ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 36: ಅನ್ಯಾಯ ಹಾಗೂ ಬಡತನಗಳಿಗೆ ಜಾತಿ ಮತಗಳ  ಚೌಕಟ್ಟೆ?

ಪ್ರೊ. ರಾಜಾರಾಮ ಹೆಗಡೆ

 ಇಂದಿನ ಸಾಮಾಜಿಕ ಚಿಂತನೆಯಲ್ಲಿ ಜಾತಿ ಮತಗಳು ಪ್ರಧಾನ ಪಾತ್ರ ವಹಿಸುತ್ತವೆ. ರಾಜಕೀಯ ನೀತಿಗಳಿಗೂ ಜಾತಿ ಮತಗಳೇ ಮಾನದಂಡ. ಇದೊಂದು ವಿಪರ್ಯಾಸ. ಒಂದೆಡೆ ನಮ್ಮ ಪ್ರಭುತ್ವವು ಜಾತ್ಯತೀತ ಎಂಬುದಾಗಿ ವಿಶೇಷ ಹಣೆಪಟ್ಟಿ ಧರಿಸಿದೆ, ಮತ್ತೊಂದೆಡೆ ತನ್ನ ನೀತಿಗಳನ್ನೆಲ್ಲ ಜಾತಿ ಮತಗಳನ್ನಾಧರಿಸಿ ರೂಪಿಸಿಕೊಳ್ಳುತ್ತದೆ. ಇಂಥ ಸರ್ಕಾರವು ನಾನು ಬಡವರ ಪರ, ಸಾಮಾಜಿಕ ಅನ್ಯಾಯವನ್ನು ನಿರ್ಮೂಲನೆ ಮಾಡುವುದು ತನ್ನ ಗುರಿ ಇತ್ಯಾದಿಗಳನ್ನು  ಘೋಷಿಸಿಕೊಳ್ಳುವಾಗ ಜಾತಿ ಮತಗಳು ಅದನ್ನು ನಿರ್ಧರಿಸುವ ಸಂಗತಿಗಳು ಎಂಬುದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತದೆ.  ಬಡವರ ಉದ್ಧಾರ ಮಾಡುವುದು ತನ್ನ ಗುರಿ ಎಂದು ಘೋಷಿಸಿದರೆ ನಿರ್ಧಿಷ್ಟ ಜಾತಿ ಮತಗಳ ಜನರ ಉದ್ಧಾರ ಎಂಬುದಾಗಿ ತಿಳಿಯಬೇಕು. ಇದು ನಮ್ಮ ರಾಜಕೀಯವನ್ನು ನಾವು ಬೆಳೆಸಿಕೊಂಡು ಬಂದ ವೈಖರಿಗೆ ಸಂಬಂಧಿಸಿದ ಸಂಗತಿ.

 ಕರ್ನಾಟಕ ಸರ್ಕಾರವು ರೈತರ ಆತ್ಮಹತ್ಯೆಗೆ ಸ್ಪಂದಿಸುತ್ತಿರುವ ರೀತಿಯನ್ನು ಗಮನಿಸಿದರೆ ಇಂಥ ತಿಳುವಳಿಕೆಯಿಂದ ಹುಟ್ಟುವ ಗೊಂದಲಗಳೂ ಸ್ಪಷ್ಟವಾಗುತ್ತವೆ. ಈ ಸರ್ಕಾರವು ಪ್ರಾರಂಭವಾಗುವಾಗ ತನ್ನ ರಾಜಕೀಯ ನಡೆಯನ್ನು ಅನ್ಯಾಯ ಹಾಗೂ ಬಡತನಗಳ ನಿವಾರಣೆಗಾಗಿ ಎಚ್ಚರಿಕೆಯಿಂದ ರೂಪಿಸಿಕೊಂಡಿತು. ಆದರೆ ಅದು ಪರಿಣಾಮದಲ್ಲಿ ಅಲ್ಪ ಸಂಖ್ಯಾತ, ದಲಿತ ಹಾಗೂ ಹಿಂದುಳಿದ ಜಾತಿಗಳ ಒಂದು ಕೂಟವನ್ನು ಗಟ್ಟಿಮಾಡುವ ಪ್ರಯತ್ನ ಆಯಿತು.  ಒಂದು ಸಾಮಾಜಿಕ ಚಿಂತಕರ ವರ್ಗವು ಇಂಥ ರಾಜಕೀಯದ ಬೆಂಬಲಕ್ಕೆ ನಿಂತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.  ಈ ಚಿಂತನೆಯ ಮಿತಿಗಳೇನು?

  ಈ ಚಿಂತನೆಗಳನ್ನು ಸ್ಥೂಲವಾಗಿ ಪ್ರಗತಿಪರ ಚಿಂತನೆ ಎನ್ನಬಹುದು. ಅದು ಬಡತನ ಹಾಗೂ ಅನ್ಯಾಯಗಳನ್ನು ನಿರ್ಧಿಷ್ಟ ಜಾತಿ ಮತಗಳಿಗೆ ಸಮೀಕರಿಸುತ್ತ ಹುಟ್ಟಿಕೊಂಡಿದೆ. ಅನ್ಯಾಯ ಹಾಗೂ ಬಡತನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಜಾತಿ ಏಕೆ ಮುಖ್ಯವಾಗಬೇಕು ಎಂಬುದಕ್ಕೆ ಯಾವ ಸಂಶೋಧನೆಯಾಗಲೀ, ಅಧ್ಯಯನವಾಗಲೀ ನಡೆದಂತಿಲ್ಲ. ಬದಲಾಗಿ ನಮ್ಮ ಸಮಾಜದ ಕುರಿತು ವಸಾಹತು ಕಾಲದಿಂದ ರೂಢಮೂಲವಾಗಿ ಬಂದ ಕೆಲವು ತಥಾಕಥಿತ ಹೇಳಿಕೆಗಳೇ ಆಧಾರ ವಾಕ್ಯಗಳಾಗಿವೆ. ಅದನ್ನಾಧರಿಸಿ ವಸಾಹತು ಕಾಲದಿಂದಲೂ ಕೆಲವು ಜಾತಿಗಳ ಶೋಷಣೆ, ಅನ್ಯಾಯಗಳನ್ನು ತೊಡೆಯುವ ಚಳವಳಿಗಳು ರೂಪುಗೊಂಡವು ಹಾಗೂ ಒಂದು ನಿರ್ಧಿಷ್ಟ ರೀತಿಯ ಚಿಂತನೆಯು ಸ್ವತಂತ್ರ ಭಾರತದ ರಾಜಕೀಯಕ್ಕೆ ಬುನಾದಿಯಾಯಿತು. ಈ ಚಿಂತನೆಯ ಪ್ರಕಾರ ಸಾಮಾಜಿಕ ತರತಮ, ಅಂದರೆ ನಿರ್ಧಿಷ್ಟವಾಗಿ ಜಾತಿಗಳ ಮೇಲು ಕೀಳುಗಳಿಗೂ, ಅನ್ಯಾಯಕ್ಕೂ, ಬಡತನಕ್ಕೂ, ಹಿಂದುಳಿದಿರುವಿಕೆಗೂ ಸಮೀಕರಣ ಮಾಡಲಾಯಿತು. ಹಾಗೂ ನಮ್ಮ ಸ್ವತಂತ್ರ ಭಾರತದ ರಾಜಕಾರಣದ ಸಾಮಾಜಿಕ ನೀತಿ ಈ ನಿರ್ಧಿಷ್ಟ ಮಾನದಂಡವನ್ನೇ ಆಧರಿಸಿರಬೇಕೆಂಬ ಒತ್ತಡ ನಿರ್ಮಾಣವಾಯಿತು. ಈ ಒತ್ತಡ ನಿರ್ಮಾಣವಾಗಲಿಕ್ಕೆ ಸಮಾಜ ಶಾಸ್ತ್ರೀಯ ಅಧ್ಯಯನಗಳಿಗಿಂತ ರಾಜಕೀಯ ಲೆಕ್ಕಾಚಾರಗಳೇ ಕಾರಣವಾಗಿವೆ. ಚಳವಳಿಗಾರರು, ಚಿಂತಕರು ಹಾಗೂ ರಾಜಕಾರಣಿಗಳ ರಾಜಕೀಯ ಸಖ್ಯ ಹಾಗೂ ಕೊಡುಕೊಳೆಗಳು ನಿರ್ಣಾಯಕವಾಗಿವೆ.

 ಇಂದು ಈ ಚಿಂತನೆಗೆ ಸೆಕ್ಯುಲರಿಸಂ ರಾಜಕೀಯ ಕೂಡ ಬಂದು ಸೇರಿಕೊಂಡಿದೆ.  ಭಾರತವು ಸ್ವತಂತ್ರವಾಗಿ, ಮೂವತ್ತು ವರ್ಷಗಳ ನಂತರ ಹಿಂದುತ್ವ ಚಳವಳಿಯು ಪ್ರಬಲವಾದಾಗ ಮತೀಯ ಅಲ್ಪಸಂಖ್ಯಾತ ಎಂಬ ಸಂಗತಿಯು ಸಾಮಾಜಿಕ ಆರ್ಥಿಕ ಸಂಗತಿಯಾಗಿ ಹೊಸ ರಾಜಕೀಯದ ನೆಲೆಯಾಗಿ ಪರಿವರ್ತಿತವಾಯಿತು. ಎಂಭತ್ತರ ದಶಕದ ನಂತರ ಮುಸ್ಲಿಮರಲ್ಲಿ ಹಿಂದುಳಿದವರ ಹಾಗೂ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದೆ ಹಾಗಾಗಿ ಅವರ ಕುರಿತು ವಿಶೇಷ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂಬುದು ಒಂದು ರಾಜಕೀಯ ಘೋಷಣೆಯಾಗಿ ರೂಪುಗೊಂಡಿತು. ಇವುಗಳ ಹಿಂದಿರುವ ರಾಜಕೀಯ ಲೆಕ್ಕಾಚಾರಗಳು ನಿಗೂಢವಾಗೇನೂ ಇಲ್ಲ.

  ಇಂದಿನ ಸಾಮಾಜಿಕ ನ್ಯಾಯದ ರಾಜಕೀಯದಲ್ಲಿ ಜಾತಿ ಮತಗಳ ಹೆಸರೇ ನಿರ್ಣಾಯಕವಾಗಿದೆ. ಅನ್ಯಾಯ ನಡೆಯಿತು ಎಂಬುದಕ್ಕಿಂತ ಯಾವ ಜಾತಿಗೆ ಅಥವಾ ಮತಕ್ಕೆ ಸೇರಿದವನಿಗೆ ಅದು ನಡೆಯಿತು ಎಂಬುದನ್ನಾಧರಿಸಿ ಕಣ್ಣೀರನ್ನು ಎಷ್ಟು ಸುರಿಸಬೇಕು ಎಂಬ ಲೆಕ್ಕಾಚಾರಗಳು ಬೆಳೆದಿವೆ. ಅಂದರೆ ಈ ಜಾತಿ ಮತಗಳಿಗೆ ಸೇರಿದ ರಾಜಕಾರಣಿಗಳು ಚಳವಳಿಗಾರರು ಹಾಗೂ ಚಿಂತಕರು ಒಗ್ಗೂಡಿ ಒಂದು ವ್ಯವಸ್ಥಿತವಾದ ರಾಜಕೀಯವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಜಾತಿ ಮತಗಳ ಹೆಸರನ್ನೇ ಮುಂದೊತ್ತಿಕೊಳ್ಳುವ ಅನಿವಾರ್ಯತೆ ಹುಟ್ಟಿಕೊಂಡಿದೆ. ಇಂಥ ಬೇಡಿಕೆಗಳನ್ನಿಟ್ಟು ಬೇರೆ ಬೇರೆ ಜಾತಿ, ಮತಗಳ ಹೆಸರಿನ ಚಳವಳಿಗಳು, ಒತ್ತಡದ ಗುಂಪುಗಳು ಕೂಡ ಹೊಸ ಹೊಸದಾಗಿ ಹುಟ್ಟಿಕೊಳ್ಳುತ್ತಿವೆ. ನೆನ್ನೆಯವರೆಗೆ ತುಳಿತಕ್ಕೊಳಗಾಗದ ಜಾತಿ ಮತಗಳು ಸರ್ಕಾರದ ಪ್ರಕಟಣೆಯಾದ ತಕ್ಷಣ ಆ ಪಟ್ಟಿಗೆ ಸೇರಿಬಿಡುತ್ತವೆ.

  ಇದು ಇಂದಿನ ರಾಜಕೀಯ ಚಿಂತನೆಯಲ್ಲಿ ಒಂದು ವೈರುಧ್ಯವನ್ನು ಹುಟ್ಟುಹಾಕಿದೆ. ಅದೆಂದರೆ ಜಾತಿಭೇದವೇ ಇಂದಿನ ಬಡತನ ಹಾಗೂ ಅನ್ಯಾಯಗಳಿಗೆ ಮೂಲಕಾರಣ, ಹಾಗಾಗಿ ಜಾತಿಗಳು ವಿನಾಶ ಹೊಂದಿದ ಹೊರತೂ ಭಾರತೀಯ ಸಮಾಜದಲ್ಲಿ ಅನ್ಯಾಯವು ತೊಲಗಲಾರದು ಎಂಬುದಾಗಿ ಈ ರಾಜಕೀಯವನ್ನು ಪ್ರತಿಪಾದಿಸುವ ಪ್ರಗತಿಪರ ಚಿಂತಕರು ಹೇಳುತ್ತಾರೆ. ಜಾತಿಯನ್ನು ತೊಲಗಿಸಲು ಅಂತರಜಾತೀಯ ವಿವಾಹ, ಜಾತೀಯ ತರತಮಗಳನ್ನು ಗಟ್ಟಿಮಾಡುವ ಮೂಢ ಆಚರಣೆಗಳ ನಿಷೇಧ ಇತ್ಯಾದಿಗಳು ಪರಿಹಾರ ಎಂಬುದು ಅವರ ನಂಬಿಕೆ. ಅದೇ ರೀತಿಯಲ್ಲಿ ಮತೀಯ ವೈರತ್ವವು ನಾಶವಾಗಿ ಕೋಮು ಸೌಹಾರ್ದವವು ನೆಲೆಗೊಳ್ಳಬೇಕು ಎಂಬುದೂ ಇವರ ಪ್ರತಿಪಾದನೆ. ಒಟ್ಟಿನಲ್ಲಿ ಜಾತಿ ಮತ ಎಂಬ ಪ್ರತ್ಯೇಕತೆಗಳು ನಾಶವಾಗಬೇಕಾದ ಸಂಗತಿ. ಆದರೆ ಮತ್ತೊಂದೆಡೆ ಜಾತಿ ಮತಗಳನ್ನಾಧರಿಸಿದ ಸರ್ಕಾರೀ ನೀತಿಗಳನ್ನು ಕೂಡ ಅವರು ಅಷ್ಟೇ ಬಲವಾಗಿ ಪ್ರತಿಪಾದಿಸುತ್ತಾರೆ. ಅದಕ್ಕೆ ಅವರು ನೀಡುವ ಕಾರಣವೆಂದರೆ ಇಷ್ಟು ದಿನ ಈ ಜಾತಿ ಮತಗಳ ಹೆಸರಿನಲ್ಲಿ  ಅನ್ಯಾಯ ನಡೆದಿವೆ, ಅದನ್ನು ಸರಿಪಡಿಸಬೇಕಾದರೆ ಅನ್ಯಾಯಕ್ಕೊಳಗಾದ ಜಾತಿ ಮತಗಳನ್ನು ಗುರುತಿಸಿ ಅವುಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು.

  ಅಂದರೆ ನಮ್ಮ ರಾಜಕೀಯ ನೀತಿಯ ಪ್ರಕಾರ ನಮ್ಮ ದೇಶದಲ್ಲಿ ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಸಿಗಬೇಕಾದರೆ ಜಾತಿ ಮತಗಳು ತಮ್ಮ ಅಸ್ತಿತ್ವವನ್ನು ಇಟ್ಟುಕೊಳ್ಳಬೇಕು. ಜಾತಿ ಮತಗಳು ಇರುವುದೇ ಅನ್ಯಾಯ ಎನ್ನುವ ಈ ಪ್ರಗತಿಪರ ಚಿಂತನೆಯು ಈ ರಾಜಕೀಯವನ್ನು ಬೆಂಬಲಿಸುತ್ತ ಜಾತಿ ಮತಗಳು ಮುಂದುವರಿಯುವುದನ್ನು ಸಮರ್ಥಿಸುತ್ತದೆ. ಈ ರಾಜಕೀಯ ನೀತಿಯಿಂದಾಗಿ ಭಾರತದಲ್ಲಿ ಜಾತಿ ಹಾಗೂ ಮತಗಳ ಪ್ರತ್ಯೇಕತೆ ಗಟ್ಟಿಯಾಗುತ್ತ ಬಂದಿದೆ, ಅಷ್ಟೇ ಅಲ್ಲ, ಅವುಗಳ ನಡುವೆ ಇಲ್ಲದ ವೈರತ್ವವು ಬೆಳೆಯುತ್ತಿದೆ.

  ಭಾರತೀಯ ಸಮಾಜದಲ್ಲಿ ಕೆಲವು ಜಾತಿಗಳ ಸಂದರ್ಭದಲ್ಲಿ ಜಾತಿಗೂ ಬಡತನಕ್ಕೂ ಒಂದು ಸಂಬಂಧ ಎದ್ದು ಕಾಣುವಂತಿದೆ ಎಂಬುದು ಸ್ಪಷ್ಟ ಹಾಗೂ ಅಂಥ ಜನರಿಗೆಲ್ಲ ಆ ಸಂಕಷ್ಟದಿಂದ ಹೊರಬರಲು ಸಹಕರಿಸಬೇಕು ಎನ್ನುವುದೂ ಖಂಡಿತ. ಒಂದು ಜಾತಿಯಲ್ಲಿ ಎಲ್ಲರೂ ಬಡವರಿದ್ದಾರೆ ಎಂದೇ ಇಟ್ಟುಕೊಳ್ಳೋಣ, ಆದರೆ ಆ ಕಾರಣಕ್ಕೆ ಪರಿಹಾರ ಕಾರ್ಯಕ್ರಮವನ್ನು ಆ ಜಾತಿಗಳಿಗೆ ಮಾತ್ರ ನೀಡುವುದು ಬಡತನದ ಕಲ್ಪನೆಯನ್ನು ಸಂಕುಚಿತಗೊಳಿಸಿದಂತಾಗುತ್ತದೆ ಹಾಗೂ ಬಡತನ ನಿವಾರಣೆಯ ಕಾರ್ಯಕ್ರಮವನ್ನು ದಾರಿತಪ್ಪಿಸಿದಂತಾಗುತ್ತದೆ. ಉದಾಹರಣೆಗೆ ಒಂದು ಜಾತಿಯಲ್ಲಿ ಎಲ್ಲರಿಗೂ ದೃಷ್ಟಿದೋಷ ಇದೆ ಅಂತಿಟ್ಟುಕೊಳ್ಳೋಣ, ದೃಷ್ಟಿದೋಷದ ಸಮಸ್ಯೆಯನ್ನು ಆ ಜಾತಿಗೆ ಸಮೀಕರಿಸಿದಾಗ ಉಳಿದ ಜಾತಿಗಳಲ್ಲಿ ಇರುವ ದೃಷ್ಟಿದೋಷವು ಅಸಹಜವಾಗಿ ಕಾಣತೊಡಗುತ್ತದೆ. ಜಾತಿ ಬೇರೆ ದೃಷ್ಟಿದೋಷ ಬೇರೆ, ಹಾಗೆಯೇ ಬಡತನ ಎಂಬ ಸಂಗತಿಯೇ ಬೇರೆ ಜಾತಿ ಎಂಬ ಸಂಗತಿಯೇ ಬೇರೆ. ಬಡತನವೊಂದೇ ಅಲ್ಲ, ಅನ್ಯಾಯ, ಕಷ್ಟ, ದುಃಖ ಇತ್ಯಾದಿಗಳಿಗೂ ಜಾತಿ ಮತ, ಲಿಂಗ ಇತ್ಯಾದಿ ಹೆಸರನ್ನು ಕೊಡುವುದು ಅಸಂಬದ್ಧವಾಗುತ್ತದೆ. ಅಂಥ ಹೆಸರುಗಳನ್ನು ಕೊಡದಿದ್ದರೇ ಅವನ್ನು ಸಮರ್ಥವಾಗಿ ಗುರುತಿಸುವುದು ಹಾಗೂ ಎದುರಿಸುವುದು ಸಾಧ್ಯ. ಕೊಟ್ಟರೆ ಉಳಿದವರಲ್ಲಿ ಇರುವ ಸಮಸ್ಯೆಯನ್ನು ಅಲ್ಲಗಳೆಯುವ ರಾಜಕೀಯಕ್ಕಷ್ಟೇ ಅದು ಪ್ರಯೋಜನವಾಗಬಹುದು. ಬಹುಶಃ ಇವರಿಗೆಲ್ಲ ಅದರಲ್ಲೇ ಆಸಕ್ತಿ ಇರಬಹುದೇನೋ?

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: