ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 23: ಮಾಂಸಾಹಾರ ಬೇಕು ಆದರೆ ಪ್ರಾಣಿಬಲಿ ಬೇಡ. ಏಕೆ?

ಪ್ರೊ. ರಾಜಾರಾಮ ಹೆಗಡೆ.

  ನೇಪಾಳದಲ್ಲಿ ಭೂಕಂಪವಾಗಿ ಸಹಸ್ರಾರು ಜನರು ಸಾವಿಗೀಡಾದ ಸಂದರ್ಭದಲ್ಲಿ ಜಾಲತಾಣದಲ್ಲಿ ಕೋಣಗಳನ್ನು ಬಲಿ ನೀಡಿದ ಚಿತ್ರವೊಂದನ್ನು ಹಾಕಲಾಗಿತ್ತು. ಹಾಗೂ ಇಂಥ ಆಚರಣೆಯನ್ನು ಮಾಡಿದ ನೇಪಾಳಿಗರಿಗೆ ಶಿಕ್ಷೆಯಾಯಿತು ಎಂಬರ್ಥದ ಟೀಕೆಗಳು ಕಾಣಿಸಿಕೊಂಡವು. ಈ ಟೀಕೆಯು ಪ್ರಾಣಿಗಳ ದೃಷ್ಟಿಯಿಂದ ದಯೆಯೆಂಬಂತೆ ಕಂಡರೂ ಕೂಡ ಮನುಷ್ಯರ ಸಂದರ್ಭದಲ್ಲಿ ತುಂಬಾ ನಿರ್ದಯವಾಗಿ ಕಾಣಿಸುತ್ತದೆ. ಏಕೆ ಜೀವದಯೆಯು ಈ ನಿರ್ದಯತೆಯನ್ನು ಹುಟ್ಟುಹಾಕಬೇಕು? ಏಕೆಂದರೆ ಪ್ರಾಣಿ ಬಲಿಯ ನಿಷೇಧದ ಕುರಿತ ಹೋರಾಟವು ಮೂಲತಃ ಭೂತದಯೆಯಿಂದ ಹುಟ್ಟಿದ ಬೇಡಿಕೆಯಲ್ಲ.

   ಪ್ರಾಣಿ ಬಲಿ ಮತ್ತು ಮಾಂಸಾಹಾರದ ಕುರಿತು ಇಂದಿನ ವಿದ್ಯಾವಂತರಲ್ಲಿ ಎದ್ದು ಕಾಣುವ ಒಂದು ದ್ವಂದ್ವವಿದೆ. ಅದೆಂದರೆ ಪ್ರಾಣಿಗಳನ್ನು ದೇವತೆಗಳಿಗೆ ಬಲಿ ನೀಡುವ ಆಚರಣೆಯು ಅಮಾನುಷ ಹಾಗಾಗಿ ಅದು ತಕ್ಷಣ ನಿಲ್ಲಬೇಕು ಎನ್ನುತ್ತಾರೆ ಇವರು. ಆದರೆ ಮಾಂಸಾಹಾರದ ಕುರಿತು ಇವರಲ್ಲಿ ಯಾರೂ ಚಕಾರ ಎತ್ತಿದ್ದನ್ನು ನಾನು ನೋಡಿಲ್ಲ. ಅದಕ್ಕಿಂತಲೂ ವಿಶೇಷವೆಂದರೆ ಆಹಾರ ವೈವಿಧ್ಯತೆಯ ರಕ್ಷಣೆಗಾಗಿ ಇತ್ತೀಚೆಗೆ ಅನೇಕರು ಗೋಮಾಂಸ ಭಕ್ಷಣೆಯನ್ನು ಸಾರ್ವಜನಿಕವಾಗಿ ಮಾಡಿ ಗೋಹತ್ಯೆಯನ್ನು ನಿಷೇಧಿಸಬಾರದೆಂಬುದಾಗಿ ಒತ್ತಾಯಿಸಿದರು. ಆದರೆ ಇವರಲ್ಲಿ ಯಾರೂ ಪ್ರಾಣಿಬಲಿ ನಿಷೇಧವು ತಪ್ಪು ಎಂಬುದಾಗಿ ಪ್ರತಿಭಟನೆ ಮಾಡಿದ್ದನ್ನು ನಾನು ನೋಡಿಲ್ಲ. ಬಹುಶಃ ಇವರೆಲ್ಲರೂ ಪ್ರಾಣಿಬಲಿಯ ವಿರೋಧಿಗಳೇ ಆಗಿರುವ ಸಾಧ್ಯತೆಯೇ ಹೆಚ್ಚಿದೆ. ಇದು ವಿಚಿತ್ರವಾಗಿದೆ.

  ಪ್ರಾಣಿಯನ್ನು ಆಹಾರಕ್ಕಾಗಿ ಕೊಂದರೆ ತಪ್ಪಿಲ್ಲ, ಆದರೆ ಅದನ್ನು ಬಲಿಕೊಡುವುದು ಮಹಾ ಪಾಪ ಎಂಬ ನಂಬಿಕೆಯು ನಿರ್ಧಿಷ್ಟವಾಗಿ  ಎಲ್ಲಿಂದ ಬಂದಿದೆ? ಇದು ಭಾರತೀಯ ಪರಂಪರೆಯಂತೂ ಅಲ್ಲ. ಭಾರತದಲ್ಲಿ ವೈದಿಕ ಯಜ್ಞಗಳಲ್ಲಿ ಹಾಗೂ ದೇವತೆಗಳಿಗೆ ಪ್ರಾಣಿ ಬಲಿಯನ್ನು ಕೊಡುವುದನ್ನು ಟೀಕಿಸಿದ ಅನೇಕ ಮತಗಳಿವೆ. ಅವೆಲ್ಲವೂ ಅಹಿಂಸೆಯನ್ನು ಪ್ರತಿಪಾದಿಸಿದ ಮತಗಳು. ಅಹಿಂಸೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ಪಾಲಿಸಿಕೊಂಡು ಬಂದ ಜೈನ ಮತ ಭಾರತೀಯ ಪರಂಪರೆಗಳಲ್ಲೊಂದು. ಆದರೆ ಇಂಥ ಮತಗಳು (ಬಹುಶಃ ಬೌದ್ಧರನ್ನೊಂದು ಬಿಟ್ಟರೆ) ಸಸ್ಯಾಹಾರವನ್ನು ಕೂಡ ಪ್ರತಿಪಾದಿಸುತ್ತವೆ. ಅವು ಆಹಾರ ವೈವಿಧ್ಯತೆಯನ್ನು ಉಳಿಸಲಿಕ್ಕಾಗಿ ಪ್ರಾಣಿಗಳನ್ನು ವಧಿಸಿ ಎನ್ನುವುದಿಲ್ಲ. ಸಸ್ಯಾಹಾರವು ಅಧ್ಯಾತ್ಮ ಸಾಧನೆಗೆ ಸೂಕ್ತವೆಂದು ಪರಿಗಣಿಸಿ ಬ್ರಾಹ್ಮಣರಾದಿಯಾಗಿ ಅನೇಕ ಸಮುದಾಯಗಳು ಸಸ್ಯಾಹಾರವನ್ನು ಇತಿಹಾಸಕಾಲದಲ್ಲಿ ರೂಢಿಸಿಕೊಂಡಿವೆ. ಲಿಂಗಾಯತರಂಥ ಬ್ರಾಹ್ಮಣೇತರರೂ ಕೂಡ ಸಸ್ಯಾಹಾರವನ್ನು ಕಟ್ಟುನಿಟ್ಟು ಮಾಡಿಕೊಂಡು ಬಂದಿದ್ದಾರೆ. ಅಂದರೆ ಭಾರತೀಯ ಸಂದರ್ಭದಲ್ಲಿ ಪ್ರಾಣಿ ಬಲಿಯ ಕುರಿತ ಟೀಕೆಗಳು ಪ್ರಾಣಿ ಹಿಂಸೆ ಅಥವಾ ಮಾಂಸಾಹಾರದ ನಿಷೇಧದಿಂದ ಹುಟ್ಟುತ್ತವೆ.

  ದೇವತೆಗಳಿಗೆ ಭಕ್ತರು ತಮ್ಮ ಆಹಾರವನ್ನು ನೈವೇದ್ಯ ಮಾಡುವುದು ಪೂಜೆಯ ಪದ್ಧತಿಯಾಗಿದೆ. ಸಸ್ಯಾಹಾರಿಗಳು ತಮ್ಮ ದೇವತೆಗಳಿಗೆ ಪ್ರಾಣಿ ಬಲಿಯನ್ನು ಮಾಡದಿರಲಿಕ್ಕೆ ಕಾರಣ ಅದನ್ನು ನಿಷೇಧಿಸಬೇಕು ಅಂತಲ್ಲ. ತಾವು ಪ್ರಾಣಿಗಳನ್ನು ತಿನ್ನದ ಕಾರಣ ತಮ್ಮ ಪೂಜೆಯಲ್ಲಿ ಅವುಗಳನ್ನು ನೈವೇದ್ಯ ಮಾಡುವುದಕ್ಕೆ ನಿಷೇಧವಿದೆ ಅಷ್ಟೆ. ಮಾಂಸವನ್ನು ತಿನ್ನುವ ಜಾತಿಗಳಿಗೆ ಅಂಥ ಆಹಾರದ ನಿಷೇಧವಿಲ್ಲದ ಕಾರಣ ಅವರು ತಮ್ಮ ದೇವತೆಗಳಿಗೆ ಪ್ರಾಣಿ ಬಲಿಯನ್ನು ಉಳಿಸಿಕೊಂಡು ಬಂದರು. ಭಾರತದ ಅನೇಕ ಪ್ರಾದೇಶಿಕ ದೇವತೆಗಳಿಗೆ ಎರಡೂ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡ ಭಕ್ತರಿದ್ದಾರೆ. ಹಾಗಾಗಿ  ಅಂಥ ದೇವತೆಗಳಿಗೆ ಎರಡೂ ಆಹಾರದ ನೈವೇದ್ಯ ಸಲ್ಲುತ್ತದೆ. ಸಸ್ಯಾಹಾರಿ ಜಾತಿಗಳು ಪ್ರಧಾನವಾಗಿರುವ ಕೆಲವು ಕ್ಷೇತ್ರಗಳಲ್ಲಿ ಕೂಡ ಪ್ರಾಣಿ ಬಲಿಯನ್ನು ಇಂದಿಗೂ ಪೂರ್ಣವಾಗಿ ನಿಷೇಧಿಸಿಲ್ಲ. ದೇವಾಲಯದ ಹೊರಗೆ ಪ್ರತ್ಯೇಕವಾಗಿ ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅದಕ್ಕಿಂತಲೂ ಆಸಕ್ತಿಪೂರ್ಣ ಸಂಗತಿಯೆಂದರೆ ಸಸ್ಯಾಹಾರೀ ಸಮುದಾಯಗಳಿಗೆ ಸೇರಿದವರೂ ಕೂಡ ಪ್ರಾಣಿಬಲಿಯ ಹರಕೆಯನ್ನು ಮಾಡಿಕೊಳ್ಳುತ್ತಾರೆ. ಕೆಲವು ಶಕ್ತಿ ದೇವತೆಗಳಿಗೆ, ಭೂತಗಳಿಗೆ, ಮಾಂಸಾಹಾರ ನೈವೇದ್ಯವೇ ಶ್ರೇಷ್ಟ ಎಂಬ ನಂಬಿಕೆಯಿದೆ. ಆ ದೇವತೆಯ ಕೃಪೆಗಾಗಿ ಮಾಂಸ ತಿನ್ನದವರೂ ಕೂಡ ಪ್ರಾಣಿಬಲಿ ಮಾಡಿಸಿ ತಿನ್ನುವವರಿಗೆ ಕೊಡುತ್ತಾರೆ. ಅಂದರೆ ಸಸ್ಯಾಹಾರಿ ಜಾತಿಗಳು ಪ್ರಾಣಿ ಬಲಿಯ ಕುರಿತಾಗಲೀ ಅದನ್ನು ಬೇಡುವ ದೇವತೆಗಳ ಕುರಿತಾಗಲೀ ಅವಜ್ಞೆಯನ್ನು ಹೊಂದಿದಂತೆ ಕಾಣುವುದಿಲ್ಲ. ಬದಲಾಗಿ ಬೇಡರ ಕಣ್ಣಪ್ಪನ ರಗಳೆಗಳಂಥ ಕೃತಿಗಳು ಆಹಾರ ಕ್ರಮಕ್ಕಿಂತ ಭಕ್ತಿಯೇ ಮುಖ್ಯ ಎಂದು ಅದನ್ನು ವೈಭವೀಕರಿಸುತ್ತವೆ.

  ಒಟ್ಟಾರೆಯಾಗಿ ಈ ಮೇಲಿನ ಸಂಗತಿಗಳನ್ನು ಗಮನಿಸಿದಾಗ ಪ್ರಾಣಿ ಬಲಿಯ ನಿಷೇಧವು ನಮ್ಮ ಸಂಪ್ರದಾಯಗಳ ಅಹಿಂಸೆಯ ಕಲ್ಪನೆಯಿಂದ ಹುಟ್ಟಿದ ಬೇಡಿಕೆಯಲ್ಲ ಎಂಬುದು ಸ್ಪಷ್ಟ. ದೇವತೆಗಳ ಎದುರಿಗೆ ಪ್ರಾಣಿಗಳನ್ನು ಕೊಲ್ಲುವುದು ಮಾತ್ರವೇ ಹಿಂಸೆ, ಅಡಿಗೆ ಮನೆಯಲ್ಲಿ, ಕಸಾಯಿಖಾನೆಯಲ್ಲಿ ಕೊಂದರೆ ಹಿಂಸೆಯಲ್ಲ ಎಂಬುದಾಗಿ ತಲೆ ಸರಿ ಇದ್ದವರಿಗೆ ಅನ್ನಿಸಲು ಸಾಧ್ಯವಿಲ್ಲ. ಇದು ಸಾಂಪ್ರದಾಯಿಕ ಸಸ್ಯಾಹಾರೀ ಜಾತಿಗಳ ಮಡಿವಂತಿಕೆಯ ನೆಲೆಯಿಂದ ಹುಟ್ಟಿದ ಬೇಡಿಕೆಯಂತೂ ಅಲ್ಲವೇ ಅಲ್ಲ. ಅದರಲ್ಲೂ ಪ್ರಾಣಿ ಬಲಿಯ ಕುರಿತು ವಿಶೇಷವಾಗಿ ಹರಿಹಾಯುವ ವಿಚಾರವಂತರು ಮಡಿವಂತಿಕೆಯ ಕಾರಣಕ್ಕಾಗಿ ಹಾಗೆ ಮಾಡುತ್ತಿದ್ದಾರೆ ಎಂಬುದು ಯಾರೂ ನಂಬತಕ್ಕ ಮಾತಲ್ಲ.

  ಮಾಂಸಾಹಾರವನ್ನು ಒಪ್ಪಿಕೊಂಡೂ ಪ್ರಾಣಿ ಬಲಿಯನ್ನು ನಿಷೇಧಿಸಬೇಕೆನ್ನುವವರ ವಾದದಲ್ಲಿ ಈ ಮುಂದಿನ ಅಂಶಗಳು ಇವೆ ಎಂಬುದನ್ನು ಗಮನಿಸಬೇಕು: 1) ಅವರು ಪ್ರಾಣಿಗಳನ್ನು ಕಡಿಯಬೇಡಿ ಎನ್ನುತ್ತಿಲ್ಲ. ಅಂದರೆ ಅವರು ಪ್ರಾಣಿ ಹಿಂಸೆಯನ್ನು ವಿರೋಧಿಸುತ್ತಿಲ್ಲ. 2) ಅವರು ನಮ್ಮ ದೇವತೆಗಳಿಗೆ ನೈವೇದ್ಯವನ್ನೇ ನೀಡಬಾರದೆಂದೂ ಹೇಳುತ್ತಿಲ್ಲ. ಹಾಗಿದ್ದ ಪಕ್ಷದಲ್ಲಿ ಸಸ್ಯಾಹಾರೀ ನೈವೇದ್ಯಗಳ ಕುರಿತೂ ಅವರು ಪ್ರತಿಭಟಿಸಬೇಕಿತ್ತು. 3) ಅವರು ನಿರ್ದಿಷ್ಟವಾಗಿ ಏನು ಹೇಳುತ್ತಿದ್ದಾರೆಂದರೆ ದೇವತೆಗಳ ಎದುರಿಗೆ ಪ್ರಾಣಿಗಳನ್ನು ಕಡಿಯಬೇಡಿ ಎನ್ನುತ್ತಿದ್ದಾರೆ. ಈ ವಾಸ್ತವವು ಏನನ್ನು ತೋರಿಸುತ್ತದೆಯೆಂದರೆ ಇವರಿಗೆಲ್ಲ ಪ್ರಾಣಿ ಹಿಂಸೆಯನ್ನು ಮಾಡುವುದು ತಪ್ಪಾಗಿ ಕಾಣಿಸುತ್ತಿಲ್ಲ, ಬದಲಾಗಿ ಅವುಗಳನ್ನು ದೇವತೆಗಳಿಗೆ ಬಲಿ ಕೊಡುವುದು ಮಾತ್ರವೇ ತಪ್ಪಾಗಿ ಕಾಣಿಸುತ್ತಿದೆ. ಅಂದರೆ ಪ್ರಾಣಿಗಳನ್ನು ದೇವತೆಗಳಿಗೆ ಬಲಿ ಕೊಡದೇ ಕಡಿದು ತಿನ್ನಿ, ಅದೇ ಒಳ್ಳೆಯ ಪದ್ಧತಿ ಎಂಬ ಸಂದೇಶವನ್ನು ಮಾತ್ರ ಇವರು ಸಮಾಜಕ್ಕೆ ರವಾನಿಸುತ್ತಿದ್ದಾರೆ.

  ಅಂದರೆ ವಾಸ್ತವದಲ್ಲಿ ಇದು ಜೀವದಯೆಗೆ ಸಂಬಂಧಪಟ್ಟ ಸಮಸ್ಯೆ ಅಲ್ಲವೇ ಅಲ್ಲ. ಇವರೆಲ್ಲರೂ ನಿರ್ದಿಷ್ಟವಾಗಿ ಏನನ್ನು ಹೇಳುತ್ತಿದ್ದಾರೆಂದರೆ ದೇವತೆಗಳಿಗೆ ಪ್ರಾಣಿ ಬಲಿಯನ್ನು ನೀಡುವುದು ಮೂಢ ನಂಬಿಕೆಯಾಗಿರುವುದರಿಂದ ಅದು ಅಮಾನುಷ ಹಾಗೂ ಅನೈತಿಕ. ಆದರೆ ಅದೇಕೆ ಮೂಢನಂಬಿಕೆಯಾಗುತ್ತದೆ? ದೇವತೆಗಳಿಗೆ ಸಸ್ಯಾಹಾರವನ್ನು ನೈವೇದ್ಯ ಮಾಡುವುದೂ ಮೂಢನಂಬಿಕೆ ಏಕಲ್ಲ? ಎಂಬ ಪ್ರಶ್ನೆಯು ವಿಚಾರವಂತರಲ್ಲಿ ಎದ್ದೇ ಏಳುತ್ತದೆ. ಅಂದರೆ ಪ್ರಾಣಿಗಳನ್ನು ದೇವತೆಗಳಿಗೆ ಬಲಿ ಕೊಡುವ ನಿರ್ದಿಷ್ಟ ಆಚರಣೆಯು ಮಾತ್ರವೇ ಮೂಢನಂಬಿಕೆ ಏಕಾಗಬೇಕು? ಎಂಬುದು ವಿಚಾರವಂತರಿಗೆ ಒಗಟಾಗಿಬಿಡುತ್ತದೆ.

   ಇದನ್ನು ಗಮನಿಸಿದಾಗ ಮಾಂಸಾಹಾರವನ್ನು ಒಪ್ಪಿಕೊಂಡೂ ಪ್ರಾಣಿ ಬಲಿಯನ್ನು ನಿಷೇಧಿಸಬೇಕು ಎನ್ನುವ ಈ ವಿದ್ಯಾವಂತರ ತಲೆಯೊಳಗೇ ಯಾವುದೋ ಮೂಢನಂಬಿಕೆ ಮನೆಮಾಡಿರುವುದು ಗೋಚರಿಸುತ್ತದೆ. ಇದಕ್ಕೂ ಕ್ರಿಶ್ಚಿಯಾನಿಟಿಯ ಪ್ರತಿಪಾದನೆಗೂ ಹೋಲಿಕೆ ಇದೆ. ಕ್ರಿಶ್ಚಿಯಾನಿಟಿಯು ಪ್ರಾಣಿ ಬಲಿಯನ್ನು ನಿಷೇಧಿಸುತ್ತದೆ. ಆದರೆ ಅದು ಮಾಂಸಾಹಾರವನ್ನು ತಿನ್ನಬಾರದೆಂದು ಹೇಳುವುದಿಲ್ಲ, ಪ್ರಾಣಿಗಳನ್ನು ವಧಿಸಬಾರದೆಂದೂ ಹೇಳುವುದಿಲ್ಲ, ಪ್ರಾಣಿ ಬಲಿ ತಪ್ಪು ಎನ್ನುತ್ತದೆ. ಆದರೆ ಕ್ರಿಶ್ಚಿಯಾನಿಟಿಗೆ ಅದು ಮೂಢನಂಬಿಕೆಯಲ್ಲ. ಅದಕ್ಕೊಂದು ಕಾರಣವಿದೆ.  ಕ್ರಿಸ್ತನ ಬಲಿದಾನಕ್ಕೂ ಮುಂಚೆ ಯೆಹೂದಿಗಳಲ್ಲಿ ಪ್ರಾಣಿಗಳ ಬಲಿದಾನವು ಪ್ರಚಲಿತದಲ್ಲಿತ್ತು. ಆದರೆ ಆ ಘಟನೆಯ ನಂತರ ಕ್ರೈಸ್ತರು ಅದನ್ನು ನಿಲ್ಲಿಸಿಬಿಟ್ಟರು. ಏಕೆಂದರೆ ಕ್ರಿಸ್ತನ ಬಲಿದಾನದಲ್ಲಿ ಮನುಷ್ಯರು ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡಾಯಿತು. ಅಷ್ಟರ ನಂತರವೂ ಯಾರಾದರೂ ಪ್ರಾಣಿ ಬಲಿಯನ್ನು ನೀಡುತ್ತಾರೆ ಎಂದರೆ ಅವರು ಕ್ರಿಸ್ತನ ಬಲಿದಾನವನ್ನು ಒಪ್ಪುವುದಿಲ್ಲ ಎಂದಂತೇ. ಅದೊಂದು ಪಾಪದ ಕೆಲಸವೇ ಸೈ. ಪ್ರಾಣಿ ಬಲಿಯನ್ನು ನಿಷೇಧಿಸಬೇಕೆಂಬ ಆಧುನಿಕ ವಿಚಾರವಂತರ ಕಳಕಳಿಯ ಹಿಂದೆ  ಕ್ರಿಶ್ಚಿಯಾನಿಟಿಯ ಪ್ರತಿಪಾದನೆ ಕೆಲಸ ಮಾಡಿರಬಹುದೆ?

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: