ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 50:ಯಥೇಚ್ಛಸಿ ತಥಾ ಕುರು

ಪ್ರೊ. ರಾಜಾರಾಮ ಹೆಗಡೆ 

ನಮ್ಮ ಪ್ರಾಚೀನ ಮಹಾಕಾವ್ಯ ಹಾಗೂ ಪುರಾಣಗಳ ಕುರಿತು ಇಂದು ಅನೇಕ ಚರ್ಚೆಗಳು ವಿವಾದಗಳು ಎದ್ದುಕೊಂಡಿವೆ.  ಇಂಥ ವಿವಾದಗಳು ಅವುಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಿಷ್ಟ ಸಾಲುಗಳ ಅಥವಾ ಘಟನೆಗಳ ಕುರಿತಾಗಿ ಇರುತ್ತವೆ. ಉದಾಹರಣೆಗೆ ಭಗವದ್ಗೀತೆಯಲ್ಲಿ ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎಂದು ಸೂಚಿಸಿದ್ದು, ಸೀತಾ ಪರಿತ್ಯಾಗ, ಅಗ್ನಿ ಪರೀಕ್ಷೆ, ಶಂಭೂಕವಧೆ, ಏಕಲವ್ಯ ಇತ್ಯಾದಿ ಪ್ರಕರಣಗಳು, ಇತ್ಯಾದಿ. ಇಂಥ ಭಾಗಗಳು ನಮ್ಮ ಇಂದಿನ ನ್ಯಾಯ ಕಲ್ಪನೆಗೆ ವಿರುದ್ಧವಾಗಿವೆ ಎಂಬುದು ಆಕ್ಷೇಪಣೆ. ಅದರಲ್ಲೂ  ಹೀಗೆ ಆಕ್ಷೇಪಿಸುವವರು ಶೂದ್ರ ಹಾಗೂ ಸ್ತ್ರೀಯರ ಕುರಿತ ಅಸಮಾನತೆಯನ್ನು ಸಾರುವ, ಅವರಿಗೆ ಧಾರ್ಮಿಕ, ಸಾಮಾಜಿಕ ಸ್ಥಾನಮಾನವನ್ನು ನಿರಾಕರಿಸುವ ಹೇಳಿಕೆಗಳು ಇಂಥ ಗ್ರಂಥಗಳಲ್ಲಿ ಬರುತ್ತವೆ ಎಂಬುದನ್ನು ಎತ್ತಿ ತೋರಿಸುತ್ತಾರೆ. ಮತ್ತೊಂದು ಪಕ್ಷದವರು ಆ ಸಾಲುಗಳಿಗೆ ಅಂಥ ಅರ್ಥವನ್ನು ಹಚ್ಚಬಾರದು ಎಂದು ಅದರ ಅರ್ಥನಿರೂಪಣೆಯನ್ನು ಬೇರೆ ರೀತಿಯಲ್ಲಿ ಮಾಡಿ ತೋರಿಸಿ ಸರ್ಮಥಿಸಲು ಯತ್ನಿಸುತ್ತಾರೆ. ಇನ್ನೂ ಕೆಲವರು ಈ ಗ್ರಂಥಗಳ ತಾತ್ವಿಕ ಮಹತ್ವವನ್ನು ಅರಿಯಬೇಕೇ ಹೊರತೂ ಇಂಥ ಸಾಲುಗಳಿಗೆ ಮಹತ್ವ ನೀಡಬಾರದು ಎನ್ನುತ್ತಾರೆ.

 ಆದರೆ ನಮ್ಮ ಪ್ರಾಚೀನ ಗ್ರಂಥಗಳ ಕುರಿತ ಆಧುನಿಕ ಆಕ್ಷೇಪಣೆಗಳು ನಿರಾಧಾರ ಎಂಬುದನ್ನು ಇಂದಿನವರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವುಗಳ ಸಮರ್ಥಕರು ಸಫಲರಾದಂತಿಲ್ಲ. ಉದಾಹರಣೆಗೆ ಪಾಪಯೋನಿ ಎಂಬುದು ನಮ್ಮ ಸಮಾನತೆ ಹಾಗೂ ನ್ಯಾಯ ಕಲ್ಪನೆಗೆ ಧಕ್ಕೆತರುವುದಿಲ್ಲ, ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದ್ದು ಅಥವಾ ಸೀತೆಯನ್ನು ಅಗ್ನಿ ಪ್ರವೇಶ ಮಾಡಿಸಿದ್ದು ಸರಿ ಎಂಬಿತ್ಯಾದಿಗಳನ್ನು ಉಳಿದವರಿಗೆ ಮನದಟ್ಟು ಮಾಡುವುದು ಹೋಗಲಿ ಅದನ್ನು ಹೇಳುವವನಿಗೇ ಅದು ಸರಿ ಎನಿಸುತ್ತದೆಯೆ? ಶೂದ್ರ, ಸ್ತ್ರೀ ಮುಂತಾದ ಪ್ರಭೇದಗಳನ್ನು ಭಾವಿಸದಿದ್ದರೂ ಕೂಡ ಅಂಥ ಕೆಲಸವು ನ್ಯಾಯ ಅನ್ನಿಸುತ್ತದೆಯೆ? ಹಾಗಾಗಿ ಇಂದು ಆ ಸಾಲುಗಳಿಗೆ ನಾವು ಯಾವ ಅರ್ಥ ಹಚ್ಚುತ್ತೇವೆಯೋ ಆ ಅರ್ಥದಲ್ಲಂತೂ ಅವುಗಳನ್ನು ಸರ್ಮಥಿಸುವ ಪ್ರಶ್ನೆಯೇ ಇಲ್ಲ. ಅಂಥ ಸಾಲುಗಳನ್ನು ಬೇರೆ ಕಾರಣಗಳಿಗಾಗಿ ಸರ್ಮಥಿಸುವವರು ತಮ್ಮ ಕಾರಣವನ್ನು ಮನದಟ್ಟು ಮಾಡಲು ಸೋತರೆ ವಿದ್ಯಾವಂತರಿಗೆ ಅವರು ಶೂದ್ರ ಹಾಗೂ ಸ್ತ್ರೀ ವಿರೋಧಿಗಳಾಗಿ ಕಾಣುವುದರಲ್ಲಿ ಆಶ್ಚರ್ಯವೇ ಇಲ್ಲ.

  ಈ ಸಾಲುಗಳನ್ನು ಸರ್ಮಥಿಸಬೇಕೆಂದು ನನ್ನ ಸೂಚನೆಯಲ್ಲ. ಯಾರಾದರೂ ಇಂಥ ಸಾಲುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರೂ ತೊಂದರೆಯೇನಿಲ್ಲ. ಕುವೆಂಪು ಅವರು ಇಂಥ ಸಾಲುಗಳನ್ನು ತರದೇ, ಆಧುನಿಕ ಪ್ರಜ್ಞೆಗೆ ಒಪ್ಪುವಂತೇ ರಾಮಾಯಣ ದರ್ಶನಂ ರಚಿಸಿಲ್ಲವೆ? ಅದರಿಂದ ರಾಮಾಯಣಕ್ಕೇನಾದರೂ ಅನ್ಯಾಯವಾಗಿದೆಯೆ? ಭಾರತದಲ್ಲಿ ದೇಶೀ ರಿಲಿಜನ್ನುಗಳು ಇಲ್ಲ ಅಂತಾದಮೇಲೆ ಏಕಮೇವ ಪವಿತ್ರಗ್ರಂಥ, ದೇವವಾಣಿ, ಇತ್ಯಾದಿಗಳೂ ಇರಲಿಕ್ಕೆ ಸಾಧ್ಯವಿಲ್ಲ. ಅಂದಮೇಲೆ ಅವುಗಳ ಕೆಲವು ಸಾಲುಗಳನ್ನು ಕಿತ್ತುಹಾಕುವುದಾಗಲೀ, ಮತ್ತೆ ಕೆಲವನ್ನು ಸೇರಿಸುವುದಾಗಲೀ ದೈವವಿರೋಧೀ ಕೃತ್ಯವಂತೂ ಆಗಲು ಸಾಧ್ಯವಿಲ್ಲ. ನಮ್ಮ ಮಹಾಕಾವ್ಯ, ಪುರಾಣಾದಿಗಳು ಇಂದಿನ ರೂಪವನ್ನು ತಳೆದು ಬಂದದ್ದೇ ಹೀಗಲ್ಲವೆ? ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಇವುಗಳಲ್ಲಿ ಮೂಲ, ಪ್ರಕ್ಷಿಪ್ತ  ಅಂತೆಲ್ಲ  ಭೇದಗಳನ್ನು ಹುಟ್ಟುಹಾಕಿದ್ದಾರೆ. ಅದಕ್ಕೂ ಮೊದಲು ಅದೊಂದು ಸಹಜಕ್ರಿಯೆಯಾಗಿತ್ತು. ಇಂಥ ಸಂದರ್ಭದಲ್ಲಿ ಇಂಥ ಸಾಲುಗಳನ್ನು ಅವುಗಳ ಅಪಾರ್ಥಕ್ಕೆ ಹೊರತಾಗಿಯೂ ಉಳಿಸಿಕೊಳ್ಳುತ್ತೇವೆ ಎಂದರೆ ಅದೊಂದು ಹುನ್ನಾರದಂತೆ ಕಂಡರೂ ಆಶ್ಚರ್ಯವಿಲ್ಲ.

  ಈ ಮೇಲಿನದು ಒಂದು ರೀತಿಯ ಸಮಸ್ಯೆಯಾದರೆ, ಮತ್ತೊಂದು ಸಮಸ್ಯೆ ಎಂದರೆ ಭಾರತೀಯರು ಈ ಕೃತಿಗಳ ಜೊತೆಗೆ ಯಾವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು. ಈ ಮೇಲಿನ ಸಾಲುಗಳು ಭಾರತದ ಬಹುಸಂಖ್ಯಾತರಿಗೆ ಅನ್ಯಾಯವನ್ನು ಮಾಡುತ್ತವೆ ಎಂಬುದೇ ಹೌದಾದಲ್ಲಿ ಏಕೆ ಅವುಗಳು ಮತ-ಜಾತಿಗಳ ಗಡಿರೇಖೆಗಳಿಲ್ಲದೇ ಸಾವಿರಾರು ವರ್ಷ ಜನಮನದೊಳಗೆ ಯಾವುದೇ ಸಂಘರ್ಷವನ್ನು ಹುಟ್ಟಿಸದೇ ಉಳಿದು ಬಂದವು? ಇದಕ್ಕೆ ಒಂದು ಸಿದ್ಧ ಉತ್ತರವಿದೆ: ಏಕೆಂದರೆ ಅವರೆಲ್ಲರೂ ದಾಸ್ಯಕ್ಕೆ ಒಳಗಾಗಿದ್ದರು, ಅಜ್ಞಾನಿಗಳಾಗಿದ್ದರು. ಯಾರು ತಿಳಿದಿದ್ದರೋ ಅವರು ವಂಚಕರಾಗಿದ್ದರು. ಈ ಉತ್ತರವನ್ನು ಒಪ್ಪಬೇಕಾದರೆ ಮನುಷ್ಯರ ಕುರಿತ ನಮ್ಮ ಸಹಜ ತಿಳಿವಳಿಕೆಯನ್ನೇ ಅಲ್ಲಗಳೆಯಬೇಕಾಗುತ್ತದೆ. ಭಗವದ್ಗೀತೆಯನ್ನು ಲಿಂಗ-ಜಾತಿಗಳನ್ನು ಮೀರಿದ ಭಕ್ತಿಪಂಥದ ಸಂತರು, ವಿವೇಕಾನಂದ, ಗಾಂಧಿ ಮುಂತಾದವರು ಏಕೆ ಮಹತ್ವದ ಗ್ರಂಥವೆಂದು ಭಾವಿಸಿದ್ದರು? ಏಕೆ ಅವರು ಇಂದು ನಾವು ಎತ್ತುವ ತಕರಾರುಗಳನ್ನೇ ದೊಡ್ಡಮಾಡಿಕೊಂಡು ಅವನ್ನು ಸುಟ್ಟುಹಾಕಲಿಲ್ಲ? ಏಕೆ ಭಾರತದಾದ್ಯಂತ ಜಾತಿ, ಮತ, ಪ್ರದೇಶಗಳ ಭೇದವಿಲ್ಲದೇ ಸುಪ್ರಸಿದ್ಧ ಕವಿಗಳು ಅವುಗಳನ್ನು ತಮ್ಮ ಕಾವ್ಯಗಳಿಗೆ ಅಳವಡಿಸಿಕೊಂಡರು? ಏಕೆ ಕುವೆಂಪು ಅವರು ರಾಮಾಯಣವನ್ನೇ ಪುನಃ ಶೋಧಿಸುವ ಕೆಲಸ ಮಾಡಿದರು?

  ಅಂದರೆ, ನಮ್ಮ ಮಹಾಕಾವ್ಯ ಪುರಾಣಾದಿಗಳನ್ನು ಭಾರತೀಯರು ಹೇಗೆ ಸ್ವೀಕರಿಸುತ್ತಾರೆ, ಅವರಿಗೆ ಅವು ಏನನ್ನು ಕೊಡುತ್ತವೆ ಎಂಬುದರ ಕುರಿತು ನಮಗೆ ಒಂದು ಮರೆವು ಆವರಿಸತೊಡಗಿದೆ ಎಂಬುದಂತೂ ನಿಜ. ಮಹಾಭಾರತದ ಸಂಸ್ಕೃತ ರೂಪವನ್ನು ಉಳಿಸಿಕೊಂಡು ಬರುವಲ್ಲಿ ಮಡಿವಂತ ಬ್ರಾಹ್ಮಣರದೂ ನಿರ್ಣಾಯಕ ಪಾತ್ರವಿದ್ದಿರಲೇ ಬೇಕು. ಅವರಿಗೆ ಪಾಪಯೋನಿ ಎಂಬ ಸಂಗತಿ ಸಮ್ಮತವಾಗಿತ್ತು ಹಾಗಾಗಿ ಅದನ್ನು ಸೇರಿಸಿ ಉಳಿಸಿಕೊಂಡು ಬಂದರು ಎಂಬ ಆರೋಪವಿದೆ. ಆದರೆ ದ್ರೌಪದಿಗೆ ಐದು ಜನ ಗಂಡಂದಿರು ಎಂಬ ಕಲ್ಪನೆ, ಕುಂತಿ ಗಂಡನನ್ನು ಬಿಟ್ಟು ಬೇರೆಯವರಿಂದ ಮಕ್ಕಳನ್ನು ಪಡೆದಳು ಎಂಬ ಕಲ್ಪನೆ, ಅದರಲ್ಲೂ ಮದುವೆಗೂ ಮುಂಚೆ ಮನೆಯವರಿಗೂ ಗೊತ್ತಿಲ್ಲದೇ ಕರ್ಣನನ್ನು ಹಡೆದು ನೀರಿನಲ್ಲಿ ತೇಲಿಬಿಟ್ಟ ಘಟನೆ ಇವೆಲ್ಲ ಅವರ ಮಡಿವಂತಿಕೆಗೆ, ಧರ್ಮಪ್ರಜ್ಞೆಗೆ ತೊಂದರೆ ಕೊಡಲಿಲ್ಲವೆ? ಈ ಕಥೆಗಳಲ್ಲಿ ಬ್ರಾಹ್ಮಣರ ಮಡಿವಂತಿಕೆಗೆ ಇರುಸುಮುರುಸಾಗಬಲ್ಲ  ಇಂಥ ಅನೇಕಾನೇಕ ಉದಾಹರಣೆಗಳು ಸಿಗುತ್ತವೆ. ಏಕೆ ಅವರು ಈ ಭಾಗಗಳನ್ನು ಅಳಿಸಿ ಹಾಕದೇ ಪಾರಾಯಣ ಮಾಡಿಕೊಂಡು ಬಂದರು? ಅಷ್ಟೇ ಅಲ್ಲದೆ, ಅವುಗಳ ಪಾರಾಯಣದಿಂದ ಅಮಿತ ಪುಣ್ಯ, ದೇವಲೋಕ, ಮೋಕ್ಷ ಇತ್ಯಾದಿಗಳೂ ಲಭ್ಯ ಎಂದು ತಿಳಿದರು?

  ಇದು ಏನನ್ನು ತೋರಿಸುತ್ತದೆಯೆಂದರೆ, ಈ ಕಥೆಗಳು ವರ್ತಮಾನದ ರೀತಿ ರಿವಾಜುಗಳಿಗೆ ವಿರುದ್ಧವಾಗಿದ್ದರೂ ಕೂಡ ಅವು ಕೇಳುಗರಿಗೆ ಸಮಸ್ಯೆಯನ್ನು ಸೃಷ್ಟಿಸಲಿಲ್ಲ. ಹಾಗೂ ಕೇಳುಗರಿಗೆ ಬೇರೆ ಯಾವುದೋ ಬೆಳಕನ್ನು ನೀಡುತ್ತಿದ್ದವು. ಒಂದು ಕೃತಿಯ ವಿವರಗಳು ಆಯಾ ದೇಶ-ಕಾಲದ ಸಂಸ್ಕೃತಿಯಲ್ಲಿ ರೂಪುಗೊಂಡಿರುತ್ತದೆ. ಕಾಲ ಹಾಗೂ ಸಂದರ್ಭ ಬದಲಾದಂತೆ ಧರ್ಮ ಅಧರ್ಮವಾಗುತ್ತದೆ, ಅಧರ್ಮ ಧರ್ಮವಾಗುತ್ತದೆ ಎಂದು ಈ ಕಾವ್ಯಗಳೇ ತಿಳಿಸುತ್ತವೆ. ಧರ್ಮ ಅಧರ್ಮಗಳನ್ನು ನಿರ್ಧರಿಸಲಿಕ್ಕೆ ದೇಶ ಕಾಲಾತೀತವಾದ ನಿಯಮಗಳಿರುತ್ತವೆ ಎಂಬುದನ್ನೇ ಅವು ಅಲ್ಲಗಳೆಯುತ್ತವೆ. ಅಂದಮೇಲೆ ಅವುಗಳಲ್ಲಿ ಬರುವ ಹೇಳಿಕೆಗಳು ನಿಯಮಗಳಾಗಿರಲಿಕ್ಕಂತೂ ಸಾಧ್ಯವಿಲ್ಲ, ಅವುಗಳ ಓದುಗರು ಹಾಗೆ ಭಾವಿಸಲಿಕ್ಕೂ ಸಾಧ್ಯವಿಲ್ಲ. ಅವು ಧರ್ಮ ಜಿಜ್ಞಾಸೆಗೆ ಸಹಕರಿಸುತ್ತವೆ ಅಷ್ಟೆ. ನಿಮ್ಮ ನಿರ್ಣಯ ನಿಮಗೇ ಬಿಟ್ಟದ್ದು. ಯಥೇಚ್ಛಸಿ ತಥಾ ಕುರು ಎಂದು ಕೃಷ್ಣ ಹೇಳಿದ ಹಾಗೆ.

  ಇಂದು ಈ ಗ್ರಂಥಗಳ ಸಮರ್ಥಕರೆನಿಸಿಕೊಳ್ಳುವವರು ಈ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದ್ದಾರೆ. ಇವುಗಳನ್ನು ಪಾಶ್ಚಾತ್ಯರಂತೆ ಹಿಸ್ಟರಿ ಪುಸ್ತಕಗಳು ಅಂತಲೋ, ದೇವವಾಣಿ ಅಂತಲೋ ಪ್ರತಿಪಾದಿಸಿದಾಗ ಹೊಸ ಸಮಸ್ಯೆಗಳು ಏಳುತ್ತವೆ. ಅವುಗಳಲ್ಲಿನ ಘಟನೆಗಳೆಲ್ಲ ಸತ್ಯ, ರಾಮ ಕೃಷ್ಣರೂ ಚಾರಿತ್ರಿಕ ಪುರುಷರು ಎಂದು ನೀವು ಶಪಥ ಮಾಡತೊಡಗಿದಾಗ ‘ನಮ್ಮ ನಿಮ್ಮಂತಿರುವ ಅವರು ದೇವರು ಎಂದು ಹೇಗೆ ಹೇಳುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಅವರನ್ನು ನ್ಯಾಯಾಲಯದ ಕಟಕಟೆಗೆ ಎಳೆದು ತರಬೇಕಾಗುತ್ತದೆ. ಭಗವದ್ಗೀತೆಯು ಹಿಂದೂಗಳ ಪವಿತ್ರಗ್ರಂಥ, ಅದನ್ನು ಕಡ್ಡಾಯವಾಗಿ ಎಲ್ಲ ಭಾರತೀಯರೂ ಓದಿ ಅದರ ಡಾಕ್ಟ್ರಿನ್ನುಗಳನ್ನು ಪಾಲಿಸಬೇಕು ಎಂದು ಒತ್ತಾಯಿಸತೊಡಗಿದಾಗ ಸ್ತ್ರೀ ಶೂದ್ರರು ಪಾಪಯೋನಿಗಳು ಎನ್ನುವುದು ಯಾವ ನ್ಯಾಯ ಎಂಬ ಪ್ರಶ್ನೆ ಎದ್ದೇ ಏಳುತ್ತದೆ. ಈ ಗ್ರಂಥಗಳೇ ನಮ್ಮ ಜೀವನಕ್ಕೆ ಅಪ್ರಸ್ತುತ ಎನಿಸತೊಡಗುತ್ತದೆ.

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: