ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 12: ದೃಷ್ಟಾಂತಗಳಿಂದ ಪಾಠ ಕಲಿಯುವುದು ಹೇಗೆ?    

ಪ್ರೊ. ರಾಜಾರಾಮ ಹೆಗಡೆ.

   ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ವೇಳೆ ಬಹುಸಂಖ್ಯಾತರು ಯಾವ ಪಕ್ಷದ ಜೊತೆಗೆ ಇದ್ದಾರೋ ಅದನ್ನು ಜನಾದೇಶ ಎಂದು ಬಣ್ಣಿಸುವುದು ವಾಡಿಕೆ. ಕೆಲವೊಮ್ಮೆ ಬಹುಮತ ಪಡೆದ ಪಕ್ಷಗಳು ವಾಸ್ತವದಲ್ಲಿ ಒಂದೆರಡು ಶೇಕಡಾವಾರು ಮತದಿಂದ ಗೆದ್ದಿರುತ್ತವೆ, ಒಟ್ಟೂ ಶೇಕಡಾವಾರು 50ರಷ್ಟು ಮತಗಳನ್ನೂ ಪಡೆದಿರುವುದಿಲ್ಲ. ಅಥವಾ ಮೂರು ನಾಲ್ಕು   ಪಕ್ಷಗಳಿಗಿಂತ ಹೆಚ್ಚು ಸ್ವರ್ಧಿಸಿದ್ದರೆ ಸೋತವರ ಒಟ್ಟೂ ಮತವೇ ಗೆದ್ದವರದಕಿಂತ ಜಾಸ್ತಿ ಆಗುವ ಸಂಭವವವೂ ಇದೆ. ಆಗಲೂ ಗೆದ್ದವರು ತಮಗೆ ಜನಾದೇಶ ಸಿಕ್ಕಿದೆ ಎಂದೇ ಬಣ್ಣಿಸುತ್ತಾರೆ. ಇಂಥ ಜನಾದೇಶವನ್ನು ಗಳಿಸಿಕೊಳ್ಳಲು ನಮ್ಮ ರಾಜಕೀಯ ಪಕ್ಷಗಳು ಅನೇಕ ವಾಮ ಮಾರ್ಗಗಳನ್ನು ಬಳಸಿಕೊಳ್ಳುವುದು ವಾಡಿಕೆಯಾಗಿಬಿಟ್ಟಿದೆ. ಹಾಗಾಗಿ ಚುನಾವಣೆಯಲ್ಲಿ ಸೋತವರು ಜನಪರ ರಾಜಕಾರಣಿಗಳಲ್ಲ, ಗೆದ್ದವರು ಜನಪರ ರಾಜಕಾರಣಿಗಳು ಎನ್ನುವ ತರ್ಕ ಅಸಂಬದ್ಧವಾದುದು. ವಾಸ್ತವ ಅದಕ್ಕೆ ವಿರುದ್ಧವಾಗಿದ್ದರೂ ಆಶ್ಚರ್ಯವಿಲ್ಲ.

    ದೆಹಲಿಯಲ್ಲಿ ಆಪ್ ವಿಜಯದ ಕುರಿತು ಜನಾದೇಶ ಎನ್ನುವ ತರ್ಕವನ್ನು ಹಚ್ಚುವಾಗ ಈ ಮೇಲಿನ ಅನೇಕ ತರ್ಕಗಳು  ಅದಕ್ಕೆ ಅನ್ವಯಿಸುವುದಿಲ್ಲ ಎನ್ನುವುದು ಆಪ್ನ ಹೆಗ್ಗಳಿಕೆ. ಆದರೆ ಆಪ್ ಹೆಸರಿನಲ್ಲಿ ಗೆದ್ದವರು ನಿಜವಾದ ಜನಸೇವಕರೆ ಅಥವಾ ಆಪ್ನ ಅಲೆಯಲ್ಲಿ ತೇಲಿದವರೆ ಎಂಬುದು ಇನ್ನು ಮುಂದೆ ದೃಷ್ಟಾಂತವಾಗಬೇಕಿರುವ ಸಂಗತಿ ಎಂಬುದನ್ನು ನೆನಪಿಡಬೇಕು. ಅಷ್ಟಾಗಿಯೂ ಭಾರತೀಯ ಪ್ರಜಾ ಪ್ರಭುತ್ವದ ಪ್ರಯೋಗದಲ್ಲಿ ಆಪ್ ಒಂದು ಮೈಲಿಗಲ್ಲು ಎನ್ನುವುದರಲ್ಲಿ ಅದರ ಎದುರಾಳಿ ಪಕ್ಷಗಳಿಗೂ ಯಾವ ಸಂದೇಹವೂ ಇಲ್ಲ. ಕೇವಲ ಹಣ ಹೆಂಡವೊಂದೇ ಅಲ್ಲ, ಜಾತಿ, ಮತ, ಅಂತೆಲ್ಲ ದೇಶದ ಜನರನ್ನು ಒಡೆದು, ವಿಷದ ನಂಜನ್ನು ಜನರಿಗೆ ಊಡಿಸಿ ರಾಜಕೀಯ ಮಾಡುವ ಪರಂಪರೆಗೆ ಅಂತ್ಯ ಹಾಡಬಹುದು ಎಂಬುದನ್ನು ಆಪ್ ಪ್ರಯೋಗ ಮಾಡಿ ತೋರಿಸಿದೆ. ನಾಳೆ ಅದು ತನ್ನ ಭರವಸೆಯನ್ನು ಈಡೇರಿಸುವುದರಲ್ಲಿ ಗೆಲ್ಲಬಹುದು ಇಲ್ಲ ಸೋಲಬಹುದು, ಆದರೆ ಅದು ತೋರಿಸಿದ ಈ ದೃಷ್ಟಾಂತವು ನಮ್ಮ ಪ್ರಜಾ ಪ್ರಭುತ್ವಕ್ಕೊಂದು ಹೊಸ ಭರವಸೆ ಎಂಬುದರಲ್ಲಿ ಸಂದೇಹವಿಲ್ಲ.

   ಕಳೆದ 56 ವರ್ಷಗಳಿಂದ ಬೆಳೆದು ಬಂದ ರಾಜಕಾರಣವು ಭಾರತೀಯ ಜನತೆಗೆ ಬೇಸರ ಹಾಗೂ ಹತಾಶೆಯನ್ನು ತರಿಸಿದೆ ಎಂಬುದನ್ನು ನಮ್ಮ ಜನನಾಯಕರು ಇನ್ನಾದರೂ ಅರಿಯಬೇಕು. ಜನರ ದೈನಂದಿನ ಸಮಸ್ಯೆಗಳಾದ ರಸ್ತೆ, ನೀರು, ವಿದ್ಯುತ್, ಶಿಕ್ಷಣ, ನ್ಯಾಯ, ಶಾಂತಿಯುತ ಜೀವನ, ಸುರಕ್ಷತೆ, ಇತ್ಯಾದಿಗಳು ಜನರಿಗೆ ಮುಖ್ಯ. ಆದರೆ ನಮ್ಮ ರಾಜಕಾರಣಿಗಳು ಹಾಗೂ ಅಧಿಕಾರ ಶಾಹಿಗಳು ಇವುಗಳನ್ನು ಒದಗಿಸುವ ಸಂಸ್ಥೆಗಳನ್ನೇ ಭ್ರಷ್ಟಗೊಳಿಸಿ ನಮ್ಮ ಜನರಿಗೆ ವಂಚಿಸಿ ತಮ್ಮ ಸ್ವಲಾಭ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಜಾತಿ, ಮತ ಅಂತೆಲ್ಲ ಭಾವನಾತ್ಮಕ ಸಮಸ್ಯೆಗಳನ್ನೇ ದೊಡ್ಡ ಮಾಡಿ ಜನರ ಮೂಗಿಗೆ ತುಪ್ಪ ಸವರಿ ಜನಬೆಂಬಲವನ್ನು ಪಡೆಯಲು ಹೆಣಗುತ್ತಿದ್ದಾರೆ. ಹೀಗೆ ನಮ್ಮ ರಾಜಕಾರಣಕ್ಕೆ ಅವಾಸ್ತವಿಕ ಸಮಸ್ಯೆಗಳೇ ಪ್ರಧಾನವಾಗಿ ಅದು  ಜೀವನ ವಿಮುಖಿಯಾಗಿದೆ. ಇಂದು ಪ್ರಮುಖ ರಾಜಕೀಯ ಪಕ್ಷಗಳೆಲ್ಲ ದೇಶಕ್ಕೆ ಅತೀ ಮಹತ್ವದ್ದು ಎಂದು ಸಾರುವ ಐಡಿಯಾಲಜಿಗಳೆಲ್ಲ ಜನಸಮಾನ್ಯರಿಗೆ ಅರ್ಥವಾಗುವುದೂ ಇಲ್ಲ, ಆದರೂ ಅರ್ಥಹೀನವಾಗಿ ಕಾಣಿಸುತ್ತಿವೆ. ಈ ರಾಜಕಾರಣಕ್ಕೆ ವ್ಯಾಪಕವಾಗಿ ಇರುವ ಅಸಮಾಧಾನ ಆಪ್ ರೂಪದಲ್ಲಿಯೂ ವ್ಯಕ್ತಗೊಳ್ಳಬಹುದು ಎಂಬುದು ದೃಷ್ಟಾಂತವಾಗಿದೆ.

   ನಮ್ಮ ದೇಶಕ್ಕೆ ಲಾಭಬಡುಕ ರಾಜಕಾರಣಿಗಳು ಮಾತ್ರವೇ ಅಪಾಯಕಾರಿ ಎಂಬುದು ತಪ್ಪು ಕಲ್ಪನೆ. ಅವರಷ್ಟೇ ಬೇರೆ ಬೇರೆ ಐಡಿಯಾಲಜಿಗಳನ್ನು ನಂಬಿಕೊಂಡು ರಾಜಕಾರಣ ಮಾಡುವವರೂ ಅಷ್ಟೇ ಅಪಾಯಕಾರಿಗಳಾಗಿ ಪರಿಣಮಿಸಿದ್ದಾರೆ. ಕಾರಣವೆಂದರೆ ಐಡಿಯಾಲಜಿಗಳ ಕನ್ನಡಕದಿಂದ ನೋಡುವ ಇಂಥವರು ವಾಸ್ತವನ್ನು ಗ್ರಹಿಸುವ ಅಥವಾ ಒಪ್ಪಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ನಮ್ಮ ಸಮಾಜದ ಸಮಸ್ಯೆಗಳನ್ನು ಅರ್ಥೆಸಲು ಪಾಶ್ಚಾತ್ಯರಿಂದ ಬಳುವಳಿಯಾಗಿ ಪಡೆದ ಐಡಿಯಾಲಜಿಗಳನ್ನು ನಾವು ಆಧರಿಸಿದ್ದೇವೆ. ಅದರ ಪರಿಣಾಮವಾಗಿ ನಮ್ಮ ಜನರಿಗೆ ಪ್ರಸ್ತುತವಲ್ಲದ ಸಮಸ್ಯೆಗಳೇ ನಮ್ಮ ರಾಜಕೀಯದ ಕಾರ್ಯಕ್ರಮಗಳಾಗಿವೆ. ಅದರ ಪರಿಣಾಮವಾಗಿ ಕಣ್ಣ ಮುಂದಿರುವ ದೃಷ್ಟಾಂತವನ್ನು ನೋಡಿ ಪಾಠ ಕಲಿತೇಬಿಡುತ್ತೇವೆ ಎನ್ನುವುದು ಸುಳ್ಳು. ಇದಕ್ಕೆ ಆಪ್ ವಿಜಯದ ಕುರಿತು ಬಂದ ಸೆಕ್ಯುಲರ್ವಾದಿಗಳ ಪ್ರತಿಕ್ರಿಯೆಯ ಮೇಲೆ ಕಣ್ಣಾಡಿಸಬಹುದು.  ಅವರಿಗೆಲ್ಲ ಇದು ಹಿಂದು ಕೋಮುವಾದದ ಸೋಲು ಅಥವಾ ಮೋದಿ ರಾಜಕೀಯದ ವೈಫಲ್ಯತೆ ಅನಿಸಿದೆ. ಕೆಲವರಿಗೆ ಮೋದಿಯ ಗೆಲುವು ಉಸಿರುಗಟ್ಟಿಸುವಂತಾಗಿದ್ದು ಈಗ ಸ್ವಲ್ಪ ಉಸಿರಾಡುವಂತಾಗಿದೆ. ಕೆಲವರು ಬಿಜೆಪಿಯನ್ನು ಸೋಲಿಸುವಲ್ಲಿ ದೆಹಲಿಯ ಮತದರರ ಪ್ರಜ್ಞಾವಂತಿಕೆಯ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿದರೆ, ಇನ್ನೂ ಕೆಲವರಿಗೆ ಇದು ಭಾರತವು ಮತ್ತೆ ಸೆಕ್ಯುಲರ್ ರಾಜಕಾರಣಕ್ಕೆ ಮರಳುವ ಸೂಚನೆಯಾಗಿ ಕಾಣಿಸಿದೆ.

   ಇಂಥವರ ಪ್ರಕಾರ ಆಪ್ ಗೆಲುವು ಸೆಕ್ಯುಲರಿಸಂಗೆ ಹಾಗೂ ಅದನ್ನಾಧರಿಸಿದ ಇಂದಿನ ಅನೇಕ ಐಡಿಯಾಲಜಿಗಳಿಗೆ ಭರವಸೆಯಾಗಬಲ್ಲದು. ಆದರೆ ವಾಸ್ತವದಲ್ಲಿ ಜನರ ಕೆಲಸಕ್ಕೆ ಬರದ ಹಾಗೂ ಕುತಂತ್ರದ ರಾಜನೀತಿಗಳ ವೈಫಲ್ಯತೆಯನ್ನೇ ದೆಹಲಿಯ ಫಲಿತಾಂಶ ತಿಳಿಸುತ್ತಿದೆ. ಬಿಜೆಪಿ ತಾನು ಕೂಡ ಸೆಕ್ಯುಲರ್ ಎಂದುಕೊಳ್ಳುತ್ತಿದ್ದರೂ ಕಾಂಗ್ರೆಸ್ ಪಕ್ಷವೇ ನಿಜವಾದ ಸೆಕ್ಯುಲರಿಸಂನ ವಕ್ತಾರ ಎಂಬುದಾಗಿ ಬುದ್ಧಿಜೀವಿಗಳೆಲ್ಲ ಭಾವಿಸುವುದು ಸುಳ್ಳೇನಲ್ಲ. ಈ ಸೆಕ್ಯುಲರಿಸಂನಲ್ಲಿ ಎಡಪಂಥೀಯ, ಪ್ರಗತಿಪರ ವಿಚಾರಧಾರೆಗಳು, ಜಾತಿವಾದ, ಅಲ್ಪಸಂಖ್ಯಾತರ ಪಕ್ಷಪಾತ ಎಲ್ಲವೂ ಹಾಸು ಹೊಕ್ಕಾಗಿವೆ. ದೆಹಲಿಯಲ್ಲಿ ಆಪ್ ಬಿಜೆಪಿಯ ಶೇಕಡಾ ಒಂದರಷ್ಟು ಮತವನ್ನು ಅಪಹರಿಸಿದ್ದರೆ, ಕಾಂಗ್ರೆಸ್ಸಿನ 16% ಮತಗಳನ್ನು ಅಪಹರಿಸಿ ಆ ಪಕ್ಷವನ್ನು  ಹೇಳಹೆಸರಿಲ್ಲದಂತೆ ಮಾಡಿದೆ. ಅದರಲ್ಲೂ ದಲಿತರ, ಮುಸ್ಲಿಮರ ರಕ್ಷಕ ಎಂದೇ ಬಿಂಬಿಸಿಕೊಂಡು ಬಂದ ಕಾಂಗ್ರೆಸ್ಸಿಗೆ ಅವರ ಓಟೇ ಬಿದ್ದಂತಿಲ್ಲ. ಅಂದರೆ ದೆಹಲಿಯ ಚುನಾವಣೆಯು ಸೆಕ್ಯುಲರಿಸಂನ ವಿಜಯವಾಗಿದ್ದರೆ ಕಾಂಗ್ರೆಸ್ ಈ ರೀತಿ ಧೂಳೀಪಟವಾಗಬಾರದಿತ್ತು. ಹಾಗಾಗಿ ವಾಸ್ತವದಲ್ಲಿ ಅಲ್ಲಿನ ಜನತೆಗೆ ಸೆಕ್ಯುಲರಿಸಂನ ರಾಜಕಾರಣ ರೇಜಿಗೆ ಹಿಡಿಸಿದೆ ಎಂಬುದಕ್ಕೆ ಇದು ದೃಷ್ಟಾಂತವಾಗಬಹುದು.

   ಇನ್ನು ಈ ರೀತಿಯಲ್ಲಿ ಕಾಂಗ್ರೆಸ್ಸಿನ ಮತದಾರರೆಲ್ಲ ಆಪ್ಗೆ ಮತ ಹಾಕಿದ್ದು ಬಿಜೆಪಿಯನ್ನು ಹಾಗೂ ಆ ಮೂಲಕ ಹಿಂದೂ ಕೋಮುವಾದವನ್ನು ಸೋಲಿಸಲಿಕ್ಕೆ ಎಂದು ವಿಶ್ಲೇಷಿಸುವವರೂ ಇದ್ದಾರೆ. ಇದು ನಿಜವಾಗಿಯೂ ಬಿಜೆಪಿಯ ವಿರುದ್ಧದ ಜನಾದೇಶವೇ ಆಗಿದ್ದರೆ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಅದೇ ದೆಹಲಿಯ ಮತದಾರರು ಒಂದೂ ಆಪ್ ಸೀಟುಗಳನ್ನೂ ಗೆಲ್ಲಿಸದೇ ಬಿಜೆಪಿಯನ್ನೇ ಗೆಲ್ಲಿಸಿದ್ದು ಏಕೆ ಎಂಬ ಪ್ರಶ್ನೆ ಏಳುತ್ತದೆ. ಅಥವಾ ಬಿಜೆಪಿ ಪಕ್ಷವು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಲೋಕಸಭೆಗೆ ನಿಚ್ಚಳ ಬಹುಮತ ಪಡೆದ ಏಕೈಕ ಪಕ್ಷವಾಗಿ ಉದಿಸಿದ್ದು ಕೂಡ ಇದೇ ಜನಾದೇಶದಿಂದಲೇ ಎಂಬುದನ್ನು ಇಂಥವರು ಒಪ್ಪಿಕೊಳ್ಳಬಲ್ಲರೆ? ಇದನ್ನು ಒಪ್ಪಿಕೊಳ್ಳದವರು ಬಿಜೆಪಿಗೆ ಮತ ಹಾಕಿದವರೆಲ್ಲ ಮೋಸಕ್ಕೆ ಒಳಗಾದವರು, ಭ್ರಷ್ಟರು, ಕೆಡುಕು ಬುದ್ಧಿ ಉಳ್ಳವರು, ಆಪ್ಗೆ ಹಾಕಿದವರೆಲ್ಲ ಸದ್ಬುದ್ಧಿಯವರು ಎಂಬರ್ಥದಲ್ಲಿ ಮಾತನಾಡುತ್ತಾರೆ. ಇವರ ಪ್ರಕಾರ ಆರು ತಿಂಗಳಿನೊಳಗೇ ದೆಹಲಿಯ ಜನತೆಯ ಬುದ್ಧಿ ಬದಲಾವಣೆಯಾಗಿದೆ.

    ಇಂಥ ಅಸಂಬದ್ಧ ಪ್ರಲಾಪಗಳನ್ನು ಬಿಟ್ಟು ವಾಸ್ತವವನ್ನು ಗುರುತಿಸಿ ಚಿಂತಿಸಿದರೆ ಮಾತ್ರವೇ ನಮ್ಮೆದುರಿಗಿರುವ ದೃಷ್ಟಾಂತಗಳಿಂದ ನಾವು ಪಾಠ ಕಲಿಯಬಹುದು. ಕಳೆದ ಲೋಕಸಭೆ ಹಾಗೂ ದೆಹಲಿಯ ಚುನಾವಣೆಗಳು ಏನನ್ನು ತಿಳಿಸುತ್ತಿವೆ? ನಮ್ಮ ಸಮಾಜಕ್ಕೆ ಅಪ್ರಸ್ತುತವಾದ ಐಡಿಯಾಲಜಿಗಳ ರಾಜಕೀಯದಿಂದ ನಮ್ಮ ಪ್ರಜಾಪ್ರಭುತ್ವವು ಕಳಚಿಕೊಳ್ಳಬೇಕು ಎಂಬುದನ್ನು ಅವು ಸೂಚಿಸುತ್ತಿವೆಯೆ? ಜನರ ನಿಜವಾದ ಅಗತ್ಯಗಳೇನು, ಅವರ ಕಷ್ಟಗಳೇನು ಎಂಬುದನ್ನು ಗುರುತಿಸಲು ಮರೆತವರು, ರಾಜಕೀಯವನ್ನು ಸ್ವಲಾಭದ ಉದ್ದಿಮೆಯಾಗಿ ಮಾಡಿಕೊಂಡವರು ಹಾಗೂ ಜನರಿಗೆ ಪ್ರಸ್ತುತವಲ್ಲದ ಭಾವನಾತ್ಮಕ ಸಮಸ್ಯೆಗಳನ್ನು ಕೆದರಿಕೊಂಡು ಅಧಿಕಾರ ಹಿಡಿಯಲು ಹವಣಿಸಿದವರು ಪ್ರಜಾಪ್ರಭುತ್ವದಲ್ಲಿ ಅಪ್ರಸ್ತುತರಾಗುವ ದಿನ ದೂರವಿಲ್ಲ ಎಂಬುದನ್ನು ಈ ಚುನಾವಣೆಗಳು ತೋರಿಸುತ್ತವೆಯೆ? ಒಟ್ಟಿನಲ್ಲಿ ಇದು ನಮ್ಮ ರಾಜಕಾರಣಿಗಳಿಗೆಲ್ಲ ಪಾಠ ಕಲಿಯುವ  ಸಮಯ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: