ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 17: ಕೌಪೀನವಂತಃ ಖಲು ಭಾಗ್ಯವಂತಃ

ಪ್ರೊ. ರಾಜಾರಾಮ ಹೆಗಡೆ.

  ಇಂದು ಭೀಕ್ಷೆ ಬೇಡಿ ಜೀವಿಸುವುದು ಮನುಷ್ಯನಿಗೆ ಬರಬಹುದಾದ ಅತ್ಯಂತ ಹೀನಾಯವಾದ ಅವಸ್ಥೆಯಾಗಿದೆ. ರಟ್ಟೆಯಲ್ಲಿ ಶಕ್ತಿ ಇರುವವರೆಗೆ ಭಿಕ್ಷೆ ಸಿಗುವುದೂ ಕಷ್ಟ. ಹಾಗಾಗಿ ಅಂಗಗಳನ್ನು ಊನಗೊಳಿಸಿಕೊಂಡು ದಯನೀಯ ಸ್ಥಿತಿಯನ್ನು ತಾವೇ ತಂದುಕೊಳ್ಳುವುದು ಭಿಕ್ಷಾವೃತ್ತಿಗೆ ಲಾಭದಾಯಕ. ಸಣ್ಣ ಸಣ್ಣ ಕಂದಮ್ಮಗಳನ್ನು ಕದ್ದೊಯ್ದು ಮಾರಿ, ಅವರ ಅಂಗಗಳನ್ನು ಊನಗೊಳಿಸಿ ಭಿಕ್ಷೆಯ ಉದ್ಯಮಕ್ಕೆ ಹಚ್ಚಿದ ದಾರುಣ ಕಥೆಗಳು ಇಂದಿನ ಭಿಕ್ಷಾಟನಾ ವೃತ್ತಿಯ ಇತಿಹಾಸದಲ್ಲಿವೆ. ಹಾಗಾಗಿ ಇದೊಂದು ಸಾಮಾಜಿಕ ಅನಿಷ್ಠ ಎಂಬುದಾಗಿ ಗುರುತಿಸಿ ಅದನ್ನು ನಿರ್ಮೂಲನೆ ಮಾಡಲು ಅನೇಕ ದೇಶಗಳಲ್ಲಿ ಕಾಯ್ದೆ ಕಾನೂನುಗಳನ್ನೂ ತರಲಾಗಿದೆ. ಇಂದಿನ ಸರ್ಕಾರಗಳು ಒಂದು ದೇಶದ ಅಭಿವೃದ್ಧಿಗೂ ಭಿಕ್ಷಾಟನೆಯ ನಿರ್ಮೂಲನೆಗೂ ನೇರ ಸಂಬಂಧವನ್ನು ಕಲ್ಪಿಸುತ್ತವೆ. ಅಂದರೆ ಭಿಕ್ಷುಕ ಎಂದರೆ ನಿರ್ಗತಿಕ. ಅವನು ಬಡತನದ ಹಾಗೂ ಹಿಂದುಳಿದಿರುವಿಕೆಯ ಪ್ರತೀಕ. ಭಿಕ್ಷಾವೃತ್ತಿಯೇ ಸಾಮಾಜಿಕ ಅನಿಷ್ಠ. ಅದನ್ನು ಪಾಶ್ಚಾತ್ಯ ರಾಷ್ಟ್ರಗಳು ಅನೈತಿಕ ಎಂಬುದಾಗಿಯೂ ಪರಿಗಣಿಸುತ್ತವೆ.

  ಭಿಕ್ಷೆಯ ಕುರಿತು ನಮ್ಮ ಇಂದಿನ ಕಲ್ಪನೆಗಳನ್ನು ಇಟ್ಟುಕೊಂಡು ನಮ್ಮ ಪ್ರಾಚೀನ  ಭಾರತವನ್ನು ನೋಡಿದಾಗ ಕಾಣುವುದೇನು? ಭಾರತವು ಭಿಕ್ಷಾಟನೆಯನ್ನು ವೈಭವೀಕರಿಸಿದಂತೆ ಕಾಣುತ್ತದೆ. ಬೌದ್ಧರು, ಜೈನರಂತೂ ಭಿಕ್ಷಾಟನೆಯನ್ನು ವ್ಯವಸ್ಥಿತವಾಗಿ ಬೆಳೆಸಿದಂತೆ ಕಾಣುತ್ತದೆ. ಈ ಕಾರಣದಿಂದಲೇ ಬುದ್ಧನು ಜನರಿಗೆಲ್ಲ ಭಿಕ್ಷೆ ಬೇಡುವುದನ್ನು ಕಲಿಸಿ ಅವರನ್ನು ಹಾಳುಮಾಡಿದನು ಎಂದು ಒಂದು ಗುಂಪು ಆರೋಪಿಸಿದರೆ,  ಬ್ರಾಹ್ಮಣರು ಸೋಮಾರಿಗಳಾಗಿ ಭಿಕ್ಷೆಬೇಡಿ ತಿಂದು ಅನೈತಿಕ ಜೀವನವನ್ನು ನಡೆಸಿದರು ಎಂದು ಮತ್ತೊಂದು ಗುಂಪು ಆರೋಪಿಸುತ್ತದೆ. ಅಂದರೆ ನಾವು ಭಿಕ್ಷೆ ಎಂಬುದಕ್ಕೆ ಇಂದಿನ ಅರ್ಥವನ್ನು ಹಚ್ಚಿದಾಗ ಅದು ಅನೈತಿಕ, ಅನಿಷ್ಠ ಎಂಬಂತೆ ಕಾಣುವುದು ಸ್ವಾಭಾವಿಕ. ಆದರೆ ಆ ಅರ್ಥವನ್ನು ಹಚ್ಚುವುದರ ಮೂಲಕ ನಾವು ಒಂದು ತಪ್ಪು ಮಾಡುತ್ತಿದ್ದೇವೆ.

   ಇಂದು ಭಿಕ್ಷೆ ಎಂದು ನಾವು ಯಾವುದನ್ನು ಗುರುತಿಸುತ್ತೇವೆಯೋ ಅದಕ್ಕೂ ಪ್ರಾಚೀನ ಭಾರತದ ಭಿಕ್ಷಾವೃತ್ತಿಗೂ ಮೂಲಭೂತ ವ್ಯತ್ಯಾಸಗಳಿವೆ. ಇಂದಿನ ಭಿಕ್ಷಾವೃತ್ತಿಯು ನಿರ್ಗತಿಕರ ಜೀವನ ಮಾರ್ಗ. ಹಾಗೂ ಅದಕ್ಕೆ ನಾವು ಕೊಡುವ ಅರ್ಥಗಳೆಲ್ಲವೂ ಆ ಹಿನ್ನೆಲೆಯಿಂದ ಬರುತ್ತವೆ. ಬಂಡವಾಳಶಾಹಿಯಿಂದಾಗಿ ಯುರೋಪಿನಲ್ಲಿ ಹಾಗೂ ತೃತೀಯಜಗತ್ತಿನಲ್ಲಿ ಸೃಷ್ಟಿಯಾದ ನಿರ್ಗತಿಕ ಜನವರ್ಗಕ್ಕೆ ಭಿಕ್ಷೆ ಬೇಡಿಯೇ ಜೀವನ ಮಾಡಿಕೊಳ್ಳುವ ಸ್ಥಿತಿ ಬಂದಿತು. ಅದಕ್ಕೂ ಪೂರ್ವದಲ್ಲಿ ನಮ್ಮಲ್ಲಿ ಸಾಂಪ್ರದಾಯಿಕವಾಗಿ ಹೊಟ್ಟೆಪಾಡಿಗಾಗಿ ಭಿಕೆ ಬೇಡುವ ಜನರು ಇದ್ದರು. ಆದರೆ ಅವರು ಕೇವಲ ಭಿಕ್ಷುಕರಾಗಿರಲಿಲ್ಲ. ಅವರು ಕೆಲವು ಸಾಂಪ್ರದಾಯಿಕ ವೃತ್ತಿಗಳನ್ನು ಅವಲಂಬಿಸಿ ಅದರ ಒಂದು ಭಾಗವಾಗಿ ಭಿಕ್ಷೆಯನ್ನು ಸಂಗ್ರಹಿಸಿ ಜೀವಿಸುತ್ತಿದ್ದರು. ಅಥವಾ ಸನ್ಯಾಸ ಜೀವನವನ್ನು ಅನುಸರಿಸುವವರಾಗಿದ್ದರು. ನಾವಿಂದು ನಗರಗಳಲ್ಲಿ ನೋಡುವಂತೆ ಅಂಗಗಳನ್ನು ಊನ ಮಾಡಿಕೊಂಡು ಭಿಕ್ಷೆ ಬೇಡುವುದಂತೂ ಆಧುನೀಕರಣದ ಕೊಡುಗೆಯೇ ಆಗಿದೆ.

   ಭಾರತೀಯ ಅಧ್ಯಾತ್ಮ ಸಂಪ್ರದಾಯಗಳಲ್ಲಿ ಭಿಕ್ಷಾಟನೆಯು ನಿರ್ಗತಿಕರ ಜೀವನಮಾರ್ಗವಾಗಿರಲಿಲ್ಲ. ಅದು ಸಾಧನೆಯ ಮಾರ್ಗವಾಗಿತ್ತು. ಬೌದ್ಧ ಜೈನ ಸಂಘಗಳಲ್ಲಿ ಭಿಕ್ಷುಗಳಾಗಿ ಬರುತ್ತಿದ್ದವರು ಸಂಸಾರವನ್ನು ಬಿಟ್ಟು ಬಂದವರು. ಪೂರ್ವಾಶ್ರಮದಲ್ಲಿ ರಾಜ್ಯ ಸಾಮ್ರಾಜ್ಯಗಳನ್ನು ಹೊಂದಿದವರೂ, ಕೋಟ್ಯಾಧಿಪತಿಗಳೂ ಅವರಲ್ಲಿದ್ದರು. ಆಸ್ತಿಪಾಸ್ತಿಗಳನ್ನು ದಾನಮಾಡಿ ಅವುಗಳ ಮೇಲಿನ ಮೋಹವನ್ನು ಸಂಪೂರ್ಣವಾಗಿ ತೊರೆದ ಹೊರತೂ ಅವರಿಗೆ ಪರಮಾರ್ಥ ಸಾಧನೆ ಸಾಧ್ಯವಿರಲಿಲ್ಲ. ಇಂಥ ಭಿಕ್ಷುಗಳು ವರ್ಷವಿಡೀ ತಿರುಗಾಡುತ್ತ ಉಪಾಸಕರ ಮನೆಯಲ್ಲಿ ಭಿಕ್ಷೆಯನ್ನು ಸ್ವಿಕರಿಸಿ ಜೀವಿಸುತ್ತಿದ್ದರು. ಜೈನ ಸನ್ಯಾಸಿಗಳೂ ಕೂಡ ಇದೇ ರೀತಿಯಲ್ಲಿ ಸಂಸಾರಸ್ಥರ ಮನೆಯಿಂದ ಭಿಕ್ಷೆಯನ್ನು ಬೇಡಿ ಜೀವಿಸುತ್ತಿದ್ದರು. ಅಷ್ಟೇ ಅಲ್ಲ, ಬ್ರಾಹ್ಮಣರಲ್ಲೂ ಕೂಡ ಉಪನಯನವಾದ ನಂತರ ವಟುಗಳು ಬ್ರಹ್ಮಚಾರಿಗಳಾಗಿ ಭಿಕ್ಷಾಟನೆಯನ್ನು ಮಾಡಿ ಜೀವಿಸುತ್ತಿದ್ದರು. ಅಂದರೆ ನಮ್ಮ ಸಂಸ್ಕೃತಿಯಲ್ಲಿ ಮೋಕ್ಷ ಸಾಧನೆಗೂ ಭಿಕ್ಷಾವೃತ್ತಿಗೂ ಸಂಬಂಧ ಕಲ್ಪಿಸಿರುವುದು ಕಂಡುಬರುತ್ತದೆ.

   ಪ್ರಾಪಂಚಿಕ ಆಸಕ್ತಿಯನ್ನು ತೊರೆದು ಆತ್ಮಜ್ಞಾನವನ್ನು ಅರಸಿ ಹೊರಟವನಿಗೆ ಸನ್ಯಾಸವೇ ಸೂಕ್ತವಾದ ಮಾರ್ಗ ಎಂಬುದಾಗಿ ಶಂಕರಾಚಾರ್ಯರೂ ವಾದಿಸುತ್ತಾರೆ. ಮನುಷ್ಯನಿಗೆ ತನ್ನ ದೇಹವನ್ನು ರಕ್ಷಿಸಿಕೊಳ್ಳುವುದು ಜ್ಞಾನಸಾಧನೆಗೆ ಅತ್ಯಂತ ಮೂಲಭೂತವಾದ ಅವಶ್ಯಕತೆಯಾಗಿದೆ. ದೇಹವಿದ್ದರೆ ತಾನೆ ಜ್ಞಾನ? ಆದರೆ ದೇಹಪೋಷಣೆಗಾಗಿ ಅವನು ಸಂಸಾರದಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಅದು ಅವನನ್ನು ಸಂಸಾರ ಬಂಧನದಲ್ಲಿ ಕಟ್ಟುತ್ತದೆ. ನಾಳೆಗಾಗಿ ಕೂಡಿಸಿಡುವುದು, ಚಿಂತಿಸುವುದು, ಆಸ್ತಿ ಪಾಸ್ತಿಯ ಆಸೆ, ಮೋಹ, ಭಯ, ಕ್ರೋಧ ಇತ್ಯಾದಿಗಳೆಲ್ಲ ಅದನ್ನನುಸರಿಸಿ ಅಂಟಿಕೊಳ್ಳುತ್ತವೆ. ಎಷ್ಟರ ಮಟ್ಟಿಗೆಂದರೆ ಇಷ್ಟಾರ್ಥಸಾಧನೆಗಾಗಿ ಮಾಡಿದ ಯಜ್ಞ, ಪೂಜೆಗಳೂ ಕೂಡ ನಮ್ಮನ್ನು ಸಂಸಾರಕ್ಕೇ ಕಟ್ಟುತ್ತವೆ ಎಂಬುದಾಗಿ ಪ್ರಾಚೀನ ಜ್ಞಾನಿಗಳು ಭಾವಿಸಿದ್ದರು. ಹಾಗೂ ಜ್ಞಾನದ ಹುಡುಕಾಟವನ್ನು ಒಬ್ಬ ಮನುಷ್ಯನ ಪರಮಗುರಿ ಎಂಬುದಾಗಿ ನಮ್ಮ ಸಂಸ್ಕೃತಿ ಪ್ರತಿಪಾದಿಸಿದೆ. ಏಕೆಂದರೆ ಜನನ ಮರಣದ ಚಕ್ರದಿಂದ ತಪ್ಪಿಸಿಕೊಂಡು ಶಾಶ್ವತ ಆನಂದವನ್ನು ಹೊಂದುವುದು ಮನುಷ್ಯನ ಅಂತಿಮ ಪುರುಷಾರ್ಥವಾಗಿದೆ. ಅದನ್ನು ಈ ಮನುಷ್ಯ ಜನ್ಮದಲ್ಲೇ, ದೇಹದಲ್ಲೇ ಸಾಧಿಸಬೇಕು ಎಂಬುದು ಅವನಿಗಿರುವ ನಿರ್ಬಂಧ.

   ಸಂಸಾರದಲ್ಲಿರುವ ಮನುಷ್ಯರ ಸುಖೀ ಬದುಕಿಗೆ ಇಂಥವರ ಜ್ಞಾನವು ತೀರಾ ಅತ್ಯಗತ್ಯವಾಗಿತ್ತು.  ಹಾಗಾಗಿ ಸಮಾಜದಲ್ಲಿ ಇಂಥ ಸನ್ಯಾಸಿಗಳು ಪೂಜನೀಯ ಸ್ಥಾನದಲ್ಲಿದ್ದರು. ಜ್ಞಾನಿಗಳ ಮೇಲಿನ ಈ ಅವಲಂಬನೆಗೆ ಪ್ರತಿಯಾಗಿ ಅವರನ್ನು ದೈಹಿಕ ನಿರ್ಬಂಧದಿಂದ ಬಿಡುಗಡೆಗೊಳಿಸುವುದು ಮನುಷ್ಯ ಸಮಾಜದ ಕರ್ತವ್ಯವಾಗುತ್ತದೆ. ಇಂಥ ಸಾಧನೆಯ ಮಾರ್ಗದಲ್ಲಿರುವವರನ್ನು ಪೋಷಿಸುವ ಹೊಣೆ ಸಂಸಾರಸ್ಥರ ಮೇಲೆ ಬೀಳುತ್ತದೆ. ಹಾಗಾಗಿ ‘ಧನ್ಯೋ ಗ್ರಹಸ್ಥಾಶ್ರಮಃ’ ಎಂಬ ಹೇಳಿಕೆ ಹುಟ್ಟಿದೆ. ಗ್ರಹಸ್ಥಾಶ್ರಮವು ಏಕೆ ಧನ್ಯವೆಂದರೆ ಅದು ಈ ಹೊಣೆಯನ್ನು ನಿಭಾಯಿಸುತ್ತದೆ ಎಂಬ ಕಾರಣಕ್ಕಾಗಿ. ಗ್ರಹಸ್ಥರು ಬ್ರಹ್ಮಚಾರಿಗಳನ್ನೂ, ಸನ್ಯಾಸಿಗಳನ್ನೂ ಪೋಷಿಸುವವರಾಗಿರುವುದರಿಂದ ಈ ಆಶ್ರಮಕ್ಕೆ ವಿಶೇಷ ಮಹತ್ವವು ಪ್ರಾಪ್ತವಾಗುತ್ತದೆ. ಹೀಗೆ ಸಂಸಾರಸ್ಥರು ಹಾಗೂ ಸನ್ಯಾಸಿಗಳು ಪರಸ್ಪರಾವಲಂಬನೆಯಲ್ಲಿ ಒಂದು ಶ್ರೇಷ್ಠ ಬದುಕನ್ನು ರೂಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಬೌದ್ಧ, ಜೈನ, ವೈದಿಕ, ಭಕ್ತಿ ಪಂಥ ಎಂಬ ಭೇದಗಳಿಲ್ಲ. ನಮ್ಮ ಶರಣರ, ದಾಸರ ಸಂದರ್ಭದಲ್ಲಿ ಬರುವ ದಾಸೋಹ, ಮಧುಕರವೃತ್ತಿ ಇತ್ಯಾದಿಗಳೂ ಕೂಡ ಇದೇ ಸಾಲಿನಲ್ಲೇ ಬರುತ್ತವೆ.

   ಭಾರತೀಯ ಸಂಸ್ಕೃತಿಯಲ್ಲಿ ಭಿಕ್ಷಾವೃತ್ತಿಯು ಒಂದು ಸಮಾಜದ ಸಮೃದ್ಧಿಗೆ ಸಾಕ್ಷಿಯಾಗುತ್ತದೆಯೇ ವಿನಃ ಬಡತನಕ್ಕಲ್ಲ. ಹಾಗಾಗಿಯೇ ‘ಸುಭಿಕ್ಷ’ (ಸಮೃದ್ಧಿ),  ‘ದುರ್ಭಿಕ್ಷ’ (ಬರ) ಎಂಬ ಶಬ್ದಗಳು ರೂಪುಗೊಂಡಿವೆ. ಒಂದು ರಾಜ್ಯದಲ್ಲಿನ ಭಿಕ್ಷಾ ವೃತ್ತಿಯವರಿಗೆ ಸಾಕಷ್ಟು ಭಿಕ್ಷೆ ಸಿಗುತ್ತಿದೆಯೆಂದರೆ  ಆ ರಾಜ್ಯದ ಸಂಸಾರಸ್ಥರ ಸಮೃದ್ಧಿಗೆ ಮತ್ತೇನು ಸಾಕ್ಷಿ ಬೇಕು? ಅದೇ ಸುಭಿಕ್ಷ್ಯ.  ಅಷ್ಟೇ ಅಲ್ಲ, ಈ ಶಬ್ದವು ನಮ್ಮ ಸಂಸ್ಕೃತಿಯ ಆದ್ಯತೆಯನ್ನು ಕೂಡ ಸೂಚಿಸುತ್ತದೆ. ಒಂದು ರಾಜ್ಯದ ಸಂಸಾರಸ್ಥರು ಹಾಗೂ ಆ ಮೂಲಕ ಇಡೀ ರಾಜ್ಯವೇ ಯಾವ ಪುರುಷಾರ್ಥಕ್ಕಾಗಿ ಸಮೃದ್ಧವಾಗಬೇಕು? ಆ ರಾಜ್ಯವು ತನ್ನ ಜ್ಞಾನಾಕಾಂಕ್ಷಿಗಳಾದ ಪ್ರಜೆಗಳನ್ನೆಲ್ಲ ಅವರ ದೈಹಿಕ ನಿರ್ಬಂಧದಿಂದ ಬಿಡುಗಡೆಗೊಳಿಸುವಂತಾಗುವುದೇ ಸಮೃದ್ಧಿಯ ಸಾರ್ಥಕತೆ.

   ಹಾಗಾಗಿ ಭಾರತೀಯ ಸಂಸ್ಕೃತಿಯು ಬಡತನವನ್ನು ಪಾಪ, ಅನಿಷ್ಠ ಎಂಬಂತೆ ನೋಡುವುದಿಲ್ಲ. ಅದು ಐರೋಪ್ಯರ ದೃಷ್ಟಿಕೋನ. ಪ್ರಾಪಂಚಿಕ ಸುಖವೇ ಜ್ಞಾನಕ್ಕೆ ದೊಡ್ಡ ತಡೆಯಾಗಬಹುದು ಎಂಬುದನ್ನು ನಮ್ಮ ಹಿಂದಿನವರು ಕಂಡುಕೊಂಡಿದ್ದರು. ಬಡತನವನ್ನು ಕೃತಕವಾಗಿಯಾದರೂ ಗಳಿಸದೇ ಜ್ಞಾನವನ್ನು ಗಳಿಸುವುದೂ ಕಷ್ಟ ಎಂಬುದನ್ನು ಅವರು ಅರಿತಿದ್ದರು. ಶಂಕರಾಚಾರ್ಯರ ಪ್ರಕರಣವೊಂದರಲ್ಲಿ “ಕೌಪೀನವಂತಃ ಖಲು ಭಾಗ್ಯವಂತಃ” (ಕೌಪೀನವಂತರಾದರೂ ಭಾಗ್ಯಶಾಲಿಗಳೇ) ಎಂಬ ಯತಿಜನರ ಸ್ತುತಿ ಬರುತ್ತದೆ. ಇವರು ಇಂದಿನ ಭಿಕ್ಷುಕರಲ್ಲ.  ಭಿಕ್ಷಾನ್ನ ಮಾತ್ರದಿಂದ ಸಂತುಷ್ಟರಾದವರು, ಸಂಪತ್ತನ್ನು ಚಿಂದಿಯಂತೆ ತಿರಸ್ಕರಿಸಿದವರು, ಅಹಂಕಾರವನ್ನು ಕಳೆದುಕೊಂಡವರು, ಆ ಕಾರಣದಿಂದ ಆನಂದವನ್ನು ಹೊಂದಿದವರು. ಐಹಿಕ ಶ್ರೀಮಂತಿಕೆಗಿಂತ ಇದೇ ದೊಡ್ಡ ಭಾಗ್ಯ ಎನ್ನುವ ಸಂಸ್ಕೃತಿಯಲ್ಲಿ ಬಡತನವು ಅನಿಷ್ಠವಾಗಲಿಕ್ಕೆ ಸಾಧ್ಯವೆ?

Advertisements
Categories: Uncategorized
 1. Murari
  ಮೇ 21, 2015 ರಲ್ಲಿ 6:37 ಫೂರ್ವಾಹ್ನ

  badatanavembudu kaDetanaka irali – puraMdara dAsaru.

  Like

 2. ಮೇ 21, 2015 ರಲ್ಲಿ 2:01 ಅಪರಾಹ್ನ

  Majority of our intulluctuals supported by media misinterprets all our symbols related to culture. We are fortunate that people like you has taken interest to present the fact in right perspective. Thanks.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: