ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 20: ವೇದಾಧಿಕಾರ ಮತ್ತು ಮೋಕ್ಷಾಧಿಕಾರ

ಪ್ರೊ. ರಾಜಾರಾಮ ಹೆಗಡೆ.

  ಇಂದಿನ ವಿಚಾರವಂತರು ಹಿಂದೂ ಪರಂಪರೆಯ ಕುರಿತು ಕೆಂಡಕಾರಲು ಅತೀ ಮುಖ್ಯವಾದ ಕಾರಣವೆಂದರೆ ಶೂದ್ರರಿಗೆ ವೇದವನ್ನು ನಿಷೇಧಿಸಿದ್ದರು ಎನ್ನುವುದು. ಭಾರತೀಯ ಇತಿಹಾಸವನ್ನು ಓದಿದ ಎಲ್ಲರಿಗೂ ಹಿಂದೂ ಪರಂಪರೆಯ ಕುರಿತು ಬಂದೇ ಬರಬಹುದಾದ ಒಂದು ಸಾಮಾನ್ಯ ಜ್ಞಾನ ಈ ಮುಂದಿನಂತಿರುತ್ತದೆ: ವೇದಗಳನ್ನು ನಿಷೇಧಿಸುವ ಮೂಲಕ ಅವರಿಗೆ ಹಿಂದೂಗಳ ಪವಿತ್ರಗ್ರಂಥವನ್ನು ಹಾಗೂ ಆ ಮೂಲಕ ಜ್ಞಾನವನ್ನು ನಿರಾಕರಿಸಲಾಯಿತು. ಹೀಗೆ ಜ್ಞಾನದಿಂದ ವಂಚಿತರಾದವರು ಶೂದ್ರರು ಹಾಗೂ ಕೆಳಜಾತಿಗಳಾದರು, ಪವಿತ್ರ ಗ್ರಂಥವನ್ನು ಓದಲು ಹಕ್ಕನ್ನು ಹೊಂದಿದ ಬ್ರಾಹ್ಮಣರು ಎಲ್ಲಾ ಜಾತಿಗಳನ್ನೂ ನಿಯಂತ್ರಿಸುವ ಸ್ಥಾನವನ್ನು ಪಡೆದರು. ಇದರ ಜೊತೆಗೇ ಮನುಸ್ಮೃತಿಯ ಒಂದೆರಡು ಸಾಲುಗಳನ್ನು ದೃಷ್ಟಾಂತಕ್ಕಾಗಿ ಕೊಟ್ಟರಂತೂ ಸಾಕ್ಷ್ಯಾಧಾರಗಳೂ ಸಿಕ್ಕಂತಾಗಿ ಈ ವಿಷಯವು ಮನದಟ್ಟಾಗಿ ಬಿಡುತ್ತದೆ. ಇನ್ನೂ ಸಂಶಯ ಇದೆಯೆ? ಈಗ ನೋಡಿ, ಯಾವ ಶೂದ್ರರಿಗೂ ವೇದಗಳನ್ನು ಪಾರಂಪರಿಕವಾಗಿ ಕಲಿಸುವ ವ್ಯವಸ್ಥೆ ಇಲ್ಲ. ಅವರ್ಯಾರೂ ಸಾಂಪ್ರದಾಯಿಕವಾಗಿ ಸಂಸ್ಕೃತವನ್ನೂ ಕಲಿಯುವುದಿಲ್ಲ, ಅಷ್ಟೇ ಅಲ್ಲ ಹಾಗೆ ಕಲಿಯಲಿಕ್ಕೆ ಹೋದವರ ಕುರಿತು ಟೀಕೆಗಳು, ವಿರೋಧಗಳು ಬಂದ ಉದಾಹರಣೆಗಳೂ ಇವೆ.

 ಇಷ್ಟಾದರೂ ಕೂಡ ಒಂದು ವಿಷಯ ನಮಗ್ಯಾರಿಗೂ ಸ್ಪಷ್ಟವಾಗುವುದಿಲ್ಲ. ವೇದವನ್ನು ಓದಲು ಕೊಡದಿದ್ದರೆ ಶೂದ್ರರೇಕೆ ಸಾಮಾಜಿಕ ಸ್ಥಾನಮಾನವನ್ನು ಕಳೆದುಕೊಳ್ಳಬೇಕು? ಬ್ರಾಹ್ಮಣರಿಗೆ ವೇದಗಳನ್ನು ಓದಿದ ಮಾತ್ರದಿಂದಲೇ ಓದದವರ ಮೇಲೆ ನಿಯಂತ್ರಣವು ಹೇಗೆ ಬಂದುಬಿಡುತ್ತದೆ? ಇದಕ್ಕೆ ಉತ್ತರವಾಗಿ ಬ್ರಾಹ್ಮಣರೊಂದೇ ಜ್ಞಾನವನ್ನು ಹೊಂದಿದರು ಹಾಗೂ ಉಳಿದ ಅಜ್ಞಾನಿಗಳು ಅವರು ಹೇಳಿದಂತೇ ಕೇಳಿ ದಾಸ್ಯಕ್ಕೆ ಹಾಗೂ ಮೌಢ್ಯಕ್ಕೆ ಒಳಗಾದರು ಎನ್ನಲಾಗುತ್ತದೆ. ಆದರೆ ಈ ಉತ್ತರವು ನಮ್ಮ ಅನುಭವಕ್ಕೆ ಸರಿಯೆನಿಸುವುದಿಲ್ಲ. ನಮ್ಮಲ್ಲಿ ಬಹಳ ಓದಿಕೊಂಡ ವಿದ್ವಾಂಸರಿಗೆ ಆ ಕಾರಣದಿಂದಲೇ ಉಳಿದವರ ಮೇಲೆ ನಿಯಂತ್ರಣ ಬಂದಿರುವುದನ್ನು ನಾವು ನೋಡಲಾರೆವು. ಅರ್ಧಂಬರ್ಧ ಓದಿಕೊಂಡು, ಅಥವಾ ಏನನ್ನೂ ಓದದೆಯೂ ಕೇವಲ ಹಣಮಾಡುವ ಹಾಗೂ ವಶೀಲಿಬಾಜಿಯ ಕಲೆಯನ್ನು ಕಲಿತವರು ಇಂದು ಶಿಕ್ಷಣ ಕ್ಷೇತ್ರದಿಂದ ಹಿಡಿದು ಎಲ್ಲೆಡೆಯೂ ಪ್ರಭಾವಿಗಳಾಗಿ ಮಿಂಚುತ್ತಿದ್ದಾರೆ. ಸಾಮಾಜಿಕವಾಗಿ ಕೂಡ ಅಂಥವರ ಸ್ಥಾನಮಾನಗಳು ವಿದ್ವಾಂಸರ ಸ್ಥಾನಮಾನಕ್ಕಿಂತ ಕಡಿಮೆ ಅಂತೂ ಇಲ್ಲ, ಬದಲಾಗಿ ಜನರು ಅವರಿಗೇ ಹೆದರುತ್ತಾರೆ ಹಾಗೂ ಗೌರವ ಕೊಡುತ್ತಾರೆ.  ಹಾಗಾಗಿ ಜ್ಞಾನಿಗಳಾಗಿಬಿಟ್ಟರೆ ಉಳಿದವರನ್ನು ನಿಯಂತ್ರಿಸಿಬಿಡುತ್ತಾರೆ ಎಂಬುದು ನಮ್ಮ ಅನುಭವದಿಂದ ಪ್ರಮಾಣಿತವಾದ ವಿಷವಂತೂ ಅಲ್ಲ. ಈ ಕಥೆಯನ್ನು ಹುಟ್ಟುಹಾಕಿದವರು ಪಾಶ್ಚಾತ್ಯರು. ಅದು ಅವರ ಅನುಭವ. ದೇವವಾಣಿಯಾದ ಪವಿತ್ರಗ್ರಂಥವನ್ನು ಆಧರಿಸಿಯೇ ಕ್ಯಾಥೋಲಿಕ್ ಚರ್ಚು ಎಂಬ ವ್ಯವಸ್ಥೆ ಯುರೋಪಿನಲ್ಲಿ ಬೆಳೆಯಿತು. ಅದು ಬೆಳೆಯುತ್ತಾ ಯುರೋಪಿನ ಎಲ್ಲಾ ಪ್ರಾದೇಶಿಕ ಸಂಪ್ರದಾಯಗಳನ್ನೂ ಒರೆಸಿ ಹಾಕಿ ಏಕರೂಪೀ ಕ್ರೈಸ್ತ ಸಮಾಜವೊಂದನ್ನು ನಿರ್ಮಿಸಿತು. ಈ ಸಮಾಜಕ್ಕೆ ಕ್ರೈಸ್ತರ ಪವಿತ್ರಗ್ರಂಥವೇ ಪ್ರಮಾಣ. ಈ ಚರ್ಚಿನ ಅಧಿಕಾರಿಗಳು ಪವಿತ್ರ ಗ್ರಂಥವನ್ನು ತಿಳಿದವರಾದ್ದರಿಂದ ಸಮಸ್ತ ಕ್ರೈಸ್ತ ಸಮಾಜವನ್ನೂ ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದರು. ಅವರು ಸಾಮಾನ್ಯ ಕ್ರೈಸ್ತರಿಗಿಂತ ಶ್ರೇಷ್ಠರಾಗಿದ್ದು ಹೀಗೆ. ಪಾಶ್ಚಾತ್ಯರು ಈ ಕಥೆಯನ್ನು ಭಾರತಕ್ಕೆ ಕೂಡ ಅನ್ವಯಿಸಿದರು. ಆದರೆ ಭಾರತದಲ್ಲಿ ಏಕರೂಪೀ ಹಿಂದೂ ಸಮಾಜವಾಗಲೀ, ಅದನ್ನು ನಿಯಂತ್ರಿಸುವ ಚರ್ಚಾಗಲೀ, ಇವರಿಗೆಲ್ಲ ಆಧಾರವಾಗಿ ಒಂದು ಪವಿತ್ರ ಗ್ರಂಥವಾಗಲೀ ಇರಲಿಲ್ಲ. ಹಾಗಾಗಿ ಇಲ್ಲಿ ಪುರೋಹಿತರ ಆಳ್ವಿಕೆ ಇರುವುದೂ ಸಾಧ್ಯವಿಲ್ಲ. ಅಂದರೆ ಹಿಂದೂ ಸಂಸ್ಕೃತಿಯು ಕ್ಯಾಥೋಲಿಕ್ ರಿಲಿಜನ್ನಲ್ಲ. ಹಾಗಾಗಿ ಪವಿತ್ರಗ್ರಂಥವನ್ನು ತಿಳಿದುಕೊಂಡವರು ಉಳಿದವರನ್ನು ಹೇಗೆ ನಿಯಂತ್ರಿಸುತ್ತಾರೆನ್ನುವುದು ನಮಗೆ ಅರ್ಥವಾಗುವ ಸಂಭವ ಇಲ್ಲ.

  ಇದರ ಜೊತೆಗೆ ಮತ್ತೊಂದು ಕಥೆಯನ್ನು ನಾವು ಕೇಳುತ್ತಿರುತ್ತೇವೆ. ಅದೆಂದರೆ ಬ್ರಾಹ್ಮಣ ಪುರೋಹಿತರು ಶೂದ್ರರು ಪವಿತ್ರಗ್ರಂಥವನ್ನು ಓದದಂತೆ ಮಾಡಿ ಅವರಿಗೆ ಮೋಕ್ಷವನ್ನು ನಿರಾಕರಿಸಿದರು ಎಂಬುದು. ಆ ಕಾರಣಕ್ಕಾಗಿಯೇ ಬೌದ್ಧ, ಜೈನ, ವೀರಶೈವ ಇತ್ಯಾದಿ ಹೊಸ ಮಾರ್ಗಗಳು ಪ್ರತಿಭಟನೆಯಾಗಿ ಹುಟ್ಟಿಕೊಂಡವು ಎಂಬುದು ನಮ್ಮ ಪಠ್ಯ ಪುಸ್ತಕಗಳ ಕಥೆ. ಯಾವುದೋ ಒಂದು ಗ್ರಂಥ, ಅದು ಎಷ್ಟೇ ಪವಿತ್ರವಾಗಿರಲಿ ಅದನ್ನು ಓದದಿದ್ದರೆ ಮೋಕ್ಷವೇ ಇಲ್ಲ ಎಂಬುದಾಗಿ ನಮ್ಮ ಪರಂಪರೆ ಎಲ್ಲಾದರೂ ಹೇಳಿದೆಯೆ? ವೇದದ ಕುರಿತು ನಮ್ಮ ಗ್ರಂಥಗಳು ಹೇಳುವುದೇನು? ವೇದಗಳು ವೃಕ್ಷಶಾಖೆಗಳಂತೆ ಹಾಗೂ ಪರಮಾತ್ಮನು ಪ್ರತಿಪದೆಯ ಚಂದ್ರನಂತೆ. ಆಕಾಶದಲ್ಲಿ ಪ್ರತಿಪದೆಯ ಚಂದ್ರನನ್ನು ಗುರುತಿಸುವುದೇ ಅಸಾಧ್ಯ. ಗುರುತಿಸಿದವರು ಉಳಿದವರಿಗೆ ತೋರಿಸುವುದೂ ಅಸಾಧ್ಯ. ಅಂಥ ಸಂದರ್ಭದಲ್ಲಿ ಒಂದು ಮರದ ಎರಡು ಕೊಂಬೆಗಳ ನಡುವೆ ದಿಟ್ಟಿಸಿ ನೋಡಿದರೆ ಚಂದ್ರನನ್ನು ನಾವೂ ನೋಡಬಹುದು, ಉಳಿದವರಿಗೂ ತೋರಿಸಬಹುದು. ಒಂದು ವೇಳೆ ನೋಡುವವನು ಚಂದ್ರನನ್ನು ಬಿಟ್ಟು ಕೊಂಬೆಗಳನ್ನೇ ನೋಡುತ್ತಿದ್ದರೆ ಅವನಿಗೆ ಮರ ಮಾತ್ರ ಕಾಣಿಸುತ್ತದೆ, ಅವನಿಗೆ ಚಂದ್ರನು ಕಾಣಿಸಲಿಕ್ಕೆ ಸಾಧ್ಯವೇ ಇಲ್ಲ. ಅಂದರೆ ವೇದಗಳನ್ನು ಎಷ್ಟೇ ಕಲಿತರೂ ಪರಮಾತ್ಮನನ್ನು ಹುಡುಕದಿದ್ದರೆ ಅವನು ಕಾಣಲಿಕ್ಕೆ ಸಾಧ್ಯವೇ ಇಲ್ಲ ಎಂದು ದೃಷ್ಟಾಂತಪೂರ್ವಕವಾಗಿ ನಮಗೆ ತಿಳಿಸಿಕೊಡಲಾಗುತ್ತದೆ.

  ಹಾಗೆಯೇ ವೇದಗಳಿಲ್ಲದೆಯೂ ಪರಮಾತ್ಮ ಜ್ಞಾನ ಆಗುತ್ತದೆ ಎಂದೂ ನಮ್ಮ ಪರಂಪರೆ ತಿಳಿಸುತ್ತದೆ. ಮೋಕ್ಷ ಎನ್ನುವುದು ಎಲ್ಲಾ ಜಾತಿಯ, ವರ್ಗದ ಹಾಗೂ ಲಿಂಗದ ಜನರಿಗೂ ಸಾಧ್ಯವಿದೆ ಎಂದೇ ನಮ್ಮ ಗ್ರಂಥಗಳು ತಿಳಿಸುತ್ತವೆ. ಅಂದರೆ ಮೋಕ್ಷಕ್ಕೆ ವೇದಗಳು ಅನಿವಾರ್ಯವಲ್ಲ. ನಮ್ಮ ಋಷಿಗಳು ಆತ್ಮಜ್ಞಾನವನ್ನೇ ನಿಜವಾದ ಜ್ಞಾನ ಎಂದು ಪ್ರತಿಪಾದಿಸಿದ್ದಾರೆ. ವಿದ್ವಾಂಸರ ವಾಗ್ವೈಖರಿ, ಶಬ್ದಝರಿ, ಶಾಸ್ತ್ರ ವ್ಯಾಖ್ಯಾನ ಕೌಶಲಗಳು ಹೊಟ್ಟೆಪಾಡಿಗಾಗಿಯೇ ವಿನಃ ಮುಕ್ತಿಗಲ್ಲ ಎಂದು ಶಂಕರರೇ ಹೇಳಿದ್ದಾರೆ. ಅಂದರೆ ಜ್ಞಾನಕ್ಕೂ ವಿದ್ವತ್ತಿಗೂ ಸಂಬಂಧವನ್ನೇ ಕಲ್ಪಿಸದ ಪರಂಪರೆ ನಮ್ಮದು. ಅಂಥ ಪರಂಪರೆಯು ವೇದವನ್ನೋದಿದರೆ ಮಾತ್ರ ಜ್ಞಾನ ಹಾಗೂ ಮುಕ್ತಿ ಸಿಗುತ್ತವೆ ಎಂದು ಪ್ರತಿಪಾದಿಸಲು ಸಾಧ್ಯವೇ ಇಲ್ಲ. ಯಾರಾದರೂ ಅಜ್ಞಾನದಿಂದ ಅಂಥ ಪ್ರತಿಪಾದನೆಯನ್ನು ಮಾಡಬಹುದು ಅಷ್ಟೆ.  ಭಕ್ತಿಮಾರ್ಗದಲ್ಲಿ ಸಾಗಿದರೆ ಕೂಡ ಮುಕ್ತಿ ಸಿಗುತ್ತದೆ. ಆ ಮಾರ್ಗದಲ್ಲಿ ಸಾಗಲಿಕ್ಕೆ ಮಂತ್ರ ತಂತ್ರಗಳ ಅರಿವು ಬೇಡವೇ ಬೇಡ. ಅಷ್ಟೇಕೆ? ಮುಕ್ತಿಗೆ ಪರಮಾತ್ಮ ಕಲ್ಪನೆಯೂ ಬೇಡ ಎಂಬುದನ್ನು ಬೌದ್ಧ, ಜೈನರು ತೋರಿಸಿದ್ದಾರೆ. ಮುಕ್ತಿಗೆ ವೇದವೂ ಒಂದು ಮಾರ್ಗ ಅಷ್ಟೆ.

  ಇದು ಕೇವಲ ನಮ್ಮ ಗ್ರಂಥಗಳಲ್ಲಿ ಬರುವ ವರ್ಣನೆಗಳು ಮಾತ್ರವಲ್ಲ, ಪ್ರಾಚೀನ ಕಾಲದಿಂದಲೂ ಬೇರೆ ಬೇರೆ ಜಾತಿ, ಬುಡಕಟ್ಟುಗಳ ಹಿನ್ನೆಲೆಯಿಂದ ಬಂದ ಋಷಿಮುನಿಗಳ, ಆತ್ಮಜ್ಞಾನಿಗಳ ಕಥೆಯನ್ನು ಹಾಗೂ ಚರಿತ್ರೆಯನ್ನು ನಮ್ಮ ಪರಂಪರೆಯು ದೃಷ್ಟಾಂತಗಳನ್ನಾಗಿ ಉಳಿಸಿಕೊಂಡು ಬಂದಿದೆ. ಮಧ್ಯ ಯುಗದಲ್ಲಿ ಭಕ್ತಿಮಾರ್ಗವನ್ನು ತುಳಿದು ಮಹಾತ್ಮರಾದ ಶರಣರು, ಸಂತರು, ದಾಸರು, ಆಳ್ವಾರುಗಳು, ನಾಯನಾರರು ಭಾರತದ ತುಂಬೆಲ್ಲ ಇದಕ್ಕೆ ದೃಷ್ಟಾಂತಗಳಾಗಿದ್ದಾರೆ. ಇಂದು ಈ ಉದಾಹರಣೆಗಳನ್ನೆಲ್ಲ ಸಾಮಾಜಿಕ ಚಳವಳಿಗಳೆಂದು ಗ್ರಹಿಸಿರುವುದರಿಂದ ಭಾರತೀಯ ಪರಂಪರೆಯ ನಿಜವಾದ ಮಹತ್ವವು ಕಣ್ಣಿಗೆ ಕಾಣದಂತಾಗಿದೆ.

  ಹೀಗಿರುವಾಗ ವೇದವನ್ನು ಕಲಿಯಲು ನಿರ್ಬಂಧಿಸಿದಾಕ್ಷಣ ಮೋಕ್ಷಸಾಧನೆಯನ್ನೇ ನಿರಾಕರಿಸಲಾಯಿತು ಎಂಬ ತರ್ಕ ಎಲ್ಲಿಂದ ಹುಟ್ಟಿರಬಹುದು? ವೇದವನ್ನು ಬೈಬಲ್ಲು, ಖುರಾನಿಗೆ ಸಮೀಕರಿಸಿದಾಗ ಮಾತ್ರ ಅಂಥ ನಿರ್ಣಯ ಹುಟ್ಟಲು ಸಾಧ್ಯ. ಅಂದರೆ ಕ್ರೈಸ್ತ ಹಾಗೂ ಮುಸ್ಲಿಮರಲ್ಲಿ ಏಕೈಕ ಪವಿತ್ರಗ್ರಂಥ ಇದೆ ಹಾಗೂ ಅದೊಂದೇ ಸತ್ಯದೇವನನ್ನು ಸೇರಲು ಮಾರ್ಗ. ಅದನ್ನೇ ಅದರ ಅನುಯಾಯಿಗಳಿಗೆ ನಿಷೇಧಿಸಿದರೆ ಅವರಿಗೆ ಸ್ವರ್ಗದ ಬಾಗಿಲನ್ನು ಮುಚ್ಚಿದಂತೇ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಪಾಶ್ಚಾತ್ಯರನ್ನು ಅನುಸರಿಸಿ ಭಾರತೀಯ ವಿದ್ವಾಂಸರೂ ಕೂಡ ವೇದಗಳು ಹಿಂದೂಯಿಸಂನ ಪವಿತ್ರ ಗ್ರಂಥ ಎಂಬುದಾಗಿ ಪ್ರತಿಪಾದಿಸಿದರು. ಅಂಥ ಪವಿತ್ರಗ್ರಂಥವನ್ನು ಶೂದ್ರರಿಗೆ ನಿಷೇಧಿಸಿದ್ದರು ಅಂದರೆ ಅವರಿಗೆ ಮೋಕ್ಷವನ್ನೇ ನಿರಾಕರಿಸಿದಂತೇ ಎಂಬ ನಿರ್ಣಯ ಅವರಿಗೆ ತರ್ಕಬದ್ಧವಾಗಿ ಕಂಡಿದ್ದು ಹೀಗೆ.

Advertisements
Categories: Uncategorized
 1. Ishwara Bhat K
  ಮೇ 30, 2015 ರಲ್ಲಿ 7:41 ಅಪರಾಹ್ನ

  ಬಹಳ ಸೊಗಸಾದ ಲೇಖನ. ಧನ್ಯವಾದ ಸರ್.

  Like

 2. anjaneya reddy
  ಮೇ 30, 2015 ರಲ್ಲಿ 9:49 ಅಪರಾಹ್ನ

  ಸಮಯೋಚಿತ ಲೇಖನ

  Like

 3. ಪ್ರಶಾಂತ್
  ಮೇ 30, 2015 ರಲ್ಲಿ 10:15 ಅಪರಾಹ್ನ

  ಈ ಮೋಕ್ಷ ಅನ್ನೋದು ಸ್ವರ್ಗ ಅನ್ನೊದು ಇದೇನಾ ಸರ್?ವೇದಗಳನ್ನು ಮಾತ್ರ ಕಲಿಸಲಿಲ್ಲ ಅಂತ ಬೇಜಾರಿಲ್ಲ ನನಗೆ..ಇಷ್ಟೊಂದು ಮೋಕ್ಷಕ್ಕೆ ಸರಳ ದಾರಿ ಕಲ್ಪಿಸಿದ್ದ ಹಿಂದೂಪರಂಪರೆ ಅದು ಯಾಕೆ ಕೆರೆ ಬಾವಿ ಶಾಲೆ ಕಟಿಂಗ್ ಶಾಪ್,ದೇವಸ್ಥಾನದ ಪ್ರವೇಶ ನಿಷೇದಿಸಿತ್ತು? ಕಾಣದ,ಎಲ್ಲೋಇರುವ ಮೋಕ್ಷಕ್ಕೆ ದಾರಿ ಕಲ್ಪಿಸಿ ಪಕ್ಕದಲ್ಲೆ ಇದ್ದ ದೇವಸ್ಥಾನಗಳ ಮೆಟ್ಟಿಲನ್ನೂ ಮುಟ್ಟದಂತೆ ಮಾಡಿದ್ದು, ಅಸ್ಪ್ರಶ್ಯರನ್ನಾಗಿಸಿ ಊರಹೊರಗೆ ಯಾರೂ ಮುಟ್ಟಿಸಿಕೊಳ್ಳದಂಗೆ ಕೆಲ ಸಮುದಾಯಗಳನ್ನ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ದೇವರ ಸೇವೆಯ ಹೆಸರಲ್ಲಿ ಶೂದ್ರ ಹೆಣ್ಣುಮಕ್ಕಳನ್ನು ವ್ಯೆಷ್ಯೆಯರನ್ನಾಗಿಸಿದ್ದು,ಸತಿಸಹಗಮನ,ಬೆತ್ತಲೆಸೇವೆ ಮುಂತಾದವುಗಳನ್ನು ರೂಡಿಸಿಕೊಂಡಿದ್ದು ಇವೆಲ್ಲವೂಗಳನ್ನ ಹೊಂದಿದ್ದ ಪರಂಪರೆ ಅದು ಹೇಗೆ ಶ್ರೇಷ್ಟವೆಂದು ನಂಬಲಿ ಸ್ವಾಮಿ.ವೇಧ ಕಲಿತು ನಾನೇನು ಮಾಡಲಿ ಪಕ್ಕದ ಜನರೇ ನನ್ನ ಮನುಷ್ಯನಂತೆ ಕಾಣದೆ ದೂರ ನಿಲ್ಲು ಎನ್ನತ್ತಿರುವಾಗ? …ಧನ್ಯವಾದಗಳು….

  Like

 4. satheesh rathan
  ಮೇ 30, 2015 ರಲ್ಲಿ 11:17 ಅಪರಾಹ್ನ

  This may become just a openion not truth. cause lot of researches have already been done and wrote (ambedkar , vi.kru gokak.kuvempu and many) in dr writings…

  Like

 5. vidya
  ಮೇ 30, 2015 ರಲ್ಲಿ 11:22 ಅಪರಾಹ್ನ

  ಪ್ರಶಾಂತ ಅವರೆ ನೀವು ಇದೇ ಸರಣಿಯ ಹಿಂದಿನ ಲೇಖನಗಳನ್ನು ಓದಿಲ್ಲವೆನಿಸಿದೆ. ಬಾಲುರವರ ಲೇಖನ ಓದಿ. ಇರಲಿ ಈಗ ನಿಮ್ಮ ಪ್ರಶ್ನೆಗೆ ಬರುವೆ. ಪ್ರತಿಯೊಂದು ಜಾತಿಗೂ ಭಾರತದಲ್ಲಿ ಒಂದೊಂದು ಪವಿತ್ರಗ್ರಂಥ , ಆಚಾರವಿಚಾರಗಳು ಪುರೋಹಿತರು ಇದ್ದ ಹಾಗೆ ಅವರವರದೇ ಆದ ದೇವಾಲಯಗಳೂ ಇದ್ದವು. ಅವುಗಳಲ್ಲಿ ಆಯಾ ಜನರಷ್ಟೇ ಪ್ರವೇಶಿಸುತ್ತಿದ್ದರು. ಯಾರೂ ಅದನ್ನು ಪ್ರಶ್ನಿಸುತ್ತಿರಲಿಲ್ಲ. ನನ್ನ ಸಹೋದ್ಯೋಗಿಯೊಬ್ಬರು ಲಂಬಾಣಿಗರಿದ್ದರು. ನಾನು ತಾಂಡಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗ ನನ್ನ ಶಾಲೆಗೆ ನಾವಿ ಎಂಬ ಅಡ್ಡೆಸರು ಇರುವ ಹುಡುಗಿ ಬರುತ್ತಿದ್ದಳು. ನಾನು ಲಂಬಾಣಿಗರಲ್ಲೂ ನಾವಿಗಳಿರುತ್ತಾರಾ? ಎಂದು ನನ್ನ ಸಹೋದ್ಯೋಗಿಯವರನ್ನು ಕೇಳಿದೆ. ಅದಕ್ಕೆ ಅವರು ಹೌದು ಇರುತ್ತಾರೆ. ಮತ್ತು ಅವರನ್ನು ನಿಮ್ಮವರಂತೆ ನಮ್ಮಲ್ಲೂ ಮೇಲುಜಾತಿಯವರು ಮದುವೆಯಾಗುವದಿಲ್ಲ. ನಿಮ್ಮಂತೆ ಲಂಬಾಣಿಗರಲ್ಲೂ ಮೇಲುಕೀಳುಗಳಿವೆ ಎಂದೆಲ್ಲ ವಿವರಿಸಿದರು. ಅವರಲ್ಲಿ ನಾಯಕ, ಚವ್ಹಾಣ ಇತ್ಯಾದಿ ಅಡ್ಡೆಸರು ಇರುವವರನ್ನು ಶ್ರೇಷ್ಟರೆಂದು ಪರಿಗಣಿಸುತ್ತಾರೆಂದು ತಿಳಿಸಿದರು. ಮುಂದೆ ಬಾಲುರವರ ಲೇಖನ ಓದಿದಾಗ ಈ ಘಟನೆ ನೆನಪಿಗೆ ಬಂತು. ಆದರೆ ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಲಂಬಾಣಿಗರೂ ಪರಿಶಿಷ್ಟ ಜಾತಿಯಾಗಿದ್ದಾರೆ. ಇದು ಎಲ್ಲಾ ಜಾತಿಗಳಲ್ಲೂ ಬ್ರಾಹ್ಮಣರಲ್ಲೂ ಕಂಡುಬರುತ್ತದೆ. ತಿಗಳ ಎನ್ನುವ ಜಾತಿಯ ಬ್ರಾಹ್ಮಣರನ್ನು ವೈಷ್ಣವ ಜಾತಿಯ ಬ್ರಾಹ್ಮಣರು ನಿಕೃಷ್ಟವಾಗಿಯೇ ಕಾಣುತ್ತಾರೆ. ನನ್ನೂರಿನಲ್ಲಿ ಬ್ರಾಹ್ಮಣರನ್ನು ತಮ್ಮ ಕೇರಿಗೆ ಬರುವದನ್ನು ಪರಿಶಿಷ್ಟರು ಸಹಿಸುವದಿಲ್ಲ. ಹಾಗೇನೇ ಬ್ರಾಹ್ಮಣರು ಮುಟ್ಟಿದರೆ ತಮ್ಮ ಫಲವಂತಿಗೆ ನಷ್ಟವಾಗುತ್ತದೆಂದು ಕೆಲ ಪರಿಶಿಷ್ಟಜಾತಿಗಳ ನಂಬಿಕೆ ಆಗಿದೆ. ಮೆಕಾಲೆಯನ್ನು ತಲೆಯಲ್ಲಿ ಇಟ್ಟುಕೊಂಡು ಪೂರ್ವಾಗ್ರಹ ಪೀಡಿತರಾಗಿ ಕಮೆಂಟ ಮಾಡದೇ ಬಹಳಷ್ಟು ಸಮಾಜವನ್ನು ಅಧ್ಯಯನ ಮಾಡಿ ನಿರ್ಧಾರಕ್ಕೆ ಬನ್ನಿರಿ.

  Like

 6. vidya
  ಮೇ 30, 2015 ರಲ್ಲಿ 11:59 ಅಪರಾಹ್ನ

  ‘Memoirs of late Asia’ (J Murray London 1767 P. 230 – 233) ಈ ಪ್ರಸಿದ್ಧ ಗ್ರಂಥದಲ್ಲಿ ಕರ್ನಲ್ ವೇಲಿ, ಎಂಬ ಓರ್ವ ಉನ್ನತ ಹುದ್ದೆಯಲ್ಲಿದ್ದ ಬ್ರಿಟಿಷ ಶಿಕ್ಷಣ ಅಧಿಕಾರಿಯು ಹಿಂದೂಗಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೀಗೆ ಬರೆದಿದ್ದನು, ‘ಶೂದ್ರ, ಅತಿ ಶೂದ್ರ ಇಂತಹ ಕೆಳಮಟ್ಟದ ವ್ಯಕ್ತಿಗೂ ಓದು, ಬರಹ, ಗಣಿತ, ರಾಮಾಯಣ, ಮಹಾಭಾರತ, ಪುರಾಣ ಮುಂತಾದ ಪ್ರಸಂಗಗಳನ್ನು ಕಲಿಸಲಾಗುತ್ತಿತ್ತು.
  ‘ಶಿಲ್ಪ, ಕಲೆ ಮುಂತಾದ ಕರ್ಮಗಳು ಶೂದ್ರರದ್ದಾಗಿತ್ತು. ಶೂದ್ರರ ಮೂರು ಪೀಳಿಗೆಗಳು ಹಗಲಿರುಳು ದುಡಿದು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಚಮತ್ಕಾರದಂತಹ ‘ಕೈಲಾಸಗುಹೆ’ ನಿರ್ಮಿಸಿದ್ದಾರೆ. ಇಂದಿಗೂ ವಿಜ್ಞಾನನಿಷ್ಠರು ಅತ್ಯಂತ ಮುಂದುವರಿದ ಆಧುನಿಕ ಜಗತ್ತು ಗುಹೆ ನೋಡಿ ಆಶ್ಚರ್ಯಚಕಿತರಾಗುತ್ತಾರೆ, ಆಶ್ಚರ್ಯದಿಂದ ಮಂತ್ರಮುಗ್ಧರಾಗುತ್ತಾರೆ. ‘ಶೂದ್ರರು ಶಿಕ್ಷಣದಿಂದ ವಂಚಿತರಾಗಿದ್ದರು’, ಎಂದು ಹೇಳುವ ಧೈರ್ಯವಂತರು ಕೊಳೆತ ಮೆದುಳಿನ, ಹುಚ್ಚರೇ ಆಗಿರಬಹುದು. ಗಣಿತ, ಭೂಮಿತಿ, ತ್ರಿಕೋನಮಿತಿ, ವಾಸ್ತು ಶಾಸ್ತ್ರ, ಶಿಲ್ಪಶಾಸ್ತ್ರ, ಪುರಾಣಗಳ ಆಳವಾದ ಅಧ್ಯಯನವಿಲ್ಲದೇ ಈ ಕೈಲಾಸಗುಹೆ ನಿರ್ಮಿಸಲು ಸಾಧ್ಯವೇ? ಗುಹೆಯ ಗೋಡೆಗಳ ಮೇಲೆ ದಶಾವತಾರದಿಂದ ಹಿಡಿದು ಪುರಾಣದಲ್ಲಿರುವ ನೂರಾರು ಪ್ರಸಂಗಗಳನ್ನು ಕೊರೆದಿದ್ದಾರೆ. ಅವರಿಗೆ ಚಿತ್ರಕಲೆ ತಿಳಿದಿರಲಿಲ್ಲವೇ? ವಿಶೇಷವೆಂದರೆ ಇಂತಹ ಅಪೂರ್ವ ಗುಹೆ ನಿರ್ಮಿಸುವ ಮೂರು ಪೀಳಿಗೆಗಳಲ್ಲಿ ಯಾರ ಹೆಸರೂ ಅಲ್ಲಿಲ್ಲ. ಇದರರ್ಥ ಈ ಗುಹೆ ನಿರ್ಮಿಸುವವರು ಅಧ್ಯಾತ್ಮಜ್ಞಾನದಿಂದ ಪರಿಪೂರ್ಣರಾಗಿಯೇ ಇದ್ದರು. ಅಲ್ಲದೇ ಲೋಕೇಷಣವನ್ನು ಗೆಲ್ಲಲು ಸಾಧ್ಯವೇ?
  ಅನಕ್ಷರಸ್ತನು ಅಶಿಕ್ಷಿತನಿರುತ್ತಾನೆ’, ಎಂದು ಪ್ರಚಲಿತ ಶಿಕ್ಷಣಪದ್ಧತಿ ಹೇಳುತ್ತದೆ, ಇದು ಸುಳ್ಳು. ಯಶಪಾಲರು ವಿದ್ಯಾಲಯದ ಅನುದಾನ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರು ಶ್ರೇಷ್ಠ ಶಿಕ್ಷಣತಜ್ಞರಾಗಿದ್ದರು. ‘ಸಾವಿರಾರು ವರ್ಷಗಳಿಂದ ಕೃಷಿ, ನೇಯ್ಗೆ, ಬಡಿಗ, ಚಾಮರ, ಮೂರ್ತಿರಚನೆ, ಶಿಲ್ಪಕಲೆ, ಉತ್ಖನನ, ಪಾತ್ರೆ ತಯಾರಿಸುವಿಕೆ, ಚಿನ್ನ ತಯಾರಿಸುವಿಕೆ ಹೀಗೆ ಮುಂತಾದ ಅಸಂಖ್ಯ ಉದ್ಯೋಗಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯವರಿಗೆ ಬಂದಿವೆ. ಈ ಸಾವಿರಾರು ವರ್ಷಗಳ ಪಾರಂಪರಿಕ ವ್ಯವಸ್ಥೆ ನಡೆದುಬಂದಿದೆ. ಹತ್ತಿಯ ನೂಲಿನಿಂದ ನೇಕಾರ ಬಟ್ಟೆ ತಯಾರಿಸುತ್ತಿದ್ದರು. ಅವರಿಗೆ ಬಣ್ಣ, ನೂಲು, ಬಟ್ಟೆ ಇವುಗಳ ಎಲ್ಲ ರೀತಿಯ ಬಗ್ಗೆ ಮೊದಲ ದರ್ಜೆಯ ಜ್ಞಾನವಿತ್ತು. ಅದನ್ನು ಯಾವುದೇ ಶಾಲೆಯಲ್ಲಿ ಕಲಿಸಲಿಲ್ಲ. ಅವರು ಔಪಚಾರಿಕ ಶಿಕ್ಷಣ ಪಡೆದಿಲ್ಲ’ ಎಂದು ಅವರು ಹೇಳು ತ್ತಾರೆ.
  ಸ್ತ್ರೀಯರು ಮತ್ತು ಶೂದ್ರರೇ ಅಲ್ಲದೆ ಶೂದ್ರಾತೀಶೂದ್ರರಿಗೆ ಎಲ್ಲ ಕ್ಷೇತ್ರಗಳಲ್ಲಿ ಶಿಕ್ಷಣ ನೀಡಲಾಗುವುದು. ಶಿಕ್ಷಣ ಸಾರ್ವ ಜನಿಕವಾಗಿತ್ತು. ಯಾರೂ ಅನಕ್ಷರಸ್ತರಿರಲಿಲ್ಲ. ಧರ್ಮಪಾಲರ ೧. The Beautiful tree, 2. Indian Science and Technology in the18th Century ಈ ಪುಸ್ತಕಗಳನ್ನು ಅಧ್ಯಯನ ಮಾಡಿರಿ. ಧರ್ಮಪಾಲರ ‘The Beautiful Tree’ ಈ ಪುಸ್ತಕವನ್ನು ಪದೇ ಪದೇ ಓದಿದರೆ ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆ ಹೇಗೆ ಸಾರ್ವಜನಿಕ ಮತ್ತು ಶ್ರೇಷ್ಠವಿತ್ತು, ಎಂಬುದು ಗಮನಕ್ಕೆ ಬರುತ್ತದೆ. ೧೯ ನೇ ಶತಕದಲ್ಲಿ ಚಿಕ್ಕ ಚಿಕ್ಕ ಊರುಗಳಲ್ಲಿ ಎಲ್ಲೆಡೆ ಶಾಲೆಗಳಿದ್ದವು. ಆ ಶಾಲೆಗಳಲ್ಲಿ ಎಲ್ಲ ಜಾತಿ- ಧರ್ಮದ ಹುಡುಗ-ಹುಡುಗಿಯರು ಕಲಿಯುತ್ತಿದ್ದರು. ಯಾರನ್ನೂ ನಿರಾಕರಿಸುತ್ತಿರಲಿಲ್ಲ. ಯಾರೂ ಶಿಕ್ಷಣದಿಂದ ವಂಚಿತರಾಗಿರುತ್ತಿರಲಿಲ್ಲ. ಧರ್ಮಪಾಲರು ಪುರಾವೆಗಳೊಂದಿಗೆ ಅಂಕಿ-ಅಂಶ ನೀಡುತ್ತಾರೆ. ಅವರು ನೀಡಿದ ಅಂಕಿ-ಅಂಶಗಳನ್ನು ಬ್ರಿಟಿಷ ಕಲೆಕ್ಟರರು ಸಂಗ್ರಹಿಸಿಟ್ಟಿದ್ದಾರೆ. ಆಂಗ್ಲರು ಬಂದರು, ಅವರ ಸರಕಾರ ಆಯಿತು ಮತ್ತು ಶಿಕ್ಷಣದ ಬಾಗಿಲು ಬಹುಜನ ಸಮಾಜದ ಹುಡುಗ- ಹುಡುಗಿಯರಿಗೆ ನಿಂತೇ ಹೋಯಿತು. ಬ್ರಿಟಿಷ ಸರಕಾರಕ್ಕೆ ಹಿಂದೂ ಸಮಾಜವನ್ನು ತುಂಡು-ತುಂಡು ಮಾಡಿಯೇ ಹಾಕುವುದಿತ್ತು. Marshal race ಮತ್ತು ಶಿಕ್ಷಣದ ಪರಂಪರೆ ಇದ್ದವರು ಮತ್ತು ಇಲ್ಲದಿದ್ದವರು ಹೀಗೆ ವಿವಿಧ ರೀತಿಯ ವ್ಯತ್ಯಾಸ ನಿರ್ಮಿಸಿದರು. ಜಾತಿಜಾತಿಗಳಲ್ಲಿ ವೈಮನಸ್ಸನ್ನು ನಿರ್ಮಿಸಿದರು. ಮದ್ರಾಸ್ ಪ್ರೆಸಿಡೆನ್ಸಿಯ ಶಿಕ್ಷಣದ ವರದಿಯನ್ನು ಧರ್ಮಪಾಲರು ಪ್ರಸಿದ್ಧಿ ಮಾಡಿದ್ದಾರೆ. ಅದರಲ್ಲಿ ಅವರ ಜನಗಣತಿ ವರದಿ ಉಪಯೋಗಿಸಿ ಬ್ರಿಟಿಷರ ದಗಲ್ಬಾಜಿಯ ಬಗ್ಗೆ ಅಸಂಖ್ಯಾತ ಪುರಾವೆ ನೀಡಿದ್ದಾರೆ.
  ಹಿಂದೂ ಸಮಾಜದ ಗಾಯಕರು, ವಾದ್ಯದವರು, ನರ್ತಕರು, ಕಲಾವಿದರು, ವಾಸ್ತು ವಿಶಾರದರು, ಬಡಿಗರು, ಕುಂಬಾರರು, ಅಕ್ಕಸಾಲಿಗರು, ರೈತರು, ನೇಕಾರ, ಚಾಮರ, ಕಮ್ಮಾರ ಹಾಗೂ ವೈದ್ಯ, ಜ್ಯೋತಿಷಿ, ವೇದಪಠಣ ಮಾಡುವ ಶಾಸ್ತ್ರಿ-ಪಂಡಿತ ವೈದಿಕರು, ಕೀರ್ತನಕಾರರು, ಪ್ರವಚನಕಾರರು ಹೀಗೆ ಪರಂಪರೆಗಳು ಅವಿಚ್ಛಿನ, ಅಖಂಡವಾಗಿ ಹೇಗೆ ಉಳಿದವು, ಎಂಬುದರ ಬಗ್ಗೆ ನಾವು ಅಧ್ಯಯನ ಮಾಡಬೇಕು. ನಾವು ಅವುಗಳನ್ನು ಪುನರುಜ್ಜೀವನ ಗೊಳಿಸಬೇಕು. ಅವರಿಗೆ ಶಿಕ್ಷಣದಲ್ಲಿ ಸ್ಥಾನ ನೀಡಬೇಕು. ಪ್ರಾಥಮಿಕ, ಮಾಧ್ಯಮಿಕ, ವಿದ್ಯಾಲಯ, ಮಹಾವಿದ್ಯಾಲಯ ಮುಂತಾದ ಔಪಚಾರಿಕ ಶಿಕ್ಷಣವೂ ದೊರಕಬೇಕು.
  (ಸನಾತನ ಪ್ರಭಾತದಲ್ಲಿ ಗುರುದೇವ ಕಾಟೇಸ್ವಾಮೀಜಿ ಬರೆದ ಲೇಖನದ ಮುಖ್ಯಾಂಶಗಳಿವು ನನ್ನವಲ್ಲ. ಪ್ರಶಾಂತರ ತಿಳುವಳಿಕೆಗಾಗಿ.)

  Like

 7. Rajaram Hegde
  ಮೇ 31, 2015 ರಲ್ಲಿ 6:08 ಅಪರಾಹ್ನ

  ಧನ್ಯವಾದಗಳು ಶ್ರೀಮತಿ ವಿದ್ಯಾ ಅವರೆ. ತುಂಬ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೀರಿ.
  ಶ್ರೀಯುತ ಪ್ರಶಾಂತ ಅವರೆ, ನಿಮ್ಮಲ್ಲಿ ನೋವಿದೆ ಎಂಬುದು ನಿಮ್ಮ ಉತ್ತರದಲ್ಲಿ ಕಾಣುತ್ತದೆ. ಇಂಥ ವಿಷಯಗಳಿಗೆ ಭಾವೋದ್ವೇಗದಿಂದ ಪ್ರತಿಕ್ರಿಯಿಸಿದರೆ ಪ್ರಯೋಜನವಿಲ್ಲ. ಶೂದ್ರರಿಗೆ ವೇದವನ್ನು ನಿರಾಕರಿಸಿ ಮೋಕ್ಷವನ್ನು ನಿರಾಕರಿಸಿದರು ಎಂಬ ಒಂದು ವಾದವು ಪ್ರಚಲಿತದಲ್ಲಿದೆ ಹಾಗೂ ಅದು ಬ್ರಾಹ್ಮಣರ ಕುರಿತು ಬ್ರಾಹ್ಮಣೇತರರಲ್ಲಿ ಕಹಿ ಭಾವನೆಯನ್ನು ಪ್ರಚೋದಿಸುತ್ತದೆ. ಆದರೆ ಅದೊಂದು ತಪ್ಪು ತಿಳುವಳಿಕೆ ಎಂಬುದನ್ನು ಗಮನಕ್ಕೆ ತರುವುದು ನನ್ನ ಉದ್ದೇಶವಾಗಿತ್ತು. ನಿಮಗೆ ನನ್ನ ಲೇಖನದ ಕುರಿತು ಆಕ್ಷೇಪಣೆ ಇದ್ದರೆ ನನ್ನ ವಾದ ತಪ್ಪು ಎಂದು ಆಧಾರ ಸಮೇತ ತೋರಿಸಿ. ಆಧುನಿಕ ಕಾಲದಲ್ಲಿ ಹಿಂದೂ ಪರಂಪರೆಯ ಕುರಿತು ಇಂಥ ರಾಶಿ ರಾಶಿ ತಪ್ಪು ನಿರೂಪಣೆಗಳು ಸೃಷ್ಟಿಯಾಗಿ ಸತ್ಯದ ಸ್ಥಾನದಲ್ಲಿವೆ. ಇವುಗಳನ್ನೆಲ್ಲ ಕ್ರಿಶ್ಚಿಯನ್ ಮಿಶನರಿಗಳು ಹಾಗೂ ಅವರ ಉತ್ತರಾಧಿಕಾರಿಗಳಾದ ಸಮಾಜ ವಿಜ್ಞಾನಿಗಳು ಸೃಷ್ಟಿಸಿದ್ದಾರೆ. ಅವರೆಲ್ಲ ತಮ್ಮ ಮಿತಿಯಲ್ಲಿ ಹಾಗೆ ತರ್ಕಿಸಿದರು. ಆ ಮಿತಿಗಳೇನು ಎಂಬುದನ್ನು ಗುರುತಿಸುತ್ತ ಅವುಗಳಲ್ಲಿ ಯಾವ್ಯಾವವು ತಪ್ಪು ತಿಳುವಳಿಕೆಗಳು ಎಂದು ಗೊತ್ತಾಗುತ್ತದೆಯೋ ಅವನ್ನು ಸರಿಪಡಿಸಿಕೊಳ್ಳುತ್ತ ಬಹುಶಃ ನಾವು ಯತಾರ್ಥ ಜ್ಞಾನವನ್ನು ಗಳಿಸುತ್ತ ಹೋಗುತ್ತೇವೆ. ಇದರಿಂದ ಹಿಂದೂ ಪರಂಪರೆಯ ಕುರಿತು ಕೆಳಜಾತಿಗಳಿಗಿರುವ ನಂಜು ಕೆಲಮಟ್ಟಿಗಾದರೂ ತಗ್ಗಬಹುದು. ಈ ಪರಂಪರೆಯನ್ನು ಹಾಗೂ ಕೆಲವು ಜಾತಿಗಳನ್ನು ಅನಗತ್ಯ ಕಾರಣಗಳಿಗಾಗಿ ದ್ವೇಷಿಸುತ್ತಿದ್ದೇವೆ ಎಂಬ ಅರಿವಾದರೂ ಮೂಡಬಹುದು.
  ಕಟಿಂಗ್ ಶಾಪಿಗೆ, ದೇವಾಲಯಕ್ಕೆ ಪ್ರವೇಶ ನಿಷೇಧಿಸಿದ್ದು ನನಗೆ ಮುಖ್ಯವೇ ಹೊರತೂ ಈ ಮೋಕ್ಷದ ಕುರಿತ ಚರ್ಚೆಯಲ್ಲ ಎಂಬ ಸೂಚನೆಯನ್ನು ನೀಡಿದ್ದೀರಿ. ಅಂದರೆ ನಾನೆತ್ತಿದ ಚರ್ಚೆಯೇ ನಿಮಗೆ ಅಪ್ರಸ್ತುತ ಎಂದಾದರೆ ಅದು ನಿಮಗೆ ನೋವು ಕೊಡುವ ವಿಚಾರ ಏಕಾಗುತ್ತದೆ? ಅಂದರೆ ಅದು ನಿಮಗೆ ಅಪ್ರಸ್ತುತವಾದುದಲ್ಲ ಎಂಬುದಕ್ಕೆ ನಿಮ್ಮ ಪ್ರತಿಕ್ರಿಯೆಯೇ ಸಾಕ್ಷಿ. ಹಿಂದೂ ಪರಂಪರೆಯು ಮೋಕ್ಷವು ಒಬ್ಬನಿಗೆ ಯಾವುದೇ ಸ್ಥಿತಿಯಲ್ಲಾದರೂ ಸಿಗಬಹುದು, ಅದಕ್ಕೆ ಜಾತಿ ಮತಗಳಿಂದ ಹಿಡಿದು ಯಾವುದೇ ಪೂರ್ವ ನಿಬಂಧನೆಗಳಿಲ್ಲ ಎನ್ನುತ್ತದೆ. ( ಸದ್ಗತಿಗೆ ಚರ್ಚು ಮಸೀದಿ ಮತಾಂತರ ಇವೇ ಸತ್ಯಮಾರ್ಗಗಳು ಎಂದೆಲ್ಲ ಮಾನವ ರುಂಡಗಳನ್ನು ಚೆಂಡಾಡಿದ ಮತಗಳಿಗೆ ಹೋಲಿಸಿದರೆ ನಮ್ಮ ಪರಂಪರೆ ದಿವ್ಯವಾದದ್ದು ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ. ) ಈ ಕಾರಣದಿಂದಲೇ ಮೋಕ್ಷಕ್ಕೆ ವೇದಗಳು ಹೇಗೆ ಅನಿವಾರ್ಯವಲ್ಲವೋ ಹಾಗೇ ದೇವಾಲಯಗಳು ಕೂಡ ಅನಿವಾರ್ಯವಲ್ಲ. ಇಲ್ಲಿ ಪರಮಾತ್ಮನೇ ಕುಚೇಲ ಭಕ್ತನೆಡೆಗೆ ಬರುತ್ತಾನೆ, ದೇವಾಲಯದ ಗೋಡೆಯನ್ನು ಒಡೆದು ದರ್ಶನ ನೀಡುತ್ತಾನೆ. ಇಂಥ ಮೋಕ್ಷ ಕಲ್ಪನೆಯನ್ನು ನಂಬಿಕೊಂಡವರ ಮನೋಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಆಚರಣೆಗಳಿಗೆ ಅರ್ಥ ಹಚ್ಚಬೇಕು. ಚರ್ಚಿಗೆ, ಮಸೀದಿಗೆ ಬಂದರೇ ಸದ್ಗತಿ ಎಂದು ಪ್ರತಿಪಾದಿಸುವವರು ಅವುಗಳಿಗೆ ಪ್ರವೇಶವನ್ನು ನಿರಾಕರಿಸುವುದಕ್ಕೂ ದೇವರೇ
  ಭಕ್ತನ ಬಳಿ ಬರುತ್ತಾನೆ ಎನ್ನುವವರು ದೇವಾಲಯ ಪ್ರವೇಶಕ್ಕೆ ನಿರಾಕರಿಸುವುದಕ್ಕೂ ವ್ಯತ್ಯಾಸವಿದೆ. ಆದರೆ ಕ್ರೈಸ್ತ ಹಿನ್ನೆಲೆಯಿಂದ ಬೆಳೆದ ಆಧುನಿಕ ಚಿಂತನೆಯು ಇವೆರಡನ್ನೂ ಒಂದೇ ಮಾಡಿದೆ. ಹಾಗಾಗಿ ಸದ್ಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಇದೊಂದು ತಾರತಮ್ಯ ಹಾಗೂ ಅನ್ಯಾಯ ಬಣ್ಣಿಸಲಾಯಿತು. ನಿಮ್ಮ ನೋವಿನ ಮೂಲ ಕೂಡ ಅಲ್ಲೇ ಇದೆ. ಅದಿಲ್ಲದಿದ್ದರೆ ಇಂದಿನ ಆಧುನಿಕ ಸಮಾಜದಲ್ಲಿ ಕೂಡ ನಾವು ಪ್ರವೇಶಿಸಬಾರದ ಎಷ್ಟೋ ಸ್ಥಳಗಳಿವೆ. ಅವು ಯಾವವೂ ನಿಮಗೆ ನೋವಿನ ವಿಷಯಗಳೇಕೆ ಆಗುವುದಿಲ್ಲ?
  ನಮ್ಮ ಸಾಮಾಜಿಕ ತಾರತಮ್ಯದ ಕಥೆಗಳೆಲ್ಲಕ್ಕೂ ಮೂಲದಲ್ಲಿ ಕ್ರೈಸ್ತ, ಮುಸ್ಲಿಂ ರಿಲಿಜನ್ನುಗಳ ಮಾದರಿಗಳಿವೆ. ಆದರೆ ಅವುಗಳನ್ನೊಪ್ಪಿಕೊಂಡ ಸಮಾಜಗಳಲ್ಲಿ ತಾರತಮ್ಯಗಳು ಇಲ್ಲವೆ? ಆ ರಿಲಿಜನ್ನುಗಳು ಮಾನವರೆಲ್ಲರೂ ಸಮಾನರು, ಸಹೋದರರು ಎಂದು ನಿಜವಾಗಿಯೂ ಭಾವಿಸಿದ್ದರೆ ಹೀದನ್ನರು, ಕಾಫಿರರು ಎಂದು ತಮ್ಮ ಮತಕ್ಕೆ ಸೇರದವರನ್ನು ಕೀಳಾಗಿ ನೋಡಿದ್ದೇಕೆ? ಮಾನವರೆಲ್ಲರೂ ಸಮಾನರಾಗಿ ಸದ್ಗತಿಗೆ ಪಾತ್ರರಾಗಿದ್ದಾರೆ ಎಂದು ಅವು ನಂಬಿದ ಪಕ್ಷದಲ್ಲಿ ಮತಾಂತರವನ್ನೇಕೆ ಹಿಂಸಾಪೂರ್ವಕವಾಗಿ ಪಾಲಿಸಿಕೊಂಡು ಬಂದವು? ಅಂದರೆ ಈ ರಿಲಿಜನ್ನುಗಳು ತಮ್ಮ ಸಮುದಾಯಗಳಿಗೆ ಸೀಮಿತವಾಗಿ ಮಾತ್ರ ಈ ಸಹೋದರತ್ವ, ಸಮಾನತೆಗಳನ್ನು ಭಾವಿಸಿವೆ ಎಂಬುದು ದೃಷ್ಟಾಂತವಾದ ಸಂಗತಿ. ತಮ್ಮ ರಿಲಿಜನ್ನಿಗೆ ಸೇರದವರು ಪಾಪಿಗಳು ಎನ್ನುತ್ತವೆ ಅವು. ಇಂದು ಮಧ್ಯ ಪ್ರಾಚ್ಯದಲ್ಲಿ ಶಿಯಾಗಳ ನರಮೇಧವು ಯಾವ ಸೀಮೆಯ ಇಸ್ಲಾಂ ಸಹೋ ದರತ್ವದ ಸಂಕೇತ?
  ಅಂದರೆ ಈ ರಿಲಿಜನ್ನುಗಳು ತಾವು ಯಾರನ್ನಾದರೂ ಹೊರಗಿಟ್ಟರೆ ಅವರು ಪಾಪಿಗಳು ಎಂದು ಭಾವಿಸುತ್ತವೆ. ಭಾರತದಲ್ಲಿರುವ ದೇವಾಲಯ ಪ್ರವೇಶ ನಿಷೇಧದಂತಹ ಆಚರಣೆಗಳನ್ನು ಇಂತಹ ನಿರೂಪಣೆಗೊಳಪಡಿಸಿ ದಲಿತರು ಪಾಪಿಗಳೆಂದು ಮೇಲ್ಜಾತಿಯವರು ಭಾವಿಸಿದ್ದಾರೆ ಎಂದು ಸಮಾಜ ವಿಜ್ಞಾನಗಳು ಅರ್ಥೈಸಿದವು. ಏಕೆಂದರೆ ದಲಿತರು ಹಿಂದೂಗಳಿಗೆ ಕಾಫಿರರಂತೆ, ಹೀದನ್ನರಂತೆ ಕಂಡರು ಎಂಬುದಾಗಿಸಮೀಕರಿಸಿದವು. ಆದರೆ ಹಿಂದೂ ಎಂಬ ರಿಲಿಜನ್ನೇ ಇಲ್ಲ, ಅದಕ್ಕೆ ಪುರೋಹಿತಶಾಹಿ ಇರುವುದಂತೂ ಕುದುರೆಯ ಮೊಟ್ಟೆಯಷ್ಟೇ ಸತ್ಯ. ಹಾಗಾಗಿ ದಲಿತರು ಕಾಫಿರರು ಅವರು ಪಾಪಿಗಳು ಅವರಿಗೆ ಸದ್ಗತಿ ಇಲ್ಲ ಎಂಬ ಅಭಿಪ್ರಾಯಗಳು ಮೇಲ್ಜಾತಿಯವರಲ್ಲಿ ಇರಲಿಕ್ಕೂ ಸಾಧ್ಯವಿಲ್ಲ. ಹಿಂದೂ ಆಚರಣೆಗಳನ್ನು ರಿಲಿಜನ್ನಿನ ಕನ್ನಡಕದಿಂದ ನೋಡಿದರೆ ಅನಗತ್ಯವಾದ ನಂಜು ಸೃಷ್ಟಿಯಾಗುತ್ತದೆ.
  ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯಂಥ ಅನೇಕ ಆಚರಣೆಗಳು ಬೆಳೆದುಕೊಂಡು ಬಂದಿವೆ. ಇವುಗಳನ್ನು ಕೇಂದ್ರೀಕೃತವಾಗಿ ಗ್ರಂಥಾಧಾರವನ್ನಿಟ್ಟುಕೊಂಡು ನಿರ್ದೇಶಿಸಿದ ಶಕ್ತಿಗಳು ಯಾವವೂ ಇಲ್ಲ. ಹಾಗಾಗಿ ಅವು ಉದ್ದೇಶವಿಲ್ಲದ ಆಚರಣೆಗಳು. ಜನರಿಗೇ ಇಂಥ ಆಚರಣೆಗಳನ್ನು ಏಕೆ ಮಾಡಬೇಕೆಂದು ಗೊತ್ತಿಲ್ಲ. ಆದರೆ ಈ ಸಮಾಜವು ಆಚರಣೆಗಳಿಂದಲೇ ಅಸ್ತಿತ್ವವನ್ನು ಪಡೆದಿದೆ. ( ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕವನ್ನು ಓದಿ, ಅಲ್ಲಿ ಈ ಕುರಿರತು ಚರ್ಚಿಸಿದ್ದೇವೆ) ಹಾಗಾಗಿ ಜನರು ಆಚರಣೆಗಳನ್ನು ಸರಿಯಾಗಿ ಮಾಡದಿದ್ದರೆ ಸಮಾಜಕ್ಕೆ ಕೇಡಾಗುತ್ತದೆ ಎಂದು ಹೆದರುತ್ತಾರೆ. ಇಂಥ ಸಾಮಾಜಿಕ ಆಚರಣೆಗಳಿಂದ ಒಂದು ಸಮುದಾಯಕ್ಕೆ ತೊಂದರೆ ಹಾಗೂ ಅನ್ಯಾಯವಾಗುತ್ತಿದೆ ಎಂದರೆ ಖಂಡಿತವಾಗಿಯೂ ಅವುಗಳನ್ನು ಬದಲಾಯಿಸಲೇಬೇಕು. ಆದರೆ ಆ ಉದ್ದೇಶಕ್ಕೆ ಅವಾಸ್ತವಿಕವಾದ ನಿರೂಪಣೆಗಳನ್ನು ಮಾಡಿ ಅನ್ಯ ಸಮುದಾಯಗಳ ಮೇಲೆ ಇಲ್ಲದ ನಂಜುಗಳನ್ನು ಹುಟ್ಟಿಸುವ ಅಗತ್ಯವಿಲ್ಲ. ನಮ್ಮ ಹಿಂದೂ ಸಮಾಜವು ಸದಾ ಅಂಥ ಬದಲಾವಣೆಗಳನ್ನು ಸುಧಾರಣೆಗಳನ್ನು ಮಾಡಿಕೊಂಡೇ ಬಂದಿದೆ. ಆಧುನಿಕ ಕಾಲದಲ್ಲಿ ದಲಿತರಿಗೆ ಸಂಬಂಧಿಸಿದ ಸುಧಾರಣೆಗಳನ್ನು ಸಮಸ್ತ ಭಾರತೀಯ ಸಮಾಜವೇ ಒಟ್ಟಾಗಿ ನಡೆಸಿದೆಯೋ ಇಲ್ಲ ಕೇವಲ ದಲಿತರೇ ನಡೆಸಿದ್ದಾರೊ? ಅಸ್ಪೃಶ್ಯತೆಯ ಆಚರಣೆಯನ್ನು ತೊಡೆಯಲು ಬ್ರಾಹ್ಮಣರಾದಿಯಾಗಿ ಮೇಲ್ಜಾತಿಯ ಸಮಾಜ ಸುಧಾರಕರು ಎಷ್ಟೊಂದು ಮಂದಿ ಪ್ರಯತ್ನಿಸಿಲ್ಲ? ಇಂದು ಅಸ್ಪೃಶ್ಯರ ಕುರಿತು ಕಾನೂನುಗಳನ್ನು ರಚಿಸಲು ಆಧಾರವಾದ ಸಂವಿಧಾನ ರಚನೆಯ ಸಮಿತಿಗೆ ದಲಿತರನ್ನೇ ಅಧ್ಯಕ್ಷರನ್ನಾಗಿ ಈ ಮೇಲ್ಜಾತಿ ಧುರೀಣರೆಲ್ಲ ನೇಮಿಸಿದರಲ್ಲ? ಮೀಸಲಾತಿಯಿಂದ ಹಿಡಿದು ಅವರಿಗೆ ಸಂಬಂಧಿಸಿದ ಕಾನೂನುಗಳನ್ನು ದಲಿತರೇ ರಚಿಸಿ ಅಂಗೀಕರಿಸಿದ್ದೋ ಇಲ್ಲ ಮೇಲ್ಜಾತಿಯೇ ಪ್ರಧಾನವಾಗಿದ್ದ ಸರ್ಕಾರಗಳು ರಚಿಸಿದ್ದೋ?. ಇವರೆಲ್ಲ ಕೂಡ ಹಿಂದೂ ಪರಂಪರೆಗೇ ಸೇರಿಲ್ಲವೆ? ಏಕೆ ಇವರೆಲ್ಲ ದಲಿತರನ್ನು ಸರ್ಕಾರದಿಂದ ಹೊರಗಿಡಬೇಕೆಂಬ, ತುಳಿಯಬೇಕೆಂಬ ವಿಚಾರವನ್ನೂ ಮಾಡಲಿಲ್ಲ? ಅಂದರೆ ಆಚರಣೆಯನ್ನು ಕರ್ಮಠವಾಗಿ ಮಾಡಿದಂತೇ ಹೊಸ ಬದಲಾವಣೆಗೆ ಮುಕ್ತವಾಗಿ ತೆರೆದುಕೊಳ್ಳುವುದು ಕೂಡ ಹಿಂದೂ ಪರಂಪರೆಯೇಆಗಿದೆ.
  ಈ ವಿಚಾರಗಳನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ಇಂಥ ಆಚರಣೆಗಳ ಕುರಿತು ಹೇಗೆ ಯೋಚಿಸಿದರೆ ಯತಾರ್ಥವಾಗಬಹುದು ಎಂಬುದನ್ನು ಸೂಚಿಸಲಿಕ್ಕೆ. ನಿಮ್ಮ ನೋವು ನಂಜಾಗಿ ನಿಮ್ಮನ್ನೇ ದಹಿಸಬಾರದಲ್ಲ? ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರಮನೆಯ ಸುಡದು’ ಎಂಬ ವಚನೋಕ್ತಿಯಂತೆ ಪಾಶ್ಚಾತ್ಯ ನಿರೂಪಣೆಗಳು ಹುಟ್ಟಿಸುತ್ತಿರುವ ನಂಜಿನಿಂದ ಹೊರಬರುವುದು ನಿಮ್ಮಂತಹ ಯಾರಿಗಾದರೂ ತುರ್ತು ಅಗತ್ಯ. ಕೆಳಜಾತಿಯವರಾಗಿ ನಿಮಗೆ ಒಂದು ರೀತಿಯ ಕಷ್ಟಗಳಾಗಿರಬಹುದು, ಮೇಲ್ಜಾತಿಯವನಾಗಿ ನನಗೂ ಮತ್ತೊಂದು ರೀತಿಯ ಕಷ್ಟಗಳಾಗಿವೆ. ಮೇಲ್ಜಾತಿಯವರೆಲ್ಲ ಸುಖವಾಗಿ ಅನ್ಯಾಯಕ್ಕೆ ಒಳಗಾಗದೇ ಬುದುಕಿದ್ದಾರೆ ಎಂದು ಯಾರಾದರೂ ಸಂಶೋಧಿಸಿ ಕಂಡುಕೊಂಡಿದ್ದಾರೆಯೆ? ಗಂಡಾಗಿ ಒಂದು ಥರದ ಕಷ್ಟವಾದರೆ ಹೆಣ್ಣಾಗಿ ಮತ್ತೊಂದು ರೀತಿಯ ಕಷ್ಟವಾಗುತ್ತದೆ. ಆದರೆ ಆ ಕಾರಣಕ್ಕೇ ಇಡೀ ಪರಂಪರೆಯನ್ನೇ ನಿರಾಕರಿಸಿದರೆ, ಅಥವಾ ಸುತ್ತಮುತ್ತಲಿನ ಎಲ್ಲರ ಮೇಲೆ ಅವಿಶ್ವಾಸ ತಳೆದರೆ ನ್ಯಾಯ ಸಿಕ್ಕಿಬಿಡುತ್ತದೆಯೆ? ಅದು ಒಂದು ರೀತಿಯಲ್ಲಿ ಸ್ವನಾಶದ ಪ್ರಕ್ರಿಯೆಯಾಗಿಬಿಡಬಹುದು.

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: