ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 37: ಅಳಿವಿನಂಚಿನಲ್ಲಿ ಸರ್ಕಾರೀ ಶಾಲೆಗಳು

ಪ್ರೊ. ರಾಜಾರಾಮ ಹೆಗಡೆ

 ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಗಮನಿಸಿದ್ದು. ಅವು ಶಾಲಾ ಪ್ರವೇಶದ ದಿನಗಳು. ಹೀಗೊಂದು ಊರಿನಲ್ಲಿ ಸರ್ಕಾರೀ ಪ್ರಾಥಮಿಕ ಶಾಲೆಯ ಕಟ್ಟಡ, ಎದುರಿಗೆ ಕೈತೋಟ, ಆಟದ ಅಂಗಳ, ಗೋಡೆಗಳ ಮೇಲೆ ವರ್ಣ ಚಿತ್ರಗಳು, ನಕಾಶೆಗಳು, ಇತ್ಯಾದಿ. ನಾಲ್ಕಾರು ವಿದ್ಯಾರ್ಥಿಗಳು ಓಡಾಡಿಕೊಂಡಿದ್ದು ಬಿಟ್ಟರೆ ಬಹುತೇಕ ಖಾಲಿ. ಚಲಿಸುತ್ತಿದ್ದ ಬಸ್ಸು ಅದನ್ನು ದಾಟಿತು. ಮುಂದೆ ಒಂದು ಹರುಕು ಮುರುಕು ಕಟ್ಟಡ, ಅದೊಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆ. ಅದರ ಎದುರು ಪ್ರವೇಶಕ್ಕಾಗಿ ನೂಕು ನುಗ್ಗಲು. ಈ ವಿಲಕ್ಷಣ ದೃಶ್ಯವು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

 ಇದರ ಜೊತೆಗೇ ನಮ್ಮ ಸುದ್ದಿ ಮಾಧ್ಯಮಗಳಲ್ಲಿ ಸರ್ಕಾರೀ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುತ್ತಿರುವ ಸುದ್ದಿಗಳನ್ನೂ ಕೇಳತೊಡಗಿದೆ.  ಕಳೆದ ಒಂದು ತಲೆಮಾರಿನಲ್ಲಿ ಪ್ರತೀ ಮನೆಯಲ್ಲೂ ಒಂದು ಅಥವಾ ಎರಡು ಮಕ್ಕಳು.  ಜನಸಂಖ್ಯೆಯ ಇಳಿಕೆಯ ಪರಿಣಾಮವು ಈ ಶಾಲೆಗಳ ಮೇಲೆ ಆಗುತ್ತಿದೆ ಅಂದುಕೊಂಡಿದ್ದೆ. ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಕುರಿತ ಬಿಸಿ ಚರ್ಚೆಗಳಿಗೂ ಇದಕ್ಕೂ ನೇರ ಸಂಬಂಧ ಇದೆಯೆಂಬುದು ನಂತರ ಸ್ಪಷ್ಟವಾಯಿತು. ಇತ್ತೀಚೆಗೆ ಊರಿಗೆ ಹೋದಾಗ ಸುತ್ತು ಮುತ್ತ ಹಳ್ಳಿಗಳಲ್ಲಿ ವಿಚಾರಿಸಿದಾಗ ಗೊತ್ತಾದದ್ದೆಂದರೆ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಇಪ್ಪತ್ತೈದು ವರ್ಷದ ಹಿಂದೆ 200-300ಸಂಖ್ಯೆಗಳಿದ್ದ ಶಾಲೆಗಳಲ್ಲಿ ಈಗ 50-60ಕ್ಕೆ ಇಳಿದಿದೆ. ಕೆಲವು ತರಗತಿಗಳಲ್ಲಿ ಮಕ್ಕಳೇ ಇಲ್ಲ. ಬಹುಶಃ ಈ ಶಾಲೆಗಳಿಗೆಲ್ಲ ಇನ್ನು ಕೆಲವೇ ವರ್ಷ ಆಯುಷ್ಯ ಉಳಿದಿದೆ. ಯಾವ ಸರ್ಕಾರವೂ ಅದನ್ನು ತಡೆಯುವುದು ಕಾಣೆ.

 ಕಳೆದೊಂದೆರಡು ದಶಕಗಳಲ್ಲಿ ನಾನು ಹಳ್ಳಿಗೆ ಹೋದಾಗಲೆಲ್ಲ ಪಟ್ಟಣಗಳ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಕುರಿತು ಮಾತುಕಥೆಯನ್ನು ಕೇಳುತ್ತಿರುತ್ತೇನೆ. ಮನೆ ಬಾಗಿಲಿಗೇ ಸ್ಕೂಲು ವಾಹನಗಳು ಬರುತ್ತವೆ. ಹಳ್ಳಿಗಳಿಂದ ಪಟ್ಟಣಗಳಿಗೆ ಹೋಗುವ ಯಾವುದೇ ಬಸ್ಸುಗಳಿರಲಿ ಅವುಗಳ ಒಳಗೆ ಎಲ್ಕೆಜಿ ಚಿಳ್ಳೆ ಪಿಳ್ಳೆಗಳಿಂದ ಹಿಡಿದು ಒಳದಬ್ಬಿ ತುರುಕಲಾಗುತ್ತದೆ. ಅವು ಕೂಲಿಗಳಂತೆ ಬೆಳಿಗ್ಗೆ ಏಳು ಗಂಟೆಗೇ ಬೆನ್ನ ಮೇಲೆ ಮಹಾಭಾರವನ್ನು ಹೊತ್ತು ಕುಲುಕಾಡುವ ಬಸ್ಸುಗಳಲ್ಲಿ ಬ್ಯಾಲೆನ್ಸ್ ಮಾಡುತ್ತ ಯಾವ ಜನ್ಮದ್ದೋ ಪ್ರಾರಬ್ಧ ಕರ್ಮವನ್ನು ಅನುಭವಿಸುವಂತೆ ಶೂನ್ಯವನ್ನು ದಿಟ್ಟಿಸುತ್ತ  ನಿಂತಿರುವಾಗ ಗುಲಾಮಗಿರಿಯು ಹೊಸ ರೂಪ ತಳೆದು ಬಂದಿದೆಯೋ ಎಂದೂ ಕೆಲವೊಮ್ಮೆ  ಅನಿಸಿದ್ದಿದೆ. ನನ್ನ ತಲೆಮಾರಿನವರೇ ಪುಣ್ಯವಂತರು, ಈ ವಯಸ್ಸಿನಲ್ಲಿ ಶಾಲೆ ಎಂಬುದೊಂದು ಇರುತ್ತದೆ ಎಂಬುದು ಕೂಡ ಗೊತ್ತಿರಲಿಲ್ಲ. ಶಾಲೆಗೆ ಹೋದ ಮೇಲೂ ಕೂಡ ನಾಲ್ಕನೆಯ ಈಯತ್ತೆಯ ವರೆಗೂ ಒಂದು ಸ್ಲೇಟು, ಒಂದೆರಡು ಪುಸ್ತಕ ಇದ್ದವು ಅಷ್ಟೆ. ನಂತರ ಕೂಡ ಕಾಲ್ನಡಿಗೆಯಲ್ಲಿ ಸ್ಕೂಲಿಗೆ ಹೋಗುವುದು ಆಟವೇ ಆಗಿತ್ತು. ನಾನು ಇನ್ನೂ ಅಂಥ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತೇನೆ.

 ಇದು ವಿಲಕ್ಷಣ ಏಕೆಂದರೆ, ಈ ಶಾಲೆಗಳು ನಮ್ಮ ಘನ ಸರ್ಕಾರದ ಸಂಸ್ಥೆಗಳು. ನಮ್ಮ ದೇಶದ ಅನೇಕ ತಲೆಮಾರುಗಳು ಅಂಥ ಶಾಲೆಯಲ್ಲೇ ಕಲಿತು ದೇಶದ, ಜಗತ್ತಿನ ಮೂಲೆ ಮೂಲೆಯಲ್ಲಿ ಸಾರ್ಥಕ ಬದುಕನ್ನು ಕಂಡುಕೊಂಡಿವೆ. ಈ ಶಾಲೆಗಳಲ್ಲಿ ಕಲಿಸುವ ಶಿಕ್ಷಕರು ಆ ವೃತ್ತಿಗಾಗಿಯೇ ಸರ್ಕಾರದಿಂದ ತರಬೇತಿಯನ್ನು ಹೊಂದಿದವರು. ಈ ಶಾಲೆಗಳ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟವನ್ನು ಕಾಪಾಡಲಿಕ್ಕಾಗಿ ಪ್ರಾಥಮಿಕ ಶಿಕ್ಷಣ ಇಲಾಖೆಯೇ ಇದೆ. ಬಿಸಿಯೂಟ, ಕಡಿಮೆ ಶುಲ್ಕ, ಅಥವಾ ಕೆಲವು ಮಕ್ಕಳಿಗೆ ಪುಕ್ಕಟೆ ಶಿಕ್ಷಣ, ಪುಸ್ತಕ, ಸಮವಸ್ತ್ರ ಇತ್ಯಾದಿ ಆಮಿಷಗಳನ್ನು ಕಲ್ಪಿಸಿ ಸರ್ವರಿಗೂ ಶಿಕ್ಷಣವನ್ನು ನೀಡುವ ಹವಣಿಕೆಯಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ.  ಆದರೆ ಖಾಸಗಿ ಶಾಲೆಗಳಲ್ಲಿ (ಕೆಲವು ಪ್ರತಿಷ್ಠಿತ ಶಾಲೆಗಳನ್ನು ಹೊರತುಪಡಿಸಿ) ಕಲಿಸುವ ಶಿಕ್ಷಕರಿಗೆ ತರಬೇತಿಯಾಗಲೀ, ತಪಾಸಣೆಯಾಗಲೀ ಜರೂರಿಲ್ಲ. ನೌಕರಿಯ ಭದ್ರತೆ ಇಲ್ಲದಿರುವ ಶಾಲೆಗಳಲ್ಲಿ ಅರ್ಹ ಶಿಕ್ಷಕರೂ ಇಲ್ಲ. ಕಟ್ಟಡಗಳೂ ಸುಸ್ಥಿತಿಯಲ್ಲಿ ಇರುವುದಿಲ್ಲ. ಅಂದಾದುಂದಿ ಶುಲ್ಕವನ್ನು ಸುಲಿಯುವುದನ್ನು ಬಿಟ್ಟರೆ ವಿದ್ಯಾರ್ಥಿಗಳಿಗೆ ಯಾವುದೇ ರಿಯಾಯತಿಗಳೂ ಇಲ್ಲ. ಆದರೆ ಜನರು ಮಾತ್ರ ಸರ್ಕಾರಕ್ಕೆ ನಿಮ್ಮ ಯಾವ ವ್ಯವಸ್ಥೆಯೂ ಬೇಡ, ಸವಲತ್ತೂ ಬೇಡ, ಎಷ್ಟೇ ಕಷ್ಟವಾದರೂ ಸರಿ ನಮ್ಮ ಮಕ್ಕಳನ್ನು ಖಾಸಗಿ ಸ್ಕೂಲುಗಳಿಗೇ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ.

 ನಾನು ಇದುವರೆಗೆ ಹೇಳಿದ್ದು ಎಲ್ಲರಿಗೂ ಅನುಭವಕ್ಕೆ ಬಂದ ಸಂಗತಿ. ಇದು ವಾಸ್ತವ. ಈ ವಾಸ್ತವದ ಕುರಿತು  ಸೂಕ್ತ ಕಾಲದಲ್ಲಿ ಅಧ್ಯಯನವನ್ನು ನಡೆಸಿ ಸೂಕ್ತ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದರೆ ಬಹುಶಃ ಈ ಶಾಲೆಗಳು ಉಳಿದುಕೊಳ್ಳುತ್ತಿದ್ದವೇನೋ ಅನ್ನಿಸುತ್ತದೆ.  ಅಂದರೆ 90ರ ದಶಕದ ನಂತರದ ಜಾಗತೀಕರಣದಲ್ಲಿ ವ್ಯಾವಹಾರಿಕ ಇಂಗ್ಲೀಷಿಗೆ ಹೆಚ್ಚಿದ ಬೇಡಿಕೆಯನ್ನು ನಮ್ಮ ಸರ್ಕಾರೀ ಶಾಲೆಗಳು ಪೂರೈಸಿದ್ದರೆ ಪರಿಸ್ಥಿತಿ ಬೇರೆ ಇರಬಹುದಿತ್ತು. ಬದಲಾಗಿ ಇಂಗ್ಲೀಷು ಕಲಿಸುವುದೊಂದು ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿ ಚರ್ಚಿತವಾಯಿತು. ಅದು ನಡೆದದ್ದು ಹೀಗೆ:  ಮೊದಲು ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷನ್ನು ಒಂದನೆಯ ತರಗತಿಯಿಂದ ಅಳವಡಿಸುವ ಕುರಿತು ಚಿಂತನೆ ನಡೆಸಿತು. ಆಗ ಬೆಂಗಳೂರಿನಲ್ಲಿರುವ ಮುಂಚೂಣಿಯ ಬುದ್ಧಿಜೀವಿಗಳು ಧರಣಿ ಸತ್ಯಾಗ್ರಹವನ್ನು ನಡೆಸಿ ಆ ಪ್ರಸ್ತಾಪವನ್ನು ವಿರೋಧಿಸಿದರು. ಸರ್ಕಾರವು ತನ್ನ ಪ್ರಸ್ತಾಪವನ್ನು ಕೈಬಿಟ್ಟಿತು. ಅದಾದ ಕೆಲವೇ ವರ್ಷಗಳಲ್ಲಿ ನೂರಾರು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಮುಚ್ಚುವ ಪರಿಸ್ಥಿತಿ ಬಂದಿತು. ಆಗ ಮತ್ತೆ ಇದೇ ಬುದ್ಧಿಜೀವಿಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಬಾರದೆಂದು ಧರಣಿ ಕುಳಿತರು. ಬೆಂಗಳೂರಿನಲ್ಲಿ ಕುಳಿತ ಚಿಂತಕರ ಹೇಳಿಕೆಯ ಪ್ರಕಾರವೇ ಈ ಜಗತ್ತೆಲ್ಲ ನಡೆಯುವಂತಿದ್ದರೆ ಬಹುಶಃ ಅವರ ಅಭಿಪ್ರಾಯದಿಂದ ಸರ್ಕಾರಕ್ಕೆ ಪ್ರಯೋಜನವಿತ್ತೇನೋ? ಆದರೆ ಜಗತ್ತು ಅವರ ಹೇಳಿಕೆಗೆ ಉಲ್ಟಾ ಹೊಡೆಯುತ್ತಿರುವುದರಿಂದ ಸರ್ಕಾರಕ್ಕೆ ಈ ಸಲಹೆಗಳು ದುಬಾರಿಯಾಗುತ್ತಿವೆ. ಇತ್ತೀಚೆಗೆ ಪ್ರಾಥಮಿಕ ಶಿಕ್ಷಣ ಸಚಿವರು ಸರ್ಕಾರೀ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ತೆರೆಯುವ ಕುರಿತು ನೀಡಿದ ಹೇಳಿಕೆಯನ್ನೂ ನೋಡಿದೆ. ಅದೇ ಪತ್ರಿಕೆಯಲ್ಲೇ ಸಾವಿರಾರು ಶಾಲೆಗಳನ್ನು ಮುಚ್ಚುವ ಕುರಿತ ಪ್ರಸ್ತಾಪ ಕೂಡ ಅಚ್ಚಾದದ್ದು ಒಂದು ವ್ಯಂಗ್ಯ.

 ಇಂಗ್ಲೀಷ್ ಭಾಷೆಯ ಕಲಿಕೆಯು ಕನ್ನಡಕ್ಕೆ ಮುಳುವಾಗುತ್ತದೆ ಎಂಬ ವಾದದಲ್ಲಿ ಯಾವುದೇ ಹುರುಳಿದ್ದಂತೆ ನನಗನಿಸುವುದಿಲ್ಲ. ಅದಕ್ಕೆ ವಿರುದ್ಧವಾಗಿ ಇಂಗ್ಲೀಷಿನಿಂದ ಕನ್ನಡವು ಸಮೃದ್ಧವಾಗಿದೆ ಎಂಬುದು ನಿದರ್ಶಿತ ಸತ್ಯ. ನಮ್ಮಂಥ ಬಹುಭಾಷಾ ಪ್ರದೇಶವೊಂದರಲ್ಲಿ ಎರಡೂ ಭಾಷೆಯನ್ನೂ ನಮ್ಮ ಮಕ್ಕಳಿಗೆ ಕಲಿಸುವುದು ಅಸಾಧ್ಯ ಎಂಬುದಾಗಲೀ, ಒಂದು ಭಾಷೆಯನ್ನು ಕಲಿತರೆ ಮತ್ತೊಂದು ನಾಶವಾಗುತ್ತದೆ ಎಂಬುದಾಗಲೀ ಅವೈಜ್ಞಾನಿಕ ಹೇಳಿಕೆಗಳು. ಅದಕ್ಕಿಂತಲೂ ಇಂಗ್ಲೀಷು ಶಿಕ್ಷಣ ಮಾಧ್ಯಮವಾದರೆ ಮಾತ್ರ ಅದರ ಕಲಿಕೆ ನಡೆಯಲು ಸಾಧ್ಯ ಎಂಬುದು ಮತ್ತೂ ಹಾಸ್ಯಾಸ್ಪದ. ಇಂದು ಮಕ್ಕಳಿಗೆ ಇಂಗ್ಲೀಷ್ ಹಾಗೂ ಕನ್ನಡ ಯಾವುದನ್ನೂ ಕಲಿಸಲಾಗದಷ್ಟು ಶಿಕ್ಷಣ ವ್ಯವಸ್ಥೆಯು ಹಾಳುಬಿದ್ದಿದೆ ಎಂಬುದನ್ನು ಮೊದಲು ಒಪ್ಪಿಕೊಳ್ಳೋಣ. ಇಂಗ್ಲೀಷ್ ಮಾಧ್ಯಮದ ಬೋರ್ಡಾ ಹಾಕಿಕೊಂಡ ಖಾಸಗಿ ಶಾಲೆಗಳಲ್ಲೂ ಇಂಗ್ಲೀಷನ್ನು ಕಲಿಸುವುದು ಅಷ್ಟರಲ್ಲೇ ಇದೆ. ಆದರೂ ಜನರಿಗೆ ಕಡೇ ಪಕ್ಷ ಅವು ಆ ಭರವಸೆಯನ್ನಾದರೂ ನೀಡುತ್ತವೆ. ವಾಸ್ತವವೆಂದರೆ, ಇಂದಿನ ಸರ್ಕಾರೀ ಹಾಗೂ ಖಾಸಗೀ ಶಾಲೆಗಳೆರಡರಲ್ಲೂ ಭಾಷೆಯ ಕಲಿಕೆಯು ನಿಂತುಹೋಗಿರುವಂತೆ ಕಾಣುತ್ತದೆ. ಕನ್ನಡಕ್ಕೇನಾದರೂ ಅಪಾಯವಿದ್ದರೆ ಅದು ಇಲ್ಲಿದೆ.

 ನನ್ನ ಅಭಿಪ್ರಾಯದ ಪ್ರಕಾರ ಇಂದಿನ ಮಕ್ಕಳ ದುರಂತವು ಭಾಷೆಯದಲ್ಲ, ಶಿಕ್ಷಣದ ಗುಣಮಟ್ಟದ್ದು. ಅದಕ್ಕಿಂತಲೂ ದೊಡ್ಡ ದುರಂತವೆಂದರೆ ಗುಣಮಟ್ಟದ ಹೆಚ್ಚಳವೆಂದರೆ ಸ್ಕೂಲು ಬ್ಯಾಗಿನ  ಗಾತ್ರ ಹಾಗೂ ಭಾರವನ್ನು ಹೆಚ್ಚಿಸುವುದು ಎಂದು ಶಿಕ್ಷಣ ತಜ್ಞರು ತಿಳಿದಿದ್ದಾರಲ್ಲಾ ಅದು. ಅಥವಾ ಶಿಕ್ಷಣ ತಜ್ಞರು ಹಾಗೆ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲ, ಅದು.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: