ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 42ಹಕ್ಕಿನ ಭಾಷೆ- ಕರ್ತವ್ಯದ ಭಾಷೆ.

ಪ್ರೊ. ರಾಜಾರಾಮ ಹೆಗಡೆ

ಸಾಂಪ್ರದಾಯಿಕ ಕುಟುಂಬಗಳಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಮನೆಯಲ್ಲಿ ಹಿರಿಯರು ಅವರ ಕರ್ತವ್ಯಗಳನ್ನು ಕಲಿಸುತ್ತ ಅವರಿಗೆ ಬದುಕನ್ನು ಕಲಿಸುತ್ತಾರೆ.  ಗುರು ಹಿರಿಯರಿಗೆ ವಿಧೇಯನಾಗಿರಬೇಕು, ಅದೇ ರೀತಿ ಹಿರಿಯನಾಗಿ ತನಗಿಂತ ಕಿರಿಯರನ್ನು ಹೇಗೆ ನಡೆಸಿಕೊಳ್ಳಬೇಕು, ಇತ್ಯಾದಿ. ಅಣ್ಣ ತಮ್ಮಂದಿರಲ್ಲಿ ಜಗಳ ಎದ್ದಾಗ ಹಿರಿಯರು ಯಾವಾಗಲೂ ಸಣ್ಣವನ ಪರ, ‘ನೀನು ಸಣ್ಣವನೋ ಅವನೊ?’ ಎಂದು ಗದರುತ್ತಾರೆ. ಹೆಣ್ಣು ಮಕ್ಕಳಿಗೆ ಇಂಥ ಬೋಧನೆಗಳು ಸ್ವಲ್ಪ ಜಾಸ್ತಿ. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು, ಮಾತನಾಡಬೇಕು ಎಂಬ ಶಿಕ್ಷಣವೂ ನಡೆಯುತ್ತದೆ. ಈ ಪಾಠಗಳನ್ನೆಲ್ಲ ಕೆಲವೊಮ್ಮೆ ಹೊಡೆದೂ ಕಲಿಸುತ್ತಾರೆ, ಕೆಲವೊಮ್ಮೆ ಮಗು ತಾನೇ ನೋಡಿ ಕಲಿಯುತ್ತದೆ. ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲಿಸಬೇಕಾದ ಇಂಥ ಕರ್ತವ್ಯಗಳನ್ನು ಧರ್ಮ ಎಂಬುದಾಗಿ ಹೇಳುತ್ತೇವೆ. ಇದು ಭಾರತೀಯ ಪರಂಪರೆ ಎನ್ನಬಹುದು. ಬ್ರಹ್ಮಚರ್ಯವನ್ನು ಮುಗಿಸಿ ಗ್ರಹಸ್ಥ ಧರ್ಮಕ್ಕೆ ಮರಳುತ್ತಿದ್ದ ವಿದ್ಯಾರ್ಥಿಗಳಿಗೆ ತಾಯಿ, ತಂದೆ, ಆಚಾರ್ಯ, ಅತಿಥಿ ಮುಂತಾದವರನ್ನು ದೇವರಂತೆ ಕಾಣಿರಿ, ನಮ್ಮ ಸಚ್ಚರಿತೆಗಳನ್ನು ಮಾತ್ರ ಅನುಸರಿಸಿರಿ, ಸಂತತಿಯನ್ನು ಮುಂದುವರೆಸಿ, ಇತ್ಯಾದಿಯಾಗಿ ಗ್ರಹಸ್ಥ ಧರ್ಮದ ಕುರಿತು ಉಪದೇಶಗಳಿರುತ್ತಿದ್ದವು. ರಾಜನಾದವನು ಏನೇನು ಮಾಡಬೇಕು ಎಂಬುದಕ್ಕೆ ರಾಜಧರ್ಮದ ಉಪದೇಶಗಳಿರುತ್ತಿದ್ದವು. ಅದೇ ರೀತಿ ಸ್ತ್ರೀ ಧರ್ಮ, ವಿಭಿನ್ನ ವರ್ಣಗಳ ಧರ್ಮ, ಇತ್ಯಾದಿಗಳ ಜೊತೆಗೆ ಆಪದ್ಧರ್ಮಗಳೂ ಇರುತ್ತಿದ್ದವು. ಅಂದರೆ ಒಂದು ವ್ಯಕ್ತಿಯ ಸಾಮಾಜಿಕ ನಡಾವಳಿಯು ಧರ್ಮ ಎಂಬ ಕಲ್ಪನೆಯನ್ನಿಟ್ಟುಕೊಂಡು ನಡೆಯುತ್ತಿತ್ತು. ಒಟ್ಟಿನಲ್ಲಿ ಒಂದು ಮಗು ಬೆಳೆದು ದೊಡ್ಡದಾಗುವಾಗ ತಾನು ತನ್ನ ಸುತ್ತಲಿನ ಜನರ ಕುರಿತು ನಿಭಾಯಿಸಬೇಕಾದ ಕರ್ತವ್ಯಗಳೇನು ಎಂಬುದನ್ನು ರೂಢಿಸಿಕೊಳ್ಳಬೇಕು.

 ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ ಸಂಬಂಧಗಳು ಕರ್ತವ್ಯದ ತಳಹದಿಯ ಮೇಲೆ ನಿಂತಿವೆ. ಋಣದ ಕಲ್ಪನೆ ಈ ಹಿನ್ನೆಲೆಯಿಂದ ಹುಟ್ಟಿಕೊಳ್ಳುತ್ತದೆ. ನಮ್ಮಲ್ಲಿ ಮನುಷ್ಯನೊಬ್ಬನು ಮೂರು ಋಣಗಳನ್ನು ಹೊರುವಂಥವನಾಗಿದ್ದಾನೆ ಹಾಗೂ ಆ ಋಣಗಳನ್ನು ತೀರಿಸುವುದು ಅವನ ಕರ್ತವ್ಯವಾಗಿರುತ್ತದೆ. ಅವೆಂದರೆ ದೇವ ಋಣ, ಪಿತೃ ಋಣ ಹಾಗೂ ಗುರು ಋಣ. ದೇವ ಋಣವನ್ನು ಯಜ್ಞ/ಪೂಜೆಯ ಮೂಲಕ ತೀರಿಸಬೇಕು. ಪಿತೃ ಋಣವನ್ನು ಸಂತಾನವೃದ್ಧಿಯ ಮೂಲಕ ಹಾಗೂ ವೃದ್ಧಾಪ್ಯದಲ್ಲಿ ತಂದೆತಾಯಿಗಳನ್ನು ಸಲಹುವ ಮೂಲಕ ತೀರಿಸಬೇಕು. ಗುರು ಋಣವನ್ನು ವಿದ್ಯಾದಾನ ಮಾಡುವ ಮೂಲಕ ತೀರಿಸಬೇಕು. ಅಂದರೆ ಬೇರೆಯವರು ನಮಗೆ ಏನಾದರೂ ಉಪಕಾರವನ್ನು ಮಾಡಿದರೆ ಅದೊಂದು ಋಣಭಾರವಾಗಿ ನಮ್ಮ ಮೇಲಿರುತ್ತದೆ. ಅಂಥವರು ಕಷ್ಟದಲ್ಲಿ ಇದ್ದಾಗ ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಅಥವಾ ಅವರು ನಮಗೆ ಮಾಡಿದ ಉಪಕೃತಿಯನ್ನು ನಾವು ಬೇರೆಯವರಿಗೆ ಮಾಡಿದರೂ ಆ ಋಣ ಸಂದಾಯವಾಗುತ್ತದೆ. ಪರಾರ್ಥ, ಪರೋಪಕಾರ ಎಂಬುದು ಈ ಸಮಾಜದ ಆದರ್ಶ. ಎಷ್ಟರ ಮಟ್ಟಿಗೆ ನಾವು ಇದನ್ನು ಪಾಲಿಸುತ್ತೇವೆ ಎಂಬುದು ಮುಖ್ಯವಲ್ಲ, ಏನನ್ನು ಆದರ್ಶವಾಗಿ ಎತ್ತಿಹಿಡಿಯಲಾಗುತ್ತದೆ ಎಂಬುದು ಮುಖ್ಯ.

 ಆದರೆ ನಮ್ಮ ಆಧುನಿಕ ಶಿಕ್ಷಣವು ನಮಗೆ ಕಲಿಸುವುದೇ ಬೇರೆ. ಅದು ಹಕ್ಕಿನ ಭಾಷೆ. ಈ ಭಾಷೆಯ ಒತ್ತು ಸಾಂಪ್ರದಾಯಿಕ ಸಮಾಜದ ಕರ್ತವ್ಯದ ಭಾಷೆಗೆ ವ್ಯತಿರಿಕ್ತವಾಗಿದೆ. ಈ ಶಿಕ್ಷಣದಲ್ಲಿ ನಾವು ಕಲಿಯುವ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟಿನಿಂದಲೇ ಅನೇಕ ಹಕ್ಕುಗಳು ಬರುತ್ತವೆ. ಅವುಗಳಲ್ಲಿ ಸ್ವಾತಂತ್ರ್ಯ, ಸಮಾನತೆ, ಮಾತನಾಡುವುದು ಇತ್ಯಾದಿ ಕೆಲವು ಮೂಲಭೂತ ಹಕ್ಕುಗಳನ್ನು ಸಂವಿಧಾನ ಬದ್ಧವಾಗಿ ನೀಡಲಾಗಿದೆ. ಆದರೆ ವ್ಯಕ್ತಿಯೊಬ್ಬನಿಗೆ ಇರತಕ್ಕ ಈ ಹಕ್ಕುಗಳನ್ನು ಇತರರು ಅಪಹರಿಸುವ ಸಾಧ್ಯತೆ ಇರುತ್ತದೆ, ಹಾಗಾಗಿ ಅದನ್ನು ನಮ್ಮ ಪ್ರಭುತ್ವವು ಕಾನೂನುಗಳ ಮೂಲಕ ರಕ್ಷಿಸಲು ಕಂಕಣಬದ್ಧವಾಗಿದೆ. ಪ್ರಭುತ್ವವು ಹಕ್ಕನ್ನು ರಕ್ಷಿಸುವುದರ ಮೂಲಕ ತನ್ನ ಪ್ರಜೆಗಳ ಹಿತವನ್ನು ಕಾಯುತ್ತದೆ. ಹಿರಿಯರು ಮಕ್ಕಳ ಹಕ್ಕುಗಳನ್ನು ಹತ್ತಿಕ್ಕಬಹುದು, ಅವರ ಭವಿಷ್ಯಕ್ಕೆ ಕಂಟಕರಾಗಬಹುದು. ಗಂಡುಗಳು ಹೆಣ್ಣುಗಳ ಹಕ್ಕುಗಳನ್ನು ಹತ್ತಿಕ್ಕಬಹುದು, ಮೇಲ್ಜಾತಿಯವರು ಕೆಳಜಾತಿಯವರ ಹಕ್ಕುಗಳನ್ನು ಹತ್ತಿಕ್ಕಬಹುದು, ಬಹುಸಂಖ್ಯಾತರು ಅಲ್ಪ ಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಬಹುದು, ಇಂಥ ತರ್ಕದಿಂದ ಅನೇಕ ವಿಶೇಷ ಕಾಯ್ದೆಗಳನ್ನು ತರಲಾಗಿದೆ.

 ಇಂಥ ಶಿಕ್ಷಣವನ್ನು ಪಡೆದವರಿಗೆ ತಮ್ಮ ಜೊತೆಗೇ ಇರುವ ಇತರರು ತಮ್ಮ ಹಕ್ಕುಗಳನ್ನು ಹತ್ತಿಕ್ಕಲು ಕಾಯುತ್ತಿರುವ ರಣಹದ್ದುಗಳಂತೆ ಕಂಡರೆ ಆಶ್ಚರ್ಯವಿಲ್ಲ. ಮನೆಯಲ್ಲಿ ಹಿರಿಯರು, ಸ್ಕೂಲಿನಲ್ಲಿ ಮೇಷ್ಟ್ರು, ಇವರೆಲ್ಲ ಗೌರವ ನೀಡಬೇಕಾದ ವ್ಯಕ್ತಿಗಳಾಗುವುದಕ್ಕಿಂತ ತಮ್ಮ ಹಕ್ಕುಗಳಿಗೆ ತೊಡಕುಗಳನ್ನು ಸೃಷ್ಟಿಸುತ್ತಿರುವವರು ಎಂಬ ಧೋರಣೆಯೂ ಬೆಳೆಯಬಹುದು. ಅದೇ ರೀತಿ ನಿರ್ಧಿಷ್ಟ ಲಿಂಗ, ಜಾತಿ ಅಥವಾ ಕೋಮಿನವರು ತಮ್ಮ ಹಕ್ಕಿಗೆ ಕಂಟಕವಾಗಿದ್ದಾರೆ ಎಂದು ಮತ್ತೆ ಕೆಲವರಿಗೆ ಅನಿಸುವ ಸಾಧ್ಯತೆಯೂ ಇದೆ. ಹಕ್ಕುಗಳ ರಕ್ಷಣೆಗಾಗಿ ಜಾತಿ, ಗುರುತು ಅಥವಾ ಗುಂಪುಗಳ ನಾಗರಿಕ ಹೋರಾಟಗಳು ಕೂಡ ಹುಟ್ಟಿಕೊಳ್ಳುತ್ತವೆ. ದಲಿತರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ಶಿಕ್ಷಕರು, ಸರ್ಕಾರಿ ನೌಕರರು, ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು, ರೈತರು, ಉದ್ಯಮಿಗಳು, ಮುಸ್ಲಿಮರು, ಹಿಂದೂಗಳು, ಕನ್ನಡಿಗರು, ಉತ್ತರ ಕರ್ನಾಟಕದವರು, ಹೀಗೆ ಸರ್ವ ಪ್ರಜಾವರ್ಗವೂ ಇಂಥ ಹಕ್ಕುಗಳಿಗಾಗಿ ಹೋರಾಡುವ ತರಹೆವಾರು ಗುರುತುಗಳನ್ನು ಪಡೆದುಕೊಳ್ಳುತ್ತಾರೆ. ಹಾಗೂ ಸಂಘಗಳನ್ನು ಹುಟ್ಟುಹಾಕಿಕೊಂಡು ವ್ಯವಸ್ಥಿತ ಹೋರಾಟವನ್ನು ಹಮ್ಮಿಕೊಳ್ಳುತ್ತಾರೆ. ನಮ್ಮ ಪ್ರಜಾಪ್ರಭುತ್ವದ ಪ್ರಯೋಜನವು ಪ್ರಜೆಗಳಿಗೆ ಆಗಬೇಕಾದರೆ ಇಂಥ ಒಂದಿಲ್ಲೊಂದು ಸಂಘಗಳನ್ನು ಕಟ್ಟಿಕೊಂಡು ತಮ್ಮ ಮೂಲಭೂತ ಹಕ್ಕಿಗೆ ಹೊಡೆತ ಬಿದ್ದಿದೆ ಎಂಬುದಾಗಿ ವಾದಿಸಬೇಕಾಗುತ್ತದೆ, ಹೋರಾಟ ಮಾಡಬೇಕಾಗುತ್ತದೆ. ಇಲ್ಲಿ ಹಕ್ಕುಗಳ ಕುರಿತು ಜಾಗೃತಿ ಇಲ್ಲದವನೇ ಅನಾಗರಿಕ.

 ಈ ಜೀವನ ಕ್ರಮವು ನಮ್ಮನ್ನು ಎಲ್ಲಿಗೆ ಒಯ್ಯುತ್ತಿದೆ?  ಎಲ್ಲರೂ ತಮಗೆ ಅನ್ಯರಿಂದ ಅನ್ಯಾಯವಾಗಿದೆ ಎಂದು ಕೊರಗತೊಡಗಿದ್ದಾರೆ. ಮೀಸಲಾತಿಯನ್ನು ನೀಡುವುದರ ಮೂಲಕವೋ, ಅಭಿವೃದ್ಧಿ ಕಾರ್ಯದ ಮೂಲಕವೋ, ಸವಲತ್ತುಗಳನ್ನು ಸೃಷ್ಟಿಸುವುದರ ಮೂಲಕವೊ, ಕಾಯ್ದೆಗಳನ್ನು ಮಾಡುವ ಮೂಲಕವೋ, ಆ ಅನ್ಯಾಯವನ್ನು ನಮ್ಮ ಪ್ರಭುತ್ವವು ಸರಿಪಡಿಸಬೇಕು ಎಂಬ ಬೇಡಿಕೆಗಳು, ಸಂಘರ್ಷಗಳು ಹೆಚ್ಚುತ್ತಿವೆ. ನಮ್ಮ ಇಡೀ ಸಮಾಜ ಹಾಗೂ ಸಕರ್ಾರಗಳೇ ತಮಗೆ ಆದ ಅನ್ಯಾಯಗಳನ್ನು ಸರಿಪಡಿಸುವ ಸಲುವಾಗಿ ಇವೆ ಎಂಬ ಧೋರಣೆ ಬಲವಾಗುತ್ತಿದೆ. ಇದರ ಫಲವೆಂದರೆ ಕರ್ತವ್ಯದ ಪ್ರಜ್ಞೆ ಮಾಯವಾಗುತ್ತಿದೆ. ಈ ಹೋರಾಟದ ಗುಂಪುಗಳು ತಮ್ಮ ಸದಸ್ಯರಿಗೆ ಅವರ ಹಕ್ಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆಯೇ ವಿನಃ ಅವರ ಕರ್ತವ್ಯವೇನು ಎಂಬ ಕುರಿತು ಸೊಲ್ಲೆತ್ತುವುದಿಲ್ಲ.

 ಇದರ ಪರಿಣಾಮವಾಗಿ ನಮ್ಮ ಸಾರ್ವಜನಿಕ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ತನ್ನ ಕರ್ತವ್ಯದ ಕುರಿತು ಯೋಚನೆ ಮಾಡಬೇಕಾದ ಸಂದರ್ಭ ಬರುವುದಿಲ್ಲ. ನೀವೊಬ್ಬ ಸರ್ಕಾರಿ ನೌಕರರಾಗಿದ್ದರೆ ನಿಮಗೆ ಸಂಬಳ ಹೆಚ್ಚಬೇಕು, ಪದೋನ್ನತಿ ಆಗಬೇಕು, ಭತ್ಯೆ ಬರಬೇಕು, ಸವಲತ್ತುಗಳು ಸಿಗಬೇಕು ಇತ್ಯಾದಿಗಳ ಕುರಿತು ನಿಮ್ಮ ಸಂಘವು ಹೋರಾಟವನ್ನು ಹಮ್ಮಿಕೊಳ್ಳುತ್ತದೆ. ಆದರೆ ನೀವು ನಮ್ಮ ಕರ್ತವ್ಯದ ಗುಣಮಟ್ಟವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು, ಸಂಸ್ಥೆಗಳನ್ನು ಹೇಗೆ ಬೆಳೆಸಬೇಕು, ಜನರಿಗೆ ಹೇಗೆ ಸೇವೆ ಒದಗಿಸಬೇಕು, ಇತ್ಯಾದಿ ಆಲೋಚನೆಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಅಂಥದ್ದೊಂದು ಕಾರಣಕ್ಕೆ ಯಾರಾದರೂ ಸಂಘ ಕಟ್ಟಿಕೊಳ್ಳುವುದನ್ನು ಊಹಿಸಿಕೊಳ್ಳಲೂ ನಮಗೆ ಸಾಧ್ಯವಿಲ್ಲ. ಪ್ರಜೆಯೊಬ್ಬನಿಗೆ ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ತನ್ನ ಕರ್ತವ್ಯವೇನು ಎಂಬ ಪ್ರಶ್ನೆಯೇ ಅಪ್ರಸ್ತುತವಾಗುತ್ತದೆ. ಅಂದರೆ ವ್ಯಕ್ತಿಯೊಬ್ಬನಿಗೆ ತಾನು ಇತರರಿಗಾಗಿ ಏನು ಮಾಡಬಲ್ಲೆ, ತನ್ನ ಮೇಲಿರುವ ಸಮಾಜದ ಋಣವನ್ನು ಸಂದಾಯ ಮಾಡುವುದು ಹೇಗೆ ಎಂಬ ಶಿಕ್ಷಣವೇ ನಡೆಯುತ್ತಿದ್ದಂತೆ ಕಾಣುವುದಿಲ್ಲ. ಸಮಾಜದಿಂದ ತನಗೆ ಬರುವುದು ಏನಿದೆ ಎಂಬ ಲೆಕ್ಕವನ್ನು, ಅಂದರೆ ಸ್ವಾರ್ಥಸಾಧನೆಯನ್ನೇ ಜೀವನ ಮೌಲ್ಯ, ನಾಗರಿಕತೆ ಎಂಬಂತೆ ಕಲಿಸಲಾಗುತ್ತಿದೆ. ಇಂಥ ನಾಗರಿಕತೆಯನ್ನು ಕಟ್ಟಿಕೊಂಡು ಯಾವ ಸಮಾಜ ತಾನೇ ಉದ್ಧಾರವಾದೀತು?

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: