ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 6: ಮೂಲಭೂತವಾದದ ಒಂದು ಸೆಕ್ಯುಲರ್ ಅವತಾರ

ಪ್ರೊ. ರಾಜಾರಾಮ ಹೆಗಡೆ.

     ಪ್ರಗತಿಪರರು ಕ್ರೈಸ್ತ ಹಾಗೂ ಮುಸ್ಲಿಂ ಸಮಾಜಗಳನ್ನು ಟೀಕಿಸುವ ಕ್ರಮಕ್ಕೂ ಹಿಂದೂ ಸಮಾಜವನ್ನು ಟೀಕಿಸುವ ಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ಸಮಾಜಗಳಲ್ಲಿ ಯಾವುದಾದರೂ ತಪ್ಪು ಆಚರಣೆಯ ಕುರಿತು ಚರ್ಚೆ ಎದ್ದರೆ ಅವನ್ನು ಅವರ ಪವಿತ್ರಗ್ರಂಥಗಳು ಸಮರ್ಥಿಸಲು ಸಾಧ್ಯವೇ ಇಲ್ಲ ಎಂಬುದು ಇವರ ಧೃಡ ನಂಬಿಕೆ. ಅವು ಏನಿದ್ದರೂ ಇಂದಿನ ಅನುಯಾಯಿಗಳ ಅಜ್ಞಾನಕ್ಕೆ ಸಂಬಂಧಿಸಿದ್ದು ಅಷ್ಟೆ. ಉದಾಹರಣೆಗೆ, ಇಂದು ಭಯೋತ್ಪಾದನೆಯ ಕುರಿತು ನಡೆಯುವ ಚರ್ಚೆಗಳನ್ನು ಗಮನಿಸಿ. ಪ್ರತಿಯೊಬ್ಬರೂ ಕೂಡ ಅವು ಇಸ್ಲಾಂನ ಪವಿತ್ರಗ್ರಂಥಗಳಿಗೆ ವಿರುದ್ಧವಾಗಿವೆ ಎಂಬ ತರ್ಕವನ್ನಿಟ್ಟೇ ಅವುಗಳನ್ನು ಖಂಡಿಸುತ್ತಾರೆ. ಅಂದರೆ ಅವರ ಕೃತ್ಯಗಳನ್ನು ಇಸ್ಲಾಂನ ನಿರ್ದೇಶನಗಳಲ್ಲ ಎಂಬುದಾಗಿ ನೋಡುವುದು ಅತ್ಯಂತ ನಿರ್ಣಾಯಕವಾಗಿದೆ. ಜಿಹಾದಿಗೆ ಸಂಬಂಧಿಸಿದಂತೆ, ಬುರ್ಖಾಕ್ಕೆ ಸಂಬಂಧಿಸಿದಂತೆ, ತಲಾಖಿಗೆ ಸಂಬಂಧಿಸಿದಂತೆ, ಹೀಗೆ ಇದುವರೆಗೆ ಎಷ್ಟು ಚರ್ಚೆ ಗಳು ಎದ್ದಿವೆಯೋ ಅವುಗಳಲ್ಲೆಲ್ಲ ಎಲ್ಲೂ ಕೂಡ ಪವಿತ್ರ ಗ್ರಂಥದ ನಿಂದನೆ ಆಗದಂತೇ ಎಚ್ಚರವಹಿಸಿ ವಾದಗಳನ್ನು ಬೆಳೆಸಲಾಗುತ್ತದೆ. ಅಂದರೆ ಇಸ್ಲಾಂ ರಿಲಿಜನ್ನು ಮೂಲತಃ ಒಳ್ಳೆಯದು, ಇಂದಿನ ದುಷ್ಪರಿಣಾಮಕ್ಕೆ ಅದು ಹೊಣೆಯಲ್ಲ ಎಂಬುದು ಇವರ ವಾದ.

     ಇದರಲ್ಲೇನು ಸ್ವಾರಸ್ಯ? ಎಂದು ನೀವು ಹುಬ್ಬೇರಿಸಬಹುದು. ಪ್ರತಿಯೊಂದು ಮತಾನುಯಾಯಿಗಳಿಗೂ ತಮ್ಮ ಮತದ ಕುರಿತು ನಂಬಿಕೆ ಇರುವುದು ಸ್ವಾಭಾವಿಕ. ಆದರೆ ನಾನು ಹೇಳುತ್ತಿರುವುದು ಶ್ರದ್ಧಾವಂತ ಮುಸ್ಲಿಮರ ಕಥೆಯಲ್ಲ, ಬದಲಾಗಿ ತಾವು ಪ್ರಗತಿಪರರೆಂದು, ಸೆಕ್ಯುಲರ್ವಾದಿಗಳು ಅಥವಾ ಬುದ್ಧಿಜೀವಿಗಳೆಂದು ಕರೆದುಕೊಂಡ ಮುಸ್ಲಿಮರ ಕಥೆ. ಇದು ಮುಸ್ಲಿಂ ಬುದ್ಧಿಜೀವಿಗಳದೊಂದೇ ಕಥೆಯಲ್ಲ, ಸೆಕ್ಯುಲರ್ ಎಂದು ಕರೆದುಕೊಂಡ ಹಿಂದೂ ಬುದ್ಧಿಜೀವಿಗಳ ಕಥೆ ಕೂಡಾ ಹೌದು.  ಅಂದರೆ ಯಾವ ರಿಲಿಜನ್ನುಗಳಿಗೂ ಸೇರದೇ ತಟಸ್ಥವಾಗಿ ಚಿಂತನೆ ನಡೆಸಬೇಕೆಂದು ಪ್ರತಿಪಾದಿಸುವವರು. ಇದುವರೆಗೆ ಮುಸ್ಲಿಮರ ಪವಿತ್ರಗ್ರಂಥವೇ ಸರಿಯಿಲ್ಲ ಎಂದು ಯಾವ ಮುಸ್ಲಿಂ ಅಥವಾ ಹಿಂದೂ ಸೆಕ್ಯುಲರ್ ಬುದ್ಧಿಜೀವಿ ಕೂಡ ಹೇಳಿದ್ದು ನಾನು ಕೇಳಿಲ್ಲ. ಹಾಗಂತ ಅವರು ಹಾಗೆ ಹೇಳಬೇಕಿತ್ತು ಅಂತಾಗಲೀ, ಯಾರದಾದರೂ ಪವಿತ್ರಗ್ರಂಥವನ್ನು ನಿಂದಿಸುವುದು ಸರಿಯೆಂದಾಗಲೀ ನಾನಿಲ್ಲಿ ಸೂಚಿಸುತ್ತಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತೇನೆ. ನಾನು ನಿಮ್ಮ ಗಮನ ಸೆಳೆಯಲೆತ್ನಿಸುವುದು ನಮ್ಮ ಬುದ್ಧಿಜೀವಿಗಳ ಈ ಧೋರಣೆಯ ಕುರಿತು. ಅವರು ಅಪ್ರಾಮಾಣಿಕರು ಅಂತ ನನ್ನ ಹೇಳಿಕೆಯಲ್ಲ. ಅವರಿಗೆ ನಿಜವಾಗಿಯೂ ಹಾಗೇ ಅನಿಸುತ್ತದೆ ಅಂತಲೇ ಇಟ್ಟುಕೊಳ್ಳೋಣ.

     ಈ ಧೋರಣೆಗಳಿಗೂ ಕೂಡ ಒಂದು ರೀತಿಯಲ್ಲಿ ಸಮಜಾಯಷಿ ಕೊಟ್ಟುಕೊಳ್ಳಬಹುದು. ಜಗತ್ತಿನ ಕೋಟ್ಯಂತರ ಜನರು ಸಾವಿರಾರು ವರ್ಷ ನಂಬಿಕೊಂಡು ಬಂದ ಮತದ ಕುರಿತು ನಕಾರಾತ್ಮಕ ಅಭಿಪ್ರಾಯವನ್ನು ಹುಟ್ಟುಹಾಕುವುದು ಸೆಕ್ಯುಲರಿಸಂ ದೃಷ್ಟಿಯಿಂದ ಆರೋಗ್ಯಕರವಲ್ಲ ಎಂದು ನಿರ್ಣಯಿಸಿ ಈ ಮೇಲಿನ ಬುದ್ಧಿಜೀವಿಗಳೆಲ್ಲ ತಮ್ಮ ಧೋರಣೆಯನ್ನು ರೂಢಿಸಿಕೊಂಡಿದ್ದಾರೆ ಎನ್ನೋಣವೆ? ಹಾಗಂದುಕೊಂಡರೆ ಮತ್ತೆ ಎಡವುತ್ತೇವೆ. ಇದೇ ಬುದ್ಧಿಜೀವಿಗಳೇ ಹಿಂದೂ ಪರಂಪರೆಗಳ ಕುರಿತು ಮಾತನಾಡುವಾಗ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವಂತೆ ಕಂಡುಬರುತ್ತದೆ. ಅಂದರೆ ಹಿಂದೂಗಳ ಸಮಾಜದಲ್ಲಿನ ದೋಷಗಳು ಅವರ ರಿಲಿಜನ್ನು ಹಾಗೂ ಪವಿತ್ರಗ್ರಂಥಗಳಿಂದಲೇ ಹುಟ್ಟಿವೆ ಎಂದು ಅವರು ಶಪಥ ಮಾಡಿ ಹೇಳುತ್ತಾರೆ. ಇವರಾರು ಹಿಂದೂಗಳ ಗ್ರಂಥಗಳು ಮೂಲತಃ ಒಳ್ಳೆಯದನ್ನೇ ಹೇಳುತ್ತವೆ ಎಂಬ ಪ್ರತಿಪಾದನೆ ಮಾಡುವುದು ಕಾಣುವುದಿಲ್ಲ. ಇತ್ತೀಚೆಗೆ ಭಗವದ್ಗೀತೆಯ ಕುರಿತು ವಿವಾದಗಳು ಎದ್ದಾಗ ಈ ಬುದ್ಧಿಜೀವಿಗಳು ಏನೇನು ಬರೆದಿದ್ದಾರೆ ಎಂಬುದನ್ನು ಓದಿದರೆ ಅವರ ಪ್ರತಿಪಾದನೆ ಸ್ಪಷ್ಟವಾಗುತ್ತದೆ. ಅದು ಜಾತಿ ಶೋಷಣೆಯನ್ನು, ಮೂಢನಂಬಿಕೆಯನ್ನು, ಅಮಾನವೀಯ ವಿಚಾರಗಳನ್ನು ಪ್ರತಿಪಾದಿಸುವ ಹುನ್ನಾರದಿಂದಲೇ ರಚನೆಯಾಗಿದೆ ಎಂಬುದು ಇಂಥವರ ವಾದ. ಹಾಗಾಗಿ ಅದರಲ್ಲಿ ಇರುವ ಒಳ್ಳೆಯ ಅಂಶಗಳ ಕುರಿತು ಮಾತನಾಡುವುದೇ ಒಂದು ಹುನ್ನಾರವಾಗಿ ಕಾಣುತ್ತದೆ.

     ಹಿಂದೂ ಎಂಬ ರಿಲಿಜನ್ನು ಇದೆಯೊ, ಅಥವಾ ಅದಕ್ಕೆ ಭಗವದ್ಗೀತೆಯೆಂಬ ಪವಿತ್ರ ಗ್ರಂಥ ಇದೆಯೊ ಎಂಬ ಕುರಿತು ನನ್ನ ಅಭಿಪ್ರಾಯವನ್ನು ಚರ್ಚಿಸಲು ನಾನಿಲ್ಲಿ ಹೋಗುವುದಿಲ್ಲ. ಈ ಮೇಲಿನ ಬುದ್ಧಿಜೀವಿಗಳೆಲ್ಲರೂ ಹೀಗೆ ನಂಬುತ್ತಾರೆ ಎಂಬುದು ನನಗೆ ಮುಖ್ಯ. ಇವರ ನಡೆ ನುಡಿಯಲ್ಲಿ ನನಗೆ ಒಂದು ಮೂಲಭೂತ ವೈರುಧ್ಯ ಕಾಣಿಸುತ್ತಿದೆ: ಮುಸ್ಲಿಂ ಸೆಕ್ಯುಲರ್ ಬುದ್ಧಿಜೀವಿಗಳು ಈ ಕಥೆಯನ್ನು ನಂಬಿರುವುದರಿಂದ ಒಂದೆಡೆ ತಮ್ಮ ರಿಲಿಜನ್ ಮೂಲತಃ ಒಳ್ಳೆಯದೆಂದು ಪ್ರತಿಪಾದಿಸುತ್ತ, ಮತ್ತೊಂದೆಡೆ ಹಿಂದೂ ಪರಂಪರೆಯನ್ನು ಮೂಲತಃ ಕೆಟ್ಟದ್ದೆಂದು ಯಾವುದೇ ಎಗ್ಗಿಲ್ಲದೇ ದೂಷಿಸುತ್ತಾರೆ. ಆದರೆ ಈ ವಿಚಾರವಂತರಿಗೆ ತಮ್ಮದು ಕೋಮುವಾದವಾಗಿ, ಇಸ್ಲಾಂ ಮೂಲಭೂತವಾದವಾಗಿ ಕಾಣುವುದಿಲ್ಲ, ಬದಲಾಗಿ ತಮ್ಮ ಸೆಕ್ಯುಲರಿಸಂನ ದ್ಯೋತಕವಾಗಿ ಕಾಣಿಸುತ್ತದೆ.

     ಹಿಂದೂ ವಿಚಾರವಾದಿಗಳಲ್ಲಿ ಕೆಲವರು ಈ ಕಥೆಗಳನ್ನು ಎಷ್ಟು ಪ್ರಾಮಾಣಿಕವಾಗಿ ನಂಬಿದ್ದಾರೆಂದರೆ ಭಾರತದ ಸಾಮಾಜಿಕ ಅನ್ಯಾಯಗಳನ್ನು ದೂರಮಾಡಲಿಕ್ಕೆ ಇಸ್ಲಾಂ ಮತವೇ ತಕ್ಕ ಮಾದರಿ ಎಂದು ಪತ್ರಿಕೆಗಳಲ್ಲಿ ಕೂಡ ಬರೆದುಕೊಳ್ಳುತ್ತಾರೆ. ಕೆಲವರು ಇಸ್ಲಾಂಗೆ ಮತಾಂತರವಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ, ಅದು ಅವರ ವಯಕ್ತಿಕ ವಿಷಯ. ಆದರೆ ನನಗಿರುವ ಒಂದು ಪ್ರಶ್ನೆಯೆಂದರೆ, ಇವರು ಹಿಂದೂಯಿಸಂ ಎಂಬುದು ಇಸ್ಲಾಮಿನಂತೆ ಒಂದು ರಿಲಿಜನ್ನು ಎಂದು ನಂಬುತ್ತಾರೆ ಹಾಗೂ ತಾವು ಸೆಕ್ಯುಲರ್ ಬುದ್ಧಿಜೀವಿ ಎನ್ನುತ್ತಾರೆ. ಅದು ನಿಜವಾಗಿಯೂ ಹೌದಾದರೆ ಅವರಿಗೆ ಒಂದು ರಿಲಿಜನ್ನು ಮೂಲತಃ ಒಳ್ಳೆಯದಾಗಿ, ಮತ್ತೊಂದು ಮೂಲತಃ ಕೆಟ್ಟದ್ದಾಗಿ ಕಾಣಿಸಬಾರದಲ್ಲ? ಕಾಣಿಸಿತು ಅಂತಿಟ್ಟುಕೊಳ್ಳಿ. ಸೆಕ್ಯುಲರ್ ಆದರ್ಶದ ಪಾಲನೆಗಾದರೂ ಅದನ್ನು ಢಾಣಾಡಂಗುರ ಮಾಡಬಾರದಲ್ಲ? ಅದರಲ್ಲೂ ಪವಿತ್ರಗ್ರಂಥಗಳನ್ನು ಹೀನಾಯವಾಗಿ ನಿಂದಿಸಿ ಅದರ ಅನುಯಾಯಿಗಳ ಮನನೋಯಿಸುವ ಕೆಲಸ ಕೋಮುವಾದಿಗಳದಲ್ಲವೆ? ಇವರು ನಿಜವಾಗಿಯೂ ಸೆಕ್ಯುಲರ್  ವಾದಿಗಳೇ ಆಗಿದ್ದಲ್ಲಿ ಈ ಎಡವಟ್ಟು ಇವರಿಗೆ ಕಾಣಿಸಿರಬೇಕಲ್ಲ?

      ಆದರೆ ಈ ಎಡವಟ್ಟು ಇವರಿಗೆಲ್ಲ ಏಕೆ ಕಾಣಿಸುತ್ತಿಲ್ಲ ಎಂಬುದು ಕುತೂಹಲಕಾರಿಯಾದ ವಿಚಾರ. ಅಂದರೆ ಇವರಿಗೆಲ್ಲ ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮುಗಳು ಮೂಲತಃ ಒಳ್ಳೆಯ ರಿಲಿಜನ್ನುಗಳು ಹಾಗೂ ಹಿಂದೂಯಿಸಂ ಮೂಲತಃ ಒಂದು ಅನೈತಿಕ, ಅಮಾನವೀಯ ರಿಲಿಜನ್ನು ಎಂಬುದು ಸತ್ಯವಾದ ವಿಚಾರ. ಏಕೆಂದರೆ ಇವರ ಸೆಕ್ಯುಲರ್ ವಿಚಾರಗಳಿಗೆ ಕ್ರಿಶ್ಚಿಯಾನಿಟಿ, ಇಸ್ಲಾಂಗಳೇ ಮಾನದಂಡಗಳು. ಅವು ನಿಜವಾದ ಸೃಷ್ಟಿಕರ್ತನ ವಾಣಿಗಳು, ಅವರ ಪ್ರವಾದಿಗಳು ದೇವವಾಣಿಯನ್ನು ಕೇಳಿದವರು ಹಾಗೂ ಅವರ ಪವಿತ್ರ ಗ್ರಂಥಗಳು ಅವುಗಳ ದಾಖಲೆ, ಹಾಗಾಗಿ ಅವು ಸುಳ್ಳಾಗಲಿಕ್ಕೆ, ಅನೀತಿಯಾಗಲಿಕ್ಕೆ ಸಾಧ್ಯವೇ ಇಲ್ಲ ಎಂಬ ನಂಬಿಕೆಯನ್ನಾಧರಿಸಿ ಈ ಮತಗಳು ನಿಂತಿವೆ. ಸೆಕ್ಯುಲರಿಸಂನ ನೀತಿ ಅನೀತಿಯ ಮಾನದಂಡಗಳು ಇಂಥ ದೇವವಾಣಿಯಿಂದ ರೂಪುಗೊಂಡಿವೆ.

      ಈ ಧೋರಣೆಯನ್ನು ಇಟ್ಟುಕೊಂಡು ಭಾರತಕ್ಕೆ ಬಂದ ಪಾಶ್ಚಾತ್ಯರು ಭಾರತೀಯರ ಮೂರ್ತಿಪೂಜೆ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ನೋಡಿದಾಗ ಅವು ಅವರ ಮಾನದಂಡಕ್ಕೆ ಅನೈತಿಕವಾಗಿ ಕಾಣಿಸಿದವು. ಇಂಥ ವಿಚಾರಗಳು ಈ ಹಿಂದೂಗಳ ಪವಿತ್ರಗ್ರಂಥಗಳಲ್ಲೇ ಇರುವುದು ಕೂಡ ಅವರಿಗೆ ತಿಳಿಯಿತು. ಪವಿತ್ರಗ್ರಂಥಗಳು ಸತ್ಯವಾಗಿದ್ದೇ ಹೌದಾದಲ್ಲಿ ಅವು ತಮ್ಮ ದೇವವಾಣಿಯನ್ನೇ ಪುನರುಚ್ಛರಿಸದೇ ಇರಲಿಕ್ಕೆ ಹೇಗೆ ಸಾಧ್ಯ? ಹಾಗಾಗಿ ಈ ಪವಿತ್ರಗ್ರಂಥಗಳು ದೇವವಾಣಿಗಳಲ್ಲ, ಇಲ್ಲಿನ ಪುರೋಹಿತಶಾಹಿಯ ಕಪಟ ಸೃಷ್ಟಿಯಾಗಿವೆ ಎಂಬ ಕಥೆಯನ್ನು ಅವರು ಕಟ್ಟಿದರು. ಗ್ರಂಥಗಳೇ ಕಪಟವಾದ ಮೇಲೆ ಅದರಲ್ಲಿ ಬರುವ ದೇವತೆಗಳು ಸಾಚಾ ಹೇಗಾಗಲು ಸಾಧ್ಯ? ಅವರ ವಾಣಿಯಾದರೂ ಸತ್ಯವಾಗಲು ಹೇಗೆ ಸಾಧ್ಯ? ಇಂದು ಇಡೀ ಬೌದ್ಧಿಕ ಜಗತ್ತೇ ಈ ಧೋರಣೆಯನ್ನು ಸತ್ಯವೆಂದು ಸ್ವೀಕರಿಸಿದಂತಿದೆ. ಆದರೆ ಬಾಲಗಂಗಾಧರ ಎಂಬ ಚಿಂತಕರ ಪ್ರಕಾರ ಈ ಧೋರಣೆ ಸತ್ಯವೆಂದು ಒಪ್ಪಿಕೊಳ್ಳಬೇಕಾದರೆ ಒಂದು ಷರತ್ತಿದೆ: ಸತ್ಯದೇವನು ಪ್ರತೀಬಾರಿಯೂ ಅರೇಬಿಯಾದ ಮರುಭೂಮಿಗೆ ಮಾತ್ರ ಭೇಟಿಕೊಟ್ಟಿದ್ದಾನೆ ಎಂಬ ಸತ್ಯ ಸಾಬೀತಾಗಬೇಕು. ಈ ಮೇಲಿನ ಬುದ್ಧಿಜೀವಿಗಳು ಈ ಸತ್ಯವನ್ನು ಸಿದ್ಧಪಡಿಸಬಲ್ಲರೆ?

Advertisements
Categories: Uncategorized
 1. Subhashini
  ಏಪ್ರಿಲ್ 4, 2015 ರಲ್ಲಿ 9:36 ಅಪರಾಹ್ನ

  Sir, few questions –

  If you are not at all attempting to discuss about existence of Hinduism as religion, why are you bothered about those who are criticizing it?

  Why does a thinker called Balagangadhara want a proof for the God of Truth has visited Arabian Deserts?

  Do you have any proof about existence of a religion called Hinduism, if so please provide proofs, if not why all of you including so called Seculars of all religions or irreligions are comparing other religions to false of religion called Hinduism?

  What is the the problem in saying if at all there was a religion in India, its only Sanathan Dharma which is almost dead?

  Request you to please clarify

  Like

  • Dunkin Jalki
   ಏಪ್ರಿಲ್ 5, 2015 ರಲ್ಲಿ 12:33 ಅಪರಾಹ್ನ

   Hello Subhashini,

   As I said on the Facebook, I am not able to understand your questions. Can you please write in Kannada.
   Thanks,
   Dunkin

   Like

 2. ಏಪ್ರಿಲ್ 24, 2015 ರಲ್ಲಿ 1:15 ಅಪರಾಹ್ನ

  ಸುಭಾಷಿಣಿಯವರೇ, ನಿಜ ಹೇಳಬೇಕೆಂದರೆ ಧರ್ಮ ಎಂಬುದರ ಸ್ವರೂಪ ಭಾರತದಲ್ಲಿ ಬೇರೆಯದೇ ಆಗಿದೆ.. ರಿಲಿಝನ್ ಎಂಬ ಪದಕ್ಕೆ ಸಂವಾದಿಯಾದ ಪದ ‘ಧಾರ್ಮಿಕ ಮತ’; (ಸ್ವತಃ ಧರ್ಮವೇ ಅಲ್ಲ.). ನಮ್ಮದ್ದನ್ನು ಬೆಂಬಲಿಸಲು ಕೋಟ್ಯಾಂತರ ಜನರಿದ್ದಾರೆ. ನಾನೂ ಅದನ್ನು ಬೆಂಬಲಿಸಿದರೆ ನಾನೂ ಅವರಲ್ಲಿ ಒಬ್ಬನಾಗುತ್ತೇನಷ್ಟೇ.. ಆದರೆ ತನ್ನ ಸ್ವಂತದ್ದರಲ್ಲಿ ದೋಷಗಳನ್ನು ಹುಡುಕಿ ವಿದೇಶಿಯವಾದದ್ದನ್ನು ಮೇಲಕ್ಕೇರಿಸಿದರೆ ತನಗೆ ಸಿಗುವ ಬೆಂಬಲವೇ ಬೇರೆ. ಅದು ತನ್ನನ್ನು ಸಮಾಜದಲ್ಲಿ ವಿಶೇಷವಾಗಿ ಗುರುತಿಸಲು ನೆರವಾಗುವುದೆಂಬುದು ಕೆಲವು ಬುದ್ಧಿಜೀವಿಗಳ ಯೋಚನೆ. ಎಲ್ಲಾ ಧರ್ಮಗಳಲ್ಲೂ ದೋಷವಿರುವುದು ಸತ್ಯವೆ. ನಿಜ ಹೇಳಬೇಕೆಂದರೆ ನೀವು ಹೇಳುವ ‘ಸನಾತನ’ ಧರ್ಮವೂ ಇಲ್ಲ.. ಪ್ರಾಚೀನಕಾಲದಿಂದಲೂ ಯಾವುದು ಭಾರತೀಯರ ಸಂಸ್ಕೃತಿಯನ್ನು ಬೆಸೆದಿದೆಯೋ ಅದನ್ನೇ ಬ್ರಿಟೀಷರು ಒಂದು ಧರ್ಮವನ್ನಾಗಿಸಿ ಹೆಸರು ಕೊಟ್ಟರು. ಭಾರತೀಯರು ಏಕೆ ಜಗತ್ತಿನಲ್ಲಿ ವಿಶಿಷ್ಟವಾಗಿ ನಿಲ್ಲುವರೆಂದು ಒಮ್ಮೆ ಯೋಚಿಸಿ. ಅದಕ್ಕೆ ಕಾರಣ ಅವರ ಮೂಲನಂಬಿಕೆಗಳು ಹಾಗೂ ಸಂಸ್ಕೃತಿ ಅವರ ರಕ್ತದಲ್ಲಿ ಬೆರೆತು ಹೋಗಿರುವುದೇ ಆಗಿದೆ. ಪ್ರತಿಯೊಂದು ವಸ್ತುವಿನ ಹಿಂದೆ ದೈವೀಕತೆಯನ್ನು ನೋಡುವ ಸ್ವಭಾವ ಪ್ರಾಚೀನ ಭಾರತೀಯರಿಗೆ ಹುಟ್ಟಿನಿಂದಲೇ ಬಂದಂತದ್ದು. ಅದೇ ಅವರ ಧರ್ಮ .. ಅವರು ಕಲ್ಲನ್ನು ಪೂಜಿಸಿದರೂ ಅಷ್ಟೇ, ಮಣನ್ನು ಪೂಜಿಸಿದರೂ ಅಷ್ಟೇ.. ಅಲ್ಲಿ ಅವರಿಗೆ ಕಾಣುವುದು ವಿಶ್ವಶಕ್ತಿಯ ಅನಂತ ಛಾಯೆ ಮಾತ್ರ.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: