ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 26ಸಾಹಿತಿಗಳು ಮತ್ತು ಸಮಾಜದ ಕುರಿತ ಜ್ಞಾನ

ಪ್ರೊ. ರಾಜಾರಾಮ ಹೆಗಡೆ

   ನನ್ನ ಅಣ್ಣ ಒಮ್ಮೆ ನನ್ನಲ್ಲಿ ಕುತೂಹಲದಿಂದ ವಿಚಾರಿಸಿದ್ದರು. ‘ಅಲ್ಲ, ಈ ಜ್ಞಾನಪೀಠ ಪ್ರಶಸ್ತಿ ಯಾವಾಗಲೂ ಸಾಹಿತಿಗಳಿಗೇ ಬರುತ್ತದೆಯಲ್ಲ. ಅಂದರೆ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂದು ಅದನ್ನು ನೀಡುವವರ ಅಭಿಪ್ರಾಯವೆ?’. ನಾನು ಸಮಜಾಯಷಿ ನೀಡಿದ್ದೆ, ‘ಹಾಗಲ್ಲ, ಮೂಲತಃ ಅದು ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಪ್ರಶಸ್ತಿಗೆ ಒಂದು ಹೆಸರಿಡಬೇಕಲ್ಲ. ಜ್ಞಾನಪೀಠ ಅಂತ ಹೆಸರಿಟ್ಟಿದ್ದಾರೆ. ಆ ಪ್ರಶಸ್ತಿಯನ್ನು ಪಡೆದವರನ್ನು ಜ್ಞಾನಪೀಠ ಪುರಸ್ಕೃತರು ಎನ್ನುತ್ತಾರೆಯೇ ವಿನಃ ಜ್ಞಾನಿಗಳು ಎಂದೇನೂ ಕರೆಯುವುದಿಲ್ಲವಲ್ಲ?’. ನನ್ನ ಉತ್ತರ ಸರಿ ಎಂದೇ ನನಗೆ ಇನ್ನೂ ಅನಿಸುತ್ತದೆ. ಆದರೆ ಕೆಲವೊಮ್ಮೆ ನನ್ನ ಅಣ್ಣ ಹೇಳಿದ ಹಾಗೇ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂಬುದಾಗಿ ಕೆಲವು   ಸಾಹಿತಿಗಳೂ ಭಾವಿಸಿಕೊಂಡಿದ್ದಾರೇನೋ ಎಂದೂ ಅನ್ನಿಸುತ್ತದೆ. ಅದು ನನ್ನ ಅನುಭವಕ್ಕೆ ಬಂದದ್ದು ಇತ್ತೀಚಿನ ವರ್ಷಗಳಲ್ಲಿ. ನಾವು ಮಾಡುತ್ತಿರುವ ಸಮಾಜಶಾಸ್ತ್ರೀಯ ಸಂಶೋಧನೆಗಳನ್ನು ನಿಲ್ಲಿಸಬೇಕೆಂದು ಈ ಸಾಹಿತಿಗಳು ಸರ್ಕಾರದ ಮೇಲೆ ಒತ್ತಡ ಹೇರಿದರು. ನಾವು ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಏನೇನು ಸಂಶೋಧನಾ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಗೂಢಚರ್ಯೆಯನ್ನು ನಡೆಸಿ, ನಮ್ಮನ್ನು ನಿಯಂತ್ರಿಸಿ ನಾವು ಏನನ್ನು ಹೇಳಬೇಕೆಂದು ಅಪ್ಪಣೆ ಕೊಡಿಸುವ ಮಟ್ಟಕ್ಕೆ ಕೂಡ ಹೋದರು. ಇವರಿಗೆಲ್ಲ ತಾವು ಎಲ್ಲಾ ಕ್ಷೇತ್ರಗಳಲ್ಲೂ ಜ್ಞಾನಿಗಳೆಂಬ ಭ್ರಮೆಯು ನೆತ್ತಿಗೇರಿರದಿದ್ದರೆ ಇಷ್ಟು ಅಸಭ್ಯವಾಗಿ ವರ್ತಿಸಲು ಕಾರಣಗಳಿರಲಿಲ್ಲ.

  ಕಳೆದ ಕೆಲವು ವರ್ಷಗಳಿಂದ ನನಗೆ ಇದು ಅಭ್ಯಾಸವಾಗಿ ಬಿಟ್ಟಿದೆ. ಹಾಗೇ ಕೆಲವು ಹೇಳಿಕೆಗಳು ಕೂಡಾ. ‘ ಈ ರಾಜಾರಾಮ ಹೆಗಡೆಯವರು ಬಾಲಗಂಗಾಧರರನ್ನು ಸೇರಿ ಹಾಳಾಗಿ ಹೋದರು.’ ಎಂಬ ತೀರ್ಪನ್ನು ಇವರು ಸುಪ್ರೀಂ ಕೋರ್ಟಿನ ಜಜ್ಜುಗಳಿಗಿಂತ ಆತ್ಮ ವಿಶ್ವಾಸಪೂರ್ವಕವಾಗಿ ಕೊಡಬಲ್ಲರು. ಹಾಗಂತ ಇಂಥ ತೀರ್ಮಾನವನ್ನು ಕೊಡುವವರಲ್ಲಿ ಯಾರೂ ಬಾಲಗಂಗಾಧರರನ್ನು ಓದಿಯೇ ಇಲ್ಲ, ಓದಿದರೂ ಚೂರುಪಾರು ಓದಿರುತ್ತಾರೆ. ಸಮಾಜ ಶಾಸ್ತ್ರಜ್ಞರ ಕುರಿತು ಇಂಥ ಹೇಳಿಕೆಗಳನ್ನು ಉದುರಿಸಲಿಕ್ಕೆ ಅವರ ಕೃತಿಗಳನ್ನು ಓದುವ ಅಗತ್ಯವಿಲ್ಲ, ಬದಲಾಗಿ ನೀವು ಒಂದಷ್ಟು ಕಥೆ ಕವನಗಳನ್ನು ಅಥವಾ ಅವುಗಳ ಕುರಿತ ವಿಮರ್ಶಾ ಲೇಖನಗಳನ್ನು ಬರೆದಿದ್ದರೆ ಸಾಕು. ಈ ಧೋರಣೆ ಎಲ್ಲಿಂದ ಹುಟ್ಟುತ್ತದೆ? ಅದೇ ರೀತಿ ‘ ನಾನು ಬಾಲಗಂಗಾಧರರ ವಾದವನ್ನು ಒಪ್ಪುವುದಿಲ್ಲ.’ ‘ಬಾಲಗಂಗಾಧರರ ವಾದಗಳ ಕುರಿತು ನನಗೆ ನನ್ನದೇ ಅನುಮಾನಗಳಿವೆ’, ಎಂಬುದು ಮತ್ತೊಂದು ಪ್ರಕಾರದ ವರಸೆ. ಇವರೂ ಕೂಡ ಬಾಲಗಂಗಾಧರರನ್ನು ಓದಬೇಕೆಂದಿಲ್ಲ. ‘ಏನು ಅನುಮಾನಗಳಿವೆ?’ ಎಂದು ಮರು ಪ್ರಶ್ನಿಸಿದರೆ ಚಾಲ್ತಿಯಲ್ಲಿರುವ ಐಡಿಯಾಲಜಿಗಳ ಕ್ಲೀಷೆಗಳನ್ನು ತಿಳಿಸುತ್ತಿರುತ್ತಾರೆ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ವಾಕ್ಯದಲ್ಲಿ ಮೊದಲನೆಯ ಶಬ್ದವನ್ನು ಇವರೆಲ್ಲ ಗಂಭೀರವಾಗಿಯೇ ಅಳವಡಿಸಿಕೊಂಡಂತಿದೆ.

 ಇನ್ನು ನಮ್ಮ ಸಂಶೋಧನೆಯನ್ನು ವಿರೋಧಿಸುವ  ಹಾಗೂ ನಿಲ್ಲಿಸುವ ಕುರಿತು ಕೂಡ ಇವರಲ್ಲಿ ಕೆಲವರು ಕಾರ್ಯಪೃವೃತ್ತರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ನನ್ನ ಸುಪರಿಚಿತರೊಬ್ಬರನ್ನು ನಮ್ಮ ಸಂಶೋಧನಾ ಕೇಂದ್ರಕ್ಕೆ ಆಹ್ವಾನಿಸಿದೆ. ‘ನನಗೆ ನಿಮ್ಮ ಜೊತೆ ಗುರುತಿಸಿಕೊಳ್ಳಲಿಕ್ಕೆ ಇಷ್ಟವಿಲ್ಲ’ ಎಂಬ ಉತ್ತರ ಬಂತು. ಅವರು ನನ್ನ ಲೇಖನಗಳನ್ನು ಹಾಡಿ ಹೊಗಳುತ್ತಿದ್ದ ವಿದ್ವಾಂಸರು. ಇವರಿಗೇನಾಯ್ತಪ್ಪ ಎಂದು ವಿಚಾರಿಸಿದರೆ ತಿಳಿದು ಬಂದದ್ದೆಂದರೆ ನಾವು ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆಗೆ ಸಾಮೀಲಾಗಿದ್ದೇವೆ ಎಂಬುದಾಗಿ ಅವರ ಅಭಿಪ್ರಾಯ. ಇಂಥವರು ನಕ್ಸಲರ ಜೊತೆಗೆ ಹೆಮ್ಮೆಯಿಂದ ಗುರುತಿಸಿಕೊಳ್ಳಬಲ್ಲರು. ಕಾಂಗ್ರೆಸ್ಸಿನ ಪಕ್ಷ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಲ್ಲವರು. ತಮಗಿಷ್ಟವಾದ ಕೋಮು/ಜಾತಿ ಸಭೆಗಳಲ್ಲಿ ನೀರಿನಲ್ಲಿ ಮೀನುಗಳಿರುವಂತೇ ಇರಬಲ್ಲರು. ಅವರ ಪರವಾಗಿ ಲಾಬಿ ಕೂಡ ಮಾಡಬಲ್ಲರು. ಬಹುಶಃ ನಮ್ಮ ಕುರಿತು ಸಮಸ್ಯೆ ಅಲ್ಲಿಂದಲೇ ಹುಟ್ಟುತ್ತದೆಯೇ ವಿನಃ ನಮ್ಮ ಸಂಶೋಧನೆಗೂ ಅದಕ್ಕೂ ಏನೂ ಸಂಬಂಧವಿಲ್ಲ. ಅಂದರೆ ನಮ್ಮ ಸಂಶೋಧನೆಯ ಕುರಿತು ಪ್ರತಿಕ್ರಿಯಿಸಲಿಕ್ಕೆ ತಮ್ಮ ರಾಜಕೀಯ ನಿಲುವುಗಳು ಸಾಕು ಎಂಬ ಧೋರಣೆಯನ್ನು ಇಂಥ ಅನೇಕ ಸಾಹಿತಿಗಳು ಹಾಗೂ ವಿಮರ್ಶಕರಲ್ಲಿ ಕಂಡಿದ್ದೇನೆ. ಹಾಗಾಗಿಯೇ ‘ಇವರ ವಾದವನ್ನು ನಾನು ಖಂಡಿಸುತ್ತೇನೆ’ ಎಂಬ ಹೇಳಿಕೆಗಳು ನಿಜವಾಗಿಯೂ ವಾದಕ್ಕೆ ಸಂಬಂಧಿಸಿರುವುದಿಲ್ಲ, ಅವರು ನಮ್ಮದೆಂದು ಭ್ರಮಿಸಿಕೊಂಡ ರಾಜಕೀಯ ನಿಲುವಿಗೆ ಸಂಬಂಧಿಸಿವೆ. ಅಂದರೆ ಇವರೆಲ್ಲ ರಾಜಕೀಯ ಘೋಷಣೆಗಳನ್ನೇ ಚಿಂತನೆ ಎಂದು ತಪ್ಪು ತಿಳಿದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ನಿಲುವುಗಳನ್ನು ಪ್ರಚಾರ ಮಾಡುವುದೇ ಸಂಶೋಧನೆ ಎಂದೂ ತಿಳಿದಂತಿದೆ.

   ಇವರಿಗೆ ಕಥೆ, ಕಾವ್ಯ ಹಾಗೂ ಕಾದಂಬರಿಗಳನ್ನು ಬರೆಯುವ ಪ್ರತಿಭೆ ಇರಬಹುದು. ಕಥೆ ಕಾವ್ಯಗಳನ್ನು ರಚಿಸುವವನೊಬ್ಬ ಕಲಾಕಾರ. ಕಲಾಕಾರನಿಗೆ ತನ್ನದೇ ಜೀವನ ದರ್ಶನಗಳು ಇರಬಹುದು ಹಾಗೂ ಅದನ್ನು ಅವನು ತನ್ನ ಕಾವ್ಯ ಕಥೆಗಳಲ್ಲಿ ವ್ಯಕ್ತಪಡಿಸಿರಬಹುದು. ಆ ಕಾರಣದಿಂದ ಈ ಸಮಾಜದ ಕುರಿತು ಸಮಾಜ ವಿಜ್ಞಾನಿಗಳಿಗಿಂತ ಜಾಸ್ತಿ ತಿಳುವಳಿಕೆ ಇರುತ್ತದೆ ಎಂಬುದು ಅಸಂಬದ್ಧ. ಏಕೆಂದರೆ ಸಮಾಜದ ಕುರಿತ ಅವರ ಚಿತ್ರಣಗಳು ಈಗಾಗಲೇ ಇರುವ  ಸಮಾಜಶಾಸ್ತ್ರೀಯ ಬರವಣಿಗೆಗಳನ್ನು ಆಧರಿಸಿರುತ್ತವೆ. ನಮ್ಮ ಕನ್ನಡದ ಅನೇಕ ಕಥೆ ಕಾದಂಬರಿಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಚಿತ್ರಣಗಳು ಹಾಗೂ ಅವುಗಳ ವಿಮರ್ಶಾ ಗಳು ಪಾಶ್ಚಾತ್ಯರು ಭಾರತೀಯ ಸಮಾಜದ ಕುರಿತು ಎಂದೋ ರೂಢಿಯಲ್ಲಿ ತಂದ ಸ್ಟೀರಿಯೋಟೈಪುಗಳನ್ನೇ ಆಧರಿಸಿವೆಯೇ ಹೊರತೂ ಸ್ವತಃ ಲೇಖಕರದೇ ಅನುಭವವನ್ನೂ ಆಧರಿಸಿಲ್ಲ, ಅಥವಾ ಇತ್ತೀಚಿನ ಸಮಾಜಶಾಸ್ತ್ರೀಯ ವಾಗ್ವಾದಗಳನ್ನೂ ಒಳಗೊಳ್ಳುವುದಿಲ್ಲ  ಎಂಬುದನ್ನು ನಿದರ್ಶಿಸಿ ತೋರಿಸಬಹುದು.

  ಅಂದರೆ ವೈಜ್ಞಾನಿಕ ಸಂಶೋಧನೆಯ ಕ್ಷೇತ್ರಕ್ಕೆ ಬಂದಾಗ ಸಾಹಿತಿಗಳು ಹಾಗೂ ವಿಮರ್ಶಕರು ಸ್ವೀಕರಿಸುವ ಪಕ್ಷದಲ್ಲಿರುತ್ತಾರೆ. ಅವರಿಗೆ ಯಾವುದು ಸ್ವೀಕಾರಾರ್ಹ ಯಾವುದು ಅಲ್ಲ ಎಂಬುದನ್ನು ಒರೆಗೆ ಹಚ್ಚುವ ಪರಿಣತಿ ಕೂಡ ಇರುವುದಿಲ್ಲ. ಕಳೆದ ಕೆಲವು ದಶಕಗಳಿಂದೀಚೆಗೆ ಸಾಹಿತ್ಯ ಕ್ಷೇತ್ರವು ರಾಜಕೀಯದಲ್ಲಿ ಸಕ್ರಿಯವಾಗಿದೆ. ವಿಭಿನ್ನ ಸಾಮಾಜಿಕ ಹೋರಾಟಗಳ ಮುಖವಾಣಿಯಾಗಿದೆ. ಹಾಗಾಗಿ ವಿಭಿನ್ನ ಹೋರಾಟಗಳಿಗೆ ಆಧಾರವಾದ ಐಡಿಯಾಲಜಿಗಳ ಪ್ರಚಾರವೇ ಇಂಥ ಸಾಹಿತ್ಯ ಚಳವಳಿಗಳ ಗುರಿಯಾಗಿದೆ. ಹೀಗಿರುವಾಗ ತಮತಮಗೆ ಸೂಕ್ತವಾದ ಸಾಮಾಜಿಕ ಸಿದ್ಧಾಂತಗಳನ್ನು ಅವರು ಸತ್ಯವೆಂಬುದಾಗಿ ಆಯ್ದುಕೊಳ್ಳುವುದು ಸಹಜ. ಇಂಥ ಸಿದ್ಧಾಂತಗಳನ್ನು ಪ್ರಶ್ನಿಸುವ ಕೆಲಸವು ಸಮಾಜಶಾಸ್ತ್ರದ ಸಂಶೋಧನೆಯಲ್ಲಿ ನಡೆಯುತ್ತದೆ. ಆದರೆ ತಾವು ಸ್ವೀಕರಿಸಿದ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸಮಾಜ ಶಾಸ್ತ್ರಜ್ಞರ ಮೇಲೇ ಹರಿಹಾಯುವುದು ಕೊಂಬೆಯ ತುದಿಯಲ್ಲಿ ಕುಳಿತು ಬುಡವನ್ನು ಕಡಿಯುವ ಘನಾಂದಾರಿ ಕೆಲಸದಂತಿದೆ. ಅಂದರೆ ಯಾವುದೋ ಓಬಿರಾಯನ ಕಾಲದ ವಿಚಾರಗಳನ್ನು ಸಮಾಜ ಶಾಸ್ತ್ರದಿಂದಲೇ  ಅರ್ಧಂಬರ್ಧ ಸ್ವೀಕರಿಸಿ ಇಂದಿನ ಸಮಾಜ ಶಾಸ್ತ್ರಜ್ಞರಿಗಿಂತ ಹೆಚ್ಚು ತಮಗೆ ಗೊತ್ತಿದೆ, ಎಂದು ಭಾವಿಸುವುದು ಅಹಂಕಾರವೊ, ಧಡ್ಡತನವೊ, ಮೂರ್ಖತನವೋ ತಿಳಿಯದಾಗಿದೆ.

  ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದಾಕ್ಷಣ ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಹೀಗೇ ನಡೆಯಬೇಕು ಎನ್ನುವ ಅರ್ಹತೆ ಬರುತ್ತದೆಯೆ? ಸಮಾಜ ವಿಜ್ಞಾನಿಯೊಬ್ಬನು ಭೌತಶಾಸ್ತ್ರಜ್ಞನು ಹೇಗೆ ಸಂಶೋಧನೆ ಮಾಡಬೇಕೆಂದು ಪಟ್ಟುಹಿಡಿಯಬಹುದೆ? ಅದೇ ರೀತಿ ಸಮಾಜ ವಿಜ್ಞಾನಿಗಳು ಸಾಹಿತಿಗಳಿಗೆ ಕಥೆ ಕವನಗಳನ್ನು ಹೇಗೆ ಬರೆಯಬೇಕೆಂಬುದರ ಕುರಿತು ಪಾಠ ಮಾಡಲಿಕ್ಕೆ ಸಾಧ್ಯವೆ? ಅಥವಾ ಇವರಲ್ಲಿ ಯಾರೊಬ್ಬರಾದರೂ ಬಟ್ಟೆ ನೇಯುವವ ಅಥವಾ ಚಪ್ಪಲಿ ಮಾಡುವವನೊಬ್ಬನಿಗೆ ತನ್ನ ಕೆಲಸವನ್ನು ಹೇಗೆ ಮಾಡಬೇಕೆಂದು ಪಾಠ ಮಾಡುವ ಕನಿಷ್ಠ ಅರ್ಹತೆಯನ್ನು ಪಡೆದಿದ್ದಾರೆಯೆ? ಹಾಗೆ ಅರ್ಹತೆಯನ್ನು ಪಡೆಯಬೇಕಾದರೆ ಆಯಾ ಕ್ಷೇತ್ರದಲ್ಲಿ ಪರಿಣತಿಯನ್ನೂ ಹೊಂದಿರಬೇಕು. ನಮ್ಮ ಸಂಶೋಧನೆಗೆ ಇವರಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ನಮ್ಮ ಕೆಲವು ಸಾಹಿತಿಗಳು ಹಾಗೂ ವಿಮರ್ಶಕರಿಗೆ ಇಂಥ ಸರಳ ವಿಚಾರಗಳೂ ತಲೆಗೆ ಹೋಗದಷ್ಟು ಭ್ರಮೆ ಅಡರಿಕೊಂಡಿರುವುದಂತೂ ಸತ್ಯ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: