ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 16: ಭಾಷೆ-ಪ್ರಭುತ್ವ, ಸಂಸ್ಕೃತಿ ಮತ್ತು ಜನತೆ.

ಪ್ರೊ. ರಾಜಾರಾಮ ಹೆಗಡೆ.

  ಇಂದು ಕನ್ನಡ ಎಂಬುದು ಕೇವಲ ಭಾಷೆಯಲ್ಲ. ಅದೊಂದು ಆಳ್ವಿಕೆಯ ಭಾಷೆ. ಕನ್ನಡ ಮಾತನಾಡುವವರಿಗೆ ಸೇರಿದ ಒಂದು ಭೂಪ್ರದೇಶವನ್ನು ನಾವು ಪಡೆದಿದ್ದೇವೆ, ಅದುವೆ ಕರ್ನಾಟಕ. ಈ ಭೂಪ್ರದೇಶಕ್ಕೇ ಭಾಗಶಃ ಸ್ವಾಯತ್ತತೆಯನ್ನು ಪಡೆದು, ಆಳ್ವಿಕೆಯನ್ನು ರಚಿಸಿಕೊಂಡಿದ್ದೇವೆ. ಹಾಗಾಗಿ ಈ ಆಳ್ವಿಕೆಯು ಕನ್ನಡಿಗರ ಆಳ್ವಿಕೆ. ಇಂಥ ಆಳ್ವಿಕೆಯ ಆದ್ಯತೆಯೆಂದರೆ ಕನ್ನಡವನ್ನು, ಕನ್ನಡಿಗರ ಹಿತಾಸಕ್ತಿಯನ್ನು ರಕ್ಷಿಸುವುದು. ಈ ರಾಜ್ಯವು ನಿಮ್ಮ ಹಿತಾಸಕ್ತಿಯನ್ನು ರಕ್ಷಿಸುತ್ತದೆಯೆ? ಎಂಬುದು ನೀವು ಕನ್ನಡಿಗರು ಹೌದೆ? ಎಂಬುದನ್ನವಲಂಬಿಸಿದೆ. ಅಂದರೆ ಈ ಭಾಷೆಯನ್ನು ಮಾತನಾಡುವ ಮೂಲಕ ನೀವು ಈ ಆಳ್ವಿಕೆಯ ಸದಸ್ಯತ್ವವನ್ನು ಪಡೆದುಕೊಳ್ಳುತ್ತೀರಾ. ಇದನ್ನು ಭಾಷಾ ರಾಷ್ಟ್ರೀಯತೆ ಎಂದೂ ಕರೆಯಬಹುದು.

  ಇಷ್ಟೇ ಅಲ್ಲ. ಕನ್ನಡಿಗರಿಗೆ ಅವರದೇ ಆದ ಏಕ ಸಂಸ್ಕೃತಿ ಹಾಗೂ ಇತಿಹಾಸಗಳಿವೆ ಎಂಬುದಾಗಿ ಕೂಡ ಈ ರಾಷ್ಟ್ರೀಯತೆಯು ತಿಳಿಸುತ್ತದೆ. ಅಂದರೆ ಇತಿಹಾಸ ಕಾಲದಿಂದಲೂ ಇವರು ಒಂದು ಜನತೆಯಾಗಿ ರೂಪುಗೊಂಡು ಬೆಳೆದು ಬಂದಿದ್ದಾರೆ ಅಂತ. ಈ ಭಾಷಾ ರಾಷ್ಟ್ರೀಯತೆಗೆ ಅನ್ಯ ಭಾಷಿಕರು ಕೇವಲ ಅನ್ಯ ಜನರು ಮಾತ್ರವಲ್ಲ. ಅವರು ಕನ್ನಡ ಜನತೆಯ ಹಿತಾಸಕ್ತಿಗೆ ಧಕ್ಕೆ ತರಬಹುದಾದವರು. ಕರ್ನಾಟಕಕ್ಕೂ ಅದರ ನೆರೆಯ ರಾಜ್ಯಗಳಿಗೂ ನಡೆಯುತ್ತಿರುವ ನದಿ ನೀರಿನ, ಜನರ ವಲಸೆಯ, ಗಡಿವಿವಾದಗಳ, ಹಾಗೂ ಇಂಥ ಅನೇಕ ಸಂಗತಿಗಳ ಕುರಿತ ಸಂಘರ್ಷಗಳು ಈ ಅಂಶವನ್ನು ಸದಾ ಜಾಗೃತವಾಗಿ ಇಟ್ಟಿರುತ್ತವೆ. ಹಾಗಾಗಿ ನಮ್ಮ ನೆರೆಯ ಅನ್ಯ ಭಾಷಾ ಪ್ರದೇಶಗಳ ಆಳ್ವಿಕೆಗಳಿಗೂ ನಮ್ಮ ಆಳ್ವಿಕೆಗೂ ಸಂಘರ್ಷ ಸಾಮಾನ್ಯ.

   ಇಂಥ ವಾಸ್ತವದಲ್ಲಿ ಬದುಕುತ್ತಿರುವ ನಾವು ಕನ್ನಡಭಾಷೆಯನ್ನು ಸಂಸ್ಕೃತಿ ಹಾಗೂ ಫ್ರಭುತ್ವಗಳ ಜೊತೆಗೆ ಜೋಡಿಸುವುದು ಸಹಜ ಎಂಬಂತೇ ಮಾತನಾಡುತ್ತೇವೆ. ಕನ್ನಡ ಸಂಸ್ಕೃತಿ ಎಂಬ ಪದಪುಂಜವು ನಮಗೆಲ್ಲ ಪರಿಚಿತ. ಆದರೆ ಈ ಶಬ್ದದ ಅರ್ಥವೇನು ಎಂಬುದು ಸ್ಪಷ್ಟವಿಲ್ಲ. ಏಕೆಂದರೆ ಸಂಸ್ಕೃತಿ ಎಂದರೆ ಜೀವನ ಕ್ರಮಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಕನ್ನಡ ಜೀವನ ಕ್ರಮ ಎಂಬುದಿದೆಯೆ? ಕರ್ನಾಟಕದಲ್ಲಿ ತುಳು, ಕೊಡವ, ಕೊಂಕಣಿ, ಉರ್ದು, ತಮಿಳು, ತೆಲುಗು, ಮರಾಠಿ ಇತ್ಯಾದಿಯಾದ ಬಹಳ ಭಾಷೆಗಳನ್ನು ಆಡುವ ಸಮುದಾಯಗಳು ಇವೆ. ಇವರೆಲ್ಲ ಕರ್ನಾಟಕದ ಪ್ರಜೆಗಳಾಗಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಮಾತನಾಡುತ್ತಾರೆ. ಆ ಕಾರಣಕ್ಕೆ ಅವರ ಜೀವನ ಕ್ರಮವು ಕನ್ನಡ ಎನ್ನಲಾದೀತೆ? ತುಳುನಾಡಿನಲ್ಲಿರುವ ಆರಾಧನೆಗಳು, ಉತ್ಸವಗಳು, ಸಂಪ್ರದಾಯಗಳು ಇವೆಲ್ಲ ತುಳುಭಾಷೆಯಲ್ಲೇ ನಡೆಯುತ್ತವೆ. ಇದನ್ನೇ ಇತರ ಭಾಷಿಕರ ಸಂಪ್ರದಾಯಗಳಿಗೂ ಅನ್ವಯಿಸಬಹುದು. ಅದೇ ರೀತಿಯಲ್ಲಿ, ಒಬ್ಬನೇ, ಒಂದೇ ಸಮುದಾಯವೇ ಹಲವಾರು ಭಾಷೆಗಳನ್ನು ಮಾತನಾಡುವ ವಾಸ್ತವವಿರುವಾಗ ಇಂಥ ಜನತೆಯನ್ನು ಯಾವುದೋ ಒಂದು ಭಾಷೆಗೆ ಸಮೀಕರಿಸುವ ಮಾತನ್ನು ಆಡಿದರೆ ಅದು ಅರ್ಥವಾಗುವುದೂ ಕಷ್ಟ.

   ಮತ್ತೊಂದೆಡೆ, ಕನ್ನಡ  ಭಾಷಿಕರು ಇತರ ಭಾಷಿಕರ ಜೊತೆಗೆ ಭಾಷೆ ಹಾಗೂ ಪ್ರಭುತ್ವದ ಗಡಿಗಳನ್ನೂ ಮೀರಿ ಹಂಚಿಕೊಂಡ ಸಾಂಸ್ಕೃತಿಕ ಅಂಶಗಳೂ ಇವೆ. ಆಹಾರ, ಉಡುಗೆ, ಇತ್ಯಾದಿಗಳಲ್ಲದೇ, ಹಬ್ಬ, ಸಂಪ್ರದಾಯ, ಪೂಜಾ ಪಂಥಗಳು, ಪರಂಪರೆಗಳು ಇತ್ಯಾದಿಗಳೂ ಈ ಪಟ್ಟಿಯಲ್ಲಿ ಸೇರುತ್ತವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನರನ್ನು ಒಟ್ಟಿಗೇ ತರುವ ವಿಠಲ, ದತ್ತ, ಇತ್ಯಾದಿ ಪಂಥಗಳೂ, ಕರ್ನಾಟಕ, ಆಂಧ್ರ, ತಮಿಳುನಾಡಿನ ಜನರನ್ನು ಒಟ್ಟಿಗೇ ತರುವ ಶ್ರೀವೈಷ್ಣವ, ಮಾಧ್ವ ಮತಗಳೂ ಇವೆ. ತಿರುಪತಿ, ಶಬರಿಮಲೆ, ಪಂಢರಾಪುರ ಇತ್ಯಾದಿ ಸ್ಥಳಗಳಿಗೆ ಹೋದಾಗ ಭಾಷೆಗಳು ಅಪ್ರಸ್ತುತವಾಗುತ್ತವೆ. ನಿಜವಾಗಿ ನೋಡಿದರೆ ಭಾರತೀಯ ಸಂಸ್ಕೃತಿಯ ರಚನೆಯೇ ಹೀಗಿದೆ. ಕನ್ನಡ ಜನರ ಸಂಸ್ಕೃತಿ ಎಂದು ಪ್ರತ್ಯೇಕವಾಗಿ ಏನೂ ಇಲ್ಲ. ಇರುವುದೊಂದೇ ಸಂಸ್ಕೃತಿ, ಅದು ಭಾರತೀಯ ಸಂಸ್ಕೃತಿ. ಭಾಷಾ ಸಂಸ್ಕೃತಿಯ ಹೆಸರಿನಲ್ಲಿ ಪ್ರಭುತ್ವಗಳ ಗಡಿಯ ಕುರಿತು ಹೋರಾಟಗಳೂ, ವಿವಾದಗಳೂ, ಸಂಘರ್ಷಗಳೂ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ನಡುವೆ ನಡೆಯುತ್ತಿರುವಾಗ ಇವರೆಲ್ಲ ತಾವು ಭಾರತೀಯ ಸಂಸ್ಕೃತಿಯನ್ನೇ ಬದುಕುತ್ತಿದ್ದೇವೆ ಎನ್ನುವುದನ್ನು ಮರೆತಂತಿದೆ.

  ಭಾರತೀಯ ಇತಿಹಾಸದಲ್ಲಿ ಭಾಷಾ ಪ್ರಭುತ್ವಗಳು ಇರಲಿಲ್ಲ. ನಾವು ಇಂದು ಕನ್ನಡ ಅರಸರು ಎಂದು ಮುದ್ರೆಯೊತ್ತಿ ಕೆಲವು ರಾಜಮನೆತನಗಳನ್ನು ಕರ್ನಾಟಕದ ಇತಿಹಾಸದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದೇವೆ. ಉದಾಹರಣೆಗೆ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಯಾದವರು, ವಿಜಯನಗರ ರಾಜರು. ಈ ಅರಸರು ಕನ್ನಡ ಮಾತನಾಡುವವರಾಗಿದ್ದಿರಬಹುದು, ಹಾಗೂ ಕನ್ನಡವನ್ನು ಪೋಷಿಸಿರಬಹುದು, ಆದರೆ ಅವರ ಪ್ರಭುತ್ವವು ಕನ್ನಡಕ್ಕೆ ಸೀಮಿತವಾದ ಪ್ರಭುತ್ವವಾಗಿರಲಿಲ್ಲ. ಅಂದರೆ ಅವರ ಆಳ್ವಿಕೆಯು ಏಕಭಾಷಾ ಪ್ರದೇಶವಾಗಿರಲಿಲ್ಲ. ಅವರು ಕನ್ನಡ, ತೆಲುಗು, ತಮಿಳು, ಮಲೆಯಾಳಿ, ತುಳು ಇತ್ಯಾದಿ ಭಾಷಾ ಪ್ರದೇಶಗಳಲ್ಲೂ ತಮ್ಮ ರಾಜ್ಯವನ್ನು ವಿಸ್ತರಿಸಿದ್ದರು. ತಮ್ಮ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲಾ ಗ್ರಾಂಥಿಕ ಭಾಷೆಗಳಲ್ಲ್ಲೂ ಶಾಸನಗಳನ್ನು ಬರೆಸಿದ್ದರು. ಹಾಗಂತ ಅವು ಬಹುಭಾಷಾ ಪ್ರಭುತ್ವಗಳು ಕೂಡ ಆಗಿರಲಿಲ್ಲ. ಏಕೆಂದರೆ ಭಾಷೆಗೂ ಪ್ರಭುತ್ವಕ್ಕೂ ಅಲ್ಲಿ ಸಂಬಂಧವೇ ಇರಲಿಲ್ಲ.

  ಭಾರತದಲ್ಲಿ ಭಾಷೆಯು ಸಾಹಿತ್ಯ ಹಾಗೂ ಸಂವಹನೆಯ ಮಾಧ್ಯಮವಾಗಿತ್ತು ಅಷ್ಟೆ. ನಮ್ಮಲ್ಲಿ ಸಂಸ್ಕೃತವನ್ನೂ ಒಳಗೊಂಡಂತೆ ಯಾವ ಭಾಷೆಯೂ ಪ್ರಭುತ್ವದ ಭಾಷೆಯಾಗಿರಲಿಲ್ಲ. ಹಾಗಾಗಿ ಯಾವ ಭಾಷೆಯೂ ಮತ್ತೊಂದನ್ನು ಅಳಿಸುವ ಕೆಲಸ ಮಾಡಲಿಲ್ಲ. ಒಂದು ಭಾಷೆಯ ಬೆಳವಣಿಗೆ ಹಾಗೂ ಪ್ರಸಾರಕ್ಕೂ, ಪ್ರಭುತ್ವಕ್ಕೂ ಸಂಬಂಧವಿರಲಿಲ್ಲ ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಹಾಗೂ ಭಾಷೆಯು ಸಂಸ್ಕೃತಿಗಳ ಸೀಮೆಯನ್ನು ರಚಿಸುವ ಪಾತ್ರ ವಹಿಸಲಿಲ್ಲ.

  ಆದರೆ ನಾವು ವರ್ತಮಾನದಲ್ಲಿ ಭಾಷಾ ಪ್ರಭುತ್ವದ ಅಥವಾ ಭಾಷಾ ರಾಷ್ಟ್ರೀಯತೆಯ ಕಲ್ಪನೆಯನ್ನು ಪಾಶ್ಚಾತ್ಯರಿಂದ ಕಲಿತು ಅಳವಡಿಸಿಕೊಂಡಿದ್ದೇವೆ. ಪಾಶ್ಚಾತ್ಯರ ಪ್ರಕಾರ  ಒಂದು ಸಮುದಾಯವನ್ನು ಜನಾಂಗ ಎಂದು ಗುರುತಿಸುವುದು ರಾಷ್ಟ್ರೀಯತೆಗೆ ಬಹಳ ಮುಖ್ಯ. ಜನಾಂಗ ಎಂದರೆ ಒಂದೇ ಮೂಲದ, ಒಂದೇ ಭಾಷೆಯನ್ನು ಹಾಗೂ ರಿಲಿಜನ್ನನ್ನು ಹೊಂದಿರುವ, ಹಾಗೂ ಆ ಕಾರಣಕ್ಕೆ ಒಂದೇ ಸಂಸ್ಕೃತಿಯನ್ನು ಹಂಚಿಕೊಂಡಿರುವ ಸಮುದಾಯ. ಅಂದರೆ ಜನಾಂಗವಾಗುವುದಕ್ಕೆ ಭಾಷೆ ಬಹಳ ಮುಖ್ಯ. ಆ ಜನಾಂಗದ ಜೀವನ ಕ್ರಮದಲ್ಲೂ ಏಕತೆ ಇರುವುದರಿಂದ ಒಂದೇ ಭಾಷೆಯನ್ನು ಹೊಂದುವುದೆಂದರೆ ಒಂದೇ ಸಂಸ್ಕೃತಿಯನ್ನು ಹೊಂದಿದ ಹಾಗೇ. ಈ ರೀತಿಯಲ್ಲಿ ಪಾಶ್ಚಾತ್ಯರು ಜನಾಂಗಕ್ಕೂ, ಭಾಷೆಗೂ ಸಂಸ್ಕೃತಿಗೂ ಸಮೀಕರಣ ಮಾಡುತ್ತಾರೆ. ಅದು ಎಷ್ಟರ ಮಟ್ಟಿಗೆ ವಾಸ್ತವಿಕ ಸಂಗತಿ ಎಂಬದರ ಕುರಿತು ಅವರಿಗೂ ಪ್ರಶ್ನೆಗಳಿದ್ದೇ ಇವೆ ಅಂತಿಟ್ಟುಕೊಳ್ಳಿ. ಆದರೆ ಪಾಶ್ಚಾತ್ಯರು ತಮ್ಮ ರಾಜಕೀಯವನ್ನು ರೂಪಿಸಿಕೊಂಡಿದ್ದು ಇಂಥ ಕಲ್ಪನೆಗಳನ್ನಾಧರಿಸಿ ಎಂಬುದಂತೂ ಸುಳ್ಳಲ್ಲ. ಅಂಥ ಪ್ರಭುತ್ವದಲ್ಲಿ ಆಳುವ ಭಾಷೆಗೂ ಜನಾಂಗದ ಉದ್ಧಾರಕ್ಕೂ ಸಂಬಂಧ  ಹುಟ್ಟಿಕೊಳ್ಳುತ್ತದೆ.

  ಭಾರತೀಯರು ಭಾಷೆಗಳನ್ನು ನೋಡುವುದೇ ಬೇರೆ ರೀತಿ. ಈ ಸಂಸ್ಕೃತಿಯು ತನ್ನ ಸದಸ್ಯರಿಗೆ ಭಾಷೆಗೂ, ಜೀವನಕ್ರಮಕ್ಕೂ ಜನಾಂಗಕ್ಕೂ ಸಮೀಕರಣಗಳನ್ನು ಕಲ್ಪಿಸಿಕೊಂಡು ವ್ಯವಹರಿಸಲು ಕಲಿಸಿಲ್ಲ. ಹಾಗಾಗಿ ಇಲ್ಲಿ ಭಾಷಾ ಪ್ರಭುತ್ವಗಳೂ ಬೆಳೆದು ಬರಲಿಲ್ಲ. ಇಂದು ಭಾರತದ ವಿಭಿನ್ನ ಪ್ರದೇಶಗಳಲ್ಲಿ ಭಾಷಾವಲಯಗಳು ಸೃಷ್ಟಿಯಾದದ್ದು ಹಾಗೂ ಈ ಭಾಷೆಗಳು ಶ್ರೀಮಂತಿಕೆಯನ್ನು ಪಡೆದದ್ದು ಈ ಮುಕ್ತ ವಾತಾವರಣದಲ್ಲೇ ಹೊರತೂ ಯಾವುದೇ ಪ್ರಭುತ್ವ, ಕಾನೂನುಗಳ ರಕ್ಷಣೆಯಿಂದಲ್ಲ. ಹಾಗಾಗಿಯೇ ಪ್ರತೀ ಭಾಷಾ ವಲಯದೊಳಗೂ ಅನೇಕ ಭಾಷೆಗಳು ಯಾವುದೇ ವೈರತ್ವವನ್ನು ಅನುಭವಿಸದೇ ಪೋಷಣೆಗೊಂಡು ಬೆಳೆದು ಬಂದಿವೆ. ಭಾರತೀಯ ಸಂಸ್ಕೃತಿಯು ಬಹುತ್ವದ ಜೊತೆಗೆ ಸಂವಾದಿಸುವ ರೀತಿಗೂ ಪಾಶ್ಚಾತ್ಯರು ಸಂವಾದಿಸುವ ರೀತಿಗೂ ಮೂಲಭೂತ ವ್ಯತ್ಯಾಸಗಳಿವೆ. ನಾವು ಕನ್ನಡ ಪರ ವಾದಗಳನ್ನು ಮಂಡಿಸುವಾಗ ಈ ವ್ಯತ್ಯಾಸಗಳ ಕುರಿತು ಅರಿವು ಮೂಡಿಸಿಕೊಳ್ಳುವುದು ಅಗತ್ಯ. ಅದಿಲ್ಲದಿದ್ದರೆ ಇಂಥ ರಾಜಕೀಯವು ನಮ್ಮ ಜೀವನವು ನಮಗೇ ಸಾಧ್ಯವಾಗದ ಪರಿಸ್ಥಿತಿಗೆ ನಮ್ಮನ್ನು ಒಯ್ಯಬಹುದು.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: