ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 46: ಇಂಥವರು ಯಾವ ಸೀಮೆಯ ವಿಚಾರವಂತರಯ್ಯ?

ಪ್ರೊ. ರಾಜಾರಾಮ ಹೆಗಡೆ 

ಇತ್ತೀಚೆಗೆ ಭಗವಾನ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ ಹಾಗೂ ಆ ಪ್ರಶಸ್ತಿಯನ್ನು ವಾಪಸು ತೆಗೆದುಕೊಳ್ಳಬೇಕು ಎಂಬುದಾಗಿ  ಫೇಸ್ಬುಕ್ಕಿನಲ್ಲಿ ಸಹಿ ಚಳವಳಿ ನಡೆಯುತ್ತಿದೆ. ಇದನ್ನು ಟೀಕಿಸಿ ಪ್ರತಿಪಕ್ಷದವರು ಇದು ಹಿಂದೂ ಮೂಲಭೂತವಾದಿಗಳ ಅಟ್ಟಹಾಸ ಎಂಬುದಾಗಿ ವರ್ಣಿಸುತ್ತಿದ್ದಾರೆ. ಇದು ವೈಚಾರಿಕ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನ ಎಂಬಂತೆ ಕೂಡ ವರ್ಣಿಸಲಾಗುತ್ತಿದೆ. ಕಲಬುರ್ಗಿಯವರ ಹತ್ಯೆಯ ದಿನದಿಂದಲೇ ಆ ಹತ್ಯೆಯನ್ನು ನಡೆಸಿದವರು ಹಿಂದೂ ಮೂಲಭೂತವಾದಿಗಳೇ ಎಂಬುದಾಗಿ ಪ್ರಗತಿಪರ ಬುದ್ಧಿಜೀವಿಗಳಲ್ಲಿ ಕೆಲವರು ಒಕ್ಕೊರಲಿನಿಂದ ಸಾರುತ್ತಿರುವ ಸಂದರ್ಭದಲ್ಲೇ ಈ ವಿರೋಧ ಪ್ರಾರಂಭವಾಗಿದೆ. ಈ ಎರಡೂ ಘಟನೆಗಳನ್ನೂ ಜೋಡಿಸಿ ಮೂಲಭೂತವಾದಿಗಳಿಂದ ಪ್ರಗತಿಪರ ವೈಚಾರಿಕ ಸ್ವಾತಂತ್ರ್ಯಕ್ಕೇ ಧಕ್ಕೆ ಬರುತ್ತಿದೆ ಎಂಬುದಾಗಿ ಕೂಡ ಈ ಘಟನೆಯನ್ನು ವಿಚಾರವಾದಿಗಳು ಗ್ರಹಿಸುತ್ತಿದ್ದಾರೆ.

 ಇಂಥ ಸನ್ನಿವೇಶಗಳು ಹೊಸದಿರಬಹುದು, ಆದರೆ ಇವುಗಳಲ್ಲಿ ಒಂದು ಹಳೆತನವಿದೆ. ಅದೆಂದರೆ ಒಂದು ಗುಂಪು ಮುಕ್ತವಾಗಿ, ನಿಷ್ಠುರವಾಗಿ ಹಿಂದೂ ಸಮಾಜ ಹಾಗೂ ಸಂಪ್ರದಾಯಗಳ ಕುರಿತು ಅವಹೇಳನೆಯನ್ನು ಮಾಡುವುದು ಹಾಗೂ ಮತ್ತೊಂದು ಗುಂಪು ಅದನ್ನು ವಿರೋಧಿಸುವುದು. ಅವಹೇಳನೆಯನ್ನು ಮಾಡುವವರನ್ನು ಬೆಂಬಲಿಸುವವರು ಸ್ವಾತಂತ್ರ್ಯ ರಕ್ಷಕರ ವರ್ಗಕ್ಕೆ ಸೇರುತ್ತಾರೆ, ಅವರನ್ನು ವಿರೋಧಿಸುವವರು   ಫ್ಯಾಸಿಸಂ ಅಥವಾ ಮೂಲಭೂತವಾದ ಎಂಬ ಕೆಟಗರಿಗೆ ಸೇರುತ್ತಾರೆ. ಇಂಥ ಸನ್ನಿವೇಶಗಳನ್ನು ಪದೇ ಪದೇ ನೋಡಿದವರಿಗೆ ಒಂದೆಡೆ ಅಭಿಪ್ರಾಯ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವವರೂ ಮತ್ತೊಂದೆಡೆ  ಅವರನ್ನು ಹತ್ತಿಕ್ಕಲು ಫ್ಯಾಸಿಸ್ಟ್ಗಳೂ ಸದಾ ಹೋರಾಡುತ್ತಿರುವಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ಆಳುವ ಸರ್ಕಾರಗಳು ಕೂಡ ಈ ಕಥೆಯನ್ನು ನಂಬಿಕೊಂಡಿರುವಂತೆ ಕಾಣುತ್ತದೆ. ಹಾಗಾಗಿ ಒಬ್ಬರ ವಿಚಾರವನ್ನು ರಕ್ಷಿಸುವುದೂ ಮತ್ತೊಬ್ಬರ ವಿಚಾರವನ್ನು ದಮನಿಸುವುದೂ ಅದಕ್ಕೆ ಸಕ್ರಮವಾಗಿ, ಪ್ರಜಾ ಪ್ರಭುತ್ವದ ಕಾರ್ಯಕ್ರಮವಾಗಿ ಕಾಣಿಸುತ್ತದೆ. ಆದರೆ ಮತ್ತೊಂದು ಪಕ್ಷದವರಿಗೆ ಅದೊಂದು ನಿರ್ಲಜ್ಜ, ಅನೀತಿಯುತ ಸಮರ್ಥನೆಯಾಗಿ ಕಾಣಿಸುತ್ತದೆ.

 ಭಗವಾನ್ ಅವರಿಗೆ ನೀಡಿದ ಗೌರವ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಿ ಎಂದು ಒತ್ತಾಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ನನಗೂ ಇದೆ. ಅದು ತೀರ್ಪುಗಾರರ ದೃಷ್ಟಿಕೋನಕ್ಕೆ ಬಿಟ್ಟದ್ದು. ಆದರೆ ನಾವಿಲ್ಲಿ ಪರಿಶೀಲಿಸಬೇಕಾದ ಮುಖ್ಯ ವಿಷಯ ಮತ್ತೊಂದಿದೆ. ಈ ವಿರೋಧವು ಏನನ್ನು ಸೂಚಿಸುತ್ತಿದೆ? ಹಿಂದೂ ಮೂಲಭೂತವಾದವನ್ನೆ? ಈ ಗುಂಪಿನ ಮುಂಚೂಣಿಯಲ್ಲಿ ನಿಂತು ಚಳವಳಿ ನಡೆಸುತ್ತಿರುವವರೆಲ್ಲರೂ ನನಗೆ ಗೊತ್ತಿರುವವರೇ.  ಭಗವಾನ್ ಅಂಥವರಿಗೆ ಹೋಲಿಸಿದರೆ ಇವರು ತಿಳಿವಳಿಕೆಯುಳ್ಳವರೂ, ತರ್ಕಬದ್ಧವಾಗಿಯೂ, ಪರಾಮರ್ಶನೆಯ ಸಾಮಥ್ರ್ಯವುಳ್ಳವರೂ ಆಗಿ ನನಗೆ ಕಾಣಿಸುತ್ತಾರೆ. ಅವರಲ್ಲಿ ಕೆಲವರ ಬರಹಗಳನ್ನು ಓದಿದ್ದೇನೆ. ಬಹುಶಃ ನನಗೆ ಇವರು ಭವಿಷ್ಯದಲ್ಲಿ ಕನ್ನಡದ ಉತ್ತಮ ಬರೆಹಗಾರರಾಗಿ ಕೂಡ ಕಾಣುತ್ತಾರೆ. ಇವರು ನಿಲುಮೆ ಬ್ಲಾಗಿನಲ್ಲಿ ಮಂಡಿಸುವ ಲೇಖನಗಳು ಹೊಸತನದಿಂದ ಕೂಡಿದ್ದು ಭರವಸೆ ಮೂಡಿಸುವಂತಿವೆ. ನನಗೆ ಇವರು ಕುರುಡು ಹಿಂದೂ ವಾದಿಗಳಂತೆ, ಜಾತಿ ವಾದಿಗಳಂತೆ ಕಾಣಿಸುವುದಿಲ್ಲ. ಇವರು ಸಮಾಜ ಚಿಂತಕರಾಗಿ ನನಗೆ ಕಾಣಿಸುತ್ತಾರೆ. ಇಂಥ ಯುವಕರು ಏಕೆ ಇಷ್ಟು ಉಗ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ? ಎಂಬ ಪ್ರಶ್ನೆಯನ್ನು ಹಿಂದೂ ಮೂಲಭೂತವಾದ ಎಂಬ ಹಣೆಪಟ್ಟಿ ಹಚ್ಚಿ  ಅಕ್ರಮಗೊಳಿಸುವ ಪ್ರಯತ್ನದಲ್ಲೇ ನನಗೆ ಎಡವಟ್ಟು ಕಾಣಿಸುತ್ತಿದೆ.

 ಇವರು ಹೇಳುತ್ತಿರುವುದೇನು? ಹಿಂದೂ ದೇವತೆಗಳ ಹಾಗೂ ಗ್ರಂಥಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಭಗವಾನ್ ಅವರನ್ನು ಸರ್ಕಾರವು ಬೆಂಬಲಿಸುತ್ತಿದೆ. ಇವರ ಆರೋಪಗಳನ್ನು ಕೇಳಿರಿ: ಈ ವಿಚಾರವಾದಿಗಳು ಹಿಂದೂ ಸಂಸ್ಕೃತಿಯ ವಿರೋಧಿಗಳು, ಅಲ್ಪಸಂಖ್ಯಾತರ ಕುರಿತು  ಅನುಕಂಪ ಉಳ್ಳವರು, ಇವರು ಇಂಥ ಕೆಲಸ ಮಾಡಿದ್ದಕ್ಕೆ ಸರ್ಕಾರದಿಂದ ಸನ್ಮಾನಗಳೂ, ಸವಲತ್ತುಗಳೂ ಸಿಗುತ್ತವೆ. ಈ ವಿರೋಧ, ಟೀಕೆ ಈಗ ಎದ್ದಿರುವುದಲ್ಲ ಹಾಗೂ ಆಧಾರವಿಲ್ಲದೇ ಎದ್ದಿರುವುದೂ ಅಲ್ಲ.  ನಿಜವಾಗಿ ನೋಡಿದರೆ ಇದು  ನಮ್ಮ ಸರ್ಕಾರವು ಸೆಕ್ಯುಲರಿಸಂ ಹಾಗೂ ಪ್ರಗತಿಯ ಕಲ್ಪನೆಯನ್ನು ಅನುಷ್ಠಾನಗೊಳಿಸುತ್ತ ಬಂದ ವೈಖರಿಗೆ ಸಂಬಂಧಿಸಿದೆ. ನಮ್ಮ ಸಮಾಜದ ಒಳಿತಿನ ಕುರಿತು ವಿಭಿನ್ನ, ವಿರುದ್ಧ ನೆಲೆಯಲ್ಲಿ ಚಿಂತಿಸುವವರು ಇದ್ದಾರೆ. ಪ್ರಜಾಪ್ರಭುತ್ವದ ಕರ್ತವ್ಯವೆಂದರೆ ಸಮಾಜದಲ್ಲಿ ಇಂಥ ಚಿಂತಕರ ಸಂವಾದಕ್ಕೆ ಅನುವುಮಾಡಿಕೊಟ್ಟು ಸಾಮಾಜಿಕ ಚಿಂತನೆ ಬೆಳೆಯಲು ಪ್ರೋತ್ಸಾಹಿಸುವುದೇ ಹೊರತೂ ಅವರಲ್ಲಿ ಒಂದು ಪಕ್ಷವನ್ನು ಬೆಂಬಲಿಸಿ ಮತ್ತೊಂದನ್ನು ದಮನಿಸುವುದಲ್ಲ.  ಸಂಪ್ರದಾಯಗಳ ಪರವಾಗಿ ಮಾತನಾಡುವವರು ಚಿಂತಕರಲ್ಲವೆ? ಅವರಿಗೆ ಸಾಮಾಜಿಕ ಕಾಳಜಿಗಳಿರುವುದಿಲ್ಲವೆ? ಮಾನವೀಯತೆ ಎಂಬುದು ಒಂದು ವರ್ಗದ ವಿಚಾರವಂತರ ಸೊತ್ತೆ?

 ಆದರೆ ಸ್ವಾತಂತ್ರ್ಯಾನಂತರದ ಭಾರತೀಯ ಪ್ರಭುತ್ವ ಹಾಗೂ ಅದನ್ನು ಪ್ರತಿನಿಧಿಸುವ ಬುದ್ಧಿಜೀವಿಗಳು ಸಂಪ್ರದಾಯಗಳ ಜೊತೆಗೆ ಇಂಥ ಸಂವಾದಗಳನ್ನು ಪೋಷಿಸಿಕೊಂಡು ಬಂದಿದ್ದಾರೆಯೆ? ಸಂವಾದಗಳನ್ನು ಬೆಳೆಸುವಲ್ಲಿ ಸಂಪ್ರದಾಯಗಳ ಪರವಾಗಿ ನಿಂತವರೂ ವಿಫಲರಾಗಿದ್ದಾರೆ ಎಂಬುದೂ ಈ ಸತ್ಯದ ಮತ್ತೊಂದು ಮುಖ. ಅಂದರೆ ಒಂದು ನಿರ್ದಿಷ್ಟ ದೃಷ್ಟಿಕೋನದ ವಿಚಾರಗಳು ಇದುವರೆಗೂ ಆಳ್ವಿಕೆ ನಡೆಸುತ್ತ ಬಂದಿವೆ. ಅಂಥ ವಿಚಾರವಂತರಿಗೆ ನಮ್ಮ ಸಮಾಜದ  ಸಂಪ್ರದಾಯಗಳ ಕುರಿತು ಮಾತನಾಡುವ ಏಕಸ್ವಾಮ್ಯತೆಯನ್ನು ನಮ್ಮ ಸೆಕ್ಯುಲರ್ ಸರ್ಕಾರವು ದಯಪಾಲಿಸಿದೆ. ಏಕೆ ಹೀಗೆ ಎಂಬ ಪ್ರಶ್ನೆಯನ್ನು ಇವರು ಒಂದಿಲ್ಲೊಂದು ದಿನ ಉತ್ತರಿಸಲೇ ಬೇಕಾಗುತ್ತದೆ. ಒಂದು ಪಕ್ಷ ಇವರು ಎಲ್ಲರ ಒಳ್ಳೆಯದಕ್ಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬುದೇ ಹೌದಾಗಿದ್ದರೆ ನಾನು ಇದನ್ನು ಸರಿ ಎಂದು ಒಪ್ಪಿಕೊಳ್ಳುತ್ತೇನೆ. ಇಂಥ ಮಾತುಗಳಿಗೂ ನಮ್ಮ ಸಮಾಜದ ಉದ್ಧಾರಕ್ಕೂ ಏನಾದರೂ ಸಂಬಂಧವಿದೆಯೆ? ಇದ್ದರೆ ಅದನ್ನು ವ್ಯವಸ್ಥಿತವಾಗಿ, ಇಂದಿನ ಸಮಾಜ ವಿಜ್ಞಾನದ ಸಿದ್ಧಾಂತಗಳು ಹಾಗೂ ಪರಿಭಾಷೆಯಲ್ಲಿ ನಿದರ್ಶಿಸಿ ತೋರಿಸಿ. ಯಾವುದೋ ಕಾಲದ ಅಡುಗೂಲಜ್ಜಿಯ ಕಥೆಗಳನ್ನು ಸತ್ಯ ಎಂದು ಹೇಳಬೇಡಿ.

 ತಮ್ಮದೇ ಪುರಾಣಗಳನ್ನು, ದೇವತೆಗಳನ್ನು, ಆಚರಣೆಗಳನ್ನು ವಿಮರ್ಶಿಸುವ, ಹಾಸ್ಯ ಮಾಡುವ ಪರಿಪಾಠ ಹಿಂದೂ ಸಂಪ್ರದಾಯಗಳಿಗೆ ಹೊಸದಲ್ಲ. ಅದೇ ರೀತಿ ತಮ್ಮನ್ನು ಟೀಕಿಸುವ ಅನ್ಯ ಸಂಪ್ರದಾಯಗಳ ಜೊತೆಗೆ ಶಾಂತಿಯುತ ಸಹಬಾಳ್ವೆ ನಡೆಸುವುದೂ  ಹೊಸದಲ್ಲ. ಇಂಥದ್ದೊಂದು ಸಂಸ್ಕೃತಿಯನ್ನು ರೂಪಿಸಿದ್ದೇ ನಮ್ಮ ಪುರಾಣಗಳು, ದೇವತೆಗಳು ಹಾಗೂ ಆಚರಣೆಗಳು. ಆದರೆ ಅವುಗಳನ್ನು ಜೀವನದ ಕಲಿಕೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ವಿವೇಕವನ್ನು ಇಂದಿನ ವಿದ್ಯಾವಂತರು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಸೆಕ್ಯುಲರ್ ಚಿಂತನೆಯ ಪಾತ್ರ ಎಷ್ಟಿದೆ? ಭಗವಾನ್ ಅವರಂಥ ಪ್ರಭುತ್ವ ಪೋಷಿತ ವಿಚಾರವಾದಿಗಳ ಪಾತ್ರ ಎಷ್ಟಿದೆ? ಎಂಬ ಕುರಿತು ಅವಲೋಕನದ ಅಗತ್ಯವಿದೆ. ಸಂಪ್ರದಾಯಗಳ ಮೇಲಿನ ಈ ಹಲ್ಲೆಯನ್ನು ವಿರೋಧಿಸಿದವರೆಲ್ಲಾ ಮೂಲಭೂತವಾದಿಗಳು ಎಂದು ಹಣೆಪಟ್ಟಿಹಚ್ಚುವುದು ರಾಜಕೀಯಕ್ಕೆ ಅನುಕೂಲವೇ ಹೊರತೂ ಈ ಸಮಸ್ಯೆಯ ಪರಿಹಾರಕ್ಕಲ್ಲ. ಅದು ಸಮಸ್ಯೆಯು ಉಲ್ಭಣಿಸುವಂತೆ ಮಾಡುತ್ತದೆ ಎಂಬುದು ನಮ್ಮ ಪ್ರಜಾ ಪ್ರಭುತ್ವದ ಕಳೆದ 66 ವರ್ಷಗಳ ಇತಿಹಾಸ ತೋರಿಸುತ್ತದೆ.

 ಇಂದು ನಮ್ಮ ಸಂಪ್ರದಾಯಗಳ ಕುರಿತು ಪ್ರಚೋದನಾಕಾರಿಯಾಗಿ ಮಾತನಾಡುವವರ  ವಿಚಾರಗಳು ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಭಾರತದ ಕುರಿತು ಕಟ್ಟಿಕೊಟ್ಟ ತಪ್ಪು ಚಿತ್ರಣಗಳನ್ನು ಅವಲಂಬಿಸಿವೆ. ಹಾಗಾಗಿ ತಾವು ಸತ್ಯ ಹೇಳುತ್ತಿದ್ದೇವೆ, ಸಮಾಜದ ಒಳಿತಿಗಾಗಿ ಹೇಳುತ್ತಿದ್ದೇವೆ ಎನ್ನುವ ಮಾತುಗಳಿಗೆ ಅರ್ಥವಿಲ್ಲ. ಸಮಾಜದ ಕುರಿತ ಅವರ ಗ್ರಹಿಕೆಯೇ ಸರಿಯಿಲ್ಲದಿದ್ದ ಮೇಲೆ  ಅವರ ಮಾತಿಗೇನು ಬೆಲೆ? ಇಂದು ಸಮಾಜ ವಿಜ್ಞಾನದಲ್ಲಿ ಚರ್ಚೆಗಳು, ಸಿದ್ಧಾಂತಗಳು, ಗ್ರಹಿಕೆಗಳು ಸಂಪೂರ್ಣ ಬದಲಾಗಿವೆ. ಹಿಂದೂ ರಿಲಿಜನ್,  ಆರ್ಯ-ದ್ರಾವಿಡ ಜನಾಂಗ, ಜಾತಿವ್ಯವಸ್ಥೆ, ಬ್ರಾಹ್ಮಣ ಪುರೋಹಿತಶಾಹಿ, ಇತ್ಯಾದಿಗಳೆಲ್ಲ ವಸಾಹತು ಕಾಲದ ಮಿಥ್ಯೆಗಳು. ಇವರು  ವಿಚಾರವಂತರೇ ಆಗಬೇಕೆಂದಿದ್ದರೆ ಇಂಥ ಹೊಸ ವಿಚಾರಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ.  ಅದಿಲ್ಲದಿದ್ದರೆ ಇವರು ಯಾವ ಸೀಮೆ ವಿಚಾರವಂತರು ಎಂಬುದಾಗಿ ನಿಜವಾದ ವಿಚಾರವಂತರು ಪ್ರಶ್ನಿಸಿಯೇ ಪ್ರಶ್ನಿಸುತ್ತಾರೆ. ವೈಚಾರಿಕ ಮೌಢ್ಯವನ್ನು ಪೋಷಿಸುವ ಸರ್ಕಾರದ ವಿರುದ್ಧವೂ ಪ್ರತಿಭಟಿಸುತ್ತಾರೆ. ತಿಳಿದುಕೊಳ್ಳದೇ ಮಾತನಾಡುವವರದು ವೈಚಾರಿಕ ಸ್ವಾತಂತ್ರ್ಯವಾಗುತ್ತದೆಯಾದರೆ ತಿಳಿದು ಮಾತನಾಡುವವರದು ಏಕಲ್ಲ?

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: