ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 39: ವೈಜ್ಞಾನಿಕ ಮನೋಭಾವನೆಯ ಹೆಸರಿನಲ್ಲಿ…

ಪ್ರೊ. ರಾಜಾರಾಮ ಹೆಗಡೆ

 ಇಂದು ವೈಜ್ಞಾನಿಕ ಮನೋಭಾವನೆ ಎಂಬುದನ್ನು ಎಲ್ಲೆಲ್ಲೂ ಕೇಳುತ್ತಿರುತ್ತೇವೆ. ಹಾಗೆಂದರೇನು ಎಂಬುದಕ್ಕೆ ಒಂದು ನಿರ್ಧಿಷ್ಟ ಅರ್ಥವನ್ನೂ ಪ್ರಚುರಪಡಿಸಲಾಗಿದೆ. ವೈಜ್ಞಾನಿಕ ಮನೋಭಾವನೆಗೂ ನಮ್ಮ ಹಿಂದೂ ಸಂಪ್ರದಾಯಗಳಿಗೂ ಎಣ್ಣೆ ಸೀಗೆ ಸಂಬಂಧ ಎಂಬುದಾಗಿ ನಂಬಲಾಗಿದೆ. ಹಿಂದೂ ಸಂಪ್ರದಾಯಗಳಲ್ಲಿ ಮೌಢ್ಯ ಎಂಬುದಿರುತ್ತದೆ, ಅದನ್ನು ತೊಡೆಯಲು ಈ ವೈಜ್ಞಾನಿಕ ಮನೋಭಾವನೆ ಬೇಕು. ಯಾವ ರೀತಿಯಲ್ಲಿ ಟಿವಿ ಜಾಹಿರಾತುಗಳಲ್ಲಿ ಯಾವುದೋ ಕಂಪೆನಿಯ ಡಿಟರ್ಜೆಂಟ್ ಅಥವಾ ಟೂತ್ ಪೇಸ್ಟುಗಳನ್ನು ಉಪಯೋಗಿಸಿದ ತಕ್ಷಣ ಕೀಟಾಣುಗಳು ಕಾಲುಕೀಳುತ್ತವೆಯೋ ಹಾಗೇ ವೈಜ್ಞಾನಿಕ ಮನೋಭಾವನೆ ಪಸರಿಸಿದಂತೆಲ್ಲ ಮೌಢ್ಯವು ಕಾಲುಕೀಳುತ್ತದೆ ಎನ್ನಲಾಗುತ್ತದೆ. ಅದೆಲ್ಲ ಸರಿ. ಈ ವೈಜ್ಞಾನಿಕ ಮನೋಭಾವ ಎಂದರೇನು? ಅದನ್ನು ಮೌಢ್ಯದ ಮೇಲೆ ಪ್ರಯೋಗಿಸುವುದುಹೇಗೆ?

  ಇದರ ಪ್ರಯೋಗವನ್ನೂ ಒಂದು ನಿರ್ಧಿಷ್ಟ ರೀತಿಯಲ್ಲಿ ಚಾಲ್ತಿಯಲ್ಲಿ ತರಲಾಗಿದೆ. ದೇವರ ಹಾಗೂ ಅತಿಮಾನುಷ ಶಕ್ತಿಗಳ ಅಸ್ತಿತ್ವವನ್ನು ಅಲ್ಲಗಳೆಯುವುದು, ಪವಾಡಗಳ ಕಣ್ಕಟ್ಟುಗಳನ್ನು ಬಯಲುಮಾಡುವುದು, ನಮ್ಮ ಗ್ರಂಥಗಳನ್ನು ಖಂಡಿಸುವುದು, ಅಥವಾ ಸುಡುವುದು, ಮೂಢನಂಬಿಕೆಗಳ ವಿರುದ್ಧ ಕಾನೂನುಗಳನ್ನು ತರುವುದು, ಸಂಪ್ರದಾಯಗಳ ಪರವಾಗಿ ಮಾತನಾಡುವವರನ್ನು ಹತ್ತಿಕ್ಕುವುದು, ಸಾಂಪ್ರದಾಯಿಕ ಆಚರಣೆಗಳನ್ನು ತೊಡೆಯುವುದು, ಇತ್ಯಾದಿ.  ಈ ಥರದ ಕೆಲಸಗಳಿಂದ ನಮ್ಮ ಸಮಾಜವು ಉದ್ಧಾರವಾಗುತ್ತದೆ, ನಮ್ಮ ಕಷ್ಟಗಳೆಲ್ಲ ದೂರಾಗುತ್ತವೆ, ಎಂಬುದು ವೈಜ್ಞಾನಿಕ ಮನೋಭಾವನೆಯನ್ನು ಪ್ರತಿಪಾದಿಸುವವರ ಸಾಮಾನ್ಯ ಜ್ಞಾನ.  ಆದರೆ ತನ್ನ ಕಷ್ಟಗಳ ಪರಿಹಾರಕ್ಕಾಗಿ ಇಲ್ಲವೆ ಉದ್ಧಾರಕ್ಕಾಗಿಯೇ ದೇವರನ್ನು, ಆಚರಣೆಗಳನ್ನು ನಂಬಿಕೊಂಡಿದ್ದವನಿಗೆ ಅವನ್ನು ತಿರಸ್ಕರಿಸಿದ ಹೊರತೂ ತಾನು ಉದ್ಧಾರವಾಗುವುದಿಲ್ಲ ಎಂಬ ಮಾತು ಹೇಗೆ ತಾನೆ ಅರ್ಥವಾದೀತು? ಅಂದರೆ, ವೈಜ್ಞಾನಿಕ ಮನೋಭಾವನೆ ಎಂದು ಪ್ರಭುತ್ವದ ಮೂಲಕ ಏನೇನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೋ ಅವು ಸಂಪ್ರದಾಯಸ್ಥರ ಮನಮುಟ್ಟುವಲ್ಲಿ ಸೋಲುತ್ತವೆ. ಹಾಗಾಗಿ ಬಲಪ್ರಯೋಗ ಅಥವಾ ಸಂಘರ್ಷವೊಂದೇ ಮಾರ್ಗ.

ಇದಕ್ಕಿಂತ ದೊಡ್ಡ ದುರಂತವೆಂದರೆ, ಕಳೆದ ಹಲವಾರು ದಶಕಗಳಿಂದಲೂ ಪ್ರಭುತ್ವ ಪ್ರಣೀತ ವೈಜ್ಞಾನಿಕ ಚಿಂತನೆಗಳಿಂದ ಭಾರತೀಯರ ಸಾಂಪ್ರದಾಯಿಕತೆ ಒಂದು ಗುಲಗುಂಜಿಯಷ್ಟಾದರೂ ದೂರವಾಗಬೇಡವೆ? ಬದಲಾಗಿ ಅದು ಹೆಚ್ಚೇ ಆದಂತೆ ಕಾಣಿಸುತ್ತದೆ. ವೈಜ್ಞಾನಿಕ ಚಿಂತನೆಯ ಅಗತ್ಯ ದಿನಗಳೆದಂತೆ ಕಡಿಮೆಯಾಗುವುದರ ಬದಲು ಜಾಸ್ತಿಯಾಗುತ್ತಿದೆ. ಏಕೆಂದರೆ ಜ್ಯೋತಿಷ್ಯ, ವಾಸ್ತು, ಯಜ್ಞ ಯಾಗಾದಿಗಳು, ದೇವಸ್ಥಾನಗಳು, ಮಾಟ ಮಂತ್ರಗಳು ಕಳೆದ 25 ವರ್ಷಗಳಿಂದೀಚೆಗೆ, ಅದರಲ್ಲೂ ಜಾಗತೀಕರಣದ ನಂತರ, ಹೊಸ ಚೈತನ್ಯದಿಂದ ವಿಜೃಂಭಿಸುತ್ತಿವೆ. ಅದಕ್ಕಿಂತಲೂ ನಮ್ಮ ವಿಜ್ಞಾನಿಗಳೇ ವೈಜ್ಞಾನಿಕ ಪ್ರಯೋಗಗಳಲ್ಲಿ ಪೂಜೆ, ಶಕುನ, ರಾಹುಕಾಲ ಇತ್ಯಾದಿಗಳನ್ನು ಪಾಲಿಸುತ್ತಾರೆ.  ಈ ಪರಿಸ್ಥಿತಿಯು ವೈಜ್ಞಾನಿಕ ಚಿಂತನೆಯ ವೈಫಲ್ಯವನ್ನಲ್ಲದೇ ಮತ್ತೇನನ್ನು ತೋರಿಸಬಹುದು? ವೈಜ್ಞಾನಿಕ ಚಿಂತನೆಯ ಪ್ರತಿಪಾದಕರಿಗೆ ಭಾರತೀಯರು ತಮ್ಮ ಸಂಪ್ರದಾಯಗಳ ಹಿಡಿತದಲ್ಲಿ ಸಿಕ್ಕು ಯೋಚನಾ ಶಕ್ತಿಯನ್ನೇ ಕಳೆದುಕೊಂಡಂತೆ ಕಾಣಿಸುತ್ತಾರೆ. ಪುರೋಹಿತಶಾಹಿಗಳು, ಮೂಲಭೂತವಾದಿಗಳು ಇತ್ಯಾದಿ ಸಂಪ್ರದಾಯವಾದೀ ಶಕ್ತಿಗಳು ಒಳಗಿಂದೊಳಗೇ ಕೆಲಸಮಾಡುತ್ತಿವೆ, ಅವುಗಳನ್ನು ನಾಶಮಾಡಬೇಕು ಎನ್ನುತ್ತಾರೆ.

 ಈ ಪರಿಸ್ಥಿತಿಯು ಒಂದು ಪ್ರಶ್ನೆಯನ್ನು ಹುಟ್ಟಿಸುತ್ತದೆ. ಹಾಗಾದರೆ ನಮ್ಮ ಜನರಿಗೆ ವೈಜ್ಞಾನಿಕ ಚಿಂತನೆಗಳು ಬೇಡವೆ? ತಮಗೆ ಒಳ್ಳೆಯದಾಗುವುದು ಬೇಡವೆ? ಅದರಲ್ಲೂ ಸ್ವತಃ ವಿಜ್ಞಾನಿಗಳಿಗೇ ಏಕೆ ತಿಳಿಯುತ್ತಿಲ್ಲ? ಈ ಕೊನೆಯ ಪ್ರಶ್ನೆಯು ಇಡೀ ವೈಜ್ಞಾನಿಕ ಚಿಂತನೆಯ ಪ್ರತಿಪಾದನೆಯ ಕುರಿತೇ ಸಂದೇಹವನ್ನು ಹುಟ್ಟುಹಾಕುತ್ತದೆ. ವಿಜ್ಞಾನಿಗಳಿಗೇ ಗೊತ್ತಿರದ ಹಾಗೂ ಬೇಡವಾದ ವೈಜ್ಞಾನಿಕ ಚಿಂತನೆ ಏನಿರಬಹುದು? ಒಂದೋ ನಾವು ಅಂದುಕೊಂಡಿದ್ದು ವೈಜ್ಞಾನಿಕ ಚಿಂತನೆಯೇ ಅಲ್ಲ, ಇಲ್ಲ ಇಂಥ ವಿಜ್ಞಾನಿಗಳು ವಿಜ್ಞಾನಿಗಳೇ ಅಲ್ಲ. ಆದರೆ ಒಂದೆಡೆ ವೈಜ್ಞಾನಿಕ ಚಿಂತನೆಯ ಪ್ರತಿಪಾದಕರನ್ನೂ ಮತ್ತೊಂದೆಡೆ ವಿಜ್ಞಾನಿಗಳನ್ನೂ ನಿಲ್ಲಿಸಿ ಇವರಿಬ್ಬರಲ್ಲಿ ಯಾರು ವಿಜ್ಞಾನಿಗಳು ಎಂದು ಕೇಳಿದರೆ ಇಡೀ ಜಗತ್ತೇ ವಿಜ್ಞಾನಿಗಳನ್ನೇ ತೋರಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ, ಅತೀ ಕಡಿಮೆ ವೆಚ್ಚದಲ್ಲಿ ಮಂಗಳನಿಗೆ ಉಪಗ್ರಹವನ್ನು ಕಳಿಸಿದ್ದು ಸುಳ್ಳೆ? ಅವರು ಪೂಜೆ ಮಾಡುತ್ತಾರೆ, ರಾಹುಕಾಲ ನೋಡುತ್ತಾರೆ ಹಾಗಾಗಿ ಮೂಢರೆಂದು ವರ್ಣಿಸುತ್ತೀರಾ? ಇದೇ ಪ್ರಶ್ನೆಯನ್ನು ಪ್ರತಿಯೊಬ್ಬ ಸಂಪ್ರದಾಯಸ್ಥನ ಪರವಾಗಿಯೂ ಕೇಳಬಹುದು. ಅವರು ತಮ್ಮ ದೈನಂದಿನ ಜೀವನದಲ್ಲಿ ವೈಜ್ಞಾನಿಕ ಚಿಂತನೆಯನ್ನು ಪ್ರತಿಪಾದಿಸುವವರಿಗಿಂತಲೂ ಬುದ್ಧಿವಂತರಾಗಿ, ವಿವೇಕಶಾಲಿಗಳಾಗಿ, ಮಾನವೀಯವಾಗಿ ಕಾಣಿಸುವ ಸಾಧ್ಯತೆ ಇಲ್ಲವೆ?

  ಇನ್ನು ಪವಾಡಗಳನ್ನು ಬಯಲು ಮಾಡುವ ಕೆಲಸ ಕೂಡ ತನ್ನ ಪ್ರಸ್ತುತತೆಯನ್ನು ಮನದಟ್ಟು ಮಾಡಲು ಸೋತಿದೆ. ಇವೆಲ್ಲ ಕಣ್ಕಟ್ಟುಗಳು ಎಂದು ಬಿಂಬಿಸುವ ಕಾರ್ಯಕ್ರಮಗಳೇ ದೊಡ್ಡ ಪವಾಡದಂತೆ ಜನರಿಗೆ ಕಾಣಿಸುತ್ತವೆ. ಅವು ಕಣ್ಕಟ್ಟು ಎಂಬುದನ್ನು ಮಾತ್ರ ನಿದರ್ಶಿಸಿ ಏನು ಸಾಧಿಸುತ್ತಾರೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಇಂಥ ಕೈಚಳಕಗಳಿಗಿಂತ ಪವಾಡಗಳನ್ನು ನಂಬಿದ ಸಾಂಪ್ರದಾಯಿಕ ಸಂಸ್ಥೆಗಳು ಮಾಡುವ ಜನೋಪಯೋಗಿ ಕಾರ್ಯಕ್ರಮಗಳು ಜನರಿಗೆ ಮುಖ್ಯವಾಗಿ ಕಾಣುತ್ತವೆ. ಅದರಲ್ಲೂ ಇಂದು ಹಲವು ಕ್ಷೇತ್ರಗಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಆಧರಿಸಿದ ನಮ್ಮ ಪ್ರಭುತ್ವದ ಸಂಸ್ಥೆಗಳ ಕಾರ್ಯಕ್ಷಮತೆಗಿಂತ ನಮ್ಮ ಸಾಂಪ್ರದಾಯಿಕ ಸಂಸ್ಥೆಗಳದೇ ಲೇಸು ಎನ್ನುವಂತೆ ಆಗಿದೆ.  ಅಂದರೆ ವೈಜ್ಞಾನಿಕ ಚಿಂತನೆಯು ನಮಗೆ ಏಕೆ ಬೇಕು ಎಂಬುದನ್ನು ನಿದರ್ಶಿಸಲು ಇವರೆಲ್ಲ ಸೋತಿದ್ದಾರೆ.

   ವೈಜ್ಞಾನಿಕ ಚಿಂತನೆ ಎಂಬುದಾಗಿ ಯಾವುದನ್ನು ಪ್ರತಿಪಾದಿಸಲಾಗುತ್ತಿದೆಯೋ ಅದರಲ್ಲಿ ವೈಜ್ಞಾನಿಕತೆ ಏನಿದೆ? ಅದಕ್ಕೂ ವಿಜ್ಞಾನಿಗಳಿಗೂ ಹೇಗೆ ಸಂಬಂಧ ಕಾಣುತ್ತಿಲ್ಲವೊ, ಅಂತೆಯೇ, ಅದಕ್ಕೂ ಜೀವನದ ಗುಣಮಟ್ಟ, ಕಾರ್ಯಕ್ಷಮತೆ ಹಾಗೂ ಅಭಿವೃದ್ಧಿಗಳಿಗೂ ಕೂಡ ಕಾರಣ ಸಂಬಂಧ ಇದ್ದಂತೆ ಕಾಣುವುದಿಲ್ಲ. ಸಂಪ್ರದಾಯಗಳ ಮೇಲಿನ ಶ್ರದ್ಧೆಯನ್ನು ಕಳೆಯುವ ಕೆಲಸವೇ ವೈಜ್ಞಾನಿಕ ಮನೋಭಾವನೆ ಎಂಬುದೇ ತೀರಾ ಅವೈಜ್ಞಾನಿಕವಾದುದು.  ನಮ್ಮ ಆಧುನಿಕ ವಿಜ್ಞಾನವು ತಾನು ಬೆಳೆದ ಪಶ್ಚಿಮದಲ್ಲಿ ಕೂಡ ರಿಲಿಜನ್ನನ್ನು ಅಲ್ಲಗಳೆಯಲಿಕ್ಕಾಗಿ ಹುಟ್ಟಿದ್ದಲ್ಲ. ಗಾಡ್ನ ಯೋಜನೆಯ ರೂಪುರೇಷೆಗಳನ್ನು ಮನುಷ್ಯ ಬುದ್ಧಿಗೆ ಎಟುಕಿಸಿಕೊಳ್ಳುವ ಉದ್ದೇಶದಿಂದ ಪಶ್ಚಿಮದಲ್ಲಿ ವಿಜ್ಞಾನವು ಬೆಳೆಯಿತು. ನ್ಯೂಟನ್, ಐನ್ಸ್ಟೈನ್ ಮುಂತಾದ ವಿಜ್ಞಾನಿಗಳು ಗಾಡ್ನ ಅಸ್ತಿತ್ವವನ್ನು ಒಪ್ಪಿಕೊಂಡೇ ತಮ್ಮ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿದರು. ಕೆಲವು ವೈಜ್ಞಾನಿಕ ಸಂಶೋಧನೆಗಳು ಬೈಬಲ್ಲನ್ನು ಅಲ್ಲಗಳೆದಿದ್ದವೇನೋ ನಿಜ.  ಆದರೆ ಬೈಬಲ್ಲನ್ನು ಅಲ್ಲಗಳೆಯಲಿಕ್ಕಾಗಿಯೇ ವಿಜ್ಞಾನ ಹುಟ್ಟಿದ್ದಲ್ಲ. ವಿಜ್ಞಾನದ ಅಂತಿಮ ಉದ್ದೇಶ ಸತ್ಯಶೋಧನೆ. ನಿಸರ್ಗದ ಕುರಿತ ವಿಜ್ಞಾನವು ನಿರ್ಗದ ಸತ್ಯಗಳನ್ನು ಶೋಧಿಸಿದರೆ ಸಮಾಜದ ಕುರಿತ ವಿಜ್ಞಾನವು ಸಮಾಜದ ಸತ್ಯಗಳನ್ನು ಶೋಧಿಸುತ್ತದೆ. ನಮ್ಮ ತಿಳಿವಳಿಕೆಯನ್ನು ವಿಸ್ತರಿಸುತ್ತದೆ.

 ಆದರೆ ವೈಜ್ಞಾನಿಕ ಮನೋಭಾವನೆಯನ್ನು ಪ್ರತಿಪಾದಿಸಿ ಚಳವಳಿ ಮಾಡುವವರು ಭಾರತೀಯ ಸಮಾಜವನ್ನು ವೈಜ್ಞಾನಿಕವಾಗಿ ತಿಳಿದುಕೊಂಡಿದ್ದಾರೆಯೆ? ಉದಾಹರಣೆಗೆ, ಇಲ್ಲಿನ ಸಂಪ್ರದಾಯಗಳ ಸ್ವರೂಪವೇನು? ಇಲ್ಲಿನ ಜನರ ಬದುಕಿನ ಕ್ರಮವೇನು? ಈ ಸಮಾಜವೇಕೆ ಹೀಗಿದೆ? ಇತ್ಯಾದಿ ಪ್ರಶ್ನೆಗಳಿಗೆ ಪಾಶ್ಚಾತ್ಯರು ನೀಡಿದ ವಿವರಣೆಯನ್ನು ಬಿಟ್ಟು ಇವರದೇ ಸ್ವಂತ ವಿವರಣೆಗಳು ಇವರಿಗೆ ಇವೆಯೆ? ಪಾಶ್ಚಾತ್ಯರಿಗೆ ಸಾಮಾಜಿಕ ಏಳ್ಗೆಯ ಕುರಿತು ತಮ್ಮದೇ ಮಾನದಂಡಗಳಿದ್ದವು.  ಪ್ರೊಟೆಸ್ಟಾಂಟರು ಹಾಗೂ ಜ್ಞಾನೋದಯ ಯುಗದ ವಿಚಾರವಾದಿಗಳು ಈ ಮಾನದಂಡವನ್ನು ರೂಪಿಸಿದವರು. ಭಾರತೀಯ ಸಾಂಪ್ರದಾಯಿಕ ಆಚರಣೆಗಳ ಹಿಂದೆ ಅವರಿಗೆ ಕಾರಣಗಳಾಗಲೀ, ವಿವರಣೆಗಳಾಗಲೀ ಕಾಣಿಸದಿದ್ದರಿಂದ ಹಾಗೂ ಅದು ಪಾಶ್ಚಾತ್ಯ ಸಮಾಜದಂತೆ ಇಲ್ಲದ್ದರಿಂದ ಅದು ಅವೈಚಾರಿಕ ಹಾಗೂ ಆ ಕಾರಣಕ್ಕೆ ಅವೈಜ್ಞಾನಿಕವಾಗಿ ಕಾಣಿಸಿತು. ಭಾರತೀಯರ ಇಂಥ ಸಾಂಪ್ರದಾಯಿಕ ರಚನೆಗಳನ್ನು ನಾಶ ಮಾಡದೇ ಈ ಸಮಾಜವು ಏಳ್ಗೆಯನ್ನು ಹೊಂದಲಾರದು ಎಂದು ಅವರು ಭಾವಿಸಿದ್ದರು. ಅದೇ ಕಾರ್ಯಕ್ರಮವು ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ಮನೋಭಾವನೆಯ ಹೆಸರಿನಲ್ಲಿ ಮುಂದುವರಿಯುತ್ತಿದೆ ಅಷ್ಟೆ. ಆದರೆ ಇಂದು ವಿದ್ವಾಂಸರು ಕಂಡುಕೊಳ್ಳುತ್ತಿರುವುದೆಂದರೆ ನಮ್ಮ ಸಮಾಜದ ಕುರಿತು ಪಾಶ್ಚಾತ್ಯರ ಗ್ರಹಿಕೆಗಳೇ ಅವೈಜ್ಞಾನಿಕ. ಹಾಗಿರುವಾಗ ಅಂಥ ಗ್ರಹಿಕೆಗಳನ್ನೇ ಮುಂದುವರೆಸಿದವರು ವೈಜ್ಞಾನಿಕ ಚಿಂತನೆಯುಳ್ಳವರಾಗಿಬಿಡುತ್ತಾರೆಯೆ? ಅಂದರೆ ಭಾರತೀಯ ಸಮಾಜದ ಕುರಿತ ದಿವ್ಯ ಅಜ್ಞಾನವೇ ವೈಜ್ಞಾನಿಕ ಮನೋಭಾವನೆ ಎನ್ನುವಂತಾಗಿಬಿಟ್ಟಿದೆ.

Advertisements
Categories: Uncategorized
  1. Murari
    ಜನವರಿ 2, 2016 ರಲ್ಲಿ 9:11 ಫೂರ್ವಾಹ್ನ

    Excellent piece Sir. So called intellectuals in favour of scientific temperment must first introspect themselves scientifically.

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: