ಅಂಕಣ: ನವನೀತ
ಕಂತು 45: ರಾಮಾಯಣ ಮಹಾಭಾರತಗಳ ಕುರಿತ ವಿಸ್ಮೃತಿ
ಪ್ರೊ. ರಾಜಾರಾಮ ಹೆಗಡೆ
ರಾಮಾಯಣ ಮಹಾಭಾರತಗಳು ಭಾರತೀಯ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಸಾವಿರಾರು ವರ್ಷಗಳಿಂದ ಬೇರೆ ಬೇರೆ ಭಾಷೆಗಳಲ್ಲಿ ಅವು ಅವತಾರವೆತ್ತಿವೆ. ಗ್ರಾಂಥಿಕ ರೂಪದಲ್ಲಿರಬಹುದು, ಮೌಖಿಕ, ಜಾನಪದ ಕಾವ್ಯ, ಕಥೆಗಳ ರೂಪದಲ್ಲಿರಬಹುದು, ಅವುಗಳನ್ನು ಯಾವುದೇ ಒಂದು ಭಾಷೆ, ಜನ, ಜಾತಿ, ವರ್ಗಗಳಿಗೆ ಸಮೀಕರಿಸುವ ಸಾಧ್ಯತೆಯಂತೂ ಖಂಡಿತಾ ಇಲ್ಲ. ಅವು ಯಾವುದೋ ಒಂದು ವರ್ಗದ ಅಗತ್ಯಕ್ಕಾಗಿ ಕುಳಿತು ಬರೆದ ಗ್ರಂಥಗಳಂತೂ ಅಲ್ಲ. ಪೌರಾಣಿಕ ಪುರುಷರಾದ ವ್ಯಾಸ ವಾಲ್ಮೀಕಿಗಳಿಗೆ ಅವುಗಳ ಕತೃತ್ವವನ್ನು ಆರೋಪಿಸಿದರೂ ಕೂಡ, ಈಗ ಭಾರತದಲ್ಲಿ ಅವು ಹರಡಿಕೊಂಡಿರುವ ರೂಪಗಳು ಸಮಸ್ತ ಭಾರತೀಯರ ಸಮಷ್ಠಿಯ ರಚನೆಗಳು.
ಇಂಥದ್ದೊಂದು ಮಹಾನ್ ಸಂಪ್ರದಾಯವು ಜಗತ್ತಿನ ಬೇರೆ ಯಾವುದೇ ಸಂಸ್ಕೃತಿಗಳಲ್ಲಿ ಇಷ್ಟೊಂದು ಜೀವಂತವಾಗಿ ಇಷ್ಟೊಂದು ದೀರ್ಘಕಾಲ ಬಾಳಿಕೊಂಡು ಬಂದಿರುವುದನ್ನು ನಾವು ಕಾಣೆವು. ಈ ಅಂಶವನ್ನು ಗಮನಿಸಿದಾಗ ಏಕೆ ಇವು ಭಾರತೀಯರಿಗೆ ಮುಖ್ಯ ಎಂದೆನಿಸಿವೆ ಎನ್ನುವ ಪ್ರಶ್ನೆ ಏಳದೇ ಇರದು. ಆದರೆ ಇಂದು ಭಾರತೀಯ ವಿದ್ವಾಂಸರು ರಾಮಾಯಣ ಮಹಾಭಾರತಗಳ ಕುರಿತು ಆಡುತ್ತಿರುವ ಮಾತುಗಳು ಹಾಗೂ ಮಾಡುತ್ತಿರುವ ಸಂಶೋಧನೆಗಳನ್ನು ಗಮನಿಸಿದಾಗ ಇಂಥವರಿಗೆ ಒಂದೋ ಈ ಪ್ರಶ್ನೆ ಎದ್ದಿಲ್ಲ, ಅಥವಾ ಇವುಗಳ ಹೆಸರಿನಲ್ಲಿ ಮತ್ತೇನೋ ಕಾರ್ಯಕ್ರಮವೇ ಮುಖ್ಯವಾಗಿದೆ ಎನ್ನದೇ ವಿಧಿ ಇಲ್ಲ.
ರಾಮಾಯಣ ಮಾಹಾಭಾರತಗಳಲ್ಲಿನ ಕೆಲವು ಘಟನೆಗಳನ್ನು ಜಾತಿ ವ್ಯವಸ್ಥೆಯ ದೌರ್ಜನ್ಯ, ಸ್ತ್ರೀ ಶೋಷಣೆ ಇತ್ಯಾದಿಗಳಿಗೆ ದೃಷ್ಟಾಂತಗಳೆನ್ನುವಂತೆ ಬಿಂಬಿಸುವ ಪರಿಪಾಠ ಆಧುನಿಕ ಕಾಲದಲ್ಲಿ ಬೆಳೆದುಬಂದಿದೆ. ಉದಾಹರಣೆಗೆ ಏಕಲವ್ಯ, ಕರ್ಣ, ಶಂಬೂಕ ವಧೆ, ಸೀತಾ ಪರಿತ್ಯಾಗ, ಅಗ್ನಿಪರೀಕ್ಷೆ, ಇತ್ಯಾದಿಗಳು. ವಸಾಹತು ಕಾಲದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ಪ್ರಚಲಿತದಲ್ಲಿ ಬಂದ ಕೆಲವು ಚಳವಳಿಗಳಿಂದಾಗಿ ಇಂಥ ನಿರೂಪಣೆಗಳು ಬೆಳೆದವು. ಮುಖ್ಯವಾಗಿ ದ್ರಾವಿಡ ಚಳವಳಿಕಾರರು ಇದು ಆರ್ಯ ಆಕ್ರಮಣದ ಕಥೆ ಎಂಬಂತೆ ಚಿತ್ರಿಸಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಆದರೆ ಕುವೆಂಪು ಅವರಿಗೆ ಈ ಕಾವ್ಯಗಳ ಮೇಲೆ ಅಪಾರ ಗೌರವವಿತ್ತು. ರಾಮಾಯಣ ದರ್ಶನದಂಥ ಶ್ರೇಷ್ಠ ಕೃತಿಯನ್ನು ಅವರು ನಮಗೆ ನೀಡಿದ್ದಾರೆ. ಅವರು ದ್ರಾವಿಡ ಚಳವಳಿಯ ಧೋರಣೆಯನ್ನು ಒಪ್ಪಿರಲಿಲ್ಲ. ಆದರೆ ಒಂದು ಪ್ರಗತಿಪರ ಧೋರಣೆಯಿಂದ ಕೆಲವು ಘಟನೆಗಳನ್ನು ಜಾತಿ ವ್ಯವಸ್ಥೆಯ ದೌರ್ಜನ್ಯ ಎಂದು ಚಿತ್ರಿಸಿದ್ದರು.
ಆದರೆ ಇತ್ತೀಚಿನ ತಲೆಮಾರಿನವರಲ್ಲಿ ಕೆಲವರು ರಾಮಾಯಣ ಮಹಾಭಾರತಗಳನ್ನು ಹೀಗಳೆಯುವುದರಿಂದಲೇ ನಮ್ಮ ಸಮಾಜ ಉದ್ಧಾರವಾಗುತ್ತದೆ ಎಂದು ಭದ್ರವಾಗಿ ನಂಬಿಕೊಂಡಂತಿದೆ. ಭಾರತೀಯ ಸಂಸ್ಕೃತಿಯ ಕುರಿತು ವಸಾಹತು ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಸುಳ್ಳುಗಳನ್ನು ಆಧರಿಸಿ ಕಟ್ಟಿಕೊಂಡ ರಾಜಕೀಯದ ಅಧಿಕಾರಬಲವೂ ಇಂಥವರಿಗಿದೆ. ಆದರೆ ಇಂಥ ಪ್ರಗತಿಪರ ವ್ಯಾಖ್ಯಾನಗಳಲ್ಲಿ ಒಂದು ಎಡವಟ್ಟಿದೆ. ಒಂದೆಡೆ ರಾಮಾಯಣ ಮಹಾಭಾರತಗಳು ಕಟ್ಟು ಕಥೆಗಳು, ಐತಿಹಾಸಿಕ ಘಟನೆಗಳಲ್ಲ ಎನ್ನುತ್ತಾರೆ. ನಮ್ಮ ಆಧುನಿಕ ಶಿಕ್ಷಣವೂ ಅದನ್ನೇ ಹೇಳುತ್ತದೆ. ಆದರೆ ಅದೇ ವೇಳೆಗೆ ಈ ಕೃತಿಗಳ ಕೆಲವು ಘಟನೆಗಳು ಐತಿಹಾಸಿಕ ಸತ್ಯಗಳನ್ನು ತಿಳಿಸುತ್ತವೆ ಎಂದು ಆರೋಪಿಸಿ ಕೆಲವು ಜಾತಿಗಳನ್ನು ಗುರಿಯಾಗಿಸಿ ಹೋರಾಡುತ್ತಾರೆ. ಈ ಕೃತಿಗಳೇ ನಡೆದ ಘಟನೆಗಳಲ್ಲ ಅಂತಾದರೆ ಇವರು ತಿಳಿಸುವ ಘಟನೆಗಳು ಮಾತ್ರ ನಿಜ ಹೇಗಾಗುತ್ತವೆ. ಇವು ನಿಜವಾದರೆ ಉಳಿದ ಘಟನೆಗಳೂ ನಿಜವೇಕಲ್ಲ? ಅಂದರೆ ತಮಗೆ ಬೇಕಾದಾಗ ಅವು ನೈಜ ಘಟನೆಗಳು, ಬೇಡಾದಾಗ ಕಟ್ಟು ಕಥೆಗಳು. ಈ ಧೋರಣೆಯೇ ಇಂಥವರ ಬೇಜವಾಬ್ದಾರಿತನವನ್ನು ನಿದರ್ಶಿಸುತ್ತದೆ.
ಇನ್ನು ಮೇಲಿನ ನಿರೂಪಣೆಗಳಿಗೆ ಪ್ರತಿಕ್ರಿಯೆಯಾಗಿ ರಾಮಾಯಣ ಮಹಾಭಾರತಗಳ ಘಟನೆಗಳೆಲ್ಲವೂ ನಿಜವಾಗಿ ನಡೆದವುಗಳು ಎಂಬುದನ್ನು ಸಾಕ್ಷ್ಯಾಧಾರಗಳ ಮೂಲಕ ಸಿದ್ಧಪಡಿಸಲು ಪರಿಶ್ರಮ ಪಡುತ್ತಿರುವವರೂ ಇದ್ದಾರೆ. ಇಂಥ ಸಂಶೋಧನೆಗಳ ಮೂಲಕ ಈ ಕೃತಿಗಳ ಘನತೆಯನ್ನು ಸ್ಥಾಪಿಸಬಹುದು ಎಂಬ ಧೋರಣೆ ಅವರದು. ರಾಮ ಹುಟ್ಟಿದ್ದು ಎಲ್ಲಿ, ಯಾವಾಗ? ಮಹಾಭಾರತ ಯುದ್ಧ ನಡೆದದ್ದು ಎಷ್ಟು ವರ್ಷಗಳ ಹಿಂದೆ, ಇತ್ಯಾದಿಗಳನ್ನು ಕರಾರುವಕ್ಕಾಗಿ ತಿಳಿಸಿದರೆ ಅದು ನಿಜ ಘಟನೆ ಎಂಬುದು ಸಿದ್ಧವಾಗುತ್ತದೆ ಎಂಬುದು ಅವರ ನಂಬಿಕೆ. ನಾಸಾದ ಉಪಗ್ರಹ ಚಿತ್ರಗಳನ್ನು, ಖಗೋಲಶಾಸ್ತ್ರೀಯ ಲೆಕ್ಕಾಚಾರಗಳನ್ನು ಅಳವಡಿಸಿಕೊಂಡರೆ ತಮ್ಮ ನಿರ್ಣಯಕ್ಕೆ ವೈಜ್ಞಾನಿಕತೆ ಪ್ರಾಪ್ತವಾಗುತ್ತದೆ ಎಂದೂ ಅವರು ನಂಬಿದ್ದಾರೆ. ರಾಮಸೇತುವಿನ ಉಪಗ್ರಹ ಚಿತ್ರ, ಘಟೋತ್ಕಚನ ಅಸ್ಥಿಪಂಜರದ ಚಿತ್ರ ಇತ್ಯಾದಿಗಳನ್ನು ಜಾಲತಾಣಗಳಲ್ಲಿ ಆಗಾಗ ಸುತ್ತಾಡಿಸಿ ಅವು ನಿಜವಾಗಿಯೂ ನಡೆದ ಘಟನೆ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ.
ಇನ್ನೂ ಕೆಲವು ಸಮರ್ಥಕರು ಈ ಕೃತಿಗಳಲ್ಲಿ ಬರುವ ವಿವಾದಗ್ರಸ್ತ ಭಾಗಗಳು ಮೂಲ ರಚನೆಗಳೇ ಅಲ್ಲ ಎನ್ನುವ ದಾರಿ ಹಿಡಿಯುತ್ತಾರೆ. ಇತ್ತೀಚೆಗೆ ಒಬ್ಬರು ‘ರಾಮಾಯಣದ ಉತ್ತರ ಕಾಂಡವನ್ನು ಬೌದ್ಧರು ಬರೆದು ಸೇರಿಸಿದ್ದು’ ಎಂದು ನನಗೆ ತಿಳಿಸಿದರು. ಏಕೆಂದರೆ ಉತ್ತರ ಕಾಂಡದಲ್ಲಿ ರಾಮನು ಸೀತೆಯನ್ನು ಅರಣ್ಯಕ್ಕೆ ಕಳುಹಿಸಿದ ಹಾಗೂ ಶಂಬೂಕ ವಧೆ ಮಾಡಿದ ಪ್ರಕರಣಗಳು ಬರುತ್ತವೆ. ಆದರೆ ನಮ್ಮ ಮಹಾಕಾವ್ಯಗಳ ಘನತೆಯನ್ನು ರಕ್ಷಿಸಲು ವಿವಾದಗ್ರಸ್ತವಾದ ಭಾಗಗಳನ್ನೆಲ್ಲ ಈ ರೀತಿ ಅಕ್ರಮ ಗೊಳಿಸುತ್ತ ಸಾಗಿದರೆ ಕೊನೆಗೆ ಏನೂ ಉಳಿಯದಿರುವ ಸಾಧ್ಯತೆಯೂ ಇದೆ. ಇನ್ನೂ ಕೆಲವು ಮಡಿವಂತರು ರಾಮಾಯಣ ಮಹಾಭಾರತಗಳ ಬಹುರೂಪೀ ಸಂಪ್ರದಾಯಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಏಕೆಂದರೆ ಅವುಗಳ ಜಾನಪದ ರೂಪಗಳಲ್ಲಿ ಇವರಿಗೆ ಅಪಥ್ಯವಾದ ಘಟನೆಗಳು ಸೇರಿಕೊಂಡಿರುತ್ತವೆ. ಹಾಗಾಗಿ ವಾಲ್ಮೀಕಿ, ವಶಿಷ್ಠರ ಕೃತಿಗಳು ಶುದ್ಧರೂಪಗಳು, ಉಳಿದವೆಲ್ಲ ಭ್ರಷ್ಟ ರೂಪಗಳು ಎಂದು ಅವನ್ನು ಅಕ್ರಮಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣವು ಮಹತ್ವಗಳಿಸುವುದೇ ಈ ಬಹುತ್ವದಿಂದ ಎಂಬುದನ್ನು ಅರಿಯಲು ಸೋಲುತ್ತಾರೆ.
ರಾಮಾಯಣ ಮಹಾಭಾರತಗಳನ್ನು ದಾಟಿಸಿಕೊಂಡು ಬಂದ ಸಾವಿರಾರು ವರ್ಷಗಳ ಪರಂಪರೆಯು ಅವುಗಳ ಲೌಕಿಕ ಸತ್ಯ ಸುಳ್ಳುಗಳ ಕುರಿತು ಯಾವುದೇ ಚರ್ಚೆಯನ್ನೂ ಮಾಡುವುದಿಲ್ಲ. ಇಂಥ ಚರ್ಚೆಗಳು ಅವಕ್ಕೆ ನಿಷ್ಪ್ರಯೋಜಕ. ಅವುಗಳು ಸತ್ಯವೆ ಸುಳ್ಳೆ ಎಂಬ ಚರ್ಚೆಯನ್ನು ಹುಟ್ಟುಹಾಕಿದವರು ಪಾಶ್ಚಾತ್ಯರು. ಪಾಶ್ಚಾತ್ಯರಿಗೆ ಗತಕಾಲದ ಘಟನೆಗಳು ಸತ್ಯವಾಗಿದ್ದರೆ ಮಾತ್ರ ಅವು ಪ್ರಯೋಜಕ ಎಂಬ ಧೋರಣೆಯಿದೆ. ಅವುಗಳ ಪಾಠಾಂತರಗಳಲ್ಲಿ ಸೇರ್ಪಡೆಯಾದ ಪ್ರಕ್ಷಿಪ್ತ ಭಾಗಗಳನ್ನು ಗುರುತಿಸಿ ತೊಡೆದು ಮೂಲ ಶುದ್ಧ ಕೃತಿಗಳನ್ನು ಸಂಪಾದಿಸುವ ಕಾರ್ಯಕ್ರಮವನ್ನೂ ಅವರೇ ಪ್ರಾರಂಭಿಸಿದ್ದು. ಜೊತೆಗೇ ಭಾರತೀಯರು ನೈಜ ಘಟನೆಗಳನ್ನು ಅಜ್ಞಾನದಿಂದಲೋ, ದುರುದ್ದೇಶದಿಂದಲೋ ಮರೆಮಾಚಿ ಕಥೆಗಳ ರೂಪದಲ್ಲಿ ತಿಳಿಸಿದ್ದಾರೆ ಎಂಬ ಧೋರಣೆ ಕೂಡ ಪಾಶ್ಚಾತ್ಯರಿಗಿತ್ತು. ಹಾಗೂ ಭಾರತೀಯರಿಗೆ ನಿಜವಾದ ಗತಕಾಲವನ್ನು ದಾಖಲಿಸುವ ತಿಳಿವಳಿಕೆ ಇಲ್ಲ ಎಂದು ತೀರ್ಮಾನಿಸಿದರು. ತದನಂತರ ಭಾರತದಲ್ಲಿ ಈ ಕೃತಿಗಳ ಕುರಿತು ನಡೆದ ಆಧುನಿಕ ಅಧ್ಯಯನಗಳೆಲ್ಲವೂ ಪಾಶ್ಚಾತ್ಯರ ಇಂಥ ಗ್ರಹಿಕೆಗಳ ಮುಂದುವರಿದ ರೂಪಗಳೇ ಆಗಿವೆ. ಈ ಮೇಲೆ ಉಲ್ಲೇಖಿಸಿದ ಎಲ್ಲರೂ ಪಾಶ್ಚಾತ್ಯರದೇ ಧೋರಣೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇಂಥ ಆಧುನಿಕ ಧೋರಣೆಗಳಿಂದಾಗಿ ಇಂದು ಈ ಕೃತಿಗಳ ಕುರಿತು ವಿದ್ಯಾವಂತರಲ್ಲಿ ಒಂದು ವಿಸ್ಮೃತಿ ಆವರಿಸಿದೆ. ಇವರೆಲ್ಲ ಕೆಲವು ಸರಳವಾದ ಪ್ರಶ್ನೆಗಳನ್ನು ಕೇಳಿಕೊಳ್ಳಲಿ: ಮಹಾಭಾರತ ಹಾಗೂ ರಾಮಾಯಣಗಳನ್ನು ಭಾರತೀಯರು ಏಕೆ ಸಾವಿರಾರು ವರ್ಷಗಳಿಂದ ಕಥಿಸಿಕೊಂಡು, ದಾಟಿಸಿಕೊಂಡು ಬಂದಿದ್ದಾರೆ? ಏಕೆ ಅವು ನಿರ್ಧಿಷ್ಟ ಭಾಷೆ, ಪ್ರದೇಶ, ಜಾತಿ, ಮತಗಳ ಸ್ಮೃತಿಗೆ ಮಾತ್ರ ಸೀಮಿತವಾಗಿಲ್ಲ? ಅವನ್ನು ನಮ್ಮ ರಾಜಕೀಯಕ್ಕೆ ಬಳಸಿಕೊಂಡು ಬೀಸಾಕುವುದಷ್ಟೇ ನಮ್ಮ ಕೆಲಸವೆ? ಅವುಗಳ ಕಾಲವನ್ನು ಕಂಡುಹಿಡಿದರೆ, ಅವು ಸತ್ಯ ಘಟನೆ ಎಂದು ಸಿದ್ಧಮಾಡಿದರೆ ಅಥವಾ ಅವುಗಳ ಮೂಲರೂಪವನ್ನು ಕಂಡುಹಿಡಿದರೆ ಈ ಕೃತಿಗಳು ಏನು ಹೇಳುತ್ತಿವೆ ಎಂಬುದು ಗೊತ್ತಾಗಿ ಬಿಡುತ್ತದೆಯೆ? ಅವುಗಳ ಮಹತ್ವವನ್ನು ರಕ್ಷಿಸಲು ಯತ್ನಿಸುವವರಂತೂ ಈ ಕೊನೆಯ ಪ್ರಶ್ನೆಗೆ ಉತ್ತರಿಸಿಕೊಳ್ಳುವ ಅಗತ್ಯವಿದೆ.
ಇತ್ತೀಚಿನ ಟಿಪ್ಪಣಿಗಳು