ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 47: ಕೆಲವು ಅರ್ಥವಾಗದ ಸಾಂಸ್ಕೃತಿಕ ಚರ್ಚೆಗಳು

ಪ್ರೊ. ರಾಜಾರಾಮ ಹೆಗಡೆ 

  ಇಂದಿನ ಕೆಲವು ಚರ್ಚೆಗಳ ವರಸೆ ಹೀಗಿದೆ: ಒಂದೆಡೆ ನಾವು ಜಾಗತೀಕರಣವನ್ನು ತಡೆಯಬೇಕು ಏಕೆಂದರೆ ನಮ್ಮ ಪಾರಂಪರಿಕ ಜೀವನಕ್ರಮವನ್ನು ಅದು ನಾಶಮಾಡಿಬಿಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಾಗೆ ಹೇಳುವವರೇ ಮತ್ತೊಂದೆಡೆ ನಮ್ಮ ಪಾರಂಪರಿಕ ಜೀವನಕ್ರಮವೇ ಸರಿಯಿಲ್ಲ, ಅದು ಜಾತಿ ವ್ಯವಸ್ಥೆ, ಪುರೋಹಿತಶಾಹಿ ಹಾಗೂ ಮೂಢನಂಬಿಕೆಗಳಿಂದ ತುಂಬಿದೆ ಎಂದೂ ಹೇಳುತ್ತಾರೆ. ಹಾಗಾದರೆ ಅವರು ಬಯಸುವ ಪಾರಂಪರಿಕ ಜೀವನಕ್ರಮದ ಸ್ವರೂಪವೇನು ಎಂಬುದನ್ನು ಯಾರೂ ಸ್ಪಷ್ಟಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದಕ್ಕೆ ವಿವರಣೆಯನ್ನು ನೀಡಲು ಬಯಸುವವರಲ್ಲಿ ಕೆಲವರು ಗಾಂಧೀಜಿಯವರನ್ನು ಆಧರಿಸುತ್ತಾರೆ. ಅವರ ಸರಳ ಹಾಗೂ ಸ್ವಾವಲಂಬನೆಯ ಜೀವನ ಕಲ್ಪನೆ, ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಇಟ್ಟುಕೊಂಡು ವಿವರಿಸುತ್ತಾರೆ. ಆದರೆ ಉಳಿದವರು ಇಂಥ ಪರ್ಯಾಯಗಳನ್ನೇನೂ ಸೂಚಿಸುವುದಿಲ್ಲ. ಇಂಥವರಲ್ಲಿ ಅಂಥ ಬದುಕನ್ನು ಕೂಡ ನಾವು ನೋಡುವುದಿಲ್ಲ. ಹಾಗಾಗಿ ಇವರು ನಿರ್ಧಿಷ್ಟವಾಗಿ ಯಾವ ಪಾರಂಪರಿಕ ಜೀವನ ಪದ್ಧತಿಯನ್ನು ಉದ್ದೇಶಿಸಿದ್ದಾರೆ ಎನ್ನುವುದು ನಮಗೆ ಅರ್ಥವಾಗದೇ ಹೋಗುತ್ತದೆ.

  ಅದೇ ರೀತಿ ಒಂದೆಡೆ ನಮ್ಮ ಜಾನಪದ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿಕೊಳ್ಳಬೇಕು ಏಕೆಂದರೆ ಅವುಗಳಲ್ಲೇ ನಮ್ಮ ಉಜ್ವಲ ಹಾಗೂ ಶ್ರೀಮಂತ ದೇಸೀ ಸಂಸ್ಕೃತಿ ಉಳಿದುಕೊಂಡು ಬಂದಿದೆ ಎನ್ನಲಾಗುತ್ತದೆ, ಮತ್ತೊಂದೆಡೆ ಈ ಕಲೆಗಳನ್ನು ಪ್ರರ್ದಶಿಸುವವರ ಸಾಂಪ್ರದಾಯಿಕ ಜೀವನಕ್ರಮವನ್ನು ಬದಲಾಯಿಸಬೇಕು ಅವು ಮೂಢನಂಬಿಕೆ ಹಾಗೂ ಶೋಷಣೆಯ ಪ್ರತೀಕ ಎಂದೂ ಹೇಳಲಾಗುತ್ತದೆ. ಶೋಷಣೆಯ ಪ್ರತೀಕವಾದ ಕಲೆಯನ್ನು ಏಕೆ ರಕ್ಷಿಸಿಕೊಂಡು ಬರಬೇಕು ಎಂಬುದಕ್ಕೆ ವಿವರಣೆಗಳಿಲ್ಲ ಅಥವಾ ಅವರ ಜೀವನಕ್ರಮವನ್ನು ಬದಲಾಯಿಸಿದರೆ ಅವರ ಕಲೆ ಉಳಿದುಕೊಂಡು ಬರುವುದು ಹೇಗೆ ಎನ್ನುವುದರ ಕುರಿತು ಚಿಂತನೆಗಳಿಲ್ಲ. ಉದಾಹರಣೆಗೆ ಭೂತಕೋಲ, ನಾಗಮಂಡಲ, ಇತ್ಯಾದಿಗಳು. ಒಂದು ರೀತಿಯಲ್ಲಿ ನೋಡಿದರೆ ಭಾರತೀಯ ಜಾನಪದ ಕಲೆ ಎಂದು ಯಾವುದನ್ನು ಕರೆಯಲಾಗುತ್ತದೆಯೋ ಅದು ಭಾರತೀಯರ ಸಾಂಪ್ರದಾಯಿಕ ಜೀವನ ಕ್ರಮ. ಕೆಲವರು ಅವುಗಳನ್ನು ಸಂಸ್ಕೃತ, ಬ್ರಾಹ್ಮಣ, ಪಾಶ್ಚಾತ್ಯ ಮುಂತಾದ ಬಾಹ್ಯ ಪ್ರಭಾವಗಳಿಂದ ರಕ್ಷಿಸಬೇಕೆನ್ನುತ್ತಾರೆ. ಏಕೆಂದರೆ ಈ ಕಲೆಗಳಲ್ಲಿ ಶೋಷಣೆಯ ವ್ಯವಸ್ಥೆಗೆ ವಿದ್ರೋಹ, ಬಂಡಾಯ, ಕ್ರಾಂತಿ, ಪ್ರತಿಸಂಸ್ಕೃತಿ ಇತ್ಯಾದಿಗಳು ದಾಖಲಾಗಿವೆ ಎನ್ನುತ್ತಾರೆ. ಈ ಜಾನಪದರ ಜೀವನ ಕ್ರಮವೇ ಬದಲಾದಾಗ ಸಾಂಪ್ರದಾಯಿಕ ಶೋಷಣೆಗಳೂ ನಿಂತುಹೋಗುತ್ತವೆ. ಶೋಷಣೆಯೇ ನಿಂತುಹೋದ ಮೇಲೆ ಬಂಡಾಯದ ಅಗತ್ಯವಾದರೂ ಏನು? ಅಥವಾ ಅದನ್ನು ರಕ್ಷಿಸುವ ಈ ಕಲಾ ಪ್ರಕಾರಗಳ ಪ್ರಸ್ತುತತೆಯಾದರೂ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ.

  ಈ ಮೇಲಿನ ಚರ್ಚೆಗಳು ಅವಿದ್ಯಾವಂತರದಲ್ಲ ಅಥವಾ ಸಂಪ್ರದಾಯಗಳ ಪರವಾಗಿ ವಾದಿಸುವವರದಲ್ಲ.  ಪ್ರಗತಿಪರ ವಾದಗಳನ್ನು ಒಪ್ಪಿಕೊಂಡವರದ್ದು. ಮುಖ್ಯವಾಗಿ ರಾಷ್ಟ್ರ, ಭಾಷೆ, ಜಾತಿ, ಉಪಜಾತಿ, ಜನಾಂಗ ಇತ್ಯಾದಿ ಗುರುತುಗಳ ರಾಜಕೀಯವು ನಮಗಿಂದು ನಿರ್ಣಾಯಕವಾಗಿದೆ. ಅದರ ಜೊತೆಗೇ ಇದಕ್ಕೊಂದು ಶೈಕ್ಷಣಿಕ ಹಾಗೂ ಆಧುನಿಕ ಆಯಾಮವೂ ಇದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾನಪದ ಅಧ್ಯಯನ, ಇತಿಹಾಸ, ಪ್ರಾಕ್ತನಶಾಸ್ತ್ರ, ಸಂಸ್ಕೃತಿ ಅಧ್ಯಯನ, ಮಾನವಶಾಸ್ತ್ರ ಇತ್ಯಾದಿ ವಿಷಯಗಳು ಕಳೆದ ಹಲವಾರು ದಶಕಗಳಿಂದ ಬೋಧನೆ ಹಾಗೂ ಸಂಶೋಧನೆಯ ವಿಷಯವಾಗಿವೆ. ಅಂದರೆ ನಮ್ಮ ಸಾಂಪ್ರದಾಯಿಕ ಕಲೆ ಹಾಗೂ ಆಚರಣೆಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸುತ್ತ ಅವು ಆಧುನಿಕ ಜೀವನದ ಒಂದು ಭಾಗವಾಗಿಯೂ, ವಿದ್ಯಾವಂತರ ಹೊಟ್ಟೆಪಾಡಿನ ಒಂದು ಭಾಗವಾಗಿಯೂ ಪರಿವರ್ತಿತವಾಗಿವೆ. ನಮ್ಮ ಆಧುನಿಕ ರಾಷ್ಟ್ರ ಪ್ರಭುತ್ವಕ್ಕೆ ಸಂಸ್ಕೃತಿಯೊಂದು ಮಂತ್ರದಂಡವಿದ್ದಂತೆ. ಅದು ಕೇವಲ ಸಂಪ್ರದಾಯವಾದಿಗಳಿಗೆ ಮಾತ್ರವಲ್ಲ, ಪ್ರಗತಿಪರರಿಗೂ ಅಷ್ಟೇ ಮುಖ್ಯವಾಗಿದೆ. ಉದಾಹರಣೆಗೆ ಹಿಂದುತ್ವವಷ್ಟೇ ಅಲ್ಲ,  ಅದನ್ನು ವಿರೋಧಿಸುವ ಸೆಕ್ಯುಲರ್ವಾದಿಗಳೂ ಕೂಡ ತಮ್ಮ ವಿಮೋಚನಾ ಹೋರಾಟಗಳ ಗುರುತಿನ ರಾಜಕೀಯಕ್ಕೆ ಜಾನಪದ ಸಂಸ್ಕೃತಿ, ಜಾತಿ, ಬುಡಕಟ್ಟು ಸಂಸ್ಕೃತಿ, ಕೃಷಿ ಸಂಸ್ಕೃತಿ, ಉಪಸಂಸ್ಕೃತಿ, ನೆಲಮೂಲ ಸಂಸ್ಕೃತಿ, ಇತ್ಯಾದಿ ಪರಿಭಾಷೆಗಳೆಲ್ಲ ಮುಖ್ಯ ಎಂದು ಭಾವಿಸಿದ್ದಾರೆ. ಹೀಗೆ ಜಾತಿವಿನಾಶ ಹಾಗೂ ಸಂಪ್ರದಾಯಗಳಿಂದ ವಿಮೋಚನೆಯನ್ನು ಪ್ರತಿಪಾದಿಸುವವರಿಗೆ ಕೂಡ ಆ ಕೆಲಸಕ್ಕೆ ಸಂಸ್ಕೃತಿಯ ಅಧ್ಯಯನ ಮುಖ್ಯ ಎನ್ನಿಸುತ್ತದೆ.

  ಆದರೆ ಪ್ರಗತಿಪರರ ಸಂದರ್ಭದಲ್ಲಿ ಇದೊಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಇವರೆಲ್ಲ ಸಂಸ್ಕೃತಿ ಎಂದು ಏನನ್ನು ಕರೆಯುತ್ತಾರೆ? ಇಂದು ಸಂಸ್ಕೃತಿಗಳ ಕುರಿತ ಪುಸ್ತಕಗಳನ್ನು ಗಮನಿಸಿ. ಅಲ್ಲಿರುವ ವಿಭಿನ್ನ ಅಧ್ಯಾಯಗಳು ಜನಸಮುದಾಯಗಳ ವೇಷಭೂಷಣ, ವಾಸ್ತು, ದೇವತೆಗಳು, ಪುರಾಣಗಳು, ಕಥೆ-ಹಾಡುಗಳು, ಹಬ್ಬಗಳು, ರೂಢಿಗಳು, ಕಟ್ಟಳೆಗಳು, ಮದುವೆ, ಅಂತ್ಯಸಂಸ್ಕಾರ, ಇತ್ಯಾದಿಗಳ ಕುರಿತು ವರ್ಣಿಸುತ್ತಿರುತ್ತವೆ. ಇಂಥ ಜಾತಿಗಳಿಂದ ಬಂದ ಪ್ರಗತಿಪರರಲ್ಲಿ ಇವುಗಳಲ್ಲಿ ಯಾವುದೊಂದಾದರೂ ಹಾಗೇ ಉಳಿದುಕೊಂಡು ಬರಬೇಕು ಎನ್ನುವ ಆಕರಾಸ್ಥೆ ಇರಲಿಕ್ಕೆ ಸಾಧ್ಯವಿಲ್ಲ. ಇವೆಲ್ಲವುಗಳಿಂದ ಹೊರಬರುವುದೇ ಅವರಿಗೆ ಜಾತಿಯಿಂದ ಹೊರಬರುವುದಕ್ಕೆ ಸಾಧನ. ಅಂಥ ಸಂದರ್ಭದಲ್ಲಿ ಜಾಗತೀಕರಣದಿಂದ ಸಂಸ್ಕೃತಿ, ಪಾರಂಪರಿಕ ಜೀವನಕ್ರಮ ನಾಶವಾಗುತ್ತದೆ ಎಂದು ಅವರು ಆತಂಕ ಪಡುತ್ತಿರುವಾಗ ಮತ್ತೇನು ಉಳಿದುಕೊಳ್ಳಬೇಕೆಂದು ಆಶಿಸುತ್ತಾರೆ? ಇವರು ಸಂಸ್ಕೃತಿಗೆ ಕೊಡುವ ರೂಪವನ್ನು ಗಮನದಲ್ಲಿಟ್ಟುಕೊಂಡರೆ ಒಂದು ಜಾತಿಯ ಈ ಮೇಲಿನ ಆಚರಣೆಗಳೆಲ್ಲ ನಾಶವಾದ ಮೇಲೆಯೂ ಸಂಸ್ಕೃತಿ ಎಂಬುದು ಉಳಿದುಕೊಳ್ಳಲಿಕ್ಕೆ ಸಾಧ್ಯವೆ? ಹಾಗಾಗಿ ನಮಗೆ ಅವರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲ.

  ಇದಕ್ಕಿಂತಲೂ ವಿಚಿತ್ರವೊಂದಿದೆ. ಒಂದೆಡೆ ಇವರೆಲ್ಲ ಸೆಕ್ಯುಲರ್ವಾದಿಗಳಾಗಿ ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯೇ ಅದರ ಸೆಕ್ಯುಲರ್ ಎಳೆಗಳನ್ನು ಬಲಪಡಿಸಿದೆ ಹಾಗಾಗಿ ಕೋಮು ಸೌಹಾರ್ದಕ್ಕಾಗಿ ಅದನ್ನು ಉಳಿಸಿಕೊಂಡು ಬರಬೇಕೆನ್ನುತ್ತಾರೆ. ಆ ಕಾರಣದಿಂದ ಹಿಂದುತ್ವವಾದಿಗಳು ಭಾರತೀಯ ಸಂಸ್ಕೃತಿಯನ್ನು ಹಿಂದೂ ಎಂಬ ಏಕಾಕೃತಿಗೆ ಇಳಿಸುತ್ತಿದ್ದಾರೆ, ಅದು ಅಪಾಯಕಾರಿ ಎನ್ನುತ್ತಾರೆ. ಆದರೆ ಅದೇ ವೇಳೆಗೆ ಇವರೇ ಪ್ರಗತಿಪರರಾಗಿ ಮಾತನಾಡುವಾಗ ಭಾರತದಲ್ಲಿರುವ ಜಾತಿ ಮತಗಳ ಭೇದಗಳೆಲ್ಲ ಅಳಿದು ಎಲ್ಲರೂ ಒಂದಾಗಬೇಕೆನ್ನುತ್ತಾರೆ, ಹಾಗೂ ಹಿಂದುತ್ವವಾದವೆಂಬುದು ಭಾರತೀಯ ಸಮಾಜವನ್ನು ಜಾತಿಗಳ ತರತಮಗಳಲ್ಲಿ ಒಡೆಯುವ ಪುರೋಹಿತಶಾಹಿಯ ಹುನ್ನಾರ ಎಂದೂ ಹೇಳುತ್ತಾರೆ. ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಎಂದರೆ ನಮಗೆ ಪುಸ್ತಕಗಳಲ್ಲಿ ಸಿಗುವ ಚಿತ್ರಣಗಳೇನು? ವಿಭಿನ್ನ ಪೂಜಾ ಪಂಥಗಳು, ಸಂಪ್ರದಾಯಗಳು, ಜಾತಿ, ಬುಡಕಟ್ಟು ಹಾಗೂ ಪ್ರಾದೇಶಿಕ ಸಂಪ್ರದಾಯಗಳನ್ನು ಆಧರಿಸಿದ ವಿಭಿನ್ನ ವೇಷಭೂಷಣ, ಆಹಾರ, ಆಚರಣೆ ಹಾಗೂ ಜೀವನ ಪದ್ಧತಿಗಳು. ಬಹು ಸಂಸ್ಕೃತಿಯೆಂದರೆ ಇದೇ ಆಗಿದ್ದಲ್ಲಿ ಭಾರತೀಯ ಸಮಾಜವು ಜಾತಿಮತಗಳಾಗಿ ಒಡೆದುಕೊಳ್ಳದೇ ಇದರ ಬಹುತ್ವ ಮತ್ತೆ ಹೇಗೆ ಸಿದ್ಧಿಸುತ್ತದೆ ಎಂಬುದನ್ನು ವಿವರಿಸುವುದಿಲ್ಲ. ಅದಕ್ಕಿಂತಲೂ, ಅವರೇ ತಿಳಿಸುವಂತೆ ಅದೇ ಕೆಲಸವನ್ನು ಮಾಡಿದ ಪುರೋಹಿತಶಾಹಿಯು ಸೆಕ್ಯುಲರ್ವಾದಿಯೇಕಲ್ಲ ಎನ್ನುವುದೂ ತಿಳಿಯುವುದಿಲ್ಲ.

  ಇಂಥ ಹೇಳಿಕೆಗಳನ್ನೆಲ್ಲ ಒಬ್ಬ ವ್ಯಕ್ತಿಯೇ ವಿಭಿನ್ನ ಸಂದರ್ಭಗಳಲ್ಲಿ ಮಾಡುತ್ತಿರುತ್ತಾನೆ. ಇದಕ್ಕೆ ಮುಂದಿನ ಕಾರಣಗಳಿರಬಹುದು: 1) ಅಂಥವರಿಗೆ ನಮ್ಮ ಸಂಸ್ಕೃತಿಯಲ್ಲೂ ಏನೋ ವಿಶೇಷತೆ ಹಾಗೂ ಸದ್ಗುಣಗಳು ಇವೆ ಅದನ್ನು ಕಳೆದುಕೊಳ್ಳಬಾರದು ಎನ್ನಿಸುತ್ತದೆ, ಆದರೆ ವಿಷಯವನ್ನು ಸುಸಂಗತವಾಗಿ, ತರ್ಕಬದ್ಧವಾಗಿ ಮಂಡಿಸಲು ಸಾಧ್ಯವಾಗುತ್ತಿಲ್ಲ. 2) ಅಥವಾ ಭಾರತೀಯ ಸಂಸ್ಕೃತಿಯ  ಕುರಿತು ಪಾಶ್ಚಾತ್ಯ ಚಿಂತನೆಯ ಭಿನ್ನ ಚೌಕಟ್ಟುಗಳು ಹಾಗೂ ಧೋರಣೆಗಳು ಭಿನ್ನ ಚಿತ್ರಣಗಳನ್ನು ನೀಡಿವೆ. ಅವು ಮೂಲತಃ ಒಂದಕ್ಕೊಂದು ತಾಳೆಯಾಗುವುದಿಲ್ಲ, ಹಾಗೂ ಭಾರತೀಯ ವಾಸ್ತವಕ್ಕೂ ತಾಳೆಯಾಗುವುದಿಲ್ಲ, ಹಾಗಾಗಿ ಅಸ್ಪಷ್ಟವಾಗಿವೆ. ಅವುಗಳ ಹಿನ್ನೆಲೆಯನ್ನು ಅರಿಯದೇ ಅನುಕೂಲ ಕಂಡಲ್ಲಿ ಬಳಸಿಕೊಂಡಾಗ ಇಂಥ ಅಸಂಬದ್ಧತೆ ಹುಟ್ಟಬಹುದು. ಒಂದು ವಿಶೇಷವೆಂದರೆ ಸಂಸ್ಕೃತಿ ಮತ್ತು ಸಮಾಜದ ಕುರಿತು ತರ್ಕಬದ್ಧವಾಗಿ ಚಿಂತನೆ ನಡೆಸಬೇಕು ಎನ್ನುವವರನ್ನು ಲೇವಡಿ ಮಾಡುವ ಪೃವೃತ್ತಿ ಇಂಥವರಲ್ಲಿ ಮನೆಮಾಡಿದೆ. ತರ್ಕಬದ್ಧವಾಗಿ ಮಾತನಾಡುವುದು ‘ಶುಷ್ಕ ಪಾಂಡಿತ್ಯ’ ‘ಒಣ ತರ್ಕ’ ಎಂದೆಲ್ಲ ಟೀಕಿಸಿ ಅದು ಒಂದು ದೋಷ ಎಂಬ ಧೋರಣೆಯನ್ನು ಕೂಡ ಇವರು ಗಟ್ಟಿಮಾಡುತ್ತಿದ್ದಾರೆ. ಆದರೆ ಇಂಥ ಧೋರಣೆಯ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ  ಇವು  ಮೂರು ಉದಾಹರಣೆಗಳು ಅಷ್ಟೆ.

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: