ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 43: ನದಿನೀರಿಗೆ ದೊಣ್ಣೆನಾಯಕನ ಅಪ್ಪಣೆಯೆ?

ಪ್ರೊ. ರಾಜಾರಾಮ ಹೆಗಡೆ

ಈ ವರ್ಷ ಕರ್ನಾಟಕದಲ್ಲಿ ಕಳೆದ ಅರ್ಧ ಶತಮಾನದಲ್ಲೇ ಅತೀ ಕಡಿಮೆ ಮಳೆಯಾಗಿದೆ ಎನ್ನಲಾಗುತ್ತದೆ. ಇನ್ನು ಮುಂದೆ ಏನಾದರೂ ಪವಾಡ ನಡೆಯದಿದ್ದರೆ ಕುಡಿಯುವ ನೀರಿನ ಕ್ಷಾಮವನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ. ಕನ್ನಂಬಾಡಿಯಲ್ಲಿರುವ ನೀರಿನಲ್ಲಿ ಬೆಂಗಳೂರು ಮೈಸೂರು ಆದಿಯಾಗಿ ಹಳೆ ಮೈಸೂರಿನ ಅನೇಕ ಪಟ್ಟಣ ಹಾಗೂ ಗ್ರಾಮಗಳ ಕುಡಿಯುವ ನೀರಿನ ಪೂರೈಕೆಯಾಗುವುದು ಕಷ್ಟವಿದೆ. ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕುರಿತು ಸುದೀರ್ಘ ಹೊರಾಟವೇ ನಡೆಯುತ್ತಿದ್ದು, ಈಗ ಅದು ಉಲ್ಭಣಾವಸ್ಥೆಯನ್ನು ತಲುಪಿದೆ. ಒಂದೊಮ್ಮೆ ಈ ಯೋಜನೆಯು ಜಾರಿಯಾಗದಿದ್ದರೆ ಉತ್ತರ ಕರ್ನಾಟಕದ ಗ್ರಾಮಗಳಿಗೆ ಕುಡಿಯುವ ನೀರಿಗೆ ತತ್ವಾರವಾಗುವ ಸಂಭವವಿದೆ.

  ಇವೆರಡೇ ಉದಾಹರಣೆಗಳಲ್ಲ. ಬಹುತೇಕವಾಗಿ ಇಂದು ಕುಡಿಯುವ ನೀರಿಗೆ ನಾವು ಹೆಚ್ಚೆಚ್ಚು ನದಿಗಳನ್ನು ಆಧರಿಸತೊಡಗಿದ್ದೇವೆ. ನದಿಗಳ ಜಲಾಶಯಗಳಿಂದ ಪೈಪುಗಳನ್ನು ಅಳವಡಿಸಿ ಹೆಚ್ಚೆಚ್ಚು ವಸತಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗಳು ಚಾಲ್ತಿಯಲ್ಲಿ ಬಂದಿವೆ. ಹಾಗಾಗಿ ಕೆಲವೇ ಪ್ರಮುಖ ನದಿಗಳು ಕುಡಿಯುವ ನೀರಿನ ಮೂಲಗಳಾಗಿ ಪರಿವರ್ತನೆಯಾಗಿವೆ. ದಿನಕಳೆದಂತೆ  ಇಂಥ ಜಲಾಶಯಗಳಿಂದ ನೀರಿನ ಪುರವಟೆಯ ಹೆಚ್ಚೆಚ್ಚು ವಿಸ್ತರಣೆಗಾಗಿ ಬೇಡಿಕೆ ಹಾಗೂ ಸಂಘರ್ಷಗಳು ಜಾಸ್ತಿಯಾಗತೊಡಗಿವೆ.

  ಇಲ್ಲಿ ನಮಗೆ ಏಳಬಹುದಾದ ಒಂದು ಪ್ರಶ್ನೆಯೆಂದರೆ  ಏಕೆ ಜನರು ತಮ್ಮ ಕುಡಿಯುವ ನೀರಿನ ಅಗತ್ಯವನ್ನು ಕೆಲವೇ ಕೆಲವು ನದಿಗಳು ಪೂರೈಸಬೇಕು ಎಂದು ಒತ್ತಾಯಿಸುತ್ತಿದ್ದಾರೆ? ಅಥವಾ ವಸತಿಗಳು ಹಾಗೂ ಅವುಗಳ ಜನಸಂಖ್ಯೆ ಜಾಸ್ತಿಯಾದಂತೆಲ್ಲ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಇಂಥ ನದಿಗಳೊಂದೇ ಮಾರ್ಗ ಎಂಬುದಾಗಿ ನಮ್ಮ ನೀತಿಗಳನ್ನು ರೂಪಿಸುವವರು ಏಕೆ ನಂಬಿದ್ದಾರೆ? ಏಕಾದರೂ ನಂಬಿರಲಿ, ಈ ವರ್ಷದಂಥ ಪರಿಸ್ಥಿತಿಯಲ್ಲಿ ಇಂಥ ನೀತಿಗಳು ಸತ್ವಪರೀಕ್ಷೆಗಳಾಗಿ ಕಾಡುವುದಂತೂ ಸತ್ಯ.  ಇಂಥ ಜಲಾಶಯಗಳಿಗೆ ನೀರು ಪುರವಟೆಯಾಗಬೇಕಾದರೆ ಪಶ್ಚಿಮ ಘಟ್ಟಗಳಲ್ಲಿ ಮಳೆ ಸರಿಯಾಗಿ ಬೀಳಬೇಕಾಗುತ್ತದೆ. ಆದರೆ ಒಂದೆರಡು ವರ್ಷ ಮಳೆ ಅಲ್ಲಿ ಸರಿಯಾಗಿ ಬೀಳದೇ ಇಂಥ ನದಿಗಳು ಸೊರಗುವ ಸಾಧ್ಯತೆಯಿದೆ. ಆದರೆ ಅಷ್ಟಕ್ಕೇ ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಹಾಗಾದರೆ ಸಾವಿರಾರು ವರ್ಷಗಳಿಂದ ಇಂಥ ಯಾವ ಜಲಾಶಯಗಳೂ ಇಲ್ಲದೆ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಹೇಗೆ ಎದುರಿಸಿ ಉಳಿದುಕೊಂಡು ಬಂದರು?

  ಈ ಪ್ರಶ್ನೆಯನ್ನು ಕೆದಕುತ್ತಾ ಹೋದರೆ ನಮಗೆ ಕಾಣುವುದು ಕಳೆದ ಒಂದು ಶತಮಾನದಲ್ಲಿ ನೀರಾವರಿಯ ಕುರಿತು ಭಾರತೀಯರ ಧೋರಣೆಯಲ್ಲಾದ ಬದಲಾವಣೆ. ಇಂದಿನ ಬೃಹತ್ ನೀರಾವರಿ ಯೋಜನೆಗಳಿಗೆ ಅದಕ್ಕೂ ಹಿಂದಿನ ಇತಿಹಾಸವಿಲ್ಲ. ಅದಕ್ಕೂ ಮೋದಲಿನ ಕಾಲದಲ್ಲಿ ಪ್ರತೀ ವಸತಿಯೂ ಕೂಡ ಸ್ಥಳೀಯ ಜಲಸಂಪನ್ಮೂಲವನ್ನು ಆಧರಿಸಿತ್ತು. ಅದು ಕೆರೆಗಳ ರೂಪದಲ್ಲಿ ಇರಬಹುದು, ಕಾಲುವೆಯ ರೂಪದಲ್ಲಿ ಇರಬಹುದು. ಅವುಗಳನ್ನು ನಿರ್ವಹಿಸುವ ನೇರ ಹೊಣೆ ಅದನ್ನು ಉಪಯೋಗಿಸುವವರದೇ. ದಿನಬಳಕೆಗೂ ಮಿಕ್ಕಿ ಪೋಲಾಗುವ ನೀರನ್ನು ಕೃಷಿಗೆ ಬಳಸುತ್ತಿದ್ದರು. ಇಂದಿಗೂ ಕೂಡ ಮಲೆನಾಡಿನ, ಕರಾವಳಿಯ ಬಾಗಗಳಲ್ಲಿ ಇದೇ ಪರಿಸ್ಥಿತಿಯಿದೆ. ಅರೆಮಲೆನಾಡು ಹಾಗೂ ಬಯಲುನಾಡಿನಲ್ಲಿ ಎಲ್ಲೆಲ್ಲಿ ಕೆರೆಗಳನ್ನು ಕಟ್ಟಬಹುದೋ ಅಲ್ಲಲ್ಲಿ ವಸತಿಯ ಗಾತ್ರಕ್ಕನುಗುಣವಾಗಿ ಕೆರೆಗಳ ಗಾತ್ರ ಹಾಗೂ ಸಂಖ್ಯೆಗಳು ಹೆಚ್ಚುತ್ತಿದ್ದವು. ಮಳೆ ನೀರು ಹರಿದು ಬರುವ ಮಾರ್ಗಗಳನ್ನು, ಪ್ರಮಾಣವನ್ನು ಅನುಲಕ್ಷಿಸಿ ನೀರಿನ ಸಂಗ್ರಹ ನಡೆಯುತ್ತಿತ್ತು. ಇಂಥ ಕೆರೆಗಳನ್ನು ನಿರ್ವಹಿಸಿಕೊಂಡು ಬರಲಿಕ್ಕಾಗಿ ಹಳ್ಳಿಯಲ್ಲೇ ಕೆಲವು ಅಧಿಕಾರಿಗಳನ್ನು ನೇಮಿಸಿ ನೀರಾವರಿ ಜಮೀನಿನಲ್ಲಿ ಅವರಿಗೆ ಉಂಬಳಿಗಳನ್ನು ಕಲ್ಪಿಸಿರುತ್ತಿದ್ದರು.

   ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ ನಂತರ ಅವರು ಇಲ್ಲಿನ ಕೃಷಿ ಉತ್ಪಾದನೆಯಲ್ಲಿ ಗರಿಷ್ಠ ಕಂದಾಯವನ್ನು ವಸೂಲಿ ಮಾಡುವ ಕಾರ್ಯಕ್ರಮ ಹಾಕಿಕೊಂಡರು. ಮೈಸೂರಿನಲ್ಲಿ ಕಮಿಶನರ್ಗಳ ಆಳ್ವಿಕೆಯಲ್ಲಿ ಅವರಿಗೆ ಕಂಡುಬಂದದ್ದೆಂದರೆ ಕರ್ನಾಟಕದ ಹಳ್ಳಿಗಳಲ್ಲಿ ಗಣನೀಯ ಪ್ರಮಾಣದ ನೀರಾವರಿ ಜಮೀನುಗಳು ಇಂಥ ಸ್ಥಳೀಯ ಕೆರೆಗಳನ್ನು ನಿರ್ವಹಿಸುವವರ ಸ್ವಾಮ್ಯದಲ್ಲಿ ಇದ್ದುದು. ಬ್ರಿಟಿಷರು ಇಂಥ ಮಧ್ಯವರ್ತಿಗಳನ್ನು ನಾಶ ಮಾಡಿದಲ್ಲದೇ ತಮ್ಮ ಕಂದಾಯ ಹೆಚ್ಚುವುದಿಲ್ಲವೆಂಬುದಾಗಿ ನಿರ್ಧರಿಸಿದರು. ಹಾಗಾಗಿ ಇಂಥ ಕೆರೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡು ಸ್ಥಳೀಯ ಮಧ್ಯವರ್ತಿಗಳನ್ನು ವ್ಯವಸ್ಥಿತವಾಗಿ ಅಕ್ರಮಗೊಳಿಸಿದರು. ಆದರೆ ಕ್ರಮೇಣ ಬ್ರಿಟಿಷರು ಕಂಡುಕೊಂಡದ್ದೆಂದರೆ ಇಂಥ ಕೆರೆಗಳನ್ನು ನಿರ್ವಹಿಸುವುದು ಸರ್ಕಾರಕ್ಕೆ ನಷ್ಟವನ್ನು ತರುತ್ತದೆ ಎಂಬುದು. ಸರ್ಕಾರದ ಬೊಕ್ಕಸದಿಂದ ಖರ್ಚು ಹೆಚ್ಚತೊಡಗಿತು. ಆಗ ಸಣ್ಣ ಕೆರೆಗಳನ್ನು ನಿರ್ಲಕ್ಷಿಸತೊಡಗಿದರು. ಮೈಸೂರು ಸಂಸ್ಥಾನವು ಪುನಃ ರಾಜರ ಆಳ್ವಿಕೆಗೆ ಒಳಪಟ್ಟಾಗ ಕೆರೆಗಳ ನಿರ್ವಹಣೆಯ ಸಾಂಪ್ರದಾಯಿಕ ವ್ಯವಸ್ಥೆಯು ಹಾಳು ಬಿದ್ದಿತ್ತು. ಬೃಹತ್ ನೀರಾವರಿಯೊಂದೇ ರಾಜ್ಯಕ್ಕೆ ಲಾಭದಾಯಕ ಎಂಬ ಧೋರಣೆಯೇ ಪ್ರಾಯೋಗಿಕವಾಗಿ ಕಾಣಿಸಿತು. 1900ರ ನಂತರ ಬೃಹತ್ ಜಲಾಶಯಗಳನ್ನು ಕಟ್ಟುವುದೇ ನೀರಾವರಿ ನೀತಿ ಎಂಬಂತಾಯಿತು.

  ಬ್ರಿಟಿಷರ ಕಾಲದಲ್ಲಿ ನಮ್ಮ ಕೆರೆಗಳ ಪಾರಂಪರಿಕ ನಿರ್ವಹಣಾ ವ್ಯವಸ್ಥೆಯನ್ನು ನಾಶಮಾಡಿದ್ದರು. ಭಾರತೀಯ ಸರ್ಕಾರವು ದೊಡ್ಡ ಕೆರೆಗಳನ್ನು ಮಾತ್ರ ನಿರ್ವಹಿಸಿಕೊಂಡು ಬರತೊಡಗಿತು. ಆದರೆ ಕ್ರಮೇಣ ಕೆರೆಗಳು ಹೂಳುತುಂಬಿ ಹಾಳುಬೀಳತೊಡಗಿದವು. ಕೆರೆಗಳ ನಿರ್ವಹಣೆಯಲ್ಲಿ ಗ್ರಾಮಸ್ಥರ ಸಹಭಾಗಿತ್ವವನ್ನು ಹೇಗೆ ಸಾಧಿಸುವುದು ಎಂಬ ಕುರಿತು ಇಂದಿನ ವರೆಗೂ ಸರ್ಕಾರವು ಚಿಂತನೆ ನಡೆಸಿದೆ. ಆದರೆ ಈ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ಆಡಳಿತ ಖಾತೆಯಿದ್ದರೂ ಪಕ್ಷ ಪಕ್ಷಗಳು, ಜಾತಿ ಜಾತಿಗಳು ಮುಖಾಮುಖಿಯಾಗಿ ಕಚ್ಚಾಡುತ್ತಿರುವ ಇಂದಿನ ಗ್ರಾಮಗಳಲ್ಲಿ ಸರ್ವಜನರ ಹಿತದ ಕಲ್ಪನೆ ಅಳಿದುಹೋಗುತ್ತಿದೆ. ಇಂದು ಅನೇಕ ಗ್ರಾಮಗಳನ್ನು ನುಂಗಿ ಬೃಹತ್ ನಗರಗಳು ಅವತರಿಸುತ್ತಿವೆ. ಬೆಂಗಳೂರಿನಂಥ ನಗರದೊಳಗೆ ನೂರಾರು ಹಳ್ಳಿಗಳು ಜೀರ್ಣವಾಗಿವೆ. ದುರಂತವೆಂದರೆ ನೂರಾರು ಹಳ್ಳಿಗಳ ನೀರಾವರಿ ಸಂಪನ್ಮೂಲಗಳು ಕೂಡ ಅವುಗಳ ಜೊತೆಗೇ ಕಾಣೆಯಾಗಿವೆ. ಕೆರೆಗಳು ಬಡಾವಣೆಗಳಾಗಿವೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಬೃಹತ್ ನೀರಾವರಿಗಳ ಫಲಾನುಭವಿಗಳಂತೂ ಸಣ್ಣ ಪುಟ್ಟ ಕೆರೆಗಳು ತಮಗೆ ಇನ್ನು ಅಗತ್ಯವಿಲ್ಲ ಎಂದು ಅವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಂದರೆ ಆಧುನಿಕ ಅಭಿವೃದ್ಧಿಯು ದಿನಬಳಕೆಗೆ ನದಿಗಳ ನೀರನ್ನೇ ಅವಲಂಬಿಸಿದ ಹೊಸದೊಂದು ಮಾನವ ಸಂತತಿಯನ್ನು ಸೃಷ್ಟಿಸುತ್ತಿದೆ.

  ವಸಾಹತು ಕಾಲದಿಂದಲೇ ಪ್ರಗತಿಯೆಂದರೆ ನಮ್ಮ ಪಾರಂಪರಿಕ ಜೀವನದ ನಾಶ ಎಂಬ ನಂಬಿಕೆಯನ್ನು ಬೇರೂರಿಸಲಾಗಿದೆ. ಆಧುನಿಕ ಪೂರ್ವದ ಭಾರತೀಯ ಸಮಾಜವೆಂದರೆ ಕೇವಲ ಶೋಷಣೆ, ದಬ್ಬಾಳಿಕೆ, ಮೌಢ್ಯ, ಎಂದೇ ನೋಡುವುದು ಈ ಪ್ರಗತಿಪರ ದೃಷ್ಟಿಕೋನದ ಒಂದು ಗುಣ. ಈಗ ಕೆಲವು ವರ್ಷಗಳ ಹಿಂದೆ ಪಾರಂಪರಿಕ ಕೆರೆ ನೀರಾವರಿ ನಿರ್ವಹಣೆಯ ಕುರಿತು ವಿಚಾರಸಂಕಿರಣವೊಂದನ್ನು ಆಯೋಜಿಸಿದ್ದೆವು. ಆಗ ಜಲಾಶಯ ನೀರಾವರಿಗಳ ಕುರಿತು ಸಂಶೋಧನೆ ಮಾಡುತ್ತಿದ್ದ ವಿದೇಶೀ ವಿದ್ವಾಂಸನೊಬ್ಬ ನನ್ನನ್ನು ಕೇಳಿದ್ದ. ‘ಪಾರಂಪರಿಕ ನಿರ್ವಹಣೆಯ ಕುರಿತು ತಿಳಿದುಕೊಂಡೇನು ಮಾಡುತ್ತೀರಿ? ಮತ್ತೆ ಗ್ರಾಮಗಳಲ್ಲಿ ಜಾತಿ ಶೋಷಣೆ, ದಬ್ಬಾಳಿಕೆ ಬರಬೇಕೆನ್ನುತ್ತೀರಾ?’ ಅಂದರೆ ಬ್ರಿಟಿಷ್ ಪೂರ್ವ ಭಾರತದಲ್ಲಿ ಏನಾದರೂ ವ್ಯವಸ್ಥೆ ಇದ್ದರೆ ಅದನ್ನು ಜಾತಿ ದಬ್ಬಾಳಿಕೆಯೇ ಸಾಧ್ಯ ಮಾಡಿರಬೇಕು ಎಂಬುದು ಪಾಶ್ಚಾತ್ಯರ ತರ್ಕ. ನಾವು ಇಂಥ ತರ್ಕವನ್ನು ಒಪ್ಪಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ.

  ನಮ್ಮ ಪರಂಪರೆಯ ಹಿಡಿತದಿಂದ ಬಿಡಿಸಿಕೊಂಡು ಇಷ್ಟೆಲ್ಲ ಅಭಿವೃದ್ಧಿಯನ್ನು ಸಾಧಿಸಿದ ನಾವು ಇಂದು ಎಲ್ಲಿದ್ದೇವೆ? ಒಂದು ಮಳೆಗಾಲ ಕೈಕೊಟ್ಟರೆ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಇಂದು ಎಲ್ಲೆಲ್ಲಿ ಹಾಹಾಕಾರ ಏಳುತ್ತಿದೆಯೋ ಅಲ್ಲೆಲ್ಲ ಮನುಷ್ಯ ವಸತಿಗಳು ಸಾವಿರಾರು ವರ್ಷದಿಂದ ಅಭಿವೃದ್ಧಿಹೊಂದಿವೆ. ರಾಜ್ಯಗಳು ಹುಟ್ಟಿವೆ, ನಗರೀಕರಣಗಳಾಗಿವೆ. ಅದು ಉತ್ತರ ಕರ್ನಾಟಕದ ಬಯಲು ಸೀಮೆಯಾಗಿರಬಹುದು, ರಾಜಸ್ಥಾನದ ಮರುಭೂಮಿಯಾಗಿರಬಹುದು. ಇವರೆಲ್ಲ ಯಾವುದೇ ನದಿಗಳ ಸಹಾಯವೂ ಇಲ್ಲದೇ ಸ್ಥಾನಿಕ ಮಳೆ ನೀರನ್ನು ಸಂಗ್ರಹಿಸಿ ಹೇಗೆ ನಿರ್ವಹಿಸಿಕೊಂಡು ಬಂದರು ಎಂಬುದು ನಾವು ಕಲಿಯಲೇಬೇಕಾದ ಪಾಠ.

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: