ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 29ಗುರುವಿಲ್ಲದ ಶಿಕ್ಷಣ ಮತ್ತು ವಿದ್ಯೆಯಿಲ್ಲದ ಪದವಿ?

ಪ್ರೊ. ರಾಜಾರಾಮ ಹೆಗಡೆ

   ಇಂದು ನಾವು ಎರಡು ವಿಭಿನ್ನ ರೀತಿಯ ಶಿಕ್ಷಣ ಕ್ರಮವನ್ನು ಇಟ್ಟುಕೊಂಡಿದ್ದೇವೆ. ಒಂದು ಪಾಶ್ಚಾತ್ಯರಿಂದ ಪಡೆದುಕೊಂಡ ಆಧುನಿಕ ಶಿಕ್ಷಣ ವ್ಯವಸ್ಥೆ, ಮತ್ತೊಂದು ಸಾಂಪ್ರದಾಯಿಕ ಶಿಕ್ಷಣ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಾಲೆಯಿಂದ ಮೊದಲುಗೊಂಡು ಬೇರೆ ಬೇರೆ ಪದವಿಗಳನ್ನು ಪಡೆಯಲು ನಡೆಸುವ ತರಗತಿಗಳು ಹಾಗೂ ಪಾಠಕ್ರಮಗಳಿರುತ್ತವೆ.  ಸಾಂಪ್ರದಾಯಿಕ ಶಿಕ್ಷಣವು ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಉಳಿದುಕೊಂಡು ಬಂದಿದೆ. ಸಂಗೀತ, ನಾಟ್ಯ, ವೇದ-ಶಾಸ್ತ್ರಾಭ್ಯಾಸಗಳು, ಇತ್ಯಾದಿ. ಇವು ಔಪಚಾರಿಕ ಕ್ರಮಗಳಾದರೆ, ಅನೌಪಚಾರಿಕವಾಗಿ ನಾವು ನಮ್ಮ ಸಂಪ್ರದಾಯಗಳ ಮೂಲಕ ಕಲಿಯುವ ಹೆಚ್ಚಿನ ಎಲ್ಲಾ ವಿದ್ಯೆಗಳೂ ಎರಡನೆಯ ಪ್ರಕಾರದಲ್ಲಿ ಬರುತ್ತವೆ.

   ಆಧುನಿಕ ಶಿಕ್ಷಣ ಪದ್ಧತಿಗೂ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೂ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಆಧುನಿಕ ಶಿಕ್ಷಣವು ಓದು ಬರೆಹಗಳ ಮೂಲಕ ನಡೆಯುತ್ತದೆ. ಒಂದು ಮಗುವಿಗೆ ಓದಲು ಕಲಿಸುವುದೇ ಈ ಶಿಕ್ಷಣದಲ್ಲಿ ನಿರ್ಣಾಯಕ. ಒಮ್ಮೆ ಮಗು ಓದಲು ಕಲಿಯಿತೆಂದರೆ ನಂತರ ವಿವಿಧ ಪಠ್ಯಪುಸ್ತಕಗಳನ್ನು ಓದುತ್ತ ತಿಳಿವಳಿಕೆ ಗಳಿಸುತ್ತ ಉನ್ನತ ಶಿಕ್ಷಣದ ಮೆಟ್ಟಿಲುಗಳನ್ನು ಅದು ಏರಬೇಕು. ಅದು ಆಯಾ ಹಂತದ ಜ್ಞಾನವನ್ನು ಪರೀಕ್ಷೆಗಳಲ್ಲಿ ಬರೆದೇ ತನ್ನ ತಿಳಿವಳಿಕೆಯನ್ನು ವ್ಯಕ್ತಪಡಿಸಬೇಕು. ಅಂದರೆ ಈ ಶಿಕ್ಷಣ ಪದ್ಧತಿಯು ಅಮೂರ್ತ ವಿಚಾರಗಳನ್ನು ಭಾಷೆಯ ಮೂಲಕ ನಮ್ಮದನ್ನಾಗಿ ಮಾಡಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಈ ಶಿಕ್ಷಣದಲ್ಲೂ ಪ್ರಾಯೋಗಿಕ ಕಲಿಕೆಯನ್ನು ಅಳವಡಿಸಿಕೊಂಡರೂ ಕೂಡ ಅದು ಪ್ರಧಾನವಾಗುವುದಿಲ್ಲ. ಹಾಗಾಗಿ ಇಲ್ಲಿ ಅಕ್ಷರ (ಲಿಪಿ ಎಂಬರ್ಥದಲ್ಲಿ) ಜ್ಞಾನ ಹಾಗೂ ಓದುವಿಕೆ ನಿರ್ಣಾಯಕ.

   ಸಾಂಪ್ರದಾಯಿಕ ಕಲಿಕೆಯಲ್ಲಿ ಅಕ್ಷರ ಜ್ಞಾನಕ್ಕೆ ಹಾಗೂ ಓದಿಗೆ ಈ ಮಹತ್ವವಿಲ್ಲ. ಇಲ್ಲಿ ಕ್ರಿಯೆಯನ್ನು ಮಾಡಿ ತೋರಿಸಿ, ನೋಡಿ ಕಲಿಯುವ ಪ್ರಕ್ರಿಯೆಯಿದೆ. ಅಂದರೆ ಅನುಕರಣೆಯ ಮೂಲಕ ಒಂದು ವಿದ್ಯೆಯನ್ನು ತನ್ನದಾಗಿಸಿಕೊಳ್ಳುವ ವಿಧಾನ. ಈ ವಿದ್ಯೆಯ ಪರೀಕ್ಷೆಯಲ್ಲಿ ಪ್ರಯೋಗ ಅಥವಾ ಆಚರಣೆ ಮುಖ್ಯವಾಗಿದೆ. ಯಾರು ಎಷ್ಟು ಜ್ಞಾನ ಗಳಿಸಿದ್ದಾರೆ ಎಂಬುದನ್ನು ಅವರ ಪ್ರಾಯೋಗಿಕ ಸಾಧನೆಯನ್ನು ಅಳೆದು ತೀರ್ಮಾನಿಸಲಾಗುತ್ತದೆ. ಅಂದರೆ ಇಲ್ಲಿ ಜ್ಞಾನ ಎಂಬುದು ಆಯಾ ಕ್ಷೇತ್ರದಲ್ಲಿ ಕ್ರಿಯೆಯನ್ನು ನಡೆಸುವ ಪರಿಣತಿ.

  ಈ ಮೇಲಿನ ವ್ಯತ್ಯಾಸಗಳಿಗನುಗುಣವಾಗಿ ಕಲಿಕೆಯ ಇನ್ನುಳಿದ ವಿಧಾನಗಳೂ ವ್ಯತ್ಯಾಸವಾಗುತ್ತವೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಉರುಹೊಡೆಯುವುದು, ಪುನರಾವರ್ತನೆ ಅಥವಾ ಅನುಕರಣೆ ಮಾಡುವುದು ಕಲಿಕೆಯ ಪ್ರಾರಂಭ. ವೇದ ಮಂತ್ರಗಳಿರಬಹುದು, ಭಾಷೆ, ವ್ಯಾಕರಣಾದಿ ಶಾಸ್ತ್ರಗಳಿರಬಹುದು, ಕಾವ್ಯಗಳಿರಬಹುದು ಬಾಯಿಪಾಠಮಾಡುವುದರ ಮೂಲಕ ಅದರ ಪಠ್ಯವನ್ನು ಮನೋಗತ ಮಾಡಿಕೊಳ್ಳಲಾಗುತ್ತದೆ. ಈ ಕ್ರಿಯೆಯಲ್ಲಿ ಗುರುವಿನ ಪ್ರತ್ಯಕ್ಷ ಉಪಸ್ಥಿತಿ, ಅವನ ಧ್ವನಿ, ನಿರ್ದೇಶನ, ಇತ್ಯಾದಿಗಳು ಅನಿವಾರ್ಯ. ವೇದ ಶಾಸ್ತ್ರಾದಿಗಳಲ್ಲಿ ಕಡೇ ಪಕ್ಷ ಪಠ್ಯಗಳಾದರೂ ಇರುತ್ತವೆ. ಸಂಗೀತ ನಾಟ್ಯ ಇತ್ಯಾದಿಗಳ ಕಲಿಕೆಯಲ್ಲಿ ಅವೂ ಇರುವುದಿಲ್ಲ. ಹಿಂದೂಸ್ತಾನಿಯಲ್ಲಿ ಸಂಗೀತಗಾರರು ವಿದ್ಯಾರ್ಥಿಗಳಿಗೆ ನೀಡುವ ಟಿಪ್ಪಣಿ ಪುಸ್ತಕದಲ್ಲಿ ಒಂದು ರಾಗದ ಆರೋಹ, ಅವರೋಹ, ವಾದಿ, ಸಂವಾದಿ, ಸ್ಥಾಯಿ, ಅಂತರಾ, ಇವುಗಳನ್ನು ಮಾತ್ರ ಸೂಚಿಸಲಾಗಿರುತ್ತದೆ. ಅಷ್ಟರ ನಂತರ ಆ ರಾಗ ಯಾವ ನಿರ್ಧಿಷ್ಟ ಆಕೃತಿಯನ್ನು ತಳೆಯುತ್ತದೆ ಎಂಬುದು ಆಯಾ ಗುರು ಹಾಗಾ ಘರಾಣಾಗಳಿಗೆ ಬಿಟ್ಟದ್ದು. ಈ ಕಲೆಗಳ ಅಪ್ರತಿಮ ಕಲಾಕೃತಿಗಳೆಲ್ಲವೂ ಇಂಥ ಅನುಕರಣೆಯ ಕಲಿಕೆಯ ತಳಪಾಯದ ಮೇಲೇ ಸೃಷ್ಟಿಯಾಗಿವೆ. ಆಧುನಿಕ ಶಿಕ್ಷಣದಲ್ಲಿ ಉರುಹೊಡೆಸುವುದು ದೋಷ ಎಂದೇ ಶಿಕ್ಷಣ ತಜ್ಞರು ಪರಿಗಣಿಸಿದ್ದಾರೆ. ಓದಿ ಅರ್ಥಮಾಡಿಕೊಳ್ಳುವುದು ಮುಖ್ಯವಾದುದರಿಂದ ಪುಸ್ತಕಗಳನ್ನು ದೊಡ್ಡದಾಗಿ ಓದುವುದು ಕೂಡ ಒಂದು ದೋಷವೇ. ಈ ಶಿಕ್ಷಣದ ಸ್ವರೂಪ ಹೇಗಿದೆಯೆಂದರೆ ನಿಮಗೆ ಸಂಸ್ಕೃತ ಪದವಿಯನ್ನು ಪಡೆದರೂ ಆ ಬಾಷೆ ಬರಲೇಬೇಕೆಂದಿಲ್ಲ, ಸಂಗೀತ ಪದವಿಯನ್ನು ಪಡೆದರೂ ಹಾಡಲು ಬರಲೇ ಬೇಕೆಂದಿಲ್ಲ. ನಮ್ಮ ಶ್ರೇಷ್ಠ ಸಂಸ್ಕೃತ ವಿದ್ವಾಂಸರು ಹಾಗೂ ಸಂಗೀತಗಾರರು ಇಂಥ ಶಿಕ್ಷಣದಿಂದ ತಯಾರಾದವರಲ್ಲ.

  ಈ ಎರಡೂ ಶಿಕ್ಷಣ ಕ್ರಮಗಳಲ್ಲಿ ಅವುಗಳ ವಿಧಾನಕ್ಕನುಗುಣವಾಗಿ ಶಿಕ್ಷಕನ ಮಹತ್ವ ಕೂಡ ನಿರ್ಧಾರಿತವಾಗುತ್ತದೆ. ಆಧುನಿಕ ಶಿಕ್ಷಣದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲಿ ಮಾತ್ರ ಶಿಕ್ಷಕರಿಗೆ ಮಹತ್ವ ಇದೆ. ಉನ್ನತ ಶಿಕ್ಷಣವು ಪುಸ್ತಕಗಳನ್ನು ಅವಲಂಬಿಸುತ್ತದೆ. ಅದರಲ್ಲೂ ಸಮಾಜ ವಿಜ್ಞಾನಗಳಲ್ಲಿ ಅಕ್ಷರಶಃ ಶಿಕ್ಷಕನು ಅಪ್ರಸ್ತುತನಾಗುತ್ತಾನೆ. ಹಾಗಾಗಿ ಲಾಗಾಯ್ತಿನಿಂದಲೂ ನಮ್ಮ ಕಾಲೇಜುಗಳಲ್ಲಿ ಸಮಾಜ ವಿಜ್ಞಾನ ಹಾಗೂ ಭಾಷಾ ಶಿಕ್ಷಕರು  ತಮ್ಮ ಭಾಷಣ ಸಾಮಥ್ರ್ಯದಿಂದ ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅದರಲ್ಲಿ ವಿಫಲರಾದರೆ ಶೋಚನೀಯ. ಕ್ಲಾಸಿಗೆ ಹೋಗದವನೂ ಚೆನ್ನಾಗಿ ಓದಿಕೊಂಡು ಅರ್ಥ, ಮನನ ಮಾಡುವ ಶಕ್ತಿ ಇದ್ದರೆ ಉತ್ತಮ ಜ್ಞಾನವನ್ನು ಗಳಿಸಬಲ್ಲ. ಈ ಕಾರಣದಿಂದಲೇ ಇಲ್ಲಿ ದೂರ ಶಿಕ್ಷಣವು ಕೂಡ ಮಾನ್ಯ. ಇತ್ತೀಚೆಗಂತೂ ಈ ಶಿಕ್ಷಣಕ್ಕೆ ಮೂರನೆಯ ದರ್ಜೆಯ ನೊಟ್ಸುಗಳೇ ಸಾಕು.  ಇಂಥ ಶಿಕ್ಷಣದಲ್ಲಿ ಗುರು-ಶಿಷ್ಯ ಸಂಬಂಧವು ಅಪ್ರಸ್ತುತ.

   ಆದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಶಿಕ್ಷಕನು ಗುರುವಾಗಿ ನಿರ್ಣಾಯಕ.  ಗುರು- ಶಿಷ್ಯ ಪರಿಕಲ್ಪನೆ ಮೂಲತಃ ರೂಪುಗೊಂಡಿದ್ದು ಭಾರತೀಯ ಅಧ್ಯಾತ್ಮದ ಕಲಿಕೆಯಲ್ಲಿ. ಅದೇ ಮಾದರಿಯನ್ನು ಇತರ ಕಲಿಕೆಗಳಿಗೂ ನಾವು ಅಳವಡಿಸಿಕೊಂಡಿದ್ದೇವೆ. ಗುರುವಿನ ಪ್ರಿತಿ ವಿಶ್ವಾಸಗಳು ಇಲ್ಲಿ ವಿದ್ಯೆಯನ್ನು ಪಡೆದುಕೊಳ್ಳಲಿಕ್ಕೆ ಅತ್ಯಗತ್ಯ.  ಅದಕ್ಕೂ ಹೆಚ್ಚಾಗಿ ಒಂದು ಅವ್ಯಕ್ತ ರೂಪದಲ್ಲಿ  ಗುರುವಿನ ಅನುಗ್ರಹವು ತನ್ನ ಕಲಿಕೆಯನ್ನು ಸಾಧ್ಯ ಮಾಡುತ್ತದೆ ಎಂಬ ನಂಬಿಕೆ ಶಿಷ್ಯನಲ್ಲಿ ಇರಬೇಕಾಗುತ್ತದೆ. ಹಾಗಾಗಿ ಅವನ ಅನುಗ್ರಹವನ್ನು ಗಳಿಸುವುದು ಕೂಡ ಕಲಿಕೆಯ ಒಂದು ಭಾಗವೇ ಆಗಿದೆ. ಇಲ್ಲಿ ಶಿಕ್ಷಕನೊಬ್ಬ ಗುರು ಹೇಗಾಗುತ್ತಾನೆಂದರೆ ಶಿಷ್ಯನಿಗೆ ವಿದ್ಯೆಯ ಹಾಗೂ ಜ್ಞಾನದ ಮೂಲ ಅವನೇ ಆಗಿರುತ್ತಾನೆ, ಯಾವುದೇ ಪುಸ್ತಕವಲ್ಲ. ಗುರು ಜ್ಞಾನದ ಸಾಕಾರ ರೂಪವಾಗಿರುತ್ತಾನೆ. ಶಿಷ್ಯನು ಅವನಿಂದ  ಅದನ್ನು ಸ್ವೀಕರಿಸುವ ಸ್ಥಾನದಲ್ಲಿ ಇರುತ್ತಾನೆ. ಈ ಸಂಬಂಧವು ಗುರು-ಶಿಷ್ಯ ಭಾವವನ್ನು ಹಾಗೂ ಕಲಿಕೆಯಲ್ಲಿನ ಶ್ರದ್ಧೆಯನ್ನು ಹುಟ್ಟುಹಾಕುತ್ತದೆ. ಒಂದೊಮ್ಮೆ ಇಂಥ ಭಾವವನ್ನು ತಳೆಯಲು ಶಿಷ್ಯನು ವಿಫಲನಾದರೆ ಅವನಿಗೆ ಗುರುವಿನಲ್ಲಿರುವ ವಿದ್ಯೆ ಸಿಕ್ಕುವುದೂ ಇಲ್ಲ, ದಕ್ಕುವುದೂ ಇಲ್ಲ. ಈ ಶಿಕ್ಷಣದಲ್ಲಿ ಅಯೋಗ್ಯ ಶಿಕ್ಷಕ ಹಾಗೂ ವಿದ್ಯಾರ್ಥಿ ಇಬ್ಬರಿಗೂ ಭವಿಷ್ಯವಿಲ್ಲ.

   ಈ ಎರಡೂ ಪ್ರಕಾರದ ಶಿಕ್ಷಣಗಳನ್ನು ತುಲನೆ ಮಾಡಿದಾಗ ನಮಗೆ ಎದ್ದುಕಾಣುವ ಒಂದು ವ್ಯತ್ಯಾಸವಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯು ತನ್ನ ಗುರಿಯನ್ನು ತಲುಪಲು ಶೋಚನೀಯವಾಗಿ ಸೋತಿದೆ. ಈ ವ್ಯವಸ್ಥೆಯು ಅಧೋಗತಿಗೆ ಇಳಿಯುತ್ತಿರುವುದು ಇಂದು ಶಿಕ್ಷಣ ತಜ್ಞರೆಲ್ಲರ ತಲೆಕೆಡಿಸಿರುವ ಸಂಗತಿ. ನಮ್ಮ ಆಧುನಿಕ ಶಿಕ್ಷಣ ಸಂಸ್ಥೆಗಳು ವ್ಯಾಪಾರೀ ಕೇಂದ್ರಗಳಾಗುತ್ತಿವೆ. ಶಿಕ್ಷಕ ವರ್ಗದ ಗುಣಮಟ್ಟವು ದಿನದಿಂದ ದಿನಕ್ಕೆ ಕೆಳಗಿಳಿಯುತ್ತಿದೆ. ಮಕ್ಕಳು ಉರುಹೊಡೆದು ಮಾರ್ಕ ತೆಗೆಯುವುದು ಜಾಸ್ತಿಯಾಗಿದೆ ಆದರೆ ವಿಷಯಜ್ಞಾನ ಬೆಳೆಯುತ್ತಿಲ್ಲ. ಭಾಷೆ, ಗಣಿತ, ಇತ್ಯಾದಿಗಳ ಕಲಿಕೆಯ ವೈಫಲ್ಯತೆಯು ಅಪಾಯದ ಮಟ್ಟವನ್ನೂ ಮೀರಿದೆ ಎಂಬುದು ನಿರ್ವಿವಾದ. ಆದರೆ ಸಾಂಪ್ರದಾಯಿಕ ಕಲಿಕೆಯ ಕ್ಷೇತ್ರಗಳು ತಮ್ಮ ಕಲಿಕೆಯ ಉತ್ಕೃಷ್ಟತೆಯನ್ನು ಹಾಗೇ ಉಳಿಸಿಕೊಂಡು ಬರುತ್ತಿವೆ.  ಅಧ್ಯಾತ್ಮ, ಸಂಗೀತ, ನಾಟ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ನಮ್ಮ ಭಾರತೀಯ ಜ್ಞಾನ ಪರಂಪರೆಗಳನ್ನು ಉಳಿಸಿ, ಬೆಳೆಸಿಕೊಂಡು ಬರುವುದೊಂದೇ ಅಲ್ಲ, ವಿಶ್ವಾದ್ಯಂತ ಅಭಿಮಾನಿಗಳನ್ನು, ಶಿಷ್ಯರನ್ನು ಬೆಳೆಸುತ್ತಿದೆ. ಈ ಸತ್ಯವನ್ನು ಗಮನಿಸಿದಾಗ ಸಾಂಪ್ರದಾಯಿಕ ಶಿಕ್ಷಣದ ಗುರು-ಶಿಷ್ಯ ಸಂಬಂಧವನ್ನೂ, ಕಲಿಕೆಯ ವಿಧಾನಗಳನ್ನೂ ಗಂಭೀರವಾಗಿ ಅಧ್ಯಯನಕ್ಕೊಳಪಡಿಸಿ, ಅಳವಡಿಸಿಕೊಳ್ಳುವ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂಬುದು ಸ್ಪಷ್ಟ. ಏಕೆಂದರೆ ನಮ್ಮ ಆಧುನಿಕ ಶಿಕ್ಷಣ ಪದ್ಧತಿಯು ಪಾಶ್ಚಾತ್ಯ ಹಿನ್ನೆಲೆಯದು, ಆದರೆ ಅದನ್ನು ಕಲಿಯುವವರು ಹಾಗೂ ಕಲಿಸುವವರು ಭಾರತೀಯರೇ ಆಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: