ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 8: ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ

ಪ್ರೊ. ರಾಜಾರಾಮ ಹೆಗಡೆ.

      ಕನ್ನಡದ ಅಂಕಣಕಾರರೊಬ್ಬರು ನಾಲ್ಕಾರು ವರ್ಷಗಳ ಹಿಂದೆ ವಿವೇಕಾನಂದರ ಕುರಿತು ಬರೆದ ಲೇಖನವೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಇದು ತುಂಬಾ ವಿವಾದಾತ್ಮಕವಾದ ಲೇಖನವಾಗಿತ್ತು, ಕಾರಣ, ವಿವೇಕಾನಂದರ ಕುರಿತು ಇರುವ ಅತಿಮಾನುಷ ಕಲ್ಪನೆಗಳನ್ನು ಒಡೆಯುವುದು ತನ್ನ ಗುರಿ ಎಂಬುದೇ ಆ ಲೇಖನದ ಘೋಷಣೆ. ಆ ಲೇಖನದಲ್ಲೇ ವಿವೇಕಾನಂದರು ಮತ್ತೊಂದು ರೀತಿಯ ಅತಿಮಾನುಷರಾಗಿ ಚಿತ್ರಿತರಾದುದು ವಿಪರ್ಯಾಸ. ಅದೆಂದರೆ ಅವರು ಅಕ್ಷರಶಃ ಇಂದಿನ ಪ್ರಗತಿಪರರಂತೆ ವಿಚಾರ ಮಾಡುತ್ತಿದ್ದುದು: ಹಿಂದೂ ಧರ್ಮವೊಂದು ನರಕ, ಹಾಗಾಗಿ ಅದು ನಾಶವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು, ಕ್ರಿಸ್ತನ ಪಾದವನ್ನು ತಮ್ಮ ರಕ್ತದಿಂದ ತೊಳೆದರೂ ಕಡಿಮೆಯೇ, ಭಾರತೀಯ ಸಂಸ್ಕೃತಿಗೆ ಇಸ್ಲಾಂನ ಶರೀರ ಇರಬೇಕು, ಬ್ರಾಹ್ಮಣರು ಭಾರತಕ್ಕೆ ಶಾಪ, ಇತ್ಯಾದಿ. ಅವರು ಮಾಂಸವನ್ನು ತಿಂದಿದ್ದು, ಹುಕ್ಕಾ ಸೇದಿದ್ದು, ಹಾಗೂ ಹಲವಾರು ರೋಗಗಳಿಂದ ನರಳಿದ್ದು ಆ ಲೇಖನಕ್ಕೆ ಬಹಳ ನಿರ್ಣಯಕವಾಗಿ ಕಂಡಿದೆ. ಏಕೆಂದರೆ ಇಂದ್ರಿಯಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಇಲ್ಲದ ಚಟಗಳನ್ನು, ರೋಗಗಳನ್ನು ಆಹ್ವಾನಿಸಿಕೊಂಡು, ಸಮಾಜವನ್ನು (ತನಗೆ ಬೇಕಾದಾಗ) ಧಿಕ್ಕರಿಸಿ ಬದುಕುವುದು ಪ್ರಗತಿಪರ ಜೀವನ ಶೈಲಿಯ ಸಂಕೇತವಾಗಿದೆ. ಇಂಥವರಿಗೆ ವಿವೇಕಾನಂದರು ಪ್ರಗತಿಪರರಾಗಬೇಕಾದರೆ ಹೀಗೇ ಇರಬೇಕಾದುದು ಸಹಜ.

   ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ. ಹಾಗೂ ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ. ಭಾರತೀಯ ಅಧ್ಯಾತ್ಮ ಪರಂಪರೆಯು ಈ ಕುರಿತು ಯಾವುದೇ ಸಂದೇಹವನ್ನೂ ಉಳಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಕಾಳಜಿ ವಹಿಸಬೇಕಾದದ್ದು ವಿವೇಕಾನಂದರ ವಿಚಾರಗಳ ಕುರಿತು ಹುಟ್ಟಿಕೊಳ್ಳಬಹುದಾದ ತಪ್ಪು ಕಲ್ಪನೆಗಳ ಕುರಿತು. ಅವರ ವಿಚಾರಗಳ ಕುರಿತು ಏನೇನು ವಿಕೃತ ಚಿತ್ರಣಗಳು ಹುಟ್ಟಿಕೊಂಡಿವೆಯೆಂಬುದಕ್ಕೆ ಈ ಮೇಲಿನ ಲೇಖನವೂ ಒಂದು ಉದಾಹರಣೆ. ಇಲ್ಲಿ ವಿವೇಕಾನಂದರ ಭಾಷಣಗಳಿಂದ ನಾಲ್ಕಾರು ಆಯ್ದ ಸಾಲುಗಳನ್ನು ಸಂದರ್ಭದಿಂದ ಎತ್ತಿ ತಮ್ಮ ಪ್ರತಿಪಾದನೆಗೆ ಅಸಹಜವಾಗಿ ಒಗ್ಗಿಸಿಕೊಳ್ಳಲಾಗಿದೆ. ವಿವೇಕಾನಂದರ ಭಾಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂದು ಪ್ರಗತಿಪರರೆಂದು ಕರೆದುಕೊಳ್ಳುವವರು ಪ್ರತಿಪಾದಿಸಬಯಸುವ ಸಮಾಜ ಸುಧಾರಣೆಯ ಕುರಿತು ಒಟ್ಟಾರೆಯಾಗಿ ವಿವೇಕಾನಂದರ ಅಭಿಪ್ರಾಯಗಳು ಏನು ಎಂಬುದು ತಿಳಿದುಬರುತ್ತದೆ. ಈ ಕೆಳಗೆ ನಾನು ವಿವೇಕಾನಂದರ ಹೇಳಿಕೆಗಳನ್ನೇ ಸಂಕ್ಷಿಪ್ತಗೊಳಿಸಿದ್ದೇನೆ.

    ವಿವೇಕಾನಂದರು ತಮ್ಮ ಕಾಲದಲ್ಲಿ ಇದ್ದ ಸಮಾಜ ಸುಧಾರಕರನ್ನು ಢೋಂಗಿಗಳು ಎಂದು ಪರಿಗಣಿಸಿದ್ದರು. ಅದಕ್ಕೆ ಕಾರಣ ಹೀಗಿದೆ: ಇಂಥ ಸಮಾಜ ಸುಧಾರಕರಿಗೆ ತಾವು ಏನು ಹೇಳುತಿದ್ದೇವೆಂಬುದೇ ಅರ್ಥವಾಗಿಲ್ಲ. ಹಿಂದೂ ಧರ್ಮದ ಆಚರಣೆಗಳು ಕೆಡುಕು, ಅವನ್ನು ಮಾಡಬಾರದು ಎಂದು ಇಂಥ ಸುಧಾರಕರು ಹೇಳುತ್ತಾರೆ, ಆದರೆ ಏಕೆ ಮಾಡಬಾರದೆಂದು ಪ್ರಶ್ನಿಸಿದರೆ ಅವರಿಗೆ ಏಕೆಂಬುದೇ ತಿಳಿಯದು, ಈ ಸುಧಾರಕರು ಮೂರ್ತಿಪೂಜೆಯು ಪಾಪ ಎಂಬುದಾಗಿ ಹೇಳುತ್ತಾರೆ. ಆದರೆ ರಾಮಕೃಷ್ಣ ಪರಮಹಂಸರು ಮೂರ್ತಿಪೂಜೆಯಿಂದಲೇ ಜ್ಞಾನವನನ್ನು ಹೊಂದಿದರು. ಅದರಲ್ಲೇನು ಪಾಪವಿದೆ? ಎಂದು ಕೇಳಿದರೆ ಬ್ರಿಟಿಷರು ಹಾಗೆ ಹೇಳುತ್ತಾರೆ ಎಂಬುದನ್ನು ಬಿಟ್ಟರೆ ಈ ಸುಧಾರಕರಿಗೆ ನಮ್ಮ ಆಚರಣೆಗಳನ್ನು ದೂಷಿಸಲು ಬೇರೆ ಕಾರಣವೇ ಇಲ್ಲ. ಇಂಥ ಕರೆಗಳನ್ನು ಕೊಡುವವರೆಲ್ಲ ಆಧುನಿಕ ವಿದ್ಯಾವಂತರು ಹಾಗೂ ಅವರಲ್ಲಿ ಒಬ್ಬರೂ ಅನ್ಯರಿಗಾಗಿ ತಮ್ಮ ಸುಖವನ್ನು ತ್ಯಾಗಮಾಡುವವರಲ್ಲ, ಅವರು ಕೇವಲ ಪ್ರಚಾರ ಜೀವಿಗಳು, ಟೊಳ್ಳು ವ್ಯಕ್ತಿತ್ವಗಳು. ಭಾರತೀಯ ಸಂಸ್ಕೃತಿಯನ್ನು ಅಲ್ಲಗಳೆಯುವವನು ಹಾಗೂ ಅದನ್ನು ಕಣ್ಮುಚ್ಚಿ ಅನುಕರಿಸುವವನು ಇಬ್ಬರೂ ಅದಕ್ಕೆ ಅಪಾಯಕಾರಿಯೇ ಆಗಿದ್ದರೂ ಕೂಡ ಇಂಥ ಸುಧಾರಕರಿಗಿಂತ ಒಬ್ಬ ಸಂಪ್ರದಾಯಸ್ಥನನ್ನೇ ತಾನು ಬೆಂಬಲಿಸುತ್ತೇನೆ, ಏಕೆಂದರೆ ಕಡೇ ಪಕ್ಷ ಆತನಿಗೊಂದು ಗಟ್ಟಿ ವ್ಯಕ್ತಿತ್ವವಾದರೂ ಇದೆ ಎಂಬುದಾಗಿ ವಿವೇಕಾನಂದರು ಹೇಳಿದ್ದರು.

  ವಿವೇಕಾನಂದರು ತಾನೊಬ್ಬ ಸಮಾಜ ಸುಧಾರಕನಲ್ಲ ಎಂಬುದನ್ನು ಒತ್ತಿ ಹೇಳುತ್ತಾರೆ. ಹಾಗೂ ಅವರ ಅನೇಕ ಭಾಷಣಗಳಲ್ಲಿ ಅವರು ಈ ಅಂಶವನ್ನು ಮನದಟ್ಟುಮಾಡಲು ಪ್ರಯತ್ನಿಸುತ್ತಾರೆ. ಏಕೆ ಸಮಾಜ ಸುಧಾರಕರನ್ನು ಅವರು ಅಷ್ಟೊಂದು ಕಟುವಾಗಿ ಟೀಕಿಸುತ್ತಿದ್ದರು? ಹಿಂದೂ ಸಂಸ್ಕೃತಿಯಲ್ಲಿ ಸುಧಾರಣೆಯೇ ಬೇಡ ಎಂಬುದು ಅವರ ಅಭಿಮತವಾಗಿರಲಿಲ್ಲ. ಆದರೆ ಸುಧಾರಣೆಯ ಹೆಸರಿನಲ್ಲಿ ಹಿಂದೂ ಸಂಸ್ಕೃತಿಯನ್ನೇ ನಿರಾಕರಿಸುವ ಒಂದು ಪೃವೃತ್ತಿಯು ಅಂದಿನ ಆಧುನಿಕ ವಿದ್ಯಾವಂತರಲ್ಲಿ ಬೆಳೆಯುತ್ತಿರುವುದು ಅಪಾಯಕಾರಿ ಎಂಬುದು ಅವರ ಧೋರಣೆಯಾಗಿತ್ತು. ಅಂದರೆ ಈ ಪೃವೃತ್ತಿಯ ಹಿಂದೆ ಅನ್ಯ ಸಂಸ್ಕೃತಿಗಳ ಅಂಧಾನುಕರಣೆ, ಹಾಗೂ ಅವುಗಳ ಕೈಗೊಂಬೆಯಾಗಿ ಸ್ವಂತ ಸಂಸ್ಕೃತಿಯನ್ನೇ  ನಾಶಮಾಡುವ ಪೃವೃತ್ತಿ ಅವರಿಗೆ ಕಾಣಿಸುತ್ತದೆ. ಹಿಂದೂ ಅಧ್ಯಾತ್ಮವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ವೈಜ್ಞಾನಿಕವಾದ ಜೀವನ ಕಲ್ಪನೆಯಾಗಿದೆ. ಹಿಂದೂ ಆಚರಣೆಗಳು ಈ ನಿಟ್ಟಿನಲ್ಲಿ ಅಂಥ ಜೀವನ ಸಾಧನೆಗೆ ಅಳವಡಿಸಿಕೊಂಡಂಥವು. ಹಿಂದೂಗಳ ಗ್ರಂಥಗಳು ಈ ಧ್ಯೇಯಾದರ್ಶವನ್ನು ಬಿತ್ತರಿಸುತ್ತವೆ. ಅಂಥದೊಂದು ಪರಂಪರೆಯನ್ನು ಹಾಗೂ ಅದು ಕಂಡುಕೊಂಡ ಆಚರಣೆಗಳನ್ನು ನಿರಾಕರಿಸುವವರು ಅದರ ಶ್ರೇಷ್ಠತೆಯನ್ನು ತಿಳಿದುಕೊಳ್ಳದೇ ಪಾಶ್ಚಾತ್ಯರು ಹೇಳಿದ್ದನ್ನು ಗಿಳಿಪಾಠ ಒಪ್ಪಿಸುತ್ತಿದ್ದಾರೆ.

    ಅವರು ಸುಧಾರಣಾವಾದಿಗಳ ಕಾಳಜಿಯನ್ನು ತಾನು ಗೌರವಿಸುತ್ತೇನೆ ಎನ್ನುತ್ತಾರೆ. ಆದರೆ ವಸಾಹತು ಕಾಲದ ಸಮಾಜ ಸುಧಾರಣೆಯು ಪ್ರಾರಂಭವಾಗಿ ನೂರು ವರ್ಷಗಳಾದರೂ ಅದು ನಮ್ಮ ಜನಕ್ಕೆ ಏನು ಒಳ್ಳೆಯದು ಮಾಡಿದೆ? ಅದು ಸುಧಾರಣೆಯಲ್ಲ, ನಮ್ಮ ಸಂಸ್ಕೃತಿಯ ನಾಶ. ಹಾಗಾಗಿ ಅಂಥ ಸುಧಾರಣೆಗಳಿಂದ ನಿಂದನೆಯ ಸುರಿಮಳೆಯಾಗಿದೆಯೇ ಹೊರತೂ ನಮ್ಮ ಸಮಾಜಕ್ಕೆ ಒಳ್ಳೆಯದಾಗಿಲ್ಲ ಎನ್ನುತ್ತಾರೆ ವಿವೇಕಾನಂದರು. ಅಷ್ಟೇ ಅಲ್ಲ, ಸಂಪ್ರದಾಯ ಪರರೂ ಕೂಡ ಅಷ್ಟೇ ಕೆಟ್ಟದಾಗಿ ಅವರಿಗೆ ಪ್ರತಿಕ್ರಿಯಿಸಿ ಹಿಂದೂ ಜನಾಂಗಕ್ಕೇ ನಾಚಿಕೆ ಹುಟ್ಟಿಸುವ ಸಾಹಿತ್ಯ ರಾಶಿಬಿದ್ದಿದೆ ಎನ್ನುತ್ತಾರೆ.

     ಈ ಸಂದರ್ಭದಲ್ಲಿ ಅವರು ಈ ಸಮಾಜದಲ್ಲಿನ ಅನ್ಯಾಯವನ್ನು ತೊಡೆಯಲು ಇಂಥ ಸುಧಾರಣೆಯ ಮಾರ್ಗ ಸರಿಯಾದುದಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದರು.  ಅದರಲ್ಲೂ ಕಾಯ್ದೆ ಕಾನೂನುಗಳನ್ನು ಪಾಸುಮಾಡಿ ಬಲಾತ್ಕಾರದಿಂದ ಜನರನ್ನು ಸುಧಾರಿಸುತ್ತೇನೆ ಎನ್ನುವುದು ಘರ್ಷಣೆಯನ್ನು, ಅನ್ಯಾಯವನ್ನು, ಅಮಾನವೀಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಕ್ಕೆ ಉದಾಹರಣೆಯಾಗಿ ಅವರು ಗುಲಾಮಗಿರಿಯ ನಿರ್ಮೂಲನೆಗಾಗಿ ಅಮೇರಿಕಾದಲ್ಲಿ ಕಾನೂನುಗಳನ್ನು ತಂದಮೇಲೆ ಪ್ರಧಾನ ಧಾರೆಯ ಜನರು ಅವರ ಜವಾಬ್ದಾರಿ ತಮಗೆ ಇಲ್ಲ ಎಂಬ ಧೋರಣೆಯನ್ನು ತಳೆದದ್ದು ಹಾಗೂ ಕರಿಜನರು ಬಹಿಷ್ಕೃತರಾಗಿ ಅವರ ಸ್ಥಿತಿ ಮತ್ತಷ್ಟು ಕರುಣಾಜನಕವಾಗಿರುವುದನ್ನು ಕುರಿತು ನಮ್ಮ ಗಮನ ಸೆಳೆಯುತ್ತಾರೆ.

      ವಸಾಹತು ಕಾಲದಲ್ಲಿ ಬ್ರಿಟಿಷರು ಭಾರತವನ್ನು ತಮ್ಮ ಸ್ವಾಧೀನ ಪಡಿಸಿಕೊಂಡು ಆಳ್ವಿಕೆ ಪ್ರಾರಂಭಿಸಿದ ಮೇಲೆ ಈ ಸಮಾಜ ಸುಧಾರಣೆಗಳು ಹುಟ್ಟಿಕೊಂಡವು. ಹಾಗಾಗಿ ಈ ಸುಧಾರಣೆಗಳಿಗೂ, ಭಾರತೀಯರ ಗುಲಾಮಗಿರಿಗೂ, ಇಂಗ್ಲೀಷ್ ವಿಧ್ಯಾಭ್ಯಾಸಕ್ಕೂ, ಸೆಮೆಟಿಕ್ ರಿಲಿಜನ್ನುಗಳು ಹಿಂದೂಯಿಸಂ ಒಂದು ಸುಳ್ಳು ರಿಲಿಜನ್ನು ಎನ್ನುತ್ತಿದ್ದುದಕ್ಕೂ ಸಂಬಂಧ ನೇರವಾಗಿಯೇ ಇತ್ತು. ವಿವೇಕಾನಂದರು ಆಧುನಿಕ ವಿಧ್ಯಾಭ್ಯಾಸವು ನಮ್ಮ ಸಂಸ್ಕೃತಿಯ ಕುರಿತು ನಕಾರಾತ್ಮಕ ಭಾವನೆಯನ್ನು ಹುಟ್ಟಿಸುತ್ತದೆ ಎಂಬುದನ್ನು ಗುರುತಿಸಿದ್ದರು. ‘ಒಂದು ಮಗುವು ಇಂಗ್ಲೀಷ್ ಶಾಲೆಗೆ ಹೋದ ಮೊದಲ ದಿನವೇ ತನ್ನ ತಂದೆ ಮೂರ್ಖ ಎನ್ನಲು ಕಲಿಯುತ್ತದೆ. ಎರಡನೆಯ ದಿನ ತನ್ನ ಅಜ್ಜನಿಗೆ ತಲೆಕೆಟ್ಟಿದೆ ಎನ್ನಲು ಕಲಿಯುತ್ತದೆ…. ಹದಿನಾರನೆಯ ವರ್ಷದಲ್ಲಿ ಅದರ ತಲೆತುಂಬ ನಮ್ಮ ಸಂಸ್ಕೃತಿಯ ಬಗ್ಗೆ ನಕಾರಾತ್ಮಕ ಭಾವನೆಗಳೇ ತುಂಬಿರುತ್ತವೆ’ ಎನ್ನುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತೀಯ ಸಂಸ್ಕೃತಿಗೆ ಒದಗಿರುವ ಅಪಾಯವನ್ನು ಅವರು ಗ್ರಹಿಸಿದ್ದರು. ರಾಮಕೃಷ್ಣರನ್ನು ಸಂಧಿಸಿದ ನಂತರ ಅವರ ಇಡೀ ಜೀವನವೇ ಆ ಅಪಾಯದ ವಿರುದ್ಧದ ಹೋರಾಟವಾಯಿತು.

                                                                                                                                                                      ಮುಂದುವರಿಯುವುದು…

Advertisements
Categories: Uncategorized
  1. ಏಪ್ರಿಲ್ 24, 2015 ರಲ್ಲಿ 12:45 ಅಪರಾಹ್ನ

    ನೀವು ಹೇಳಿರುವ ಅಂಶಗಳು ಸರಿಯಾಗಿಯೇ ಇವೆ… ಆದರೆ ಭಾರತದ ಅಧ್ಯಾತ್ಮದ ಜೊತೆ ಪಾಶ್ಚಿಮಾತ್ಯರ ವಿಜ್ಞಾನವೂ ಬೆಸೆಯಬೇಕೆಂಬುದು ಅವರ ಮಾತಾಗಿತ್ತು… ಅವರಿಗೆ (ಅಮೇರಿಕನ್ನರಿಗೆ) ಅಧ್ಯಾತ್ಮವನ್ನು ಕೊಟ್ಟು ಅವರಿಂದ (ತಂತ್ರಜ್ಞಾನ)ವಿಜ್ಞಾನವನ್ನು ಪಡೆಯಬೇಕು ಎಂಬುದನ್ನು ಅವರು ಹಲವು ಬಾರಿ ಒತ್ತಿ ಹೇಳಿದ್ದಾರೆ…

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: