Archive

Archive for the ‘Uncategorized’ Category

ಅಂಕಣ: ನವನೀತ

rajaram hegdeಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ?

ಪ್ರೊ. ರಾಜಾರಾಮ ಹೆಗಡೆ 

ಭಗವದ್ಗೀತೆಯ 9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು ಇತ್ತೀಚೆಗೆ ಸಾಕಷ್ಟು ವಿವಾದ ನಡೆಯಿತು. ಈ ಶ್ಲೋಕದ ಕುರಿತ ಆಕ್ಷೇಪಣೆಯೆಂದರೆ ಇದು ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎನ್ನುತ್ತದೆ. ಭಾರತದ ಜನರಲ್ಲಿ ಮುಕ್ಕಾಲುಪಾಲಿಗಿಂತಲೂ ಅಧಿಕ ಜನರೇ ಸ್ತ್ರೀ, ಶೂದ್ರ, ವೈಶ್ಯರಾಗಿದ್ದಾರೆ. ಬಹುಜನರ ಮನಸ್ಸಿಗೆ ನೋವುಂಟುಮಾಡುವ ಭಗವದ್ಗೀತೆಯನ್ನು ಏಕೆ ಗೌರವಿಸಬೇಕು? ಜೊತೆಗೇ ಶ್ರೀಕೃಷ್ಣನೇ ನಾಲ್ಕು ವರ್ಣಗಳನ್ನು ಗುಣ ಕರ್ಮ ವಿಭಾಗಗಳ ಆಧಾರದ ಮೇಲೆ ಸೃಷ್ಟಿಸಿದ್ದಾನೆ ಎಂದು ಭಗವದ್ಗೀತೆ ಹೇಳುತ್ತದೆ. ಸ್ತ್ರೀಯರನ್ನು ಹಾಗೂ ಕೆಳವರ್ಣದವರನ್ನು ಪಾಪಯೋನಿಗಳು, ಅವರಿಗೆ ಸದ್ಗತಿ ಇಲ್ಲ, ಹಾಗಾಗಿ ಅವರು ಕೀಳು ಎಂಬುದಾಗಿ ಬಿಂಬಿಸಲು ಮೇಲಿನ ಸಾಲುಗಳನ್ನು ಬ್ರಾಹ್ಮಣ ಪುರೋಹಿತಶಾಹಿಯು ಸೇರಿಸಿದೆ ಎಂಬುದು ಆರೋಪ.

  ಈ ಕುರಿತು ಇತ್ತೀಚೆಗೆ ಬೆಲ್ಜಿಯಂ ಗೆಂಟ್ ವಿಶ್ವವಿದ್ಯಾಲಯದ ತತ್ವಶಾಸ್ತ್ರದ ಪ್ರೊಫೆಸರ್ ಬಾಲಗಂಗಾಧರ ಅವರು ನೀಡಿದ ವಿವರಣೆಯು ನನಗೆ  ಆಸಕ್ತಿಪೂರ್ಣವಾಗಿ ಕಂಡಿರುವುದರಿಂದ ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಶ್ಲೋಕದ ಭಾಷಾಂತರ ಹೀಗಿದೆ: ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೂ ಪಾಪಯೋನಿಗಳು ಮುಂತಾದ ಯಾರೇ ಆಗಿರಲಿ, ಅವರೂ ಕೂಡ ನನ್ನಲ್ಲಿ ಶರಣಾಗಿ ಪರಮಗತಿಯನ್ನೇ ಪಡೆಯುತ್ತಾರೆ. ಪುಣ್ಯಶೀಲರಾದ ಬ್ರಾಹ್ಮಣರು ಹಾಗೂ ರಾಜರ್ಷಿ ಭಕ್ತಜನರು ನನ್ನಲ್ಲಿ ಶರಣಾಗಿ ಪರಮಗತಿ ಪಡೆಯುತ್ತಾರೆ, ಇದರಲ್ಲಿ ಹೇಳುವುದಾದರೂ ಏನಿದೆ? ಅದಕ್ಕಾಗಿ ಸುಖರಹಿತವಾದ, ಕ್ಷಣಭಂಗುರವಾದ ಈ ಲೋಕವನ್ನು ಹೊಂದಿದ ನೀನು ನನ್ನನ್ನು ಭಜಿಸು. ಈ ಮೇಲಿನ ಶ್ಲೋಕದಲ್ಲಿ ಮೊದಲ ಭಾಗದಲ್ಲಿ ಪಾಪಯೋನಿ ಎಂದರೆ ಹುಟ್ಟಿನ ಕುರಿತು ಹೇಳಿದರೆ ಎರಡನೆಯ ಭಾಗದಲ್ಲಿ ಪುಣ್ಯ ಎಂದರೆ ಸಾಧನೆಯ ಕುರಿತು ಹೇಳುತ್ತದೆ ಎಂಬುದು ಆ ಶ್ಲೋಕಗಳಲ್ಲೇ ಸ್ಪಷ್ಟವಾಗಿದೆ. ಇಲ್ಲಿ ಪುಣ್ಯಯೋನಿ ಎಂಬ ಪದಪ್ರಯೋಗವಿಲ್ಲ ಎಂಬುದನ್ನು ಗಮನಿಸಬೇಕು. Read more…

Advertisements
Categories: Uncategorized

ಅಂಕಣ: ನವನೀತ

rajaram hegdeಕಂತು 50:ಯಥೇಚ್ಛಸಿ ತಥಾ ಕುರು

ಪ್ರೊ. ರಾಜಾರಾಮ ಹೆಗಡೆ 

ನಮ್ಮ ಪ್ರಾಚೀನ ಮಹಾಕಾವ್ಯ ಹಾಗೂ ಪುರಾಣಗಳ ಕುರಿತು ಇಂದು ಅನೇಕ ಚರ್ಚೆಗಳು ವಿವಾದಗಳು ಎದ್ದುಕೊಂಡಿವೆ.  ಇಂಥ ವಿವಾದಗಳು ಅವುಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಿಷ್ಟ ಸಾಲುಗಳ ಅಥವಾ ಘಟನೆಗಳ ಕುರಿತಾಗಿ ಇರುತ್ತವೆ. ಉದಾಹರಣೆಗೆ ಭಗವದ್ಗೀತೆಯಲ್ಲಿ ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎಂದು ಸೂಚಿಸಿದ್ದು, ಸೀತಾ ಪರಿತ್ಯಾಗ, ಅಗ್ನಿ ಪರೀಕ್ಷೆ, ಶಂಭೂಕವಧೆ, ಏಕಲವ್ಯ ಇತ್ಯಾದಿ ಪ್ರಕರಣಗಳು, ಇತ್ಯಾದಿ. ಇಂಥ ಭಾಗಗಳು ನಮ್ಮ ಇಂದಿನ ನ್ಯಾಯ ಕಲ್ಪನೆಗೆ ವಿರುದ್ಧವಾಗಿವೆ ಎಂಬುದು ಆಕ್ಷೇಪಣೆ. ಅದರಲ್ಲೂ  ಹೀಗೆ ಆಕ್ಷೇಪಿಸುವವರು ಶೂದ್ರ ಹಾಗೂ ಸ್ತ್ರೀಯರ ಕುರಿತ ಅಸಮಾನತೆಯನ್ನು ಸಾರುವ, ಅವರಿಗೆ ಧಾರ್ಮಿಕ, ಸಾಮಾಜಿಕ ಸ್ಥಾನಮಾನವನ್ನು ನಿರಾಕರಿಸುವ ಹೇಳಿಕೆಗಳು ಇಂಥ ಗ್ರಂಥಗಳಲ್ಲಿ ಬರುತ್ತವೆ ಎಂಬುದನ್ನು ಎತ್ತಿ ತೋರಿಸುತ್ತಾರೆ. ಮತ್ತೊಂದು ಪಕ್ಷದವರು ಆ ಸಾಲುಗಳಿಗೆ ಅಂಥ ಅರ್ಥವನ್ನು ಹಚ್ಚಬಾರದು ಎಂದು ಅದರ ಅರ್ಥನಿರೂಪಣೆಯನ್ನು ಬೇರೆ ರೀತಿಯಲ್ಲಿ ಮಾಡಿ ತೋರಿಸಿ ಸರ್ಮಥಿಸಲು ಯತ್ನಿಸುತ್ತಾರೆ. ಇನ್ನೂ ಕೆಲವರು ಈ ಗ್ರಂಥಗಳ ತಾತ್ವಿಕ ಮಹತ್ವವನ್ನು ಅರಿಯಬೇಕೇ ಹೊರತೂ ಇಂಥ ಸಾಲುಗಳಿಗೆ ಮಹತ್ವ ನೀಡಬಾರದು ಎನ್ನುತ್ತಾರೆ.

 ಆದರೆ ನಮ್ಮ ಪ್ರಾಚೀನ ಗ್ರಂಥಗಳ ಕುರಿತ ಆಧುನಿಕ ಆಕ್ಷೇಪಣೆಗಳು ನಿರಾಧಾರ ಎಂಬುದನ್ನು ಇಂದಿನವರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವುಗಳ ಸಮರ್ಥಕರು ಸಫಲರಾದಂತಿಲ್ಲ. ಉದಾಹರಣೆಗೆ ಪಾಪಯೋನಿ ಎಂಬುದು ನಮ್ಮ ಸಮಾನತೆ ಹಾಗೂ ನ್ಯಾಯ ಕಲ್ಪನೆಗೆ ಧಕ್ಕೆತರುವುದಿಲ್ಲ, ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದ್ದು ಅಥವಾ ಸೀತೆಯನ್ನು ಅಗ್ನಿ ಪ್ರವೇಶ ಮಾಡಿಸಿದ್ದು ಸರಿ ಎಂಬಿತ್ಯಾದಿಗಳನ್ನು ಉಳಿದವರಿಗೆ ಮನದಟ್ಟು ಮಾಡುವುದು ಹೋಗಲಿ ಅದನ್ನು ಹೇಳುವವನಿಗೇ ಅದು ಸರಿ ಎನಿಸುತ್ತದೆಯೆ? ಶೂದ್ರ, ಸ್ತ್ರೀ ಮುಂತಾದ ಪ್ರಭೇದಗಳನ್ನು ಭಾವಿಸದಿದ್ದರೂ ಕೂಡ ಅಂಥ ಕೆಲಸವು ನ್ಯಾಯ ಅನ್ನಿಸುತ್ತದೆಯೆ? ಹಾಗಾಗಿ ಇಂದು ಆ ಸಾಲುಗಳಿಗೆ ನಾವು ಯಾವ ಅರ್ಥ ಹಚ್ಚುತ್ತೇವೆಯೋ ಆ ಅರ್ಥದಲ್ಲಂತೂ ಅವುಗಳನ್ನು ಸರ್ಮಥಿಸುವ ಪ್ರಶ್ನೆಯೇ ಇಲ್ಲ. ಅಂಥ ಸಾಲುಗಳನ್ನು ಬೇರೆ ಕಾರಣಗಳಿಗಾಗಿ ಸರ್ಮಥಿಸುವವರು ತಮ್ಮ ಕಾರಣವನ್ನು ಮನದಟ್ಟು ಮಾಡಲು ಸೋತರೆ ವಿದ್ಯಾವಂತರಿಗೆ ಅವರು ಶೂದ್ರ ಹಾಗೂ ಸ್ತ್ರೀ ವಿರೋಧಿಗಳಾಗಿ ಕಾಣುವುದರಲ್ಲಿ ಆಶ್ಚರ್ಯವೇ ಇಲ್ಲ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 49: ದೇವಾಸುರ ಹೋರಾಟದ ಮನೋಭೂಮಿಕೆ

ಪ್ರೊ. ರಾಜಾರಾಮ ಹೆಗಡೆ 

ಈ ದಸರಾದಲ್ಲಿ ಮಹಿಷಾಸುರನನ್ನು ಪೂಜಿಸುವ ಕಾರ್ಯಕ್ರಮವೂ ನಡೆದು ಸುದ್ದಿಯಾಯಿತು. ಈ ಪೂಜೆಯ ಹಿಂದಿನ ತರ್ಕವೆಂದರೆ, ಆರ್ಯರು ಈ ಭಾಗವನ್ನು ಆಕ್ರಮಣ ಮಾಡಿಕೊಂಡಾಗ  ಸ್ಥಳೀಯ ಮೂಲನಿವಾಸಿ ನಾಯಕನನ್ನು ಸಂಹರಿಸಿ ತಮ್ಮ ವಿಜಯವನ್ನು ಸ್ಥಾಪಿಸಿ ಮಹಿಷ ಮರ್ದನಿಯ ಪುರಾಣವನ್ನು ಕಟ್ಟಿದರು. ಮಹಿಷಾಸುರನು ಮೂಲತಃ ಇಂಥ ದ್ರಾವಿಡ ಜನರ ನಾಯಕ. ಆದರೆ ಈಗ ಖಳನಾಯಕ ಅಥವಾ ರಾಕ್ಷಸನಾಗಿ ಬಿಂಬಿತವಾಗಿದ್ದಾನೆ. ಹಾಗೂ ಮಹಿಷ ಮರ್ದನಿ/ದುರ್ಗ ಪೂಜನೀಯ ದೇವತೆಯಾಗಿದ್ದಾಳೆ. ಈ ಐತಿಹಾಸಿಕ ಮೋಸವನ್ನು ಮಹಿಷಾಸುರನನ್ನು ಪೂಜಿಸುವ ಮೂಲಕ ಪ್ರತಿಭಟಿಸಬೇಕೆಂದು ಅವನ ಪೂಜೆ. ಈ ನಿರೂಪಣೆಯು ಜನ ಸಾಮಾನ್ಯರ ಕಪೋಲಕಲ್ಪನೆಗಳಲ್ಲ, ವಸಾಹತು ಕಾಲದ ನಂತರ ನಮ್ಮ ಸಂಸ್ಕೃತಿ ವಿದ್ವಾಂಸರೇ ಕಟ್ಟಿಕೊಟ್ಟ ಸಿದ್ಧಾಂತಗಳನ್ನಾಧರಿಸಿದೆ. ನನಗೂ ಕೂಡ ಒಂದು ಕಾಲದಲ್ಲಿ ಇಂಥ ವಿವರಣೆಗಳು ರೋಚಕವಾಗಿ ಕಂಡಿದ್ದವು. ಆದರೆ ಈಗ  ಅದು ನಿರಾಧಾರ ಎಂಬುದು ಗೊತ್ತಾಗಿದೆ.

  ನಮ್ಮ ಪುರಾಣಗಳಲ್ಲಿ ಬರುವ ದೇವತೆಗಳೆಲ್ಲರೂ ಇಂಥ ಒಂದಿಲ್ಲೊಂದು ಅಥವಾ ಹಲವಾರು ರಾಕ್ಷಸರನ್ನು ಸಂಹಾರ ಮಾಡಿರುತ್ತಾರೆ. ಸಂಸ್ಕೃತ ಕಾವ್ಯ ಹಾಗೂ ಪುರಾಣಗಳಲ್ಲಿ ಬರುವ ರಾಮ ಕೃಷ್ಣ, ಶಿವ, ವಿಷ್ಣು, ದೇವಿ, ಗಣಪತಿ, ಕಾರ್ತಿಕೇಯ, ಹೀಗೆ ಯಾವ ದೇವತೆಯನ್ನೇ ನೋಡಿ ರಾಕ್ಷಸರ ಸಂಹಾರ ಇದ್ದೇ ಇರುತ್ತದೆ. ಹಾಗಾಗಿ ಈ ಕಥೆಗಳು ಬ್ರಾಹ್ಮಣರ ಸೃಷ್ಟಿ ಎಂಬ ಸುಲಭ ತೀರ್ಮಾನಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದರೆ ಇಂಥ ಪೌರಾಣಿಕ ಕಥೆಗಳನ್ನು ಬ್ರಾಹ್ಮಣರು ಹೊಸದಾಗಿ ಕಟ್ಟಿದ್ದಲ್ಲ ಅಥವಾ ಅವು ಸಂಸ್ಕೃತಕ್ಕೆ ಸೀಮಿತವಲ್ಲ. ಇವನ್ನೆಲ್ಲ ಕಥೆಗಳೆಂದೇ ತೆಗೆದುಕೊಳ್ಳಬೇಕೇ ವಿನಃ ಚರಿತ್ರೆ ಎಂದಲ್ಲ. ಸ್ಥಾನಿಕವಾಗಿ ಪ್ರಚಲಿತದಲ್ಲಿರುವ ಕಥೆಗಳೂ ಹೀಗೇ ಇರುತ್ತವೆ. ಉದಾಹರಣೆಗೆ ಮಾರಿಯ   ಕುರಿತು ಇರುವ ಪ್ರಾದೇಶಿಕ ಭಾಷೆಗಳ ಜಾನಪದ ಕಥೆಗಳು. ಅವುಗಳಲ್ಲಿ ಅವಳು ತನ್ನನ್ನು ಮೋಸ ಮಾಡಿ ಮದುವೆಯಾದ ಗಂಡನನ್ನೇ ಕೊಲ್ಲುತ್ತಾಳೆ. ಅದೇ ರೀತಿ, ಭಾರತದ ಹಳ್ಳಗಾಡಿನ ಪ್ರಾದೇಶಿಕ ದೇವತೆಗಳು ಕೂಡ ಅಸುರ ಸಂಹಾರವನ್ನು ಮಾಡುತ್ತವೆ, ಅವುಗಳ ಕುರಿತ ಜಾನಪದವನ್ನೇ ಸಂಸ್ಕೃತ ಪುರಾಣಗಳನ್ನಾಗಿ ಪರಿವರ್ತಿಸಿದ್ದು ಸ್ಪಷ್ಟ. ಉದಾಹರಣೆಗೆ ಮೈಲಾರನ ಪ್ರಾದೇಶಿಕ ಕಥೆಯೇ ಮಲ್ಲಾರಿ ಮಾಹಾತ್ಮ್ಯದ ರೂಪ ತಳೆಯುತ್ತದೆ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 48: ಅಹಂಕಾರ ಹಾಗೂ ಹೊಟ್ಟೆಪಾಡಿಗೆ ಮಾಡಿದ್ದು ಸೇವೆಯೆ?

ಪ್ರೊ. ರಾಜಾರಾಮ ಹೆಗಡೆ 

 ಇಂದು ಸಮಾಜಸೇವೆ ಎಂಬ ಶಬ್ದಕ್ಕೆ ವಿಶೇಷ ಮಹತ್ವವು ಪ್ರಾಪ್ತಿಯಾಗಿದೆ. ಅದೊಂದು ಉದಾತ್ತ ಕೆಲಸವಾಗಿದ್ದು ವ್ಯಕ್ತಿಯೊಬ್ಬನ ಆದರ್ಶವಾಗಿದೆ. ಸಮಾಜ ಸೇವೆ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮಹಾತ್ಮಾ ಗಾಂಧೀಜಿ, ಮದರ್ ಥೆರೆಸಾ, ವಿನೋಬಾ ಭಾವೆ, ಅಣ್ಣಾ ಹಜಾರೆ, ಮುಂತಾದ ಅನೇಕರು ಕಣ್ಮುಂದೆ ಬರುತ್ತಾರೆ. ಸೇವೆ ಎಂದರೇನು? ಸಮಾಜದಲ್ಲಿ ದೀನ ದಲಿತರು, ಬಡತನ, ರೋಗ, ಇತ್ಯಾದಿಗಳಿಂದ ಪೀಡಿತರು ಇರುತ್ತಾರೆ. ಅವರಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷಧ, ಶೂಶ್ರೂಷೆ, ಇತ್ಯಾದಿಗಳನ್ನು ಒದಗಿಸುವ ಮೂಲಕ ಅವರನ್ನು ಅಂಥ ಬಾಧೆಗಳಿಂದ ಹೊರತರುವುದೇ ಸೇವೆಯಾಗುತ್ತದೆ.  ನಮ್ಮಲ್ಲಿ ಅನೇಕ ಮಹಾತ್ಮರು ತಮ್ಮ ಜೀವಮಾನವನ್ನು ಪರರಿಗೆ ಇಂಥ ಸೇವೆಯನ್ನು ನೀಡಲಿಕ್ಕಾಗಿಯೇ ಮೀಸಲಾಗಿಟ್ಟಿದ್ದು ಕಂಡುಬರುತ್ತದೆ.

  ಈ ಸೇವೆ ಕೇವಲ ವ್ಯಕ್ತಿಗಳ ಮಟ್ಟದಲ್ಲಿ ಮಾತ್ರ ಇರುವುದಿಲ್ಲ. ಕೆಲವೊಮ್ಮೆ ಸಾರ್ವಜನಿಕ ಕೆಲಸಗಳೂ, ಸಾಮುದಾಯಿಕ ಕೆಲಸಗಳೂ ಇದರ ಪರಿಧಿಗೆ ಬರುತ್ತವೆ. ಉದಾಹರಣೆಗೆ ಗಾಂಧೀಜಿಯವರ ಹರಿಜನೋದ್ಧಾರ ಕಾರ್ಯಕ್ರಮ. ವಿಭಿನ್ನ ಬುಡಕಟ್ಟು ಸಮಾಜಗಳ ಅಭಿವೃದ್ಧಿ ನಡೆಸುವ  ವ್ಯಕ್ತಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳನ್ನೂ ಇಂದು ಕಾಣಬಹುದು. ಅಂದರೆ ವ್ಯಕ್ತಿಯೊಬ್ಬನು ತನ್ನ ಸ್ವಾರ್ಥಕ್ಕಲ್ಲದೇ ಪರರಿಗೆ ಮಾಡುವ ಸಾರ್ವಜನಿಕ ಕೆಲಸಗಳೆಲ್ಲವೂ ಈ ಸೇವೆಯ ಪರಿಧಿಗೆ ಬರುತ್ತವೆ. ಒಂದರ್ಥದಲ್ಲಿ ಸ್ವಾರ್ಥರಹಿತ ಕೆಲಸಗಳೆಲ್ಲವೂ ಈ ಸೇವೆಯ ಪಟ್ಟಿಗೆ ಬರುತ್ತವೆ. ನಮ್ಮ ಮಕ್ಕಳಿಗೆ ಇಂಥ ಸೇವಾ ಮನೋಭಾವವನ್ನು ಬೆಳೆಸಲಿಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ ಎಂಬ ಕಾರ್ಯಕ್ರಮವನ್ನು ಕೂಡ ಉನ್ನತ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲಾಗಿದೆ. ನಮ್ಮಲ್ಲಿ ದೇಶಸೇವೆ ಎಂಬ ಕಲ್ಪನೆಯೂ ನೆಲೆಯೂರಿದೆ. ಅಂದರೆ ದೇಶಕ್ಕಾಗಿ ವ್ಯಕ್ತಿಯೊಬ್ಬನು ಸ್ವಾರ್ಥರಹಿತವಾಗಿ ಕೆಲಸ ಮಾಡುವುದು. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 47: ಕೆಲವು ಅರ್ಥವಾಗದ ಸಾಂಸ್ಕೃತಿಕ ಚರ್ಚೆಗಳು

ಪ್ರೊ. ರಾಜಾರಾಮ ಹೆಗಡೆ 

  ಇಂದಿನ ಕೆಲವು ಚರ್ಚೆಗಳ ವರಸೆ ಹೀಗಿದೆ: ಒಂದೆಡೆ ನಾವು ಜಾಗತೀಕರಣವನ್ನು ತಡೆಯಬೇಕು ಏಕೆಂದರೆ ನಮ್ಮ ಪಾರಂಪರಿಕ ಜೀವನಕ್ರಮವನ್ನು ಅದು ನಾಶಮಾಡಿಬಿಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಾಗೆ ಹೇಳುವವರೇ ಮತ್ತೊಂದೆಡೆ ನಮ್ಮ ಪಾರಂಪರಿಕ ಜೀವನಕ್ರಮವೇ ಸರಿಯಿಲ್ಲ, ಅದು ಜಾತಿ ವ್ಯವಸ್ಥೆ, ಪುರೋಹಿತಶಾಹಿ ಹಾಗೂ ಮೂಢನಂಬಿಕೆಗಳಿಂದ ತುಂಬಿದೆ ಎಂದೂ ಹೇಳುತ್ತಾರೆ. ಹಾಗಾದರೆ ಅವರು ಬಯಸುವ ಪಾರಂಪರಿಕ ಜೀವನಕ್ರಮದ ಸ್ವರೂಪವೇನು ಎಂಬುದನ್ನು ಯಾರೂ ಸ್ಪಷ್ಟಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದಕ್ಕೆ ವಿವರಣೆಯನ್ನು ನೀಡಲು ಬಯಸುವವರಲ್ಲಿ ಕೆಲವರು ಗಾಂಧೀಜಿಯವರನ್ನು ಆಧರಿಸುತ್ತಾರೆ. ಅವರ ಸರಳ ಹಾಗೂ ಸ್ವಾವಲಂಬನೆಯ ಜೀವನ ಕಲ್ಪನೆ, ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಇಟ್ಟುಕೊಂಡು ವಿವರಿಸುತ್ತಾರೆ. ಆದರೆ ಉಳಿದವರು ಇಂಥ ಪರ್ಯಾಯಗಳನ್ನೇನೂ ಸೂಚಿಸುವುದಿಲ್ಲ. ಇಂಥವರಲ್ಲಿ ಅಂಥ ಬದುಕನ್ನು ಕೂಡ ನಾವು ನೋಡುವುದಿಲ್ಲ. ಹಾಗಾಗಿ ಇವರು ನಿರ್ಧಿಷ್ಟವಾಗಿ ಯಾವ ಪಾರಂಪರಿಕ ಜೀವನ ಪದ್ಧತಿಯನ್ನು ಉದ್ದೇಶಿಸಿದ್ದಾರೆ ಎನ್ನುವುದು ನಮಗೆ ಅರ್ಥವಾಗದೇ ಹೋಗುತ್ತದೆ.

  ಅದೇ ರೀತಿ ಒಂದೆಡೆ ನಮ್ಮ ಜಾನಪದ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿಕೊಳ್ಳಬೇಕು ಏಕೆಂದರೆ ಅವುಗಳಲ್ಲೇ ನಮ್ಮ ಉಜ್ವಲ ಹಾಗೂ ಶ್ರೀಮಂತ ದೇಸೀ ಸಂಸ್ಕೃತಿ ಉಳಿದುಕೊಂಡು ಬಂದಿದೆ ಎನ್ನಲಾಗುತ್ತದೆ, ಮತ್ತೊಂದೆಡೆ ಈ ಕಲೆಗಳನ್ನು ಪ್ರರ್ದಶಿಸುವವರ ಸಾಂಪ್ರದಾಯಿಕ ಜೀವನಕ್ರಮವನ್ನು ಬದಲಾಯಿಸಬೇಕು ಅವು ಮೂಢನಂಬಿಕೆ ಹಾಗೂ ಶೋಷಣೆಯ ಪ್ರತೀಕ ಎಂದೂ ಹೇಳಲಾಗುತ್ತದೆ. ಶೋಷಣೆಯ ಪ್ರತೀಕವಾದ ಕಲೆಯನ್ನು ಏಕೆ ರಕ್ಷಿಸಿಕೊಂಡು ಬರಬೇಕು ಎಂಬುದಕ್ಕೆ ವಿವರಣೆಗಳಿಲ್ಲ ಅಥವಾ ಅವರ ಜೀವನಕ್ರಮವನ್ನು ಬದಲಾಯಿಸಿದರೆ ಅವರ ಕಲೆ ಉಳಿದುಕೊಂಡು ಬರುವುದು ಹೇಗೆ ಎನ್ನುವುದರ ಕುರಿತು ಚಿಂತನೆಗಳಿಲ್ಲ. ಉದಾಹರಣೆಗೆ ಭೂತಕೋಲ, ನಾಗಮಂಡಲ, ಇತ್ಯಾದಿಗಳು. ಒಂದು ರೀತಿಯಲ್ಲಿ ನೋಡಿದರೆ ಭಾರತೀಯ ಜಾನಪದ ಕಲೆ ಎಂದು ಯಾವುದನ್ನು ಕರೆಯಲಾಗುತ್ತದೆಯೋ ಅದು ಭಾರತೀಯರ ಸಾಂಪ್ರದಾಯಿಕ ಜೀವನ ಕ್ರಮ. ಕೆಲವರು ಅವುಗಳನ್ನು ಸಂಸ್ಕೃತ, ಬ್ರಾಹ್ಮಣ, ಪಾಶ್ಚಾತ್ಯ ಮುಂತಾದ ಬಾಹ್ಯ ಪ್ರಭಾವಗಳಿಂದ ರಕ್ಷಿಸಬೇಕೆನ್ನುತ್ತಾರೆ. ಏಕೆಂದರೆ ಈ ಕಲೆಗಳಲ್ಲಿ ಶೋಷಣೆಯ ವ್ಯವಸ್ಥೆಗೆ ವಿದ್ರೋಹ, ಬಂಡಾಯ, ಕ್ರಾಂತಿ, ಪ್ರತಿಸಂಸ್ಕೃತಿ ಇತ್ಯಾದಿಗಳು ದಾಖಲಾಗಿವೆ ಎನ್ನುತ್ತಾರೆ. ಈ ಜಾನಪದರ ಜೀವನ ಕ್ರಮವೇ ಬದಲಾದಾಗ ಸಾಂಪ್ರದಾಯಿಕ ಶೋಷಣೆಗಳೂ ನಿಂತುಹೋಗುತ್ತವೆ. ಶೋಷಣೆಯೇ ನಿಂತುಹೋದ ಮೇಲೆ ಬಂಡಾಯದ ಅಗತ್ಯವಾದರೂ ಏನು? ಅಥವಾ ಅದನ್ನು ರಕ್ಷಿಸುವ ಈ ಕಲಾ ಪ್ರಕಾರಗಳ ಪ್ರಸ್ತುತತೆಯಾದರೂ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 46: ಇಂಥವರು ಯಾವ ಸೀಮೆಯ ವಿಚಾರವಂತರಯ್ಯ?

ಪ್ರೊ. ರಾಜಾರಾಮ ಹೆಗಡೆ 

ಇತ್ತೀಚೆಗೆ ಭಗವಾನ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ ಹಾಗೂ ಆ ಪ್ರಶಸ್ತಿಯನ್ನು ವಾಪಸು ತೆಗೆದುಕೊಳ್ಳಬೇಕು ಎಂಬುದಾಗಿ  ಫೇಸ್ಬುಕ್ಕಿನಲ್ಲಿ ಸಹಿ ಚಳವಳಿ ನಡೆಯುತ್ತಿದೆ. ಇದನ್ನು ಟೀಕಿಸಿ ಪ್ರತಿಪಕ್ಷದವರು ಇದು ಹಿಂದೂ ಮೂಲಭೂತವಾದಿಗಳ ಅಟ್ಟಹಾಸ ಎಂಬುದಾಗಿ ವರ್ಣಿಸುತ್ತಿದ್ದಾರೆ. ಇದು ವೈಚಾರಿಕ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನ ಎಂಬಂತೆ ಕೂಡ ವರ್ಣಿಸಲಾಗುತ್ತಿದೆ. ಕಲಬುರ್ಗಿಯವರ ಹತ್ಯೆಯ ದಿನದಿಂದಲೇ ಆ ಹತ್ಯೆಯನ್ನು ನಡೆಸಿದವರು ಹಿಂದೂ ಮೂಲಭೂತವಾದಿಗಳೇ ಎಂಬುದಾಗಿ ಪ್ರಗತಿಪರ ಬುದ್ಧಿಜೀವಿಗಳಲ್ಲಿ ಕೆಲವರು ಒಕ್ಕೊರಲಿನಿಂದ ಸಾರುತ್ತಿರುವ ಸಂದರ್ಭದಲ್ಲೇ ಈ ವಿರೋಧ ಪ್ರಾರಂಭವಾಗಿದೆ. ಈ ಎರಡೂ ಘಟನೆಗಳನ್ನೂ ಜೋಡಿಸಿ ಮೂಲಭೂತವಾದಿಗಳಿಂದ ಪ್ರಗತಿಪರ ವೈಚಾರಿಕ ಸ್ವಾತಂತ್ರ್ಯಕ್ಕೇ ಧಕ್ಕೆ ಬರುತ್ತಿದೆ ಎಂಬುದಾಗಿ ಕೂಡ ಈ ಘಟನೆಯನ್ನು ವಿಚಾರವಾದಿಗಳು ಗ್ರಹಿಸುತ್ತಿದ್ದಾರೆ.

 ಇಂಥ ಸನ್ನಿವೇಶಗಳು ಹೊಸದಿರಬಹುದು, ಆದರೆ ಇವುಗಳಲ್ಲಿ ಒಂದು ಹಳೆತನವಿದೆ. ಅದೆಂದರೆ ಒಂದು ಗುಂಪು ಮುಕ್ತವಾಗಿ, ನಿಷ್ಠುರವಾಗಿ ಹಿಂದೂ ಸಮಾಜ ಹಾಗೂ ಸಂಪ್ರದಾಯಗಳ ಕುರಿತು ಅವಹೇಳನೆಯನ್ನು ಮಾಡುವುದು ಹಾಗೂ ಮತ್ತೊಂದು ಗುಂಪು ಅದನ್ನು ವಿರೋಧಿಸುವುದು. ಅವಹೇಳನೆಯನ್ನು ಮಾಡುವವರನ್ನು ಬೆಂಬಲಿಸುವವರು ಸ್ವಾತಂತ್ರ್ಯ ರಕ್ಷಕರ ವರ್ಗಕ್ಕೆ ಸೇರುತ್ತಾರೆ, ಅವರನ್ನು ವಿರೋಧಿಸುವವರು   ಫ್ಯಾಸಿಸಂ ಅಥವಾ ಮೂಲಭೂತವಾದ ಎಂಬ ಕೆಟಗರಿಗೆ ಸೇರುತ್ತಾರೆ. ಇಂಥ ಸನ್ನಿವೇಶಗಳನ್ನು ಪದೇ ಪದೇ ನೋಡಿದವರಿಗೆ ಒಂದೆಡೆ ಅಭಿಪ್ರಾಯ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವವರೂ ಮತ್ತೊಂದೆಡೆ  ಅವರನ್ನು ಹತ್ತಿಕ್ಕಲು ಫ್ಯಾಸಿಸ್ಟ್ಗಳೂ ಸದಾ ಹೋರಾಡುತ್ತಿರುವಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ಆಳುವ ಸರ್ಕಾರಗಳು ಕೂಡ ಈ ಕಥೆಯನ್ನು ನಂಬಿಕೊಂಡಿರುವಂತೆ ಕಾಣುತ್ತದೆ. ಹಾಗಾಗಿ ಒಬ್ಬರ ವಿಚಾರವನ್ನು ರಕ್ಷಿಸುವುದೂ ಮತ್ತೊಬ್ಬರ ವಿಚಾರವನ್ನು ದಮನಿಸುವುದೂ ಅದಕ್ಕೆ ಸಕ್ರಮವಾಗಿ, ಪ್ರಜಾ ಪ್ರಭುತ್ವದ ಕಾರ್ಯಕ್ರಮವಾಗಿ ಕಾಣಿಸುತ್ತದೆ. ಆದರೆ ಮತ್ತೊಂದು ಪಕ್ಷದವರಿಗೆ ಅದೊಂದು ನಿರ್ಲಜ್ಜ, ಅನೀತಿಯುತ ಸಮರ್ಥನೆಯಾಗಿ ಕಾಣಿಸುತ್ತದೆ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 45: ರಾಮಾಯಣ ಮಹಾಭಾರತಗಳ ಕುರಿತ ವಿಸ್ಮೃತಿ

ಪ್ರೊ. ರಾಜಾರಾಮ ಹೆಗಡೆ 

ರಾಮಾಯಣ ಮಹಾಭಾರತಗಳು ಭಾರತೀಯ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಸಾವಿರಾರು ವರ್ಷಗಳಿಂದ ಬೇರೆ ಬೇರೆ ಭಾಷೆಗಳಲ್ಲಿ ಅವು ಅವತಾರವೆತ್ತಿವೆ. ಗ್ರಾಂಥಿಕ ರೂಪದಲ್ಲಿರಬಹುದು, ಮೌಖಿಕ, ಜಾನಪದ ಕಾವ್ಯ, ಕಥೆಗಳ ರೂಪದಲ್ಲಿರಬಹುದು, ಅವುಗಳನ್ನು ಯಾವುದೇ ಒಂದು ಭಾಷೆ, ಜನ, ಜಾತಿ, ವರ್ಗಗಳಿಗೆ ಸಮೀಕರಿಸುವ ಸಾಧ್ಯತೆಯಂತೂ ಖಂಡಿತಾ ಇಲ್ಲ. ಅವು ಯಾವುದೋ ಒಂದು ವರ್ಗದ ಅಗತ್ಯಕ್ಕಾಗಿ ಕುಳಿತು ಬರೆದ ಗ್ರಂಥಗಳಂತೂ ಅಲ್ಲ. ಪೌರಾಣಿಕ ಪುರುಷರಾದ ವ್ಯಾಸ ವಾಲ್ಮೀಕಿಗಳಿಗೆ ಅವುಗಳ ಕತೃತ್ವವನ್ನು ಆರೋಪಿಸಿದರೂ ಕೂಡ, ಈಗ ಭಾರತದಲ್ಲಿ ಅವು ಹರಡಿಕೊಂಡಿರುವ ರೂಪಗಳು ಸಮಸ್ತ ಭಾರತೀಯರ ಸಮಷ್ಠಿಯ ರಚನೆಗಳು.

 ಇಂಥದ್ದೊಂದು ಮಹಾನ್ ಸಂಪ್ರದಾಯವು ಜಗತ್ತಿನ ಬೇರೆ ಯಾವುದೇ ಸಂಸ್ಕೃತಿಗಳಲ್ಲಿ ಇಷ್ಟೊಂದು ಜೀವಂತವಾಗಿ ಇಷ್ಟೊಂದು ದೀರ್ಘಕಾಲ ಬಾಳಿಕೊಂಡು ಬಂದಿರುವುದನ್ನು ನಾವು ಕಾಣೆವು. ಈ ಅಂಶವನ್ನು ಗಮನಿಸಿದಾಗ  ಏಕೆ ಇವು ಭಾರತೀಯರಿಗೆ ಮುಖ್ಯ ಎಂದೆನಿಸಿವೆ ಎನ್ನುವ ಪ್ರಶ್ನೆ ಏಳದೇ ಇರದು. ಆದರೆ ಇಂದು ಭಾರತೀಯ ವಿದ್ವಾಂಸರು ರಾಮಾಯಣ ಮಹಾಭಾರತಗಳ ಕುರಿತು ಆಡುತ್ತಿರುವ ಮಾತುಗಳು ಹಾಗೂ ಮಾಡುತ್ತಿರುವ ಸಂಶೋಧನೆಗಳನ್ನು ಗಮನಿಸಿದಾಗ ಇಂಥವರಿಗೆ  ಒಂದೋ ಈ ಪ್ರಶ್ನೆ ಎದ್ದಿಲ್ಲ, ಅಥವಾ ಇವುಗಳ ಹೆಸರಿನಲ್ಲಿ ಮತ್ತೇನೋ ಕಾರ್ಯಕ್ರಮವೇ ಮುಖ್ಯವಾಗಿದೆ ಎನ್ನದೇ ವಿಧಿ ಇಲ್ಲ. Read more…

Categories: Uncategorized
%d bloggers like this: