ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 31:ಭಾರತೀಯ ಅರಸು ಮನೆತನಗಳ ಸಾಮಾಜಿಕ ಹಿನ್ನೆಲೆ

ಪ್ರೊ. ರಾಜಾರಾಮ ಹೆಗಡೆ

  ಆರ್ಯರು ಭಾರತಕ್ಕೆ ಬಂದ ನಂತರ ತಮ್ಮ ಜನಾಂಗದ ಪರಿಶುದ್ಧತೆಯನ್ನು  ಹಾಗೂ ಶ್ರೇಷ್ಟತೆಯನ್ನು ಕಾಪಾಡಿಕೊಳ್ಳಲು ವರ್ಣ/ಜಾತಿಗಳನ್ನು ಹುಟ್ಟುಹಾಕಿದರು ಎಂಬ ಸಿದ್ಧಾಂತವು ಇಂದು ಜನಪ್ರಿಯವಾಗಿದೆ. ಭಾರತೀಯ ಮೂಲದ ಜನರನ್ನೆಲ್ಲ ಶೂದ್ರ ಹಾಗೂ ಪಂಚಮರೆಂದು ಈ ವ್ಯವಸ್ಥೆಯಲ್ಲಿ ಕೆಳಜಾತಿಗಳನ್ನಾಗಿ ಮಾಡಲಾಯಿತು.  ಹಾಗೂ ಆರ್ಯ ಹಿನ್ನೆಲೆಯ ಮೇಲಿನ ಮೂರು ವರ್ಣಗಳು ತಮ್ಮ ಶ್ರೇಷ್ಠತೆಯನ್ನು ಕಾಯ್ದುಕೊಂಡವು ಎಂಬುದು ಜನಪ್ರಿಯ ಕಥೆಯಾಗಿದೆ.  ವರ್ಣಧರ್ಮವು ಆಳುವವರನ್ನು ಕ್ಷತ್ರಿಯರೆಂದು ಕರೆಯುತ್ತದೆ. ಹಾಗೂ ಬ್ರಹ್ಮ, ಕ್ಷತ್ರಿಯ, ವೈಶ್ಯ ಈ ಮೂರು ವರ್ಣಗಳು ದ್ವಿಜ ವರ್ಣಗಳು ಎನ್ನುತ್ತದೆ. ದ್ವಿಜರು ಆರ್ಯರು ಎಂಬುದಾಗಿ ಸಮೀಕರಿಸಲಾಗಿದೆ. ಹಾಗೂ ಆಳುವ ವರ್ಗವು ಆರ್ಯ ಹಿನ್ನೆಲೆಯದು ಎನ್ನುವ ತರ್ಕವು ಕೂಡ ಸಹಜವಾಗಿಯೇ ಕಾಣುತ್ತದೆ.

  ಆದರೆ ವರ್ಣವೆಂದರೇನು? ಅದಕ್ಕೂ  ಜಾತಿಗಳಿಗೂ ನಡುವೆ ಸಂಬಂಧವೇನು?  ಆರ್ಯ ಎಂದರೇನು? ಎಂಬ ಪ್ರಶ್ನೆಗಳಿಗೆ ನಾವು ಇದುವರೆಗೆ ನಂಬಿಕೊಂಡ ಉತ್ತರಗಳು ಸರಿಯಿಲ್ಲ ಎಂಬುದನ್ನು ವಿದ್ವಾಂಸರು ಮನಗಂಡಿದ್ದಾರೆ. ಅದೇ ರೀತಿ ದೇಶೀ ಮೂಲನಿವಾಸಿಗಳನ್ನು ಶೂದ್ರ/ಪಂಚಮ  ಜಾತಿಗಳನ್ನಾಗಿ ಮಾಡಿ ಅವರ ಮೇಲೆ ಸವಾರಿ ಮಾಡಲು ವರ್ಣವ್ಯವಸ್ಥೆಯನ್ನು ಹುಟ್ಟುಹಾಕಲಾಯಿತೆ ಎಂಬ ಪ್ರಶ್ನೆಗೂ ಭಾರತದ ಚರಿತ್ರೆಯು ಸಕಾರಾತ್ಮಕ ಉತ್ತರವನ್ನು ನೀಡುವುದಿಲ್ಲ. ಏಕೆಂದರೆ ವರ್ಣ ವ್ಯವಸ್ಥೆಯಲ್ಲಿ ನಿಜವಾಗಿಯೂ ಪ್ರಭುತ್ವವನ್ನು ರಚಿಸಿ ಆಡಳಿತ ನಡೆಸಿದ ವರ್ಣವು  ಕ್ಷತ್ರಿಯ ಎನ್ನಿಸಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಆಳುವ ಜಾತಿಗಳಿಗೂ, ಕ್ಷತ್ರಿಯ ಎಂಬ ವರ್ಣಕ್ಕೂ  ಸ್ಥಾಯಿಯಾದ ಸಂಬಂಧವೇ ಕಂಡುಬರುವುದಿಲ್ಲ. ಭಾರತೀಯ ಚರಿತ್ರೆಯುದ್ದಕ್ಕೂ ಈ ಅಸ್ಪಷ್ಟತೆ ಕಂಡುಬರುತ್ತದೆ. ಇದರೊಳಗೆ ಆರ್ಯ ಎನ್ನುವ ಆಳುವ ಜನಾಂಗವನ್ನು ಎಲ್ಲಿ ಹುಡುಕುತ್ತೀರಿ?

  ನಮ್ಮ ಚರಿತ್ರೆಯು ದಾಖಲಿಸುವಂತೆ ಬೇರೆ ಬೇರೆ ಪ್ರಾದೇಶಿಕ ಜಾತಿಗಳ ಹಿನ್ನೆಲೆಯಿಂದ ಬಂದ ನಾಯಕರು ರಾಜ್ಯವನ್ನು ಕಟ್ಟಿದ್ದಾರೆ. ಅವರಲ್ಲಿ ಕೆಲವರು ತಮ್ಮ ರಾಜ್ಯವನ್ನು ಸಾಮ್ರಾಜ್ಯವನ್ನಾಗಿ ಬೆಳೆಸಿದ್ದಾರೆ. ಒಂದು ಪ್ರಾದೇಶಿಕ ಅಥವಾ ಸ್ಥಾನಿಕ ಹಿನ್ನೆಲೆಯ ನಾಯಕರು ಅಥವಾ ಅಧಿಕಾರಿಗಳಲ್ಲಿ ಕೆಲವು ಸಾಹಸಿಗಳು ಸ್ವತಂತ್ರ ರಾಜರಾಗಿ ಬೆಳೆಯುತ್ತಿದ್ದರು.  ಅವರು ರಾಜರಾದಾಗ ಅವರನ್ನು ಹಾಗೂ ಅವರ ಹತ್ತಿರದ ಸಂಬಂಧಿಗಳ ಬಳಗವನ್ನು ಕ್ಷತ್ರಿಯರನ್ನಾಗಿ ಮಾಡಿ ಪಟ್ಟಾಭಿಷೇಕದ ವಿಧಿಗಳನ್ನು ನೆರವೇರಿಸಿ ಬಿರುದು ಬಾವಲಿಗಳನ್ನು ನೀಡಲಾಗುತ್ತಿತ್ತು. ಹಳೆ ಮೈಸೂರಿನ ದೇವಚಂದ್ರ ಎಂಬ ಕವಿಯ ರಾಜಾವಳಿ ಕಥಾಸಾರ ಎಂಬ ಗ್ರಂಥವು ತಿಳಿಸುವ ಪ್ರಕಾರ ಇಂತಹ ರಾಜನ ರಕ್ತ ಸಂಬಂಧಕ್ಕಾಗಿ ಅವನ ಬಳಗದಲ್ಲಿ ಆಯ್ದ ಕುಟುಂಬಗಳಿಗೆ ಗೋತ್ರ ಸೂತ್ರಗಳನ್ನು ನೀಡಿ, ಪೌರಾಣಿಕ ಸೂರ್ಯ-ಚಂದ್ರ ವಂಶಗಳಿಗೆ ಅವನ್ನು ಜೋಡಿಸಿ ಅವರನ್ನು ಕ್ಷತ್ರಿಯರನ್ನಾಗಿ ಮಾಡಲಾಗುತಿತ್ತು. ಛತ್ರಪತಿ ಶಿವಾಜಿಯು ಮರಾಠಾ ಜಾತಿಗೆ ಸೇರಿದ್ದು ಅವನ ಪಟ್ಟಾಭಿಷೇಕವನ್ನು ಸ್ಥಳೀಯ ಬ್ರಾಹ್ಮಣರು ನೆರವೇರಿಸಲು ನಿರಾಕರಿಸಿದಾಗ ಅವನು ಬೇರೆಡೆಯಿಂದ ಬ್ರಾಹ್ಮಣರನ್ನು ಕರೆಸಿಕೊಂಡು ಸಂಸ್ಕಾರವನ್ನು ಮಾಡಿಸಿಕೊಂಡನು. ಈ ಸಂಸ್ಕಾರವು ಚಕ್ರವರ್ತಿಗಳಿಗೆ ಅಥವಾ ಸಾಮ್ರಾಟರಿಗೆ ನಡೆದುದಕ್ಕೆ ಚಾರಿತ್ರಿಕ ದಾಖಲೆಗಳಿವೆ. ಆದರೆ ಅದಕ್ಕೂ ಕೆಳಹಂತದ ರಾಜರಿಗೆ ನಡೆದ ದಾಖಲೆಗಳು ವಿರಳ.

  ಆದರೆ ಇಂಥ  ಉದಾಹರಣೆಗಳಲ್ಲಿ  ಇಡೀ ಜಾತಿಯೇ ಆಳುವ ಸ್ಥಾನಕ್ಕೇರಿದ ಸೂಚನೆಗಳಿಲ್ಲ. ಆ ಜಾತಿಯಲ್ಲೇ ಕೆಲವು ಆಳುವ ಕುಟುಂಬಗಳು ಅಸ್ತಿತ್ವಕ್ಕೆ ಬರುತ್ತಿದ್ದವು. ಉದಾಹರಣೆಗೆ ಚಿತ್ರದುರ್ಗದ ಸುತ್ತ ಮುತ್ತ ಪಾಳೆಯಗಾರ ನಾಯಕರಾಗಿ ಪ್ರವರ್ಧಮಾನಕ್ಕೆ ಬಂದ ಬೇಡರು ಸುಮಾರು ಎರಡು ನೂರು ವರ್ಷಗಳಷ್ಟು ಕಾಲ ಆ ಪ್ರದೇಶವನ್ನಾಳಿದರು.  ಆದರೆ ಆ ಕಾಲದಲ್ಲಾದರೂ ಈ ಪ್ರದೇಶದ ಬೇಡರೆಲ್ಲರೂ ಆಳುವವರ್ಗವಾಗಿದ್ದುದರ ಸೂಚನೆ ಇಲ್ಲ. ಇಂದು ಕೂಡ ಅದೇ ಬೇಡರು ಈ ಪ್ರದೇಶದಲ್ಲಿ ನೆಲೆಸಿದ್ದಾರೆ. ಇವರೆಲ್ಲ ಪರಿಶಿಷ್ಟ ಪಂಗಡದಲ್ಲಿ ಬರುತ್ತಾರೆ. ಒಂದು ಕಾಲದಲ್ಲಿ ಈ ಸಮುದಾಯಕ್ಕೆ ಸೇರಿದವರು ಈ ಪ್ರದೇಶವನ್ನು ಆಳಿದ್ದರು ಎಂಬುದರಿಂದ ಈ ಸಮಸ್ತ ಬೇಡರ ಸ್ಥಾನಮಾನವೇನೂ ಬದಲಾದಂತೆ ಕಾಣುವುದಿಲ್ಲ. ಅವರಲ್ಲೇ ಕೆಲವು ಕುಲ ಹಾಗೂ ಕುಟುಂಬಗಳು ಮುಂಚೂಣಿಗೆ ಬಂದವು. ಹೀಗೆ ಆಳುವ ಸ್ಥಾನವನ್ನು ಗಳಿಸಿಕೊಂಡ ಅನೇಕ ಅರಸರು ಕ್ಷತ್ರಿಯ ಸಂಸ್ಕಾರಗಳನ್ನು ಹೊಂದಿದಂತೆಯೂ ಕಾಣುವುದಿಲ್ಲ. ಅಂದರೆ ಆಳುವವರೆಲ್ಲ ಕ್ಷತ್ರಿಯ ವರ್ಣಕ್ಕೆ ಸೇರಲೇಬೇಕಿರಲಿಲ್ಲ, ಹಾಗೂ ಆಳ್ವಿಕೆಗೂ, ಕ್ಷತ್ರಿಯ ವರ್ಣಕ್ಕೂ, ಜನಾಂಗಕ್ಕೂ, ಜಾತಿಗೂ ಕಾರ್ಯಕಾರಣ ಸಂಬಂಧವಿದ್ದಂತೆ ಕಾಣುವುದಿಲ್ಲ.  ಹಾಗಾಗಿ ಭಾರತೀಯ ಚರಿತ್ರೆಯ ಯಾವುದಾದರೂ ಕಾಲಘಟ್ಟದಲ್ಲಿ ಆರ್ಯರೆಂಬ ಪರಕೀಯರು ವರ್ಣವ್ಯವಸ್ಥೆಯ ಮೂಲಕ ಇಲ್ಲಿನ ಮೂಲನಿವಾಸಿಗಳನ್ನು ಆಳಿದ್ದರು ಎಂಬುದು ಅಸಂಬದ್ಧ.

  ಇನ್ನು ಈ ಆಳುವ ಪಟ್ಟವು ಕೇವಲ ಮೇಲ್ಜಾತಿಗಳಿಗೇ ಮೀಸಲಾಗಿತ್ತೆ? ನಮಗೆ ಅಂಥ ಆಧಾರಗಳಿಲ್ಲ. ನಂದ-ಮೌರ್ಯ ಕಾಲದಿಂದ ನಮ್ಮ ರಾಜಮನೆತನಗಳ ಯುಗ ಪ್ರಾರಂಭವಾಗುತ್ತದೆ. ತದನಂತರ ಹದಿನೆಂಟನೆಯ ಶತಮಾನದ ವರೆಗೆ  ಸಾವಿರಾರು ದೊಡ್ಡ-ಸಣ್ಣ ರಾಜ ಮನೆತನಗಳು ಭಾರತದ ತುಂಬ ಆಳಿವೆ. ಇವುಗಳ ಮೂಲ ಪುರುಷರನ್ನು ಪರಿಗಣಿಸಿದಾಗ ಬ್ರಾಹ್ಮಣರಾದಿಯಾಗಿ ಅಸ್ಪೃಶ್ಯರ ವರೆಗೆ ಎಲ್ಲ  ಜಾತಿಯವರೂ ಈ ಸ್ಥಾನವನ್ನು ಅಲಂಕರಿಸಿದ ಉದಾಹರಣೆಗಳಿವೆ. ಬ್ರಾಹ್ಮಣ ಹಿನ್ನೆಲೆಯವರು ರಾಜರಾದದ್ದು ತೀರಾ ಅಪರೂಪ. ಕರ್ನಾಟಕದಲ್ಲಿ ನಮಗೆ ಕದಂಬ ಮಯೂರವರ್ಮನ ಉದಾಹರಣೆ ಸುಪ್ರಸಿದ್ಧವಾಗಿದೆ. ಬಹುತೇಕರು ರೈತಾಪಿ, ಬುಡಕಟ್ಟು ಅಲೆಮಾರಿ ಜನಾಂಗಗಳ ಹಿನ್ನೆಲೆಯವರಾಗಿದ್ದಾರೆ. ಧರ್ಮಪಾಲ ಎಂಬ ವಿದ್ವಾಂಸರು ಎತ್ತಿಹೇಳಿದ ಹಾಗೇ ವಸಾಹತು ಪೂರ್ವ ಕಾಲದ ಭಾರತೀಯ ರಾಜರುಗಳಲ್ಲಿ ಬಹುತೇಕರು ಇಂದಿನ ಹಿಂದುಳಿದ ಸಮುದಾಯಗಳ ಹಿನ್ನೆಲೆಯವರು. ದಕ್ಷಿಣ ಭಾರತದಲ್ಲಿ ವಿಜಯನಗರ ಕಾಲದ ನಂತರ ಲಿಂಗಾಯತರು, ಒಕ್ಕಲಿಗರು ಹಾಗೂ ರೆಡ್ಡಿಗಳು ಇತ್ಯಾದಿ ಕೃಷಿ ಹಿನ್ನೆಲೆಯ ಜಾತಿಗಳ ಜೊತೆಗೆ ಇಂದು ಹಿಂದುಳಿದ ಜಾತಿಗಳು ಎಂದು ಗುರುತಿಸಬಹುದಾದ ಕುರುಬರು, ಬೇಡರು, ಮರವರು, ಇಂಥ ಅನೇಕ ಜಾತಿಗಳು ಪ್ರಧಾನವಾಗಿ ಪ್ರಾದೇಶಿಕ ಅರಸೊತ್ತಿಗೆಗಳನ್ನು ಆಳಿದ್ದು ಕಂಡುಬರುತ್ತದೆ. ಭಾರತೀಯ ಚರಿತ್ರೆಯುದ್ದಕ್ಕೂ  ಗುಡ್ಡಗಾಡುಗಳಲ್ಲಿ ಅಂಡಲೆಯುವ ಸಮುದಾಯಗಳೇ ಬಹುತೇಕವಾಗಿ ರಾಜ್ಯ ಕಟ್ಟಿದ್ದಾರೆ.

   ರಾಜತ್ವವೆಂಬುದು ತೀರಾ ಕ್ರಿಯಾಶೀಲವಾಗಿ, ಸ್ವಂತ ಯೋಗ್ಯತೆಯನ್ನವಲಂಬಿಸಿ ಗಳಿಸಬೇಕಾದಂತಹ ಹಾಗೂ ಉಳಿಸಿಕೊಳ್ಳಬೇಕಾದಂತಹ  ಅಧಿಕಾರವಾಗಿತ್ತು. ಜಾತಿ, ಕುಲ ಅಂತೆಲ್ಲ ಕಟ್ಟು ನಿಟ್ಟುಗಳು ಇದ್ದರೂ ಆ ಚೌಕಟ್ಟಿಗೆ ಅದು ಒಗ್ಗಿಕೊಳ್ಳುತ್ತಿರಲಿಲ್ಲ. ಈ ವಾಸ್ತವವನ್ನು ಭಾರತೀಯರು ಒಪ್ಪಿಕೊಂಡಿದ್ದರು. ರಾಜಾವಳಿ ಕಥಾಸಾರದಲ್ಲೇ ಕೆಳಜಾತಿಯವರು ರಾಜರಾಗುವುದಕ್ಕೆ ಸಂಬಂಧಿಸಿ ಈ ಕೆಳಗಿನ ಅಭಿಪ್ರಾಯ ಬರುತ್ತದೆ ಕಲಿಯುಗದಲ್ಲಿ ಜಾತಿ ಕ್ಷತ್ರಿಯ ಮತ್ತು ತೀರ್ಥ ಕ್ಷತ್ರಿಯ ಎಂಬ ಎರಡು ವಿಧಗಳಿವೆ. ರಾಜ ಮನೆತನಗಳಲ್ಲಿ ಹುಟ್ಟಿದವನು ಜಾತಿ ಕ್ಷತ್ರಿಯ. ಹಾಗೆ ಹುಟ್ಟದಿದ್ದರೂ ತನ್ನ ಸ್ವಂತ ಯೋಗ್ಯತೆಯಿಂದ ಸಿಂಹಾಸನವನ್ನು ಗಳಿಸಿದವನು ಬ್ರಾಹ್ಮಣನೇ ಇರಬಹುದು, ಚಾಂಡಾಲನೇ ಇರಬಹುದು ಅವನು ತೀರ್ಥ ಕ್ಷತ್ರಿಯ ಎಂದು ಪರಿಗಣಿಸಿ ಕುಲಜರೆಲ್ಲರೂ ಅವನ ಕಾಲಿಗೆ ಎರಗುತ್ತಾರೆ.

   ಭಾರತೀಯ ಪ್ರಭುತ್ವಗಳಲ್ಲಿ ವಾಸ್ತವ ಇದ್ದದ್ದು ಹೀಗೆ. ಭಾರತೀಯ ಸಮಾಜದಲ್ಲಿ ಹುಟ್ಟನ್ನಾಧರಿಸಿಯೇ ಎಲ್ಲವೂ ನಿರ್ಣಯವಾಗುತ್ತಿತ್ತು, ಆಯಾ ಜಾತಿಗಳಿಗೆ ಆಯಾ ಕರ್ಮಗಳನ್ನು ಕಠಿಣವಾಗಿ ವಿಧಿಸಲಾಗುತ್ತಿತ್ತು ಎಂಬುದು ಸತ್ಯವೇ ಆಗಿದ್ದರೆ ಈ ಮೇಲೆ ಉಲ್ಲೇಖಿಸಿದ ದೇಶ ಭಾರತವೇ ಅಲ್ಲ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಈ ವಾಸ್ತವವನ್ನು ಇತಿಹಾಸಕಾರರು ಗುರುತಿಸಿದರೂ ಅದರ ಮಹತ್ವ ಅವರಿಗೆ ಕಾಣಿಸಿಲ್ಲ. ಏಕೆಂದರೆ ಅವರೆಲ್ಲ ವರ್ಣ/ಜಾತಿ ವ್ಯವಸ್ಥೆ ಹಾಗೂ ಬ್ರಾಹ್ಮಣ ಪುರೋಹಿತಶಾಹಿ ಎಂಬ ಕಥೆಯನ್ನು ಕಾಣಬಯಸುವುದರಿಂದ ಇಂಥ ವಿಭಿನ್ನ ಹಿನ್ನೆಲೆಯ ರಾಜರಿಗೆ ಬ್ರಾಹ್ಮಣರು ಕ್ಷತ್ರಿಯ ಸಂಸ್ಕಾರಗಳನ್ನು ಮಾಡಿಸುವುದೇ ನಿರ್ಣಾಯಕವಾಗಿ ಕಂಡಿದೆ. ಅವರ ಪ್ರಕಾರ ಇದೇ ಪುರೋಹಿತರ ಆಳ್ವಿಕೆಗೆ ಸಾಕ್ಷಿ. ಈ ತರ್ಕದ ಪ್ರಕಾರ ಇಂದೂ ಕೂಡ ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿರುವವರು ಕಾಂಗ್ರೆಸ್ಸಿಗರಲ್ಲ, ಪ್ರಜಾ ಪ್ರಭುತ್ವವೂ ಅಲ್ಲ. ಬ್ರಾಹ್ಮಣರು. ಏಕೆಂದರೆ ಆಳುವ ವರ್ಗದವರಿಗೆ ಹೋಮ ಹವನಗಳನ್ನು ಮಾಡಿಸಲಿಕ್ಕೆ ಬ್ರಾಹ್ಮಣರೇ ಹೋಗುತ್ತಾರಲ್ಲ!

Categories: Uncategorized
  1. valavi
    ಸೆಪ್ಟೆಂಬರ್ 24, 2015 ರಲ್ಲಿ 11:13 ಅಪರಾಹ್ನ

    ಶ್ರೀ ಸೂರ್ಯನಾಥ ಕಾಮತ್ ಅನ್ನುವವರು ಒಕ್ಕಲಿಗರು ಮತ್ತು ಒಕ್ಕಲುತನ ಪುಸ್ತಕದಲ್ಲಿ ಈ ಮಾತನ್ನು (ನೀವು ಹೇಳಿದ ಕ್ಷತ್ರಿಯೇತರರೇ ರಾಜರಿದ್ದರು) ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತು ಶ್ರೀ ಸರಜೂ ಕಾಟ್ಕರ್ ಅವರು ಶಿವಾಜಿ ಮೂಲ ಕನ್ನಡ ನೆಲ ಎಂಬ ಕೃತಿಯಲ್ಲಿ ನಿಮ್ಮದೇ ಮಾತನ್ನು ತಿಳಿಸಿದ್ದಾರೆ. ಶ್ರೀ ಕಲಬುರ್ಗಿ ಅವರು ನಾನು ವಿದ್ಯಾರ್ಥಿನಿ ಆಗಿದ್ದಾಗ ಇದೇ ಅರ್ಥದ ಮಾತನ್ನು ಹೇಳುತ್ತಿದ್ದರು. ಉದಾಹರಣೆಗೆ ಪುಲಕೇಶಿಯನ್ನು ನಾವೆಲ್ಲ ಹುಲಿಯಂತೆ ಕೂದಲಿರುವವ ಎಂದು ತಿಳಿದಿದ್ದೇವೆ. ಆದರೆ ಶಾಸನದಲ್ಲಿ ಅವನನ್ನು ಪೊಲಕೆಸ್ಸಿ ಎಂದು ಕರೆಯಲಾಗಿದೆ. ಪೊಲ ಎಂದರೆ ಹೊಲ. ಕೆಸ್ಸಿ ಅಂದರೆ ಮಾಡುವವ. ಅರ್ಥಾತ್ ಒಕ್ಕಲಿಗ. ಅಂದಮೇಲೆ ಚಾಲುಕ್ಯರು ಒಕ್ಕಲಿಗರಾಗಿದ್ದರು. ಹೀಗೆ ವಿವರಿಸುತ್ತಿದ್ದರು. ಸರಜೂ ಅವರು ಬಿಟ್ಟಿಗದೇವ ಇದು ಸರಿ ಅಲ್ಲ. ಅದು ಬೆಟ್ಟಿಗ ಏಕೆಂದರೆ ಒಂದು ಯುದ್ದದಲ್ಲಿ ಅವನು(ಹೊಯ್ಸಳವಿಷ್ಣುವರ್ಧನ) ತನ್ನ ಬೆರಳು ಕಳೆದುಕೊಂಡಿದ್ದರಿಂದ ಅವನನ್ನು ಬೆಟ್ಟಿಗ ಎನ್ನುತ್ತಿದ್ದರು. ಹೊಯ್ಸಳರು ಜೈನ ಮತಾವಲಂಬಿಗಳಲ್ಲ. ಕುರುಬರು ಎಂದು ತಿಳಿಸುತ್ತಾರೆ. ಅದಕ್ಕೆ ಸಾಕ್ಷಿಗಳನ್ನು ಕಲೆಹಾಕಿದ್ದಾರೆ. ಇರಲಿ ಇಷ್ಟೆಲ್ಲ ಸಾಕ್ಷಿಗಳು ಆಳುವ ವರ್ಗಕ್ಕಿದ್ದರೂ ಕೆಳಜಾತಿಗಳೇ ಇತಿಹಾಸದುದ್ದಕ್ಕೂ ಆಳಿಕೊಂಡು ಬಂದಿದ್ದರೂ ಅವರನ್ನು ಬ್ರಾಹ್ಮಣರು ಮಹಾಮಂತ್ರಿ ಸ್ಥಾನದಲ್ಲಿ ಇದ್ದುಕೊಂಡು ಕಂಟ್ರೋಲ್ ಮಾಡಿದರೆಂಬ ಅಪಕೀರ್ತಿ (ನಿಮ್ಮ ಕೊನೆಯ ಪ್ಯಾರಾದಲ್ಲಿ ತಿಳಿಸಿದಂತೆ) ಆ ಸಮುದಾಯಕ್ಕೆ ತಪ್ಪಿಲ್ಲ. ಇದನ್ನು ತಪ್ಪಿಸುವ ಬಗೆಯನ್ನು ಸಂಶೋಧಿಸಲೇಬೇಕಾಗಿದೆ.

    Like

  2. Sumanasa
    ಸೆಪ್ಟೆಂಬರ್ 29, 2015 ರಲ್ಲಿ 3:55 ಅಪರಾಹ್ನ

    I’ve heard that Mysore Wodeyars originated from a family of Kurubas.

    Like

  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ