ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 14: ಅಕ್ಷರಕ್ಕೂ, ಶಿಕ್ಷಣಕ್ಕೂ, ವಿದ್ಯೆಗೂ, ಜ್ಞಾನಕ್ಕೂ ಏನು ಸಂಬಂಧ?

ಪ್ರೊ. ರಾಜಾರಾಮ ಹೆಗಡೆ.

   ಸಾಧಾರಣವಾಗಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಒಂದು ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ: ಅದೆಂದರೆ  ಬ್ರಾಹ್ಮಣರು ಶೂದ್ರರನ್ನು ಹಾಗೂ ಅಸ್ಪೃಶ್ಯರನ್ನು ಅಕ್ಷರ ಜ್ಞಾನದಿಂದ ವಂಚಿಸಿದ್ದಾರೆ. ಆಕಾರಣದಿಂದಾಗಿ ಅವರಿಗೆ ಜ್ಞಾನವನ್ನೂ, ವಿದ್ಯೆಯನ್ನೂ ನಿರಾಕರಿಸಿದ್ದರು ಅಂತ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೋಷಣೆಯ ಒಂದು ಲಕ್ಷಣ ಎಂಬಂತೆ ಕೆಲವು ಹಿತಾಸಕ್ತಿ ಪೀಡಿತ ಗುಂಪುಗಳು ಈ ಸಂಗತಿಯನ್ನು ತಪ್ಪದೇ ಹೇಳುತ್ತಿರುತ್ತವೆ.

  ಹೀಗೆ ಹೇಳುವವರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅದನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ. ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ ಸತ್ಯದೇವನ ವಾಣಿಯು ಅಂತಿಮವಾದ ಸತ್ಯವಾಗಿದ್ದು ಅದು ಬರೆಹದ ಮೂಲಕವೇ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.

   ಇಂದು ಅಕ್ಷರಕ್ಕೆ ಸಿಕ್ಕಿರುವ ಈ ಮಹತ್ವದಿಂದಾಗಿ ಒಂದು ಅನಕ್ಷರಸ್ಥ ವ್ಯಕ್ತಿ ಹಾಗೂ ಅಶಿಕ್ಷಿತನು ಅಜ್ಞಾನಿ ಎಂಬ ಸಮೀಕರಣ ಕೂಡ ಬೆಳೆದಿದೆ.  ಹಾಗೂ ಅಂಥವನನ್ನು ಹಿಡಿದು ಅವನಿಗೆ ಅವನ ಹೆಸರನ್ನು ಬರೆದು ಸಹಿ ಹಾಕಲಿಕ್ಕೆ ಕಲಿಸಿಬಿಟ್ಟರೆ ಏನೋ ಸಾಮಾಜಿಕ ಕ್ರಾಂತಿ ನಡೆದುಬಿಡುತ್ತದೆ ಎಂಬಂತೆ ಸಾಕ್ಷರತಾ ಆಂದೋಲನವು ಬಿಂಬಿಸುತ್ತದೆ. ಅದು ಹೇಗೆ ಒಬ್ಬನು ಹೆಬ್ಬೆಟ್ಟನ್ನು ಒತ್ತುವುದನ್ನು ನಿಲ್ಲಿಸಿ ತನ್ನ ಹೆಸರನ್ನು ಬರೆಯಲು ಕಲಿತಾಕ್ಷಣ ಅಥವಾ ಓದಲು ಕಲಿತಾಕ್ಷಣ  ಜ್ಞಾನಿಯಾಗಿಬಿಡುತ್ತಾನೆ? ಎಂಬುದನ್ನು ಯಾರೂ ವಿವರಿಸಿಲ್ಲ, ಹಾಗೂ ಸ್ವತಃ ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವವರೇ ಅದನ್ನು ನಂಬಿರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಜ್ಞಾನ ಸಂಪಾದನೆಗೆ ಅಕ್ಷರವು ಸಾಧನ ಎಂಬ ನಂಬಿಕೆ ಇಂಥವರಲ್ಲಿ ಬೇರೂರಿರುವುದು ಸ್ಪಷ್ಟ.

   ಇದರ ಜೊತೆಗೇ ಶೂದ್ರರನ್ನು ಶಿಕ್ಷಣದಿಂದ ವಂಚಿಸಲಾಗಿತ್ತು ಎನ್ನುವವರಿಗೆ ವೇದಶಾಸ್ತ್ರಗಳು ಹಾಗೂ ಸಂಸ್ಕೃತವನ್ನು ಕಲಿಯುವುದೇ ಪ್ರಾಚೀನ ಭಾರತೀಯ ಶಿಕ್ಷಣವಾಗಿತ್ತು ಎಂಬ ಭಾವನೆ ಇದೆ. ಇಂಥ ಅನಿಸಿಕೆಗಳಿಗೆ ಕಾರಣವೆಂದರೆ ಇಂದು ನಾವು ಶಿಕ್ಷಣವನ್ನು ಪಡೆಯುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ಅವಿನಾಭಾವೀ ಸಂಬಂಧವನ್ನು ಕಲ್ಪಿಸುತ್ತೇವೆ. ಈ ಸಮೀಕರಣವು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಲಕ್ಷಣವಾಗಿದೆ. ಪಾಶ್ಚಾತ್ಯ ಶಿಕ್ಷಣದಲ್ಲಿ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಸಂಪಾದಿಸುವ ಕ್ರಮವಿದೆ. ಅಂದಮೇಲೆ ಪ್ರಾಚೀನ ಭಾರತದಲ್ಲಿ ಕೂಡ ಸಂಸ್ಕೃತ ಪುಸ್ತಕಗಳನ್ನು ಓದಿಯೇ ವಿದ್ಯೆಯನ್ನು ಪಡೆಯುತ್ತಿದ್ದರು ಹಾಗೂ ಅದಕ್ಕೆ ಅಕ್ಷರಾಭ್ಯಾಸವೇ ತಳಹದಿ ಎಂಬುದಾಗಿ ಇಂದಿನ ವಿದ್ಯಾವಂತರಿಗೆ ಕಾಣಿಸುವುದು ಸಹಜ.

   ಆದರೆ ನಮ್ಮ ಸಾಮಾನ್ಯ ಜ್ಞಾನವನ್ನು ಹಾಗೂ ಅನುಭವವನ್ನು ಆಧರಿಸಿ ಆಲೋಚಿಸಿದರೆ ಈ ನಿರ್ಣಯದಲ್ಲೇನೋ ಎಡವಟ್ಟು ಇರುವಂತೆ ಅನಿಸುವುದು ಸಹಜ. ಮೊದಲು ನಿಮಗೆ ಗೊತ್ತಿರುವ ಜನರನ್ನೆಲ್ಲ ತುಲನೆ ಮಾಡಿ, ಆಗ ಆ ನಿರ್ಣಯವು ತಪ್ಪೆಂದು ಗೋಚರಿಸುತ್ತದೆ. ಹಾಗೆ ನಿರ್ಣಯಿಸಬೇಕಾದರೆ ವಿದ್ಯೆಯನ್ನು ಅಕ್ಷರಾಭ್ಯಾಸಕ್ಕೆ ಸಮೀಕರಿಸಿಕೊಳ್ಳಬೇಕಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯು ಇಂಥ ಸಮೀಕರಣವನ್ನು ಒಪ್ಪುವುದಿಲ್ಲ. ನಮ್ಮಲ್ಲಿ ಯಾವ ವೇದಗಳಿಂದ ತಮ್ಮನ್ನು ವಂಚಿಸುವ ಮೂಲಕ ತಮಗೆ ಶಿಕ್ಷಣವನ್ನು ನಿರಾಕರಿಸಿದರು ಎನ್ನಲಾಗುತ್ತದೆಯೋ ಆ ವೇದಗಳನ್ನು ಶ್ರುತಿ ಅಥವಾ ಕೇಳಿ ತಿಳಿದದ್ದು ಎನ್ನಲಾಗುತ್ತದೆ. ವೇದಗಳನ್ನು ಬರೆದು, ಓದಿ ಕಲಿಯುವ ಪದ್ಧತಿಯನ್ನು ಉದ್ದೇಶಪೂರ್ವಕವಾಗಿಯೇ ನಮ್ಮವರು ಅಳವಡಿಸಿಕೊಳ್ಳಲಿಲ್ಲ. ಬರೆದು ಓದಿದರೆ ಅದರ ಧ್ವನಿ, ಉಚ್ಛಾರಣೆಗಳೆಲ್ಲ ಅಪಭ್ರಂಶಗೊಳ್ಳುತ್ತವೆ, ಹಾಗಾಗಿ ಅವುಗಳ ಕಲಿಕೆಗೆ ಅಕ್ಷರವು ಅಡ್ಡಿ ಎಂಬ ಭಾವನೆಯೇ ಇತ್ತು. ಅವುಗಳನ್ನು ಸಾವಿರಾರು ವರ್ಷಗಳ ವರೆಗೆ ಕೇಳಿ ಕಲಿಯುವ ಮೂಲಕವೇ ದಾಟಿಸಿಕೊಂಡು ಬರಲಾಗಿದೆ. ಹಾಗಾಗಿ ವೇದವನ್ನು ಕಲಿಯಲು ಅಕ್ಷರ ಜ್ಞಾನವು ಬ್ರಾಹ್ಮಣರಿಗೆ ಅನಿವಾರ್ಯವಾಗಿರಲಿಲ್ಲ. ನಮ್ಮ ಇತಿಹಾಸದಲ್ಲಿ ಎಲ್ಲೆಲ್ಲಿ ಗ್ರಂಥಾಭ್ಯಾಸ ಅಗತ್ಯವಿತ್ತೊ ಅಲ್ಲಲ್ಲಿ ಅದನ್ನು ನಡೆಸುವ ಸಲುವಾಗಿ ಬ್ರಾಹ್ಮಣರಷ್ಟೇ, ಬೌದ್ಧ, ಜೈನಾದಿ ವಿದ್ವಾಂಸರಿಗೂ ಅಕ್ಷರಜ್ಞಾನವು ಬೇಕಿತ್ತು. ಕಾರಕೂನರು, ಲಿಪಿಕಾರರು, ಶಿಲ್ಪಿಗಳು ಮುಂತಾದ ಕೆಲವು ವೃತ್ತಿಗಳನ್ನು ವಲಂಬಿಸಿದವರು ಕೂಡ ಅಕ್ಸರವನ್ನು ಕಲಿತಿರುತ್ತಿದ್ದರು. ಇವರಲ್ಲಿ ಬಹುತೇಕರು ಶೂದ್ರರೇ ಆಗಿದ್ದರು.

   ನಮ್ಮ ಸಂಸ್ಕೃತಿಯಲ್ಲಿ ಅಕ್ಷರಕ್ಕೂ, ವಿದ್ಯೆಗೂ, ಜ್ಞಾನಕ್ಕೂ ಸಮೀಕರಣವನ್ನು ಮಾಡಲಾಗಿಲ್ಲ. ಅದರಲ್ಲೂ ವಿದ್ಯೆ ಹಾಗೂ ಜ್ಞಾನಗಳನ್ನು ಪಡೆಯಲಿಕ್ಕೆ ಅಕ್ಷರಾಭ್ಯಾಸವು ಅನಿವಾರ್ಯವೇ ಆಗಿರಲಿಲ್ಲ. ನಮ್ಮ ಸಂಸ್ಕೃತಿಯು ಆತ್ಮಜ್ಞಾನವೇ ಆತ್ಯಂತಿಕವಾದ ಜ್ಞಾನವೆಂಬುದಾಗಿ ಪ್ರತಿಪಾದಿಸಿದೆ. ಈ ಜ್ಞಾನವನ್ನು ಹೊಂದಲಿಕ್ಕೆ ಅಕ್ಷರ ಅಥವಾ ಪಾಂಡಿತ್ಯ ಅನಿವಾರ್ಯವಲ್ಲ ಎಂಬುದಾಗಿ ಎಲ್ಲಾ ಅಧ್ಯಾತ್ಮ ಸಂಪ್ರದಾಯಗಳೂ ಸಾರಿ ಹೇಳುತ್ತವೆ. ಅಷ್ಟೇ ಅಲ್ಲ ಕೇವಲ ವೇದಗಳನ್ನು ಶಾಸ್ತ್ರಗಳನ್ನು ಕಲಿತಾಕ್ಷಣ ಜ್ಞಾನ ಸಿಕ್ಕಿಬಿಡುವುದಿಲ್ಲ ಎಂಬುದಾಗಿ ಅವು ಎಚ್ಚರಿಸುತ್ತವೆ. ಹಾಗಾಗಿ ಆತ್ಮಜ್ಞಾನ ಸಾಧನೆಗೆ ಅನೇಕ ಮಾರ್ಗಗಳು ಬೆಳೆದುಕೊಂಡು ಬಂದವು. ಅವುಗಳಲ್ಲಿ ವೇದವಿದ್ಯೆ ಕೇವಲ ಒಂದು ಮಾರ್ಗವಾಗಿತ್ತು. ಭಕ್ತಿಯ ಮೂಲಕ ಅದನ್ನು ಗಳಿಸುವವರಿಗೆ ಅಕ್ಷರಜ್ಞಾನ ಅಗತ್ಯ ಕೂಡ ಇರಲಿಲ್ಲ. ಆ ಕಾರಣದಿಂದಲೇ ಅನಕ್ಷರಸ್ಥ ಕೆಳಜಾತಿಗಳಿಂದ ಬಂದ ಅಷ್ಟೊಂದು ಭಕ್ತರು ಜ್ಞಾನಿಗಳೆನಿಸಿಕೊಂಡು ನಮ್ಮ ಸಮಾಜದಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲರ ಮನ್ನಣೆಯನ್ನು ಪಡೆಯುವುದು  ಕೂಡ ಸಾಧ್ಯವಾಯಿತು. ಹಾಗಾಗಿ ನಮ್ಮ ಸಂಸ್ಕೃತಿಯಲ್ಲಿ ಬೆಳೆದುಬಂದವನೊಬ್ಬನು ಅನಕ್ಷರಸ್ಥನನ್ನು ಅಜ್ಞಾನಿ ಎಂಬುದಾಗಿ ನೋಡಲಾರ.

   ಅದೇ ರೀತಿಯಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ವೃತ್ತಿ ವಿದ್ಯೆಗಳು ಕ್ರಿಯೆಯ ಅನುಕರಣೆಯ ಮೂಲಕ ಕಲಿತು ಬರುತ್ತವೆಯೇ ವಿನಃ ಪುಸ್ತಕ ಜ್ಞಾನದಿಂದಲ್ಲ. ವೃತ್ತಿ ವಿದ್ಯೆಗಳನ್ನು ಆಯಾ ಕುಟುಂಬಗಳು ದಾಟಿಸಿಕೊಂಡು ಬರುತ್ತಿದ್ದವು. ಕಿರಿಯರು ಹಿರಿಯರಿಂದ ಕಲಿಯುತ್ತಿದ್ದರು. ಇದಕ್ಕೆ ಅಕ್ಷರಜ್ಞಾನವು ಅಪ್ರಸ್ತುತವಾಗಿತ್ತು. ಅಂದರೆ ಇವರು ಇಂದಿನ ಹಾಗೆ ಯಾವುದೋ ಶಿಕ್ಷಣ ಸಂಸ್ಥೆಗೆ ಬಂದು ಅಕ್ಷರ ಕಲಿತು ಡಿಗ್ರಿಗಳನ್ನು ಪಡೆಯಲಿಲ್ಲ ಅಂದಾಕ್ಷಣ ಅವರಿಗೆ ಶಿಕ್ಷಣವೇ ಇರಲಿಲ್ಲ ಎನ್ನುವುದು ತಪ್ಪಾಗುತ್ತದೆ. ಅಂದಿನ ಶಿಕ್ಷಣದ ಸ್ವರೂಪವೇ ಬೇರೆ ಇತ್ತು ಎಂಬುದನ್ನು ಗಮನಿಸಬೇಕು. ಭಾರತೀಯರು ವಿಶ್ವದಲ್ಲಿ ತಮ್ಮ ಕುಶಲಕರ್ಮಕ್ಕೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದ್ದರು. ಭಾರತದಾದ್ಯಂತ ಇರುವ ದೇವಾಲಯಗಳು ಪ್ರಾಚೀನ ವಾಸ್ತುಶಿಲ್ಪಿಗಳ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಭಾರತದ ವಿವಿಧ ಶಾಸ್ತ್ರ ಸಂಪ್ರದಾಯಗಳೆಲ್ಲ ಮೂಲತಃ ಇಂಥ ಅನುಕರಣೆಯ ಕಲಿಕೆಯಿಂದಲೇ ದಾಟಿ ಬಂದಿದ್ದವು. ಇಂಥವರನ್ನು ಅಕ್ಷರ, ಪುಸ್ತಕಗಳ ಮಾನದಂಡವನ್ನಿಟ್ಟುಕೊಂಡು ಶಿಕ್ಷಣದಿಂದ ವಂಚಿತರು, ಅವಿದ್ಯಾವಂತರು ಎಂದು ಕರೆಯಬಲ್ಲೆವೆ?

   ಏಕೆ ನಮಗಿಂದು ಇಂಥ ಸರಳ ವಿಷಯವೂ ತಲೆಗೆ ಹೋಗುವುದಿಲ್ಲ? ಏಕೆಂದರೆ ನಮ್ಮ ಇತಿಹಾಸ ಪುಸ್ತಕಗಳೇ ಹಾಗೆ ಹೇಳುತ್ತವೆ. ಆದರೆ ನಮ್ಮ ಶಿಕ್ಷಣದ ಇತಿಹಾಸವನ್ನು ಬರೆಯುವಲ್ಲೇ ಎಡವಿದ್ದೇವೆ ಎಂಬುದನ್ನು ನಾವು ಗಮನಿಸಬೇಕು. ನಮ್ಮ ಆಧುನಿಕ ಶಿಕ್ಷಣವ್ಯವಸ್ಥೆಯ ಮಾನದಂಡವನ್ನಿಟ್ಟುಕೊಂಡು ಪ್ರಾಚೀನ ಭಾರತದಲ್ಲಿಯೂ ಕಾಲೇಜುಗಳಿದ್ದವು, ವಿಶ್ವವಿದ್ಯಾಲಯಗಳಿದ್ದವು ಎನ್ನುತ್ತೇವೆ. ಅವು ಯಾವವು? ಬ್ರಾಹ್ಮಣರ ಅಗ್ರಹಾರಗಳು, ಘಟಿಕಾಸ್ಥಾನಗಳು, ದೇವಾಲಯಗಳು, ಮಠಗಳು, ಬೌದ್ದ, ಜೈನರ ಸಂಘಗಳು, ವಿಹಾರಗಳು, ಇತ್ಯಾದಿ. ಇವೆಲ್ಲ ಆಯಾ ಸಾಂಪ್ರದಾಯಿಕ ವಿದ್ಯೆಗಳನ್ನು ಕಲಿಸುವ ಸ್ಥಾನಗಳಾಗಿದ್ದವೇ ಹೊರತೂ ಸರ್ವಜನಿಕ ಶಿಕ್ಷಣ ಸಂಸ್ಥೆಗಳಾಗಿರಲಿಲ್ಲ. ಅವು ಸಾರ್ವಜನಿಕ ಸಂಸ್ಥೆಗಳು ಅಂದುಕೊಂಡಾಗ ಬ್ರಾಹ್ಮಣರು ಶೂದ್ರರನ್ನು ತಮ್ಮ ಅಗ್ರಹಾರಗಳೆಂಬ ಕಾಲೇಜುಗಳಲ್ಲಿ ಬಿಟ್ಟುಕೊಳ್ಳಲಿಲ್ಲ, ಹಾಗಾಗಿ ಶೂದ್ರರು ಅವಿದ್ಯಾವಂತರಾಗಿ ಮಾರ್ಪಟ್ಟರು ಎಂಬ ನಿರ್ಣಯ ಸ್ವಾಭಾವಿಕ. ಆದರೆ ಪ್ರಾಚೀನ ಭಾರತದ ಸಂದರ್ಭದಲ್ಲಿ ಸ್ಕೂಲು, ಕಾಲೇಜು, ಯೂನಿವರ್ಸಿಟಿ, ಡಿಗ್ರಿ, ಡಿಪ್ಲೊಮಾ, ಇತ್ಯಾದಿಗಳ ಕುರಿತು ಮಾತನಾಡುವುದೇ ಹಾಸ್ಯಾಸ್ಪದವಾಗುತ್ತದೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: