ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 4: ಹದಿಹರೆಯದ ಸಮಸ್ಯೆಗಳು ಮತ್ತು ಸಾಮಾಜಿಕ ಕಳಕಳಿಯ ವರಸೆಗಳು

ಪ್ರೊ. ರಾಜಾರಾಮ ಹೆಗಡೆ.

   ಇತ್ತೀಚೆಗೆ  ನಮ್ಮ ಪತ್ರಿಕೆಗಳಲ್ಲಿ ಹದಿಹರೆಯದ ಹುಡುಗ ಹುಡುಗಿಯರು ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಕೆಲವೊಮ್ಮೆ ಬಲಾತ್ಕಾರ ಮಾಡುವ ಹಾಗೂ ಅದಕ್ಕೆ ಬಲಿಪಶುಗಳಾಗುವ ಮೂಲಕ, ಕೆಲವೊಮ್ಮೆ ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಸಮೂಹ ಸಂಘರ್ಷಗಳನ್ನು ಹುಟ್ಟಿಸುವ ಮೂಲಕ, ಕೆಲವೊಮ್ಮೆ ಯಾವ್ಯಾವುದೋ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಆತ್ಮಹತ್ಯೆಗೆ ಎರಡು ಪ್ರಮುಖ ಕಾರಣಗಳಿರುತ್ತವೆ, ಒಂದು ಮನೆಯವರ ಸಮ್ಮತಿಯಿಲ್ಲದ ಪ್ರೇಮ ಪ್ರಕರಣದಿಂದ, ಮತ್ತೊಂದು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಹಾಗೂ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದ ಕಾರಣದಿಂದ. ಇವೆಲ್ಲವುಗಳನ್ನೂ ಹದಿಹರೆಯದವರ ಸಮಸ್ಯೆಗಳು ಎಂದು ಗುರುತಿಸದೇ ಬೇರೆ ಬೇರೆ ರಾಜಕೀಯ, ಸಾಂಸ್ಕೃತಿಕ ಬಣಗಳ ಪ್ರತಿಪಾದನೆ ಹಾಗೂ ಹೋರಾಟದ ವಿಷಯಗಳನ್ನಾಗಿ ಪರಿವರ್ತಿಸುತ್ತಿರುವುದು ಕೂಡ ಎದ್ದು ಕಾಣುವಂತಿದೆ.

     ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಮಂಗಳೂರಿನ ಪಬ್ಬೊಂದರ ಮೇಲೆ ದಾಳಿ ನಡೆಸಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು ಕೆಲವು ಯುವಕ ಯುವತಿಯರ ಮೇಲೆ ಹಲ್ಲೆ ನಡೆಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಯುವಕ ಯುವತಿಯರು ನಮ್ಮ ಸಂಸ್ಕೃತಿಯನ್ನು ಬಿಟ್ಟು ಹೋಗಬಾರದು ಎಂಬುದಾಗಿ ಒತ್ತಾಯಿಸುವ ಈ ಹಲ್ಲೆಯನ್ನು ಸಾಂಸ್ಕೃತಿಕ ಪೋಲೀಸಗಿರಿ ಎಂದು ಕರೆಯಲಾಗಿದೆ. ಇದಕ್ಕೆ ಪ್ರತಿಭಟನೆಯಾಗಿ ಬೆಂಗಳೂರಿನಲ್ಲಿ ಕಿಸ್ ಫಾರ್ ಲವ್ ಎಂಬ ಸಾರ್ವಜನಿಕ ಪ್ರತಿಭಟನೆಯನ್ನು ಕೆಲವು ಗುಂಪುಗಳು ಹಮ್ಮಿಕೊಂಡು ದೂರದರ್ಶನದಲ್ಲಿ ಅದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತು. ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ಯುವತಿಯ ಸಾವಿನ ಸುತ್ತ ದೊಡ್ಡ ರಾಜಕೀಯ ಕೋಲಾಹಲವೇ ನಡೆಯಿತು. ಮುಸ್ಲಿಂ ಯುವಕರ ಮೇಲಿನ ಬಲಾತ್ಕಾರ ಪ್ರಕರಣವನ್ನು ಮುಚ್ಚಿಹಕಲಾಗುತ್ತಿದೆ ಎಂದು ಬಿಜೆಪಿ ಪಕ್ಷದವರು ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಟ್ಟುಕೊಂಡು ಪ್ರತಿಭಟಿಸಿದರು. ನಂತರ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ತನಿಖಾ ವರದಿ ಪ್ರಕಟವಾಯಿತು. ಆಗ ಆಕೆಯ ತಂದೆ ತಾಯಿಗಳು ಕೆಲವು ಪ್ರಗತಿಪರರ ಕಣ್ಣಿನಲ್ಲಿ ಖಳನಾಯಕರಾದರು. ಈ ಎಲ್ಲಾ ಪ್ರತಿಕ್ರಿಯೆಗಳೂ ಹದಿಹರೆಯದವರ ಸಮಸ್ಯೆಗಳ ಹೆಸರಿನಲ್ಲಿ ನಮ್ಮ ಸಮಾಜದ ಹಿರಿಯರು ಇಂದು ಏನು ನಡೆಸಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತವೆ.

ಇಂದು ನಾವು ಹೋದಲ್ಲಿ ಬಂದಲ್ಲಿ ಹದಿಹರೆಯದವರ ಪ್ರೇಮ ಪ್ರಕರಣಗಳನ್ನು ಸಾಕಷ್ಟು ಕೇಳುತ್ತೇವೆ. ಅವು ಸುಖಾಂತ್ಯವಾದರೆ ಯಾರೂ ಸುದ್ದಿಯೆತ್ತುವುದಿಲ್ಲ. ಹಾಗಾಗಿ ನಾವು ಕೇಳುವುದೆಲ್ಲ ದುರಂತ ಕಥೆಗಳೇ. ಹುಡುಗಿಯರು ಮನೆಯವರ ಮಾತನ್ನೂ ಕೇಳದೇ ಅಪರಿಚಿತ ಯುವಕರನ್ನು ಮದುವೆಯಾಗಿ ನಂತರ ಅವರ ಮತ್ತೊಂದು ಹೆಂಡತಿಯ ಜೊತೆಗೆ ಬಾಳ್ವೆ ಮಾಡುವುದು, ಅಪರಿಚಿತ ಯುವಕನೊಂದಿಗೆ ಓಡಿಹೋಗಿ ಅವನು ಅವಳನ್ನು ಕೊಲೆಮಾಡಿ ಬಿಸಾಕುವುದು, ಬ್ಲಾಕ್ಮೇಲ್ ಮಾಡಿ ಅವಳನ್ನು ಆತ್ಮಹತ್ಯೆಗೆ ದೂಡುವುದು, ವೈವಾಹಿಕ ಜೀವನವನ್ನು ಹಾಳುಮಾಡುವುದು, ಓಡಿಹೋದವಳು ಅನಾಥೆಯಾಗಿ ಅಥವಾ ಡೈವೋರ್ಸು ಕೊಟ್ಟು ಮತ್ತೆ ತಂದೆಯ ಮನೆಗೇ ಬಂದದ್ದು, ಇತ್ಯಾದಿ ಕಥೆಗಳು ಜಾಸ್ತಿಯಾಗುತ್ತಿವೆ. ಇನ್ನು ಮುರಿದುಹೋದ ಪ್ರಣಯವನ್ನು ಬಲತ್ಕಾರ ಎಂದು ಬಣ್ಣಿಸಿ ಕೋರ್ಟಿನ  ಮೆಟ್ಟಿಲು ಹತ್ತುವುದೂ ಸಾಮಾನ್ಯವಾಗಿ ಕಾಣುತ್ತದೆ. ಒಂದು ವಿಶೇಷವೆಂದರೆ ಈ ಕಥೆಗಳಲ್ಲೆಲ್ಲ ಹೆಣ್ಣುಮಕ್ಕಳೇ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ಅವರಷ್ಟೇ ಸಹಭಾಗಿಗಳಾದ ಗಂಡುಮಕ್ಕಳ ಕಥೆ ಏನಾಯಿತು ಎಂಬುದರ ಕುರಿತು ಯಾರೂ ಸೊಲ್ಲು ಎತ್ತುವುದಿಲ್ಲ. ಒಂದಂತೂ ನಿಶ್ಚಿತ: ಈ ಹದಿವಯಸ್ಸಿನ ಆವಾಂತರದಲ್ಲಿ ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಣ್ಣು ಮಕ್ಕಳೇ. ಅಂದರೆ ಹದಿಹರೆಯದ ತಪ್ಪುಗಳು ಹೆಣ್ಣುಮಕ್ಕಳ ಪಾಲಿಗೆ ದುರಂತದಲ್ಲಿ ಅಂತ್ಯಕಾಣುತ್ತಿವೆ. ಆದರೂ ಸಾಮೀಲಾದ ಗಂಡು ಮಕ್ಕಳ ಪಾಲಿಗೆ ಕೂಡ ಇವು ದುಃಸ್ವಪ್ನಗಳೇ ಎಂಬುದನ್ನು ನೆನಪಿಡಬೇಕು.

    ನಮ್ಮ ಕಾನೂನು ಹದಿವಯಸ್ಸಿನರಿಗೆ ಮಾನಸಿಕ ಪ್ರೌಢತೆ ಇರುವುದಿಲ್ಲ ಎಂಬ ತರ್ಕದ ಮೇಲೆ ನಿಂತಿದೆ. ಇತ್ತೀಚೆಗೆ ಕೆಲವು ಬಲಾತ್ಕಾರ ಪ್ರಕರಣಗಳಲ್ಲಿ ಹದಿನೆಂಟು ವರ್ಷಕ್ಕೂ ಕೆಳಗಿನ ಪುರುಷ ಬಾಲಾಪರಾಧಿಗಳು ದೊಡ್ಡ ತಲೆನೋವಾಗುತ್ತಿದ್ದಾರೆ. ಅವರು ಪ್ರಾಪ್ತ ವಯಸ್ಕರಲ್ಲದ ಕಾರಣ ಅವರಿಗೆ ವಿವೇಚನಾ ಶಕ್ತಿ ಹಾಗೂ ನಿರ್ಣಯ ಶಕ್ತಿ ಇರುವುದಿಲ್ಲ ಎಂಬುದು ತರ್ಕ.  ಆದರೆ ಅದೇ ತರ್ಕವನ್ನೇ ಬಳಸಿ ಹದಿಹರೆಯದವರ ಪ್ರೇಮ ಪ್ರಕರಣಗಳ ಕುರಿತು ನಮ್ಮ ಧೋರಣೆ ಏನಿರಬೇಕು ಎಂಬುದನ್ನು ಯೋಚಿಸಲು ನಾವು ತಯಾರಿಲ್ಲ. ಜೀವನವನ್ನು ರೂಪಿಸಿಕೊಳ್ಳುವ  ಕಾಲದಲ್ಲಿ ಜೀವನವನ್ನು ಹಾಳುಗೆಡವಿಕೊಳ್ಳುವ ಹೆಡ್ಡ ಕೆಲಸವು ಸಮಾಜದ ಪ್ರೋತ್ಸಾಹಕ್ಕೆ ಯೋಗ್ಯವೆ? ಪ್ರೇಮಿಸುವುದೇ ಮನುಷ್ಯನ ಪರಮ ಪುರುಷಾರ್ಥ ಎಂದು ಬಿಂಬಿಸುವ ಇಂದಿನ ಮನೋರಂಜನಾ ಮಾಧ್ಯಮಗಳು ಮುಗ್ಧ ಹದಿಹರೆಯದವರಿಗೆ ಯಾವ ಜೀವನಾದರ್ಶವನ್ನು ಕಟ್ಟಿಕೊಡುತ್ತಿವೆ?

    ಹದಿವಯಸ್ಸು ಒಬ್ಬನ ಜೀವನದಲ್ಲಿ ತೀರಾ ನಿರ್ಣಾಯಕವಾದ ಹಾಗೂ ಸೂಕ್ಷ್ಮವಾದ ಘಟ್ಟ. ದೇಹ ಬೆಳೆದಿರುತ್ತದೆ, ವಿವೇಚನೆ ಬೆಳೆದಿರುವುದಿಲ್ಲ. ಭಾವನೆ, ಕಾಮನೆಗಳ ಸೆಳೆತವು ಅವರ ಬುದ್ಧಿಗೆ ಮಂಕು ಕವಿಸುತ್ತಿರುತ್ತದೆ, ಸಂಯಮ ಹಾಗೂ ಅನುಭವದ ಕೊರತೆ ಇರುತ್ತದೆ. ತನಗೆ ಯಾವುದು ಒಳ್ಳೆಯದು, ಯಾವುದು ಕೆಡುಕು ಎಂಬ ಪರಿಜ್ಞಾನ ಸರಿಯಾಗಿ ಮೂಡಿರುವುದಿಲ್ಲ. ದುರ್ಬಲರು ಸುಲಭವಾಗಿ ಈ ಸೆಳೆತಕ್ಕೆ ಬಲಿಯಾಗುತ್ತಾರೆ. ಅಂಥವರು ಸುರಕ್ಷಿತವಾಗಿ ಜೀವನದ ದಡವನ್ನು ಸೇರುವಲ್ಲಿ ಅವರಿಗೆ ಸಮಾಜವು ನೆರವಾಗಬೇಕು. ಸ್ವಾತಂತ್ರ್ಯದ ಕಲ್ಪನೆಯನ್ನು ಯಾವುದೇ ನಿಬಂಧನೆಗಳಿಲ್ಲದೇ ಅವರಿಗೆ ನೀಡುವುದರಿಂದ ಅವರ ಜೀವನವನ್ನೇ ಹಾಳುಮಾಡಿದಂತೇ. ಹದಿವಯಸ್ಸನ್ನು ದಾಟಿ ಅದರ ಸಿಹಿ ಕಹಿಗಳನ್ನು ಅನುಭವಿಸಿಕೊಂಡು ಬಂದ ಯಾವ ತಂದೆ ತಾಯಿಯರೂ ಕೂಡ ತಮ್ಮ ಮಕ್ಕಳ ಬಗ್ಗೆ ಆತಂಕ ಪಡುವುದು ಸಹಜವೇ. ಅವರು ನಿಯಂತ್ರಣ ಹೇರುವುದೂ ಸಹಜ. ಅದನ್ನೇ ಮಹಾ ಅಪರಾಧ ಎಂಬಂತೆ ಬಣ್ಣಿಸಿ, ಅವರನ್ನು ಖಳನಾಯಕರನ್ನಾಗಿ ಬಿಂಬಿಸುವುದರಿಂದ ಹದಿವಯಸ್ಸಿನ ಮಕ್ಕಳನ್ನು ಮತ್ತೂ ದಾರಿ ತಪ್ಪಿಸಿದಂತಾಗುತ್ತದೆ. ಮಕ್ಕಳ ಭೌತಿಕ ಜವಾಬ್ದಾರಿ ಕಡೆಗೂ ತಂದೆ ತಾಯಿಗಳ ಮೇಲೇ ಬೀಳುತ್ತದೆ. ಸಮಾಜ ಅವರನ್ನು ನೋಡಿಕೊಳ್ಳಲು ಬರುವುದಿಲ್ಲ. ಆದರೆ ಅತಿಯಾದ ನಿಯಂತ್ರಣ ಕೂಡಾ ಮಕ್ಕಳಿಗೆ ಅಪಾಯಕಾರಿಯಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ಅನೇಕ ಪ್ರಕರಣಗಳಲ್ಲಿ ಪಾಲಕರ ಕುರಿತ ಭಯ, ಹತಾಶೆ ಕಾರಣವಾಗಿರುತ್ತದೆ.

    ಹದಿಹರೆಯದವರ ಪ್ರೇಮ ಪ್ರಕರಣಗಳ ಹಾಗೂ ಚಟುವಟಿಕೆಗಳ ಕುರಿತು ಸಾಮಾಜಿಕ ಕಳಕಳಿಯುಳ್ಳವರು ಒಂದು ವಿವೇಚನಾ ಪೂರ್ಣವಾದ ನಿಲುವು ರೂಪಿಸಿಕೊಳ್ಳುವ ಅಗತ್ಯವಿದೆ. ಅದರಲ್ಲಿ ಹಿಂದೂ ಮುಸ್ಲಿಂ ಯುವಕ ಯುವತಿಯರು ಸಾಮೀಲಾಗಿದ್ದರೆ ಸೆಕ್ಯುಲರ್ ಅಥವಾ ಮತೀಯ ಸಮಸ್ಯೆಯನ್ನಾಗಿ ಪರಿವರ್ತಿಸುವುದು, ಬೇರೆ ಬೇರೆ ಜಾತಿಯವರು ಸಾಮೀಲಾಗಿದ್ದರೆ ಜಾತೀಯತೆಯ ಸಮಸ್ಯೆಯನ್ನಾಗಿ ಪರಿವರ್ತಿಸುವುದು, ನಮಗೆ ಕಂಡುಬರುವ ವಿಷಯ. ಇದು ಹಿರಿಯರು ಹದಿಹರೆಯದವರಿಗೆ ಮಾಡುವ ದ್ರೋಹ ಎಂದೇ ನನ್ನ ಅನ್ನಿಸಿಕೆ. ಅದನ್ನು ಹದಿಹರೆಯದವರ ಸಮಸ್ಯೆ ಎಂದು ಬಗೆಹರಿಸುವುದು ಅವರಿಗೂ ಕ್ಷೇಮ, ಸಮಾಜಕ್ಕೂ ಕ್ಷೇಮ.

    ನಮ್ಮ ಹಿಂದಿನವರು ವಿದ್ಯಾರ್ಜನೆಯಲ್ಲಿ ಇಂದ್ರಿಯನಿಗ್ರಹಕ್ಕೆ ಒತ್ತುಕೊಟ್ಟಿದ್ದರು. ಅದಿಲ್ಲದವರಿಗೆ ಬಾಲ್ಯವಿವಾಹ ಪದ್ಧತಿಯನ್ನು ರೂಪಿಸುವ ಮೂಲಕ ಹದಿಹರೆಯದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದರು. ಇಂದು ಹದಿಹರೆಯದ ಮಕ್ಕಳಿಗೆ ಹಿಂದೆಂದಿಗಿಂತಲೂ ಕಠಿಣ ಸತ್ವಪರೀಕ್ಷೆಯ ಕಾಲ. ನಮ್ಮ ಮಾಧ್ಯಮಗಳು, ಜಾಹೀರಾತುಗಳು ಅವರ ಕಾಮನೆಗಳನ್ನು ಕೆರಳಿಸುತ್ತಿರುತ್ತವೆ. ಹಳೆಯ ಜೀವನಕ್ರಮಗಳನ್ನು ನಾಶಮಾಡಿದ್ದೇವೆ. ನೀತಿ ಅನೀತಿಯ ಕುರಿತು ಎಂದಿಲ್ಲದ ಗೊಂದಲ ಸಮಾಜದಲ್ಲಿ ಮೂಡಿದೆ. ಹಾಳಾಗಲಿಕ್ಕೆ ನೂರು ಮಾರ್ಗಗಳು ಹಾಗೂ ಸಾಧನಗಳು ಬಂದಿವೆ. ನಾವು ಇಂದು ಈ ಹೊಸ ಸವಾಲುಗಳನ್ನು ನಿಭಾಯಿಸಿ ಅವರನ್ನು ರಕ್ಷಿಸುವ ಕುರಿತು ವಿಶೇಷ ತಯಾರಿಯನ್ನೇನಾದರೂ ನಡೆಸುತ್ತಿದ್ದೇವೆಯೆ? ಬದಲಾಗಿ ಪರಸ್ಪರ ಕೆಸರೆರಚಾಟಕ್ಕೆ ಅವರ ದುರಂತಗಳನ್ನು ಸಾಧನವಾಗಿ ಮಾಡಿಕೊಳ್ಳುತ್ತಿದ್ದೇವೆ ಅಷ್ಟೆ. ಇಂದು ಪ್ರತಿಯೊಬ್ಬ ಹಿರಿಯನೂ ಹದಿಹರೆಯದ ಮಕ್ಕಳ ಗೆಳೆಯನಾಗಿ ಸಹಾನುಭೂತಿಯಿಂದ ಅವರ ಮನೋಪ್ರಪಂಚವನ್ನು ಪ್ರವೇಶಿಸಿ ಅವರ ತಲ್ಲಣಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆಯೇ ಹೊರತೂ ಹೋರಾಟಗಾರನಾಗಿ ಅಲ್ಲ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: