ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 27ಹಾಲು ಬೆಳ್ಳಗೇ ಇದ್ದರೂ ಬೆಳ್ಳಗಿದ್ದುದೆಲ್ಲ ಹಾಲಲ್ಲ.

ಪ್ರೊ. ರಾಜಾರಾಮ ಹೆಗಡೆ

ಬೆಳ್ಳಗಿದ್ದುದೆಲ್ಲ ಹಾಲಲ್ಲ, ಹೊಳೆಯುವುದೆಲ್ಲ ಚಿನ್ನವಲ್ಲ ಇತ್ಯಾದಿ ಗಾದೆಗಳು ಎಲ್ಲರಿಗೂ ಗೊತ್ತು. ಇವು ಏನನ್ನು ತಿಳಿಸುತ್ತವೆಯೆಂದರೆ ಕೆಲವೊಂದು ಬಾಹ್ಯ ಲಕ್ಷಣಗಳು ಸಾಮಾನ್ಯವಾಗಿ ಕೆಲವೊಂದು ಗುಣಗಳನ್ನು ಸೂಚಿಸುತ್ತವೆಯಾದರೂ ವಾಸ್ತವವು ಅಷ್ಟರಿಂದಲೇ  ನಿರ್ಧಾರವಾಗುವುದಿಲ್ಲ. ನಾವು ಗುಣವನ್ನು ಪ್ರಮಾಣವಾಗಿಟ್ಟುಕೊಂಡು ವ್ಯವಹರಿಸಬೇಕೇ ವಿನಃ ಕೇವಲ ಬಾಹ್ಯ ಲಕ್ಷಣಗಳನ್ನಲ್ಲ. ಇಂದು ಕಾವಿ ಉಟ್ಟವರ ಕುರಿತು ಎರಡು ರೀತಿಯ ಸಮೀಕರಣಗಳು ಇವೆ. ಒಂದೆಡೆ ಇವರೆಲ್ಲ ಢೋಂಗಿ ಸನ್ಯಾಸಿಗಳು ಎಂಬ ಧೋರಣೆಯಲ್ಲಿ ವಿಚಾರವಂತ ವರ್ಗವು ಅವರನ್ನು ಹೀಗಳೆಯುವುದು ಸಾಮಾನ್ಯ. ಭಾರತೀಯ ಅಧ್ಯಾತ್ಮ ಮಾರ್ಗವು ಬಹುತೇಕವಾಗಿ ಇವರಿಗೆ ಕೇವಲ ಮೈಗಳ್ಳ ಸನ್ಯಾಸಿಗಳ ಹಾಗೂ ಪವಾಡಪುರುಷರ ವಂಚನೆಯಾಗಿ ಕಾಣಿಸುತ್ತದೆ. ಆದರೆ ಆಧುನಿಕ ವಿಚಾರವಂತರಿಗೆ ಈ ಜ್ಞಾನೋದಯವಾಗಿ ಶತಮಾನಗಳೇ ಕಳೆದರೂ ನಮ್ಮಲ್ಲಿ ಕಾವಿ ಉಡುವವರೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ ಹಾಗೂ ಅವರಿಗೆ ಭಕ್ತಿಯಿಂದ ಕಾಲಿಗೆರಗುತ್ತಿರುವವರು ಪ್ರಪಂಚದಾದ್ಯಂತ ಪಸರಿಸುತ್ತಿದ್ದಾರೆ. ಅಧ್ಯಾತ್ಮ ಸಾಧನೆ ನಡೆಸಬಯಸುವವರು ಸನ್ಯಾಸವನ್ನು ಸ್ವೀಕರಿಸಿ ತಮ್ಮ ಗಮ್ಯವನ್ನು ಹೊಂದುವ ಕ್ರಮ ಇಂದಿಗೂ ಮುಂದುವರಿದೇ ಇದೆ.

   ಹಾಗಂತ ಕಾವಿ ಉಟ್ಟವರನ್ನೆಲ್ಲ ಸನ್ಯಾಸಿಗಳೆಂದು ಅಥವಾ ಅಧ್ಯಾತ್ಮ ಸಾಧಕರೆಂದು ನಾವು ತಪ್ಪು ತಿಳಿಯಬೇಕಿಲ್ಲ. ಕಾವಿಯಲ್ಲಿ ಅಧ್ಯಾತ್ಮ ಸಾಧನೆಗಿಂತ ಪ್ರಾಪಂಚಿಕ ಸಾಧನೆಗಳು ಏನೇನಿವೆ ಎಂಬುದರ ಆವಿಷ್ಕಾರಗಳು ಕೂಡ ಸತತವಾಗಿ ನಡೆಯುತ್ತಿವೆ. ಮಠಗಳಿಗೂ ರಾಜಕೀಯಕ್ಕೂ ಹೊಸ ಸಂಬಂಧಗಳು ಪ್ರಜಾಪಪ್ರಭುತ್ವದಲ್ಲಿ ಕುದುರತೊಡಗಿವೆ. ಭಾರತದಲ್ಲಿ ಜಾತಿಗೊಂದು ಮಠ ಹಾಗೂ ಸ್ವಾಮಿಗಳು ಹುಟ್ಟಿಕೊಳ್ಳುತ್ತಿರುವ ಇಂದಿನ ರಾಜಕೀಯವನ್ನು ಕೂಡ ಕಡೆಗಣಿಸುವಂತಿಲ್ಲ. ಇತ್ತೀಚೆಗೆ ಇಂಥ ಸನ್ಯಾಸಿಗಳಿಗೆ ಸಂಬಂಧಿಸಿದ ಹಗರಣಗಳೂ ಕೂಡ ಕೋರ್ಟಗಳ ಮುಂದೆ ಬರುತ್ತಿವೆ. ಅಂದರೆ ಕಾವಿಯನ್ನು ಅಧ್ಯಾತ್ಮದ ಜೊತೆಗಾಗಲೀ,  ಢೋಂಗಿತನದ ಜೊತೆಗಾಗಲೀ ಕಣ್ಮುಚ್ಚಿ ಸಮೀಕರಿಸಲು ಸಾಧ್ಯವಿಲ್ಲ. ಅಂತಿಮವಾಗಿ ನಮ್ಮ ವಿವೇಚನೆಯೇ ನಿರ್ಣಾಯಕ.

  ಈ ಸಮಸ್ಯೆಯು ಆಧುನಿಕ ಕಾಲದ್ದೊಂದೇ ಅಲ್ಲ. ಪ್ರಾಚೀನ ಕಾಲದಿಂದಲೂ ಇದ್ದದ್ದು. ಬಹುಶಃ ಇದು ನಮ್ಮ ಅಧ್ಯಾತ್ಮವು ಯಾವಾಗಲೂ ಎದುರಿಸಿದ ಮನುಷ್ಯನ ಮನೋವೈಜ್ಞಾನಿಕ ಸಮಸ್ಯೆ.  ಆಯಾ ಕಾಲದ ಐತಿಹಾಸಿಕ ಸಂದರ್ಭದಲ್ಲಿ ಅದರ ಬಣ್ಣ ಬದಲಾಗುತ್ತಿರುತ್ತದೆ ಅಷ್ಟೆ, ಭಾರತೀಯ ಇತಿಹಾಸ ಪುರಾಣಾದಿಗಳು ಈ ಸೂಕ್ಷ್ಮಗಳನ್ನು ತಮ್ಮ ಶ್ರೋತೃಗಳಿಗೆ ಕಲಿಸುವ ಸಲುವಾಗಿ ಕಥೆಗಳನ್ನು ರೂಪಿಸಿವೆ. ಮಹಾಭಾರತದ ಶಾಂತಿ ಪರ್ವದ 320ನೆಯ ಅಧ್ಯಾಯದಲ್ಲಿ ಬರುವ ಒಂದು ಕಥೆ ಈ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಈ ಕಥೆಯು ಸನ್ಯಾಸಕ್ಕೂ ಆತ್ಮಜ್ಞಾನಕ್ಕೂ ಇರುವ ಸಂಬಂಧ ಯಾವ ಸ್ವರೂಪದ್ದು ಎಂಬುದನ್ನು ಜಿಜ್ಞಾಸೆಗೊಳಪಡಿಸುತ್ತದೆ.

  ಹಿಂದೆ ಮಿಥಿಲೆಯಲ್ಲಿ ಧರ್ಮಧ್ವಜನೆಂಬ ರಾಜನು ಗ್ರಹಸ್ಥನಾಗಿ ರಾಜ್ಯಭಾರವನ್ನು ನಿರ್ವಹಿಸುತ್ತ, ರಾಜಲಾಂಛನಗಳನ್ನೆಲ್ಲ ಧರಿಸಿದರೂ ಕೂಡ ಸನ್ಯಾಸತ್ವದಿಂದ ಪ್ರಾಪ್ತವಾಗುವ ಆತ್ಮಜ್ಞಾನವನ್ನು ಹೊಂದಿದ್ದನು. ಆ ಸಂದರ್ಭದಲ್ಲಿ ಸನ್ಯಾಸ ಮಾರ್ಗದಲ್ಲಿ ಸಿದ್ಧಿಯನ್ನು ಪಡೆದ ಸುಲಭಾ ಎಂಬ ಯೋಗಿನಿಯು ಕೂಡ ಇದ್ದಳು. ಅವಳಿಗೆ ಧರ್ಮಧ್ವಜನು ಸಂಸಾರದಲ್ಲಿ ಇದ್ದುಕೊಂಡೇ ಆತ್ಮಜ್ಞಾನವನ್ನು ಪಡೆಯಲು ಹೇಗೆ ಸಾಧ್ಯ ಎಂಬ ಸಂದೇಹವು ಹುಟ್ಟಿಕೊಂಡಿತು. ಅವನನ್ನು ಪರೀಕ್ಷಿಸುವ ಸಲುವಾಗಿ ಸುರಸುಂದರಿಯಂತೆ ಮಾಯಾರೂಪ ಧರಿಸಿ ಮಿಥಿಲೆಗೆ ಬಂದಳು. ಅವಳಿಗೆ ರಾಜನ ಭೇಟಿಯಾದ ಕ್ಷಣದಲ್ಲಿ ಅವನು ಛತ್ರ ಚಾಮರಾದಿಗಳಿಂದ ಯುಕ್ತನಾಗಿ ರಾಜ ವೈಭವದಲ್ಲಿ ಮಂಡಿಸಿದ್ದನು. ಆತನು ಸುಲಭೆಯನ್ನು ಮುಖಾಮುಖಿಯಾದಾಗ ಸುಲಭೆಯು ತನ್ನ ಯೋಗಶಕ್ತಿಯಿಂದ ಅವನ ಮನಸ್ಸನ್ನು ವಶೀಕರಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಧರ್ಮಧ್ವಜನಿಗೆ ವಸ್ತುಸ್ಥಿತಿಯು ಮನವರಿಕೆಯಾಯಿತು. ಅವನು ಸುಲಭೆಯ ಪ್ರಯತ್ನವನ್ನು ನಿಷ್ಫಲ ಗೊಳಿಸಿ ಅವಳ ಮನಸ್ಸಿನೊಳಗೆ ಪ್ರವೇಶಿಸಿ ಅವಳೊಂದಿಗೆ ಸಂವಾದಿಸಿದನು.

  ರಾಜನು ಸುಲಭೆಯಲ್ಲಿ ಕೇಳುವುದೆಂದರೆ ‘ಸನ್ಯಾಸಿ ಎನಿಸಿಕೊಂಡವನು ತ್ರಿದಂಡವನ್ನು ಧಾರಣೆ ಮಾಡುತ್ತಾನೆ. ಆದರೆ ತ್ರಿದಂಡಾದಿಗಳನ್ನು ಧರಿಸಿದರೇ ಮೋಕ್ಷ ಎಂಬುದಾಗಿ ವಾದಿಸಿದರೆ ಮೋಕ್ಷವು ಬಾಹ್ಯ ವಸ್ತುಗಳನ್ನವಲಂಬಿಸಿ ಪಡೆದುಕೊಳ್ಳಬೇಕಾದ ವಸ್ತು ಎಂದಂತಾಯಿತು. ಹಾಗಿದ್ದಲ್ಲಿ ರಾಜನ ಛತ್ರ ಚಾಮರಾದಿಗಳೂ ಕೂಡ ಬಾಹ್ಯ ವಸ್ತುಗಳೇ ಅಲ್ಲವೆ? ಅವೇಕೆ ಮೋಕ್ಷ ಸಾಧನಗಳಾಗಲಾರವು? ತ್ರಿದಂಡಗಳನ್ನು ಸಂಗ್ರಹಿಸುವುದೂ ಛತ್ರ ಚಾಮರಾದಿಗಳನ್ನು ಸಂಗ್ರಹಿಸುವುದೂ ಎರಡೂ ವಿಷಯ ಸಂಗ್ರಹಗಳೇ ಅಲ್ಲವೆ? ಗ್ರಹಸ್ಥಾಶ್ರಮವನ್ನು ತ್ಯಜಿಸಿ ಸನ್ಯಾಸವನ್ನು ಸ್ವೀಕರಿಸಿದವನು ಒಂದನ್ನು ಬಿಟ್ಟು ಮತ್ತೊಂದನ್ನು ಸಂಗ್ರಹಿಸುವ ಕೆಲಸವನ್ನೇ ಮಾಡುತ್ತಾನೆ. ಅಂತಿರುವಾಗ ಸನ್ಯಾಸಿಯು ಮಾತ್ರವೇ ಸಂಗದೋಷದಿಂದ ಮುಕ್ತನಾದ  ಎಂಬುದಾಗಿ ಹೇಳಲು ಹೇಗೆ ಸಾಧ್ಯ?’

  ‘ದುರ್ಮಾರ್ಗವನ್ನು ಹಿಡಿದವನಿಗೆ ಕಾವಿ ಬಟ್ಟೆ, ಕೇಶ ಮುಂಡನ, ತ್ರಿದಂಡ ಕಮಂಡಲುಗಳು ಮೋಕ್ಷಕ್ಕೆ ಯಾವ ಸಾಧನಗಳೂ ಆಗಲಾರವು. ಅಂದರೆ ಈ ಎಲ್ಲಾ ಚಿಹ್ನೆಗಳೂ ದುರ್ಮಾಗಿಗೆ ಮುಕ್ತಿಯನ್ನು ನೀಡಲು ವಿಫಲವಾಗುವುದರಿಂದ ಮೋಕ್ಷವು ಕೇವಲ ಈ ಚಿಹ್ನೆಗಳಲ್ಲಿ ಇಲ್ಲ ಎಂಬುದು ಸ್ಪಷ್ಟ. ಒಂದೊಮ್ಮೆ ಸನ್ಮಾರ್ಗಿಯೊಬ್ಬನಿಗೆ ಈ ಚಿಹ್ನೆಗಳು ಮೋಕ್ಷ ಸಾಧನವಾಗುತ್ತವೆ ಅಂತಾದಲ್ಲಿ ಅಂಥವನಿಗೆ ಛತ್ರ ಚಾಮರಾದಿಗಳು ಕೂಡ ಸಾಧನಗಳಾಗಲು ಏನಡ್ಡಿ? ಇಲ್ಲ, ದಾರಿದ್ರ್ಯದ ಜೀವನವು ಭೋಗ ಜೀವನಕ್ಕಿಂತ ಮೋಕ್ಷ ಸಾಧನೆಗೆ ಸುಲಭ, ಹಾಗಾಗಿ ಸನ್ಯಾಸವೇ ಸೂಕ್ತ ಎನ್ನಬಹುದೆ?  ಆಗ ಮೋಕ್ಷಕ್ಕೆ ದಾರಿದ್ರ್ಯವು ಸಾಧನ ಎಂದಂತಾಯಿತು. ಹಾಗಿದ್ದ ಪಕ್ಷದಲ್ಲಿ ದರಿದ್ರರೆಲ್ಲರಿಗೂ ಮೋಕ್ಷವು ನಿರಾಯಾಸವಾಗಿ ಪ್ರಾಪ್ತವಾಗಬೇಕಿತ್ತು. ಹಾಗಾಗುತ್ತಿಲ್ಲವಲ್ಲ? ಅಂದರೆ ದಾರಿದ್ರ್ಯವು ಮೋಕ್ಷ ಸಾಧನ ಎಂಬುದೂ ಕೂಡ ಸುಳ್ಳು ಎಂದಂತಾಯಿತು.’

  ‘ಅಂದರೆ ಈ ಸನ್ಯಾಸದ ಚಿಹ್ನೆಗಳಾಗಲೀ, ಛತ್ರ ಚಾಮರಗಳಾಗಲೀ, ದಾರಿದ್ರ್ಯವಾಗಲೀ ತಮ್ಮಷ್ಟಕ್ಕೆ ತಾವೇ ಮೋಕ್ಷಕ್ಕೆ ಕಾರಣವಲ್ಲ. ಮುಕ್ತಿಯನ್ನು ಹೊಂದಲು ಬೇಕಾಗುವುದು ವೈರಾಗ್ಯ ಹಾಗೂ ಕೇವಲ ಜ್ಞಾನವೇ ಹೊರತೂ ಸನ್ಯಾಸದ ಚಿಹ್ನೆಗಳಲ್ಲ. ಹಾಗಾಗಿ ಗ್ರಹಸ್ಥನಾಗಲೀ ಸನ್ಯಾಸಿಯಾಗಲೀ ಜ್ಞಾನ ಮಾತ್ರದಿಂದಲೇ ಬಂಧನದಿಂದ ಮುಕ್ತಿಯನ್ನು ಹೊಂದುತ್ತಾನೆ. ನೀನು ಯೋಗಿನಿಯಾಗಿ ಸಿದ್ಧಿಯನ್ನು ಪಡೆದವಳು ನನ್ನನ್ನು ಈ ಸಂದೇಹವನ್ನಿಟ್ಟುಕೊಂಡು ಪರೀಕ್ಷಿಸಲು ಬಂದಿದ್ದೀಯೆ ಎಂದರೆ ನನಗೆ ನಿನ್ನ ಸಿದ್ಧಿಯ ಕುರಿತೇ ಸಂದೇಹ ಹುಟ್ಟುತ್ತಿದೆ. ನೀನು ಯೋಗಸಿದ್ಧಿಯನ್ನು ಹೊಂದಿದ್ದೇ ಆದಲ್ಲಿ ಈ ಸತ್ಯವು ನಿನಗೆ ಈಗಾಗಲೇ ಗೊತ್ತಾಗಿರಲೇಬೇಕಿತ್ತಲ್ಲ?’

   ಧರ್ಮಧ್ವಜ ಹಾಗೂ ಸುಲಭೆಯ ಸಂವಾದವು ಇನ್ನೂ ಸುದೀರ್ಘವಾಗಿ ಮುಂದುವರಿಯುತ್ತದೆ ಹಾಗೂ ಓದುಗನಿಗೆ ಇನ್ನೂ ಅನೇಕ ಅದ್ಭುತ ಒಳನೋಟಗಳನ್ನು ನೀಡುವ ಶಕ್ತಿಯನ್ನು ಹೊಂದಿದೆ. ಆದರೆ ನನ್ನ ವಿಷಯಕ್ಕೆ ಪ್ರಸ್ತುತವಾಗುವ ಭಾಗವನ್ನು ಮಾತ್ರ ನಾನಿಲ್ಲಿ ಸಂಗ್ರಹಿಸಿ ನೀಡಿದ್ದೇನೆ. ಇಲ್ಲಿ ಸನ್ಯಾಸವನ್ನು ಅಲ್ಲಗಳೆಯುತ್ತಿದ್ದಾರೆ ಎಂದು ತೀರ್ಮಾನಿಸಿದರೆ ನಾವು ಮತ್ತೊಂದು ಸಮೀಕರಣಕ್ಕೆ ಬಲಿ ಬೀಳುತ್ತೇವೆ. ನಮ್ಮನ್ನು ಆಲೋಚನೆಗೆ ಹಚ್ಚುವುದೇ ಈ ಸಂವಾದದ ಗುರಿ. ಈ ಸಂವಾದವು ನಡೆದ ಕ್ಷಣದಲ್ಲಿ ರಾಜನು ರಾಜತ್ವದಿಂದಲೂ ಸುಲಭೆಯು ಸನ್ಯಾಸತ್ವದಿಂದಲೂ ಮುಕ್ತರಾಗಿದ್ದರು ಎಂಬುದಾಗಿ ಈ ಕಥೆಯು ತಿಳಿಸುತ್ತದೆ. ಅಂದರೆ ಸನ್ಯಾಸತ್ವದ ಮಿತಿಗಳ ಕುರಿತು ವಿಮರ್ಶೆ ಸುವಾಗ ಗ್ರಹಸ್ಥನು ತನ್ನ ಮಿತಿಗಳಿಂದಲೂ ಮುಕ್ತನಾಗಿರಬೇಕಾದದ್ದು ಈ ವಿವೇಚನೆಯ ಒಂದು ನಿಬಂಧನೆಯಾಗಿದೆ.

   ಇಂದಿನ ವಿದ್ಯಾವಂತರು ತಮ್ಮ ವಿವೇಚನಾ ಶಕ್ತಿಗೆ ಸಾಣೆ ಹಿಡಿಯಲಿಕ್ಕೆ ನಮ್ಮ ಇತಿಹಾಸ ಪುರಾಣಾದಿಗಳನ್ನು ಗಂಭೀರವಾಗಿ ಓದುವ ಅಗತ್ಯವಿದೆ ಎಂಬುದು ನನ್ನ ಅನ್ನಿಸಿಕೆ. ಇಂದಿನ ವೈಚಾರಿಕತೆಯಲ್ಲಿ ಶ್ರೀಮಂತ-ಬಡವ, ಬ್ರಾಹ್ಮಣ-ದಲಿತ, ಗಂಡು-ಹೆಣ್ಣು, ಮೌಢ್ಯ-ವೈಚಾರಿಕತೆ, ಇತ್ಯಾದಿ ಪ್ರಭೇದಗಳ ಕುರಿತು ಕಪ್ಪು ಬಿಳುಪಿನ ಸಮೀಕರಣಗಳನ್ನು ಇಟ್ಟುಕೊಂಡು ಅವುಗಳಲ್ಲಿ ಯಾವುದೋ ಒಂದು ಪಕ್ಷದಲ್ಲಿ ನಿಂತು ಚರ್ಚೆಗೆ ತೊಡಗುವುದು ಒಂದು ನಿಯಮವಾಗಿದೆ. ನೀವು ಮಾನವೀಯ ಕಳಕಳಿಯುಳ್ಳವರಾಗಬೇಕಾದರೆ ಇಂಥ ಒಂದರ್ಧ ಡಜನ್ ಸಮೀಕರಣಗಳನ್ನು ಒಪ್ಪಿಕೊಂಡು ಪಕ್ಷಪಾತಿಗಳಾಗಲೇಬೇಕಾದ ಒತ್ತಡವೂ ನಿಮಗಿದೆ. ನಮ್ಮ ಇಂದಿನ ಬೌದ್ಧಿಕ ಚರ್ಚೆಗಳಲ್ಲಿ ಇಂಥ ಸ್ಥಾಪಿತ ಸಮೀಕರಣಗಳನ್ನು ಪ್ರಶ್ನಿಸುವುದನ್ನೇ ಸಹಿಸದ ವಾತಾವರಣವೂ ಬೆಳೆದಿದೆ. ಆದರೆ ಇಂಥ ಸಮೀಕರಣಗಳನ್ನು ಇಟ್ಟುಕೊಂಡು ಇಂದಿನ ಬೌದ್ಧಿಕ ಸಂವಾದಗಳನ್ನು ನಡೆಸುವವರು ಮಹಾಭಾರತದ ಈ ಮೇಲಿನ ಸಂಭಾಷಣೆಯನ್ನು ಕಲ್ಪಿಸಿದವರಿಗಿಂತಲೂ ವೈಚಾರಿಕವಾಗಿ ಹಿಂದುಳಿದಿದ್ದಾರೆ ಎಂಬುದು ಸ್ಪಷ್ಟ.

Advertisements
Categories: Uncategorized
 1. thirumala raya halemane
  ಜುಲೈ 17, 2015 ರಲ್ಲಿ 11:10 ಅಪರಾಹ್ನ

  excellent.

  Like

 2. gurulingaiah.s
  ನವೆಂಬರ್ 23, 2015 ರಲ್ಲಿ 7:05 ಅಪರಾಹ್ನ

  ivella avarara bhakuthige

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: