ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 30: ಸೂರ್ಯನಮಸ್ಕಾರ ಮತ್ತು ನಮಾಜು ಎರಡೂ ಒಂದೇನಾ ?

ಪ್ರೊ. ರಾಜಾರಾಮ ಹೆಗಡೆ

  ಇತ್ತೀಚೆಗೆ ಕೇಂದ್ರ ಸರ್ಕಾರವು ಯೋಗದಿನವನ್ನು ಆಚರಿಸಲು ನಿರ್ಧರಿಸಿದಾಗ ಕೆಲವು ಮುಸ್ಲಿಂ ಮತೀಯ ಮುಂದಾಳುಗಳಿಂದ ಒಂದು ತಕರಾರು ಎದ್ದಿತು. ಅದೆಂದರೆ ಯೋಗದ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಹಿಂದೂ ಮತವನ್ನು ತಮ್ಮ ಮೇಲೆ ಹೇರುತ್ತಿದೆ. ತಾವು ಸೂರ್ಯನಮಸ್ಕಾರವನ್ನು  ಮಾಡಲು ನಿರಾಕರಿಸುತ್ತೇವೆ ಎಂಬುದಾಗಿ ಅವರು ಘೋಷಿಸಿದರು. ನಂತರ ಕೇಂದ್ರ ಸರ್ಕಾರವು ಯೋಗದಿನದಂದು ಸೂರ್ಯನಮಸ್ಕಾರವನ್ನು ಕೈಬಿಡಬೇಕೆಂದು ನಿರ್ದೇಶಿಸಿತು. ಈ ಘಟನೆಗೆ ಸಂಬಂಧಿಸಿದಂತೆ  ಪರ ಹಾಗೂ ವಿರೋಧ ಎರಡೂ ಪಕ್ಷಗಳಿಂದಲೂ ಸಾಕಷ್ಟು ಚರ್ಚೆಗಳಾಗಿವೆ.

   ಜನಸಾಮಾನ್ಯರ  ವಲಯದಲ್ಲಿ ಅನೇಕರು ಯೋಗಕ್ಕೂ ಹಿಂದೂಯಿಸಂಗೂ ತಳಕು ಹಾಕುತ್ತಾರೆ  ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಯೋಗವು ಜಗತ್ತಿಗೆ ಹಿಂದೂಯಿಸಂನ ಕೊಡುಗೆ ಎಂದು ಭಾರತೀಯರೂ ಪ್ರಚಾರ ಮಾಡಿಕೊಂಡಿದ್ದಾರೆ. ಇತರರೂ ಅದನ್ನು ಹಾಗೇ ಸ್ವೀಕರಿಸಿದ್ದಾರೆ. ಹೀಗೆ ನಂಬುವವರಲ್ಲಿ ಅನೇಕರಿಗೆ ಯೋಗವೆಂದರೇನು ಎಂಬುದರ ಸ್ಪಷ್ಟ ಕಲ್ಪನೆ ಕೂಡ ಇಲ್ಲ. ಅದರಲ್ಲಿ ನಮಸ್ಕಾರ, ಧ್ಯಾನ ಇತ್ಯಾದಿಗಳು ಕೂಡ   ಬರುವುದರಿಂದ ಅದು ಹಿಂದೂಗಳ ಮತೀಯ ಆಚರಣೆ ಎಂಬುದಾಗಿ ಅದರ ಕುರಿತು ಅಜ್ಞಾನ ಇರುವವರು ಯೋಚಿಸಿದರೆ ಆಶ್ಚರ್ಯವಿಲ್ಲ. ಸೂರ್ಯ ನಮಸ್ಕಾರದ ಕುರಿತ ವಿವಾದವು ಇದಕ್ಕೊಂದು ದೃಷ್ಟಾಂತ.  ಮುಸ್ಲಿಮರಾದವರು ಅಲ್ಲಾನನ್ನು ಮಾತ್ರ ಪ್ರಾರ್ಥಿಸಬೇಕು, ಅನ್ಯ ದೇವತೆಗಳನ್ನು ಪ್ರಾರ್ಥಿಸಿದರೆ ಪಾಪ ಬರುತ್ತದೆ, ಹಾಗಾಗಿ ಶೃದ್ಧಾವಂತ ಮುಸ್ಲಿಮನು ಸೂರ್ಯ ನಮಸ್ಕಾರವನ್ನು ಮಾಡುವುದು ಪಾಪಕಾರ್ಯ ಎಂಬುದಾಗಿ ಸಾಂಪ್ರದಾಯಿಕ ಮುಸ್ಲಿಮರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.

   ಈ ವಿವಾದವು ಸೃಷ್ಟಿಯಾದ ನಂತರ ಯೋಗವೆಂಬುದು ಹಿಂದೂಯಿಸಂನ ಆಚರಣೆಯಲ್ಲ, ಅದೊಂದು ವಿಜ್ಞಾನ ಎಂಬ ವಾದಕ್ಕೆ ಪುಷ್ಟಿ ನೀಡಲಾಗುತ್ತಿದೆ. ಯೋಗವೊಂದು ವಿಜ್ಞಾನ  ಎನ್ನುವವರೂ ಕೂಡ ಅದು ಯಾವ ರೀತಿಯ ವಿಜ್ಞಾನ ಎಂಬುದರ ಕುರಿತು ಸ್ಪಷ್ಟತೆಯನ್ನು ಹೊಂದಿದಂತೆ ಕಾಣುವುದಿಲ್ಲ. ಅದರೆಡೆ ಆರ್ಕಷಿತರಾಗುವ ಹಲವರಿಗೆ ಅದು ಆಸನ, ಪ್ರಾಣಾಯಾಮಗಳ ಒಂದು ದೈಹಿಕ ಚಿಕಿತ್ಸೆಯ ಕ್ರಮ. ಏಕೆಂದರೆ, ಯೋಗ ಶಿಕ್ಷಕರೂ ಕೂಡ ಯೋಗವನ್ನು ಹೀಗೇ ಪ್ರಚಾರ ಮಾಡುವುದು. ಇಂಥಿಂಥ ಆಸನ ಹಾಕಿದರೆ ಇಂತಿಂಥ ಖಾಯಿಲೆ ವಾಸಿಯಾಗುತ್ತದೆ ಅಂತಲೋ, ಮಾನಸಿಕ ಒತ್ತಡ ಶಮನವಾಗುತ್ತದೆ ಅಂತಲೋ ನಮ್ಮ ಮಾಧ್ಯಮಗಳಲ್ಲಿ, ಭಾಷಣಗಳಲ್ಲಿ, ಜನರಿಗೆ ಬಿಂಬಿಸಲಾಗುತ್ತಿದೆ.  ಇಂದು ಪ್ರವಾಸೋದ್ಯಮದ ಯುಗದಲ್ಲಂತೂ ಯೋಗವು ವಿಶ್ವ ಮಾರುಕಟ್ಟೆಯನ್ನು ಆಕ್ರಮಿಸತೊಡಗಿದೆ. ಯೋಗ ಪ್ರವಾಸೋದ್ಯಮ ಅಂತಲೇ ಒಂದು ಶಾಖೆ ಹುಟ್ಟಿಕೊಂಡಿದೆ. ಅಂದರೆ ವಿಶ್ವಾದ್ಯಂತ ಇಂದು ಯೋಗದತ್ತ ಆರ್ಕಷಿತರಾಗುತ್ತಿರುವ ಜನರು ಹಾಗೂ ಅದನ್ನು ಕಲಿಸುತ್ತಿರುವವರು ಯೋಗವು ಭಾರತೀಯರು ಕಂಡುಹಿಡಿದ ಅದ್ಭುತ ಚಿಕಿತ್ಸಾವಿಧಾನ ಎಂಬ ಚಿತ್ರವನ್ನು ಗಟ್ಟಿ ಮಾಡುತ್ತಿದ್ದಾರೆ.

   ಯೋಗವು ಮಾನವನ ದೈಹಿಕ ಹಾಗೂ ಮಾನಸಿಕ  ನೆಮ್ಮದಿಯನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿರಬಹುದು, ಅದಿಲ್ಲದಿದ್ದರೆ ಇಷ್ಟೊಂದು ಜನರು ಅದರೆಡೆ ಆರ್ಕಷಿತರಾಗಲು ಕಾರಣವಿಲ್ಲ.  ಆದರೆ ಇಲ್ಲಿ ನಮಗೆ ಏಳಬಹುದಾದ ಒಂದು ಸರಳ ಪ್ರಶ್ನೆ ಎಂದರೆ ನಮ್ಮ ಪ್ರಾಚೀನ ಮಹರ್ಷಿಗಳು  ದೈಹಿಕ ಮಾನಸಿಕ ವ್ಯಾಧಿಗಳ  ಚಿಕಿತ್ಸೆಯನ್ನು ಯೋಗವೆಂದು ಏಕೆ ಕರೆದರು?  ಅಂದರೆ ನಮ್ಮ ಮಹರ್ಷಿಗಳೆಲ್ಲರೂ ಕೇವಲ ದೈಹಿಕ-ಮಾನಸಿಕ ಚಿಕಿತ್ಸೆಯನ್ನು ಪ್ರತಿಪಾದಿಸಿದ ವೈದ್ಯರೆ?  ಯಾವ ದೇಹ ಹಾಗೂ ಮನಸ್ಸುಗಳ ಮೋಹವನ್ನು ದಾಟಿದ ಹೊರತೂ ಮುಕ್ತಿ ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿದರೋ ಅವುಗಳ ಚಿಕಿತ್ಸೆಗಷ್ಟೇ ಅವರು ಜೀವನ ಸವೆಸಿದರೆ? ಹಾಗಾಗಿ ಯೋಗವೊಂದು ವಿಜ್ಞಾನ ಎನ್ನುವವರು ಅದು ಇಂದಿನ ವೈದ್ಯಕೀಯ ಶಾಸ್ತ್ರವಲ್ಲ,  ಭಾರತೀಯ ಅಧ್ಯಾತ್ಮ ವಿಜ್ಞಾನ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳಬೇಕು. ಅದು ಆತ್ಮ ವಿದ್ಯೆ. ಅಧ್ಯಾತ್ಮವು ಪ್ರಪಂಚದ ವಿಜ್ಞಾನಗಳಿಗೆ ಭಾರತೀಯರು ನೀಡಿದ ಕೊಡುಗೆ ಹಾಗೂ ಅದೇ ಮಾನವನಿಗೆ  ಸಂಬಂಧಿಸಿ ಇದುವರೆಗೆ ಬೆಳೆದು ಬಂದ ಅಧ್ಯಯನಗಳಲ್ಲಿ ನಿಜವಾದ ವಿಜ್ಞಾನ ಎಂಬುದಾಗಿ ಪ್ರೊ. ಬಾಲಗಂಗಾಧರರು ಹೇಳುತ್ತಾರೆ.

   ಯೋಗದಿನದಂದು ಸೂರ್ಯನಮಸ್ಕಾರವನ್ನು ಕೈಬಿಟ್ಟ ಕುರಿತು ಟೀಕೆಗಳು ಬಂದಿವೆ. ಆದರೆ ನನ್ನ ಪ್ರಕಾರ ಅದೊಂದು ಯೋಗ್ಯ ನಿರ್ಧಾರ. ಅಲ್ಲಾನ ಪ್ರಾರ್ಥನೆಯನ್ನು ಕೈಬಿಟ್ಟು ನಮಾಜು ಮಾಡಿ ಎಂದರೆ ಮುಸ್ಲಿಮರಿಗೆ ಅದು ಸಾಧ್ಯವಿಲ್ಲ. ಏಕೆಂದರೆ ಅಲ್ಲಾನ ಪ್ರಾರ್ಥನೆಗಾಗಿಯೇ ನಮಾಜು ಇರುವುದು. ಆದರೆ ಸೂರ್ಯನಮಸ್ಕಾರವನ್ನು ಕೈಬಿಟ್ಟೂ  ಯೋಗವನ್ನು ಮಾಡಬಹುದು. ಸೂರ್ಯ ನಮಸ್ಕಾರದಲ್ಲಿ ಒಳಗೊಂಡ ಎಂಟೂ ಆಸನಗಳೂ ಅದರಲ್ಲಿ ಪ್ರತ್ಯೇಕವಾಗಿ ಬರುತ್ತವೆ. ಅಂದರೆ ಯೋಗಕ್ಕೆ  ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕೆಲವು ಸೆಕ್ಯುಲರ್ ಚಿಂತಕರು ಯಾವ ಮತೀಯತೆಯನ್ನು ಆರೋಪಿಸಬಯಸುತ್ತಾರೋ  ಅದನ್ನೇ ಹೊಡೆದು ಹಾಕಿದಂತಾಯಿತು. ಯೋಗವು ರಿಲಿಜನ್ನಲ್ಲ ಎಂಬುದನ್ನು ಇದಕ್ಕೂ ಚೆನ್ನಾಗಿ ತಿಳಿಸಲು ಸಾಧ್ಯವಿಲ್ಲ. ಹಿಂದೂ ಪರಂಪರೆಗಳ ಶಕ್ತಿ ಇಲ್ಲಿದೆ. ಅದು ಅಧ್ಯಾತ್ಮ ಸಾಧನೆಯ ಮಾರ್ಗ ಅಂತಾದರೆ ಸೂರ್ಯ ನಮಸ್ಕಾರದ ಬದಲಾಗಿ ಅದನ್ನು ಅಲ್ಲಾ ನಮಸ್ಕಾರವಾಗಿ ಮಾಡಿಕೊಂಡೂ ಒಬ್ಬ ಮುಸ್ಲಿಮನು ಅಧ್ಯಾತ್ಮ ಸಾಧನೆ ಮಾಡಬಹುದು.  ಆತ್ಮ ವಿದ್ಯೆ ಎನ್ನುವುದು ಮನುಷ್ಯ ಜೀವಿಗಳೆಲ್ಲರಿಗೂ ಅನ್ವಯವಾಗುವಂಥದ್ದು. ಮುಸ್ಲಿಮರು, ಕ್ರೈಸ್ತರು ಮನುಷ್ಯ ಜೀವಿಗಳಲ್ಲವೆ?

   ಇಲ್ಲಿ ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಬೇಕಾದದ್ದು  ಸೂರ್ಯನಮಸ್ಕಾರ ಹಾಗೂ ಯೋಗ ಸಂಪ್ರದಾಯವು ಸೆಕ್ಯುಲರ್ ಸಮಸ್ಯೆಯಾದುದರ ಕುರಿತು. ಯೋಗ ಎಂಬುದಕ್ಕೆ ಸೂರ್ಯನಮಸ್ಕಾರವನ್ನು ಸೇರಿಸಿದರೂ ಕೂಡ ಅದು ಸೆಕ್ಯುಲರ್ ಸಮಸ್ಯೆಯಾಗಲಾರದು. ಏಕೆಂದರೆ ಯೋಗ ಸಂಪ್ರದಾಯವು ಯಾವ ಹಿಂದೂ ಪರಂಪರೆಯ ಭಾಗ ಎನ್ನಲಾಗುತ್ತದೆಯೋ ಅದು ರಿಲಿಜನ್ನಲ್ಲ. ಹಾಗೂ ಅಧ್ಯಾತ್ಮ ಎಂಬುದು  ಮುಸ್ಲಿಂ ಕ್ರಿಶ್ಚಿಯನ್ನರು ಕೂಡ ತಮ್ಮ ದೇವತಾ ಕಲ್ಪನೆ, ಆಚರಣೆಗಳನ್ನಿಟ್ಟುಕೊಂಡೇ ತಲುಪಬಹುದಾದ ಗುರಿ ಎಂಬುದಾಗಿ ಭಾರತೀಯರು ತಿಳಿದಿದ್ದಾರೆ. ಮುಸ್ಲಿಂ ಕ್ರೈಸ್ತ ಇತ್ಯಾದಿಗಳೆಲ್ಲ ಆ ಅಂತಿಮ ಸತ್ಯವನ್ನು ತಲುಪಲು ವಿಭಿನ್ನ ಮಾರ್ಗಗಳು. ಅಂದರೆ ಎಲ್ಲಾ ಮಾರ್ಗಗಳೂ ಮಾನವನನ್ನು ಸತ್ಯದೆಡೆಗೆ ಒಯ್ಯುತ್ತವೆ.

   ಆದರೆ ನಮಾಜು, ವರ್ಷಿಪ್ ಇತ್ಯಾದಿಗಳು ರಿಲಿಜನ್ನಿನ ಆಚರಣೆಗಳು. ನಮಾಜಿನ ಕುರಿತು ಸಂಪ್ರದಾಯಸ್ಥ ಮುಸ್ಲಿಮರು ಏನು ಹೇಳುತ್ತಾರೆ ಎನ್ನುವುದರ ವರದಿಗಳು ಮಾಧ್ಯಮಗಳಲ್ಲಿ ಬಂದಿವೆ. ತಾವು ಅಲ್ಲಾನನ್ನು ಬಿಟ್ಟು ಮತ್ತೊಬ್ಬ ದೇವತೆಯನ್ನು ಪ್ರಾರ್ಥಿಸಿದರೆ ಅದು ಪಾಪ ಎನ್ನುತ್ತಾರೆ ಅವರು. ಏಕೆಂದರೆ ಇತರರು ಸುಳ್ಳು ದೇವತೆಗಳು ಹಾಗೂ ಅವು ಸತ್ಯದೇವನನ್ನು ಸೇರುವ ಮಾರ್ಗಗಳೇ ಅಲ್ಲ. ಸಂಪ್ರದಾಯಸ್ಥ ಮುಸ್ಲಿಮರಿಗೆ ಸೂರ್ಯ ನಮಸ್ಕಾರ ಮಾಡುವುದು ಪಾಪಕಾರ್ಯ ಎಂಬ ನಂಬಿಕೆ ಇದೆಯೆಂದರೆ ಅವರಿಗೆ ಹಿಂದೂ ಎಂಬ ರಿಲಿಜನ್ನಿದೆ, ಅದರಲ್ಲಿ  ಅವರು ಪ್ರಾರ್ಥಿಸುವ ದೇವತೆಗಳು ಸುಳ್ಳು ದೇವತೆಗಳು, ಆದರೆ ತಮ್ಮ ದೇವ ಅಲ್ಲಾ ಮಾತ್ರವೇ ಸತ್ಯ ಎಂಬ ಗ್ರಹಿಕೆಗಳು ಇರುವುದು ಸ್ಪಷ್ಟ. ಹಾಗಾಗಿ ಅವರು ಅನ್ಯ ಮತದ ಆಚರಣೆಗಳನ್ನು ಒಳಗೊಳ್ಳಲಾರರು.

   ಆಶ್ಚರ್ಯವೆಂದರೆ ಭಾರತೀಯ ಗ್ರಾಮಾಂತರದ ಮುಸ್ಲಿಮರು ಹಿಂದೂ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ, ಕೈಮುಗಿಯುತ್ತಾರೆ, ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಹಿಂದೂಗಳಿಗೆ ಅದರಿಂದ ಏನೂ ಸಮಸ್ಯೆಯಿಲ್ಲ. ಆದರೆ  ಇಸ್ಲಾಂ ಒಂದು ರಿಲಿಜನ್ನಾಗಿ ಇಂಥ ಆಚರಣೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ. ಅವನ್ನು ತೊಡೆಯುವ ಕುರಿತು ಇಸ್ಲಾಂನಲ್ಲಿ ಚಳವಳಿಗಳು ಇಂದು ನಡೆಯುತ್ತಿವೆ. ಭಾರತೀಯ ಹಿಂದೂ ರಾಜಕಾರಣಿಗಳು ಕೆಲವೊಮ್ಮೆ ನಮಾಜೂ ಮಾಡುತ್ತಾರೆ, ಚರ್ಚೆಗೂ ಹೋಗುತ್ತಾರೆ. ಅದಕ್ಕೆ ಯಾವ ಹಿಂದೂ ಮಠಾಧೀಶರಿಂದಲೂ ಇದುವರೆಗೆ ಆಕ್ಷೇಪಣೆ ಬಂದಿಲ್ಲ. ಅಂದರೆ ಸೂರ್ಯ ನಮಸ್ಕಾರ ಹಾಗೂ ನಮಾಜು ಮಾಡುವ ಆಚರಣೆಗಳಲ್ಲಿ ಸಹಬಾಳ್ವೆಯ ಸಮಸ್ಯೆಯೇನಾದರೂ ಸೃಷ್ಟಿಯಾದರೆ ಅದು ನಮಾಜಿನ ವೈಶಿಷ್ಟ್ಯತೆಗೆ ಸಂಬಂಧಿಸಿದ್ದು. ಹಾಗಾಗಿ ನಿಜವಾಗಿಯೂ ಸಹಬಾಳ್ವೆಯ ಪಾಠ ಹಾಗೂ ತರಬೇತಿಯು ಇಂಥ ರಿಲಿಜನ್ನಿನ ವಕ್ತಾರರಿಗೆ ಅತ್ಯಗತ್ಯವಿದೆ. ಸೂರ್ಯ ನಮಸ್ಕಾರ ಮಾಡುವವರಿಗಲ್ಲ. ಇದು ಭಾರತೀಯ ಸೆಕ್ಯುಲರ್ ಸರ್ಕಾರಗಳು ತಿಳಿದಿರಬೇಕಾದ ವಾಸ್ತವ.

Advertisements
Categories: Uncategorized
  1. Rajeshawari Y.M, Kannada Lecturer
    ನವೆಂಬರ್ 16, 2015 ರಲ್ಲಿ 11:29 ಫೂರ್ವಾಹ್ನ

    ಹಿಂದೂ ಧರ್ಮ, ಕ್ರೈಸ್ತ ಧರ್ಮ, ಮುಸ್ಲಿಂ ಧರ್ಮ ಎಂದು ಭೇದವಿಲ್ಲದೆ ನಾವೆಲ್ಲರು ಈ ಭಾರತದಲ್ಲಿ ಜೀವಿಸುತ್ತಿದ್ದೇವೆ. ಒಳ್ಳೆಯ ವಿಚಾರಗಳನ್ನು ಒಳ್ಳೆಯ ಆಚರಣೆಗಳನ್ನು ಎಲ್ಲಾ ಧರ್ಮದಿಂದಲೂ ಸ್ವೀಕರಿಸೋಣ ಎನ್ನುವ ಆಲೋಚನೆ ಪ್ರತಿಯೊಬ್ಬ ಧರ್ಮದವನಲ್ಲಿಯೂ ಬಂದರೆ ಅದೇ ಮಾನವೀಯತೆಯಾಗಿದೆ. ಈ ಅಭಿಪ್ರಾಯವನ್ನು ಈ ಲೇಖನವು ತುಂಬ ಅಚ್ಚುಕಟ್ಟಾಗಿ ನಿರೂಪಿಸಿದೆ. ಲೇಖಕರಿಗೆ ತುಂಬಾ ಧನ್ಯವಾದಗಳು.

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: