ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 28:ಬೀದಿಗಿಳಿದು ಹೋರಾಡುವುದು ಮಾತ್ರ ಸಾಮಾಜಿಕ ಕಾಳಜಿಯೆ?

ಪ್ರೊ. ರಾಜಾರಾಮ ಹೆಗಡೆ

   ನಮ್ಮಲ್ಲಿ ಸಾಮಾಜಿಕ ಕಾಳಜಿಯುಳ್ಳವರೆಂದರೆ ಒಂದಿಲ್ಲೊಂದು ಪ್ರತಿಭಟನೆಯ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವವರು ಎಂಬ ಕಲ್ಪನೆಯಿದೆ. ಇದರ ಹಿಂದಿನ ತರ್ಕವೆಂದರೆ ನಮ್ಮ ಸಮಾಜದಲ್ಲಿ ಸಾರ್ವಜನಿಕ ಜೀವನಕ್ಕೆ ಸೇರಿದ ಕೆಲವು ಸಮಸ್ಯೆಗಳು ಇವೆ, ಅದು ನಾಗರಿಕ ಸಮಾಜಕ್ಕೆ ಸಂಬಂಧಪಟ್ಟದ್ದು, ಹಾಗೂ ಪ್ರಜಾಪ್ರಭುತ್ವದ ಯಶಸ್ಸಿಗೆ ನಾಗರಿಕ ಸಮಾಜದ ವಿಭಿನ್ನ ಹೋರಾಟಗಳು ಅತ್ಯಗತ್ಯ. ಇಂಥ ಪ್ರಭುತ್ವದಲ್ಲಿ ಪ್ರಜೆಯೊಬ್ಬನು ನಾಗರಿಕನಾಗಿ ತನ್ನ  ಪಾತ್ರವನ್ನು ಅರಿಯುವುದನ್ನೇ ರಾಜಕೀಯ ಪ್ರಜ್ಞೆ ಎಂಬುದಾಗಿ ಇಂದಿನ ರಾಜಕೀಯ ಚಿಂತಕರು ತಿಳಿಸುತ್ತಾರೆ. ತಮ್ಮ ಖಾಸಗಿ ಕೆಲಸಗಳನ್ನು ಬದಿಗೊತ್ತಿ ನಾಗರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳುವುದೇ ಸಾಮಾಜಿಕ ಕಾಳಜಿಯ ಲಕ್ಷಣ. ತಮ್ಮಷ್ಟಕ್ಕೆ ತಮ್ಮ ವೃತ್ತಿಗಳನ್ನು ಮಾಡುತ್ತ ಇಂಥ ಹೋರಾಟಗಳ ಕುರಿತು ತಲೆ ಕೆಡಿಸಿಕೊಳ್ಳದವರಿಗೆ ರಾಜಕೀಯ ಪ್ರಜ್ಞೆಯೇ ಇಲ್ಲ ಎಂದೂ ಭಾವಿಸಲಾಗುತ್ತದೆ.

   ಈ ಸಾಮಾಜಿಕ ಕಾಳಜಿ, ಕಳಕಳಿ ಇತ್ಯಾದಿ ಶಬ್ದಗಳನ್ನು ನಮ್ಮ ಬುದ್ಧಿಜೀವಿಗಳು ಪ್ರಯೋಗಿಸುತ್ತಿರುವಾಗ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಮೇಲಿನ ನಿರ್ಧಿಷ್ಟ ರಾಜಕೀಯ ಚಿಂತನೆಯನ್ನು ನಂಬಿರುತ್ತಾರೆ. ಆದರೆ ಇಂಥ ಕಳಕಳಿಗೆ ಒದು ನಿರ್ಧಿಷ್ಟ ರೂಪ ಕೂಡ ಪ್ರಾಪ್ತವಾಗಿದೆ: ಕೆಲವು ಪ್ರಕಾರದ ಸಂಘಟನೆಗಳನ್ನು ಹಾಗೂ ಐಡಿಯಾಲಜಿಗಳನ್ನು ಬೆಂಬಲಿಸಿದರೆ ಮಾತ್ರವೇ ಸಾಮಾಜಿಕ ಕಳಕಳಿಯಾಗುತ್ತದೆ. ಬ್ರಾಹ್ಮಣರು ಅಥವಾ ಮೇಲ್ಜಾತಿಗಳು, ಗಂಡಸರು ಅಥವಾ ಉದ್ಯಮಪತಿಗಳು, ಇಂಥವರ ಸಂಘಟನೆಗಳು ಸಾಮಾಜಿಕ ಕಾಳಜಿಯ ವ್ಯಾಖ್ಯೆಯೊಳಗೆ ಬರುವುದಿಲ್ಲ. ಬಹುಸಂಖ್ಯಾತ ಹಿಂದುಗಳ ಪರ ಹೋರಾಡುತ್ತೇವೆಂದರೆ ಅದು ಸಾಮಾಜಿಕ ಕಾಳಜಿಯಾಗುವುದಿಲ್ಲ. ನಾನು ಹೀಗೆ ಹೇಳುವುದು ನನಗೆ ಹಾಗೂ ನಿಮಗೆ ಇಬ್ಬರಿಗೂ ಹಾಸ್ಯಾಸ್ಪದವಾಗಿ ಕೇಳಿಸುವಷ್ಟು ಅವು ಅಸಹಜವಾಗಿವೆ. ಅಂದರೆ ಯಾವ್ಯಾವ ಜಾತಿಗಳ ಹಾಗೂ ಗುಂಪುಗಳ ಪರವಾದ ಸಂಘಟನೆಗಳು ಹಾಗೂ ಹೋರಾಟಗಳು ಸಾಮಾಜಿಕ ಕಾಳಜಿಯ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಕೂಡ ಸಾಮಾಜಿಕ ಕಾಳಜಿ ಉಳ್ಳವರು ತಿಳಿದಿರಬೇಕಾಗುತ್ತದೆ.

   ಸಾಮಾಜಿಕ ಕಾಳಜಿಗೆ ಈ ಮೇಲಿನ  ನಿರ್ಧಿಷ್ಟ ರೂಪವಿರುವುದರಿಂದ ಅದಕ್ಕೆ ಕೆಲವು ಮಿತಿಗಳೂ ಪ್ರಾಪ್ತವಾಗಿವೆ. ನೀವು ಯಾವತ್ತೂ ಇಂಥ  ಅನುಸೂಚಿತ ಗುಂಪುಗಳ ಪರವಾಗಿ ಮಾತ್ರ ಮಾತನಾಡಬೇಕು, ಅವುಗಳ ಪರವಾದ ಹೋರಾಟಗಳಲ್ಲಿ ಭಾಗವಹಿಸಬೇಕು ಅಂಥ ಸಂಘಟನೆಗಳ ಸದಸ್ಯರಾಗಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಅವರ ವಿಚಾರಗಳನ್ನು ಭಾಷಣ, ಲೇಖನ, ಕಥೆ, ಕವನ ಇತ್ಯಾದಿಗಳ ಮೂಲಕ ಪ್ರತಿಪಾದಿಸಬೇಕು, ಇತ್ಯಾದಿ. ನೀವು ಇಂಥ ಯಾವುದೇ ಸಂಘಟನೆಯ ಭಾಗವಾಗಿರದೇ ವಯಕ್ತಿಕವಾಗಿ ಜನರ ಕಷ್ಟಕ್ಕೆ, ಅನ್ಯಾಯಕ್ಕೆ ಮಿಡಿಯುವುದು, ಅಂಥವರಿಗೆ ಸಹಾಯ ಮಾಡುವುದು ಸಾಮಾಜಿಕ ಕಾಳಜಿ ಎಂದು ಕರೆಸಿಕೊಳ್ಳುವುದಿಲ್ಲ. ನೀವು ಚಾಲ್ತಿಯಲ್ಲಿರುವ ವಿಚಾರಗಳನ್ನೇ ಆದಷ್ಟು ಪುನರುಚ್ಛರಿಸಬೇಕೇ ವಿನಃ ಅವುಗಳನ್ನು ಪ್ರಶ್ನಿಸಬಾರದು. ಒಂದೊಮ್ಮೆ ನೀವು ಯಾರ ಕುರಿತು ಮಾತನಾಡುತ್ತಿದ್ದೀರೋ ಅವರ ಕುರಿತು ಕಾಳಜಿಯಿಂದಲೇ ಚಾಲ್ತಿಯಲ್ಲಿರುವ ವಿಚಾರಗಳನ್ನು ಪ್ರಶ್ನಿಸಿದಿರಾದರೆ ನಿಮಗೆ ಕಾಳಜಿ ಇಲ್ಲ ಎಂದೇ ತೀಮರ್ಾನಿಸಲಾಗುತ್ತದೆ. ಅಷ್ಟೇ ಅಲ್ಲ ನೀವು ಅಂಥ ಸಮುದಾಯಗಳ ವಿರೋಧಿಗಳು ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ. ಸಂಶೋಧನೆಗಳನ್ನು ಕೈಗೊಂಡು ಚಾಲ್ತಿಯಲ್ಲಿರುವ ಅಭಿಪ್ರಾಯಗಳನ್ನು ಪರಿಷ್ಕರಿಸುವ ಕೆಲಸವಂತೂ ಸಮಾಜ ವಿರೋಧಿ ಕೆಲಸವೇ ಸರಿ.

   ಸಾಮಾಜಿಕ ಕಾಳಜಿಯ ಈ ಮೇಲಿನ ಮಿತಿಗಳಿಂದಾಗಿ ಅದಕ್ಕೆ  ಒಂದು ಸಮಾಜ ವಿರೋಧೀ ಮುಖವೂ ಪ್ರಾಪ್ತವಾಗಿದೆ ಎಂದರೆ ಆಶ್ಚರ್ಯ ಪಡುತ್ತೀರಿ. ಅದೆಂದರೆ ಒಬ್ಬನು ತಾನು ಮಾಡಬೇಕಾದ ವೃತ್ತಿಯ ಭವಿತವ್ಯವನ್ನು ಕಡೆಗಣಿಸಿ ಈ ಮೇಲೆ ಉಲ್ಲೇಖಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಶಿಕ್ಷಣ ಕ್ಷೇತ್ರಕ್ಕೆ ಬಂದಾಗ ಇದಕ್ಕೆ ಎರಡು ಆಯಾಮಗಳು ಪ್ರಾಪ್ತವಾಗುತ್ತವೆ. ಒಂದನೆಯದಾಗಿ ಪಾಠ, ಓದು, ಸಂಶೋಧನೆ ಇತ್ಯಾದಿಗಳನ್ನು ಪ್ರಾಮಾಣಿಕವಾಗಿ ಮಾಡದಿರುವುದು. ಎರಡನೆಯದು, ಮಾಡಿದರೂ ತಮ್ಮ ರಾಜಕೀಯಕ್ಕೆ ಅವನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಶ್ನೆಗಳು ಏಳದಂತೇ ಹತ್ತಿಕ್ಕುವುದು. ಇವುಗಳಿಂದಾಗಿ ವಿದ್ಯಾರ್ಥಿಗಳು ಜ್ಞಾನ ವಂಚಿತರಾಗುತ್ತಾರೆ ಹಾಗೂ ಶಿಕ್ಷಣ ಕ್ಷೇತ್ರವು ಸೊರಗುತ್ತದೆ. ಕಡೇಪಕ್ಷ ಸಾಮಾಜಿಕ ಕಾಳಜಿಯುಳ್ಳ ಶಿಕ್ಷಕರು ಇಂಥ ಕೆಲಸವನ್ನು ಮಾಡಬಾರದು. ಏಕೆಂದರೆ ಯಾವ ಶೋಷಿತ ವರ್ಗ ಎಂದು ಕರೆಯಲಾಗುತ್ತದೆಯೋ ಆ ವಿದ್ಯಾರ್ಥಿಗಳ ಭವಿಷ್ಯವೂ ಇದೇ ಶಿಕ್ಷಣದಲ್ಲಿ ಇದೆ ಎಂಬುದನ್ನು ಮರೆಯಲಾದೀತೆ?

   ಆದರೆ ಅದೇಕೋ ಪ್ರಾಮಾಣಿಕವಾಗಿ ಪಾಠ ಮಾಡುವುದು ಸಾಮಾಜಿಕ ಕಾಳಜಿಯನ್ನು ವ್ಯಕ್ತ ಪಡಿಸುವ ಲಕ್ಷಣವೆಂದು ಪರಿಗಣಿಸಲಾಗಿಲ್ಲ. ಆದರೆ ನನ್ನ ಪ್ರಕಾರ ಅಂಥ ಪ್ರಾಮಾಣಿಕ ಶಿಕ್ಷಕನಿಗೇ ನಿಜವಾದ ಸಾಮಾಜಿಕ ಕಾಳಜಿ ಇರುತ್ತದೆ. ತನ್ನ ಪಾಠಗಳಿಗೆ ಸಂಬಂಧಿಸಿದ ತಿಳುವಳಿಕೆಯನ್ನು ಪರಿಷ್ಕರಿಸುತ್ತ, ವಿದ್ಯಾರ್ಥಿಗಳ ಜೊತೆಗೆ ಸಂವಹನೆಯನ್ನು ಸಾಧಿಸುವ ಪ್ರಯೋಗಗಳನ್ನು ಮಾಡುತ್ತ, ತನ್ನ ಕ್ಷೇತ್ರದಲ್ಲಿ ಸಂಶೋಧನೆಯ ಮೂಲಕ ಜ್ಞಾನವನ್ನು ವಿಸ್ತರಿಸುತ್ತ ಉಳಿದ ಯಾವ ಸಂಗತಿಗಳ ಕುರಿತೂ ಲಕ್ಷ್ಯ ಹಾಕದೇ ವೃತ್ತಿ ಜೀವನವನ್ನು ನಡೆಸಿದ ಶಿಕ್ಷಕನಿಗೆ ಸಮಾಜದ ಕುರಿತು ನಿಜವಾದ ಕಳಕಳಿ ಇದೆಯಷ್ಟೇ ಅಲ್ಲ, ಅವನೊಬ್ಬ ಯಶಸ್ವೀ ಸಮಾಜ ಸುಧಾರಕ ಎಂಬುದು ನನ್ನ ಬಲವಾದ ನಂಬಿಕೆ. ಅವನು ರಾಜಕೀಯ ಪ್ರಜ್ಞೆಯನ್ನು ಹೊಂದಿರದಿರಬಹುದು, ಅಥವಾ ಸಾಮಾಜಿಕ ಸಮಸ್ಯೆಗಳ ಕುರಿತು ಭಾಷಣ ಮಾಡಲು ಬರದಿರಬಹುದು, ಆದರೆ ಅಂಥವರಿಗಿಂತ ಉತ್ತಮ.

   ಇಂದಿನ ಸಾಮಾಜಿಕ ಕಳಕಳಿಯ ವ್ಯಾಖ್ಯೆಯನ್ನೇ ಇಟ್ಟುಕೊಂಡರೂ ಕೂಡ ಶಿಕ್ಷಕನೊಬ್ಬನು ಸಮಾಜಕ್ಕೆ ಸೇವೆ ಮಾಡಬೇಕೆಂದರೆ ಅವನ ವೃತ್ತಿಯೇ ಅದಕ್ಕೆ ಸುರ್ವಾಣವಕಾಶವಾಗಿದೆ. ಇಂದು ಸಾಮಾಜಿಕ ಹೋರಾಟಗಾರರು ದಲಿತ ಹಿಂದುಳಿದ ವರ್ಗಗಳು ಹಾಗೂ ಮುಸ್ಲಿಮರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ, ಅವರನ್ನು ಮುಂದೆ ತರಬೇಕು ಎಂದು ಕರೆ ಕೊಡುತ್ತಿರುತ್ತಾರೆ. ಶಿಕ್ಷಣವು ಇಂದು ಒಂದು ಸಮುದಾಯದ ಭವಿಷ್ಯವನ್ನು ಬದಲಿಸುವ ಸಾಧನವೂ ಆಗಿದೆ ಎಂಬುದು ವಾಸ್ತವ. ಅವರಿಗೆ ಏನೇ ಸವಲತ್ತುಗಳನ್ನು ಸರ್ಕಾರವು ಕಲ್ಪಿಸಬಹುದು, ಆದರೆ ಅವರನ್ನು ಸುಶಿಕ್ಷಿತರನ್ನಾಗಿ ಮಾಡುವವನೇ ಅವರ ಕುರಿತು ನಿಜವಾದ ಕಾಳಜಿಯುಳ್ಳವನು ಹಾಗೂ ಅವರಿಗೆ ನಿಜವಾಗಿ ಉಪಕಾರಮಾಡುವವನು ಎಂಬುದರಲ್ಲಿ ಸಂದೇಹವಿಲ್ಲ. ಅವರ ಕಲಿಕೆಯ ಸಮಸ್ಯೆಗಳೇನು, ಅದಕ್ಕೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬೇಕು, ಅವರ ತಿಳುವಳಿಕೆಯನ್ನು ಹೇಗೆ ವಿಸ್ತರಿಸಬೇಕು, ಇತ್ಯಾದಿಗಳ ಕುರಿತು ಪ್ರಯೋಗಗಳನ್ನು ಹಾಗೂ ಸಂಶೋಧನೆಗಳನ್ನು ನಡೆಸಲು ರಾಜಕಾರಣಿಗಳಾಗಲೀ, ಬೀದಿ ಹೋರಾಟಗಾರರಾಗಲೀ ಬರಲಾರರು. ಶಿಕ್ಷಕರೇ ಆ ಕೆಲಸವನ್ನು ಮಾಡಬೇಕು. ದಲಿತ ಹಿಂದುಳಿದ ವರ್ಗಗಳ ಕುರಿತು ಕಾಳಜಿಯುಳ್ಳ ಶಿಕ್ಷಕನೊಬ್ಬನು ತಾನು ಶಿಕ್ಷಕನಾಗಿ ತನ್ನ ಈ ಕರ್ತವ್ಯವನ್ನು ಎಷ್ಟರ ಮಟ್ಟಿಗೆ ನಿಭಾಯಿಸಿದ್ದೇನೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.

   ಆದರೆ ಸ್ವಾತಂತ್ರ್ಯ ಸಿಕ್ಕು ಕಳೆದ ಆರೂವರೆ ದಶಕಗಳಲ್ಲಿ ನಮ್ಮಲ್ಲಿ ಶಿಕ್ಷಕರು ರಾಜಕೀಯ ಜಾಗೃತಿಯನ್ನು ಬೆಳೆಸಿಕೊಂಡು, ಒಂದೊಂದು ಪಕ್ಷಗಳನ್ನು ಹಿಡಿದು ಬೀದಿ ಹೋರಾಟ ಮಾಡಿದ್ದಷ್ಟೇ ಬಂತು, ಶಿಕ್ಷಣ ಮಾತ್ರ ಅಧೋಗತಿಗೆ ಇಳಿಯುತ್ತಿದೆ. ಅದು ಅಧೋಗತಿಗೆ ಇಳಿಯಲು ಈ ಹೋರಾಟಗಳದೂ ಕೊಡುಗೆ ಇದೆ ಎಂಬುದೇ ವಿಪರ್ಯಾಸ. ಶಿಕ್ಷಣ ಕ್ಷೇತ್ರದ ಸವಾಲುಗಳನ್ನು ಸ್ವೀಕರಿಸುವಲ್ಲಿ ಇಂಥ ಸಾಮಾಜಿಕ ಕಾಳಜಿಯುಳ್ಳ ಶಿಕ್ಷಕರು ವಿಫಲರಾದದ್ದೊಂದೇ ಅಲ್ಲ, ವಿಶ್ವವಿದ್ಯಾಲಯಗಳ ಸಂಶೋಧನೆಯನ್ನು ಯಾವ್ಯಾವುದೋ ಜನಪ್ರಿಯ ಹೋರಾಟಗಳ ಹಾಗೂ ಐಡಿಯಾಲಜಿಗಳ ಸಾಧನಗಳನ್ನಾಗಿ ಮಾಡಿ ತಿಳುವಳಿಕೆಯನ್ನು ವಿಸ್ತರಿಸಬೇಕಾದ ಸಂಶೋಧನೆಯನ್ನು ಹಳ್ಳ ಹಚ್ಚುವಲ್ಲಿ ಸಫಲರಾಗಿದ್ದಾರೆ.

   ಶಿಕ್ಷಣವೊಂದೇ ಅಲ್ಲ, ವ್ಯಕ್ತಿ ಹಾಗೂ ಸಮುದಾಯಗಳ ಉನ್ನತಿ ಹಾಗೂ ಸುಖಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರವಾಗಿರಬಹುದು, ಅದಕ್ಕೆ ಸಂಬಂಧಿಸಿದ ವೃತ್ತಿಯನ್ನು ಆಧರಿಸಿ ಜೀವಿಸುವವನೊಬ್ಬನು ತನ್ನ ವೃತ್ತಿಯನ್ನು ಪ್ರಾಮಾಣಿಕನಾಗಿ ಮಾಡಿದಲ್ಲಿ ಅದಕ್ಕಿಂತಲೂ ದೊಡ್ಡ ಸಮಾಜಸೇವೆ ಮತ್ತೊಂದಿಲ್ಲ. ಉದಾಹರಣೆಗೆ ಇಂದಿನ ರಾಜಕಾರಣಿಗಳು ಕೋಡಂಗಿಗಳಂತೆ ಹೊಸ ಹೊಸ ಬೀದಿ ಹೋರಾಟಗಳಿಂದ ವಿವಿಧ ಜಾತಿ ಕೋಮುಗಳನ್ನು ಓಲೈಸಲು ನೋಡುತ್ತಾರೆ. ಬದಲಾಗಿ ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಡೆಸಲು ಕಲಿತರೆ ಒಳ್ಳೆಯ ಪ್ರಭುತ್ವದಿಂದ ಸಿಗಬೇಕಾದ ಸತ್ಫಲಗಳು ಜನರಿಗೆ ತನ್ನಂತಾನೇ ಸಿಗತೊಡಗುತ್ತವೆ. ಅದಕ್ಕಿಂತ ದೊಡ್ಡ ಉಪಕಾರ ಯಾವುದಿದೆ?

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: