ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 7: ಅಪರಾಧವನ್ನು ಅಪರಾಧವೆಂದು ಕರೆಯುವುದಕ್ಕೆ  ಹಿಂಜರಿಕೆಯೇಕೆ?  

ಪ್ರೊ. ರಾಜಾರಾಮ ಹೆಗಡೆ.

  ಇಂದು ಅಪರಾಧಗಳ ಬಗ್ಗೆ ಹೇಗೆ ಮಾತನಾಡಬೇಕೋ ಹಾಗೆ ಮಾತನಾಡುವುದು ನಮಗೆ ಸಾಧ್ಯವಾಗುತ್ತಿಲ್ಲ. ಅಪರಾಧಗಳನ್ನು ಸಮುದಾಯಗಳಿಗೆ  ಹಾಗೂ ಅವುಗಳ ಮನೋಸ್ಥಿತಿಗೆ ಸಮೀಕರಿಸುವುದು ನಮಗೆ ಚಟವಾಗಿಬಿಟ್ಟಿದೆ. ಉದಾಹರಣೆಗೆ ಯಾವುದೋ ಒಂದು ಊರಿನಲ್ಲಿ ಯಾವುದೋ ಮೇಲು ಜಾತಿಯವರು ಕೆಳಜಾತಿಯವರ ಮೇಲೆ ಹಲ್ಲೆ ಮಾಡಿದರೆ ಅದು ಕೇವಲ ಆ ವ್ಯಕ್ತಿಗಳು ಮಾಡಿದ ಅಪರಾಧ ಎಂಬಂತೇ ನಮ್ಮ ಚಿಂತಕರಾಗಲೀ, ಮಾಧ್ಯಮಗಳಾಗಲೀ ನೋಡುವುದಿಲ್ಲ. ಬದಲಾಗಿ ಭಾರತದ ಸಮಸ್ತ ಮೇಲ್ಜಾತಿಯವರು ಕೆಳಜಾತಿಯವರ ಮೇಲೆ ನಡೆಸಿದ ಹಲ್ಲೆಯಾಗಿಯೇ ಅದು ಬಿಂಬಿತವಾಗುತ್ತದೆ. ಹಾಗೂ ಅದು ಭಾರತದ ಮೇಲು ಜಾತಿಗಳ ಮನೋಸ್ಥಿತಿಗೆ ಸಮೀಕರಣವಾಗುತ್ತದೆ. ಯಾವುದೋ ದೇವಾಲಯವೊಂದರಲ್ಲಿ ಕೆಲವು ಬ್ರಾಹ್ಮಣರ ಎಂಜಲೆಲೆಯ ಮೇಲೆ ಉರುಳುಸೇವೆ ನಡೆದರೆ ಅದು ಭಾರತದ ಸಮಸ್ತ ಬ್ರಾಹ್ಮಣರ ಅಜೆಂಡಾ ಆಗಿ ಪರಿವರ್ತಿತವಾಗುತ್ತದೆ. ಯಾರೋ  ಕಿಡಿ ಗೇಡಿಗಳು ನಡೆಸಿದ ಅತ್ಯಾಚಾರವು ಗಂಡು ಹೆಣ್ಣಿನ ಮೇಲೆ ನಡೆಸುವ ದಬ್ಬಾಳಿಕೆಯಾಗಿ ಹಾಗೂ ಸಮಸ್ತ ಗಂಡಸರ ಮನೋವೃತ್ತಿಗೆ ಸಾಕ್ಷಿಯಾಗಿಯೇ ನೋಡಲ್ಪಡುತ್ತದೆ.

   ಈ ಮೇಲಿನ ಉದಾಹರಣೆಗಳಲ್ಲಿ ನಾವು ಅವು ಕೆಲವು ವ್ಯಕ್ತಿಗಳ ದುಷ್ಕೃತ್ಯಗಳು ಎಂಬಂತೆ ನೋಡುವುದಿಲ್ಲ. ಹಾಗೆ ನೋಡಿದರೆ ನಮಗೆ ಆ ಘಟನೆಯು ಅರ್ಥವೇ ಆಗದ ಸ್ಥಿತಿಗೆ ಬಂದಿದ್ದೇವೆ. ಬದಲಾಗಿ ಅವನ್ನು ಜಾತಿ, ಮತ, ಲಿಂಗ, ವರ್ಗ ಎಂಬ ಗುಂಪುಗಳ ಮನೋವೃತ್ತಿ ಎಂಬುದಾಗಿ ನೋಡುವುದೇ ನಮಗೆ ತರ್ಕಬದ್ಧವಾಗಿ ಕಾಣಿಸುತ್ತದೆ. ಇದರ ಪರಿಣಾಮವಾಗಿ ಯಾವುದೇ ವಿಶೇಷ ಜ್ಞಾನದ ಸಹಾಯವಿಲ್ಲದೇ ಒಂದೆರಡು ಘಟನೆಗಳನ್ನಿಟ್ಟುಕೊಂಡು ಜನ ಸಮುದಾಯಗಳ ಕುರಿತು ಇಂಥ ತೀರ್ಮಾನಗಳನ್ನು  ಹೊರಡಿಸುವುದು ‘ಸಾಮಾಜಿಕ ಚಿಂತನೆ’ ಆಗಿಬಿಟ್ಟಿದೆ. ನಮ್ಮ ಪತ್ರಿಕೆಗಳಲ್ಲಿ ಇಂಥ ಸಾಮಾಜಿಕ ಚಿಂತನೆಗಳು ಧಾರಾಳವಾಗಿ ಹರಿದಾಡುತ್ತಿರುತ್ತವೆ.

  ಇಂಥ ಚಿಂತನೆಗಳಿಗೆ ಅವುಗಳದೇ ಆದ ವೈರುಧ್ಯಗಳು ಕೂಡ ಕಣ್ಣಿಗೆ ರಾಚುವಂತಿರುತ್ತವೆ. ಏಕೆಂದರೆ ಅಪರಾಧಗಳು ಈ ಚಿಂತನೆಗಳಿಗೆ ಪೂರಕವಾಗಿಯೇ ನಡೆಯಬೇಕೆಂದಿಲ್ಲ. ಉದಾಹರಣೆಗೆ ಕೆಳಜಾತಿಯವರು ಕೆಳಜಾತಿಯವರ ಮೇಲೇ ನಡೆಸುವ ಅಪರಾಧಗಳು, ಮಹಿಳೆಯರು ಮಹಿಳೆಯರ ಮೇಲೇ ನಡೆಸುವ ಅಪರಾಧಗಳು. ಅದರಂತೆ ಕೆಳಜಾತಿಯವರು ಮೇಲ್ಜಾತಿಯವರ ಮೇಲೆ ಹಾಗೂ ಮಹಿಳೆಯರು ಪುರುಷರ ಮೇಲೆ ನಡೆಸುವ ಅಪರಾಧಗಳೂ ಧಾರಾಳವಾಗಿಯೇ ನಡೆಯುತ್ತಿರುತ್ತವೆ. ಇಂಥ ಉದಾಹರಣೆಗಳನ್ನು ಏನೇನೋ ಅಸಂಬದ್ಧ ಹಾಗೂ ಹಾಸ್ಯಾಸ್ಪದ ತರ್ಕಗಳನ್ನು ಇಟ್ಟು ಇಂಥ ಚಿಂತಕರು ಬಗೆಹರಿಸಿಕೊಳ್ಳುತ್ತಾರೆ. ಅದರಲ್ಲಿ ಒಂದೆಂದರೆ, ಇಂಥ ಉದಾಹರಣೆಗಳಲ್ಲಿ ಮಾತ್ರವೇ ವ್ಯಕ್ತಿಗಳ ಅಪರಾಧವನ್ನು ಸಮುದಾಯಗಳಿಗೆ ಸಮೀಕರಿಸಬಾರದು ಎಂಬ ತರ್ಕ. ಇವು ದಮನಿತರ ಪ್ರತಿಭಟನೆಯಾಗಿ ಕೂಡ ಕೆಲವರಿಗೆ ಕಾಣಿಸುತ್ತವೆ. ಅಂದರೆ ತಮ್ಮ ತರ್ಕವನ್ನು ಸಮುದಾಯಗಳನ್ನು ನೋಡಿ ಅನ್ವಯಿಸಬೇಕು. ತರ್ಕವಿರುವುದು ಸತ್ಯಶೋಧನೆಗೆ ಅಲ್ಲವೇ ಅಲ್ಲ, ಸ್ವಸಮರ್ಥನೆಗೆ ಎನ್ನುವುದು ಇಂಥವರ ಧೃಡ ನಂಬಿಕೆ.

   ಇತ್ತೀಚೆಗೆ ಮುಸ್ಲಿಂ ಭಯೋತ್ಪಾದನೆಯು ಪ್ರಪಂಚವನ್ನು ತಲ್ಲಣಗೊಳಿಸಿದೆ. ಈ ಭಯೋತ್ಪಾದನೆಯನ್ನು ನಡೆಸುವವರೂ ಇಸ್ಲಾಂ ಹೆಸರಿನಲ್ಲೇ ಅದನ್ನು ಮಾಡುತ್ತಿದ್ದಾರೆ. ಅವರು ಕೂಗುವ ಅಲ್ಲಾ ಹೋ ಅಕ್ಬರ್ ಎಂಬ ಘೋಷಣೆ, ತಮ್ಮ ಕೃತ್ಯವನ್ನು ಸಮರ್ಥಿಸಲು ಉದ್ಧರಿಸುವ ಖುರಾನಿನ ಸಾಲುಗಳು, ಹಾಗೂ ಪ್ರಪಂಚದ ಎಲ್ಲೆಡೆ ಇರುವ ಮುಸ್ಲಿಂ ಸಮಾಜದ ಸದಸ್ಯರಲ್ಲೇ ಕೆಲವರು ಅವರ ಸಂಘಟನೆಗಳಿಗೆ ಸದಸ್ಯತ್ವ ಹಾಗೂ ಬೆಂಬಲ ನೀಡುತ್ತಿರುವುದು, ಕೊಲೆಗಡುಕರಿಗೆ ಬಹುಮಾನ ಘೋಷಿಸುವುದು, ಇತ್ಯಾದಿಗಳು ಜಗಜ್ಜಾಹೀರಾಗಿರುವ ಸಂಗತಿಗಳು. ಆದರೆ ಮುಸ್ಲಿಂ ಸಮುದಾಯಗಳ ವಿಭಿನ್ನ ಸಾಂಪ್ರದಾಯಿಕ ಮುಂದಾಳುಗಳು ಇದನ್ನು ಖಂಡಿಸುತ್ತಿರುವುದೂ ಅಷ್ಟೇ ಸತ್ಯ. ಮುಸ್ಲಿಂ ಸಮಾಜದಲ್ಲೇ ಇಸ್ಲಾಮಿನ ಹೆಸರಿನಲ್ಲೇ ಈ ಕೃತ್ಯಗಳನ್ನು ನಡೆಸುತ್ತಿರುವವರು ನಿಜವಾದ ಮುಸ್ಲಿಮರೇ ಅಲ್ಲ ಎಂಬುದಾಗಿ ಬಹುಸಂಖ್ಯಾತ ಮುಸ್ಲಿಮರು ತಿರಸ್ಕರಿಸುತ್ತಿದ್ದಾರೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಮುಸ್ಲಿಂ ಬುದ್ಧಿಜೀವಿಗಳು ಪವಿತ್ರಗ್ರಂಥದ ಸಾಲುಗಳು ಹಾಗೂ ಘೋಷಣೆಗಳೇ ಈ ಭಯೋತ್ಪಾದನೆಗೆ ಬಳಕೆಯಾಗುತ್ತಿರುವ ಕುರಿತು ಆತಂಕಗೊಂಡಿದ್ದಾರೆ.

   ಆದರೆ ಇದನ್ನು ಅಪರಾಧ ಎಂದು ನೇರವಾಗಿ ಹೇಳಲಾಗದ ಸ್ಥಿತಿಯಲ್ಲಿ ನಮ್ಮ ಸೆಕ್ಯುಲರ್ ಬುದ್ಧಿಜೀವಿಗಳೂ ನೇತಾರರೂ ಇದ್ದಾರೆ. ಹಾಗೆ ಹೇಳಿದರೆ ಎಲ್ಲಿ ಅಲ್ಪಸಂಖ್ಯಾತರು ಅಪಾರ್ಥ ಮಾಡಿಕೊಳ್ಳುತ್ತಾರೋ ಎಂಬ ಅಳುಕು. ಉದಾಹರಣೆಗೆ ಮೊನ್ನೆ ಭಟ್ಕಳದಲ್ಲಿ ಕೆಲವರನ್ನು ಭಯೋತ್ಪಾದಕರೆಂದು ಸಂದೇಹಿಸಿ ಬಂಧಿಸಲಾಯಿತು. ಆಗ ನಮ್ಮ ರಾಜಕಾರಣಿಯೊಬ್ಬರ ಹೇಳಿಕೆ ಹೀಗಿದೆ: “ಒಬ್ಬಿಬ್ಬರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆಂದು ಇಡೀ ಸಮುದಾಯವೇ ಅದರಲ್ಲಿ ತೊಡಗಿಕೊಂಡಿದೆ ಎಂದು ಹೇಳಲಾಗದು”. ಇಂಥ ಹೇಳಿಕೆಗಳು ಏಕೆ ಬರುತ್ತಿವೆ? ಭಾರತದಲ್ಲಿ ಇಂದು ಇಡೀ ಮುಸ್ಲಿಂ ಸಮುದಾಯವೇ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದೆ ಎಂದು ಯಾರೂ ಹೇಳಿಲ್ಲ. ಇವರೆಲ್ಲರಿಂದ ಹಿಂದೂ ಫ್ಯಾಸಿಸ್ಟರೆಂದು ಕರೆಸಿಕೊಂಡ ನರೇಂದ್ರ ಮೋದಿಯವರೇ ‘ಭಯೋತ್ಪಾದಕರನ್ನು ಭಾರತೀಯ ಮುಸ್ಲಿಮರೇ ಭಾರತದಿಂದ ಓಡಿಸುತ್ತಾರೆ’ ಎಂಬ ಹೇಳಿಕೆ ನೀಡಿ ಆಗಿದೆ. ಅದಕ್ಕೂ ಮುಖ್ಯವಾಗಿ, ಯಾರಾದರೂ ಬೇರೆ ಕೊಲೆಗಡುಕರನ್ನು ಅತ್ಯಾಚಾರಿಗಳನ್ನು ಬಂಧಿಸಿದರೆ ಇದೇ ರಾಜಕಾರಣಿಗಳೇ ಹೀಗೆ ಹೇಳುತ್ತಾರೆಯೆ?

   ಈ ಮೇಲಿನ ಹೇಳಿಕೆಯ ಹಿಂದೆ ಭಾರತೀಯ ಸೆಕ್ಯುಲರ್ ವಾದಿಗಳ ಒಂದು ಭಯ ಹಾಗೂ ಸಮರ್ಥನೆ ಕೆಲಸಮಾಡುತ್ತಿದೆ. ಏಕೆಂದರೆ ಇವರೇ ಹಿಂದೂ ಸಮಾಜದಲ್ಲಿ ಕೆಲವು ಜಾತಿಗಳ ಜನರು ನಡೆಸಿದ ಅಪರಾಧಗಳನ್ನು ಆಯಾ ಜಾತಿಗಳ ಅಥವಾ ಹಿಂದೂಗಳ ಸ್ವಭಾವವೆಂಬಂತೆ ಬಿಂಬಿಸಿ ತಮ್ಮ ರಾಜಕೀಯವನ್ನು, ಹೋರಾಟಗಳನ್ನು ಕಟ್ಟಿಕೊಂಡಿರುತ್ತಾರೆ. ಅವರಿಗೆ ಆ ತರ್ಕವೇ ಇಲ್ಲೂ ಅನ್ವಯವಾಗಬಹುದು ಎಂಬ ಭಯ ಇರುತ್ತದೆ. ಭಯೋತ್ಪಾದಕರೇನೋ ತಮ್ಮನ್ನು ಇಸ್ಲಾಂ ರಕ್ಷಕರೆಂದು ಘೋಷಿಸಿಕೊಳ್ಳುತ್ತಾರೆ ಹಾಗೂ ಪವಿತ್ರಗ್ರಂಥದ ಸಾಲುಗಳನ್ನು ಉದ್ಧರಿಸುತ್ತಾರೆ ಸರಿ, ಆದರೆ ಕೆಲವರು ಹಾಗೆ ಘೋಷಿಸಿಕೊಂಡಾಕ್ಷಣ ಅಪರಾಧವು ಸಮಸ್ತ ಮುಸ್ಲಿಂ ಸಮುದಾಯದ್ದಾಗಿಬಿಡುತ್ತದೆಯೆ? ಬಹುಶಃ ಈ ಮೇಲಿನ ತರ್ಕದ ಪ್ರಕಾರ ಸಮಾಜವನ್ನು ನೋಡಲು ಕಲಿತವರಿಗೆ ಹಾಗೇ ಅನ್ನಿಸುತ್ತದೆ. ಇದು ನಾವು ಆಧುನಿಕರು ಪಶ್ಚಿಮದ ಚಿಂತನಾಕ್ರಮದಿಂದ ಗಳಿಸಿಕೊಂಡ ಒಂದು ದುಶ್ಚಟವಾಗಿದೆ. ಸಮುದಾಯಗಳ ಹಿಂದೆ ಹುನ್ನಾರಗಳನ್ನೂ, ಉದ್ದೇಶಗಳನ್ನೂ ಆರೋಪಿಸಿಕೊಂಡು ನಮ್ಮ ಆಧುನಿಕ ಸಂಸ್ಥೆಗಳನ್ನೂ, ಹೋರಾಟಗಳನ್ನೂ, ಆ ಮೂಲಕ ಜೀವನ ದೃಷ್ಟಿಯನ್ನೂ ಕಟ್ಟಿಕೊಂಡಿದ್ದೇವೆ, ಆಸ್ತಿ ಪಾಸ್ತಿಯನ್ನೂ ಮಾಡಿಕೊಂಡಿದ್ದೇವೆ. ಆ ಚಾಳಿಯನ್ನು ಬಿಡಲಾರೆವು.

  ಇಂಥ ಜೀವನ ದೃಷ್ಟಿಯನ್ನು ಬೆಳೆಸಿಕೊಂಡ ಮೇಲೆ ತಮಗೆ ಬೇಕಾದಲ್ಲಿ ಈ ತರ್ಕವನ್ನು ಎಗ್ಗಿಲ್ಲದೇ ಅನ್ವಯಿಸಿ, ಬೇಡಾದಲ್ಲಿ ಕುತರ್ಕಗಳನ್ನು ಬಳಸುವ ಫಜೀತಿಗಳಿಗೆ ಒಳಗಾಗುವುದು ಸಹಜ. ಹಲವಾರು ಸೆಕ್ಯುಲರ್ ವಾದಿಗಳು  ಮುಸ್ಲಿಂ ಭಯೋತ್ಪಾದನೆಯು ನಿಜವಾದ ಇಸ್ಲಾಂ ಅಲ್ಲ ಎನ್ನುತ್ತಾರೆ, ಅವರದು ಪಶ್ಚಿಮದ ಸಾಮ್ರಾಜ್ಯಶಾಹಿಯ ಹಿಂಸೆಗೆ ಒಂದು ಪ್ರತಿಕ್ರಿಯೆ ಹಾಗಾಗಿ ಮುಸ್ಲಿಂ ಮೂಲಭೂತವಾದಕ್ಕೆ ಒಂದು ಉದ್ದೇಶವಿದೆ, ಆದರೆ ಹಿಂದೂ ಮೂಲಭೂತವಾದವೇ ಮಾನವವಿರೋಧಿ, ಹಾಗಾಗಿ ಹೆಚ್ಚು ಅಪಾಯಕಾರಿ ಎಂದವರಿದ್ದಾರೆ. ಅವರ ತರ್ಕದ ಪ್ರಕಾರ ಭಾರತದಲ್ಲಿ ನಡೆದ ಭಯೋತ್ಪಾದಕರ ದಾಳಿಗಳು ಹಿಂದೂ ಕೋಮುವಾದಕ್ಕೆ ಪ್ರತಿಕ್ರಿಯೆ. ಪೇಶಾವರದಲ್ಲಿ ಶಾಲಾ ಮಕ್ಕಳ ಬರ್ಬರ ಹತ್ಯೆಯಾದಾಗ ಭಾರತದಲ್ಲಿ ಜಾತಿವ್ಯವಸ್ಥೆಯ ಹಿಂಸೆ ಅನ್ಯಾಯಗಳನ್ನು ಮೆಲುಕು ಹಾಕಿದವರೂ ಇದ್ದಾರೆ. ಏಕೆಂದರೆ ಇವರ ಪ್ರಕಾರ ಪ್ರಪಂಚದಲ್ಲೇ ಇಲ್ಲದ ಕ್ರೌರ್ಯ ಭಾರತದಲ್ಲೇ ಇರಬೇಕಾದರೆ ಭಯೋತ್ಪಾದಕರು ಅದನ್ನು ಮೀರಿಸುವುದೆಂದರೇನು?

  ಆದರೆ ಇಂಥ ಕುತರ್ಕಗಳನ್ನು ಬಿಟ್ಟು ವಾಸ್ತವದ ಸಮಸ್ಯೆಗಳನ್ನು ಗುರುತಿಸುವಂತೆ ನಮಗೆ ಕಾಲವೇ ಪಾಠ ಕಲಿಸುತ್ತಿದೆ. ಭಯೋತ್ಪಾದನೆ ಹೆಚ್ಚಿದಂತೆಲ್ಲ ವಿಶ್ವದ ಮುಸ್ಲಿಮೇತರ ರಾಷ್ಟ್ರಗಳ ರಕ್ಷಣಾ ವ್ಯವಸ್ಥೆಗಳು ತಮ್ಮ ಮುಸ್ಲಿಂ ಪ್ರಜೆಗಳ ಕುರಿತು ಹೆಚ್ಚೆಚ್ಚು ಎಚ್ಚರ ವಹಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಅಲ್ಲಿನ ಮುಸ್ಲಿಮರಿಗೆ ಈ ಪರಿಸ್ಥಿತಿಯು ಹೆಚ್ಚೆಚ್ಚು ದುರ್ಭರವಾಗಬಹುದು. ಮುಸ್ಲಿಂ ಸಮುದಾಯದ ಹದಿಹರೆಯದ ಯುವಕರಲ್ಲಿ ಭಯೋತ್ಪಾದನೆಯೊಂದು ಅಪರಾಧವೆಂಬುದರ ಕುರಿತು ಜಾಗೃತಿಯನ್ನು ಮೂಡಿಸುವುದೊಂದೇ ಇದಕ್ಕೆ ಪರಿಹಾರ. ಇದು ಸಾಮಾಜಿಕ ಕಳಕಳಿಯುಳ್ಳ ಮುಸ್ಲಿಂ ಬುದ್ಧಿಜೀವಿಗಳ ಮುಂದಿರುವ ಅತ್ಯಂತ ತುರ್ತಾದ  ಕೆಲಸ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: