ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 33: ಅಭಿವೃದ್ಧಿ, ಉದ್ಯೋಗಾವಕಾಶ ಮತ್ತು ಕೃಷಿಯ ಭವಿಷ್ಯ

ಪ್ರೊ. ರಾಜಾರಾಮ ಹೆಗಡೆ

ಅನ್ನ ಭಾಗ್ಯ ಯೋಜನೆಯ ಕುರಿತು ಪರ ವಿರೋಧ ಅಭಿಪ್ರಾಯಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಕಾವು ಪಡೆದುಕೊಳ್ಳುತ್ತಿವೆ. ಅನೇಕರು ಅದು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಅಭಿಪ್ರಾಯ ಪಟ್ಟವರು ಕೇವಲ ಬ್ರಾಹ್ಮಣರೊಂದೇ ಅಲ್ಲ. ಆದರೂ ಅದಕ್ಕೆ ವಿರೋಧವು ಬ್ರಾಹ್ಮಣ ಜಾತಿಯನ್ನು ಟೀಕಿಸುವ ರೂಪದಲ್ಲಿ ನಡೆಯಿತು. ಇನ್ನೂ ಕೆಲವರು ಈ ಅಭಿಪ್ರಾಯದ ಹಿಂದೆ ವರ್ಗ ಹಿತಾಸಕ್ತಿಯನ್ನು ಗುರುತಿಸುತ್ತಾರೆ. ಪ್ರಶ್ನೆ ಇರುವುದು ಹಸಿದವರಿಗೆ ಅನ್ನ ನೀಡಬೇಕೆ ಬೇಡವೆ ಎಂಬುದಲ್ಲ. ಅನ್ನದಾನವನ್ನು ಪುಣ್ಯದ ಕೆಲಸ ಎಂಬುದಾಗಿ ನಂಬಿದ ಸಂಸ್ಕೃತಿಯಲ್ಲಿ ಅಂಥದ್ದೊಂದು ಪ್ರಶ್ನೆ ಏಳಲು ಕಾರಣಗಳಿಲ್ಲ. ಹಸಿವು ಬಡತನಗಳನ್ನು ಉಡಾಫೆಯಿಂದ ನೋಡುವ ದೃಷ್ಟಿಕೋನ ಅಮಾನವೀಯ ಎಂಬುದು ನಿಶ್ಚಿತ. ಆದರೆ ಹಸಿವು ಬಡತನಗಳ ಹೆಸರಿನಲ್ಲಿ ನಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವುದನ್ನು ಕೂಡ ಮಾನವೀಯ ಕಾಳಜಿ ಎಂದು ಭ್ರಮಿಸಬೇಕಾದ್ದಿಲ್ಲ. ಬಹುಶಃ ಅದು ಮತ್ತೂ ಅಮಾನವೀಯ. ಇಂದಿನ ರಾಜಕಾರಣಿಗಳು (ಅವರು ಯಾವುದೇ ಪಕ್ಷಗಳಿರಲಿ) ಹಾಗೂ ಪ್ರಗತಿಪರರು ಈ ಎರಡನೆಯ ಸಾಧ್ಯತೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಸ್ವವಿಮರ್ಶೆಯನ್ನು ಕೈಗೊಳ್ಳುವುದರಲ್ಲಿ ತಪ್ಪೇನೂ ಇಲ್ಲ.

 ಈ ಚರ್ಚೆಯ ಸಂದರ್ಭದಲ್ಲಿ ಕೆಲವರು ಕೂಲಿ ಕಾರ್ಮಿಕ ಜನರನ್ನು ಅವಲಂಬಿಸಿದ ಕ್ಷೇತ್ರಗಳ ಮೇಲೆ ಈ ನೀತಿಯು ದುಷ್ಪರಿಣಾಮ ಬೀರುತ್ತದೆ ಎಂಬುದರತ್ತ ಗಮನ ಸೆಳೆದಿದ್ದಾರೆ. ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು  ದುಡಿಮೆಗಾರರಾಗಿದ್ದಷ್ಟೂ  ಆ ಕ್ಷೇತ್ರಕ್ಕೆ ಒಳ್ಳೆಯದು. ಸರಿ, ಅದರಿಂದ ಅವರಿಗೇನು ಪ್ರತಿಫಲ ಸಿಗುತ್ತಿದೆ? ಇಂದು ಬೆಲೆಯೇರಿಕೆ, ದುಬಾರಿ ಶಿಕ್ಷಣ, ಉಪಭೋಗ ವಸ್ತುಗಳ ಹೆಚ್ಚಳದಿಂದಾಗಿ ಎಷ್ಟು ದುಡಿದರೂ ಅವರಿಗೆ ಜೀವನದ ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲ. ಅದಕ್ಕೆ ಪರಿಹಾರವೇನು ಎಂಬುದು ಈ ಮೇಲಿನವರಿಗೆ ಸಂಬಂಧವಿಲ್ಲ.  ಹಾಗಾಗಿ ಇಂಥ ಧೋರಣೆಯು ಕಾರ್ಮಿಕ ಹಿನ್ನೆಲೆಯಿಂದ ಬಂದ ವಿದ್ಯಾವಂತರನ್ನು ಸಹಜವಾಗಿಯೇ ಕೆರಳಿಸುತ್ತದೆ.

 ಬಡವನೇ ಇರಲಿ, ಶ್ರೀಮಂತನೇ ಇರಲಿ ಸೋಮಾರಿತನದಿಂದ ಹಾಳಾಗುತ್ತಾನೆ. ಕೈಗಾರಿಕೆ, ಉದ್ದಿಮೆಗಳನ್ನು ಹೆಚ್ಚಿಸಿ ಉದ್ಯೋಗಾವಕಾಶವನ್ನು ಸೃಷ್ಟಿಸಿ ಅಂಥವರಿಗೆ ಸಹಾಯ ಮಾಡಬೇಕೇ ವಿನಃ ಪುಕ್ಕಟೆ ಕೊಟ್ಟು ಸೋಮಾರಿಗಳನ್ನಾಗಿ ಮಾಡುವುದರಿಂದಲ್ಲ. ಎಂಬ ಮತ್ತೊಂದು ವಾದವೂ ಇದೆ. ಈ ವಾದವು ಅಂತಿಮವಾಗಿ ಒಂದು ದೇಶ ಹಾಗೂ ಅದರ ಬಡಜನರ ಹಿತ ಹಾಗೂ ಏಳ್ಗೆಯನ್ನೇ ಗಮನದಲ್ಲಿಡುವುದರಿಂದ  ಅದು ಬಡಜನರ ಕುರಿತು ಕಾಳಜಿಯನ್ನೂ ಒಳಗೊಂಡಿದೆ ಎಂಬುದು ನಿಶ್ಚಿತ. ಆದರೆ ಈ ಹೇಳಿಕೆಯ ಇಂಗಿತ ಏನಾಗುತ್ತದೆ? ಕೂಲಿ, ಕಾರ್ಮಿಕರು ನಿರುದ್ಯೋಗ ಸಮಸ್ಯೆಯಿಂದ ಬಡವರಾಗಿ ಉಳಿದಿದ್ದಾರೆ, ಅವರನ್ನು ಪಟ್ಟಣಕ್ಕೆ ಸೆಳೆಯಿರಿ, ಅವರ ಜೀವನ ಮಟ್ಟವು ಹೆಚ್ಚುತ್ತದೆ ಎಂದ ಹಾಗಾಗುತ್ತದೆ.  ಅಂದರೆ ಅವರ ಜೀವನ ಮಟ್ಟ ಸುಧಾರಿಸಬೇಕಾದರೆ ಕೈಗಾರಿಕೀಕರಣ, ನಗರೀಕರಣಗಳೇ ಮದ್ದು.

ಇಂದು ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ಇರುವುದು ನಿರುದ್ಯೋಗದ ಸಮಸ್ಯೆಯಂತೂ ಖಂಡಿತ ಅಲ್ಲ ಎಂಬುದನ್ನು ಗಮನಿಸುವ ಅಗತ್ಯವಿದೆ. ಕಾರ್ಮಿಕರ ಕೊರತೆಯೇ ಈಗ ಸಧ್ಯಕ್ಕೆ ಕೃಷಿಯ ಮುಂದಿರುವ ಜ್ವಲಂತ ಸಮಸ್ಯೆ. ಕೂಲಿ ಮಾಡುವುದು ನಾನಾ ಕಾರಣಗಳಿಗಾಗಿ ಆ ಕುಟುಂಬಗಳ ವಿದ್ಯಾವಂತರಿಗೆ ಅಸಾಧ್ಯವಾಗುತ್ತಿದೆ. ಕೂಲಿ ಮಾಡುವುದು ವಿದ್ಯಾವಂತರಿಗೆ ಗೌರವದ ಕೆಲಸವಲ್ಲ ಹಾಗೂ ಅವರ ಆರ್ಥಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸುವ ಶಕ್ತಿ ಅದಕ್ಕೆ ಇಲ್ಲ. ಕೂಲಿ, ಕಾರ್ಮಿಕ ವೃತ್ತಿಯನ್ನು ತೊರೆಯುವುದೇ ಜೀವನಮಟ್ಟದ ಸುಧಾರಣೆಗೆ ಸಾಧನ ಎಂಬುದು ವಾಸ್ತವ. ಇದನ್ನು ಒಪ್ಪಿಕೊಂಡರೆ ಇಂದು ನಮ್ಮ ದೇಶವು ಸಾಗುತ್ತಿರುವ ಪಥದಲ್ಲಿ ಕೃಷಿ ಹಾಳುಬೀಳುವುದು ಅನಿವಾರ್ಯ ಎಂಬುದನ್ನು ಒಪ್ಪಿಕೊಂಡ ಹಾಗೇ.

 ಇನ್ನು ಈ ಕಾರ್ಮಿಕರನ್ನು ಶೋಷಿಸುತ್ತಾರೆ ಎನ್ನಲಾಗುವ ಕೃಷಿಕರ ಸುಖ ಹೇಗಿದೆ? ಅವರಲ್ಲಿ ಬಹುತೇಕರು ತಮ್ಮ ಪಿತ್ರಾರ್ಜಿತ ಭೂಮಿಗಳನ್ನು ಚಿಕಣಿ ಚೂರುಗಳನ್ನಾಗಿ ಮಾಡಿಕೊಂಡ ಸಣ್ಣ ಹಾಗೂ ಮಧ್ಯಮ ಹಿಡುವಳಿದಾರರು. ನಿಜವಾಗಿ ಹೇಳಬೇಕೆಂದರೆ ಕೃಷಿ ಕಾರ್ಮಿಕರ ಕೊರತೆಯಿಂದಾಗಿ, ಬೆಲೆಯೇರಿಕೆ, ಇತ್ಯಾದಿಗಳಿಂದಾಗಿ ಕೃಷಿಯನ್ನು ಅವಲಂಬಿಸಿ ಜೀವಿಸುವುದು  ಮಧ್ಯಮ ಹಾಗೂ ಸಣ್ಣ ಹಿಡುವಳಿದಾರರಿಗೆ ದಿನದಿಂದ ದಿನಕ್ಕೆ  ದುಸ್ತರವಾಗುತ್ತಿದೆ.  ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಕೂಲಿಕಾರರಲ್ಲ, ರೈತರು ಎಂಬುದು ಕೂಡ ಯೋಚಿಸಬೇಕಾದ ವಿಷಯ. ಅಂದರೆ ಸಣ್ಣ ಹಾಗೂ ಮಧ್ಯಮ ಹಿಡುವಳಿದಾರರಿಗೆ ಕೂಡ ಕೃಷಿ ಎಂಬುದು ಜೀವನಾಧಾರವಾಗಿ ಉಳಿದಿಲ್ಲ. ಕೃಷಿಯನ್ನಾಧರಿಸಿ ಜೀವಿಸಬೇಕೆಂದರೆ ನಿಮಗೆ ಕೃಷಿಯೇತರ ಆದಾಯದ ಮೂಲಗಳು ಇರಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಉತ್ಪಾದನೆಗೆ ಈಗ ಇರುವ ಮಾರುಕಟ್ಟೆಯ ಬೆಲೆಗೂ ರೈತರ ಜೀವನಾವಶ್ಯಕತೆಗಳಿಗೂ ಅರ್ಥಾರ್ಥ ಸಂಬಂಧವೇ ತಪ್ಪಿಹೋಗುತ್ತಿದೆ.

 ಇಂಥ ಸಂದರ್ಭದಲ್ಲಿ  ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೃಷಿಕರೆಲ್ಲರೂ ತಮ್ಮ ಅಳತೆಗೆ ಮೀರಿದ ಸಾಲ ಮಾಡಿಕೊಂಡು ಆರ್ಥಿಕ ಬೆಳೆಗಳತ್ತ ವಾಲುತ್ತಿದ್ದಾರೆ. ಇಂಥ ರೈತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು. ಸರ್ಕಾರಿ ಸಾಲವಿದ್ದರೆ ಹಾಗೂ ಅದಕ್ಕೆ ಸಾಲಮನ್ನಾ ಸಿಕ್ಕರೆ ಅವರಿಗೆ ಸ್ವಲ್ಪ ಉಸಿರಾಡುವಂತಾಗುತ್ತದೆ. ಅಂದರೆ ಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಉದ್ಯಮವನ್ನಾಗಿ ಮಾಡುವುದು ಜೀವ ಪಣಕ್ಕಿಡುವ ಜೂಜಾಟ ಅಂದರೆ ತಪ್ಪಿಲ್ಲ. ಈ ಕಾರಣದಿಂದ ಇಂಥ ಅಪಾಯಕಾರೀ ಹಾದಿಯನ್ನು ತುಳಿಯಲಾರದವರು ಪಾರಂಪರಿಕ ಆಹಾರ ಧಾನ್ಯಗಳ ಕೃಷಿಗೇ ಸಂತೃಪ್ತಿ ಪಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಆಹಾರಧಾನ್ಯಗಳನ್ನು ಬೆಳೆಯಲಿಕ್ಕೆ ಕೃಷಿಕರಿಗೆ ಇರುವ ಏಕೈಕ ಕಾರಣವೆಂದರೆ ಬಡತನ. ಹಿಂದುಳಿದಿರುವಿಕೆಗೂ, ಬಡತನಕ್ಕೂ ಆಹಾರ ಧಾನ್ಯದ ಕೃಷಿಗೂ ಅವಿನಾಭಾವೀ ಸಂಬಂಧ ಉಂಟಾಗಿದೆ. ಇಂಥ ರೈತರ ಅಭಿವೃದ್ಧಿಯಾದಂತೆಲ್ಲ ಆಹಾರ ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗುತ್ತ ಹೋಗುತ್ತದೆ. ಅಂದರೆ ಕೃಷಿಕರ ಅಭಿವೃದ್ಧಿ ಸಾಧಿಸಬೇಕಾದರೆ ಆಹಾರ ಧಾನ್ಯಗಳ ಉತ್ಪಾದನೆ ನಿಲ್ಲುತ್ತಹೋಗಬೇಕು ಎಂಬುದು ಸಧ್ಯದ ವಾಸ್ತವ.

 ಇಂದು ನಮ್ಮ ಶಿಕ್ಷಣದ ಪ್ರಮುಖ ಗುರಿಯೇ ಉದ್ಯೋಗಾವಕಾಶದ ಸೃಷ್ಟಿ. ಆ ಏಕೈಕ ಕಾರಣದಿಂದಲೇ ಆ ಕ್ಷೇತ್ರದಲ್ಲಿ ಪೈಪೋಟಿ ನಡೆಯುತ್ತಿದೆ. ಆದರೆ ನಮ್ಮ ಶಿಕ್ಷಣವು ಸೃಷ್ಟಿಸುವ ಉದ್ಯೋಗವಕಾಶದಲ್ಲಿ ಕೃಷಿ ಹಾಗೂ ಪಾರಂಪರಿಕ ವೃತ್ತಿಗಳ ವಿಳಾಸವೂ ಸಿಗದು. ಈ ಶಿಕ್ಷಣದಲ್ಲಿ ಕೃಷಿಯನ್ನು ಕುರಿತು ಅಧ್ಯಯನ ಮಾಡುವುದು ಕೂಡ  ಕೃಷಿಯೇತರ ಉದ್ಯೋಗಾವಕಾಶಕ್ಕಾಗಿ. ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯು ಗ್ರಾಮೀಣ ಹಿನ್ನೆಲೆಯ ಮಕ್ಕಳನ್ನು ನಗರಗಳ ಉದ್ಯೋಗಿಗಳನ್ನಾಗಿ ಪರಿವರ್ತಿಸುವ ಬೃಹತ್ ಯಂತ್ರವಾಗಿದೆ. ನಮ್ಮ ಗ್ರಾಮೀಣ ಮನೆಗಳು ಕೃಷಿಕರದೊಂದೇ ಅಲ್ಲ ಕೃಷಿ ಕಾರ್ಮಿಕ ಕುಟುಂಬಗಳದೂ ವೃದ್ಧಾಶ್ರಮಗಳಾಗುತ್ತಿವೆ. ಅನಾಥರಾಗುತ್ತಿರುವ ವೃದ್ಧರ ಸಂಖ್ಯೆಯು ಜಾತಿ ಭೇದವಿಲ್ಲದೇ ಹೆಚ್ಚಾಗುತ್ತಿದೆ. ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಸುಶಿಕ್ಷಿತರಾದಂತೆಲ್ಲ ಸೂಕ್ತವಾದ  ಮಾನವ ಸಂಪನ್ಮೂಲ, ಕೃಷಿ ತಂತ್ರಜ್ಞಾನ ಇತ್ಯಾದಿ ಪರ್ಯಾಯ ವ್ಯವಸ್ಥೆಗಳ ಮೂಲಕ ಕೃಷಿಯೂ ಲಾಭದಾಯಕ ಹಾಗೂ ಗೌರವಯುತ ಕ್ಷೇತ್ರವಾಗಿ ಬೆಳೆದಿದ್ದರೆ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಅಂದರೆ ಇಂದು ಕೃಷಿಕರೆಲ್ಲ ಸುಶಿಕ್ಷಿತರಾಗಬೇಕು ಎಂದರೆ ಕೃಷಿಕ್ಷೇತ್ರ ಹಾಗೂ ಕೃಷಿ ಕುಟುಂಬಗಳು ಹಾಳುಬೀಳಬೇಕು ಎಂದಂತೇ.

 ಇವು ಇಂದಿನ ಕಟು ವಾಸ್ತವಗಳು ಹಾಗೂ ವಿಪರ್ಯಾಸಗಳು. ನಾನು ಆರ್ಥಿಕ ತಜ್ಞನಲ್ಲ. ಅಥವಾ ನಾನು ಇದು ಸರಿ ಅಥವಾ ತಪ್ಪು ಎಂಬ ಮೌಲ್ಯಮಾಪನ ಮಾಡಬಯಸುವುದಿಲ್ಲ. ಇಂದಿನ ಅಭಿವೃದ್ಧಿಪರ ಚಿಂತನೆಗಳು ಹಾಗೂ ಸಂಸ್ಥೆಗಳೆಲ್ಲವೂ ಭಾರತೀಯ ಪಾರಂಪರಿಕ ಕೃಷಿಯ ಹಾಗೂ ಅದನ್ನಾಧರಿಸಿದ ಜೀವನದ ವ್ಯವಸ್ಥಿತವಾದ ನಾಶವನ್ನು ಮಾಡುತ್ತಿವೆ ಎಂಬುದನ್ನು ಗಮನಿಸದೇ ಇರುವುದಕ್ಕಾಗುವುದಿಲ್ಲ. ಇದರ ದುಷ್ಪರಿಣಾಮವು ಎಲ್ಲ ಜನಜಾತಿಗಳ ಮೇಲೂ ಆಗುತ್ತಿದೆ. ಇದಕ್ಕೆ ಸೂಕ್ತ ಪರ್ಯಾಯದ ಕುರಿತು ಚಿಂತಿಸದಿದ್ದರೆ ಮುಂದೊಂದು ದಿನ ಅನ್ನ ಭಾಗ್ಯಕ್ಕೆ ಅಕ್ಕಿಯೇ ಇಲ್ಲದ ಸ್ಥಿತಿಯೂ ಬರಬಹುದು. ಇಲ್ಲ ಅಕ್ಕಿ ಬೆಳೆಯುವವರಿಗೇ ಅನ್ನ ಭಾಗ್ಯವನ್ನು ವಿಸ್ತರಿಸಬೇಕಾಗಬಹುದು.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: