ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 25: ಹಿಂದೂ ಧರ್ಮ ಇಲ್ಲದಿದ್ದರೆ ಬಹುಸಂಖ್ಯಾತರು ಯಾರು?

ಪ್ರೊ. ರಾಜಾರಾಮ ಹೆಗಡೆ

ಇತ್ತೀಚೆಗೆ ಲಿಂಗಾಯತ ಮಠಾಧೀಶರೊಬ್ಬರು  ‘ಹಿಂದೂ ಧರ್ಮ ಇಲ್ಲ ಏಕೆಂದರೆ ಹಿಂದೂಗಳು ಸಾವಿರಾರು ದೇವತೆಗಳನ್ನು ಪೂಜಿಸುತ್ತಾರೆ, ಹಾಗಾಗಿ ವೀರಶೈವರು ಹಿಂದೂಗಳಲ್ಲ, ವೀರಶೈವರು ಒಬ್ಬನೇ ದೇವತೆಯನ್ನು ಪೂಜಿಸುತ್ತಾರೆ ಹಾಗಾಗಿ ಅವರದು ಪ್ರತ್ಯೇಕ ಧರ್ಮ’ ಎಂಬ ಹೇಳಿಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ ಮಠಾಧೀಶರೊಬ್ಬರು ‘ಹಿಂದೂಗಳು ಪೂಜಿಸುವ ಶಿವ ಹಾಗೂ ಲಿಂಗಾಯತರ ಶಿವ ಒಂದೇ ಆಗಿರುವುದರಿಂದ ಅವರೂ ಹಿಂದೂ ಧರ್ಮಕ್ಕೆ ಸೇರಿದ್ದಾರೆ’ ಎಂದರು. ಇವರೆಲ್ಲ ದೇವತೆಗಳನ್ನು ಹಾಗೂ ಧರ್ಮವನ್ನು ಸಮೀಕರಿಸುತ್ತ ತಮ್ಮ ವಾದವನ್ನು ಮಂಡಿಸುತ್ತಿರುವುದು ಕುತೂಹಲಕಾರಿಯಾಗಿದೆ. ನಮ್ಮ ಇತಿಹಾಸ ಪುರಾಣಾದಿಗಳಲ್ಲಿ ಧರ್ಮದ ಕುರಿತು ಎಷ್ಟೊಂದು ಜಿಜ್ಞಾಸೆಗಳಿವೆಯಾದರೂ ಅದರ ನಿರ್ಣಯಕ್ಕೆ ದೇವತೆಗಳನ್ನು ಯಾರೂ ಕರೆದು ತಂದಿಲ್ಲ. ಹಾಗಾದರೆ ನಮ್ಮ ಮಠಾಧೀಶರುಗಳೆಲ್ಲ ನಡೆಸುತ್ತಿರುವ ಚರ್ಚೆ  ಏನು?

  ನಾವು ಧರ್ಮ ಎಂಬ ಶಬ್ದವನ್ನು ಇಂಗ್ಲೀಷಿನ ರಿಲಿಜನ್ ಎಂಬ ಶಬ್ದದ ಭಾಷಾಂತರವಾಗಿ ಬಳಸುತ್ತೇವೆ. ಜ್ಯೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳು ಮಾತ್ರವೇ ರಿಲಿಜನ್ನುಗಳು. ಅವರಿಗೆ ಈ ಪ್ರಪಂಚವನ್ನು ಹಾಗೂ ಮನುಷ್ಯರನ್ನು ಸೃಷ್ಟಿಸಿದ ತಂತಮ್ಮ ದೇವನು ಒಬ್ಬನೇ ಸತ್ಯ. ಅವನ ಆಜ್ಞೆಯನ್ನು ಉಲ್ಲಂಘಿಸಿದ ಪಾಪಕ್ಕಾಗಿ ಅವನಿಂದ ಅಭಿಶಪ್ತರಾಗಿ ಮನುಷ್ಯರೆಲ್ಲ ಅವನ ಲೋಕದಿಂದ ಭೂಮಿಗೆ ಬಿದ್ದರು, ಇಂಥ ಮನುಷ್ಯರು ತಮ್ಮ ಪಾಪವನ್ನು ಕಳೆದುಕೊಂಡು ಮರಳಿ ದೇವನ ಲೋಕವನ್ನು ಸೇರುವ ಮಾರ್ಗವೇ ರಿಲಿಜನ್ನು. ಈ ಸಂಗತಿಯನ್ನು ಸತ್ಯದೇವನು ಸ್ವತಃ ಆಯಾ ರಿಲಿಜನ್ನಿನ ಒಬ್ಬ ಪ್ರವಾದಿಗೆ ತಿಳಿಸಿದ್ದಾನೆ ಹಾಗೂ ಅದನ್ನಾಧರಿಸಿ ಅವರ ಪವಿತ್ರ ಗ್ರಂಥ ರೂಪುಗೊಂಡಿದೆ. ಈ ಗ್ರಂಥಗಳ ವಾಕ್ಯಗಳು ಆಯಾ ರಿಲಿಜನ್ನಿನ ಅನುಯಾಯಿಗಳ ಕ್ರಿಯೆಗಳಿಗೆ ಆಧಾರವಾಗಿರುತ್ತವೆ.

  ಭಾರತಿಯರ ವಿಧಿಆಚರಣೆಗಳನ್ನು, ಪುರಾಣಗಳನ್ನು ನೋಡಿದ ಪಾಶ್ಚಾತ್ಯರು ಇವೆಲ್ಲ ಹಿಂದೂ ರಿಲಿಜನ್ನು ಎಂಬುದಾಗಿ ಕರೆದರು. ಆದರೆ ಇವರಿಗೆ ಸತ್ಯದೇವ, ಪ್ರವಾದಿ, ದೇವವಾಣಿ, ಪವಿತ್ರ ಗ್ರಂಥ, ಇತ್ಯಾದಿ ಕಲ್ಪನೆಗಳೇ ಇಲ್ಲ ಎಂಬುದನ್ನೂ ಕಂಡುಕೊಂಡರು. ಹಾಗಾಗಿ ಈ ರಿಲಿಜನ್ನು ಭ್ರಷ್ಟಗೊಂಡಿದೆ ಎಂದು ತೀರ್ಮಾನಿಸಿ ಇದು ಸುಧಾರಣೆಗೊಳಪಡತಕ್ಕದ್ದು ಎಂದು ನಿರ್ಣಯಿಸಿದರು. ಆದರೆ ರಿಲಿಜನ್ನನ್ನು ಮನಸ್ಸಿನಲ್ಲಿಟ್ಟುಕೊಂಡು ಹಿಂದೂ ಧರ್ಮವನ್ನು ತೋರಿಸಲು ಎಷ್ಟೇ ಕಸರತ್ತು ಮಾಡಿದರೂ ನಾವು ಸುಳ್ಳುಗಳನ್ನು ಹೇಳುತ್ತಲೇ ಇರಬೇಕಾಗುತ್ತದೆ. ಹಾಗೂ ಅದು ಈಗ ಭ್ರಷ್ಟವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

  ಈ ಎಲ್ಲ ಗೊಂದಲಗಳಿಗೆ ಕಳಶವಿಟ್ಟ ಹಾಗೆ ರಿಲಿಜನ್ ಎಂಬ ಶಬ್ದವನ್ನು ಅದಕ್ಕೆ ಅರ್ಥಾರ್ಥ ಸಂಬಂಧವಿಲ್ಲದ ಧರ್ಮ ಎಂಬ ಶಬ್ದದಿಂದ ಭಾಷಾಂತರಿಸಿಕೊಂಡಿದ್ದೇವೆ. ನಮ್ಮ ಮಠಾಧೀಶರುಗಳೆಲ್ಲ ಧರ್ಮ ಎಂದು ಯಾವುದರ ಕುರಿತು ಚರ್ಚೆ ನಡೆಸಿದ್ದಾರೋ ಅದು ರಿಲಿಜನ್ನಿನ ಕನ್ನಡ ಭಾಷಾಂತರವೇ ಹೊರತೂ ಭಾರತೀಯ ಅರ್ಥದಲ್ಲಿ ಧರ್ಮವಲ್ಲ. ಹಾಗಾಗೇ ಅವರು ದೇವತೆಗಳ ಕುರಿತು ಜಿಜ್ಞಾಸೆ ನಡೆಸಿದ್ದಾರೆ. ರಿಲಿಜನ್ನಿಗೆ ಏಕದೇವನು ನಿರ್ಣಾಯಕ. ಅಂದರೆ, ಎರಡು ಸತ್ಯದೇವರನ್ನು ಇಟ್ಟುಕೊಂಡು ಒಂದೇ ರಿಲಿಜನ್ನು ಇರಲು ಹೇಗೆ ಸಾಧ್ಯವೇ ಇಲ್ಲವೊ, ಹಾಗೇ ಒಂದೇ ದೇವನನ್ನು ಇಟ್ಟುಕೊಂಡು ಎರಡು ಸತ್ಯವಾದ ರಿಲಿಜನ್ನುಗಳು ಇರಲೂ ಸಾಧ್ಯವೇ ಇಲ್ಲ. ಈ ಮಜಕೂರುಗಳೆಲ್ಲ ಹಿಂದೂಗಳಿಗೆ ಅರ್ಥವಾಗುವುದಂತೂ ದೂರದ ಮಾತು. ಒಂದೇ ಶಿವನನ್ನೇ ಪೂಜಿಸುವವರು ನಾವು ಬೇರೆ ರಿಲಿಜನ್ನು, ಅವರು ಬೇರೆ ರಿಲಿಜನ್ನು ಎನ್ನುವುದು ಸಾಧ್ಯವಿಲ್ಲ. ಹೋಗಲಿ, ಶಿವನನ್ನು ಪೂಜಿಸುವವರೆಲ್ಲರೂ ಒಂದೇ ರಿಲಿಜನ್ನಿಗೆ ಸೇರಿದ್ದಾರೆ ಎಂದಾದರೂ ಹೇಳಬಹುದೆ? ಶಿವವಾಣಿಯನ್ನು ಪಡೆದ ಶೈವರ ಏಕಮೇವ ಪ್ರವಾದಿಯನ್ನು ಯಾರಾದರೂ ಹೆಸರಿಸಬಲ್ಲರೆ? ಅವರ ಏಕಮೇವ ಪವಿತ್ರಗ್ರಂಥ ಯಾವುದು? ಸಮಸ್ತ ಶೈವರಿಗೆ ಏಕರೂಪದಲ್ಲಿ ಅನ್ವಯವಾಗಬಲ್ಲ ನೀತಿ ನಿರ್ದೇಶನಗಳಿವೆಯೆ? ಶೈವರೆಲ್ಲ ಪಾಪ ಮಾಡಿ ಶಿವಲೋಕದಿಂದ ಭೂಮಿಗೆ ಬಿದ್ದಿದ್ದಾರೆ ಹಾಗೂ ಮತ್ತೆ ಶಿವನನ್ನು ಸೇರುವ ಮಾರ್ಗವೇ ಶೈವಧರ್ಮ ಎಂಬುದಾಗಿ ಇವರಲ್ಲಿ ಯಾರಾದರೂ ಪ್ರತಿಪಾದನೆ ಮಾಡಲು ಸಾಧ್ಯವೆ?

  ನಮ್ಮ ಮಠಾಧೀಶರುಗಳಿಗೇ ತಮ್ಮ ಸಂಪ್ರದಾಯಗಳನ್ನು ರಿಲಿಜನ್ ಎಂದು  ಕರೆದುಕೊಂಡರೆ ಏನರ್ಥ ಹೊರಡುತ್ತದೆ ಎಂಬುದು ಗೊತ್ತಾಗದ ಮೇಲೆ ಸಾಮಾನ್ಯರ ಪಾಡನ್ನು ಊಹಿಸಿಕೊಳ್ಳಿ. ಏಕೆ ಧರ್ಮ ಜಿಜ್ಞಾಸೆಗೆ ಬದಲಾಗಿ ರಿಲಿಜನ್ನಿನ ಜಿಜ್ಞಾಸೆ ನಮ್ಮ ಪರಂಪರೆಗಳಿಗೆ ಮುಖ್ಯವೆನ್ನಿಸಿದೆ? ಇದಕ್ಕೆ ಒಂದೇ ಉತ್ತರವೆಂದರೆ ಧರ್ಮ ಜಿಜ್ಞಾಸೆಗಿಂತ ಈ ಜಿಜ್ಞಾಸೆಯು ನಮ್ಮ ಆಧುನಿಕ ಸೆಕ್ಯುಲರ್ ಪ್ರಭುತ್ವದೊಳಗೆ ಪ್ರಯೋಜನಕಾರಿಯಾಗಿದೆ. ಸೆಕ್ಯುಲರ್ ಪ್ರಭುತ್ವವು ಭಾರತದ ತುಂಬೆಲ್ಲ ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಜೈನ, ಸಿಖ್ ಎಂಬಿತ್ಯಾದಿ ಬೇರೆ ಬೇರೆ ರಿಲಿಜನ್ನುಗಳಿವೆ, ಅವುಗಳು ಒಂದನ್ನೊಂದು ಕಬಳಿಸಲು ನೋಡುತ್ತಿವೆ, ಅವುಗಳೊಳಗೆ ಹಿಂದೂಗಳು ಆಘಾತಕಾರಿಯಗುವಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ಹಾಗಾಗಿ ಅವರು ಉಳಿದ ರಿಲಿಜನ್ನುಗಳಿಗೆ ಅಪಾಯಕಾರಿಯಗಬಹುದು ಎಂಬ ತಿಳುವಳಿಕೆಯನ್ನಾಧರಿಸಿ ರೂಪುಗೊಂಡಿದೆ. ಈ ಅಪಾಯದಿಂದ ಅಲ್ಪ ಸಂಖ್ಯಾತ ರಿಲಿಜನ್ನುಗಳ ಹಿತವನ್ನು ಕಾಯುವ ಸಲುವಾಗಿ ಅವರುಗಳಿಗೆ ಅಲ್ಪ ಸಂಖ್ಯಾತ ಸ್ಥಾನ ಮಾನವನ್ನು ನೀಡಿ ಪ್ರಭುತ್ವದ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ಇದರ ಪರಿಣಾಮವಾಗಿ ಅಲ್ಪ ಸಂಖ್ಯಾತರಾಗಲು ಪೈಪೋಟಿ ನಡೆದಿದೆ.

  ಭಾರತದಲ್ಲಿ ಹಿಂದೂಯಿಸಂ ಎನ್ನುವುದಿಲ್ಲ ಆದರೆ ಇತರೆ ದೇಶೀ ರಿಲಿಜನ್ನುಗಳಿವೆ ಎಂದುಕೊಂಡು ಸರ್ಕಾರೀ ನೀತಿಗಳನ್ನು ರೂಪಿಸಲು ಎಷ್ಟೇ ಕಸರತ್ತು ಮಾಡಿದರೂ ಕೂಡ ಕೊನೆಯಿರದ ವಿವಾದಗಳೇ ಸೃಷ್ಟಿಯಾಗುತ್ತವೆ. ಅದನ್ನು ಬಿಟ್ಟು ಹಿಂದೂಗಳು ಎಂದು ಕರೆಯುವ ಜನರ ಸಂಸ್ಕೃತಿಯ ಸ್ವರೂಪ ಹಾಗೂ ಮಹತ್ವವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೇರೆ ಮಾರ್ಗಗಳನ್ನು ಕಂಡುಹಿಡಿಯುವುದು ನಾವೀಗ ಮಾಡಬೇಕಾಗಿರುವ ಕೆಲಸ. ಇದಕ್ಕೆ ಸಂಬಂಧಿಸಿ ಬಾಲಗಂಗಾಧರ ಎಂಬ ವಿದ್ವಾಂಸರು ಹೇಳುವುದೇನೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ ಒಂದೇ ಅಲ್ಲ ಶೈವಿಸಂ, ಜೈನಿಸಂ, ಬುದ್ಧಿಸಂ ಇತ್ಯಾದಿ ರಿಲಿಜನ್ನುಗಳೂ ಇಲ್ಲ. ಎಕೆಂದರೆ ಈ ಶೈವಿಸಂ, ಜೈನಿಸಂ ಇತ್ಯಾದಿಗಳು ಕೂಡ ರಿಲಿಜನ್ನಿನ ಲಕ್ಷಣಗಳನ್ನು ಹೊಂದಿಲ್ಲ. ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳನ್ನು ಬಿಟ್ಟು ಭಾರತದಲ್ಲಿ ಬೇರೆ ರಿಲಿಜನ್ನುಗಳಿಲ್ಲ. ಮೇಲಿನವೆಲ್ಲ ಬೇರೆ ಬೇರೆ ಸಂಪ್ರದಾಯಗಳು. ಹಾಗಂತ ಅವುಗಳನ್ನು ಪರಸ್ಪರ ಪ್ರತ್ಯೇಕಿಸಲಾಗದು. ಅವು ಒಂದೇ ಪಾರಮಾರ್ಥಿಕ ಸತ್ಯವನ್ನು ಹುಡುಕಾಡುತ್ತಿರುವ ಹಲವು ಮಾರ್ಗಗಳು ಎಂಬುದಾಗಿ ತಮ್ಮನ್ನು ಗುರುತಿಸಿಕೊಂಡಿವೆ. ಅವುಗಳಿಗೆಲ್ಲ ಅಧ್ಯಾತ್ಮದ ಸಾಮಾನ್ಯ ತಳಪಾಯವಿದೆ ಹಾಗೂ ಸಾಮಾನ್ಯ ಉಪಾಸನೆಯ ವಿಧಾನಗಳು ಹಾಗೂ ದೇವತೆಗಳು ಕೂಡ ಇವೆ. ಹಾಗಾಗಿ ಹಿಂದೂ ರಿಲಿಜನ್ನು ಇಲ್ಲದಿದ್ದರೂ ಹಿಂದೂ ಸಂಸ್ಕೃತಿಯೆಂಬುದೊಂದನ್ನು ಗುರುತಿಸಲು ಸಾಧ್ಯ. ಯಾವುದಾದರೂ ಸಂಪ್ರದಾಯಗಳ ವಕ್ತಾರರು ತಾವು ಈ ಸಂಸ್ಕೃತಿಗೆ ಸೇರಿಲ್ಲ ಎಂದು ಪ್ರತಿಪಾದಿಸಿದರೆ ಅವರು ತಮ್ಮ ಪರಂಪರೆಯನ್ನೇ ನಿರಾಕರಿಸಿದಂತೇ.

 ರಿಲಿಜನ್ನನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದೆಡೆ ಹಿಂದೂ ಧರ್ಮ ಇಲ್ಲ ಎನ್ನುತ್ತ ಮತ್ತೊಂದೆಡೆ ಲಿಂಗಾಯತವು ಅಲ್ಪಸಂಖ್ಯಾತ ಧರ್ಮ ಎಂದು ಕರೆದುಕೊಳ್ಳುವುದು ತಾರ್ಕಿಕವಾಗಿ ಸಾಧ್ಯವಿಲ್ಲ: ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತ ಧರ್ಮ ಎಂಬುದಾಗಿ ನಂಬಿರುವುದರಿಂದ ಅಲ್ಪ ಸಂಖ್ಯಾತರ ರಕ್ಷಣೆಯ ನೀತಿ ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ಬಹುಸಂಖ್ಯಾತರೇ ಇಲ್ಲ ಎಂದಮೇಲೆ ಅಲ್ಪ ಸಂಖ್ಯಾತರು ಯಾರು? ಹಿಂದೂಗಳಲ್ಲಿರುವ ಪ್ರತೀ ಸಂಪ್ರದಾಯಗಳೂ ಕೂಡ ತಾವೂ ಪ್ರತ್ಯೇಕ ರಿಲಿಜನ್ನುಗಳು ಎಂದು ಪ್ರತಿಪಾದಿಸಲು ತೊಡಗಿದಲ್ಲಿ ಅದು ಸೆಕ್ಯುಲರ್ ಪ್ರಭುತ್ವಕ್ಕೆ ಹೊಸ ತಲೆನೋವುಗಳನ್ನು ಸೃಷ್ಟಿಸುತ್ತದೆ. ಏಕೆಂದರೆ ಇವನ್ನೆಲ್ಲ ಅಲ್ಪಸಂಖ್ಯಾತರು ಎಂದು ಮಾನ್ಯ ಮಾಡುತ್ತ ಹೋದಲ್ಲಿ ಕೊನೆಗೆ ಮುಸ್ಲಿಮರೇ ಭಾರತದಲ್ಲಿ ಬಹುಸಂಖ್ಯಾತರು ಎಂಬ ಸತ್ಯವನ್ನು ಕಂಡುಕೊಳ್ಳುವ ದಿನಗಳೂ ಬರಬಹುದು. ನಮ್ಮ ಪ್ರಭುತ್ವಕ್ಕೆ ಇಂಥ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕೋ  ಇಲ್ಲ, ಸಮುದಾಯಗಳ ನಡುವೆ ಪೈಪೋಟಿ ಹಾಗೂ ವೈರತ್ವಕ್ಕೆ ಕಾರಣವಾಗಬಲ್ಲ ಈ ಸೆಕ್ಯುಲರ್ ನೀತಿಯಿಂದಲೇ ಕಳಚಿಕೊಳ್ಳುವುದು ಬೇಕೋ?

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: