ಮುಖ ಪುಟ > Uncategorized > ಅಂಕಣ: ವಸಾಹತುಶಾಹಿಯ ವಿಶ್ವರೂಪ

ಅಂಕಣ: ವಸಾಹತುಶಾಹಿಯ ವಿಶ್ವರೂಪ

ಕಂತು 63: ಭಾರತೀಯ ಪ್ರಜಾಪ್ರಭುತ್ವದ ವೈಖರಿ

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

  ಹಿಂದಿನ ಅಂಕಣದಲ್ಲಿ ಭಾರತೀಯ ಆಳುವ ವರ್ಗಕ್ಕೆ ಸಾಂಸ್ಥಿಕ ಧ್ಯೇಯಗಳು ಅರ್ಥವಾಗುವುದಿಲ್ಲ ಎಂಬುದಕ್ಕೆ ಅನೇಕ ದೃಷ್ಟಾಂತಗಳನ್ನು ನೀಡಿದ್ದೆ. ಅದರಂತೇ ಈ ಆಳುವ ವರ್ಗಕ್ಕೆ ಮತ್ತೊಂದು ವೈಶಿಷ್ಟ್ಯ ಕೂಡ ಇದೆ. ಅದು ನಿಮ್ಮ ಗಮನಕ್ಕೂ ಬಂದಿರಬಹುದು. ಅದೆಂದರೆ, ಆಳುವುದೆಂದರೇನು? ನಾವು ನಮ್ಮ ದೇಶದಲ್ಲಿ ನೋಡುವ ಪ್ರಕಾರ ಜನಪ್ರಿಯ ಯೋಜನೆಗಳನ್ನು ಘೋಷಿಸುವುದು. ಒಂದು ರೂಪಾಯಿ ಕೇಜಿ ಅಕ್ಕಿ, ವಿಧವೆಯರಿಗೆ ಪಿಂಚಣಿ, ಸೀರೆ ಇತ್ಯಾದಿಗಳನ್ನು ಕೊಡುವುದು, ಸ್ಕೂಲು ಮಕ್ಕಳಿಗೆ ಸೈಕಲ್ಲುಗಳು, ಬಿಸಿಯೂಟ, ಮೊಟ್ಟೆ ಹಾಲು ನೀಡುವುದು, ಬಡವರಿಗೆ ಮನೆ ಕಟ್ಟಿಸಿ ಕೊಡುವುದು, ಮದುವೆ ಆಗುವವರಿಗೆ ತಾಳಿಭಾಗ್ಯ, ಹಣ, ಮಂಚ ಇತ್ಯಾದಿಗಳನ್ನು ನೀಡುವುದು, ಕೃಷಿಕರಿಗೆ ನೂರೆಂಟು ಸಬ್ಸಿಡಿಗಳು ಹಾಗೂ ಸಾಲಗಳು, ನಂತರ ಸಾಲ ಮನ್ನಾ, ಬಡವರ ಬ್ಯಾಂಕ್ ಎಕೌಂಟುಗಳನ್ನು ತೆರೆಯುವುದು, ಇತ್ಯಾದಿಯಾಗಿ ಕಾರ್ಯಕ್ರಮಗಳು ಅವ್ಯಾಹತವಾಗಿ ಇಂದಿನವರೆಗೂ ಘೋಷಣೆಯಾಗುತ್ತ ಬಂದಿವೆ. ಆಯ್ಕೆಯಾದ ಪ್ರತೀ ಹೊಸ ಸರ್ಕಾರವೂ ಕೂಡ ತನ್ನ ದಕ್ಷತೆಯನ್ನು ಹಾಗೂ ಜನಪರತೆಯನ್ನು ಮನದಟ್ಟು ಮಾಡಬೇಕಾದರೆ ಇಂಥ ಹೊಸದೊಂದು ಅಥವಾ ಹಲವು ಯೋಜನೆಗಳನ್ನು ಘೋಷಿಸಬೇಕಾದ ಒತ್ತಡ ಇದೆ.

  ಈ ಕಾರ್ಯದಲ್ಲಿ ಯಾರು ನಾವೀನ್ಯತೆಯನ್ನು ತೋರಿಸುತ್ತಾರೋ ಅವರು ಮುತ್ಸದ್ದಿಗಳು ಎಂಬ ಅಭಿಪ್ರಾಯವು ರಾಜಕಾರಣದ ವಲಯದಲ್ಲಿ ಇದೆ. ಹಾಗಾಗಿ ಹೊಸದಾಗಿ ಬಂದವರು ಯಾವುದಾದರೂ ಘೋಷಣೆ ಮಾಡಿದಾಗ ‘ಇದೇನೂ ಹೊಸದಲ್ಲ, ನಮ್ಮ ಪಕ್ಷವೇ ಇದನ್ನು ಪ್ರಾರಂಭಿಸಿತ್ತು’ ಎಂಬ ತಕರಾರುಗಳೂ ಸಾಮಾನ್ಯ. ಘೋಷಿಸುವಾಗ ಬೊಕ್ಕಸದಲ್ಲಿ ಎಷ್ಟು ಹಣವಿದೆ ಎಂಬುದು ಕೂಡ ಇವರಿಗೆ ಪ್ರಸ್ತುತವಾಗುವುದಿಲ್ಲ. ಅವುಗಳನ್ನು ಜಾರಿಗೊಳಿಸಲು ಒದ್ದಾಡುತ್ತಾರೆ. ಹಾಗೂ ಅವು ಅನುಷ್ಠಾನ ಗೊಳ್ಳುವುದೂ ಕೂಡ ಅಷ್ಟು ಮುಖ್ಯವಲ್ಲ, ಏಕೆಂದರೆ ಅವುಗಳ ಬೆನ್ನೇರಿ ಭ್ರಷ್ಟಾಚಾರದ ಲೆಕ್ಕಾಚಾರಗಳೂ ಬರುತ್ತವೆ. ಇದು ಪ್ರಜೆಗಳೊಂದಿಗೆ ಸಂಬಂಧವೇರ್ಪಡಿಸಿಕೊಳ್ಳುವ ಒಂದು ವೈಖರಿ ಅಷ್ಟೆ. ತಮ್ಮದು ಜನಪರ ಸರ್ಕಾರ ಎಂಬುದಕ್ಕೆ ಆಧಾರಗಳು ಸೃಷ್ಟಿಯಾದರೆ ಸಾಕು ಎಂಬ ಧೋರಣೆ ಇವರಿಗೆ ಇದ್ದಂತಿದೆ. ಅವರಿಗೆ ಸಾಂಸ್ಥಿಕ ಉದ್ದೇಶವೇ ಅರ್ಥವಾಗಲು ಕಷ್ಟವಿರುವಾಗ ಇಂಥ ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅವರು ಬೇರೆ ರೀತಿಯಲ್ಲಿ ವರ್ತಿಸಬೇಕು ಎಂಬ ನಿರೀಕ್ಷೆಯೂ ಅತಿಯಾಗುತ್ತದೆ.

  ನಮ್ಮ ಪ್ರಜಾಪ್ರಭುತ್ವದ ಮಾದರಿಯನ್ನು ಪಾಶ್ಚಾತ್ಯ ಪ್ರಭುತ್ವಗಳಿಂದ ತೆಗೆದುಕೊಂಡಿದ್ದೇವೆ. ಆದರೆ ಯುರೋಪಿನ, ಅಮೇರಿಕಾದ ಯಾವ ಪ್ರಭುತ್ವಗಳಲ್ಲೂ ಸರ್ಕಾರವು ಈ ಕೆಲಸಗಳನ್ನು ತನ್ನ ಕರ್ತವ್ಯ ಅಂದುಕೊಂಡಿಲ್ಲ. ಉತ್ತಮ ಆಡಳಿತ ಎಂದರೆ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವುದಲ್ಲ. ನಿಯಮಾವಳಿಗಳ ಪ್ರಕಾರ ಶಿಸ್ತುಬದ್ಧವಾಗಿ ಆಡಳಿತ ನಡೆಸುವುದು. ಪ್ರಜಾ ಪ್ರಭುತ್ವವನ್ನು ಅಳವಡಿಸಿಕೊಂಡು ಕಾಯ್ದೆ ಕಾನೂನುಗಳನ್ನು ಹಾಕಿಕೊಂಡಿರುವುದೇ ಜನತೆಯ ಕಲ್ಯಾಣಕ್ಕಾಗಿ.  ಆ ಕಾನೂನುಗಳನ್ನು ಬಿಟ್ಟು ವಸ್ತು ಒಡವೆಗಳನ್ನು ಕೊಟ್ಟು ಜನರನ್ನು ಸಂಪ್ರೀತಿಗೊಳಿಸುವ ಕೆಲಸವು ರಾಜಕರಣಿಗಳ ಯಾವ ಕರ್ತವ್ಯದಲ್ಲೂ ಬರುವುದಿಲ್ಲ. ಆದರೆ ಭಾರತದಲ್ಲೇಕೆ ಹೀಗೆ? ಒಂದೇ ಮಾದರಿಯ ಪ್ರಭುತ್ವ. ಅನುಷ್ಠಾನದ ವಿಧಾನದಲ್ಲಿ ಅಜಗಜಾಂತರ.

  ಈ ವ್ಯತ್ಯಾಸದ ಹಿಂದೆ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸವೊಂದು ಕಾರಣವಾಗಿ ಇದೆ. ಅದೆಂದರೆ ಪ್ರಜೆ ಹಾಗೂ ಸಾರ್ವಭೌಮರ ಸಂಬಂಧವನ್ನು ಅವರು ಹಾಗೂ ನಾವು ಭಾವಿಸಿಕೊಳ್ಳುವ ರೀತಿ ಒಂದೇ ಇಲ್ಲ. ಪಶ್ಚಿಮದಲ್ಲಿ ಈ ಸಂಬಂಧವು ಕ್ರೈಸ್ತ ಚಿಂತನೆಗಳನ್ನು ಆಧರಿಸಿದೆ. ಅಲ್ಲಿ ಸಾರ್ವಭೌಮ ಎಂಬ ಪರಿಕಲ್ಪನೆಯು ಗಾಡ್ನಿಂದ ಹುಟ್ಟಿಕೊಂಡಿದೆ. ಸಾರ್ವಬೌಮ ಹಾಗೂ ಪ್ರಜೆಯ ಸಂಬಂಧವು ಗಾಡ್ ಹಾಗೂ ಮಾನವನ ಸಂಬಂಧದ ಮಾದರಿಯ ಮೇಲೆ ರೂಪುಗೊಂಡಿದೆ. ಗಾಡ್ನ ಸಾರ್ವಭೌಮತ್ವವೆಂಬುದು ಮನುಕುಲಕ್ಕೇ ಅನ್ವಯವಾಗುವ ಸರ್ವವ್ಯಾಪಿಯಾದ ಅಧಿಕಾರ. ಏಕೆಂದರೆ ಮನುಷ್ಯರೆಲ್ಲ ಆತನದೇ ಸೃಷ್ಟಿಗಳು. ಅಂದರೆ ಗಾಡ್ ಮಾನವನನ್ನು ತನ್ನ ಕಾನೂನುಗಳಿಂದ ನಿಯಂತ್ರಿಸುತ್ತಿರುವ ಒಂದು ಶಕ್ತಿಯಷ್ಟೇ ಅಲ್ಲ ಅವನು ಯಾವುದೋ ಉದ್ದೇಶವನ್ನಿಟ್ಟುಕೊಂಡು ತನ್ನ ಕಾನೂನುಗಳ ಮೂಲಕ ಮನುಷ್ಯನ ಅಸ್ತಿತ್ವವನ್ನು ರೂಪಿಸುತ್ತಿದ್ದಾನೆ. ಮನುಷ್ಯನೇಕೆ ಗಾಡ್ನ ಆಳ್ವಿಕೆಯನ್ನು ಒಪ್ಪಿಕೊಳ್ಳಬೇಕೆಂದರೆ ಹಾಗೆ ಮಾಡಿದಾಗ ಮಾತ್ರ ಈ ಸೃಷ್ಟಿಯ ಉದ್ದೇಶವನ್ನು ಈಡೇರಿಸಬಹುದು. ಗಾಡ್ನ ಆಜ್ಞೆಯನ್ನು ಉಲ್ಲಂಘಿಸಿದರೆ ಅವನಿಗೆ ಶಾಶ್ವತ ನರಕವೇ ಗತಿ. ಅಂದರೆ ಈ ಆಳ್ವಿಕೆಯ ಕಲ್ಪನೆಯಲ್ಲಿ ಸಾರ್ವಭೌಮ ಶಕ್ತಿಯು ಸಕ್ರಿಯವಾಗಿ ಆಳಿಸಿಕೊಳ್ಳುವವನ ಹಿತದೃಷ್ಟಿಯಿಂದ (ಇಂಟರೆಸ್ಟ್) ಅವನ ಮೇಲೆ ನಿಯಂತ್ರಣ ಸ್ಥಾಪಿಸುತ್ತಿರುತ್ತದೆ. ಆಳುವವನಿಲ್ಲದೇ ಆಳಿಸಿಕೊಳ್ಳುವವನಿಗೆ ಅಸ್ತಿತ್ವವೂ ಇಲ್ಲ ಸದ್ಗತಿಯೂ ಇಲ್ಲ. ಇದು ಗಾಡ್ ರಚಿಸಿದ ಸ್ಟೇಟ್ ವ್ಯವಸ್ಥೆ.

  ಈ ಆಳ್ವಿಕೆಯ ಕಲ್ಪನೆಯೇ ಪಾಶ್ಚಾತ್ಯ ಸೆಕ್ಯುಲರ್ ಸ್ಟೇಟಿನ ಮೂಲಮಾದರಿಯಾಗಿದೆ.  ಸಾರ್ವಭೌಮತ್ವ ಇಲ್ಲದೇ ಸ್ಟೇಟ್ ಇಲ್ಲ. ಸಾರ್ವಭೌಮತ್ವವೆಂದರೆ ಆಳಿಸಿಕೊಳ್ಳುವ ಸಮಸ್ತ ಪ್ರಜೆಗಳ ಮೇಲೂ ಪರಮಾಧಿಕಾರವನ್ನು ಪ್ರಯೋಗಿಸುವ ಶಕ್ತಿ. ಈ ಸೆಕ್ಯುಲರ್ ಸ್ಟೇಟಿನಲ್ಲಿ ಗಾಡ್ ಹಾಗೂ ಅವನ ಆಜ್ಞೆಗಳು ಇರುವುದಿಲ್ಲ, ಹಾಗಾಗಿ ಚರ್ಚೆಗೆ ಇಲ್ಲಿ ಪಾತ್ರವಿಲ್ಲ. ಅದಕ್ಕೆ ಬದಲಾಗಿ ಆಳುವವರು ಹಾಗೂ ಆಳಿಸಿಕೊಳ್ಳುವವರು ಒಂದು ಸಂವಿಧಾನವನ್ನು ರಚಿಸಿಕೊಂಡು ಅದಕ್ಕೆ ಬದ್ಧರಾಗಿರುತ್ತಾರೆ. ಸಂವಿಧಾನವು ಸ್ಟೇಟಿನ ಸ್ವರೂಪವನ್ನು ರಚಿಸುತ್ತದೆ. ಈ ಅರ್ಥದಲ್ಲಿ ಸೆಕ್ಯುಲರ್ ಸ್ಟೇಟ್ ಎಂಬುದು ಸಂವಿಧಾನದ ರೂಪದಲ್ಲಿ ಸಾರ್ವಭೌಮ ಶಕ್ತಿಯಾಗಿರುತ್ತದೆ. ಈ ಸ್ಟೇಟನ್ನು ಆಳುವವರು ಹಾಗೂ ಆಳಿಸಿಕೊಳ್ಳುವವರಿಬ್ಬರೂ ಸೇರಿ ತಮ್ಮೆಲ್ಲರ ಭವಿಷ್ಯಕ್ಕಾಗಿ ರಚಿಸಿಕೊಂಡಿರುತ್ತಾರೆ. ಈ ಒಪ್ಪಂದದ ಪ್ರಕಾರ ಪ್ರಜೆಗಳು ಸ್ಟೇಟಿನ ಕಾನೂನಿಗೆ ಬದ್ಧರಾಗಿರಬೇಕು ಹಾಗೂ ಅದರ ಆಳ್ವಿಕೆಗೆ ಅಂದರೆ ಸಾರ್ವಭೌಮತ್ವಕ್ಕೆ ವಿಧೇಯರಾಗಿರಬೇಕು.

  ಅನೇಕ ತಲೆಮಾರುಗಳ ವರೆಗೆ ಇಂಥ ಆಳ್ವಿಕೆಗೆ ತಮ್ಮನ್ನು ಕೊಟ್ಟುಕೊಂಡ ಪಾಶ್ಚಾತ್ಯರಿಗೆ ಸ್ಟೇಟ್ ಎನ್ನುವುದು ಅವರ ಅನುಭವದ ಒಂದು ಭಾಗ. ಇಂಥ ಸ್ಟೇಟಿನಲ್ಲಿ ಸ್ಟೇಟ್ ಸಮಾಜ ಹಾಗೂ ನಾಗರೀಕ ಸಮಾಜ ಎಂಬ ಎರಡು ವಲಯಗಳು ಇರುತ್ತವೆ. ಅಂದರೆ ಸ್ಟೇಟ್ ಸಮಾಜ ಎಂಬುದು ಆಳ್ವಿಕೆಯನ್ನು ಅಥವಾ ಸಾರ್ವಭೌಮತ್ವವನ್ನು ರಚಿಸುವ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ನಮ್ಮಲ್ಲಿ ಇದನ್ನು ಸರ್ಕಾರೀ ಸಂಸ್ಥೆಗಳು ಹಾಗೂ ಕಾರ್ಯಕ್ರಮಗಳು ಅನ್ನುತ್ತೇವೆ. ಇದು ಯಾರದೇ ಖಾಸಗಿ ಹಿತಾಸಕ್ತಿಯನ್ನು ಪ್ರತಿನಿಧಿಸುವ ಸಲುವಾಗಿ ಬಳಕೆಯಾಗತಕ್ಕದ್ದಲ್ಲ. ಒಟ್ಟಾರೆಯಾಗಿ ಸ್ಟೇಟ್ನ ಉದ್ದೇಶದ ಸಾಕಾರಕ್ಕಾಗಿ ಬಳಕೆಯಾಗಬೇಕು. ಈ ವಲಯದಲ್ಲಿ ವ್ಯವಹರಿಸುವ ವ್ಯಕ್ತಿಗಳು ಸ್ಟೇಟ್ ಎಂಬ ಸಾರ್ವಜನಿಕ ಸಂಸ್ಥೆಯ ಉದ್ದೇಶಗಳನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತಿರುತ್ತಾರೆ.

  ಇಂಥ ಸ್ಟೇಟಿನಲ್ಲಿ ಆಳ್ವಿಕೆಗೆ ಒಳಪಟ್ಟ ಸಮುದಾಯಗಳನ್ನು ನಾಗರಿಕ ಸಮಾಜ ಎನ್ನಲಾಗುತ್ತದೆ. ಇವರು ಸ್ಟೇಟಿನ ಕಾನೂನಿನ ಆಳ್ವಿಕೆಗೆ ವಿಧೇಯರಾಗಿರಬೇಕು ಎಂಬ ಷರತ್ತಿನ ಮೇಲೆ ಸ್ಟೇಟ್ ಅಸ್ತಿತ್ವದಲ್ಲಿರುತ್ತದೆ. ಹಾಗಾಗಿ ‘ನಾಗರಿಕರು ಕಾನೂನಿಗೆ ಏಕೆ ವಿಧೇಯರಾಗಿರಬೇಕು?’ ಎಂಬ ಪ್ರಶ್ನೆ ಪಾಶ್ಚಾತ್ಯ ರಾಜಕೀಯ ಚಿಂತನೆಗಳಲ್ಲಿ ಮೂಲಭೂತವಾಗಿ ಕಾಣಿಸಿಕೊಳ್ಳುತ್ತದೆ. ಸ್ಟೇಟ್ ಎಂಬುದು ತನ್ನ ಕಾನೂನಿನ ದಬ್ಬಾಳಿಕೆಯಿಂದ ಪ್ರಜೆಗಳನ್ನು ಶೋಷಿಸತೊಡಗಿದರೆ ಅದಕ್ಕೇನು ಪರಿಹಾರ? ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಲುವಾಗಿ ನಾಗರಿಕ ಸಮಾಜದ ಕಲ್ಪನೆ ಪ್ರಾಧಾನ್ಯತೆ ಪಡೆಯಿತು. ಸ್ಟೇಟ್ ಎನ್ನುವುದು ಆಳುವ  ಸಂಸ್ಥೆಗಳನ್ನು ಪ್ರತಿನಿಧಿಸಿದರೆ ನಾಗರಿಕ ಸಮಾಜವು ಆಳಿಸಿಕೊಳ್ಳುವ ಪ್ರಜಾ ಸಮುದಾಯಗಳನ್ನು ಪ್ರತಿನಿಧಿಸುತ್ತದೆ. ನಾಗರಿಕರು ಒಂದು ಸಮಾಜವಾಗಿ ಸಂಘಟಿತರಾಗಿ ಬೇರೆ ಬೇರೆ ಚಳವಳಿಗಳ ಮೂಲಕ, ವೇದಿಕೆಗಳ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತ ಇಂಥ ಸ್ಟೇಟಿನಲ್ಲಿ ಆಳಿಸಿಕೊಳ್ಳುವವರ ಹಿತಾಸಕ್ತಿಯನ್ನು ರಕ್ಷಿಸುತ್ತಿರುತ್ತಾರೆ. ಪರಿಪೂರ್ಣವಾಗಿ ವಿಕಸಿತ ಸ್ಟೇಟಿನಲ್ಲಿ ಪರಿಪೂರ್ಣವಾಗಿ ವಿಕಸಿತ ನಾಗರಿಕ ಸಮಾಜವೂ ಇರಬೇಕಾದದ್ದು ಒಂದು ನಿಬಂಧನೆ.

  ಅಂದರೆ ನಾಗರಿಕ ಸಮಾಜದ ಒಂದು ಭಾಗವಾಗಿ ಆ ಪ್ರಭುತ್ವದ ಪ್ರತೀ ಪ್ರಜೆಯೂ ರಾಜಕೀಯ ಜಾಗೃತಿಯನ್ನು ಹೊಂದಿರಬೇಕಾಗುತ್ತದೆ, ಹಾಗೂ ತನ್ನ ಅಭಿಪ್ರಾಯಗಳನ್ನು ದಾಖಲಿಸುವ ಮೂಲಕ ಹಾಗೂ ಹಕ್ಕೊತ್ತಾಯ ಮಾಡುವುದರ ಮೂಲಕ ಆಳ್ವಿಕೆಯ ಒಂದು ಸಕ್ರಿಯ  ಭಾಗವಾಗಿರಬೇಕಾಗುತ್ತದೆ. ಪ್ರಜಾ ಪ್ರಭುತ್ವದಲ್ಲಿ ಪ್ರತಿನಿಧಿಗಳನ್ನು ಮತ ಚಲಾವಣೆಯ ಮೂಲಕ ಆರಿಸುವುದೂ ಇಂಥದ್ದೊಂದು ಕಾರ್ಯ. ಒಂದೊಮ್ಮೆ ನಾಗರಿಕ ಸಮಾಜವು ತನ್ನ ಈ ಕರ್ತವ್ಯದಲ್ಲಿ ವಿಫಲವಾದರೆ ಸ್ಟೇಟ್ ಆ ಮಟ್ಟಿಗೆ ವಿಫಲವಾದಂತೇ. ಅಂದರೆ ಪ್ರತೀ ಪ್ರಜೆಗೂ ಕೂಡ ತಮ್ಮ ಸ್ಟೇಟ್ನ ಸ್ವರೂಪವೇನು? ತಮ್ಮ ಸ್ಟೇಟಿನಲ್ಲಿ ಪ್ರಜೆಯ ಪಾತ್ರವೇನು? ತಮ್ಮ ಕಾನೂನುಗಳೇನು? ತಮ್ಮ ಸ್ಟೇಟಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಇತ್ಯಾದಿಗಳ ಅರಿವು ಇಲ್ಲದಿದ್ದರೆ ಅವರು ನಾಗರಿಕರೇ ಆಗಲಾರರು. ಪಾಶ್ಚಾತ್ಯರಿಗೆ ಇಂಥ ನಾಗರಿಕ ಸಮಾಜವೂ ಅವರ ಅನುಭವದ ಒಂದು ಭಾಗವೇ ಆಗಿದೆ. ಪಶ್ಚಿಮಕ್ಕೆ ಹೋಗಿ ಹತ್ತಾರು ವರ್ಷ ಅಲ್ಲಿನ ಪ್ರಜೆಯಾದ ಭಾರತೀಯರಿಗೂ ಈ ಸ್ಟೇಟ್ ಹಾಗೂ ನಾಗರಿಕ ಸಮಾಜಗಳು ಅನುಭವಕ್ಕೆ ಬರುತ್ತವೆ.

  ಆದರೆ ಭಾರತೀಯ ಸಂದರ್ಭದಲ್ಲಿ ಇಂಥದೊಂದು ಸ್ಟೇಟ್ ಅಥವಾ ನಾಗರಿಕ ಸಮಾಜಗಳು ಇದ್ದಿದ್ದರೆ ನಮ್ಮ ರಾಜಕಾರಣಿಗಳಾಗಲೀ ಪ್ರಜೆಗಳಾಗಲೀ ಹೀಗೆ ಆಡುತ್ತಿದ್ದರೆ?  ಇಂಥ ಸ್ಟೇಟಿನಲ್ಲಿ ಸ್ಟೇಟ್ ಸಮಾಜದ ಒಂದು ಭಾಗವಾದ ಆಳುವವರ ಮೇಲಿನ ನಿರೀಕ್ಷೆ ಏನಿರುತ್ತದೆ? ಅವರು ಸಂವಿಧಾನ ಬದ್ಧವಾಗಿ ಸ್ಟೇಟಿನ ಉದ್ದೇಶಗಳನ್ನು ಸಾಕಾರಗೊಳಿಸಬೇಕು, ನಾಗರಿಕ ಸಮಾಜದ ಹಿತಾಸಕ್ತಿಯನ್ನು ಸ್ಟೇಟಿನ ಉದ್ದೇಶದೊಳಗೆ ಒಳಗೊಳ್ಳಬೇಕು ಎಂದಷ್ಟೇ ಇರುತ್ತದೆ. ಪಶ್ಚಿಮದಲ್ಲೆಲ್ಲೂ ಪ್ರಜೆಗಳಿಗೆ ತಾಳಿ, ಮಂಚ, ಮನೆ, ಅಕ್ಕಿ, ಸೈಕಲ್ಲು, ಸೀರೆಗಳನ್ನು ಹಂಚುವುದು ಸ್ಟೇಟಿನ ಯಾವ ಕಾರ್ಯಕ್ರಮಗಳಲ್ಲೂ ಬರುವುದಿಲ್ಲ. ಮತಗಳನ್ನು ಹಣಕೊಟ್ಟು, ಹೆಂಡ ಕೊಟ್ಟು ಖರೀದಿಸುವುದು ಪಶ್ಚಿಮದ ಯಾವ ಸ್ಟೇಟುಗಳಲ್ಲೂ ಕಾಣದ ಸಂಗತಿ. ಇಂಥ ಜನಪ್ರಿಯ ಕಾರ್ಯಕ್ರಮಗಳು ರಾಜಕಾರಣಿಗಳ ಖಾಸಗಿ ನಿರ್ಣಯಗಳಾಗಿವೆಯೇ ಹೊರತೂ ಪ್ರಭುತ್ವದ ಅಂಗಗಳಲ್ಲ. ಹಾಗಾಗಿಯೇ ಆಯ್ಕೆಯಾಗಿ ಆಡಳಿತಕ್ಕೆ ಬಂದ ಪ್ರತೀ ಪಕ್ಷವೂ ತನ್ನ ಬ್ರಾಂಡಿನ ಹೊಸ ಜನಪ್ರಿಯ ಕಾರ್ಯಕ್ರಮಗಳನ್ನು ಹುಡುಕುವುದೇ ತನ್ನ ಸಾಫಲ್ಯದ ರಹಸ್ಯ ಎಂದು ನಂಬಿರುತ್ತದೆ. ಚುನಾವಣೆಗಳಲ್ಲೂ ಆಯಾ ಪಕ್ಷಗಳು ಇದನ್ನೇ ತಮ್ಮ ಸಾಧನೆ ಎಂಬಂತೆ ಎತ್ತಿ ಹೇಳುತ್ತಿರುತ್ತವೆ.  ಇದರಾಚೆಗೆ ಸ್ಟೇಟ್ ಸಮಾಜ ಹಾಗೂ ನಾಗರಿಕ ಸಮಾಜ ಎಂಬುದು ಎಲ್ಲೂ ಕಾಣಿಸುತ್ತಿಲ್ಲ. ಅಂದರೆ ನಮ್ಮಲ್ಲಿ ಪ್ರಜಾ ಪ್ರಭುತ್ವವೇ ಇದ್ದಂತಿಲ್ಲ.

  ಇಲ್ಲಿ ಪ್ರಜಾ ಪ್ರಭುತ್ವವಿದ್ದಿದ್ದರೆ ಮತದಾರರಿಗೆ ಹಣಕೊಟ್ಟು ಓಟು ಹಾಕಿಸಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ. ಪ್ರಜೆಗಳಿಗೆ ಹಣಕೊಟ್ಟು ಮತಹಾಕಿಸಬೇಕು ಅಂತಾದರೆ ಅದು ನಾಗರಿಕ ಸಮಾಜವೇ ಅಲ್ಲ ಅಂದಂತಾಯಿತು. ತಮ್ಮ ವಯಕ್ತಿಕ ಅಥವಾ ಪಕ್ಷದ ವರ್ಚಸ್ಸನ್ನು ಬೆಳೆಸಿಕೊಳ್ಳುವುದಕ್ಕೆ ಇಲ್ಲಿನ ರಾಜಕಾರಣಿಗಳು ಸ್ಟೇಟಿನ ಬೊಕ್ಕಸವನ್ನು ಬರಿದುಮಾಡುತ್ತಾರೆ ಅಂತಾದರೆ ಇಲ್ಲಿ ಸಾರ್ವಜನಿಕ ವಲಯವೆಂಬುದು ಎಲ್ಲಿದೆ?  ಪ್ರತೀ ಜಾತಿ, ಉಪಜಾತಿಗಳು ತಂತಮ್ಮ ಜಾತಿಯ ಲಾಭಕ್ಕಾಗಿ ಹೋರಾಡುವುದು ಹಾಗೂ ಅದಕ್ಕೆ ಸೇರಿದ ರಾಜಕಾರಣಿಗಳು ಇಂಥ ಜಾತಿಗಳಿಗಾಗಿಯೇ ಕಾನೂನುಗಳನ್ನು ಮಾಡಿ ಅವನ್ನು ಸಂತುಷ್ಟ ಪಡಿಸುವುದನ್ನೇ ತಮ್ಮ ಅಸ್ತಿತ್ವವನ್ನಾಗಿ ಮಾಡಿಕೊಂಡಿರುವುದನ್ನು ನೋಡಿದರೆ ಈ ಆಳ್ವಿಕೆಗೆ ಒಂದು ಸಾಮಾನ್ಯ ಉದ್ದೇಶ ಎಂಬುದೇ ಇಲ್ಲ ಎಂದಂತಾಯಿತು. ಇಲ್ಲ ಸ್ಟೇಟ್ ಎಂಬುದೇ ಸಾರ್ವಭೌಮ ಎಂದಾಗಿದ್ದರೆ ಇಲ್ಲಿನ ಆಳುವವರು ಪ್ರಜೆಗಳ ಜೊತೆಗೆ ಇಂಥ ತಂತ್ರಗಳ ಮೂಲಕ ಸಂಬಂಧವನ್ನು ಸ್ಥಾಪಿಸಿಕೊಳ್ಳುವ ಹೀನಾಯ ಸ್ಥಿತಿಗೆ ಇಳಿಯುತ್ತಿರಲಿಲ್ಲ. ಅಂದರೆ ಇದು ಪ್ರಜಾ ಪ್ರಭುತ್ವ ಎಂಬ ಹೆಸರನ್ನು ಹೊತ್ತಿದೆ ಆದರೆ ಪ್ರಜಾ ಪ್ರಭುತ್ವವಲ್ಲ. ಅಂದರೆ ರಾಜಕಾರಣಿಗಳಾದಿಯಾಗಿ ಸಮಸ್ತ ಪ್ರಜೆಗಳು ಕೂಡ ತಮ್ಮ ತಮ್ಮ ಜೀವನವನ್ನು ತಾವು ವ್ಯವಸ್ಥಿತಗೊಳಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಜಾ ಪ್ರಭುತ್ವಕ್ಕಿಂತಲೂ ಮುಕ್ತವಾದ ವ್ಯವಸ್ಥೆಯಂತೇ ಕಾಣುತ್ತದೆ. ನಿಜವಾಗಿಯೂ ಪ್ರಜೆಗಳ ಸ್ವಾತಂತ್ರ್ಯವೇ ಪ್ರಜಾ ಪ್ರಭುತ್ವದ ಗುರಿಯಾಗಿದ್ದಲ್ಲಿ ಅದನ್ನು ಸಾಧಿಸುವುದಕ್ಕೆ ಪ್ರಜಾ ಪ್ರಭುತ್ವವೇ ಬೇಡ ಎಂಬುದನ್ನು ಭಾರತೀಯ ರಾಜಕಾರಣವು ನಿದಶರ್ಿಸುವಂತಿದೆ.

  ಈ ಸ್ಥಿತಿಯನ್ನು ಹೇಗೆ ಅರ್ಥೈಸುವುದು? ಸಿನಿಕತನ ಉತ್ತರವಲ್ಲ. ನನ್ನ ಊಹೆ ಹೀಗಿದೆ: ಇಲ್ಲೊಂದು ಸಾಂಸ್ಕೃತಿಕ ವ್ಯತ್ಯಾಸವನ್ನು ಗಮನಿಸಿದರೆ ಬಹುಶಃ ಈ ಪರಿಸ್ಥಿತಿಯನ್ನು ವಿವರಿಸಬಹುದು. ಅಂದರೆ ಭಾರತೀಯ ಸಂಪ್ರದಾಯಗಳಲ್ಲಿ ಪ್ರಭುತ್ವದ ಕಲ್ಪನೆ ಹೇಗೆ ಅನುಭವಕ್ಕೆ ಬರುತ್ತದೆ ಎನ್ನುವುದು ಪಾಶ್ಚಾತ್ಯ ಸಮಾಜಕ್ಕಿಂತ ಮೂಲಭೂತವಾಗಿ ಬೇರೆಯೇ ಇದ್ದಿರಬೇಕು. ನಮ್ಮಲ್ಲಿ ಗಾಡ್ ಕಲ್ಪನೆ ಇಲ್ಲ ಹಾಗೂ ಕ್ರಿಶ್ಚಿಯನ್ ಥಿಯಾಲಜಿಗೆ ವಿಶಿಷ್ಟವಾದ ಸಾರ್ವಭೌಮತ್ವದ ಕಲ್ಪನೆ ಕೂಡ ಇಲ್ಲ. ಭಾರತದಲ್ಲಿ ರಾಜನ ಕರ್ತವ್ಯವೆಂದರೆ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜಾತಿ, ಶ್ರೇಣಿ, ಕುಲ, ಸಂಪ್ರದಾಯ ಧರ್ಮಗಳನ್ನು ಹಾಗೂ ಪದ್ಧತಿಗಳನ್ನು ರಕ್ಷಿಸಿಕೊಂಡು ಬರುವುದು. ಇದನ್ನೇ ರಾಜಧರ್ಮ ಎನ್ನಲಾಗುತ್ತದೆ. ರಾಜನು  ಪ್ರಜೆಗಳ ಜೀವನದಲ್ಲಿ ಹಾಗೂ ಪದ್ಧತಿಗಳಲ್ಲಿ ಹಸ್ತಕ್ಷೇಪವನ್ನು ಮಾಡುವುದಿಲ್ಲ. ಹಾಗೂ ಪ್ರಭುತ್ವವೆನ್ನುವುದು ಈ ಪ್ರಜೆಗಳನ್ನೆಲ್ಲ ಯಾವುದೋ ನೀಲಿ ನಕ್ಷೆಯ ಪ್ರಕಾರ ರೂಪಿಸುವ ಮಧ್ಯವರ್ತಿಯೂ ಅಲ್ಲ. ಆದಷ್ಟೂ ಅಸ್ತಿತ್ವದಲ್ಲಿರುವ ಪದ್ಧತಿಗಳನ್ನು ಅನೂಚಾನವಾಗಿ ನಡೆದುಕೊಂಡು ಹೋಗುವಂತೆ ಕಾಯ್ದುಕೊಳ್ಳುವುದೇ ಪಾಲನೆ ಎನಿಸಿಕೊಳ್ಳುತ್ತದೆ. ಇದನ್ನೇ ವರ್ಣಧರ್ಮ ಕಲ್ಪನೆಯಲ್ಲಿ ಒಳಗೊಳ್ಳಲಾಗಿದೆ. ಇವುಗಳಲ್ಲಿ ಹಸ್ತಕ್ಷೇಪ ಮಾಡುವುದು ಹಾಗೂ ಅವುಗಳ ಸಂಕರಕ್ಕೆ ಅವಕಾಶ ಮಾಡಿಕೊಡುವುದು ರಾಜತ್ವದ ಒಂದು ದೋಷ.

  ಬಹುಶಃ ಭಾರತೀಯರ ಪ್ರಭುತ್ವ ಕಲ್ಪನೆಗೆ ಒಂದು ಮಾದರಿಯನ್ನು ಅಧ್ಯಾತ್ಮದಲ್ಲಿ ಕಾಣುತ್ತೇವೆ. ಶಂಕರಾಚಾರ್ಯರ ನಿರ್ವಾಣ ಷಟ್ಕದಲ್ಲಿ ಕೊನೆಯ ಶ್ಲೋಕವು ಹೀಗಿದೆ “ಅಹಂ ನಿರ್ವಿಕಲ್ಪಂ ನಿರಾಕಾರ ರೂಪಃ ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಂ” ಅಂದರೆ ‘ನಾನು ನಿರ್ವಿಕಲ್ಪನೂ ನಿರಾಕಾರ ರೂಪಿನವನೂ ಆಗಿದ್ದು ಸರ್ವ ಇಂದ್ರಿಯಗಳ ಮೇಲೂ ವಿಭುತ್ವವನ್ನು ಹೊಂದಿದ್ದೇನೆ’. ನಾನು ಎಂದರೆ ಆತ್ಮನ್. ಆತ್ಮನ್ ನಮ್ಮ ಯಾವ ಇಂದ್ರಿಯಗಳಿಗೂ ಕರ್ಮಗಳಿಗೂ ಅಂಟಿಕೊಂಡಿರುವುದಿಲ್ಲ ಎಂಬುದಾಗಿ ಅಧ್ಯಾತ್ಮವು ತಿಳಿಸುತ್ತದೆ.  ಅದು ಕೇವಲ ಅವುಗಳಿಗೆ ಸಾಕ್ಷೀಭೂತವಾಗಿರುತ್ತದೆ ಅಷ್ಟೆ. ಇದನ್ನು ವಿಭುತ್ವ ಎಂಬುದಾಗಿ ವರ್ಣಿಸಬೇಕಾದರೆ ನಮ್ಮ ಸಾರ್ವಭೌಮತ್ವವು ಥಿಯಾಲಜಿಯ ಸಾರ್ವಭೌಮತ್ವ ಕಲ್ಪನೆಗಿಂತ ಮೂಲಭೂತವಾಗಿ ಬೇರೆಯೇ ಇದ್ದಂತಿದೆ. ಅಂದರೆ ಅದು ಕ್ರಿಯಾತ್ಮಕವಾಗಿ ಪ್ರಜೆಗಳನ್ನು ನಿಯಂತ್ರಿಸುವ ಕಲ್ಪನೆಯಲ್ಲ, ಬದಲಾಗಿ ಅದಕ್ಕೆ ಸಾಕ್ಷೀಭೂತವಾಗಿರುವುದು. ಅಂದರೆ ಪ್ರಜೆಗಳ ಪದ್ಧತಿಗಳನ್ನು ರೂಪಿಸುವುದು ಅದರ ಕೆಲಸವಲ್ಲ, ಬದಲಾಗಿ ಅವುಗಳನ್ನು ಒಳಗೊಳ್ಳುವುದಷ್ಟೇ ಅದರ ಕೆಲಸ. ರಾಜಧರ್ಮ ಕಲ್ಪನೆಯು ಇದಕ್ಕೆ ಸಂವಾದಿಯಾಗಿದೆ ಎಂಬುದಂತೂ ಸ್ಪಷ್ಟ.

  ಭಾರತೀಯ ಪ್ರಭುತ್ವಗಳು ಹಿಂದೆ ಈ ರೂಪದಲ್ಲಿ ಇದ್ದುದರಿಂದ ಇಲ್ಲಿನ ಪ್ರಜೆಗಳು ಇತಿಹಾಸದುದ್ದಕ್ಕೂ ತಮ್ಮ ಜೀವನವನ್ನು ತಾವು ಸಂಘಟಿಸಿಕೊಂಡು ಬಂದಿದ್ದಾರೆ. ಅವೇ ಜಾತಿ, ಮತ, ಸಂಪ್ರದಾಯ, ಶ್ರೇಣಿ ಇತ್ಯಾದಿ ಧರ್ಮಗಳ ರೂಪಗಳನ್ನು ಪಡೆದಿವೆ. ಇದು ನಮ್ಮ ಆಧುನಿಕ ಇತಿಹಾಸಕಾರರಿಗೆ ಬಿಡಿಸಲಾಗದ ಒಗಟಾಗಿ ಕಾಡಿದೆ. ಈ ಪ್ರಾಚೀನ ರಾಜ್ಯಗಳು ಸ್ಟೇಟ್ಗಳು ಆಗಿದ್ದ ಪಕ್ಷದಲ್ಲಿ ಇಂಥ ಸ್ವಾಯತ್ತ ಆಳ್ವಿಕೆಯ ಸಂಸ್ಥೆಗಳನ್ನು ಹೇಗೆ ಒಳಗೊಂಡವು? ಇಂಥ ಸ್ಟೇಟಿನ ಸ್ವರೂಪವೇನು? ಇತ್ಯಾದಿ. ಆದರೆ ಇದು ಸ್ಟೇಟೇ ಅಲ್ಲ ಎಂಬುದಾಗಿ ಯಾವ ವಿದ್ವಾಂಸರೂ ತೀರ್ಮಾನಿಸಲಿಲ್ಲ. ಹಾಗಾಗೇ ಚರ್ಚೆ ಬಗೆಹರಿಯಲಿಲ್ಲ. ಇಂಥ ಪ್ರಭುತ್ವದಲ್ಲಿ ಸ್ಟೇಟ್ ಇಲ್ಲದಿರುವುದರಿಂದ ಸ್ಟೇಟಿನ ಕಾರ್ಯಕ್ರಮಗಳು ಎನ್ನುವಂಥವೂ ಇರಲು ಸಾಧ್ಯವಿಲ್ಲ. ಅವು ಏನಿದ್ದರೂ ರಾಜ ಮನೆತನಗಳ, ಅಧಿಕಾರಿಗಳ ಖಾಸಗಿ ಕಾರ್ಯಕ್ರಮಗಳು. ಅವು ಆಯಾ ವ್ಯಕ್ತಿಯ, ಕುಟುಂಬದ ಪುರುಷಾರ್ಥಸಾಧನೆಯ ಮಾರ್ಗಗಳಾಗಿದ್ದವು. ಭೂಮಿ ಹಾಗೂ ಹಣವನ್ನು ದಾನ ಮಾಡುವುದು, ಕೆರೆ ಕಟ್ಟಿಸುವುದು, ದೇವಾಲಯ ನಿರ್ಮಿಸುವುದು,  ಅನ್ನ ಛತ್ರ, ಅರವಟ್ಟಿಗೆ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸುವುದು. ಇವುಗಳನ್ನು ಧರ್ಮಕಾರ್ಯ ಎಂದು ಕರೆಯಲಾಗುತ್ತಿತ್ತು. ಇಂದು ಇವುಗಳನ್ನೇ ಪ್ರಾಚೀನ ರಾಜರ ಜನಹಿತ ಕಾರ್ಯಕ್ರಮಗಳೆಂದು ಬಣ್ಣಿಸಲಾಗುತ್ತದೆ. ನಮ್ಮ ಇತಿಹಾಸ ಪುಸ್ತಕಗಳಲ್ಲಿ ಕೂಡ ಒಳ್ಳೆಯ ರಾಜ ಎಂದರೆ ರಸ್ತೆಗಳ ಅಂಚಿನಲ್ಲಿ ಮರಗಳನ್ನು ನೆಡಬೇಕು, ಕೆರೆಗಳನ್ನು ಕಟ್ಟಿಸಬೇಕು, ಅಲ್ಲವೆ?

  ಪಾಶ್ಚಾತ್ಯ ಸ್ಟೇಟ್ ಎಂಬುದನ್ನು ನಾವು ಪ್ರಜಾ ಪ್ರಭುತ್ವದ ರೂಪದಲ್ಲಿ ಅಳವಡಿಸಿಕೊಂಡರೂ ಅದಕ್ಕೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಭಾರತೀಯರು ಸೋತಿದ್ದಾರೆ.  ಅದಕ್ಕೆ ಕಾರಣ ಸಾಂಸ್ಕೃತಿಕ ವ್ಯತ್ಯಾಸ. ಇವರ ಮನಸ್ಸಿನಲ್ಲಿ ಇರುವ ಆಳುವವರ ಮಾದರಿಗಳು ಭಾರತೀಯ ಹಿನ್ನೆಲೆಯವು. ಹಾಗಾಗಿ ನಮ್ಮ ರಾಜಕಾರಣಿಗಳು ನಮ್ಮ ಪ್ರಾಚೀನ ರಾಜರನ್ನು ಅನುಕರಿಸುತ್ತಿದ್ದಾರೆ. ಆದರೆ ಇಂದಿನ ಪ್ರಭುತ್ವದಲ್ಲಿ ಇದೊಂದು ವಿಕೃತಿಯನ್ನು ಸೃಷ್ಟಿಸಿದೆ. ಏಕೆಂದರೆ ನಮ್ಮ ರಾಜಕಾರಣಿಗಳು ಪ್ರಾಚೀನ ರಾಜರಲ್ಲ ಹಾಗೂ ಇವರ ಆಳ್ವಿಕೆಯ ರಚನೆ ಪ್ರಾಚೀನ ರಾಜ್ಯವಲ್ಲ. ಇಲ್ಲಿ ಒಂದು ಸಾಂಸ್ಕೃತಿಕ ವ್ಯತ್ಯಾಸವಾಗಿದೆ. ಅದೆಂದರೆ ಇವರು ಅನುಷ್ಠಾನಕ್ಕೆ ತರಬೇಕಾದದ್ದು ಪಾಶ್ಚಾತ್ಯ ಪರಿಕಲ್ಪನೆಯ ಪ್ರಜಾ ಪ್ರಭುತ್ವ. ಈ ಹೊಸ ಪ್ರಭುತ್ವವು ರಾಜರ ಮಾದರಿಯ ಅಧಿಕಾರ ಚಲಾವಣೆಗೆ ಹೊಸ ಮಿತಿಗಳನ್ನೂ ಸಾಧ್ಯತೆಗಳನ್ನು ತೆರೆಯುತ್ತದೆ. ನೀವು ರಾಜರಾಗಬೇಕಾದರೆ ಪ್ರಜೆಗಳಿಂದ ಚುನಾಯಿಸಿ ಬರಬೇಕು. ಸಂವಿಧಾನ ದತ್ತವಾದ ಕಾನೂನುಗಳಿಗೆ ಬದ್ಧರಾಗಿರಬೇಕು. ಪ್ರಜೆಗಳಿಗೂ ಕೂಡ ಅವರ ಜೀವನ ವಿಧಾನದ ಮೇಲೆ ಇಂಥವೇ ಮಿತಿಗಳನ್ನು ಪ್ರಜಾ ಪ್ರಭುತ್ವವು ಹೇರುತ್ತದೆ. ಅಂದರೆ ಇವರೆಲ್ಲರೂ ಸ್ಟೇಟನ್ನು ಹೇಗೆ ಪರಿಭಾವಿಸಿಕೊಳ್ಳುತ್ತಿದ್ದಾರೆಂದರೆ ತಮ್ಮ ಪುರುಷಾರ್ಥಸಾಧನೆಗೆ ಕೆಲವು ತೊಡಕುಗಳನ್ನು ಒಡ್ಡುತ್ತಿರುವ  ಹಾಗೂ ಕೆಲವು ನಿರ್ಬಂಧಗಳನ್ನು ಸೃಷ್ಟಿಸುತ್ತಿರುವ ಒಂದು ವ್ಯವಸ್ಥೆ. ಹಾಗಾದರೆ ಪಶ್ಚಿಮದಿಂದ ತಂದು ಅಳವಡಿಸಿಕೊಂಡ ಸ್ಟೇಟ್ ಎಂಬ ವ್ಯವಸ್ಥೆಯ ಗತಿ ಭಾರತದಲ್ಲಿ ಏನಾಗಿದೆ? ಅಪಾರ ಅಧಿಕಾರ ಹಾಗೂ ಸಂಪತ್ತನ್ನು ಕ್ರೋಢೀಕರಿಸಿಕೊಂಡು ಪ್ರಜೆಯೊಬ್ಬನ ಪುರುಷಾರ್ಥಸಾಧನೆಗೆ ಅವಕಾಶಗಳನ್ನು ಸೃಷ್ಟಿಸುತ್ತಿರುವ ‘ಯಾರಪ್ಪನ ಮನೆಯದೂ ಅಲ್ಲದ’ ಸಾರ್ವಜನಿಕ ವಲಯ. ಬಹುಶಃ ‘ಕುಲಗೆಟ್ಟು ಹೋಗುವುದು’ ಎಂದರೆ ಇದೇ ಇರಬೇಕು.

Advertisements
Categories: Uncategorized
  1. thirumala raya halemane
    ನವೆಂಬರ್ 28, 2015 ರಲ್ಲಿ 10:28 ಫೂರ್ವಾಹ್ನ

    excellent article. enjoyed reading. best wishes.

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: