ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 41ಹಸಿವಾದೊಡೆ ಭಿಕ್ಷಾನ್ನಗಳುಂಟು…

ಪ್ರೊ. ರಾಜಾರಾಮ ಹೆಗಡೆ

  ಮಹಾಭಾರತದ ಅಂತ್ಯದಲ್ಲಿ ಪಾಂಡವರು ರಾಜ್ಯವನ್ನು ಗೆದ್ದು ಅಶ್ವಮೇಧಯಾಗವನ್ನು ಮಾಡುತ್ತಾರೆ. ಇಂಥ ನಭೂತೋ ನಭವಿಷ್ಯತಿ ಎಂಬಂಥ ಯಾಗವನ್ನು ಮಾಡಿ ಅಪರಿಮಿತ ಪುಣ್ಯವನ್ನು ಸಂಪಾದಿಸಿದೆವು ಎಂದು ಅವರು ಬೀಗುತ್ತಿರುವಾಗ ಅಲ್ಲಿಗೆ ಒಂದು ಅರ್ಧ ಮೈ ಬಂಗಾರವಾಗಿರುವ ಮುಂಗುಸಿಯೊಂದು ಬರುತ್ತದೆ. ಈ ಕೌತುಕ ಏನೆಂದು ವಿಚಾರಿಸಿದರು.  ಭಿಕ್ಷೆ ಎತ್ತಿ ಜೀವಿಸುತ್ತಿದ್ದ ಬ್ರಾಹ್ಮಣನ ಕುಟುಂಬವೊಂದು ತಮ್ಮಪಾಲಿನ ಎಲ್ಲ ಹಿಟ್ಟನ್ನು ಹಸಿದು ಬಂದವನೊಬ್ಬನಿಗೆ ದಾನ ಮಾಡಿದ್ದನ್ನು ನೋಡಿದ್ದರಿಂದ ಅದರ ಮೈ ಅರ್ಧ ಬಂಗಾರವಾಗಿತ್ತು. ಪಾಂಡವರ ಅಶ್ವಮೇಧಯಾಗದಂಥ ಪುಣ್ಯ ಪ್ರಸಂಗಕ್ಕೆ ಸಾಕ್ಷಿಯಾದರೆ ತನ್ನ ಮತ್ತರ್ಧ ಮೈ ಕೂಡ ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಭಾವಿಸಿ ಅದು ಅಲ್ಲಿಗೆ ಬಂದಿತ್ತು. ಆದರೆ ಅದನ್ನು ವೀಕ್ಷಿಸಿಯೂ ಉಳಿದರ್ಧ ಮೈ ಬಂಗಾರವಾಗಲೇ ಇಲ್ಲ. ಅಂದರೆ ಹಸಿದವನಿಗೆ ಅನ್ನದಾನವು ಅಶ್ವಮೇಧಯಾಗಕ್ಕಿಂತಲೂ ಮಿಗಿಲು ಎಂಬುದಾಗಿ ಕಥೆ ಸೂಚಿಸುತ್ತದೆ.

  ಇದು ಕೇವಲ ಕಥೆಯಲ್ಲ. ಇದು ಒಂದು ಸಂಸ್ಕೃತಿಯು ಯಾವುದನ್ನು ಮುಖ್ಯ ಎಂಬುದಾಗಿ ಗಣಿಸುತ್ತದೆ ಎಂಬುದಕ್ಕೆ ಸಂಬಂಧಿಸಿದೆ. ಇಂಥ ಸಂಸ್ಕೃತಿಯಲ್ಲಿ ರೂಪುಗೊಂಡ ಭಾರತೀಯ ಸಾಂಪ್ರದಾಯಿಕ ಕೃಷಿ ಕುಟುಂಬವೊಂದು ಆಲದಮರವಿದ್ದ ಹಾಗೆ. ತನ್ನ ಸುತ್ತಲಿನ ಅನೇಕ ಕೃಷಿಯೇತರ ಸಮುದಾಯಗಳನ್ನು  ಅದು ಸಲಹುತ್ತಿರುತ್ತದೆ. ವರ್ಷವಿಡೀ ಮನೆಗೆ ಅನೇಕ ರೀತಿಯ ಜನರು ಅತಿಥಿಗಳಾಗಿ, ಭಿಕ್ಷಾರ್ಥಿಗಳಾಗಿ ಬರುತ್ತಿರುತ್ತಾರೆ. ನಾನು ಚಿಕ್ಕವನಿದ್ದಾಗ ನಮ್ಮ ಮನೆಗೆ ಭಿಕ್ಷೆಬೇಡುವವರು, ಹಾವುಗೊಲ್ಲರು, ಜೋಗೇರು, ಮೈಲಾರಲಿಂಗ, ಸುಡುಗಾಡು ಸಿದ್ಧರು, ವೇಷಧಾರಿಗಳು, ಮುಂತಾದ ಮುಂಬಾಗಿಲಿನ ಅಂಗಳದ ಅತಿಥಿಗಳು ಸದಾ ಇರುತ್ತಿದ್ದರು. ಇದು ಭಿಕ್ಷಾಟನೆಯನ್ನಾಧರಿಸಿಯೇ ತಮ್ಮ ಬದುಕು ಸಾಗಿಸುತ್ತಿದ್ದ ಸಮುದಾಯ. ಇಂಥವರಿಗೆ ಅಕ್ಕಿ, ಅಡಕೆ, ಹಳೆಯ ಬಟ್ಟೆ ಇತ್ಯಾದಿಗಳನ್ನು ನೀಡಿ ಕಳುಹಿಸಲಾಗುತ್ತಿತ್ತು. ಕೆಲವೊಮ್ಮೆ ಅವರು ಬಹಳ ಕಾಡಿದರೆ ಬಯ್ದು ಓಡಿಸುವುದೂ ಇತ್ತು.  

  ಜಗುಲಿಯ ಅತಿಥಿಗಳಾಗಿ ಬರುತ್ತಿದ್ದ ವಂತಿಗೆ ವಸೂಲುಮಾಡುವವರು, ಸಂಭಾವನೆ ಭಟ್ಟರು, ಊರಿಗೆ ಬಂದ ಯಕ್ಷಗಾನ, ನಾಟಕ ಇತ್ಯಾದಿ ಕಲಾವಿದರು, ಊರಿಗೆ ಹೊಸದಾಗಿ ಬಂದ ಸರ್ಕಾರಿ ನೌಕರರು, ಹೀಗೆ ಉದ್ದ ಪಟ್ಟಿಯೇ ಇದೆ. ಜಗುಲಿಯ ಅತಿಥಿಗಳಿಗೆ ಕನಿಷ್ಠ ಒಂದು ಚಹ/ಕಷಾಯ ಅಥವಾ ಉಪಹಾರಗಳ ಉಪಚಾರ ಇರಲೇಬೇಕು. ಕೆಲವರು ಊಟಕ್ಕೆ ಕೂಡ ಇರುತ್ತಿದ್ದರು. ಕೆಲವರು ಒಂದೆರಡು ದಿನ ತಮ್ಮ ಕಾರ್ಯ ಮುಗಿಯುವವರೆಗೆ ಇರುತ್ತಿದ್ದರು. ನಮ್ಮ ಹಳ್ಳಿಯ ಶಾಲೆ ಹೊಸದಾಗಿ ಪ್ರಾರಂಭವಾದಾಗ ಅಲ್ಲಿಯ ಶಿಕ್ಷಕರ ಕುಟುಂಬವೇ ಕೆಲವು ವರ್ಷಗಳ ವರೆಗೆ ನಮ್ಮ ಮನೆಯಲ್ಲಿ ಇತ್ತು. ನಮ್ಮ ಹಳ್ಳಿಯಲ್ಲಿ ಸಕರ್ಾರವು ಪ್ರವೇಶಿಸಿದಾಗ ಅದರ ನೌಕರರೂ ನಮ್ಮ ನಮ್ಮ ಕುಟುಂಬದ ಖಾಯಂ ಅತಿಥಿಗಳಾದರು. ಜೊತೆಗೆ ಶಾಲೆಗೆ ದೂರವಿದ್ದ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಓದಿಸುವುದು ಕೂಡ ಇತ್ತು.  ಇದು ನಮ್ಮ ಊರಿನ ಉಳಿದ ಕುಟುಂಬಗಳ, ಹಾಗೂ ಭಾರತೀಯ ಸ್ಥಿತಿವಂತ ಕೃಷಿಕುಟುಂಬಗಳ ಕಥೆಯೇ ಆಗಿದೆ.

  ಬಹುಶಃ ಭಾರತೀಯ ಕುಟುಂಬವೊಂದು ಪೋಷಿಸಿಕೊಂಡು ಬಂದ ಈ ಮೇಲಿನ ಎಲ್ಲ ಪ್ರಕಾರದ ಚಟುವಟಿಕೆಗಳೂ ಈ ಸಂಸ್ಕೃತಿಯು ಅನ್ನದಾನಕ್ಕೆ ನೀಡಿದ ಮಹತ್ವದ ಬೇರೆ ಬೇರೆ ಮುಖಗಳಾಗಿವೆ. ಇಂಥವರಲ್ಲದೇ  ಭಾರತೀಯ ಇತಿಹಾಸದ ತುಂಬೆಲ್ಲ ಭಿಕ್ಷಾಟನೆಯನ್ನೇ ನೆಚ್ಚಿಕೊಂಡ ಅನೇಕ ಅಧ್ಯಾತ್ಮ ಸಂಪ್ರದಾಯಗಳೂ ಇದ್ದವು. ಅವುಗಳನ್ನು ಪೋಷಿಸಿದ್ದೇ ಭಾರತೀಯ ಕುಟುಂಬಗಳು.  ಬಹುಶಃ ಒಂದು ದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವೈವಿಧ್ಯಪೂರ್ಣ ಸಮುದಾಯಗಳನ್ನು ಅಲ್ಲಿನ ಗ್ರಹಸ್ಥರೇ ಪೋಷಿಸಿಕೊಂಡು ಬಂದ ಮತ್ತೊಂದು ಉದಾಹರಣೆ ಪ್ರಪಂಚದಲ್ಲಿ ಇರಲಿಕ್ಕಿಲ್ಲ.

 ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನವೆಂಬುದು ಸಮುದಾಯ ಜೀವನದ ತಳಪಾಯವಾಗಿದೆ. ಹಾಗೂ ಅದೊಂದು ಪುಣ್ಯ ಕಾರ್ಯ ಎಂದು ಕೂಡ ಭಾರತೀಯರು ಭಾವಿಸುತ್ತಾರೆ. ವರ್ಷದಲ್ಲಿ ಒಂದೆರಡು ಬಾರಿ ವಿಶೇಷ ಸಮಾರಂಭವನ್ನು ಏರ್ಪಡಿಸಿ ತಮ್ಮ ನೆಂಟರಿಗೆಲ್ಲ ಭೋಜನವನ್ನು ಹಾಕುವುದು ಸಾಂಪ್ರದಾಯಿಕ ಕುಟುಂಬಗಳಿಗೆ ಕಡ್ಡಾಯ. ಜೊತೆಗೇ ಅದು ಯಾವುದೇ ವಿಶೇಷ ಕಾರ್ಯಕ್ರಮವಿರಲಿ, ಮದುವೆ, ಮುಂಜಿ, ಚೌಳ, ಇತ್ಯಾದಿಗಳಲ್ಲಿ ಆಹ್ವಾನಿತರಿಗೆ ಊಟಮಾಡಿಸುವುದು ಮುಖ್ಯ. ಬ್ರಾಹ್ಮಣರಂತೂ ಈ ಸಲುವಾಗಿ ಪಾಕಕಲೆಯನ್ನು  ಉತ್ಕೃಷ್ಟ ಹಂತಕ್ಕೇರಿಸಿ ಭೋಜನಪ್ರಿಯರೆಂಬ ಖ್ಯಾತಿಗಳಿಸಿದ್ದಾರೆ. ಕೌಟುಂಬಿಕ ಹಂತದಿಂದ ಹೊರಬಂದು ಸಾರ್ವಜನಿಕ ಜೀವನವನ್ನು ರೂಪಿಸಿಕೊಳ್ಳುವಾಗಲೂ ಕೂಡ ಅನ್ನದಾನದ ಕಲ್ಪನೆಯು ಪ್ರಧಾನವಾಗುತ್ತದೆ. ನಮ್ಮ ಹಳ್ಳಿಗಳ ದೇವಾಲಯಗಳಲ್ಲಿ ವರ್ಷವಿಡೀ ಯಾವ್ಯಾವುದೋ ಪೂಜೆಗಳು, ಹಬ್ಬಗಳು, ಜಾತ್ರೆ ಹಾಗೂ ಉತ್ಸವಗಳ ನೆಪದಲ್ಲಿ ಊರಿಗೆಲ್ಲ ಪ್ರಸಾದ ಹಾಗೂ ಊಟದ ವಿತರಣೆ ನಡೆಯುತ್ತದೆ. ಅಷ್ಟೊಂದೇ ಅಲ್ಲ ನಾವು ನಮ್ಮ ಸರ್ಕಾರಿ ಕಛೇರಿಗಳನ್ನು ಹಾಗೂ ಸಂಸ್ಥೆಗಳನ್ನು ಕೂಡ ಇದಕ್ಕೆ ಒಗ್ಗಿಸಿಕೊಂಡಿದ್ದೇವೆ. ನಮ್ಮ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವರ್ಷಪೂರ್ತಿ ನಡೆಯುವ ಸೆಮಿನಾರು, ಉಪನ್ಯಾಸ, ಸಮ್ಮೇಳನಗಳು ಇತ್ಯಾದಿಗಳಲ್ಲೂ ಕೂಡ ಬಂದವರಿಗೆಲ್ಲ ಊಟ ಇಲ್ಲವೆನ್ನುವಂತಿಲ್ಲ. ಅಂಥ ಕಾರ್ಯಕ್ರಮಗಳ ಯಶಸ್ಸು ಕೊನೆಗೂ ಊಟದ ವ್ಯವಸ್ಥೆಯನ್ನೇ ಅವಲಂಬಿಸಿದೆ ಎಂಬುದು ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಿದರ್ಶಿತವಾಗಿದೆ.

  ಇತಿಹಾಸ ಕಾಲದಲ್ಲಿ ರಾಜರು ಹಾಗೂ ಶ್ರೀಮಂತರು ಅನ್ನ ಸತ್ರಗಳನ್ನು ನಡೆಸಲು ದಾನಗಳನ್ನುನೀಡುತ್ತಿದ್ದರು. ಭಾರತದ ತುಂಬೆಲ್ಲ ಇರುವ ಹಿಂದಿನ ಕಾಲದ ಶಾಸನಗಳು ಇಂಥ ಅಸಂಖ್ಯ ದಾನಗಳನ್ನು ದಾಖಲಿಸುತ್ತವೆ. ಹಳ್ಳಿಗಳ ಕಂದಾಯದಲ್ಲಿ ಅಥವಾ ಕೃಷಿಭೂಮಿಯಲ್ಲಿ ಒಂದು ಭಾಗವನ್ನು ಅನ್ನ ಸತ್ರಗಳಿಗೆ ದಾನವಾಗಿ ನೀಡಲಾಗುತ್ತಿತ್ತು.  ಇಂಥ ಅನ್ನ ಸತ್ರಗಳು ದೇವಾಲಯ ಅಥವಾ ಮಠಗಳ ಒಂದು ಭಾಗವಾಗಿದ್ದು ಅಂಥ ಸ್ಥಳಗಳಲ್ಲಿ ಶಿಕ್ಷಣಕೇಂದ್ರಗಳೂ ಇರುತ್ತಿದ್ದವು. ದಾರಿಹೋಕರು, ಅನಾಥರು, ಭಿಕ್ಷುಕರು, ವಿದ್ಯಾರ್ಥಿಗಳು, ಸನ್ಯಾಸಿಗಳು ಇತ್ಯಾದಿ ನಾನಾ ವರ್ಗಗಳು ಇಂಥ ಸತ್ರಗಳಲ್ಲಿ ಊಟಮಾಡುತ್ತಿದ್ದರು. ಭಾರತದಲ್ಲಿ ವಸಾಹತು ಆಡಳಿತವು ಪ್ರಾರಂಭವಾದ ನಂತರ ಇವೆಲ್ಲ ನಿಂತುಹೋದವು. ಆದರೆ ಅನ್ನದಾನವು ಖಾಸಗಿ ಸಂಸ್ಥೆಗಳಿಂದ ಮುಂದುವರಿಯುತ್ತಿದೆ. ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧ ದೇವಾಲಯಗಳು, ತೀರ್ಥಕ್ಷೇತ್ರಗಳು, ಮಠಗಳು, ಆಶ್ರಮಗಳು ಮುಂತಾದ ಸ್ಥಳಗಳಲ್ಲಿ ದಿನನಿತ್ಯ ಬಂದವರಿಗೆಲ್ಲ ಊಟ ನೀಡುವ ಪದ್ಧತಿ ಇಂದೂ ಕೂಡ ಸಾಮಾನ್ಯ. ಭಕ್ತಾದಿಗಳ ಕಾಣಿಕೆಯಿಂದ ಆ ವ್ಯವಸ್ಥೆ ಮಾಡಿರುತ್ತಾರೆ.

  ಅನ್ನದಾನಕ್ಕೆ ಇಂಥ ಮಹತ್ವವನ್ನು ನೀಡಿದ ಸಂಸ್ಕೃತಿಯಲ್ಲಿ ಅನ್ನವನ್ನು ದುಡ್ಡಿಗೆ ಮಾರುವುದು ಕೂಡ ಅಷ್ಟೇ ಖಂಡನೀಯ ಎನಿಸಿಕೊಳ್ಳುತ್ತದೆ. ಭಾರತೀಯರು ಹೋಟೆಲ್ ಉದ್ಯಮವನ್ನು ಅನ್ನದ ಮಾರಾಟ ಎಂಬುದಾಗಿ ನೋಡುತ್ತಾರೆ. ಹಾಗೂ ಬ್ರಾಹ್ಮಣರು ಈ ಉದ್ಯಮವನ್ನು ಪ್ರವೇಶಿಸಿದ ಪ್ರಾರಂಭದಲ್ಲಿ ಕೆಲವೆಡೆ ಅವರ ಸಮುದಾಯದಿಂದ ಕಟು ಟೀಕೆಗಳು ಎದ್ದಿದ್ದವು. ಅದೇ ರೀತಿ ಊಟಕ್ಕೆ ಕುಳಿತವನನ್ನು ಎಬ್ಬಿಸುವುದು, ಹಸಿದವನಿಗೆ ಊಟ ಹಾಕದೇ ಕಳುಹಿಸುವುದು ಮಹಾಪಾಪ ಎಂಬುದಾಗಿ ಇಂಥ ಜನರು ತಿಳಿಯುತ್ತಾರೆ. ಇವೆಲ್ಲ ಸಂಪ್ರದಾಯಸ್ಥರ ಲೋಕ. ಇಂದಿನ ಪ್ರಗತಿಪರರು ಇವನ್ನೆಲ್ಲ ಮೂಢನಂಬಿಕೆಯ ಪಟ್ಟಿಯಲ್ಲಿ ಸೇರಿಸುತ್ತಾರೆ. ಅಷ್ಟೇ ಅಲ್ಲ ನಮ್ಮ ದೇವಾಲಯಗಳಲ್ಲಿ ದಿನನಿತ್ಯ ನಡೆಯುವ ಅನ್ನ ಸಂತರ್ಪಣೆಯು ಅವರಿಗೆ ಕೌತುಕವನ್ನು ಹುಟ್ಟಿಸುವ ಬದಲಾಗಿ ಅಲ್ಲಿ ನಡೆಯುವ ಪಂಕ್ತಿಭೇದದಿಂದಾಗಿ ಅದು ಜಾತಿ ವ್ಯವಸ್ಥೆಯ ಕರಾಳ ಮುಖವಾಗಿ ಕಾಣಿಸುತ್ತದೆ. ಇದರ ಜೊತೆಗೆ ಆದುನಿಕ ಜಗತ್ತಿನ ಒಂದು ಭಾಗವಾಗುತ್ತಿರುವ ಭಾರತೀಯ ಕುಟುಂಬಗಳಲ್ಲೂ ಈ ಹಳೆಯ ಆಚರಣೆಗಳು ಮಾಯವಾಗತೊಡಗಿವೆ.

 ಜಗತ್ತಿನ ಬೇರೆ ಯಾವುದೇ ಸಂಸ್ಕೃತಿಯೂ ಇಂಥದ್ದೊಂದು ಆಚರಣೆಯನ್ನು ಪೋಷಿಸಿಕೊಂಡು ಬಂದಂತೆ ಕಾಣಿಸುವುದಿಲ್ಲ.  ಧನ ಧಾನ್ಯ ಸಂಗ್ರಹವಾದಂತೆಲ್ಲ ಇಲ್ಲಿನ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅನ್ನದಾನವನ್ನು ಮಾಡಿದರೆ ಅದರ ಸದ್ವಿನಿಯೋಗವಾಗುತ್ತದೆ ಎಂದು ಭಾವಿಸುವುದರಿಂದಲೇ ಇಂಥ ಆಚರಣೆಗಳು ಚಾಲ್ತಿಯಲ್ಲಿವೆ.  ಹಾಗೂ ಇಂಥ ಆಚರಣೆಗಳನ್ನು ಆಧರಿಸಿ ಕೇವಲ ಭಿಕ್ಷುಕರೊಂದೇ ಅಲ್ಲ, ಇಂದು ನಾವು ಭಿಕ್ಷುಗಳು, ಶ್ರಮಣರು, ಸನ್ಯಾಸಿಗಳು, ಶಿವಶರಣರು, ದಾಸರು ಅಂತೆಲ್ಲ ಯಾರನ್ನು ಪ್ರಪಂಚಕ್ಕೆ ನಮ್ಮ ಸಂಸ್ಕೃತಿಯ  ಕೊಡುಗೆ ಎನ್ನುತ್ತೇವೋ ಅವರನ್ನೆಲ್ಲ ಪೋಷಿಸಿದ್ದು ಭಾರತೀಯರ ಇಂಥ ಸತ್ಸಂಪ್ರದಾಯ.

Advertisements
Categories: Uncategorized
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: