ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 21: ಗೋಮಾಂಸ ಭಕ್ಷಣೆ ಮತ್ತು ವೈವಿಧ್ಯತೆಯ ರಕ್ಷಣೆ

ಪ್ರೊ. ರಾಜಾರಾಮ ಹೆಗಡೆ.

  ಇತ್ತೀಚೆಗೆ ನಮ್ಮ ನಾಡು ತುಂಬಾ ವಿಲಕ್ಷಣವಾದ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ. ಸಾರ್ವಜನಿಕವಾಗಿ ಗೋಮಾಂಸವನ್ನು ಭಕ್ಷಿಸುವುದರ ಮೂಲಕ ವೈವಿಧ್ಯಪೂರ್ಣ ಆಹಾರದ ಹಕ್ಕಿಗಾಗಿ ಆಗ್ರಹಿಸುತ್ತಿರುವುದು ಇವುಗಳಲ್ಲೊಂದು. ಈ ಪ್ರತಿಭಟನೆಯು ಗೋಹತ್ಯಾ ನಿಷೇಧಕ್ಕಾಗಿ ಹೋರಾಡುತ್ತಿರುವ ಕೆಲವು ಸಂಘಟನೆಗಳನ್ನು ಗುರಿಯಾಗಿಟ್ಟುಕೊಂಡಿದೆ ಎಂಬುದು ಸ್ಪಷ್ಟ. ಈ ಪ್ರತಿಭಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಕೆಟ್ಟದಾಗಿ ಪ್ರತಿಕ್ರಿಯೆಗಳೂ ಬಂದವು. ಇವೆರಡನ್ನೂ ಗಮನಿಸಿದಾಗ ಇವೆಲ್ಲ ಗೋಹತ್ಯೆಯ ಕುರಿತು ಭಾರತೀಯ ಸಮುದಾಯಗಳ ನಡುವೆ ಈಗಾಗಲೇ ಎದ್ದಿರುವ ಬಿರುಕನ್ನು ಮುಚ್ಚುವುದರ ಬದಲು ಮತ್ತೂ ಸಂಘರ್ಷದ ದಾರಿಗೆ ಒಯ್ಯುತ್ತಿವೆ ಎಂಬುದು ಸ್ಪಷ್ಟ.

   ಗೋಮಾಂಸ ಭಕ್ಷಣೆಯ ನಿಷೇಧವು ಭಾರತಕ್ಕೇ ವಿಶಿಷ್ಟವಾದ ಸಮಸ್ಯೆ. ಅದು ವಿಶ್ವದಲ್ಲಿ ಬಹುತೇಕ ಜನರ ಆಹಾರವಾಗಿದೆ. ಅದರಲ್ಲೂ ಭಾರತದಲ್ಲಿ ಕೂಡ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಂ ಹಾಗೂ ಕ್ರೈಸ್ತರ ಆಹಾರವಾಗಿದೆ. ಗೋಮಾಂಸವನ್ನು ತಿನ್ನುವವರು ಅದನ್ನು ತಿನ್ನದವರಿಗೆ ನೋವುಂಟುಮಾಡಬೇಕೆಂದಾಗಲೀ ಅಥವಾ ಅವರ ಪವಿತ್ರ ಪ್ರಾಣಿಯನ್ನು ಧಿಕ್ಕರಿಸುವ ಸಲುವಾಗಿಯಾಗಲೀ ಅದನ್ನು ರೂಢಿಸಿಕೊಂಡದ್ದಲ್ಲ ಎಂಬ ಮೂಲಭೂತ ಅಂಶವನ್ನು ಮರೆಯಬಾರದು. ಅದು ಅವರಿಗೆ ಪಾರಂಪರಿಕ ಆಹಾರ. ಹಿಂದೂಗಳಲ್ಲೂ ಕೂಡ ಅನೇಕ ಜಾತಿಗಳು ಹಾಗೂ ಬುಡಕಟ್ಟುಗಳಿಗೆ ಈ ನಿಷೇಧವಿಲ್ಲ. ಆದರೆ ಅವರಲ್ಲಿ ಸುಶಿಕ್ಷಿತರು ಈ ಆಹಾರ ಪದ್ಧತಿಯನ್ನು ವಿರೋಧಿಸುತ್ತಾರೆ. ಆದರೂ ಒಟ್ಟಾರೆಯಾಗಿ ಇವರಿಗೆಲ್ಲ ತಮ್ಮ ಪಾರಂಪರಿಕ ಆಹಾರ ಪದ್ಧತಿಯನ್ನು ತ್ಯಜಿಸಬೇಕೆಂಬುದು ತಮ್ಮ ಮೇಲೆ ಒತ್ತಾಯದ ಹೇರಿಕೆಯಾಗಿ ಕಾಣಿಸುತ್ತದೆ. ಭಾರತೀಯ ಸಮಾಜದಲ್ಲಿ ಆಧುನೀಕರಣದಿಂದಾಗಿ ಅನೇಕ ಸಾಂಪ್ರದಾಯಿಕ ಆಚರಣೆಗಳನ್ನು ಕಾನೂನುಗಳ ಮೂಲಕ ನಿಷೇಧಿಸಬೇಕೆಂದು ಒತ್ತಾಯಿಸಿದಾಗ ಹುಟ್ಟಬಹುದಾದ ವಿರೋಧದ ಸ್ವರೂಪವು ಈ ಪ್ರತಿಕ್ರಿಯೆಗಳಿಗೂ ಇದೆ ಎಂಬುದನ್ನು ಗುರುತಿಸಬೇಕು. ಇದನ್ನು ಮತೀಯ ಅಥವಾ ರಾಷ್ಟ್ರೀಯ ಸಮಸ್ಯೆಯನ್ನಾಗಿ ಪರಿವರ್ತಿಸುವುದು ಈ ಸಮಸ್ಯೆಯನ್ನು ದಾರಿ ತಪ್ಪಿಸಿದಂತೇ.

  ಗೋವಧೆಯನ್ನು ಬೆಂಬಲಿಸುವವರು ಅದರ  ನಿಷೇಧದ ಹಿಂದೆ ಬ್ರಾಹ್ಮಣರ ಮಡಿವಂತಿಕೆ, ಅಥವಾ ಪುರೋಹಿತಶಾಹಿಯ ಕುತಂತ್ರವಿದೆ ಎಂದು ಭಾವಿಸಿದಂತಿದೆ. ಹಾಗಾಗಿಯೇ ವೇದಗಳಲ್ಲಿ ಗೋಮಾಂಸ ಭಕ್ಷಣೆಯ ಉಲ್ಲೇಖದ ಕುರಿತು ಚರ್ಚೆಯನ್ನೆತ್ತಿ ವಿರೋಧಿಗಳನ್ನು ಹಣಿಯಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲ ಭಾರತೀಯ ಸಂಸ್ಕೃತಿಯ ಕುರಿತು ಪಾಶ್ಚಾತ್ಯ ಚಿತ್ರಣಗಳನ್ನೇ ಸತ್ಯವೆಂಬುದಾಗಿ ನಂಬಿರದಿದ್ದರೆ ಇಷ್ಟು ಶೋಚನೀಯವಾಗಿ ವಿಚಾರ ಮಾಡುತ್ತಿರಲಿಲ್ಲ. ಭಾರತದಲ್ಲಿ ಗೋವಧೆಯ ನಿಷೇಧವು ಬ್ರಾಹ್ಮಣ ಪುರೋಹಿತಶಾಹಿಯ ಕಾರಸ್ತಾನವಲ್ಲ. ಅದಕ್ಕೂ ಇಲ್ಲಿನ ಕೃಷಿ ಸಂಸ್ಕೃತಿಗೂ ಅವಿನಾಭಾವಿ ಸಂಬಂಧವಿದೆ. ಈ ಕೃಷಿ ಸಂಸ್ಕೃತಿಯಲ್ಲಿ ಬಾಹ್ಮಣೇತರ ಜಾತಿಗಳೇ ಪ್ರಧಾನವಾಗಿವೆ. ಗೋಪಾಲನೆ ಭಾರತೀಯ ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ. ಗೋಪಾಲನೆ ಇಲ್ಲದ ಪಾರಂಪರಿಕ ಕೃಷಿಯನ್ನು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಇಂಥ ಸಂಸ್ಕೃತಿಯು ಗೋವನ್ನು ಪಾಲನೆ ಮಾಡುವುದಕ್ಕೆ ಮಹತ್ವ ಕೊಡುತ್ತದೆಯೆ ವಿನಃ ನಾಶ ಮಾಡುವುದಕ್ಕಲ್ಲ. ಭಾರತೀಯ ಸಂಸ್ಕೃತಿಯು ಕೃಷಿಪ್ರಧಾನವಾಗಿರುವುದರಿಂದ ಇಲ್ಲಿನ ಕೃಷಿಯೇತರ ಜನಜಾತಿಗಳೂ ಈ ನೀತಿಯನ್ನು ಅಳವಡಿಸಿಕೊಂಡಿವೆ. ಬ್ರಾಹ್ಮಣರು ಕೃಷಿಕರಾಗಿ ಹಾಗೂ ಈ ಕೃಷಿ ಸಂಸ್ಕೃತಿಯ ಭಾಗವಾಗಿ ಗೋವನ್ನು ಪೂಜಿಸುತ್ತಿದ್ದಾರೆಯೇ ಹೊರತೂ ವೇದಗಳಲ್ಲಿ ಹೇಳಿದೆ ಎಂದು ಅದನ್ನು ಪೂಜಿಸುವುದಲ್ಲ.

  ಶಾಖಾಹಾರವನ್ನು ವಿಧಿಸುವ ಭಾರತೀಯ ಅಧ್ಯಾತ್ಮ ಸಂಪ್ರದಾಯಗಳೆಲ್ಲವೂ ಈ ನೀತಿಯನ್ನು ಮಾನ್ಯಮಾಡಿಕೊಂಡು ಬಂದಿವೆ. ಈ ಕಾರಣದಿಂದ ಅದು ಹಿಂದೂಗಳ ಸಾಮುದಾಯಿಕ ಹಿತ ಹಾಗೂ ಪರಲೋಕ ಕಲ್ಪನೆಗೂ ತಳಕು ಹಾಕಿಕೊಂಡಿದೆ. ಹಿಂದೂಗಳಲ್ಲಿ ಗೋವನ್ನು ತಿನ್ನುವ ಯಾವುದೇ ಜಾತಿ ಕೂಡ ಜೀವವಿರುವ ಗೋವನ್ನು ವಧಿಸಿ ಅದನ್ನು ತಿನ್ನುವ ಕ್ರಮ ಇರಲಿಲ್ಲ. ಹಾಗಾಗಿ ಅದು ಗೋಹತ್ಯೆಯ ಸಮಸ್ಯೆಯಾಗಿ ಅವರಿಗೆ ಕಂಡಿಲ್ಲ. ವಸಾಹತು ಪೂರ್ವ ಕಾಲದಲ್ಲೂ ಕೆಲವು ಹಿಂದೂ ರಾಜರು ತಮ್ಮ ಮುಸ್ಲಿಂ ಹಾಗೂ ಕ್ರೈಸ್ತ ಪ್ರಜೆಗಳಿಗೆ ಗೋಹತ್ಯೆಯನ್ನು ನಿಷೇಧ ಮಾಡಿದ್ದರು.

   ಇಂದು ಇದು ಕೇವಲ ವೈವಿಧ್ಯಪೂರ್ಣ ಆಹಾರದ ಸಮಸ್ಯೆಯಾಗಿ ಉಳಿದುಕೊಂಡಿಲ್ಲ. ಆಧುನಿಕ ಕಾಲದಲ್ಲಿ ಗೋಹತ್ಯೆಗೂ ಹಿಂದೂ ಹಕ್ಕಿಗೂ ಸಂಬಂಧ ಹುಟ್ಟಿಕೊಂಡಿತು. ಗೋಹತ್ಯೆಯನ್ನು ನಿಷೇಧಿಸುವ ಕುರಿತ ಜನ ಹೋರಾಟಗಳು ಹಿಂದೂಗಳ ಹಕ್ಕಿನ ಹೋರಾಟದ ರೂಪದಲ್ಲಿ ವಸಾಹತು ಕಾಲದಲ್ಲಿ ಪ್ರಾರಂಭವಾದವು. ಈ ಸಮಸ್ಯೆಗೆ ಕಿರೀಟವಿಟ್ಟಂತೆ  ಇಪ್ಪತ್ತನೆಯ ಶತಮಾನದಲ್ಲಿ ಅದು ರಾಷ್ಟ್ರೀಯತೆಯ ಜೊತೆಗೆ ತಳಕುಹಾಕಿಕೊಂಡಿತು. ಇದು ರಾಷ್ಟ್ರೀಯ ಮುಂದಾಳುಗಳಿಗೆಲ್ಲ ತಲೆಬಿಸಿ ಮಾಡಿದ ಸಮಸ್ಯೆಯಾಗಿತ್ತು ಹಾಗೂ ಸ್ವತಂತ್ರ ಭಾರತದ ಪ್ರಭುತ್ವಕ್ಕೆ ನುಂಗಲಾರದ ತುತ್ತಾಗಿದೆ. ನಮ್ಮ ರಾಷ್ಟ್ರೀಯ ಮುಂದಾಳುಗಳಾದ ಗಾಂಧೀಜಿ, ವಿನೋಬಾ ಭಾವೆ, ಜಯಪ್ರಕಾಶ ನಾರಾಯಣರಂಥವರು ಕೂಡ ಗೋಹತ್ಯೆಯ ನಿಷೇಧವಾಗಬೇಕೆಂಬುದಾಗಿಯೇ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿಯವರು ವಿಭಿನ್ನ ಆಹಾರ ಕ್ರಮಗಳನ್ನು ಕಾನೂನಿನ ವ್ಯಾಪ್ತಿಗೆ ತರುವಾಗ ಹಕ್ಕುಗಳ ಪ್ರಶ್ನೆ ಉದ್ಭವಿಸುತ್ತದೆ ಹಾಗೂ ಭಾವನಾತ್ಮಕ ಸಮಸ್ಯೆಯಾಗುತ್ತದೆ ಎಂಬುದನ್ನು ಮನಗಂಡಿದ್ದರು. ಹಾಗಾಗಿ ಇದು ಕಾನೂನಿನಿಂದ ಆಗುವ ಕೆಲಸವಲ್ಲ, ಇದು ಸ್ವಯಂ ಪ್ರೇರಣೆಯಿಂದ ನಿಧಾನವಾಗಿ ಆಗಬೇಕಾದ ಪ್ರಕ್ರಿಯೆ ಎಂದಿದ್ದರು. ಅಷ್ಟಾಗಿಯೂ ಕೂಡ ಅವರ ಇಚ್ಛೆಯಂತೆ ಸಂವಿಧಾನದಲ್ಲಿ ಗೋವಧೆಯ ನಿಷೇಧಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಸೂಚನೆಯನ್ನು ಒಳಗೊಳ್ಳಲಾಯಿತು ಹಾಗೂ ಅಂಬೇಡ್ಕರರಂಥವರೂ ಅದನ್ನು ಒಪ್ಪಿದರು ಎಂಬುದು ಗಮನಾರ್ಹ.

  ಈ ಮೇಲಿನ ಅಂಶಗಳನ್ನು ಗಮನಿಸಿದರೆ ಈ ಸಮಸ್ಯೆಯು ಇಂದು ಎಷ್ಟು ಗೋಜಲಾಗಿದೆ ಎಂಬುದು ಸ್ಪಷ್ಟ. ಅಂದರೆ ಎಷ್ಟೇ ಕಾನೂನಿನ ಮಾತನಾಡಿದರೂ ಕೂಡ ಇದು ಹೊಂದಾಣಿಕೆಯಲ್ಲೇ ಬಗೆಹರಿಯಬೇಕಾದ ವಿಷಯ.  ಇದರಿಂದ ಹೊರಬರಬೇಕಾದರೆ ಗೋಹತ್ಯೆಗೆ ಸಂಬಂಧಿಸಿದಂತೆ ಎರಡು ಬೇರೆ ಬೇರೆ ನೆಲೆಯಲ್ಲಿ ನಿಂತಿರುವ ಸಮುದಾಯಗಳನ್ನು ಗುರುತಿಸುವುದು ಅಗತ್ಯ.. ಮೊದಲನೆಯವರು ಸಾಂಪ್ರದಾಯಿಕವಾಗಿ ಗೋವನ್ನು ಪೂಜಿಸುವವರು ಹಾಗೂ ಆಹಾರವಾಗಿ ಬಳಸುವವರು. ಎರಡನೆಯವರು ಈ ಎರಡೂ ಸಂಪ್ರದಾಯಗಳನ್ನೂ ಪ್ರತಿನಿಧಿಸುತ್ತ ಮಾನವ ಹಕ್ಕು, ಕಾನೂನಿನ ಪರಿಭಾಷೆಯಲ್ಲಿ ಎರಡು ಪಕ್ಷಗಳಾಗಿ ಹೋರಾಡುವ ಆಧುನಿಕರು. ಹೊಂದಾಣಿಕೆ ನಿಜವಾಗಿಯೂ ಆಗಬೇಕಾದ್ದು ಯಾರ ನಡುವೆ? ಮೊದಲನೆಯ ಸಮುದಾಯದಲ್ಲೋ ಎರಡನೆಯದರಲ್ಲೊ? ಅಂದರೆ ಇದನ್ನು ಗೋಪೂಜಕರ ಹಾಗೂ ಗೋ ಭಕ್ಷಕರ ನಡುವಿನ ಸಮಸ್ಯೆ ಎಂಬುದಾಗಿ ಪರಿಗಣಿಸಬೇಕೋ ಇಲ್ಲ ಅವರ ಪರವಾಗಿ ಹೋರಾಡುವ ಪಕ್ಷಗಳ ನಡುವಿನ ಮತಭೇದದ ಸಮಸ್ಯೆಯೆಂದು ಪರಿಗಣಿಸಬೇಕೋ?

  ಆದರೆ ಇಂದು ಸಂಘರ್ಷ ನಡೆಯುತ್ತಿರುವುದು ಎರಡನೆಯ ಸಮುದಾಯದ ನಡುವೆಯೇ ಹೊರತೂ ಮೊದಲನೆಯದರಲ್ಲಲ್ಲ. ಭಾರತದಲ್ಲಿ ಇಂದು ಮೊದಲನೆಯ ಸಮುದಾಯದವರ ಪರಸ್ಪರಾವಲಂಬನೆಯನ್ನು ಕಡೆಗಣಿಸುವಂತಿಲ್ಲ. ಇಂದು ಕಾನೂನನ್ನೂ ಉಲ್ಲಂಘಿಸಿ ಗೋವುಗಳ ಸಾಗಾಟ ಹಾಗೂ ಹತ್ಯೆಗಳು ಹೇಗೆ ನಡೆಯುತ್ತಿವೆ? ಗೋಮಾಂಸವನ್ನು ಆಹಾರವಾಗಿ ಉಳ್ಳವರಿಗೆ ಪ್ರಧಾನವಾಗಿ ಗೋವುಗಳನ್ನು ಒದಗಿಸುತ್ತಿರುವವರು ಗೋಪೂಜಕ ಕೃಷಿ ಸಂಸ್ಕೃತಿಯ ಜನರೇ ಎಂಬುದೂ ಸತ್ಯವೇ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇಂದು ಕೃಷಿಕ್ಷೇತ್ರದ ಜೊತೆಗೆ ಗೋಪಾಲನೆ ಕೂಡ ಮೂಲೆಗುಂಪಾಗುತ್ತಿದೆ. ಇಂದಿನ ಗೋಪಾಲಕರ ವ್ಯಾವಹಾರಿಕ, ಆರ್ಥಿಕ ಸಮಸ್ಯೆಗಳೇನು ಹಾಗೂ ಸವಾಲುಗಳೇನು, ಅದನ್ನು ನಿವಾರಿಸುವುದು ಹೇಗೆ ಎಂಬ ಪ್ರಶ್ನೆಗಳನ್ನು ಸರ್ಕಾರಗಳು ಹಾಗೂ ಗೋಹತ್ಯಾ ವಿರೋಧೀ ಹೋರಾಟಗಾರರು ಕೇಳುವ ಅಗತ್ಯವಿದೆ. ಅದನ್ನು ಬಿಟ್ಟು ಅದನ್ನೊಂದು ಕೇವಲ ಭಾವನಾತ್ಮಕ ಸಮಸ್ಯೆಯನ್ನಾಗಿ ಗುರುತಿಸಿ ಕಾನೂನನ್ನು ಮಾಡಿದರೆ ಹೆಗ್ಗಣವನ್ನು ಒಳಗೇ ಇಟ್ಟು ಬಿಲವನ್ನು ಮುಚ್ಚಿದಷ್ಟೇ ನಿರರ್ಥಕ.

  ಅದೇ ರೀತಿ, ಆ ಕಾನೂನನ್ನು ವಿರೋಧಿಸುವವರು ಗೋಮಾಂಸವನ್ನು ಸಾರ್ವಜನಿಕವಾಗಿ ತಿಂದು, ಹಂಚಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದರಿಂದ ಏನನ್ನು ಸಾಧಿಸಲಿಕ್ಕಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಈ ಕುರಿತು ಈಗಾಗಲೇ ಉದಾಸೀನತೆಯನ್ನು ಬೆಳೆಸಿಕೊಂಡವರನ್ನೂ ಬಡಿದೆಬ್ಬಿಸಿದಂತಾಗುತ್ತದೆ ಅಷ್ಟೆ. ಈ ಸಮಸ್ಯೆಯಲ್ಲಿ ನೇರವಾಗಿ ಸಂಬಂಧಪಡದವರ ಕೆಸರೆರಚಾಟದಲ್ಲಿ ಈ ಭರತಭೂಮಿಯ ಜನರೆಲ್ಲ ಗೋವನ್ನು ತಿನ್ನದ ಹಾಗೂ ತಿನ್ನುವ ಸಮುದಾಯಗಳಾಗಿ ಒಡೆದುಕೊಂಡು ಇಲ್ಲದ ಸಹಬಾಳ್ವೆಯ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬಹುದು. ಇರುವ ಸಮಸ್ಯೆಗಳು ಪರಿಹಾರವಾಗದಿದ್ದರೆ ಚಿಂತೆಯಿಲ್ಲ, ಹೊಸ ಸಮಸ್ಯೆಗಳನ್ನು ಸಮಾಜಕ್ಕೆ ಸೃಷ್ಟಿಸದಿದ್ದರೆ ಅದೇ ಇವರೆಲ್ಲ ಜನರಿಗೆ ಮಾಡಬಹುದಾದ ದೊಡ್ಡ ಸೇವೆ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: