ಅಂಕಣ: ನವನೀತ
ಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ?
ಪ್ರೊ. ರಾಜಾರಾಮ ಹೆಗಡೆ
ಭಗವದ್ಗೀತೆಯ 9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು ಇತ್ತೀಚೆಗೆ ಸಾಕಷ್ಟು ವಿವಾದ ನಡೆಯಿತು. ಈ ಶ್ಲೋಕದ ಕುರಿತ ಆಕ್ಷೇಪಣೆಯೆಂದರೆ ಇದು ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎನ್ನುತ್ತದೆ. ಭಾರತದ ಜನರಲ್ಲಿ ಮುಕ್ಕಾಲುಪಾಲಿಗಿಂತಲೂ ಅಧಿಕ ಜನರೇ ಸ್ತ್ರೀ, ಶೂದ್ರ, ವೈಶ್ಯರಾಗಿದ್ದಾರೆ. ಬಹುಜನರ ಮನಸ್ಸಿಗೆ ನೋವುಂಟುಮಾಡುವ ಭಗವದ್ಗೀತೆಯನ್ನು ಏಕೆ ಗೌರವಿಸಬೇಕು? ಜೊತೆಗೇ ಶ್ರೀಕೃಷ್ಣನೇ ನಾಲ್ಕು ವರ್ಣಗಳನ್ನು ಗುಣ ಕರ್ಮ ವಿಭಾಗಗಳ ಆಧಾರದ ಮೇಲೆ ಸೃಷ್ಟಿಸಿದ್ದಾನೆ ಎಂದು ಭಗವದ್ಗೀತೆ ಹೇಳುತ್ತದೆ. ಸ್ತ್ರೀಯರನ್ನು ಹಾಗೂ ಕೆಳವರ್ಣದವರನ್ನು ಪಾಪಯೋನಿಗಳು, ಅವರಿಗೆ ಸದ್ಗತಿ ಇಲ್ಲ, ಹಾಗಾಗಿ ಅವರು ಕೀಳು ಎಂಬುದಾಗಿ ಬಿಂಬಿಸಲು ಮೇಲಿನ ಸಾಲುಗಳನ್ನು ಬ್ರಾಹ್ಮಣ ಪುರೋಹಿತಶಾಹಿಯು ಸೇರಿಸಿದೆ ಎಂಬುದು ಆರೋಪ.
ಈ ಕುರಿತು ಇತ್ತೀಚೆಗೆ ಬೆಲ್ಜಿಯಂ ಗೆಂಟ್ ವಿಶ್ವವಿದ್ಯಾಲಯದ ತತ್ವಶಾಸ್ತ್ರದ ಪ್ರೊಫೆಸರ್ ಬಾಲಗಂಗಾಧರ ಅವರು ನೀಡಿದ ವಿವರಣೆಯು ನನಗೆ ಆಸಕ್ತಿಪೂರ್ಣವಾಗಿ ಕಂಡಿರುವುದರಿಂದ ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಶ್ಲೋಕದ ಭಾಷಾಂತರ ಹೀಗಿದೆ: ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೂ ಪಾಪಯೋನಿಗಳು ಮುಂತಾದ ಯಾರೇ ಆಗಿರಲಿ, ಅವರೂ ಕೂಡ ನನ್ನಲ್ಲಿ ಶರಣಾಗಿ ಪರಮಗತಿಯನ್ನೇ ಪಡೆಯುತ್ತಾರೆ. ಪುಣ್ಯಶೀಲರಾದ ಬ್ರಾಹ್ಮಣರು ಹಾಗೂ ರಾಜರ್ಷಿ ಭಕ್ತಜನರು ನನ್ನಲ್ಲಿ ಶರಣಾಗಿ ಪರಮಗತಿ ಪಡೆಯುತ್ತಾರೆ, ಇದರಲ್ಲಿ ಹೇಳುವುದಾದರೂ ಏನಿದೆ? ಅದಕ್ಕಾಗಿ ಸುಖರಹಿತವಾದ, ಕ್ಷಣಭಂಗುರವಾದ ಈ ಲೋಕವನ್ನು ಹೊಂದಿದ ನೀನು ನನ್ನನ್ನು ಭಜಿಸು. ಈ ಮೇಲಿನ ಶ್ಲೋಕದಲ್ಲಿ ಮೊದಲ ಭಾಗದಲ್ಲಿ ಪಾಪಯೋನಿ ಎಂದರೆ ಹುಟ್ಟಿನ ಕುರಿತು ಹೇಳಿದರೆ ಎರಡನೆಯ ಭಾಗದಲ್ಲಿ ಪುಣ್ಯ ಎಂದರೆ ಸಾಧನೆಯ ಕುರಿತು ಹೇಳುತ್ತದೆ ಎಂಬುದು ಆ ಶ್ಲೋಕಗಳಲ್ಲೇ ಸ್ಪಷ್ಟವಾಗಿದೆ. ಇಲ್ಲಿ ಪುಣ್ಯಯೋನಿ ಎಂಬ ಪದಪ್ರಯೋಗವಿಲ್ಲ ಎಂಬುದನ್ನು ಗಮನಿಸಬೇಕು.
ಈ ಶ್ಲೋಕಗಳಲ್ಲಿ ಪಾಪ ಹಾಗೂ ಪುಣ್ಯ ಎಂಬ ಶಬ್ದಗಳನ್ನು ಆತ್ಮಜ್ಞಾನದ ಸಂದರ್ಭದಲ್ಲಿ ಬಳಸಲಾಗಿದೆ. ಆತ್ಮಜ್ಞಾನವಾಗಬೇಕಾದರೆ ಮನಸ್ಸಿನಲ್ಲಿರುವ ಅಜ್ಞಾನವನ್ನು, ಮಾಯೆಯನ್ನು ಮೀರಬೇಕು. ಅಧ್ಯಾತ್ಮದ ಪ್ರಕಾರ ಈ ಸಂಸಾರದಲ್ಲಿ ಹುಟ್ಟುವುದೇ ಒಂದು ಮಾಯೆ. ಪಾಪ ಎಂದರೆ ಹುಟ್ಟಾ ಬಂದಂಥಹ ಮಿತಿಗಳಲ್ಲೇ ಇರುವವರು ಎಂಬ ಅರ್ಥವಿದೆ. ಪುಣ್ಯ ಎಂದರೆ ಸ್ವಪ್ರಯತ್ನದಿಂದ ಸಾಧನೆ ಮಾಡಿ ಜನ್ಮಜಾತವಾಗಿ ಬಂದ ಇಂಥ ಮಿತಿಗಳನ್ನು ಮೀರಿದವವರು ಎಂಬ ಅರ್ಥವಿದೆ. ಹಾಗಾಗಿ ಬ್ರಾಹ್ಮಣ ಎಂಬ ವರ್ಗದ ಜೊತೆಗೆ ರಾಜರ್ಷಿಗಳನ್ನು ಉದ್ದೇಶಪೂರ್ವಕವಾಗಿಯೇ ಸೇರಿಸಲಾಗಿದೆ. ರಾಜರ್ಷಿ ಎಂದರೆ ರಾಜತ್ವವನ್ನು ಪಡೆದ ನಂತರ ಸ್ವಪ್ರಯತ್ನದಿಂದ ಋಷಿಯ ಸ್ಥಾನವನ್ನು ಗಳಿಸಿದವನು. ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ ಎಲ್ಲರೂ ರಾಜರ್ಷಿಗಳಾಗಲು ಸಾಧ್ಯವಿಲ್ಲ. ಎಲ್ಲೋ ಅಪರೂಪಕ್ಕೊಬ್ಬರು ತಪಶ್ಚರ್ಯಯಿಂದ, ಹಾಗೂ ಸ್ವಂತ ಯೋಗ್ಯತೆಯಿಂದ ಆ ಪದವಿಯನ್ನು ಹೊಂದುತ್ತಾರೆ. ಇಲ್ಲಿ ಹುಟ್ಟನ್ನೇ ಉದ್ದೇಶಿಸಿದ್ದರೆ ಕ್ಷತ್ರಿಯ ಅಥವಾ ರಾಜ ಎಂಬ ಪದ ಪ್ರಯೋಗಿಸಬೇಕಿತ್ತು. ಅಂದರೆ ರಾಜರ್ಷಿ ಎಂಬುದು ಸ್ವಪ್ರಯತ್ನದಿಂದ ಪಡೆದ ಸ್ಥಾನವನ್ನು ಸೂಚಿಸುತ್ತದೆ ಎಂಬುದು ಸ್ಪಷ್ಟ.
ಅದೇ ರೀತಿಯಲ್ಲಿ ಈ ಸಾಲಿನಲ್ಲಿ ಬರುವ ಬ್ರಾಹ್ಮಣ ಎಂಬ ಶಬ್ದ ಕೂಡ ಹುಟ್ಟನ್ನು ಸೂಚಿಸುವುದಿಲ್ಲ. ಹುಟ್ಟಿನಿಂದಲೇ ಒಂದಷ್ಟು ಜನರನ್ನು ಬ್ರಾಹ್ಮಣರೆಂದು ಕರೆಯಲಾಗುತ್ತಿದ್ದರೂ ಕೂಡ ಈ ಸಾಲಿನಲ್ಲಿ ರಾಜರ್ಷಿ ಎಂಬ ಶಬ್ದದ ಜೊತೆಗೆ ಅದನ್ನು ಇಟ್ಟಿರುವುದರಿಂದ ಅದು ಕೂಡ ಗಳಿಸಿಕೊಂಡ ಪದವಿಯನ್ನೇ ಸೂಚಿಸುತ್ತದೆ ಎಂಬುದು ಸ್ಪಷ್ಟ. ಅಂದರೆ ಇಲ್ಲಿರುವ ಬ್ರಾಹ್ಮಣನು ಬ್ರಹ್ಮತ್ವವನ್ನು ಹೊಂದಿದವನೇ ಹೊರತೂ ಕೇವಲ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನಲ್ಲ. ಭಗವದ್ಗೀತೆಯು ಮಹಾಭಾರತದ ಒಂದು ಭಾಗ ಎಂಬುದನ್ನು ಗಮನಿಸಬೇಕು. ಮಹಾಭಾರತದಲ್ಲಿ ಬ್ರಹ್ಮಜ್ಞಾನವನ್ನು ಹೊಂದಿದ ಶೂದ್ರನೂ ಬ್ರಾಹ್ಮಣನಾಗುತ್ತಾನೆ ಹಾಗೂ ಬ್ರಹ್ಮಜ್ಞಾನವನ್ನು ಕಡೆಗಣಿಸಿ ಪಾಪಸಂಚಯ ಮಾಡುವ ಬ್ರಾಹ್ಮಣನೂ ಶೂದ್ರನೇ ಸೈ ಎಂಬುದಾಗಿ ಧರ್ಮವ್ಯಾಧ, ಅಜಗರಪ್ರಶ್ನ, ಯಕ್ಷಪ್ರಶ್ನ, ಇತ್ಯಾದಿ ಪ್ರಸಂಗಗಳಲ್ಲಿ ಅನೇಕ ಬಾರಿ ಸ್ಪಷ್ಟಪಡಿಸಲಾಗಿದೆ. ಆತ್ಮಜ್ಞಾನವನ್ನು ಹೊಂದಿದ ಅನೇಕ ಸ್ತ್ರೀಯರೂ ಅಲ್ಲಿ ಚಿತ್ರಿತರಾಗಿದ್ದಾರೆ.
ಇನ್ನು ಪಾಪಯೋನಿ ಎಂಬ ಕಲ್ಪನೆಯು ಹುಟ್ಟಾ ಬಂದಿರುವ ಅವಸ್ಥೆಯನ್ನು ಸೂಚಿಸುತ್ತದೆ. ಹಾಗಂತ ಇಲ್ಲಿ ಉಲ್ಲೇಖಿಸಿರುವ ಹುಟ್ಟಿಗೂ, ವರ್ಣ, ವೇದಾಧಿಕಾರ ಇತ್ಯಾದಿಗಳಿಗೂ ಸಂಬಂಧ ಕಲ್ಪಿಸುತ್ತಿಲ್ಲ. ಏಕೆಂದರೆ ಶೂದ್ರರ ಜೊತೆಗೆ ವೈಶ್ಯರು ಹಾಗೂ ಸ್ತ್ರೀಯರನ್ನು ತರಲಾಗಿದೆ. ವೈಶ್ಯ ವರ್ಣವನ್ನು ದ್ವಿಜಾತಿ ಎಂದು ಪರಿಗಣಿಸಲಾಗಿತ್ತು ಹಾಗೂ ಅವರಿಗೆ ವೇದಾಧಿಕಾರವನ್ನು ಸಮ್ಮತಿಸಲಾಗಿತ್ತು. ಆದರೆ ಮೇಲಿನ ಶ್ಲೋಕದಲ್ಲಿ ಇಂಥ ದ್ವಿಜ ವರ್ಣವಾದ ವೈಶ್ಯರನ್ನು ಸ್ತ್ರೀ ಶೂದ್ರ, ಪಾಪಯೋನಿಗಳ ಜೊತೆಗೆ ಸೇರಿಸಲಾಗಿದೆಯೇ ಹೊರತೂ ಬ್ರಾಹ್ಮಣ ಕ್ಷತ್ರಿಯರ ಜೊತೆಗಲ್ಲ. ಜೊತೆಗೆ ಸ್ತ್ರೀಯರನ್ನು ಕೂಡ ಸೇರಿಸಲಾಗಿದೆ. ಸ್ತ್ರೀಲಿಂಗ ಎಂಬುದೂ ಕೂಡ ಹುಟ್ಟಿನಿಂದಲೇ ನಿರ್ಧಾರವಾಗುವಂಥದ್ದು. ಅಂದರೆ ಇಲ್ಲಿ ವರ್ಣವಿಭಜನೆಯನ್ನಷ್ಟೇ ತಿಳಿಸಬೇಕಾಗಿದ್ದ ಪಕ್ಷದಲ್ಲಿ ಅದಕ್ಕೆ ಸಂಬಂಧವಿಲ್ಲದ ಸ್ತ್ರೀ ಎಂಬ ವರ್ಗವನ್ನೇಕೆ ತಂದು ಸೇರಿಸುತ್ತಿದ್ದರು? ಎಲ್ಲ ವರ್ಣಗಳಲ್ಲೂ ಸ್ತ್ರೀಯರು ಇರುತ್ತಾರೆಯೇ ಹೊರತೂ ಸ್ತ್ರೀಯೆಂಬ ಪ್ರತ್ಯೇಕ ವರ್ಣ ಇರಲಿಲ್ಲ. ಅಂದರೆ ಈ ಶ್ಲೋಕದಲ್ಲಿ ಹುಟ್ಟನ್ನು ಮಾತ್ರ ಸೂಚಿಸುವ ಸಂದರ್ಭದಲ್ಲಿ ಸ್ತ್ರೀ ಶೂದ್ರರನ್ನು ಒಟ್ಟಿಗೆ ತರಲಾಗಿದೆ. ‘ಜನ್ಮದಿಂದ ಎಲ್ಲರೂ ಶೂದ್ರರಾಗಿಯೇ ಹುಟ್ಟುತ್ತಾರೆ ‘ ಎಂಬ ಉಕ್ತಿಯ ಪ್ರಕಾರ ಶೂದ್ರ ಎಂಬುದೂ ಕೂಡ ಹುಟ್ಟಿನಿಂದಲೇ ಬರುವಂಥದ್ದು. ವೈಶ್ಯವನ್ನೂ ಇಲ್ಲಿ ಸೇರಿಸಿರುವುದರಿಂದ ಸಂಸ್ಕಾರ ಹೊಂದಲಿ, ಹೊಂದದಿರಲಿ, ಹುಟ್ಟಿನಿಂದ ಬಂದ ಅವಸ್ಥೆಯನ್ನು ಸ್ವ ಪ್ರಯತ್ನದಿಂದ ಮೀರದವರು ಎಂಬ ಸಾಮಾನ್ಯ ಪ್ರಭೇದದೊಳಗೆ ಮಾತ್ರ ಇವರೆಲ್ಲರೂ ಬರಲು ಸಾಧ್ಯ.
ಈ ಶ್ಲೋಕವು ಹುಟ್ಟಾ ಬಂದಿರುವ ಅವಸ್ಥೆಯನ್ನು ಮೀರಲು ಸಾಧ್ಯವಿಲ್ಲ ಎಂದೇನಾದರೂ ಸೂಚಿಸುತ್ತದೆಯೆ? ಹಾಗೊಮ್ಮೆ ಅರ್ಥೈಸಿದರೆ ಈ ಸಾಲನ್ನು ಅರ್ಥೈಸುವಲ್ಲಿ ಏನು ಫಜೀತಿಯಾಗುತ್ತದೆ ಎಂಬುದನ್ನು ನೋಡೋಣ: ಬ್ರಾಹ್ಮಣನ ತಾಯಿ ಕೂಡ ಸ್ತ್ರೀಯೇ ಆಗಿರುತ್ತಾಳೆ, ಪುಣ್ಯಸಾಧನೆ ಎಂಬುದು ಹುಟ್ಟಿನಿಂದ ನಿರ್ಧಾರವಾಗಿದ್ದರೆ, ಪಾಪಯೋನಿಯಾದ ಸ್ತ್ರೀಯಿಂದಲೇ ಹುಟ್ಟಿದ ಬ್ರಾಹ್ಮಣ, ರಾಜರ್ಷಿಗಳು ಪುಣ್ಯವಂತರಾಗಲು ಹೇಗೆ ಸಾಧ್ಯ? ಬ್ರಾಹ್ಮಣ, ಕ್ಷತ್ರಿಯರೂ ಕೂಡ ಹುಟ್ಟಾ ಶೂದ್ರರೇ ಆಗಿರುತ್ತಾರೆ ಅವರು ಪುಣ್ಯವಂತರಾಗಲು ಹೇಗೆ ಸಾಧ್ಯ? ಈ ಕಾರಣದಿಂದ ಮಹಾಭಾರತದ ಭಾಗವಾದ ಭಗವದ್ಗೀತೆಯಲ್ಲಿ ಶೂದ್ರ ಸ್ತ್ರೀ ಇತ್ಯಾದಿಗಳನ್ನು ಪಾಪಯೋನಿಗಳ ಜೊತೆಗೆ ಸೇರಿಸಿ ಉದಾಹರಿಸುವಾಗ ಸಾಧನೆಯನ್ನು ಮಾಡದವರು ಎಂಬ ಅರ್ಥಕ್ಕಷ್ಟೇ ಬಳಸಲಾಗಿದೆಯೇ ಹೊರತೂ ಅವರು ಹುಟ್ಟಾ ಪಾಪಿಗಳಾಗಿರುವುದರಿಂದ ಅವರಿಗೆ ಪುಣ್ಯಸಾಧನೆಯೇ ಸಾಧ್ಯವಿಲ್ಲ ಅಂತಲ್ಲ.
ಯಾವುದೇ ಗ್ರಂಥದ ಹೇಳಿಕೆಯ ಅರ್ಥವು ಅಲ್ಲಿ ಉಲ್ಲೇಖಿತ ಶಬ್ದಗಳ ಅರ್ಥ, ಪದಪ್ರಯೋಗದ ಸಂದರ್ಭ ಹಾಗೂ ಹಿನ್ನೆಲೆ ಇವುಗಳಿಗೆ ಒಳಪಟ್ಟಿರುತ್ತದೆ. ಅಂದರೆ ನಾವು ಯಾವ ಅರ್ಥವನ್ನು ಹಚ್ಚಬೇಕೆಂಬುದಕ್ಕೆ ಆ ಗ್ರಂಥವೇ ಚೌಕಟ್ಟನ್ನು ರಚಿಸಿಕೊಡುತ್ತದೆ. ಭಗವದ್ಗೀತೆಯ ಈ ಸಾಲುಗಳಲ್ಲಿ ಹುಟ್ಟಿನಿಂದ ಇರುವ ಸಹಜ ಅವಸ್ಥೆಯಲ್ಲೇ ಇರುವವರನ್ನು ಪಾಪಯೋನಿಗಳ ಜೊತೆಗೆ ಉಲ್ಲೇಖಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಪ್ರಸ್ತುತ ಶ್ಲೋಕದಲ್ಲಿ ಸ್ತ್ರೀ, ಶೂದ್ರರನ್ನು ಪಾಪಯೋನಿಗಳ ಜೊತೆಗೆ ಸೇರಿಸುವಾಗ ಅವರಿಗೆ ಪುಣ್ಯ ಸಾಧ್ಯವೇ ಇಲ್ಲ ಎಂಬ ಪ್ರತಿಪಾದನೆಯೂ ಇಲ್ಲ. ಬ್ರಾಹ್ಮಣರು ಹಾಗೂ ರಾಜರು ಹುಟ್ಟಿನಿಂದಲೇ ಪುಣ್ಯವಂತರು ಎಂಬ ಅರ್ಥ ಹೊರಡಲಿಕ್ಕಂತೂ ಸಾಧ್ಯವೇ ಇಲ್ಲ. ಇದೇ ಶ್ಲೋಕವೇ ಹೇಳುವಂತೆ ಭಕ್ತಿಮಾರ್ಗದಿಂದ ಸ್ರ್ತೀ, ಶೂದ್ರ ಇತ್ಯಾದಿ ಹುಟ್ಟಾ ಪಡೆದ ಅವಸ್ಥೆಯಲ್ಲೇ ಮನುಷ್ಯನು ಪರಮಗತಿಯನ್ನು ಹೊಂದಬಹುದು ಎಂದಮೇಲೆ ಅದೇ ಭಕ್ತಿಯಿಂದ ಸ್ವ ಪ್ರಯತ್ನದಿಂದ ಸಾಧನೆ ಗೈದವರು ಪರಮಗತಿ ಪಡೆಯುತ್ತಾರೆ ಎಂಬುದರಲ್ಲಿ ಆಶ್ಚರ್ಯವೇನಿದೆ? ಅವಸ್ಥೆ ಯಾವುದೇ ಇರಬಹುದು, ಭಕ್ತಿಮಾರ್ಗವು ಪರಮಗತಿಯ ಭರವಸೆಯನ್ನು ನೀಡುತ್ತದೆ ಎಂಬುದು ಮುಖ್ಯ. ಹಾಗೂ ಇದು ಕೇವಲ ಸುಳ್ಳು ಭರವಸೆಯಾಗಿರಲಿಲ್ಲ, ಇತಿಹಾಸದುದ್ದಕ್ಕೂ ಸ್ತ್ರೀ ಶೂದ್ರರೂ ಕೂಡ ಈ ಮಾರ್ಗದಲ್ಲಿ ನಡೆದು ಪರಮಗತಿಯನ್ನು ಪಡೆದು ಪೂಜನೀಯರಾಗಿದ್ದಾರೆ.
ಇತ್ತೀಚಿನ ಟಿಪ್ಪಣಿಗಳು