ಅಂಕಣ: ನವನೀತ
ಕಂತು 48: ಅಹಂಕಾರ ಹಾಗೂ ಹೊಟ್ಟೆಪಾಡಿಗೆ ಮಾಡಿದ್ದು ಸೇವೆಯೆ?
ಪ್ರೊ. ರಾಜಾರಾಮ ಹೆಗಡೆ
ಇಂದು ಸಮಾಜಸೇವೆ ಎಂಬ ಶಬ್ದಕ್ಕೆ ವಿಶೇಷ ಮಹತ್ವವು ಪ್ರಾಪ್ತಿಯಾಗಿದೆ. ಅದೊಂದು ಉದಾತ್ತ ಕೆಲಸವಾಗಿದ್ದು ವ್ಯಕ್ತಿಯೊಬ್ಬನ ಆದರ್ಶವಾಗಿದೆ. ಸಮಾಜ ಸೇವೆ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮಹಾತ್ಮಾ ಗಾಂಧೀಜಿ, ಮದರ್ ಥೆರೆಸಾ, ವಿನೋಬಾ ಭಾವೆ, ಅಣ್ಣಾ ಹಜಾರೆ, ಮುಂತಾದ ಅನೇಕರು ಕಣ್ಮುಂದೆ ಬರುತ್ತಾರೆ. ಸೇವೆ ಎಂದರೇನು? ಸಮಾಜದಲ್ಲಿ ದೀನ ದಲಿತರು, ಬಡತನ, ರೋಗ, ಇತ್ಯಾದಿಗಳಿಂದ ಪೀಡಿತರು ಇರುತ್ತಾರೆ. ಅವರಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷಧ, ಶೂಶ್ರೂಷೆ, ಇತ್ಯಾದಿಗಳನ್ನು ಒದಗಿಸುವ ಮೂಲಕ ಅವರನ್ನು ಅಂಥ ಬಾಧೆಗಳಿಂದ ಹೊರತರುವುದೇ ಸೇವೆಯಾಗುತ್ತದೆ. ನಮ್ಮಲ್ಲಿ ಅನೇಕ ಮಹಾತ್ಮರು ತಮ್ಮ ಜೀವಮಾನವನ್ನು ಪರರಿಗೆ ಇಂಥ ಸೇವೆಯನ್ನು ನೀಡಲಿಕ್ಕಾಗಿಯೇ ಮೀಸಲಾಗಿಟ್ಟಿದ್ದು ಕಂಡುಬರುತ್ತದೆ.
ಈ ಸೇವೆ ಕೇವಲ ವ್ಯಕ್ತಿಗಳ ಮಟ್ಟದಲ್ಲಿ ಮಾತ್ರ ಇರುವುದಿಲ್ಲ. ಕೆಲವೊಮ್ಮೆ ಸಾರ್ವಜನಿಕ ಕೆಲಸಗಳೂ, ಸಾಮುದಾಯಿಕ ಕೆಲಸಗಳೂ ಇದರ ಪರಿಧಿಗೆ ಬರುತ್ತವೆ. ಉದಾಹರಣೆಗೆ ಗಾಂಧೀಜಿಯವರ ಹರಿಜನೋದ್ಧಾರ ಕಾರ್ಯಕ್ರಮ. ವಿಭಿನ್ನ ಬುಡಕಟ್ಟು ಸಮಾಜಗಳ ಅಭಿವೃದ್ಧಿ ನಡೆಸುವ ವ್ಯಕ್ತಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳನ್ನೂ ಇಂದು ಕಾಣಬಹುದು. ಅಂದರೆ ವ್ಯಕ್ತಿಯೊಬ್ಬನು ತನ್ನ ಸ್ವಾರ್ಥಕ್ಕಲ್ಲದೇ ಪರರಿಗೆ ಮಾಡುವ ಸಾರ್ವಜನಿಕ ಕೆಲಸಗಳೆಲ್ಲವೂ ಈ ಸೇವೆಯ ಪರಿಧಿಗೆ ಬರುತ್ತವೆ. ಒಂದರ್ಥದಲ್ಲಿ ಸ್ವಾರ್ಥರಹಿತ ಕೆಲಸಗಳೆಲ್ಲವೂ ಈ ಸೇವೆಯ ಪಟ್ಟಿಗೆ ಬರುತ್ತವೆ. ನಮ್ಮ ಮಕ್ಕಳಿಗೆ ಇಂಥ ಸೇವಾ ಮನೋಭಾವವನ್ನು ಬೆಳೆಸಲಿಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ ಎಂಬ ಕಾರ್ಯಕ್ರಮವನ್ನು ಕೂಡ ಉನ್ನತ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲಾಗಿದೆ. ನಮ್ಮಲ್ಲಿ ದೇಶಸೇವೆ ಎಂಬ ಕಲ್ಪನೆಯೂ ನೆಲೆಯೂರಿದೆ. ಅಂದರೆ ದೇಶಕ್ಕಾಗಿ ವ್ಯಕ್ತಿಯೊಬ್ಬನು ಸ್ವಾರ್ಥರಹಿತವಾಗಿ ಕೆಲಸ ಮಾಡುವುದು.
ಈ ಸೇವೆಯ ಕುರಿತು ನಾನು ಇದುವರೆಗೆ ಹೇಳಿರುವುದರಲ್ಲಿ ಓದುಗರಿಗೇನೂ ಸಮಸ್ಯೆ ಏಳದು. ಆದರೆ ಮುಂದಿನ ಉದಾಹರಣೆಗಳನ್ನು ನೋಡಿ: ಸರ್ಕಾರಿ ನೌಕರನು ಸರ್ಕಾರಿ ಸೇವೆಯಲ್ಲಿದ್ದರೆ ಖಾಸಗಿಯವರ ಕೆಳಗೆ ದುಡಿಯುವವನು ಖಾಸಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಇವರಿಬ್ಬರೂ ಸಂಬಳ ತೆಗೆದುಕೊಂಡು(ಸಾಧ್ಯವಾದರೆ ಗಿಂಬಳವನ್ನೂ ಸಂಪಾದಿಸಿ), ತಮ್ಮ ಭಡ್ತಿಗಾಗಿ, ವೇತನ ಹೆಚ್ಚಳಕ್ಕಾಗಿ ಹೋರಾಡುತ್ತ ಕೂಡ ಸೇವೆ ಮಾಡಬಲ್ಲರು. ನಮ್ಮ ರಾಜಕಾರಣಿಗಳಲ್ಲಿ ಬಹುತೇಕರು ದೇಶವನ್ನೇ ಕೊಳ್ಳೆಹೊಡೆಯುತ್ತಿರುವ ಜನಸೇವಕರೇ. ನಮ್ಮ ಖಾಸಗಿ ಶಿಕ್ಷಣ ಸಂಸ್ಥೆಗಳು (ಅವುಗಳಲ್ಲಿ ಮಠಗಳೂ ಬರುತ್ತವೆ) ವಿದ್ಯಾರ್ಥಿಗಳಿಂದ ಅಂದಾದುಂದಿ ಶುಲ್ಕ ವಸೂಲುಮಾಡಿ ಶಿಕ್ಷಣ ಸೇವೆ ಮಾಡುತ್ತವೆ. ಇದೇ ರೀತಿ ನಮ್ಮ ಘನ ಸರ್ಕಾರದ ಸಂಚಾರ ಸೇವೆ, ಅಂಚೆ ಸೇವೆ, ಆರೋಗ್ಯ ಸೇವೆ, ಇತ್ಯಾದಿಗಳೆಲ್ಲ ಎಲ್ಲರಿಗೂ ಗೊತ್ತು. ನಾಗರಿಕರ ಹಣವನ್ನು ದೋಚಿಕೊಂಡವರು ನಾಗರಿಕ ಸೇವಾ ಅಧಿಕಾರಿಗಳಾಗುತ್ತಾರೆ. ಇಲ್ಲೆಲ್ಲ ಎಲ್ಲರೂ ಸಂಬಳ, ಗಿಂಬಳ ಇತ್ಯಾದಿಗಳನ್ನು ತೆಗೆದುಕೊಂಡೂ, ‘ಸೇವಾ ಶುಲ್ಕ’ವನ್ನು ವಸೂಲುಮಾಡಿಯೂ ಸೇವೆಯನ್ನೇ ಮಾಡುತ್ತಾರೆ. ‘ಸೇವಾ ನಿವೃತ್ತಿ’ ಹೊಂದಿದಮೇಲೆ ಈ ಘನಕಾರ್ಯಕ್ಕೆ ಪಿಂಚಣಿಯೂ ಸಿಗುತ್ತದೆ. ಎಲ್ಲ ಸೇವೆಯೂ ಹೀಗೇ ಎಂದು ಭಾವಿಸಬೇಡಿ, ಕೆಲವೆಡೆ ‘ಉಚಿತ ಸೇವೆ’ಗಳೂ ಇವೆ!
ಅಂದರೆ ಇಂದು ನಾವು ಬದುಕುತ್ತಿರುವ ಜಗತ್ತಿನಲ್ಲಿ ದುಡ್ಡುತೆಗೆದುಕೊಂಡು ಮಾಡುವ ಕೆಲಸಗಳನ್ನೂ ಸೇವೆ ಎನ್ನಲು ತೊಂದರೆ ಇಲ್ಲ. ಆದರೂ ಕೂಡ ಭಾರತೀಯರಿಗೆ ಇವೆಲ್ಲ ಸೇವೆಗಳು ಎಂಬುದನ್ನು ಒಪ್ಪಲು ಕಷ್ಟವಾಗುತ್ತದೆ, ಏಕೆಂದರೆ ನಮ್ಮ ಪ್ರಕಾರ ಪ್ರತಿಫಲವನ್ನು ಬಯಸದೇ ಮಾಡುವುದೇ ಸೇವೆ. ಏಕೆಂದರೆ ಇದುವರೆಗೆ ಉಲ್ಲೇಖಿಸಿದ ಉದಾಹರಣೆಗಳಲ್ಲಿ ಇಂಗ್ಲೀಷಿನ ಸರ್ವಿಸ್ ಎಂಬ ಶಬ್ದವನ್ನು ಸೇವೆ ಎಂದು ಭಾಷಾಂತರಿಸಲಾಗಿದೆ ಎಂಬುದನ್ನು ಗಮನಿಸಬೇಕು. ನಮ್ಮ ಸಂಪ್ರದಾಯಗಳಲ್ಲಿ ಸೇವೆಯ ಕಲ್ಪನೆಯೇ ಬೇರೆ, ಇಂದು ಪ್ರಚಲಿತದಲ್ಲಿ ಇರುವ ಸರ್ವಿಸ್ ಕಲ್ಪನೆಯೇ ಬೇರೆ. ಸರ್ವಿಸ್ ಸೆಕ್ಟರ್ ಅಥವಾ ಸೇವಾ ವಲಯ ಎಂದರೆ ಅಗತ್ಯ ಪರಿಣತಿಯನ್ನು ಸಮಾಜಕ್ಕೆ ‘ಒದಗಿಸುವ’, ‘ನೀಡುವ’ ಉದ್ಯೋಗಗಳು ಎಂಬ ಅರ್ಥ ಬರುತ್ತದೆ. ಹಾಗೂ ಅದು ಉಚಿತವಾಗಿರಬೇಕಾದ್ದಿಲ್ಲ. ಆದರೆ ಸೋಶಿಯಲ್ ಸರ್ವಿಸ್ ಎಂಬ ನಿರ್ಧಿಷ್ಟ ಶಬ್ದವು ಸಮಾಜಕ್ಕಾಗಿ ನಿಸ್ವಾರ್ಥದಿಂದ ಕೆಲಸ ಮಾಡುವುದು ಎಂಬ ನಿರ್ದಿಷ್ಟಾರ್ಥವನ್ನೇ ಹೊಂದಿದೆ. ಅಂದರೆ ಸರ್ವಿಸ್ ಎನ್ನುವುದು ಎರಡೂ ಸಂದರ್ಭದಲ್ಲೂ ಬಳಕೆಯಾಗಬಲ್ಲದು.
ಸರ್ವಿಸ್ ಎಂಬುದು ಅನ್ಯರ ಅಗತ್ಯವನ್ನು ಪೂರೈಸುವ ಕೆಲಸ. ಹಾಗಾಗಿ ಅದು ಅನ್ಯರಿಗೆ ಮಾಡುವ ಸಹಾಯ ಅಥವಾ ಉಪಕಾರ. ಕ್ರೈಸ್ತರ ನಂಬಿಕೆಯ ಪ್ರಕಾರ ಗಾಡ್ನನ್ನು ಸೇರಲು ರಿಲಿಜನ್ನಿನ ಮಾರ್ಗದಲ್ಲಿ ನಡೆಯಬೇಕು. ಆದರೆ ಬಡತನವೇ ಮುಂತಾದ ಐಹಿಕ ಕೊರತೆಗಳ ರೂಪದಲ್ಲಿ ಒಂದಷ್ಟು ಜನರು ಡೆವಿಲ್ಲನ ವಶರಾಗಿ ಪತಿತರಾಗುತ್ತಾರೆ. ಅವರಿಗೆ ಆ ಕೊರತೆಗಳನ್ನು ತುಂಬಿಸಿಕೊಟ್ಟು ಅವರನ್ನು ಸತ್ಯಮಾರ್ಗಕ್ಕೆ ಪರಿವರ್ತಿಸುವುದು ಕ್ರೈಸ್ತನೊಬ್ಬನ ನೈತಿಕ ಕರ್ತವ್ಯ ಎಂಬ ನಂಬಿಕೆ ಕೂಡ ಇತ್ತು. ಹಾಗಾಗಿ ಮಿಶನರಿ ಚಟುವಟಿಕೆಗಳಲ್ಲಿ ಸರ್ವಿಸ್ ಎಂಬುದು ಪ್ರಾಧಾನ್ಯತೆ ಪಡೆಯಿತು. ಆಧುನಿಕ ಪ್ರಭುತ್ವಗಳಲ್ಲಿ ಸಮಾಜದಲ್ಲಿರುವ ವಿಭಿನ್ನ ದುರ್ಬಲರ ಕೊರತೆಗಳನ್ನು ನೀಗಿಸಿ ಅವರನ್ನು ಅಭಿವೃದ್ಧಿ ಪಥದಲ್ಲಿ ಹಚ್ಚುವುದು ಸೋಶಿಯಲ್ ಸರ್ವಿಸ್ನ ಲಕ್ಷಣವಾಗಿದೆ. ಹಾಗಾಗಿ ಇಂಥ ಸೋಶಿಯಲ್ ಸರ್ವಿಸ್ನಲ್ಲಿ ಆಹಾರ, ಶಿಕ್ಷಣ, ಆರೋಗ್ಯ, ಜೀವನ ಸೌಕರ್ಯ ಇತ್ಯಾದಿಗಳನ್ನು ಒದಗಿಸುವುದು ಆದ್ಯತೆ ಪಡೆದಿದೆ. ಪ್ರಭುತ್ವವೇ ಇಂಥ ಸರ್ವಿಸ್ಗಳನ್ನು ನಡೆಸುವ ಹೊಣೆಗಾರಿಕೆ ಹೊತ್ತುಕೊಂಡಿರುತ್ತದೆ, ಇಲ್ಲ ಸ್ವಯಂಸೇವಾ ಸಂಸ್ಥೆಗಳು ಅದನ್ನು ಮಾಡುತ್ತವೆ. ಇವುಗಳ ನೌಕರರು ಸಂಬಳ ಪಡೆದೂ ಸೇವೆ ಮಾಡುವುದು ಹೀಗೆ. ಸಮಾಜಸೇವೆ, ದೇಶಸೇವೆ ಎನ್ನುವ ಶಬ್ದಗಳು ಈ ಹಿನ್ನೆಲೆಯಿಂದ ಮಾತ್ರವೇ ಅರ್ಥಪಡೆದುಕೊಳ್ಳಬಲ್ಲವು.
ಆದರೆ ಭಾರತೀಯ ಸಂಸ್ಕೃತಿಯಲ್ಲಿ ಸೇವೆ ಎನ್ನುವ ಶಬ್ದವು ಬೇರೆಯದನ್ನೇ ಸೂಚಿಸುತ್ತಿದೆ. ಭಾರತದಲ್ಲಿ ಸೇವೆ ಎಂದರೆ ಭಗವಂತನನ್ನು ಕಾಣಲಿಕ್ಕೆ, ಜ್ಞಾನಕ್ಕೆ ಒಂದು ಮಾರ್ಗ ಎಂದು ತಿಳಿಯಲಾಗಿದೆ. ಹರಿಸೇವೆ, ಗುರುಸೇವೆ, ಇತ್ಯಾದಿಗಳೆಲ್ಲ ಈ ಅರ್ಥದಲ್ಲಿ ಬಳಕೆಯಾಗುತ್ತವೆ. ಅಂದರೆ ಅಹಂಕಾರವನ್ನು ಕಳೆದುಕೊಂಡು ಅವರ ಅನುಗ್ರಹವನ್ನು ಪಡೆಯುವ ಕೆಲಸ. ಅನುಗ್ರಹವು ಜ್ಞಾನದ ರೂಪದಲ್ಲಿ ಬರುತ್ತದೆ. ಇಂಥ ಮಾರ್ಗವನ್ನು ಅನುಸರಿಸುವವರು ಭಕ್ತರು, ದಾಸರು, ಶರಣರು, ಅಂತೆಲ್ಲ ಕರೆಸಿಕೊಳ್ಳುತ್ತಾರೆ. ಸರ್ವಭೂತಗಳಲ್ಲೂ ಪರಮಾತ್ಮನನ್ನು ಕಾಣುವ ಇವರು ಅವೆಲ್ಲವನ್ನೂ ಪರಮಾತ್ಮನೇ ಎಂದು ಭಾವಿಸಿ ಸೇವಿಸುವ ಮೂಲಕ ತಮ್ಮ ಮುಕ್ತಿಯನ್ನು ಅರಸುತ್ತಾರೆ. ಈ ಕುರಿತು ಸ್ವಾಮಿ ವಿವೇಕಾನಂದರು ಕೆಲವು ಒಳನೋಟಗಳನ್ನು ನೀಡುತ್ತಾರೆ. ಅವರ ಪ್ರಕಾರ ಬೇರೆಯವರಿಗೆ ನಮ್ಮ ಸೇವೆಯ ಅಗತ್ಯವಿದೆ, ನಾವು ಅವರಿಗೆ ಅದನ್ನು ನೀಡಿ ಉಪಕಾರ ಮಾಡುತ್ತೇವೆ ಎನ್ನುವುದು ಸೇವೆ ಆಗಲಾರದು. ಯಾರಾದರೂ ಆ ಭಾವನೆಯಿಂದ ಸೇವೆ ಮಾಡಿದರೆ ಉಳಿದವರಿಗೆ ನಾನೇನೂ ಕೊಟ್ಟಿದ್ದೇನೆ ಎಂಬ ಅಹಂಕಾರ ಬೆಳೆಯುತ್ತದೆ. ಅಂದರೆ ಅನ್ಯರಿಗೆ ಉಪಕಾರ ಮಾಡುತ್ತಿದ್ದೇನೆ ಎಂದು ಭಾವಿಸಿಕೊಂಡರೆ ಸೇವೆಯ ಉದ್ದೇಶವೇ ವಿಫಲವಾಗುತ್ತದೆ. ಯಾರಿಗೂ ನಿಮ್ಮ ಸೇವೆಯ ಅಗತ್ಯವಿಲ್ಲ, ಅದರ ಅಗತ್ಯ ನಿಮಗೇ ಇದೆ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಪ್ರತಿಯೊಂದು ಜೀವಿಗಳಲ್ಲಿಯೂ ಪರಮಾತ್ಮ ಇದ್ದಾನೆ, ಅವನ ಇಚ್ಛೆಯಂತೇ ನಾವು ಇಲ್ಲಿದ್ದೇವೆ, ಅವನನ್ನು ಸೇವೆ ಮಾಡುವುದೆಂದರೆ ಅವನನ್ನು ಪೂಜಿಸುವುದು, ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು ಇದೊಂದು ಮಾರ್ಗ. ಅನ್ಯರಿಗೆ ಸಹಾಯ ಮಾಡಲು ಸೇವೆ ಮಾಡುತ್ತೇವೆ ಎನ್ನುವುದು ಈಶ್ವರ ನಿಂದೆಯಾಗುತ್ತದೆ. ವಿವೇಕಾನಂದರು ಸೋಶಿಯಲ್ ಸರ್ವಿಸ್ ಎನ್ನುವುದರ ಅರ್ಥವನ್ನು ಭಾರತೀಯ ಸಂದರ್ಭದಲ್ಲಿ ಹೀಗೆ ಬದಲಾಯಿಸುತ್ತಾರೆ.
ಹಾಗಾದರೆ ಭಾರತೀಯರಲ್ಲಿ ಸಮಾಜಸೇವೆಯ ಕಲ್ಪನೆಯೇ ಇರಲಿಲ್ಲವೆ? ಆ ಅಗತ್ಯವನ್ನು ಪೂರೈಸಲಿಕ್ಕೆ ಧರ್ಮಕಾರ್ಯಗಳು ಇದ್ದವು. ಭೂತದಯೆ, ಪರೋಪಕಾರ, ಅನ್ನದಾನ, ವಿದ್ಯಾದಾನ ಇತ್ಯಾದಿ ವಿವಿಧ ದಾನಗಳು, ಕೆರೆ, ಕಾಲುವೆ ಇತ್ಯಾದಿಗಳನ್ನು ಕಟ್ಟಿಸುವ ಪೂರ್ತಧರ್ಮಗಳು, ಇವೆಲ್ಲ ಇದ್ದವು. ಆದರೆ ಇವು ಕೂಡ ಆಚರಿಸಿದವನ ಸದ್ಗತಿಗಾಗಿ ಇದ್ದವೇ ವಿನಃ ‘ನಾನು ಸಹಾಯ ಮಾಡಿದೆ’ ಎಂಬ ಅಹಂಕಾರಕ್ಕಲ್ಲ, ಹೊಟ್ಟೆಪಾಡಿಗಂತೂ ಅಲ್ಲವೇ ಅಲ್ಲ.
ಇತ್ತೀಚಿನ ಟಿಪ್ಪಣಿಗಳು