ಭಾರತೀಯರನ್ನು ರಕ್ಷಿಸದ ಹೊರತೂ ಈ ಸಮಾಜ ಪ್ರಗತಿ ಹೊಂದಲಾರದು ಎಂದು ನಂಬಿದವರು. ಇವರು ದೈವಭಕ್ತಿ ಎಂದರೆ ಏನೆಂಬುದನ್ನು ತಿಳಿಯದವರು ಹಾಗೂ ತಿಳಿಯಲು ನಿರಾಕರಿಸುವವರು. ಈ ಸಂಸಾರವು ಒಂದು ಮಾಯೆ ಎಂಬ ಶರಣರ ಹಾಗೂ ದಾಸರ ಹೇಳಿಕೆಯು ಇಂದಿನ ವಿಚಾರವಂತರಲ್ಲಿ ಒಂದು ಲೇವಡಿಯ ವಿಚಾರ ಮಾತ್ರವೇ ಆಗಿದೆ. ಹೀಗೆ ಹೇಳುವವರೇ ಪುರೋಹಿತಶಾಹಿಯ ಕಣ್ಕಟ್ಟಿಗೆ ಒಳಗಾದವರು ಎಂಬುದು ಅವರ ಅಂಬೋಣ. ಅಂದರೆ ಈ ಶರಣ ಹಾಗೂ ದಾಸರು ಆ ಮಟ್ಟಿಗೆ ಸ್ವಂತ ಬುದ್ಧಿ ಇಲ್ಲದವರು ಎಂಬ ಇಂಗಿತ ಇವರ ಧೋರಣೆಯಲ್ಲಿದೆ.

    ಅಂದರೆ, ಪ್ರಾಚೀನ ಭಕ್ತರ ಹಾಗೂ ಆಧುನಿಕ ವಿಚಾರವಾದಿಗಳ ಗುರಿಯಲ್ಲಿ ಅಥವಾ ಮಾರ್ಗದಲ್ಲಿ  ಅರ್ಥಾರ್ಥ ಸಂಬಂಧವಿಲ್ಲ. ಈ ಸಂತರು ಸಂಸಾರವನ್ನು ಒಂದು ಮಾಯೆ, ನೀರ ಮೇಲಣ ಗುಳ್ಳೆ, ಅಥವಾ ಬಂಧನ ಎಂದು ಭಾವಿಸಿ ಅದರಿಂದ ವಿರಕ್ತರಾಗಿ ಜೀವಿಸುವುದೇ, ಅಥವಾ ಅದಕ್ಕೆ ನಿರ್ಲಿಪ್ತರಾಗಿ ಜೀವಿಸುವುದೇ ತಮ್ಮ ಸಾಯುಜ್ಯದ ಮಾರ್ಗ ಎಂದು ತಿಳಿದಿದ್ದರು. ಭಕ್ತಿಯುಗದ ಸಂತರು ಜಾತಿ, ಕುಲಗಳ ಕುರಿತು ನಡೆಸಿದ ಟೀಕೆಗಳನ್ನು ಈ ಹಿನ್ನೆಲೆಯಲ್ಲಿ ಇಟ್ಟೇ ಅರ್ಥೈಸಬೇಕಾಗುತ್ತದೆ. ಜಾತಿ, ಕುಲ, ಲಿಂಗ, ಎಂಬೆಲ್ಲ ಪ್ರಾಪಂಚಿಕ ಪ್ರಭೇದಗಳು ಒಬ್ಬ ಮನುಷ್ಯನ ಅಜ್ಞಾನಗಳಾಗಿ ಅವನ ಅಹಂಕಾರವನ್ನು ಪೋಷಿಸುವುದರಿಂದ ಪರಮಾತ್ಮನ ಜ್ಞಾನಕ್ಕೆ ಹಾಗೂ ಆ ಮೂಲಕ ಮೋಕ್ಷಕ್ಕೆ ಅಡ್ಡಿಗಳಾಗಿವೆ. ಇವೆಷ್ಟು ಅಡ್ಡಿಯಾಗಿವೆಯೋ ಅಷ್ಟೇ ಬಂಧು ಬಾಂಧವರ ಮೇಲಿನ ಮೋಹ, ಅಧಿಕಾರಮೋಹ, ಅಹಂಕಾರ, ಆಸೆ, ಐಶ್ವರ್ಯ, ಕೀರ್ತಿ, ಪ್ರಶಸ್ತಿ, ಇತ್ಯಾದಿಗಳೂ ಅಡ್ಡಿಯಾಗಿವೆ ಎಂದೂ ಈ ಸಂತರು ಹೇಳುತ್ತಾರೆ. ಜ್ಞಾನ-ಅಜ್ಞಾನ, ಪಾಪ-ಪುಣ್ಯ, ಸುಖ-ದುಃಖ, ಇವೆಲ್ಲವನ್ನೂ ಮೀರಿದ ಅವಸ್ಥೆಯ ಕುರಿತು ಅವರು ಮಾತನಾಡುತ್ತಿದ್ದಾರೆ. ಇಂದಿನ ವಿಚಾರವಂತರು ಇವುಗಳನ್ನೆಲ್ಲ ಬಿಡಬೇಕೆಂದು ಎಲ್ಲೂ ಹೇಳಿಲ್ಲ, ಹೇಳುವುದೂ ಇಲ್ಲ. ಬಿರುದು ಬಾವಲಿ, ಪ್ರಶಸ್ತಿ, ಅಧಿಕಾರಗಳನ್ನೇ ಗುರಿಯಾಗಿಟ್ಟುಕೊಂಡು ನಮ್ಮ ಸಂತರನ್ನು ಆಧುನಿಕ ನಿರೂಪಣೆಗೊಳಪಡಿಸುವವರಂತೂ ಹಾಗೆ ಹೇಳಿದರೆ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಂತಾಗುತ್ತದೆ.

     ನಮ್ಮ ಸಂಸ್ಕೃತಿಯಲ್ಲಿ ಈ ಮೇಲಿನ ಸಂತರ ಮಾರ್ಗ ಕೂಡ ಅಂತಿಮವಾಗಿ ಮನುಷ್ಯನ ಸುಖ ಹಾಗೂ ಶ್ರೇಯಸ್ಸನ್ನೇ ಉದ್ದೇಶದಲ್ಲಿಟ್ಟುಕೊಂಡಿದೆ. ಆದರೆ ಅವರು ನಮ್ಮ ಪ್ರಾಪಂಚಿಕ ಸುಖ ದುಃಖಗಳನ್ನು ಮೀರಿದ ಆನಂದದ ಕುರಿತು ಮಾತನಾಡುತ್ತಿದ್ದಾರೆ. ನಮ್ಮ ವಿಚಾರವಂತರು ಪ್ರಾಪಂಚಿಕ ಸುಖದ ಕುರಿತು ಮಾತ್ರವೇ ಮಾತನಾಡುತ್ತಿದ್ದಾರೆ.  ಸಂತರ ಪ್ರಕಾರ ಇಂಥ ಸುಖದ ಕಲ್ಪನೆಯು ಅಪೂರ್ಣವಾಗಿದೆ, ಹಾಗೂ ದುಃಖವನ್ನು ಹುಟ್ಟುಹಾಕುವಂಥದ್ದು. ಅಷ್ಟೇ ಅಲ್ಲ ಪರಮಾತ್ಮನನ್ನು ಅರಿತವನ ಮನಸ್ಸನ್ನು ಯಾವ ಪ್ರಾಪಂಚಿಕ ಪ್ರಭೇದಗಳೂ ವಿಕಲ್ಪ ಗೊಳಿಸಲಾರವು. ಅವನಿಗೆ ಸರ್ವಸಮಾನ ದೃಷ್ಟಿ ಉದಿಸುತ್ತದೆ. ಈ ಸಂತರು ತಿಳಿಸುವ ಸರ್ವಸಮಾನ ಭಾವಕ್ಕೂ ಇಂದಿನ ಸಾಮಾಜಿಕ ಹೋರಾಟಗಳು ಉದ್ದೇಶಿಸಿರುವ ಸಮಾನತೆಗೂ ವ್ಯತ್ಯಾಸವಿದೆ. ಜ್ಞಾನಿಯಾದವನಿಗೆ ಎಲ್ಲಾ ಜೀವಿಗಳಲ್ಲಿಯೂ ಪರಮಾತ್ಮನ ದರ್ಶನವಾಗುವುದರಿಂದ ಭೇದಬುದ್ಧಿ ಹೊರಟುಹೋಗುತ್ತದೆ.

    ಶರಣರು ಹಾಗೂ ದಾಸರು ಪ್ರಾಪಂಚಿಕ ಭೇದವು ನಮ್ಮ ತಲೆಯಂದ ಹೊರಟುಹೋಗಬೇಕು ಎನ್ನುತ್ತಾರೆ. ಅದು ಹೊರಟುಹೋಗುವವರೆಗೂ ಪರಮಾತ್ಮನು ಕಾಣುವುದಿಲ್ಲ. ಸಂಸಾರಸ್ಥರ ಭೇದಬುದ್ಧಿಯನ್ನು ಈ ನೆಲೆಯಿಂದ ಈ ಸಂತರು ಟೀಕಿಸುತ್ತಾರೆ. ಸಂಸಾರಸ್ಥ ಮನುಷ್ಯನು ಆನಂದಕ್ಕಾಗಿ ಹುಡುಕಾಡುತ್ತಾನೆ, ಆದರೆ ಅವನ ಈ ಅಜ್ಞಾನವೇ ಅವನ ಆನಂದಕ್ಕೆ ಅಡ್ಡಿಯಾಗಿದೆ ಎಂಬುದು ಅವರ ಹೇಳಿಕೆಯಾಗಿದೆ. ಅವರು ಯಾವುದೇ ಜಾತಿಯನ್ನು ಅಥವಾ ಮತವನ್ನು ಉದ್ದೇಶಿಸಿ, ಇಂಥ ಟೀಕೆಗಳನ್ನು ಮಾಡಿಲ್ಲ. ಅಥವಾ ಯಾವುದೇ ಜಾತಿಯ ಸ್ಥಾನಮಾನವನ್ನು ಎತ್ತರಿಸಲಿಕ್ಕಾಗಿ, ಸುಧಾರಿಸಲಿಕ್ಕಾಗಿ ಅಥವಾ ಮೆಟ್ಟಲಿಕ್ಕಾಗಿ ಕೂಡ ಈ ಟೀಕೆಗಳು ಇಲ್ಲ. ಅವರ ಮನಸ್ಸಿನಲ್ಲಿ ಜಾತಿ, ಮತಗಳು ಅಕ್ಷರಶಃ ಅಳಿದುಹೋಗಿವೆ, ಅವರ ಮಾರ್ಗ ಹಾಗೂ ಗುರಿಗಳಷ್ಟೇ ಇವೆ. ಹಾಗೂ ಅದು ಮನುಷ್ಯನ ಹಿತಕ್ಕೆ ಆತ್ಯಂತಿಕವಾದ ಮಾರ್ಗ ಎಂಬುದನ್ನು ಕಂಡುಕೊಂಡೇ ಅವರು ಈ ಮಾರ್ಗವನ್ನು ತುಳಿದಿದ್ದಾರೆ. ನಮ್ಮ ಭಕ್ತಿಯುಗದ ಶರಣರ ಹಾಗೂ ದಾಸರ ಪ್ರಕಾರ ಅಸಮಾನತೆಯ ಬುದ್ಧಿಯು ಅಳಿಯಬೇಕಾದದ್ದು ನಮ್ಮನಮ್ಮ ಮನಸ್ಸಿನಲ್ಲಿ.

    ಆದರೆ ಅವರ ಸಾಲುಗಳನ್ನು ಸಾಮಾಜಿಕ ನಿರೂಪಣೆಗೊಳಪಡಿಸುವ ಇಂದಿನ ಚಿಂತಕರ ತಲೆಯಲ್ಲಿ ಜಾತಿ ಭೇದವೆಂಬುದು ಗಟ್ಟಿಯಾಗಿ ಕುಳಿತಿದೆ. ಅದು ಅವರ ಹೋರಾಟದ ವಾಸ್ತವ. ಅದನ್ನು ಮನಸ್ಸಿನಿಂದ ಕಿತ್ತೊಗೆದು ಬಿಟ್ಟರೆ ಹೋರಾಟವು ಯಾವುದರ ಸಲುವಾಗಿ ಎಂಬುದೇ ಮರೆತು ಹೋಗಬಹುದು. ಜಾತಿ ಭೇದವನ್ನು ಕಾನೂನಿನ ಮೂಲಕ, ಪ್ರಭುತ್ವದ ಮೂಲಕ ನಾಶಪಡಿಸುವುದು ಅವರ ಕಾರ್ಯಕ್ರಮ. ಆದರೆ ಈ ಕಾರ್ಯಕ್ರಮವನ್ನು ಜಾರಿಯಲ್ಲಿ ತರಬೇಕಾದರೆ ಅಪರಾಧಿಗಳೆಂದು ಕೆಲವು ಜಾತಿಗಳನ್ನು ಗುರುತಿಸಿಕೊಂಡು ಅವರ ಕುರಿತು ಸದಾ ಎಚ್ಚರವಾಗಿರಬೇಕಾಗುತ್ತದೆ. ತುಳಿತಕ್ಕೊಳಗಾದ ಜಾತಿಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಜಾತಿಯದೇ ಧ್ಯಾನ ಮಾಡುತ್ತ ಮಾಡುತ್ತ ಅದು ಅವರ ಮನಸ್ಸಿನಲ್ಲಿಯೇ ಮನೆಮಾಡುತ್ತದೆ. ಹಾಗಾಗೇ ಇಂಥವರು ಶರಣರು ಹಾಗೂ ದಾಸರ ವಾಣಿಗಳನ್ನು ಓದುವಾಗಲೂ ಕೂಡ ಜಾತಿಯನ್ನು ತಮ್ಮ ಮನಸ್ಸಿನಿಂದ ಕಿತ್ತೊಗೆಯಲು ಸಾಧ್ಯವೇ ಇಲ್ಲ. ಭಕ್ತಿ ಮಾರ್ಗವನ್ನೇ ನಿರಾಕರಿಸುವವರಿಗೆ ಭಕ್ತರು ಹೇಗೆ ಅರ್ಥವಾಗಬಲ್ಲರು?

Advertisements
Categories: Uncategorized
  1. Murari
    ಮಾರ್ಚ್ 7, 2015 ರಲ್ಲಿ 8:37 ಫೂರ್ವಾಹ್ನ

    An exellent article which should open up the eyes of our vicharavadis. But unfortunately, they are a totally imbecile lot and I do not expect thm to understand this.

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: