ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 40: ಅತಿಥಿ ದೇವೋ ಭವ

ಪ್ರೊ. ರಾಜಾರಾಮ ಹೆಗಡೆ

 ಭಾರತೀಯರು, ಅದರಲ್ಲೂ ಹಳ್ಳಿ ಸಂಸ್ಕೃತಿಯ ಹಿನ್ನೆಲೆಯವರ ಮನೆಗಳಲ್ಲಿ ನೆಂಟರ ಇಷ್ಟರು ಸದಾ ತುಂಬಿಕೊಂಡಿರುತ್ತಾರೆ.  ವರ್ಷದಲ್ಲಿ  ಹಲವಾರು ಸಂದರ್ಭಗಳಲ್ಲಿ ನೆಂಟರನ್ನು ಆಹ್ವಾನಿಸುತ್ತಾರೆ. ನೆಂಟರೂ ಕೂಡ ಅಷ್ಟೇ. ಆಹ್ವಾನವನ್ನು ಮನ್ನಿಸಿ ಶ್ರದ್ಧೆಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೋ ಎಂಬಂತೆ ಹೋಗಿ ಬರುತ್ತಾರೆ. ಇದು ನಂಟರಿಗೆ ಸೀಮಿತವಾಗಿದ್ದರೆ, ಮದುವೆ, ಮುಂಜಿಗಳಂಥ ಕಾರ್ಯಗಳಲ್ಲಿ ಇಷ್ಟರೆಲ್ಲರಿಗೂ ಆಹ್ವಾನ ಹೋಗುತ್ತದೆ. ಇಂದಂತೂ ಅದು ಜಾತಿ ಮತಗಳನ್ನು ಮೀರಿದ ಒಡನಾಡಿಗಳ ಸಮೂಹ. ಸಾವಿರಾರು ಜನ ಸೇರುತ್ತಾರೆ. ಇಲ್ಲೆಲ್ಲ ಊಟ ಮಾಡುವುದು ಮುಖ್ಯ. ಹಾಗಾಗಿ ಊಟದ ಹೊತ್ತಿಗೆ ಜನದಟ್ಟಣೆ. ಯಾರಾದರೂ ನೆಂಟರು ಇಷ್ಟರಿಗೆ ಮರೆತು ಆಹ್ವಾನ ನೀಡದಿದ್ದರೆ ಅವರು ಸಿಟ್ಟು ಮಾಡುವುದೂ, ಇವರು ಮುಜುಗುರ ಪಟ್ಟುಕೊಳ್ಳುವುದೂ ಸಾಮಾನ್ಯ. ಅಂದರೆ ಈ ಪ್ರಕಾರದವರೆಲ್ಲರನ್ನೂ ನಮ್ಮ ಸಂಪ್ರದಾಯದಲ್ಲಿ ಅಭ್ಯಾಗತರು ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಆಹ್ವಾನಿತರಾಗಿ ಬರುವವರು. ಅವರು ಆಹ್ವಾನವಿಲ್ಲದೇ ಬರುವುದು ಅನುಚಿತ ಹಾಗೂ ಅಸಂಬದ್ಧ.

 ಹಾಗಂತ ಭಾರತೀಯರು ಆಹ್ವಾನದ ಬಗ್ಗೆ ಬಹಳ ಕಟ್ಟುನಿಟ್ಟಾಗಿದ್ದಾರೆ ಅಂತೇನಲ್ಲ. ಇಂಥವರ ಮನೆಗಳಲ್ಲಿ ಯಾವುದೇ ಆಹ್ವಾನವಿಲ್ಲದೇ, ಪೂರ್ವ ಸೂಚನೆಯಿಲ್ಲದೇ ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬರುವವರೂ ಖಾಯಂ ಇರುತ್ತಾರೆ. ಅವರೇ ಅತಿಥಿಗಳು. ಅವರಿಗೆ ಬರಲಿಕ್ಕೆ ತಿಥಿ, ಆಹ್ವಾನ ಇತ್ಯಾದಿಗಳೂ ಬೇಡ.  ಭಾರತೀಯ ಕುಟುಂಬಗಳಲ್ಲಿ ಇವರನ್ನೂ ಕೂಡ ಗೌರವಿಸಿ ಉಪಚರಿಸಲಾಗುತ್ತದೆ. ಅಷ್ಟೇ ಅಲ್ಲ ಇಂಥ ಉಪಚಾರಕ್ಕೆ ಆತಿಥ್ಯ ಎಂಬುದಾಗಿಯೇ ಕರೆಯಲಾಗುತ್ತದೆ. ಇದು ಭಾರತೀಯ ಸಮಾಜದ ಒಂದು ವಿಶಿಷ್ಟತೆ ಹಾಗೂ ಭಾರತೀಯರು ಇದನ್ನು ಸತ್ಸಂಪ್ರದಾಯ ಎಂಬುದಾಗಿ ತಿಳಿಯುತ್ತಾರೆ. ಪೂರ್ವಸೂಚನೆ ಇಲ್ಲದೇ ಇನ್ನೊಬ್ಬರ ಮನೆಗೆ ಹೋಗುವುದು ಪಾಶ್ಚಾತ್ಯರಲ್ಲಿ  ಅಸಭ್ಯ ನಡತೆ. ಪಾಶ್ಚಾತ್ಯರಿಂದ ಪ್ರಭಾವಿತರಾದ ಭಾರತೀಯ ವಿದ್ಯಾವಂತರೂ ಕೂಡ ಹಾಗೇ ಭಾವಿಸುತ್ತಾರೆ. ಅದರಲ್ಲೂ ನಗರಗಳಲ್ಲಿ ಇಂದಿನ ಜೀವನಕ್ರಮದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಅತಿಥಿಗಳನ್ನು ಉತ್ತೇಜಿಸುವುದು ಅಸಾಧ್ಯವಾಗುತ್ತಿದೆ. ಏಕೆಂದರೆ ಹೊತ್ತಲ್ಲದ ಹೊತ್ತಿನಲ್ಲಿ ಬಂದವರನ್ನು ಉಪಚರಿಸಬೇಕಾದರೆ ಅತಿಥಿ ಹಾಗೂ ಗ್ರಹಸ್ಥರಿಬ್ಬರ ಜೀವನ ಕ್ರಮವೂ ಅದಕ್ಕೆ ಹೊಂದಿಕೊಳ್ಳುವಂತಿರಬೇಕು.

 ನಗರಜೀವನದ ಹಿನ್ನೆಲೆಯ ಅನೇಕ ವಿದ್ಯಾವಂತರಿಗಂತೂ ಈ ರಿವಾಜಿನ ಕಲ್ಪನೆಯೂ ಇರಲಿಕ್ಕಿಲ್ಲ. ಈ ಅಜ್ಞಾನಕ್ಕೆ ಇಂಬು ಕೊಡಲಿಕ್ಕೆಂದೇ ಅತಿಥಿ ಎಂಬ ಶಬ್ದವನ್ನು ನಾವು ಗೆಸ್ಟ್ ಎಂಬುದಾಗಿ ಭಾಷಾಂತರಿಸಿದ್ದೇವೆ. ‘ನಮ್ಮ ಮನೆಗೆ ಯಾರೋ ಗೆಸ್ಟ್ಗಳು ಬಂದು (ವಕ್ಕರಿಸಿ) ಬಿಟ್ಟಿದ್ದಾರೆ’ ಎನ್ನುತ್ತೇವೆ. ಆದರೆ ನಿಜವಾಗಿಯೂ ಅಲ್ಲಿ ಬಂದವರು ಅತಿಥಿಗಳಾಗಿರುತ್ತಾರೆ. ಗೊತ್ತಿಲ್ಲದೇ ಬರುವವರು ಗೆಸ್ಟ್ ಆಗಲು ಸಾಧ್ಯವಿಲ್ಲ. ಅದೇ ರೀತಿ, ನಮ್ಮಲ್ಲಿ ದುಡ್ಡುಕೊಟ್ಟು ಉಳಿಯುವ ಗೆಸ್ಟ್ ಹೌಸ್ಗಳು ಅತಿಥಿಗೃಹಗಳಾಗಿವೆ. ದುಡ್ಡುಕೊಟ್ಟು ಪಡೆದ ಹಾಸ್ಪಿಟಾಲಿಟಿಯನ್ನು ಆತಿಥಿ ಸತ್ಕಾರವನ್ನಾಗಿ ಮಾಡಿದ್ದೇವೆ. ರೊಕ್ಕ ಇಸಿದುಕೊಂಡು ಮಾಡುವ ಸತ್ಕಾರ  ಆತಿಥ್ಯ ಹೇಗಾಗುತ್ತದೆ? ಇಂಥ ಭಾಷಾ ಪ್ರಯೋಗಗಳಿಂದ ಅತಿಥಿ ಎಂಬ ಶಬ್ದದ ನಿಜ ಅರ್ಥ ಮರವೆಗೆ ಸರಿದಿದೆ.  ಇಂಥ ಸಂಸ್ಕೃತಿಗೆ ಸೇರಿದ ಯುವಜನರಿಗೆ ಮನೆಗೆ ಬಂದ ಪುಕ್ಕಟೆ ಅತಿಥಿಗಳನ್ನು ಮಾತನಾಡಿಸುವುದಲ್ಲೂ ಆಸಕ್ತಿಯಿಲ್ಲ.

  ಅತಿಥಿಸತ್ಕಾರವನ್ನು ನಡೆಸಿಕೊಂಡು ಹೋಗುವುದು ನಮ್ಮ ಸಾಂಪ್ರದಾಯಿಕ ಕುಟುಂಬಗಳ ಒಂದು ಕ್ರಮ. ಎಷ್ಟೇ ಹೊತ್ತಿನಲ್ಲಿ ಯಾರೇ ಬರಲಿ ಮನೆಯವರು ಗೊಣಗಾಡದೇ ಅವರಿಗೆ ಊಟೋಪಚಾರಗಳನ್ನು ನಡೆಸುತ್ತಾರೆ. ಬಹುತೇಕವಾಗಿ ಅವರು ನೆಂಟರಿಷ್ಟರಾದರೆ ಮನೆಮಂದಿಯೆಲ್ಲ ಖುಷಿಯಲ್ಲಿ ತೇಲುತ್ತಾರೆ. ಕೆಲವೊಮ್ಮೆ ಹೆಂಗಸರಿಗೆ ಇದು ಶಿಕ್ಷೆಯೇ ಆಗುತ್ತದೆ. ಆದರೆ ಅದನ್ನು ವ್ಯಕ್ತವಾಗಿ ತೋರಿಸದೇ ಉಪಚರಿಸುತ್ತಾರೆ. ನನ್ನ ಬಾಲ್ಯದ ನೆನಪನ್ನೇ ಆಧರಿಸುವುದಾದರೆ, ಮನೆಗೆ ಬಂದವರನ್ನು ಮಕ್ಕಳಾದಿಯಾಗಿ ಎಲ್ಲರೂ ಮಾತನಾಡಿಸಿ ಉಪಚಾರ ಮಾಡಬೇಕು ಎಂಬುದು ನಮ್ಮ ಕಡೆಯ ಹವ್ಯಕರ ರಿವಾಜು. ಕೆಲವೊಮ್ಮೆ ಯಾರೋ ಪರಿಚಯವೇ ಇಲ್ಲದ ಹಾದಿ ಹೋಕರು ದಾರಿ ತಪ್ಪಿಯೋ, ರಾತ್ರಿ ಕಳೆಯಲೋ ಮನೆಗೆ ಬಂದು ಬಿಡುತ್ತಿದ್ದರು. ಮಲಗಿದ್ದ ಅಮ್ಮ ಎದ್ದು ಅವರಿಗೆಲ್ಲ ಊಟ ತಯಾರಿಸಿ ಬಡಿಸಿ ಮಲಗುತ್ತಿದ್ದರು. ನಮ್ಮ ಮನೆಯಲ್ಲಿ ಅವರೊಬ್ಬರೇ ಹೆಂಗಸು, ಅವರಿಗೆ ನಾವು ಏಳು ಜನ ಮಕ್ಕಳು, ಜೊತೆಗೆ ಆಳು ಕಾಳು ಅಂತ ಅವರಿಗೆಲ್ಲ ಊಟ, ಆಸರಿ ಮಾಡಿ ಬಡಿಸುವ ಕೆಲಸವಿತ್ತು, ಇದನ್ನೆಲ್ಲ ಮಾಡಿಕೊಳ್ಳುತ್ತ ಅವಳು  ಎಲ್ಲಾ ಕಾಲದಲ್ಲೂ ಸಂತೋಷವಾಗಿ ಈ ಕೆಲಸವನ್ನು ಮಾಡಬೇಕೆಂಬುದು ಅತಿಯಾದ ನಿರೀಕ್ಷೆಯಾಗುತ್ತದೆ. ಇದನ್ನು ಸ್ತ್ರೀ ಶೋಷಣೆ ಎಂದು ಇಂದಿನ ಮಹಿಳೆಯರು ಕರೆಯಬಹುದು. ಅದೇನೇ ಇರಬಹುದು, ಆಕೆ ಈ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದಳು.

 ಅತಿಥಿ ಸತ್ಕಾರವು ಸಂಸಾರಸ್ಥರ ಕರ್ತವ್ಯವಾಗಿರುವುದರಿಂದ ಇಷ್ಟಾನಿಷ್ಟಗಳು ಅಲ್ಲಿ ಮುಖ್ಯವಲ್ಲ. ಏಕೆಂದರೆ ನಾವೂ ಅನ್ಯರ ಅತಿಥಿಗಳಾಗಿ ಹೋಗುತ್ತಿದ್ದೆವು, ದಾರಿ ತಪ್ಪಿ ರಾತ್ರಿವೇಳೆ ಯಾರದೋ ಪರಿಚಯವಿಲ್ಲದವರ ಮನೆಗೆ ಹೋಗಿ ಉಳಿದದ್ದೂ ಇದೆ. ಇಲ್ಲಿ ಜಾತಿ ಮತ ಅಂತೆಲ್ಲ ಸಂದಿಗ್ಧಗಳು ಇರುವುದಿಲ್ಲ. ಏಕೆಂದರೆ ಆ ಕಟ್ಟಳೆಗಳನ್ನು ಅನುಸರಿಸಿಯೇ ಆತಿಥ್ಯವನ್ನು ನೀಡಲಾಗುತ್ತದೆ. ಕುವೆಂಪು ಅವರ ನೆನಪಿನ ದೋಣಿಯಲ್ಲಿ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಕುವೆಂಪು ಅವರ ಮೇಟ್ರಿಕ್ ಪರೀಕ್ಷೆಯ ನಂತರ ಅವರು ತಮ್ಮ ಸಂಬಂಧಿಗಳು ಹಾಗೂ ಮಿತ್ರರೊಂದಿಗೆ ಶಿವಮೊಗ್ಗೆಯಿಂದ ಕುಪ್ಪಳಿಗೆ ವಾಪಸು ಹೋಗಬೇಕಿತ್ತು. ಕಾಡಿನ ದಾರಿಯಲ್ಲಿ ಮಧ್ಯಾಹ್ನದ ಹೊತ್ತು ಯಾವುದೇ ಪೂರ್ವ ಸೂಚನೆ ಇಲ್ಲದೇ ಒಬ್ಬರು ಭಟ್ಟರ ಮನೆಗೆ ಮಧ್ಯಾಹ್ನ ಹೋಗುತ್ತಾರೆ. ಇವರು ಹದಿನೈದಿಪ್ಪತ್ತು ಜನರಿದ್ದರು. ಭಟ್ಟರು ಸಂತೋಷ ಪಟ್ಟು ಇವರಿಗೆಂದೇ ವಿಶೇಷ ಭೋಜನವನ್ನು ಮಾಡಿಸಿ ಉಪಚರಿಸುತ್ತಾರೆ. ಆದರೆ ಬ್ರಾಹ್ಮಣರು ಒಕ್ಕಲಿಗರ ನಡುವಿನ ಕೆಲವು ಜಾತಿ ಕಟ್ಟಳೆಗಳನ್ನು ಪಾಲಿಸುತ್ತಲೇ ಈ ಸತ್ಕಾರ ನಡೆಯಿತು ಎಂಬುದಾಗಿ ಕುವೆಂಪು ದಾಖಲಿಸುತ್ತಾರೆ. ಜಾತಿ ಕಟ್ಟಳೆಗಳನ್ನಿಟ್ಟುಕೊಂಡೂ ಆ ಮನೆಯವರು ಗ್ರಹಸ್ಥ ಧರ್ಮವನ್ನು ಪಾಲಿಸುವ ಕರ್ತವ್ಯವನ್ನು ಮರೆಯಲಿಲ್ಲ.

  ಭಾರತೀಯ ಸಂಸ್ಕೃತಿಯಲ್ಲಿ ಹೀಗೆ ಅತಿಥಿ ಸತ್ಕಾರವನ್ನು ಗ್ರಹಸ್ಥ ಧರ್ಮ ಎಂಬುದಾಗಿ ಎತ್ತಿ ಹಿಡಿಯಲಾಗಿದೆ. ಅತಿಥಿ ದೇವೋ ಭವ ಎಂಬ ಹೇಳಿಕೆಯು ಜನಜನಿತವಾಗಿದೆ. ಮಹಾಭಾರತದ ಆಶ್ವಮೇಧಿಕ ಪರ್ವದ 92ನೆಯ ಅಧ್ಯಾಯದಲ್ಲಿ ‘ಬಂದಂಥ ಅತಿಥಿಯನ್ನು ಅವನ ಕುಲ ಮೂಲಗಳನ್ನು ಕೇಳಿ ಎಂದೂ ಅವಮಾನಿಸಬಾರದು. ಪರಲೋಕದಲ್ಲಿ ಹಿತವನ್ನು ಬಯಸುವವರು ತಮ್ಮ ಮನೆಗೆ ಬಂದವನು ಚಾಂಡಾಲನಿರಲಿ, ಶ್ವಪಾಕನಿರಲಿ, ಅತಿಥಿಯಾಗಿ ಬಂದವನನ್ನು ಅನ್ನವನ್ನು ನೀಡಿ ಸತ್ಕರಿಸಬೇಕು’ ಎಂಬ ಹೇಳಿಕೆಯಿದೆ.

  ಅತಿಥಿ ಎಂಬ ಶಬ್ದವು ಭಾರತೀಯರ ಒಂದು ವಿಶಿಷ್ಟ ಜೀವನಕ್ರಮವನ್ನು ಸೂಚಿಸುತ್ತದೆ. ಯಾರಿಗಾದರೂ ಅನಿರೀಕ್ಷಿತವಾಗಿ ಅಪರಿಚಿತರ ಆತಿಥ್ಯವನ್ನು ಅವಲಂಬಿಸುವ ಪ್ರಸಂಗ ಒದಗಬಹುದು. ಸಂಚಾರ ಸಾಧನಗಳು ಇಂದಿನ ಹಾಗೆ ಇಲ್ಲದಿದ್ದ ಕಾಲದಲ್ಲಿ ದೂರ ಪ್ರಯಾಣದಲ್ಲಿರುವವರು ಇಂಥ ಆತಿಥ್ಯವನ್ನು ನಂಬಿಕೊಂಡೇ ವ್ಯವಹಾರ ಸಾಗಿಸಬೇಕಿತ್ತು. ಇಂದೂ ಕೂಡ ಭಾರತೀಯ ಹಳ್ಳಿಗರಲ್ಲಿ ಈ ಧೋರಣೆ ಹಾಗೇ ಉಳಿದಿದೆ. ಇದು ನಮ್ಮ ಸಾಂಪ್ರದಾಯಿಕ ಸಮಾಜದ ಎಲ್ಲ ಜಾತಿಗಳು ಪಾಲಿಸಿಕೊಂಡು ಬಂದ ಧರ್ಮವಾಗಿದೆ. ಇದು ಅನಿರೀಕ್ಷಿತ ಸನ್ನಿವೇಶಗಳಲ್ಲಿ ಪರಸ್ಪರಾವಲಂಬನೆಯನ್ನು ಸಾಧ್ಯ ಮಾಡುತ್ತದೆ. ಬ್ರಿಟಿಷರು ಭಾರತೀಯ ಸಮಾಜದ ಅಧ್ಯಯನವನ್ನು ಮಾಡುವಾಗ ಅವರಿಗೆ ಇಲ್ಲಿನ ಜನರನ್ನು ಪರಸ್ಪರ ಪ್ರತ್ಯೇಕಿಸುವ ಜಾತಿ ಕಟ್ಟಳೆಗಳು ಕಾಣಿಸಿದವು. ಆ ಅಂಶವನ್ನಿಟ್ಟುಕೊಂಡು ಅವರು ಜಾತಿ ವ್ಯವಸ್ಥೆಯು ಈ ಸಮಾಜವನ್ನು ಒಡೆದಿದೆ ಎಂದರು. ಆದರೆ ಜಾತಿಗಳ ಆಚೆಗೆ ಸಮುದಾಯಗಳನ್ನು ಬೆಸೆಯುವ ಹಾಗೂ ಪರಸ್ಪರಾವಲಂಬನೆಯನ್ನು ಸಾಧ್ಯಮಾಡುವ ಇಂಥ ಆಚರಣೆಗಳು ಅವರಿಗೆ ಕಾಣಿಸಲಿಲ್ಲ. ಏಕೆಂದರೆ ಐರೋಪ್ಯರಿಗೆ ವರ್ಣ ವರ್ಗಗಳನ್ನು ನೋಡಿ ಆಹ್ವಾನಿಸಿ ಸತ್ಕರಿಸುವುದು ಮಾತ್ರ ಗೊತ್ತಿತ್ತು. ಬಹುಶಃ ಇಂಥ ಆಚರಣೆಗಳು ಅವರಿಗೆ ಅನಾಗರಿಕತೆಯ ಲಕ್ಷಣವಾಗಿ ಕೂಡ ಕಾಣಿಸಿರಬಹುದು. ಇಂದು ಆತಿಥ್ಯ ಎಂಬ ಪರಿಕಲ್ಪನೆಯನ್ನೇ ಮರೆಯತೊಡಗಿರುವ ನಾವೂ ಕೂಡ ಹಾಗೇ ಯೋಚಿಸಿದರೆ ಆಶ್ಚರ್ಯವಿಲ್ಲ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: