ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 34: ಅಂಗೈ ಹುಣ್ಣಿಗೆ ಮಾಯಾ ಕನ್ನಡಿಯೆ?

ಪ್ರೊ. ರಾಜಾರಾಮ ಹೆಗಡೆ

  ಹಿಸ್ಟರಿ ಎಂದರೆ ಚರಿತ್ರೆ, ಇತಿಹಾಸ ಎಂದೆಲ್ಲ ಭಾಷಾಂತರಿಸಿಕೊಂಡಿದ್ದೇವೆ. ಅದರ ಹೆಸರಿನಲ್ಲಿ ಹೊಡೆದಾಟವನ್ನೂ ನಡೆಸಿದ್ದೇವೆ. ಹಿಸ್ಟರಿ ಎಂದರೆ ಗತಕಾಲದ ನೈಜ ಘಟನೆಗಳ ಚಿತ್ರಣ ಹಾಗೂ ಅದು ಸಮುದಾಯಗಳ ನೆನಪು ಎಂಬುದಾಗಿ ತಿಳಿಯುತ್ತೇವೆ. ಆದರೆ ಅದೊಂದು ಭ್ರಮೆ. ನೆನಪುಗಳು ನಮ್ಮ ವಯಕ್ತಿಕ ಅನುಭವದಿಂದ ಹುಟ್ಟುತ್ತವೆ. ನೂರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಗಳು ಯಾರ ಅನುಭವ? ಹಿಸ್ಟರಿ ಬರೆಯುವವನ ಅನುಭವವೆ? ಕೇಳುವವನ ಅನುಭವವೆ? ಅದರಲ್ಲೂ ಅನುಭವ ವ್ಯಕ್ತಿಗೆ ಇರುವಂಥದ್ದು, ಸಮುದಾಯದ ಅನುಭವ ಇರಲಿಕ್ಕೆ ಸಾಧ್ಯವಿಲ್ಲ.  ಅದಲ್ಲದೇ ಅದು ನಮಗೆ ಗೊತ್ತಾಗಬೇಕಾದರೆ ಪರೋಕ್ಷ ಆಧಾರಗಳನ್ನೇ ಅವಲಂಬಿಸಬೇಕಾಗುತ್ತದೆ. ಅಂದರೆ ಹಿಸ್ಟರಿ ಎಂಬುದು ಪರೋಕ್ಷ ಆಧಾರಗಳನ್ನು ಇಟ್ಟುಕೊಂಡು ಕಟ್ಟಿಕೊಂಡ ಚಿತ್ರಗಳು ಅಷ್ಟೆ. ಅವು ವರ್ತಮಾನದಲ್ಲಿರುವ ಯಾರ ನೆನಪೂ ಅಲ್ಲ. ಹಿಸ್ಟರಿಯು ವರ್ತಮಾನದ ಯಾರ ಅನುಭವವೂ ಅಲ್ಲ ಅಂತಾದರೆ ಗತಕಾಲದಲ್ಲಿ ಯಾರೋ ಮಾಡಿದ ತಪ್ಪಿಗೂ ಇಂದಿನವರಿಗೂ ಏನು ಸಂಬಂಧ? ಹಾಗಾಗಿ ಅದನ್ನಿಟ್ಟುಕೊಂಡು ವರ್ತಮಾನದ ನ್ಯಾಯಾನ್ಯಾಯಗಳನ್ನು ತೀರ್ಮಾನಿಸುವುದು ಸಾಧ್ಯವೆ? ಹಿಸ್ಟರಿಯಲ್ಲಿ ನಾವು ಗುರುತಿಸಿದ ಅನ್ಯಾಯವನ್ನು ವರ್ತಮಾನದಲ್ಲಿ ಸರಿಪಡಿಸುವ ಕೆಲಸ ಸರಿಯೆ ಎಂಬುದು ಒಂದು ಪ್ರಶ್ನೆಯಾದರೆ ಅದು ಎಂದಾದರೂ ಸಾಧ್ಯವೆ ಎಂಬುದು ಮತ್ತೂ ಮೂಲಭೂತ ಪ್ರಶ್ನೆ. ಅಂದರೆ ಅನುಭವಿಸಿದವರೂ ಇಲ್ಲ, ಅದರ ನೆನಪಿದ್ದವರೂ ಇಲ್ಲ. ಇಂದು ಅವರ ಕುರಿತು ನಾವು ಕಟ್ಟಿಕೊಂಡ ಚಿತ್ರಣ ಮಾತ್ರ ಇದೆ.

  ಈ ಮೇಲಿನ ಅಂಶಗಳು ಸ್ಪಷ್ಟಪಡಿಸುವಂತೆ ಹಿಸ್ಟರಿಯ ಸತ್ಯ ಹಾಗು ಅದು ಕೊಡುವ ನ್ಯಾಯ ಎರಡೂ ಕೇವಲ ಮರೀಚಿಕೆಗಳಲ್ಲದೇ ಮತ್ತೇನಲ್ಲ. ಆದರೆ ನನ್ನ ಈ ಪ್ರಸ್ತಾಪಕ್ಕೆ ತೀವ್ರ ಆಕ್ಷೇಪಣೆಗಳು ಏಳಬಹುದು.  ಯಾವುದೋ ಕಾಲದಲ್ಲಿ ಯಾರೋ ಹಾಗೆ ಮಾಡಿದರು, ಹೀಗೆ ಮಾಡಿದರು ಇತ್ಯಾದಿಗಳನ್ನೆಲ್ಲ ಇಟ್ಟುಕೊಂಡು ಇಂದು ಹೋರಾಟಗಳು ನಡೆಯುತ್ತಿಲ್ಲವೆ? ನಮ್ಮ ಇಂದಿನ ನ್ಯಾಯಕಲ್ಪನೆ ಅವನ್ನು ಆಧರಿಸಿಲ್ಲವೆ? ಇದಕ್ಕೆ ನನ್ನ ಉತ್ತರವೆಂದರೆ,  ವರ್ತಮಾನದ ಸಮಸ್ಯೆಗಳನ್ನು ಗುರುತಿಸುವಾಗ, ಅರ್ಥೈಸುವಾಗ ಹಾಗೂ ಪರಿಹರಿಸಿಕೊಳ್ಳುವಾಗ ನಾವು ಹಿಸ್ಟರಿಯ ಚಿತ್ರಣಗಳನ್ನು ಬಳಸಿಕೊಳ್ಳುವ ರೂಢಿಯನ್ನು ವಸಾಹತು ರಾಜಕೀಯದಿಂದ ಕಲಿತಿದ್ದೇವೆ. ಇಂದು ಹಿಸ್ಟರಿ ಎಂಬುದು ವಿದ್ಯಾವಂತರ ಖಾಸಗಿ ನೆನಪಿನಂತೆ ಆಗಿದೆ. ಅಂದರೆ ಹಿಸ್ಟರಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ, ಯಾವುದೋ ಕಾಲದಲ್ಲಾದ ಅನ್ಯಾಯಕ್ಕೆ ಇಂದು ಸೇಡು ತೀರಿಸಿಕೊಳ್ಳುವ, ಯಾವುದೋ ಕಾಲದ ತಪ್ಪುಗಳನ್ನು ಇಂದು ಸರಿಪಡಿಸುವ ಕುರಿತ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇಂಥ ಸಂದರ್ಭಗಳಲ್ಲಿ ವರ್ತಮಾನದ ವ್ಯಕ್ತಿಗಳು ತಮ್ಮ ಖಾಸಗಿ ನೆನಪುಗಳೆಂಬಂತೆ ಹಿಸ್ಟರಿಯನ್ನು ಬಳಸುತ್ತಿರುತ್ತಾರೆ. ಹಿಸ್ಟರಿಯು ಇಂದಿನ ಯಾರ ಅನುಭವದ ನೆನಪೂ ಆಗುವುದು ಸಾಧ್ಯವಿಲ್ಲ್ಲ ಎಂಬುದನ್ನು ಗಮನಿಸಿದ್ದೇವೆ. ಆದರೂ ಕೂಡ ಅದು ಖಾಸಗಿ ನೆನಪೆಂಬ ಭ್ರಮೆ ಆಗುತ್ತದೆ, ಏಕೆಂದರೆ ಇಂದಿನ ಸಮುದಾಯಗಳು ಹಿಸ್ಟರಿಯ ವ್ಯಕ್ತಿ ಹಾಗೂ ಘಟನೆಗಳ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿವೆ. ಅವರನ್ನು ತಮ್ಮ ಅಹಂಕಾರದ ಒಂದು ಭಾಗವಾಗಿ ಮಾಡಿಕೊಳ್ಳಲಾಗುತ್ತಿದೆ. ವ್ಯಾಸ, ವಾಲ್ಮೀಕಿ, ರಾಮ, ಕೃಷ್ಣ, ಬುದ್ಧ, ಬಾಬರ್, ಶಿವಾಜಿ, ಟಿಪ್ಪುಸುಲ್ತಾನ, ಕನಕದಾಸ, ಬಸವಣ್ಣ, ಬಲಿ, ರಾವಣ, ಹೀಗೆ ಈ ಹಿಸ್ಟರಿಯ /ಪೌರಾಣಿಕ ವ್ಯಕ್ತಿಗಳೆಲ್ಲರೂ ವರ್ತಮಾನದ ಒಂದೊಂದು ಸಮುದಾಯಗಳ ಅಥವಾ ಚಳವಳಿಗಳ ಅಹಂಕಾರದ ಭಾಗಗಳಾಗಿವೆ. ಇದೇ ರೀತಿಯಲ್ಲಿ ಚಾರಿತ್ರಿಕ ಸಮುದಾಯಗಳನ್ನೂ ವರ್ತಮಾನಕ್ಕೆ ಜೋಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯಯಲ್ಲೇ ಅವು ನಮ್ಮದೇ ನೆನಪುಗಳೆಂಬಂತೆ ಭಾಸವಾಗುತ್ತಿದೆ.

  ಅಂದರೆ ಇಲ್ಲಿರುವುದು ಗತಕಾಲದ ಅನುಭವವಲ್ಲ, ವರ್ತಮಾನದ ಅನುಭವ. ಅಂದರೆ ನಾವು ಗತಕಾಲದ ಮೇಲೆ ಆಣೆಮಾಡಿ ಇಂದು ಹುಟ್ಟುಹಾಕಿಕೊಂಡ ಸಮಸ್ಯೆಗಳೆಲ್ಲವೂ ನಮ್ಮ ವರ್ತಮಾನದ ಅನುಭವ ಪ್ರಪಂಚವಷ್ಟೇ ಆಗಿದೆ. ನಾವು ವರ್ತಮಾನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ, ಪರಿಹರಿಸುವ ಹಾಗೂ ಸಮರ್ಥಿಸುವ ಕೆಲಸಕ್ಕೆ ಹಿಸ್ಟರಿಯ ಚಿತ್ರಣಗಳು ಪ್ರಮಾಣವಾಗುತ್ತವೆ ಎಂಬ ತರ್ಕವನ್ನು ನಾವೆಲ್ಲ ಒಪ್ಪಿಕೊಂಡಿರುವುದರಿಂದ ಅಂಥ ಕೆಲಸವು ಸರಿ ಅಂದುಕೊಂಡಿದ್ದೇವೆ. ಅವು ಇಂದಿನ ಚಿತ್ರಣಗಳು. ಈ ಚಿತ್ರಣದ ಸ್ವರೂಪ ಹೇಗಿದೆ? ಹಿಸ್ಟರಿಕಾರರೇ ಒಪ್ಪಿಕೊಂಡ ಹಾಗೆ ಅದೊಂದು ಗತಕಾಲದ ಕುರಿತ ವರ್ತಮಾನದ ಜಿಜ್ಞಾಸೆ ಅಷ್ಟೆ. ಅದು ನಿರಂತರವಾಗಿ ಮರುನಿರೂಪಣೆಗೊಳ್ಳುತ್ತ ಸಾಗುವ ಒಂದು ಚರ್ಚಾಸ್ಪದ ಚಿತ್ರಣ. ಈ ಕಾರಣದಿಂದಲೇ ವರ್ತಮಾನದ ನ್ಯಾಯಕ್ಕೆ ಹಿಸ್ಟರಿಯ ಯಾವ ಚಿತ್ರಣವನ್ನು ಸತ್ಯ ಎಂದು ಆಧರಿಸಿದರೂ ಅದು ವಿವಾದಾಸ್ಪದವಾಗದೇ ಗತ್ಯಂತರವಿಲ್ಲ. ಅಂದರೆ ಹಿಸ್ಟರಿಯ ಚಿತ್ರಣಗಳನ್ನಾಧರಿಸಿದ ನ್ಯಾಯವೂ ಕೂಡ  ಸರ್ವಸಮ್ಮತವಾಗಿರುವುದು ಸಾಧ್ಯವಿಲ್ಲ.  ಹಾಗಾಗಿ ಹಿಸ್ಟರಿಯ ಚಿತ್ರಣಗಳೇ ವರ್ತಮಾನದಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಹಾಗೂ ಅನ್ಯಾಯಗಳನ್ನು ಹುಟ್ಟುಹಾಕುವ ಕೆಲಸವನ್ನೂ ಮಾಡುತ್ತವೆ.

  ಭಾರತೀಯರಿಗೆ ಹಿಸ್ಟರಿ ಬರವಣಿಗೆ ಗೊತ್ತಿಲ್ಲ ಎಂಬುದನ್ನು ಗಮನಿಸಿದ ಪಾಶ್ಚಾತ್ಯರು ಅದನ್ನೊಂದು ನ್ಯೂನತೆ ಎಂದು ಭಾವಿಸಿದ್ದರು. ಆದರೆ ಭಾರತೀಯರು ಹಿಸ್ಟರಿ ಚಿತ್ರಣಗಳನ್ನು ಕಟ್ಟಿಕೊಳ್ಳದಿದ್ದುದೇ ಅವರ ಜಾಣತನ ಎಂದು ಗಾಂಧೀಜಿಯವರು ತಿಳಿದಿದ್ದರು. ಗಾಂಧೀಜಿ ತಮ್ಮ ಯಾವ ಒಳಿತು ಕೆಡುಕುಗಳ ವಿವೇಚನೆಗೂ ಹಿಸ್ಟರಿಯನ್ನು ಪ್ರಮಾಣವಾಗಿ ತರಲಿಲ್ಲ ಅಷ್ಟೇ ಅಲ್ಲ ಆ ಕುರಿತು ದಿವ್ಯ ನಿರ್ಲಕ್ಷ್ಯವನ್ನು ತೋರಿಸಿದರು. ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯ. ನೆನಪುಗಳೇ ಇಲ್ಲದಿದ್ದರೆ ಮನುಷ್ಯನ ಯಾವ ಪ್ರಾಪಂಚಿಕ ವ್ಯವಹಾರಗಳೂ ಸಾಧ್ಯವಾಗಲಾರವು. ಆದರೆ ನೆನಪುಗಳ ಜೊತೆಗೆ ಏಗುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಕೆಲವನ್ನು ಮರೆತಲ್ಲದೇ ತನ್ನ ಅನೇಕ ದುಃಖಗಳು, ಸಂಘರ್ಷಗಳು ಪರಿಹಾರವಾಗಲಿಕ್ಕೇ ಸಾಧ್ಯವಿಲ್ಲ ಎಂದೂ ಅನಿಸಿಬಿಡುತ್ತದೆ. ಕೆಲವು ನೆನಪುಗಳು ವಿವೇಕವನ್ನೇ ಹಾಳುಮಾಡಬಲ್ಲವು, ವಸ್ತುಸ್ಥಿತಿಯೇ ಕಾಣದಂತೆ ಮಾಡಬಲ್ಲವು. ಅಂದರೆ  ಹಿಸ್ಟರಿಯ ಹೆಸರಿನಲ್ಲಿ ಇಂದು ನಡೆಯುತ್ತಿರುವ ಘರ್ಷಣೆಗಳನ್ನು ನೋಡಿದರೆ ನಾವು ನೆನಪುಗಳು ಎಂದು ಭಾವಿಸಿಕೊಂಡ ಚಿತ್ರಗಳು ವರ್ತಮಾನದ ಒಳಿತು ಕೆಡುಕುಗಳನ್ನು ಗುರುತಿಸುವ ನಮ್ಮ ದೃಷ್ಟಿಯನ್ನೂ ಮಸುಕುಗೊಳಿಸಿದಂತಿದೆ. ಅವು ವರ್ತಮಾನವನ್ನು ಮರೆಮಾಚುವ ರಾಜಕೀಯಕ್ಕೆ ಮಾತ್ರ ಬೇಕಾಗಿವೆ.

  ಇಂದಿನ ಸಮಸ್ಯೆ ಎಂದರೆ ಹಿಸ್ಟರಿಯ ಚಿತ್ರಣಗಳನ್ನು ಅತಿಯಾಗಿ ನಮ್ಮ ರಾಜಕೀಯಕ್ಕೆ ಉಪಯೋಗಿಸಿದ ಕಾರಣ ಅದಕ್ಕೆ ಹಲ್ಲು ಉಗುರುಗಳು ಮೂಡಿವೆ. ಹಿಸ್ಟರಿಯ ಚಿತ್ರಣಗಳನ್ನು ಉಪಯೋಗಿಸಿಕೊಂಡು ಅಧಿಕಾರವನ್ನು ಕಟ್ಟಲಾಗುತ್ತಿದೆ, ಚಳವಳಿಗಳನ್ನು ನಡೆಸಲಾಗುತ್ತಿದೆ, ಕಾನೂನುಗಳನ್ನು ರಚಿಸಲಾಗುತ್ತಿದೆ. ಒಂದು ಚಿತ್ರಣವು ನಿಜವೊ ಸುಳ್ಳೊ ಎಂಬುದು ಅದರ ರಾಜಕೀಯ ಪ್ರಯೋಜನವನ್ನವಲಂಬಿಸಿದೆ. ವಸಾಹತು ಶಾಹಿ ರಾಜಕೀಯಕ್ಕೆ, ರಾಷ್ಟ್ರೀಯ ರಾಜಕೀಯಕ್ಕೆ ಅವುಗಳದೇ ಹಿಸ್ಟರಿ ಚಿತ್ರಣಗಳಿದ್ದವು. ಕಳೆದ ಶತಮಾನದ ಅಂತ್ಯದಲ್ಲಿ ಪ್ರಗತಿಪರ ರಾಜಕೀಯಕ್ಕೆ ಎಡಪಂಥೀಯ ಹಿಸ್ಟರಿ ಲೇಖನವು ಆಧಾರವಾಯಿತು. ಇಂದು ಹಿಂದುತ್ವ ರಾಜಕೀಯವು ಹಿಸ್ಟರಿಯ ಪುನರ್ಲೇಖನಕ್ಕೆ ಒತ್ತಾಯಿಸುತ್ತಿದೆ. ಅದನ್ನು ಕೇಸರೀಕರಣ ಎಂಬುದಾಗಿ ಟೀಕಿಸಿ ಹಿಮ್ಮೆಟ್ಟಿಸುವ ಶತಪ್ರಯತ್ನ ನಡೆಯುತ್ತಿದೆ. ಆದರೆ ಎಲ್ಲರೂ ಹಿಸ್ಟರಿಯ ಸತ್ಯದ ಮೇಲೆ ಆಣೆಮಾಡುತ್ತಲೇ ತಮ್ಮ ರಾಜಕೀಯವನ್ನು ನಡೆಸಿದ್ದಾರೆ. ಅಂದರೆ, ಇದು ಗತಕಾಲದ ಸತ್ಯಗಳ ಹೆಸರಿನಲ್ಲಿ ವರ್ತಮಾನದ ಬಡಿದಾಟವಾಗಿದೆ. ಆದರೆ ಈ ಕೆಲಸ ಮಾಡುತ್ತಿರುವಾಗ ಇವರೆಲ್ಲರೂ ಹಿಸ್ಟರಿಯ ಸತ್ಯದ ಕುರಿತ ವಿವಾದದಲ್ಲಿ ಹಾಗೂ ಬಡಿದಾಟದಲ್ಲಿ ತೊಡಗಿಕೊಂಡಿದ್ದಾರೆ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಅಲ್ಲಿ ನಡೆಯುತ್ತಿರುವುದೇ ಬೇರೆ. ಉದಾಹರಣೆಗೆ ಇಂದು ಬಿಗಡಾಯಿಸಿರುವ ಟಿಪ್ಪೂ ವಿವಾದವು ಹಿಸ್ಟರಿಯ ಸತ್ಯಗಳಿಂದ ಹುಟ್ಟಿದ ವಿವಾದವಲ್ಲ. ವರ್ತಮಾನದ ಹಿಂದೂ ಮುಸ್ಲಿಂ ಸಮಸ್ಯೆಯೇ ಹಿಸ್ಟರಿಯ ಸತ್ಯಗಳಲ್ಲಿ ವಿವಾದವನ್ನು ಸೃಷ್ಟಿಸಿದೆ. ಹಾಗಿರುವಾಗ ಈ ಸಮಸ್ಯೆಯನ್ನು ಹಿಸ್ಟರಿಯ ಸತ್ಯಗಳು ಬಗೆಹರಿಸಲಾರವು. ಹಾಗಾಗಿ ನಿಜವಾದ ಕಾಳಜಿ ಇರುವವರು ಇಂಥ ಹಿಸ್ಟರಿಯ ಸತ್ಯಗಳನ್ನು ಬಿಟ್ಟು ನೇರವಾಗಿ ಇಂದಿನ ಸಮಸ್ಯೆಯ ಕುರಿತೇ ಚರ್ಚಿಸುವದೊಳಿತು. ಅಂಗೈ ಹುಣ್ಣನ್ನು ನೋಡುವುದಕ್ಕೆ ಕನ್ನಡಿಯೇ ಬೇಡ, ಅದರಲ್ಲೂ ಮಾಯಾ ಕನ್ನಡಿಯನ್ನಂತೂ ದೂರವಿಡುವುದೇ ಒಳ್ಳೆಯದು.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: