ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 15: ಕನ್ನಡ ಮಾಧ್ಯಮ: ಅಲಕ್ಷಿತ ಆಯಾಮಗಳು

ಪ್ರೊ. ರಾಜಾರಾಮ ಹೆಗಡೆ.

  ಕಳೆದ ಕೆಲವು ದಿನಗಳಿಂದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗುವುದು ಮಕ್ಕಳಿಗೆ ಒಳ್ಳೆಯದು ಹಾಗೂ ಯಾವುದೇ ಭಾಷೆಯಾದರೂ ಉಳಿದು ಬೆಳೆದು ಬರಬೇಕು ಎಂಬುದರಲ್ಲಿ  ನನಗೆ ಯಾವುದೇ ಸಂದೇಹವೂ ಇಲ್ಲ. ಆದರೆ ಈ ಬೇಡಿಕೆಯನ್ನು ಹೇಗೆ ರೂಪಿಸುತ್ತೇವೆ ಹಾಗೂ ಹೇಗೆ ಗ್ರಹಿಸುತ್ತೇವೆ ಎಂಬುದು ಬಹಳ ಮುಖ್ಯ. ಈಗ ನಡೆಯುತ್ತಿರುವ ಚರ್ಚೆಯಲ್ಲಿ ಇರುವ ಕೆಲವು ಪ್ರಮುಖ ಗ್ರಹಿಕೆಗಳು ಹೀಗಿವೆ: 1) ಕನ್ನಡ ಭಾಷೆಯನ್ನು ಉಳಿಸಲು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸುವುದೇ ಪರಿಹಾರ. 2) ಕನ್ನಡ ಭಾಷೆಗೆ ಇಂಗ್ಲೀಷ್, ಸಂಸ್ಕೃತ, ಮರಾಠಿ, ತಮಿಳು ಮುಂತಾದ ಭಾಷೆಗಳಿಂದ ಹಾಗೂ ಕೆಲವೊಂದು ಜಾತಿಗಳಿಂದ, ವರ್ಗಗಳಿಂದ ಅಪಾಯವಿದೆ. 3) ರಾಜ್ಯದ ಕಾಯ್ದೆ ಕಾನೂನುಗಳಿಂದಲೇ ಕನ್ನಡದ ಉಳಿವು ಸಾಧ್ಯ.

   ಕನ್ನಡವನ್ನು ಶಿಕ್ಷಣದಲ್ಲಿ ಕಡ್ಡಾಯ ಮಾಡಿದರೆ ಮಾತ್ರವೇ ಕನ್ನಡದ ಉಳಿವು ಸಾಧ್ಯ ಎಂಬ ಗ್ರಹಿಕೆಯಲ್ಲಿ ಈ ಮುಂದಿನ ಸಮಸ್ಯೆಗಳಿವೆ. ಇಂದು ಕನ್ನಡ ಶಿಕ್ಷಣವನ್ನು ಕಡ್ಡಾಯ ಮಾಡಬೇಕೆನ್ನುವ ಯಾರೂ ಕೂಡ ಕನ್ನಡ ಶಿಕ್ಷಣದ ಗುಣಮಟ್ಟದ ಕುರಿತು ಮಾತನಾಡಿದ್ದನ್ನು ಅಥವಾ ಆಗ್ರಹಿಸಿದ್ದನ್ನು ನಾನು ಗಮನಿಸಿಲ್ಲ. ನಾನೊಬ್ಬ ಶಿಕ್ಷಕನಾಗಿ ಗಮನಿಸಿದ್ದೆಂದರೆ ಇಂದು ಕನ್ನಡ ಶಿಕ್ಷಣವು ಪಾತಾಳಕ್ಕೆ ಹೋಗಿದೆ. ಇಂದಿನ ಪದವೀಧರರ ಹಾಗೂ ಸ್ವತಃ ಶಿಕ್ಷಕರ ಕನ್ನಡ ಬರವಣಿಗೆ ಹಾಗೂ ಕಾಗುಣಿತಗಳಲ್ಲಿ ಉಂಟಾಗುವ ತಪ್ಪುಗಳನ್ನು ನೋಡಿ ಇದನ್ನು ಲೆಕ್ಕಹಾಕಬಹುದು. ಇವರಿಗೆ ಕನ್ನಡದಲ್ಲಿ ವ್ಯವಹರಿಸುವ ಯಾವ ಕೌಶಲ್ಯಗಳನ್ನು ಕಲಿಸಿದ ಸೂಚನೆಗಳೂ ಕಾಣಿಸುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತು ಬಂದ ಬಹುತೇಕ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೆಟ್ಟಗೆ ಒಂದು ವಾಕ್ಯವನ್ನಾಗಲೀ, ಅರ್ಜಿಯನ್ನಾಗಲೀ ಕನ್ನಡದಲ್ಲಿ ಬರೆಯಲಿಕ್ಕೆ ಬರುವುದಿಲ್ಲ. ವ್ಯಾಕರಣದ ಪರಿಚಯವೇ ಇಲ್ಲ. ಹೊಸದಾಗಿ ಸೇರಿದ ಇಂದಿನ ಶಿಕ್ಷಕೇತರ ಸಿಬ್ಬಂದಿಗಳಿಗೆ ಟೈಪಿಂಗ್ ಕೆಲಸ ಕೊಟ್ಟರೆ ಕಾಗುಣಿತದ ತಪ್ಪುಗಳನ್ನು ತಿದ್ದುವುದೇ ಕೆಲಸ, ಹಾಗಾಗಿ ಹೆಚ್ಚಿನವರು ತಾವೇ ಸ್ವತಃ ಟೈಪಿಂಗ್ ಮಾಡಿಕೊಳ್ಳುವುದನ್ನು ಕಲಿತಿದ್ದಾರೆ.

   ಈ ಮೇಲಿನ ಪರಿಸ್ಥಿತಿ ತಿಳಿಸುವ ಹಾಗೆ ಇಂದು ಯಾರಾದರೂ ಕನ್ನಡವನ್ನು ಸರಿಯಾಗಿ ಕಲಿತಿದ್ದಾರೆ ಎಂದರೆ ಅದಕ್ಕೆ ಅವರ ಸಾಮಥ್ರ್ಯ, ಆಸಕ್ತಿ, ಪರಿಶ್ರಮಗಳೇ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ಹಾಗೂ ಎಲ್ಲೋ ಅಪರೂಪಕ್ಕೆ ಒಬ್ಬಿಬ್ಬ ಉತ್ತಮ ಶಿಕ್ಷಕರು ಕೂಡ ಇರುತ್ತಾರೆ ಎನ್ನಿ. ಇಂಥ ಶಿಕ್ಷಣವು ಕಡ್ಡಾಯವಾದರೆ ಕನ್ನಡಕ್ಕೇನು ಲಾಭವಾಗಬಹುದು? ಇದು ಕನ್ನಡಕ್ಕೊಂದೇ ಅಲ್ಲ, ಇಂಗ್ಲೀಷು, ಹಿಂದಿ, ಸಂಸ್ಕೃತ ಇತ್ಯಾದಿ ಇತರ ಭಾಷೆಗಳ ಸಂದರ್ಭದಲ್ಲೂ ನಿಜ. ಒಟ್ಟಾರೆಯಾಗಿ ಭಾಷಾ ಶಿಕ್ಷಣವೇ ಹಳ್ಳಹಿಡಿದು ಹೋಗಿರುವಂತೆ ತೋರುತ್ತದೆ. ಈ ಕುರಿತು ಗಂಭೀರ ಅಧ್ಯಯನಗಳ ಅಗತ್ಯವಿದೆ. ಕನ್ನಡದ ಕುರಿತು ಕಳಕಳಿ ಇರುವವರು ಇದನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕೆಂಬುದು ನನ್ನ ಸಲಹೆ. ಭಾಷಾ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡುವ ವಿಧಾನದಲ್ಲಿ ಲೋಪಗಳಿವೆಯೆ? ಇಲ್ಲ ಇದು ಇಂದಿನ ಶಿಕ್ಷಕರ ಒಟ್ಟಾರೆ ಗುಣಮಟ್ಟವನ್ನು ಬಿಂಬಿಸುತ್ತಿದೆಯೆ? ಅಥವಾ ಶಿಕ್ಷಣ ನೀತಿಯಲ್ಲಿ ಏನಾದರೂ ತೊಂದರೆ ಇದೆಯೆ?

   ಕನ್ನಡ ಭಾಷೆಗೆ ಅನ್ಯ ಭಾಷೆಗಳಿಂದ ತೊಂದರೆ ಬರುತ್ತದೆ ಎಂಬುದು ಬಹುಶಃ ನಾವು ಪಾಶ್ಚಾತ್ಯರಿಂದ ಪಡೆದುಕೊಂಡ ಭಾಷಾ ರಾಷ್ಟ್ರದ ಕಲ್ಪನೆಯಿಂದ ಹುಟ್ಟುವ ಭೀತಿ. ಭಾರತವು ಯಾವಾಗಲೂ ಬಹುಭಾಷಾ ದೇಶವಾಗಿದೆ. ಇಲ್ಲಿ ಪ್ರದೇಶಕ್ಕೊಂದು ಭಾಷೆ ಮಾತ್ರವೇ ಇಲ್ಲ, ಒಂದು ಪ್ರದೇಶದಲ್ಲೇ ಅನೇಕ ಭಾಷೆಗಳಿವೆ, ಒಂದು ಸಮುದಾಯವೇ ಅನೇಕ ಭಾಷೆಗಳಲ್ಲಿ ವ್ಯವಹರಿಸುವ ವಾಸ್ತವವೂ ಇದೆ. ಸಾವಿರಾರು ವರ್ಷಗಳಿಂದ ಹೀಗಿದ್ದರೂ ಕೂಡ ಒಂದು ಭಾಷೆಯನ್ನು ಮತ್ತೊಂದು ನುಂಗಿಹಾಕಿದ ಒಂದು ಉದಾಹರಣೆ ಇಲ್ಲಿ ಇಲ್ಲ. ಅದಿಲ್ಲದಿದ್ದರೆ ಸಾವಿರಾರು ವರ್ಷಗಳಿಂದ ಕನ್ನಡ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟ ಈ ಕರ್ನಾಟಕ ಭಾಗದಲ್ಲಿ ತುಳು, ಕೊಂಕಣಿ, ಕೊಡವ, ಸಂಕೇತಿ, ಮರಾಠಿ, ಉದರ್ು, ಸಂಸ್ಕೃತ, ಇತ್ಯಾದಿ ಅನೇಕ ಭಾಷೆಗಳೂ, ಜಾತಿ, ಪ್ರದೇಶಗಳಿಗೇ ವಿಶಿಷ್ಟವಾದ ಆಡುಬಾಷಾ ವೈವಿಧ್ಯಗಳೂ ಉಳಿದು ಬರುತ್ತಿರಲಿಲ್ಲ.

  ಬಹುಭಾಷೆಗಳ ಅಸ್ತಿತ್ವದಿಂದ ಕನ್ನಡದ ಶ್ರೀಮಂತಿಕೆಗೆ ಕುಂದು ಬಂದಂತೇನೂ ಕಾಣುವುದಿಲ್ಲ. ಅಥವಾ ಕರ್ನಾಟಕದ  ಏಕೀಕರಣವಾಗಿ ಕನ್ನಡ ಆಡಳಿತ ಭಾಷೆಯಾದ ನಂತರವೂ ಈ ಯಾವ ಭಾಷಿಕರಾದರೂ ತಮಗೆ ಅಪಾಯವೊದಗಿದೆ ಎಂದು ಭಾವಿಸಿದಂತಿಲ್ಲ. ಏನಾದರೂ ಹೋರಾಟ ಇದ್ದರೆ ಭಾಷೆಗೊಂದು ರಾಷ್ಟ್ರ ಎಂಬ ಕಲ್ಪನೆಯಿಂದ ಹುಟ್ಟಿರುತ್ತದೆ. ಒಂದು ಭಾಷೆ ಮತ್ತೊಂದು ಭಾಷೆಗೆ ಮುಳುವಾಗುತ್ತದೆ ಎಂಬ  ಕಲ್ಪನೆಯೇ ಭಾರತೀಯರಿಗೆ ಅರ್ಥವಾಗದಂಥದ್ದು. ಹಾಗಾಗಿ ಅನ್ಯ ಭಾಷಾ ವಲಯಕ್ಕೆ ವಲಸೆ ಹೋದವರು ತಮ್ಮ ಮೂಲ ಭಾಷೆಯನ್ನೇ ಉಳಿಸಿಕೊಳ್ಳುವುದು ಸಹಜ.

  ಇಂದು ಭಾಷಾ ರಾಷ್ಟ್ರೀಯತೆಯಿಂದಾಗಿ ವಿಭಿನ್ನ ಭಾಷಿಕರಲ್ಲಿ ಅಸಹಜವಾದ ವೈರತ್ವ ಬೆಳೆದಿದೆ. ಅದರ ಜೊತೆಗೇ ಇನ್ನೂ ಇತರ ಐಡಿಯಾಲಜಿಗಳ ಕಾರಣದಿಂದಾಗಿ ಕನ್ನಡಿಗರು ಸಂಸ್ಕೃತ, ಇಂಗ್ಲೀಷ್ ಇತ್ಯಾದಿ ಭಾಷೆಗಳ ಕುರಿತು ಅನಗತ್ಯವಾಗಿ ದ್ವೇಷ ಸಾಧಿಸತೊಡಗಿದ್ದಾರೆ. ಇಂದು ಕನ್ನಡಕ್ಕೆ ಎದುರಾದ ಸವಾಲುಗಳ ಹಿಂದೆ ವರ್ಣಭೇದ ಹಾಗೂ ವರ್ಗಭೇದ  ಕೆಲಸಮಾಡುತ್ತಿದೆ ಎಂದು ಭಾಷಣಗಳಲ್ಲಿ ಕೆಲವು ಚಿಂತಕರು ಘೋಷಿಸುವುದನ್ನು ಪತ್ರಿಕೆಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಅವರಲ್ಲಿ ಯಾರೊಬ್ಬರೂ ತಮ್ಮ ವಾದಕ್ಕೆ ಆಧಾರಗಳನ್ನು ಕೊಡುವುದಿಲ್ಲ. ಇದಕ್ಕೆ ತಕ್ಕಂತೆ, ಕನ್ನಡದಲ್ಲಿ ಸಂಸ್ಕೃತ ಅಕ್ಷರಗಳನ್ನು, ಶಬ್ದಗಳನ್ನು ತೊಡೆದು ಅದನ್ನು ಶುದ್ಧೀಕರಿಸಿ ರಕ್ಷಿಸಲು ಪ್ರಯತ್ನಿಸುತ್ತಿರುವ ವಿದ್ವಾಂಸರೂ ಇದ್ದಾರೆ. ಅಂದರೆ ಕನ್ನಡಕ್ಕೆ ಸಾವಿರಾರು ವರ್ಷಗಳಿಂದ ತನ್ನ ಅಕ್ಷರ, ಶಬ್ದ, ವ್ಯಾಕರಣ, ಛಂದಸ್ಸು, ಪರಿಕಲ್ಪನೆ ಇತ್ಯಾದಿಗಳನ್ನು ಧಾರೆ ಎರೆದು ಶ್ರೀಮಂತಗೊಳಿಸಿದ ಭಾಷೆಯನ್ನೇ ಅದರ ವೈರಿ ಎಂಬಂತೆ ನೋಡುವ ಪೃವೃತ್ತಿ ಇಂದು ಕನ್ನಡವನ್ನು  ಕಡ್ಡಾಯಮಾಡಬೇಕೆಂದು ಹೋರಾಡುವ ಅನೇಕ ಚಿಂತಕರಲ್ಲಿ ಮನೆಮಾಡಿದೆ. ಇಂಥ ಧೋರಣೆಯು ಕನ್ನಡದ ಹಿತಚಿಂತನೆಯಂತೂ ಅಲ್ಲ.

  ಭಾಷೆಗಳನ್ನು ಕಾನೂನುಗಳ, ರಾಜನೀತಿಗಳ ಮೂಲಕ ಬೆಳೆಸಬಹುದೆ? ಒಂದೊಮ್ಮೆ ಹೌದು ಎನ್ನುತ್ತೀರಾದರೆ ಅದಕ್ಕೆ ಸಾಕ್ಷ್ಯಾಧಾರಗಳು ಇರಲೇಬೇಕು. ಕಳೆದ ಅರುವತ್ತು ವರ್ಷಗಳಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಬಳಕೆಯಾಗುವ ಕನ್ನಡದ ಸಿಂಹಾವಲೋಕನವನ್ನು ಮಾಡಿದರೆ ಏನು ಕಾಣುತ್ತದೆ? ಕನ್ನಡ ಅಭಿವೃದ್ಧಿಯಾದಂತೆ ಕಾಣುತ್ತದೆಯೆ? ಪದವೀಧರರ ಕನ್ನಡ ಹೇಗಾಗಿದೆ ಎಂಬುದರ ಕುರಿತು ಈಗಾಗಲೇ ತಿಳಿಸಿದ್ದೇನೆ.  ಕನ್ನಡದ ಏಳ್ಗೆಗಾಗಿ ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಮೂವತ್ತು ವರ್ಷಗಳಷ್ಟು ಹಿಂದೆಯೇ ಅಳವಡಿಸಿಕೊಳ್ಳಲಾಯಿತು. ಈಗ ಸಮಾಜ ಶಾಸ್ತ್ರಗಳಲ್ಲಿ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳೂ, ಶಿಕ್ಷಕರೂ ಸಿಗುವುದಿಲ್ಲ. ಆದರೆ ಈ ನೀತಿಯೇನೂ ಶಿಕ್ಷಣದ ಗುಣಮಟ್ಟವನ್ನು ಎತ್ತಿದಂತೆ ಕಾಣುವುದಿಲ್ಲ. ಬದಲಾಗಿ ಕಳೆದ ಮೂವತ್ತು ವರ್ಷಗಳಲ್ಲಿ ಅದು ಮತ್ತಷ್ಟು ಅಧೋಗತಿಗೆ ಹೋಗಿರುವುದು ಸ್ಪಷ್ಟ. ಕನ್ನಡ ಭಾಷಾ ವಿದ್ವಾಂಸರೇ ಇಂದು ಮ್ಯೂಸಿಯಂ ವಸ್ತುಗಳಾಗುತ್ತಿದ್ದಾರೆ.

  ಅಂದರೆ ನಾವು ಸಮಾಜಶಾಸ್ತ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಕನ್ನಡ ಮಾಧ್ಯಮದ ನೀತಿಯನ್ನು ಅಳವಡಿಸಿಕೊಳ್ಳುವಷ್ಟಕ್ಕೇ ತೃಪ್ತರಾದೆವು. ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಬೌದ್ಧಿಕ ಸಂಪನ್ಮೂಲವನ್ನು ಹಾಗೂ ಗುಣಮಟ್ಟದ ಶಿಕ್ಷಕರನ್ನು ಕನ್ನಡದಲ್ಲಿ ಸೃಷ್ಟಿಸಲಿಲ್ಲ. ಇದರ ಪರಿಣಾಮವಾಗಿ ಇಂಥ ಶಾಸ್ತ್ರಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಹಾಗೂ ಸಂಶೋಧನೆಗಳು ಹಳ್ಳ ಹಿಡಿದವು. ಪರಿಣಾಮವಾಗಿ ಕನ್ನಡದ ಹೆಸರಿನಲ್ಲಿ ಒಂದು ತಲೆಮಾರಿನ ವಿದ್ಯಾರ್ಥಿಗಳು ಜ್ಞಾನವಂಚಿತರಾದರು. ಹಾಗಾಗಿ ಕೇವಲ ಕನ್ನಡ ಕಡ್ಡಾಯವಾಗಿಬಿಟ್ಟರೆ ಕನ್ನಡದ ಉದ್ಧಾರವಾಗಲೀ, ಕನ್ನಡವನ್ನು ನೆಚ್ಚಿದವರ ಉದ್ಧಾರವಾಗಲೀ ಆಗಿಯೇಬಿಡುತ್ತದೆ ಎನ್ನುವುದು ಸುಳ್ಳು. ಜೊತೆಗೆ ಭಾಷಾ ಕಲಿಕೆ, ಹಾಗೂ ಶಿಕ್ಷಣ ವ್ಯವಸ್ಥೆಯ ಗುಣಮಟ್ಟಗಳ ಕುರಿತೂ ಕಾಳಜಿ ವಹಿಸಬೇಕಾಗುತ್ತದೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: