ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 44ಸಂಶೋಧನೆಯ ಶತ್ರುಗಳು ಯಾರು?

ಪ್ರೊ. ರಾಜಾರಾಮ ಹೆಗಡೆ 

  ಪ್ರೊ. ಎಂ. ಎಂ. ಕಲಬುರ್ಗಿಯವರ ಹತ್ಯೆಯ ಸುದ್ದಿ ಕನ್ನಡ ಸಂಶೋಧಕರಿಗೆಲ್ಲ ಆಘಾತವನ್ನು ನೀಡಿದೆ. ಕನ್ನಡ ಪ್ರಾಧ್ಯಾಪಕರಾದ ಅವರು ಗ್ರಂಥ ಸಂಪಾದನೆ, ವಚನ ಸಂಪಾದನೆ, ಶಾಸನ ಅಧ್ಯಯನ ಹಾಗೂ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತು. ಅದರಲ್ಲೂ ವಚನಯುಗದ ಕುರಿತು ಆಳವಾದ ಹಾಗೂ ವಿಸ್ತೃತವಾದ ಅಧ್ಯಯನಗಳನ್ನು ನಡೆಸಿದವರು. ಅವರ ಮಾರ್ಗ ಸಂಪುಟಗಳು ಇಂಥ ಬಿಡಿ ಬರೆಹಗಳ ಸಂಗ್ರಹವಾಗಿವೆ. ಅವರು ಅನೇಕ ಪ್ರತ್ಯೇಕ ಗ್ರಂಥಗಳನ್ನೂ ರಚಿಸಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಅವರ ವೃತ್ತಿ ಜೀವನದಲ್ಲೂ ನಿವೃತ್ತಿಯ ನಂತರವೂ ಅವರು ಯಾವದೇ ಆಡಳಿತಾತ್ಮಕ, ವಯಕ್ತಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಸಂಶೋಧನೆಯ ಕೆಲಸ ಮಾತ್ರ ಯಥಾಕ್ರಮದಲ್ಲಿ ಮುಂದುವರೆಯಿತು. ಕಲಬುರ್ಗಿಯವರಿಗೆ ಸಂಶೋಧನೆ ಕೇವಲ ಒಂದು ಶೈಕ್ಷಣಿಕ ಕರ್ತವ್ಯವಾಗಲೀ, ಬದ್ಧತೆಯಾಗಲೀ ಆಗಿರದೇ ಒಂದು ಸಹಜ ಸೆಳೆತವಾಗಿತ್ತು. ಹಾಗಾಗಿ ಓದುವುದು, ಬರೆಯುವುದು, ಇತರ ಸಂಶೋಧಕರ ಜೊತೆಗೆ ಚರ್ಚೆ, ವಾಗ್ವಾದ, ಜಗಳ, ಇತ್ಯಾದಿಗಳು ಅವರ ಸಹಜ ಜೀವನಕ್ರಮಗಳಾಗಿದ್ದವು. ಇಂಥ ಜಗಳಗಳ ಆಚೆಗೂ ಸಹ ಸಂಶೋಧಕರ ಜೊತೆಗೆ ಸ್ನೇಹವನ್ನು ಉಳಿಸಿಕೊಂಡು ಆತ್ಮೀಯವಾಗಿ ವರ್ತಿಸುವುದು ಕೂಡ ಅಷ್ಟೇ ಸಹಜವಾಗಿತ್ತು.

  ಇಂಥದ್ದೊಂದು ಜೀವನವು ಯುವ ಸಂಶೋಧಕರಿಗೆ ಮಾದರಿಯಾಗಿದೆ. ಆದರೆ ಸಂಶೋಧನೆಯ ಕುರಿತು ಸಹಜ ಆಸಕ್ತಿ ಹಾಗೂ ಪೃವೃತ್ತಿಯಿಲ್ಲದವರಿಗೆ ಕಲಬುರ್ಗಿಯವರ ಜೀವನವು ಆಸಕ್ತಿಕೆರಳಿಸಬಹುದೆ? ಇಂದು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯನ್ನು ಕಾಟಾಚಾರ ಅಥವಾ ಅನಿವಾರ್ಯ ಎಂಬಂತೆ ನಡೆಸುವವರೇ ಜಾಸ್ತಿಯಾಗಿದ್ದಾರೆ. ಸಂಶೋಧನೆ ಎಂಬುದು ಕನಿಷ್ಠ ಅರ್ಹತೆಗೆ ಅಥವಾ ಪದೋನ್ನತಿಗೆ ಒಂದು ಸಾಧನ ಎಂಬಂತೆ ನೋಡುವ ಧೋರಣೆ ಶಿಕ್ಷಕರಲ್ಲಿ ಬಲವಾಗಿದೆ. ಇಂಥ ವಾತಾವರಣದಲ್ಲಿ ಪಿಹೆಚ್ಡಿ ಮಾಡುತ್ತೇವೆ ಎಂದು ಬರುವ ಬಹುತೇಕ ವಿದ್ಯಾರ್ಥಿಗಳು ಓದುವುದು, ತಿಳಿದುಕೊಳ್ಳುವುದು, ಪ್ರಶ್ನೆಗಳನ್ನು ಎತ್ತಿ ಉತ್ತರಿಸುವುದು ಇತ್ಯಾದಿಗಳಿಗೂ ತಮ್ಮ ಪಿಹೆಚ್ಡಿಗೂ ಸಂಬಂಧವಿದೆ ಎಂಬುದನ್ನೇ ಮರೆತಂತಿದೆ. ಅದಕ್ಕೆ ಬದಲಾಗಿ ಯಾರ್ಯಾರದೋ ಪುಸ್ತಕಗಳಿಂದ, ಪ್ರಬಂಧಗಳಿಂದ ಕೆತ್ತಿ ಅಂಟಿಸಿಕೊಂಡ ಸಾಲುಗಳು, ಇಲ್ಲಾ ಇಡಿಯಾಗಿ ಎತ್ತಿ ಎಗರಿಸಿದ ಭಾಗಗಳು ಹೆಚ್ಚು ಹೆಚ್ಚಾಗಿ ಸಂಶೋಧನಾ ಪ್ರಬಂಧಗಳಲ್ಲಿ ರಾರಾಜಿಸತೊಡಗಿವೆ. ಅಂದರೆ ಸಂಶೋಧಕರೆಂದು ಕರೆಸಿಕೊಳ್ಳುವವರಲ್ಲಿ ಬೌದ್ಧಿಕ ಆಸಕ್ತಿ ಇಲ್ಲವಾಗಿದೆ. ಇಂಥವರ ವ್ಯವಹಾರಕ್ಕೆ ಕಲಬುರ್ಗಿಯಂಥವರು ತೊಡಕಾಗಿ ಪರಿಣಮಿಸಲೂ ಬಹುದು.

  ಇದಕ್ಕೂ ದೊಡ್ಡ ದುರಂತವೆಂದರೆ ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರು ಇಂದು ಸಂಶೋಧನೆ ಎನ್ನುವುದು ರಾಜಕೀಯ ಐಡಿಯಾಲಜಿಗಳ ಪ್ರತಿಪಾದನೆ ಎಂಬ ನಿಲುವಿಗೆ ಬಂದಿದ್ದಾರೆ. ಇಂಥವರಿಗೂ ಕಲಬುರ್ಗಿಯವರು ಸಂಶೋಧನೇತರ ಕಾರಣಗಳಿಗಾಗಿ ಮುಖ್ಯವಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಬಾಲಗಂಗಾಧರ ಅವರ ಸಂಶೋಧನಾ ತಂಡವು ವಚನಗಳು ಜಾತಿ ವಿನಾಶದ ಚಳವಳಿಯಲ್ಲ ಎಂಬ ವಾದವನ್ನು ಇಟ್ಟಿತ್ತು.  ಇದಕ್ಕೆ ಉಗ್ರವಾಗಿ ಪ್ರತಿಕ್ರಿಯಿಸಿದ ಬುದ್ಧಿಜೀವಿಗಳ ಗುಂಪೊಂದು ಪತ್ರಿಕೆಯೊಂದರಲ್ಲಿ ಈ ಕುರಿತು ಚರ್ಚೆಯನ್ನು ಎತ್ತಿಕೊಂಡಿತ್ತು. ಆಗ ಕಲಬುರ್ಗಿಯವರು ವಚನಗಳು ಜಾತಿವಿನಾಶ ಚಳವಳಿ ಎಂಬ ನಿಲುವನ್ನು ಬೆಂಬಲಿಸಿ ಬರೆದಿದ್ದರು, ಅಷ್ಟೇ ಅಲ್ಲ ಅದನ್ನು ನಿರಾಕರಿಸುವ ಸ್ಥಳೀಯ ಸಂಸ್ಕೃತಿಗಳ ಸಂಶೋಧನಾ ಕೇಂದ್ರವನ್ನು ಮುಚ್ಚಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು. ಈ ಕಾರಣಕ್ಕಾಗಿ ಕರ್ನಾಟಕ ಪ್ರಗತಿಪರ ಬುದ್ಧಿಜೀವಿಗಳು ಹಾಗೂ ಹೋರಾಟಗಾರರಿಗೆ ಕಲಬುರ್ಗಿಯವರ ಕುರಿತು ವಿಶೇಷ ಆಸಕ್ತಿ ಬೆಳೆಯಿತು. ಕಲಬುರ್ಗಿಯವರು ವೀರಶೈವ ಪಂಚಾಚಾರ್ಯ ಪರಂಪರೆಯನ್ನು ಬ್ರಾಹ್ಮಣೀಕೃತ ಗುಂಪು ಎಂದು ಟೀಕಿಸಿ, ಲಿಂಗಾಯತ ಎಂಬುದು ಮೂಲತಃ ಬಸವಣ್ಣನ ಜಾತಿ ವಿನಾಶ ಚಳವಳಿಯಿಂದ ಹುಟ್ಟಿದ ಪರಂಪರೆ ಎಂದು ವಾದಿಸುತ್ತಿದ್ದರು. ಹಾಗಾಗಿ ಅದು ಹಿಂದೂ ಧರ್ಮದ ಭಾಗವಲ್ಲ ಎಂಬುದು ಅವರ ನಿಲುವು. ಹಾಗಾಗಿ ಕಲಬುರ್ಗಿಯವರ ಪ್ರತಿಕ್ರಿಯೆ ಅವರಿಗೆ ಸಹಜವಾಗೇ ಇದೆ.

  ಕಲಬುರ್ಗಿಯವರಿಗೆ ವಚನಗಳ ಕುರಿತು ಇದ್ದ ಆಬಿಪ್ರಾಯಗಳಿಗೂ ಅವರ ಸಂಶೋಧನೆಯ ಇತಿಮಿತಿಗೂ ಸಂಬಂಧವಿದೆ. ಕಲಬುರ್ಗಿಯವರು ಮೂಲತಃ ಭಾಷಾ ವಿದ್ವಾಂಸರೇ ವಿನಃ ಸಮಾಜ ವಿಜ್ಞಾನಿಯಲ್ಲ. ಶಬ್ದಾರ್ಥ, ವಾಕ್ಯಾರ್ಥ ವಿಶ್ಲೇಷಣೆ ಮಾಡಿ ಮಾಹಿತಿಯನ್ನು ಕಲೆಹಾಕುವುದು ಬೇರೆ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳ ಕುರಿತು ಸಿದ್ಧಾಂತಗಳನ್ನು ರೂಪಿಸುವುದು ಬೇರೆ. ಕಲಬುರ್ಗಿಯವರ ಆಲೋಚನಾ ಕ್ರಮದ ಮೇಲೆ ಪ್ರಚಲಿತದಲ್ಲಿರುವ ಪ್ರಗತಿಪರ ಹೋರಾಟಗಳು ಗಾಢವಾದ ಪ್ರಭಾವ ಬೀರಿವೆ. ಅವು  ಆಧರಿಸಿದ್ದು ವಸಾಹತು ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಸಿದ್ಧಾಂತಗಳನ್ನು. ಹಾಗಾಗಿ ವ್ಯವಸ್ಥೆಯನ್ನು ಗಟ್ಟಿಮಾಡಿ ಶೋಷಿಸುವ ಬ್ರಾಹ್ಮಣರ ಹಿಂದೂ ರಿಲಿಜನ್ನು ಒಂದು ಕಡೆಯಾದರೆ ಅದನ್ನು ನಾಶಮಾಡಿ ಸಮಾನತೆಯ ಸಮಾಜವನ್ನು ಸ್ಥಾಪಿಸಿದ ಲಿಂಗಾಯತ ರಿಲಿಜನ್ನು ಮತ್ತೊಂದು ಕಡೆ ಇರುವಂತೆ ಅವರಿಗೆ ಕಾಣಿಸಿತ್ತು. ಆದರೆ ಅದೇ ವೇಳೆಗೆ ಕಲಬುರ್ಗಿಯವರು ಹಿಂದೂ ಎಂಬ ರಿಲಿಜನ್ನೇ ಇಲ್ಲ ಎಂದೂ (ಬಾಲಗಂಗಾಧರರ ವಾದವನ್ನು ಎತ್ತಿಹಿಡಿದು) ವರಸೆ ಬದಲಿಸಬಲ್ಲವರಾಗಿದ್ದರು. ಹಿಂದೂ ಎಂಬ ರಿಲಿಜನ್ನೇ ಇಲ್ಲ ಎನ್ನಬೇಕಾದರೆ ಲಿಂಗಾಯತರು ಹೋರಾಡಿದ್ದು ಯಾರ ವಿರುದ್ಧ ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳಬೇಕಾಗುತ್ತದೆ ಎಂಬ ಶಿಸ್ತು ಅವರ ಆಲೋಚನೆಗಳಿಗೆ ಇಲ್ಲ. ಅದೇ ರೀತಿ ಮಧ್ಯಕಾಲೀನ ಜೈನರಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಸಂತ್ರಸ್ತ ಜೈನರೆಲ್ಲ ಜಾತ್ಯತೀತ ವೀರಶೈವವನ್ನು ಸ್ವೀಕರಿಸಿದ್ದರಿಂದ ಜೈನ ಮತ ಮೂಲೆಗುಂಪಾಯಿತು ಎಂದು ವಾದಿಸುವ ಅವರಿಗೆ ವೀರಶೈವರೊಳಗಿನ ಜಾತಿಪದ್ಧತಿ ಪ್ರಶ್ನೆಯಾಗಿ ಕಾಡುವುದಿಲ್ಲ.

  ಕಲಬುರ್ಗಿಯವರಿಗೆ ತಮ್ಮ ಸಂಶೋಧನೆಗಳು ಇದುವರೆಗೆ ಗುರುತಿಸದ ಮಹತ್ವದ ಪ್ರಶ್ನೆಗಳನ್ನು ಎತ್ತಿ ಸತ್ಯವನ್ನು ನಿಷ್ಠುರವಾಗಿ ಹೇಳಬೇಕು ಎಂಬ ಹಂಬಲ ತೀವ್ರವಾಗಿತ್ತು. ಆದರೆ ಅಂಥ ಪ್ರಶ್ನೆಗಳನ್ನು ಗುರುತಿಸಿ ಉತ್ತರಿಸುವ ಶಿಸ್ತುಬದ್ಧ ವಿಧಾನ ಅವರಲ್ಲಿ ಇರಲಿಲ್ಲ. ಅವರು ಭಾರತೀಯ ಸಂಸ್ಕೃತಿಯ ಕುರಿತ ಸ್ವೀಕೃತ ವಿಚಾರಗಳನ್ನೇ ಇಟ್ಟುಕೊಂಡು ಉತ್ತರಿಸಲು ನೋಡುತ್ತಿದ್ದರು. ಹಾಗಾಗಿ ಅನೇಕ ಬಾರಿ ಅವರ ಹೇಳಿಕೆಗಳು ಭಾವನಾತ್ಮಕ ವಿವಾದಗಳಾಗಿ ಪರಿಸಮಾಪ್ತಿಗೊಂಡವೇ ವಿನಃ ಸಂಶೋಧನಾ ಸಮಸ್ಯೆಗಳಾಗಿ ರೂಪುಗೊಳ್ಳಲಿಲ್ಲ. ಕಲಬುರ್ಗಿಯವರು ಗತಿಸಿದ ಸಂದರ್ಭದಲ್ಲಿ ಅವರ ಕುರಿತ ಇಂಥ ವಿಶ್ಲೇಷಣೆಗಳು ಸಂಶೋಧನಾ ಕ್ಷೇತ್ರದಲ್ಲಿರುವವರ ಕಲಿಕೆಗೆ ಸಹಾಯವಾಗಬಲ್ಲದು. ಬಹುಶಃ ನಾವು ಅವರಿಂದ ಕಲಿಯಬೇಕಾದ ವಿಷಯಗಳಲ್ಲಿ ಅವರ ತಪ್ಪುಗಳನ್ನು ಗುರುತಿಸುವುದೂ ಸೇರಿದೆ.

  ಕಲಬುರ್ಗಿಯವರ ಹತ್ಯೆಯಾದ ನಂತರ ಪ್ರಗತಿಪರ ಚಿಂತಕರು ಅದನ್ನು ಹಿಂದುತ್ವದ ವಿರುದ್ಧ ಟೀಕಾಸ್ತ್ರವನ್ನಾಗಿ ಬಳಸಿಕೊಳ್ಳಲು ಮುಗಿಬೀಳತೊಡಗಿದ್ದಾರೆ. ಸತ್ಯಶೋಧನೆ ಹಾಗೂ ಅದರ ನಿಷ್ಠುರ ಪ್ರತಿಪಾದನೆಯ ಸ್ವಾತಂತ್ರ್ಯದ ಮೇಲೆ  ಹಿಂದೂ ಮೂಲಭೂತವಾದಿಗಳು ನಡೆಸಿದ ದಾಳಿ ಎಂದೆಲ್ಲ ತನಿಖೆಗೆ ಮುಂಚಿತವಾಗಿಯೇ ತೀರ್ಮಾನ ಕೊಡತೊಡಗಿದ್ದಾರೆ. ಕಲಬುರ್ಗಿಯವರ, ಹಾಗೂ ಆ ನೆಪದಲ್ಲಿ ಸತ್ಯಶೋಧನೆಯ ಕುರಿತು ಇವರಿಗಿರುವ ಕಾಳಜಿಯ ಸ್ವರೂಪವೇನು? ಇಂಥವರಲ್ಲಿ ಎಷ್ಟು ಜನ ಅವರಿಗಿಂತ ಒಂದು ಕೈ ಮಿಗಿಲಾದ ಸಂಶೋಧಕ ಚಿದಾನಂದ ಮೂರ್ತಿಯವರ ವಿದ್ವತ್ತಿನ ಕುರಿತು, ಅಭಿಪ್ರಾಯದ ಕುರಿತು ಗೌರವವನ್ನು ತೋರಿಸಬಲ್ಲರು? ನಿಜವಾಗಿ ಹೇಳಬೇಕೆಂದರೆ ಇವರಿಗೆಲ್ಲ ಚಿದಾನಂದ ಮೂರ್ತಿಯವರ ವಿಚಾರಗಳ ಕುರಿತು ಆತಂಕಗಳೇ ಇವೆ, ಅವರನ್ನು ಇವರು ಹಿಂದೂ ಮೂಲಭೂತವಾದಿ ಎಂದು ತೀರ್ಮಾನಿಸಿ ಆಗಿದೆ. ಆದರೆ ಚಿದಾನಂದ ಮೂರ್ತಿಯವರೂ ಸಂಶೋಧನೆಗಾಗಿಯೇ ಜೀವನವನ್ನು ಮುಡುಪಿಟ್ಟಿದ್ದಾರೆ.  ಹಾಗಂತ ಇವರೆಲ್ಲ ಚಿದಾನಂದ ಮೂರ್ತಿಗಳ ಸತ್ಯಶೋಧನೆಯ ಸ್ವಾತಂತ್ರ್ಯದ ರಕ್ಷಣೆಗಾಗಿ ಹೋರಾಟ ಮಾಡಬಲ್ಲರೆ? ಬದಲಾಗಿ ಸಂಶೋಧನೆಯ ನಿರ್ಣಯಗಳು ಇಂತಹವರ ರಾಜಕೀಯಕ್ಕೆ ವಿರುದ್ಧವಾಗಿದ್ದರೆ ಯಾವುದೇ ಎಗ್ಗಿಲ್ಲದೆ ಅಂಥ ಸಂಶೋಧಕರನ್ನು ದಮನಿಸಲಿಕ್ಕೂ, ಸಂಶೋಧನಾ ಕೇಂದ್ರಗಳನ್ನೇ ಮುಚ್ಚಿಸಲಿಕ್ಕೂ ಇವರು ಹೋರಾಡಬಲ್ಲರು ಎಂಬುದನ್ನು ಈಗಾಗಲೇ ತೋರಿಸಿದ್ದಾರೆ. ಹಾಗಾಗಿ ಸಂಶೋಧನೆಯ ಸ್ವಾತಂತ್ರ್ಯದ ಕುರಿತು ಇವರಿಗೆ ಇರುವ ಬದ್ಧತೆಯೇ ಪ್ರಶ್ನಾರ್ಹ. ಭಾರತೀಯ ಸಮಾಜ ಮತ್ತು ಸಂಸ್ಕೃತಿಗಳ ಸಂಶೋಧನೆಗೆ ಸಧ್ಯಕ್ಕೆ ಇರಬಹುದಾದ ದೊಡ್ಡ ಶತ್ರುವೆಂದರೆ ಅದು ರಾಜಕೀಯ ಐಡಿಯಾಲಜಿಗಳು. ಅದು ಪ್ರಗತಿಪರ ರೂಪದಲ್ಲೂ ಬರಬಹುದು, ಹಿಂದುತ್ವದ ರೂಪದಲ್ಲೂ ಬರಬಹುದು. ಇದರಿಂದ ಬಚಾವಾಗುವುದು ಸಧ್ಯಕ್ಕೆ ಸಂಶೋಧಕರಿಗಿರುವ ದೊಡ್ಡ ಸವಾಲು.

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: