ಅಂಕಣ: ನವನೀತ

rajaram hegdeಕಂತು 44ಸಂಶೋಧನೆಯ ಶತ್ರುಗಳು ಯಾರು?

ಪ್ರೊ. ರಾಜಾರಾಮ ಹೆಗಡೆ 

  ಪ್ರೊ. ಎಂ. ಎಂ. ಕಲಬುರ್ಗಿಯವರ ಹತ್ಯೆಯ ಸುದ್ದಿ ಕನ್ನಡ ಸಂಶೋಧಕರಿಗೆಲ್ಲ ಆಘಾತವನ್ನು ನೀಡಿದೆ. ಕನ್ನಡ ಪ್ರಾಧ್ಯಾಪಕರಾದ ಅವರು ಗ್ರಂಥ ಸಂಪಾದನೆ, ವಚನ ಸಂಪಾದನೆ, ಶಾಸನ ಅಧ್ಯಯನ ಹಾಗೂ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತು. ಅದರಲ್ಲೂ ವಚನಯುಗದ ಕುರಿತು ಆಳವಾದ ಹಾಗೂ ವಿಸ್ತೃತವಾದ ಅಧ್ಯಯನಗಳನ್ನು ನಡೆಸಿದವರು. ಅವರ ಮಾರ್ಗ ಸಂಪುಟಗಳು ಇಂಥ ಬಿಡಿ ಬರೆಹಗಳ ಸಂಗ್ರಹವಾಗಿವೆ. ಅವರು ಅನೇಕ ಪ್ರತ್ಯೇಕ ಗ್ರಂಥಗಳನ್ನೂ ರಚಿಸಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಅವರ ವೃತ್ತಿ ಜೀವನದಲ್ಲೂ ನಿವೃತ್ತಿಯ ನಂತರವೂ ಅವರು ಯಾವದೇ ಆಡಳಿತಾತ್ಮಕ, ವಯಕ್ತಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಸಂಶೋಧನೆಯ ಕೆಲಸ ಮಾತ್ರ ಯಥಾಕ್ರಮದಲ್ಲಿ ಮುಂದುವರೆಯಿತು. ಕಲಬುರ್ಗಿಯವರಿಗೆ ಸಂಶೋಧನೆ ಕೇವಲ ಒಂದು ಶೈಕ್ಷಣಿಕ ಕರ್ತವ್ಯವಾಗಲೀ, ಬದ್ಧತೆಯಾಗಲೀ ಆಗಿರದೇ ಒಂದು ಸಹಜ ಸೆಳೆತವಾಗಿತ್ತು. ಹಾಗಾಗಿ ಓದುವುದು, ಬರೆಯುವುದು, ಇತರ ಸಂಶೋಧಕರ ಜೊತೆಗೆ ಚರ್ಚೆ, ವಾಗ್ವಾದ, ಜಗಳ, ಇತ್ಯಾದಿಗಳು ಅವರ ಸಹಜ ಜೀವನಕ್ರಮಗಳಾಗಿದ್ದವು. ಇಂಥ ಜಗಳಗಳ ಆಚೆಗೂ ಸಹ ಸಂಶೋಧಕರ ಜೊತೆಗೆ ಸ್ನೇಹವನ್ನು ಉಳಿಸಿಕೊಂಡು ಆತ್ಮೀಯವಾಗಿ ವರ್ತಿಸುವುದು ಕೂಡ ಅಷ್ಟೇ ಸಹಜವಾಗಿತ್ತು.

  ಇಂಥದ್ದೊಂದು ಜೀವನವು ಯುವ ಸಂಶೋಧಕರಿಗೆ ಮಾದರಿಯಾಗಿದೆ. ಆದರೆ ಸಂಶೋಧನೆಯ ಕುರಿತು ಸಹಜ ಆಸಕ್ತಿ ಹಾಗೂ ಪೃವೃತ್ತಿಯಿಲ್ಲದವರಿಗೆ ಕಲಬುರ್ಗಿಯವರ ಜೀವನವು ಆಸಕ್ತಿಕೆರಳಿಸಬಹುದೆ? ಇಂದು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯನ್ನು ಕಾಟಾಚಾರ ಅಥವಾ ಅನಿವಾರ್ಯ ಎಂಬಂತೆ ನಡೆಸುವವರೇ ಜಾಸ್ತಿಯಾಗಿದ್ದಾರೆ. ಸಂಶೋಧನೆ ಎಂಬುದು ಕನಿಷ್ಠ ಅರ್ಹತೆಗೆ ಅಥವಾ ಪದೋನ್ನತಿಗೆ ಒಂದು ಸಾಧನ ಎಂಬಂತೆ ನೋಡುವ ಧೋರಣೆ ಶಿಕ್ಷಕರಲ್ಲಿ ಬಲವಾಗಿದೆ. ಇಂಥ ವಾತಾವರಣದಲ್ಲಿ ಪಿಹೆಚ್ಡಿ ಮಾಡುತ್ತೇವೆ ಎಂದು ಬರುವ ಬಹುತೇಕ ವಿದ್ಯಾರ್ಥಿಗಳು ಓದುವುದು, ತಿಳಿದುಕೊಳ್ಳುವುದು, ಪ್ರಶ್ನೆಗಳನ್ನು ಎತ್ತಿ ಉತ್ತರಿಸುವುದು ಇತ್ಯಾದಿಗಳಿಗೂ ತಮ್ಮ ಪಿಹೆಚ್ಡಿಗೂ ಸಂಬಂಧವಿದೆ ಎಂಬುದನ್ನೇ ಮರೆತಂತಿದೆ. ಅದಕ್ಕೆ ಬದಲಾಗಿ ಯಾರ್ಯಾರದೋ ಪುಸ್ತಕಗಳಿಂದ, ಪ್ರಬಂಧಗಳಿಂದ ಕೆತ್ತಿ ಅಂಟಿಸಿಕೊಂಡ ಸಾಲುಗಳು, ಇಲ್ಲಾ ಇಡಿಯಾಗಿ ಎತ್ತಿ ಎಗರಿಸಿದ ಭಾಗಗಳು ಹೆಚ್ಚು ಹೆಚ್ಚಾಗಿ ಸಂಶೋಧನಾ ಪ್ರಬಂಧಗಳಲ್ಲಿ ರಾರಾಜಿಸತೊಡಗಿವೆ. ಅಂದರೆ ಸಂಶೋಧಕರೆಂದು ಕರೆಸಿಕೊಳ್ಳುವವರಲ್ಲಿ ಬೌದ್ಧಿಕ ಆಸಕ್ತಿ ಇಲ್ಲವಾಗಿದೆ. ಇಂಥವರ ವ್ಯವಹಾರಕ್ಕೆ ಕಲಬುರ್ಗಿಯಂಥವರು ತೊಡಕಾಗಿ ಪರಿಣಮಿಸಲೂ ಬಹುದು. Read more…

Advertisements
Categories: Uncategorized

ಅಂಕಣ: ನವನೀತ

rajaram hegdeಕಂತು 43: ನದಿನೀರಿಗೆ ದೊಣ್ಣೆನಾಯಕನ ಅಪ್ಪಣೆಯೆ?

ಪ್ರೊ. ರಾಜಾರಾಮ ಹೆಗಡೆ

ಈ ವರ್ಷ ಕರ್ನಾಟಕದಲ್ಲಿ ಕಳೆದ ಅರ್ಧ ಶತಮಾನದಲ್ಲೇ ಅತೀ ಕಡಿಮೆ ಮಳೆಯಾಗಿದೆ ಎನ್ನಲಾಗುತ್ತದೆ. ಇನ್ನು ಮುಂದೆ ಏನಾದರೂ ಪವಾಡ ನಡೆಯದಿದ್ದರೆ ಕುಡಿಯುವ ನೀರಿನ ಕ್ಷಾಮವನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ. ಕನ್ನಂಬಾಡಿಯಲ್ಲಿರುವ ನೀರಿನಲ್ಲಿ ಬೆಂಗಳೂರು ಮೈಸೂರು ಆದಿಯಾಗಿ ಹಳೆ ಮೈಸೂರಿನ ಅನೇಕ ಪಟ್ಟಣ ಹಾಗೂ ಗ್ರಾಮಗಳ ಕುಡಿಯುವ ನೀರಿನ ಪೂರೈಕೆಯಾಗುವುದು ಕಷ್ಟವಿದೆ. ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕುರಿತು ಸುದೀರ್ಘ ಹೊರಾಟವೇ ನಡೆಯುತ್ತಿದ್ದು, ಈಗ ಅದು ಉಲ್ಭಣಾವಸ್ಥೆಯನ್ನು ತಲುಪಿದೆ. ಒಂದೊಮ್ಮೆ ಈ ಯೋಜನೆಯು ಜಾರಿಯಾಗದಿದ್ದರೆ ಉತ್ತರ ಕರ್ನಾಟಕದ ಗ್ರಾಮಗಳಿಗೆ ಕುಡಿಯುವ ನೀರಿಗೆ ತತ್ವಾರವಾಗುವ ಸಂಭವವಿದೆ.

  ಇವೆರಡೇ ಉದಾಹರಣೆಗಳಲ್ಲ. ಬಹುತೇಕವಾಗಿ ಇಂದು ಕುಡಿಯುವ ನೀರಿಗೆ ನಾವು ಹೆಚ್ಚೆಚ್ಚು ನದಿಗಳನ್ನು ಆಧರಿಸತೊಡಗಿದ್ದೇವೆ. ನದಿಗಳ ಜಲಾಶಯಗಳಿಂದ ಪೈಪುಗಳನ್ನು ಅಳವಡಿಸಿ ಹೆಚ್ಚೆಚ್ಚು ವಸತಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗಳು ಚಾಲ್ತಿಯಲ್ಲಿ ಬಂದಿವೆ. ಹಾಗಾಗಿ ಕೆಲವೇ ಪ್ರಮುಖ ನದಿಗಳು ಕುಡಿಯುವ ನೀರಿನ ಮೂಲಗಳಾಗಿ ಪರಿವರ್ತನೆಯಾಗಿವೆ. ದಿನಕಳೆದಂತೆ  ಇಂಥ ಜಲಾಶಯಗಳಿಂದ ನೀರಿನ ಪುರವಟೆಯ ಹೆಚ್ಚೆಚ್ಚು ವಿಸ್ತರಣೆಗಾಗಿ ಬೇಡಿಕೆ ಹಾಗೂ ಸಂಘರ್ಷಗಳು ಜಾಸ್ತಿಯಾಗತೊಡಗಿವೆ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 42ಹಕ್ಕಿನ ಭಾಷೆ- ಕರ್ತವ್ಯದ ಭಾಷೆ.

ಪ್ರೊ. ರಾಜಾರಾಮ ಹೆಗಡೆ

ಸಾಂಪ್ರದಾಯಿಕ ಕುಟುಂಬಗಳಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಮನೆಯಲ್ಲಿ ಹಿರಿಯರು ಅವರ ಕರ್ತವ್ಯಗಳನ್ನು ಕಲಿಸುತ್ತ ಅವರಿಗೆ ಬದುಕನ್ನು ಕಲಿಸುತ್ತಾರೆ.  ಗುರು ಹಿರಿಯರಿಗೆ ವಿಧೇಯನಾಗಿರಬೇಕು, ಅದೇ ರೀತಿ ಹಿರಿಯನಾಗಿ ತನಗಿಂತ ಕಿರಿಯರನ್ನು ಹೇಗೆ ನಡೆಸಿಕೊಳ್ಳಬೇಕು, ಇತ್ಯಾದಿ. ಅಣ್ಣ ತಮ್ಮಂದಿರಲ್ಲಿ ಜಗಳ ಎದ್ದಾಗ ಹಿರಿಯರು ಯಾವಾಗಲೂ ಸಣ್ಣವನ ಪರ, ‘ನೀನು ಸಣ್ಣವನೋ ಅವನೊ?’ ಎಂದು ಗದರುತ್ತಾರೆ. ಹೆಣ್ಣು ಮಕ್ಕಳಿಗೆ ಇಂಥ ಬೋಧನೆಗಳು ಸ್ವಲ್ಪ ಜಾಸ್ತಿ. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು, ಮಾತನಾಡಬೇಕು ಎಂಬ ಶಿಕ್ಷಣವೂ ನಡೆಯುತ್ತದೆ. ಈ ಪಾಠಗಳನ್ನೆಲ್ಲ ಕೆಲವೊಮ್ಮೆ ಹೊಡೆದೂ ಕಲಿಸುತ್ತಾರೆ, ಕೆಲವೊಮ್ಮೆ ಮಗು ತಾನೇ ನೋಡಿ ಕಲಿಯುತ್ತದೆ. ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲಿಸಬೇಕಾದ ಇಂಥ ಕರ್ತವ್ಯಗಳನ್ನು ಧರ್ಮ ಎಂಬುದಾಗಿ ಹೇಳುತ್ತೇವೆ. ಇದು ಭಾರತೀಯ ಪರಂಪರೆ ಎನ್ನಬಹುದು. ಬ್ರಹ್ಮಚರ್ಯವನ್ನು ಮುಗಿಸಿ ಗ್ರಹಸ್ಥ ಧರ್ಮಕ್ಕೆ ಮರಳುತ್ತಿದ್ದ ವಿದ್ಯಾರ್ಥಿಗಳಿಗೆ ತಾಯಿ, ತಂದೆ, ಆಚಾರ್ಯ, ಅತಿಥಿ ಮುಂತಾದವರನ್ನು ದೇವರಂತೆ ಕಾಣಿರಿ, ನಮ್ಮ ಸಚ್ಚರಿತೆಗಳನ್ನು ಮಾತ್ರ ಅನುಸರಿಸಿರಿ, ಸಂತತಿಯನ್ನು ಮುಂದುವರೆಸಿ, ಇತ್ಯಾದಿಯಾಗಿ ಗ್ರಹಸ್ಥ ಧರ್ಮದ ಕುರಿತು ಉಪದೇಶಗಳಿರುತ್ತಿದ್ದವು. ರಾಜನಾದವನು ಏನೇನು ಮಾಡಬೇಕು ಎಂಬುದಕ್ಕೆ ರಾಜಧರ್ಮದ ಉಪದೇಶಗಳಿರುತ್ತಿದ್ದವು. ಅದೇ ರೀತಿ ಸ್ತ್ರೀ ಧರ್ಮ, ವಿಭಿನ್ನ ವರ್ಣಗಳ ಧರ್ಮ, ಇತ್ಯಾದಿಗಳ ಜೊತೆಗೆ ಆಪದ್ಧರ್ಮಗಳೂ ಇರುತ್ತಿದ್ದವು. ಅಂದರೆ ಒಂದು ವ್ಯಕ್ತಿಯ ಸಾಮಾಜಿಕ ನಡಾವಳಿಯು ಧರ್ಮ ಎಂಬ ಕಲ್ಪನೆಯನ್ನಿಟ್ಟುಕೊಂಡು ನಡೆಯುತ್ತಿತ್ತು. ಒಟ್ಟಿನಲ್ಲಿ ಒಂದು ಮಗು ಬೆಳೆದು ದೊಡ್ಡದಾಗುವಾಗ ತಾನು ತನ್ನ ಸುತ್ತಲಿನ ಜನರ ಕುರಿತು ನಿಭಾಯಿಸಬೇಕಾದ ಕರ್ತವ್ಯಗಳೇನು ಎಂಬುದನ್ನು ರೂಢಿಸಿಕೊಳ್ಳಬೇಕು.

 ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ ಸಂಬಂಧಗಳು ಕರ್ತವ್ಯದ ತಳಹದಿಯ ಮೇಲೆ ನಿಂತಿವೆ. ಋಣದ ಕಲ್ಪನೆ ಈ ಹಿನ್ನೆಲೆಯಿಂದ ಹುಟ್ಟಿಕೊಳ್ಳುತ್ತದೆ. ನಮ್ಮಲ್ಲಿ ಮನುಷ್ಯನೊಬ್ಬನು ಮೂರು ಋಣಗಳನ್ನು ಹೊರುವಂಥವನಾಗಿದ್ದಾನೆ ಹಾಗೂ ಆ ಋಣಗಳನ್ನು ತೀರಿಸುವುದು ಅವನ ಕರ್ತವ್ಯವಾಗಿರುತ್ತದೆ. ಅವೆಂದರೆ ದೇವ ಋಣ, ಪಿತೃ ಋಣ ಹಾಗೂ ಗುರು ಋಣ. ದೇವ ಋಣವನ್ನು ಯಜ್ಞ/ಪೂಜೆಯ ಮೂಲಕ ತೀರಿಸಬೇಕು. ಪಿತೃ ಋಣವನ್ನು ಸಂತಾನವೃದ್ಧಿಯ ಮೂಲಕ ಹಾಗೂ ವೃದ್ಧಾಪ್ಯದಲ್ಲಿ ತಂದೆತಾಯಿಗಳನ್ನು ಸಲಹುವ ಮೂಲಕ ತೀರಿಸಬೇಕು. ಗುರು ಋಣವನ್ನು ವಿದ್ಯಾದಾನ ಮಾಡುವ ಮೂಲಕ ತೀರಿಸಬೇಕು. ಅಂದರೆ ಬೇರೆಯವರು ನಮಗೆ ಏನಾದರೂ ಉಪಕಾರವನ್ನು ಮಾಡಿದರೆ ಅದೊಂದು ಋಣಭಾರವಾಗಿ ನಮ್ಮ ಮೇಲಿರುತ್ತದೆ. ಅಂಥವರು ಕಷ್ಟದಲ್ಲಿ ಇದ್ದಾಗ ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಅಥವಾ ಅವರು ನಮಗೆ ಮಾಡಿದ ಉಪಕೃತಿಯನ್ನು ನಾವು ಬೇರೆಯವರಿಗೆ ಮಾಡಿದರೂ ಆ ಋಣ ಸಂದಾಯವಾಗುತ್ತದೆ. ಪರಾರ್ಥ, ಪರೋಪಕಾರ ಎಂಬುದು ಈ ಸಮಾಜದ ಆದರ್ಶ. ಎಷ್ಟರ ಮಟ್ಟಿಗೆ ನಾವು ಇದನ್ನು ಪಾಲಿಸುತ್ತೇವೆ ಎಂಬುದು ಮುಖ್ಯವಲ್ಲ, ಏನನ್ನು ಆದರ್ಶವಾಗಿ ಎತ್ತಿಹಿಡಿಯಲಾಗುತ್ತದೆ ಎಂಬುದು ಮುಖ್ಯ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 41ಹಸಿವಾದೊಡೆ ಭಿಕ್ಷಾನ್ನಗಳುಂಟು…

ಪ್ರೊ. ರಾಜಾರಾಮ ಹೆಗಡೆ

  ಮಹಾಭಾರತದ ಅಂತ್ಯದಲ್ಲಿ ಪಾಂಡವರು ರಾಜ್ಯವನ್ನು ಗೆದ್ದು ಅಶ್ವಮೇಧಯಾಗವನ್ನು ಮಾಡುತ್ತಾರೆ. ಇಂಥ ನಭೂತೋ ನಭವಿಷ್ಯತಿ ಎಂಬಂಥ ಯಾಗವನ್ನು ಮಾಡಿ ಅಪರಿಮಿತ ಪುಣ್ಯವನ್ನು ಸಂಪಾದಿಸಿದೆವು ಎಂದು ಅವರು ಬೀಗುತ್ತಿರುವಾಗ ಅಲ್ಲಿಗೆ ಒಂದು ಅರ್ಧ ಮೈ ಬಂಗಾರವಾಗಿರುವ ಮುಂಗುಸಿಯೊಂದು ಬರುತ್ತದೆ. ಈ ಕೌತುಕ ಏನೆಂದು ವಿಚಾರಿಸಿದರು.  ಭಿಕ್ಷೆ ಎತ್ತಿ ಜೀವಿಸುತ್ತಿದ್ದ ಬ್ರಾಹ್ಮಣನ ಕುಟುಂಬವೊಂದು ತಮ್ಮಪಾಲಿನ ಎಲ್ಲ ಹಿಟ್ಟನ್ನು ಹಸಿದು ಬಂದವನೊಬ್ಬನಿಗೆ ದಾನ ಮಾಡಿದ್ದನ್ನು ನೋಡಿದ್ದರಿಂದ ಅದರ ಮೈ ಅರ್ಧ ಬಂಗಾರವಾಗಿತ್ತು. ಪಾಂಡವರ ಅಶ್ವಮೇಧಯಾಗದಂಥ ಪುಣ್ಯ ಪ್ರಸಂಗಕ್ಕೆ ಸಾಕ್ಷಿಯಾದರೆ ತನ್ನ ಮತ್ತರ್ಧ ಮೈ ಕೂಡ ಬಂಗಾರವಾಗುವುದರಲ್ಲಿ ಸಂದೇಹವಿಲ್ಲ ಎಂದು ಭಾವಿಸಿ ಅದು ಅಲ್ಲಿಗೆ ಬಂದಿತ್ತು. ಆದರೆ ಅದನ್ನು ವೀಕ್ಷಿಸಿಯೂ ಉಳಿದರ್ಧ ಮೈ ಬಂಗಾರವಾಗಲೇ ಇಲ್ಲ. ಅಂದರೆ ಹಸಿದವನಿಗೆ ಅನ್ನದಾನವು ಅಶ್ವಮೇಧಯಾಗಕ್ಕಿಂತಲೂ ಮಿಗಿಲು ಎಂಬುದಾಗಿ ಕಥೆ ಸೂಚಿಸುತ್ತದೆ.

  ಇದು ಕೇವಲ ಕಥೆಯಲ್ಲ. ಇದು ಒಂದು ಸಂಸ್ಕೃತಿಯು ಯಾವುದನ್ನು ಮುಖ್ಯ ಎಂಬುದಾಗಿ ಗಣಿಸುತ್ತದೆ ಎಂಬುದಕ್ಕೆ ಸಂಬಂಧಿಸಿದೆ. ಇಂಥ ಸಂಸ್ಕೃತಿಯಲ್ಲಿ ರೂಪುಗೊಂಡ ಭಾರತೀಯ ಸಾಂಪ್ರದಾಯಿಕ ಕೃಷಿ ಕುಟುಂಬವೊಂದು ಆಲದಮರವಿದ್ದ ಹಾಗೆ. ತನ್ನ ಸುತ್ತಲಿನ ಅನೇಕ ಕೃಷಿಯೇತರ ಸಮುದಾಯಗಳನ್ನು  ಅದು ಸಲಹುತ್ತಿರುತ್ತದೆ. ವರ್ಷವಿಡೀ ಮನೆಗೆ ಅನೇಕ ರೀತಿಯ ಜನರು ಅತಿಥಿಗಳಾಗಿ, ಭಿಕ್ಷಾರ್ಥಿಗಳಾಗಿ ಬರುತ್ತಿರುತ್ತಾರೆ. ನಾನು ಚಿಕ್ಕವನಿದ್ದಾಗ ನಮ್ಮ ಮನೆಗೆ ಭಿಕ್ಷೆಬೇಡುವವರು, ಹಾವುಗೊಲ್ಲರು, ಜೋಗೇರು, ಮೈಲಾರಲಿಂಗ, ಸುಡುಗಾಡು ಸಿದ್ಧರು, ವೇಷಧಾರಿಗಳು, ಮುಂತಾದ ಮುಂಬಾಗಿಲಿನ ಅಂಗಳದ ಅತಿಥಿಗಳು ಸದಾ ಇರುತ್ತಿದ್ದರು. ಇದು ಭಿಕ್ಷಾಟನೆಯನ್ನಾಧರಿಸಿಯೇ ತಮ್ಮ ಬದುಕು ಸಾಗಿಸುತ್ತಿದ್ದ ಸಮುದಾಯ. ಇಂಥವರಿಗೆ ಅಕ್ಕಿ, ಅಡಕೆ, ಹಳೆಯ ಬಟ್ಟೆ ಇತ್ಯಾದಿಗಳನ್ನು ನೀಡಿ ಕಳುಹಿಸಲಾಗುತ್ತಿತ್ತು. ಕೆಲವೊಮ್ಮೆ ಅವರು ಬಹಳ ಕಾಡಿದರೆ ಬಯ್ದು ಓಡಿಸುವುದೂ ಇತ್ತು.   Read more…

Categories: Uncategorized

ಅಂಕಣ: ನವನೀತ

rajaram hegdeಕಂತು 40: ಅತಿಥಿ ದೇವೋ ಭವ

ಪ್ರೊ. ರಾಜಾರಾಮ ಹೆಗಡೆ

 ಭಾರತೀಯರು, ಅದರಲ್ಲೂ ಹಳ್ಳಿ ಸಂಸ್ಕೃತಿಯ ಹಿನ್ನೆಲೆಯವರ ಮನೆಗಳಲ್ಲಿ ನೆಂಟರ ಇಷ್ಟರು ಸದಾ ತುಂಬಿಕೊಂಡಿರುತ್ತಾರೆ.  ವರ್ಷದಲ್ಲಿ  ಹಲವಾರು ಸಂದರ್ಭಗಳಲ್ಲಿ ನೆಂಟರನ್ನು ಆಹ್ವಾನಿಸುತ್ತಾರೆ. ನೆಂಟರೂ ಕೂಡ ಅಷ್ಟೇ. ಆಹ್ವಾನವನ್ನು ಮನ್ನಿಸಿ ಶ್ರದ್ಧೆಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೋ ಎಂಬಂತೆ ಹೋಗಿ ಬರುತ್ತಾರೆ. ಇದು ನಂಟರಿಗೆ ಸೀಮಿತವಾಗಿದ್ದರೆ, ಮದುವೆ, ಮುಂಜಿಗಳಂಥ ಕಾರ್ಯಗಳಲ್ಲಿ ಇಷ್ಟರೆಲ್ಲರಿಗೂ ಆಹ್ವಾನ ಹೋಗುತ್ತದೆ. ಇಂದಂತೂ ಅದು ಜಾತಿ ಮತಗಳನ್ನು ಮೀರಿದ ಒಡನಾಡಿಗಳ ಸಮೂಹ. ಸಾವಿರಾರು ಜನ ಸೇರುತ್ತಾರೆ. ಇಲ್ಲೆಲ್ಲ ಊಟ ಮಾಡುವುದು ಮುಖ್ಯ. ಹಾಗಾಗಿ ಊಟದ ಹೊತ್ತಿಗೆ ಜನದಟ್ಟಣೆ. ಯಾರಾದರೂ ನೆಂಟರು ಇಷ್ಟರಿಗೆ ಮರೆತು ಆಹ್ವಾನ ನೀಡದಿದ್ದರೆ ಅವರು ಸಿಟ್ಟು ಮಾಡುವುದೂ, ಇವರು ಮುಜುಗುರ ಪಟ್ಟುಕೊಳ್ಳುವುದೂ ಸಾಮಾನ್ಯ. ಅಂದರೆ ಈ ಪ್ರಕಾರದವರೆಲ್ಲರನ್ನೂ ನಮ್ಮ ಸಂಪ್ರದಾಯದಲ್ಲಿ ಅಭ್ಯಾಗತರು ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಆಹ್ವಾನಿತರಾಗಿ ಬರುವವರು. ಅವರು ಆಹ್ವಾನವಿಲ್ಲದೇ ಬರುವುದು ಅನುಚಿತ ಹಾಗೂ ಅಸಂಬದ್ಧ.

 ಹಾಗಂತ ಭಾರತೀಯರು ಆಹ್ವಾನದ ಬಗ್ಗೆ ಬಹಳ ಕಟ್ಟುನಿಟ್ಟಾಗಿದ್ದಾರೆ ಅಂತೇನಲ್ಲ. ಇಂಥವರ ಮನೆಗಳಲ್ಲಿ ಯಾವುದೇ ಆಹ್ವಾನವಿಲ್ಲದೇ, ಪೂರ್ವ ಸೂಚನೆಯಿಲ್ಲದೇ ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬರುವವರೂ ಖಾಯಂ ಇರುತ್ತಾರೆ. ಅವರೇ ಅತಿಥಿಗಳು. ಅವರಿಗೆ ಬರಲಿಕ್ಕೆ ತಿಥಿ, ಆಹ್ವಾನ ಇತ್ಯಾದಿಗಳೂ ಬೇಡ.  ಭಾರತೀಯ ಕುಟುಂಬಗಳಲ್ಲಿ ಇವರನ್ನೂ ಕೂಡ ಗೌರವಿಸಿ ಉಪಚರಿಸಲಾಗುತ್ತದೆ. ಅಷ್ಟೇ ಅಲ್ಲ ಇಂಥ ಉಪಚಾರಕ್ಕೆ ಆತಿಥ್ಯ ಎಂಬುದಾಗಿಯೇ ಕರೆಯಲಾಗುತ್ತದೆ. ಇದು ಭಾರತೀಯ ಸಮಾಜದ ಒಂದು ವಿಶಿಷ್ಟತೆ ಹಾಗೂ ಭಾರತೀಯರು ಇದನ್ನು ಸತ್ಸಂಪ್ರದಾಯ ಎಂಬುದಾಗಿ ತಿಳಿಯುತ್ತಾರೆ. ಪೂರ್ವಸೂಚನೆ ಇಲ್ಲದೇ ಇನ್ನೊಬ್ಬರ ಮನೆಗೆ ಹೋಗುವುದು ಪಾಶ್ಚಾತ್ಯರಲ್ಲಿ  ಅಸಭ್ಯ ನಡತೆ. ಪಾಶ್ಚಾತ್ಯರಿಂದ ಪ್ರಭಾವಿತರಾದ ಭಾರತೀಯ ವಿದ್ಯಾವಂತರೂ ಕೂಡ ಹಾಗೇ ಭಾವಿಸುತ್ತಾರೆ. ಅದರಲ್ಲೂ ನಗರಗಳಲ್ಲಿ ಇಂದಿನ ಜೀವನಕ್ರಮದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಅತಿಥಿಗಳನ್ನು ಉತ್ತೇಜಿಸುವುದು ಅಸಾಧ್ಯವಾಗುತ್ತಿದೆ. ಏಕೆಂದರೆ ಹೊತ್ತಲ್ಲದ ಹೊತ್ತಿನಲ್ಲಿ ಬಂದವರನ್ನು ಉಪಚರಿಸಬೇಕಾದರೆ ಅತಿಥಿ ಹಾಗೂ ಗ್ರಹಸ್ಥರಿಬ್ಬರ ಜೀವನ ಕ್ರಮವೂ ಅದಕ್ಕೆ ಹೊಂದಿಕೊಳ್ಳುವಂತಿರಬೇಕು. Read more…

Categories: Uncategorized

ಅಂಕಣ: ನವನೀತ

ಜನವರಿ 1, 2016 1 comment

rajaram hegdeಕಂತು 39: ವೈಜ್ಞಾನಿಕ ಮನೋಭಾವನೆಯ ಹೆಸರಿನಲ್ಲಿ…

ಪ್ರೊ. ರಾಜಾರಾಮ ಹೆಗಡೆ

 ಇಂದು ವೈಜ್ಞಾನಿಕ ಮನೋಭಾವನೆ ಎಂಬುದನ್ನು ಎಲ್ಲೆಲ್ಲೂ ಕೇಳುತ್ತಿರುತ್ತೇವೆ. ಹಾಗೆಂದರೇನು ಎಂಬುದಕ್ಕೆ ಒಂದು ನಿರ್ಧಿಷ್ಟ ಅರ್ಥವನ್ನೂ ಪ್ರಚುರಪಡಿಸಲಾಗಿದೆ. ವೈಜ್ಞಾನಿಕ ಮನೋಭಾವನೆಗೂ ನಮ್ಮ ಹಿಂದೂ ಸಂಪ್ರದಾಯಗಳಿಗೂ ಎಣ್ಣೆ ಸೀಗೆ ಸಂಬಂಧ ಎಂಬುದಾಗಿ ನಂಬಲಾಗಿದೆ. ಹಿಂದೂ ಸಂಪ್ರದಾಯಗಳಲ್ಲಿ ಮೌಢ್ಯ ಎಂಬುದಿರುತ್ತದೆ, ಅದನ್ನು ತೊಡೆಯಲು ಈ ವೈಜ್ಞಾನಿಕ ಮನೋಭಾವನೆ ಬೇಕು. ಯಾವ ರೀತಿಯಲ್ಲಿ ಟಿವಿ ಜಾಹಿರಾತುಗಳಲ್ಲಿ ಯಾವುದೋ ಕಂಪೆನಿಯ ಡಿಟರ್ಜೆಂಟ್ ಅಥವಾ ಟೂತ್ ಪೇಸ್ಟುಗಳನ್ನು ಉಪಯೋಗಿಸಿದ ತಕ್ಷಣ ಕೀಟಾಣುಗಳು ಕಾಲುಕೀಳುತ್ತವೆಯೋ ಹಾಗೇ ವೈಜ್ಞಾನಿಕ ಮನೋಭಾವನೆ ಪಸರಿಸಿದಂತೆಲ್ಲ ಮೌಢ್ಯವು ಕಾಲುಕೀಳುತ್ತದೆ ಎನ್ನಲಾಗುತ್ತದೆ. ಅದೆಲ್ಲ ಸರಿ. ಈ ವೈಜ್ಞಾನಿಕ ಮನೋಭಾವ ಎಂದರೇನು? ಅದನ್ನು ಮೌಢ್ಯದ ಮೇಲೆ ಪ್ರಯೋಗಿಸುವುದುಹೇಗೆ?

  ಇದರ ಪ್ರಯೋಗವನ್ನೂ ಒಂದು ನಿರ್ಧಿಷ್ಟ ರೀತಿಯಲ್ಲಿ ಚಾಲ್ತಿಯಲ್ಲಿ ತರಲಾಗಿದೆ. ದೇವರ ಹಾಗೂ ಅತಿಮಾನುಷ ಶಕ್ತಿಗಳ ಅಸ್ತಿತ್ವವನ್ನು ಅಲ್ಲಗಳೆಯುವುದು, ಪವಾಡಗಳ ಕಣ್ಕಟ್ಟುಗಳನ್ನು ಬಯಲುಮಾಡುವುದು, ನಮ್ಮ ಗ್ರಂಥಗಳನ್ನು ಖಂಡಿಸುವುದು, ಅಥವಾ ಸುಡುವುದು, ಮೂಢನಂಬಿಕೆಗಳ ವಿರುದ್ಧ ಕಾನೂನುಗಳನ್ನು ತರುವುದು, ಸಂಪ್ರದಾಯಗಳ ಪರವಾಗಿ ಮಾತನಾಡುವವರನ್ನು ಹತ್ತಿಕ್ಕುವುದು, ಸಾಂಪ್ರದಾಯಿಕ ಆಚರಣೆಗಳನ್ನು ತೊಡೆಯುವುದು, ಇತ್ಯಾದಿ.  ಈ ಥರದ ಕೆಲಸಗಳಿಂದ ನಮ್ಮ ಸಮಾಜವು ಉದ್ಧಾರವಾಗುತ್ತದೆ, ನಮ್ಮ ಕಷ್ಟಗಳೆಲ್ಲ ದೂರಾಗುತ್ತವೆ, ಎಂಬುದು ವೈಜ್ಞಾನಿಕ ಮನೋಭಾವನೆಯನ್ನು ಪ್ರತಿಪಾದಿಸುವವರ ಸಾಮಾನ್ಯ ಜ್ಞಾನ.  ಆದರೆ ತನ್ನ ಕಷ್ಟಗಳ ಪರಿಹಾರಕ್ಕಾಗಿ ಇಲ್ಲವೆ ಉದ್ಧಾರಕ್ಕಾಗಿಯೇ ದೇವರನ್ನು, ಆಚರಣೆಗಳನ್ನು ನಂಬಿಕೊಂಡಿದ್ದವನಿಗೆ ಅವನ್ನು ತಿರಸ್ಕರಿಸಿದ ಹೊರತೂ ತಾನು ಉದ್ಧಾರವಾಗುವುದಿಲ್ಲ ಎಂಬ ಮಾತು ಹೇಗೆ ತಾನೆ ಅರ್ಥವಾದೀತು? ಅಂದರೆ, ವೈಜ್ಞಾನಿಕ ಮನೋಭಾವನೆ ಎಂದು ಪ್ರಭುತ್ವದ ಮೂಲಕ ಏನೇನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೋ ಅವು ಸಂಪ್ರದಾಯಸ್ಥರ ಮನಮುಟ್ಟುವಲ್ಲಿ ಸೋಲುತ್ತವೆ. ಹಾಗಾಗಿ ಬಲಪ್ರಯೋಗ ಅಥವಾ ಸಂಘರ್ಷವೊಂದೇ ಮಾರ್ಗ. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 38: ಇವರೆಲ್ಲ ಭಾರತೀಯ ಮುಸ್ಲಿಮರ ಹಿತಚಿಂತಕರೆ?

ಪ್ರೊ. ರಾಜಾರಾಮ ಹೆಗಡೆ

ಇತ್ತೀಚೆಗೆ ಯಾಕೂಬ್ ಮೆಮನ್ ಗಲ್ಲಿಗೇರಿದ ನಂತರ ದೇಶಾದ್ಯಂತ ಬಂದ ಪ್ರತಿಕ್ರಿಯೆಗಳಲ್ಲಿ ಒಂದು ಅಸಹಜತೆಯಿತ್ತು. ಮೊದಲನೆಯದಾಗಿ, ಕೆಲವರು ಮರಣ ದಂಡನೆ ಇರಬೇಕೇ ಬೇಡವೆ? ಎಂಬ ನೆಲೆಯಲ್ಲಿ ಚರ್ಚಿಸಿದರು. ಇದಕ್ಕೂ ಹಿಂದೆ ಎಷ್ಟೋ ಮರಣದಂಡನೆಗಳಾಗಿವೆ, ಇಷ್ಟು ಗಂಭಿರವಾಗಿ ನಾಗರಿಕರು ಚರ್ಚೆಯನ್ನೆತ್ತಿದ್ದು ನನ್ನ ಗಮನಕ್ಕೆ ಬಂದಿಲ್ಲ.  ಸ್ವತಂತ್ರ ಭಾರತದಲ್ಲಿ ನಾಥೂರಾಮ ಗೋಡ್ಸೆಯ ಪ್ರಕರಣದಿಂದಲೇ  ಇಂಥ ಉದಾಹರಣೆಗಳು ಪ್ರಾರಂಭವಾದವು. ಅವನ ಮರಣದಂಡನೆಯನ್ನು ತಡೆಯಬಹುದಿತ್ತೆಂದು ಈ ಮಾನವ ಹಕ್ಕುಗಳ ವಕ್ತಾರರಿಗೆ ಎಂದಾದರೂ ಅನ್ನಿಸಬಹುದೆ? ಹಾಗಾಗಿ ಈ ಕುರಿತು ಚರ್ಚೆ ನಡೆಸಬಯಸುವವರು ಇಂಥ ಕ್ಷುದ್ರತನದಿಂದ ಮೇಲೆ ಏರಬೇಕಾಗುತ್ತದೆ. ಎರಡನೆಯದಾಗಿ, ಯಾಕೂಬ್ ಅಪರಾಧಿಯಾಗಿದ್ದನೆ? ಎಂಬ ನೆಲೆಯಲ್ಲಿ ಕೂಡ ಹಲವರು ಚರ್ಚೆ ನಡೆಸಿದರು. ಈ ಚರ್ಚೆ ಕೂಡ ಈ ಸಂದರ್ಭದಲ್ಲೇ ಎದ್ದಿದ್ದು ಕುತೂಹಲಕಾರಿಯಾಗಿದೆ. ಏಕೆಂದರೆ ಅದು ನಮ್ಮ ನ್ಯಾಯದಾನದ ಕಾರ್ಯಕ್ಷಮತೆಯ ಕುರಿತ ಪ್ರಶ್ನೆ. ಆದರೆ ಯಾಕೂಬನಿಗೆ ಸಂಬಂಧಿಸಿದಂತೆ ನಡೆದಷ್ಟು ಅಳೆದು ತೂಗುವ ಕೆಲಸ ಹಿಂದೆಂದೂ ಇಂಥ ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ನಡೆದಿರಲಿಲ್ಲ.

  ಈ ಚರ್ಚೆಯನ್ನು ಗಮನಿಸಿದರೆ ಕೇವಲ ನ್ಯಾಯ ಅನ್ಯಾಯಗಳಷ್ಟೇ ಇಲ್ಲಿನ ಸಮಸ್ಯೆಯಲ್ಲ ಎಂಬುದಂತೂ ಸ್ಪಷ್ಟ. ಇದಕ್ಕೆ ಮುಸ್ಲಿಂ ಜನಾಂಗವನ್ನು ತಳಕುಹಾಕುತ್ತಿರುವುದು ಆತಂಕಕಾರಿ. ಕೆಲವರು, ರಾಜೀವಗಾಂಧಿ, ಇಂದಿರಾ ಗಾಂಧಿ ಹಂತಕರು ಹಿಂದೂಗಳು ಎಂಬ ಕಾರಣಕ್ಕಾಗಿ ರಕ್ಷಿಸಿ, ಯಾಕೂಬ್ ಮುಸ್ಲಿಮನೆಂಬ ಕಾರಣಕ್ಕೆ ಗಲ್ಲಿಗೆ ಏರಿಸುತ್ತಿದ್ದಾರೆ ಎಂದರು. ಅವರಿಗೆ ಗಾಂಧಿ ಹಂತಕರಿಗೆ ಏನಾಯಿತೆಂಬುದು ಮರೆತೇ ಹೋದಂತಿದೆ.  ಇನ್ನೂ ಕೆಲವರು ಅಹಮದಾಬಾದ ಗಲಭೆಯ ರೂವಾರಿಗಳಿಗೆ ಪ್ರಧಾನ ಮಂತ್ರಿ ಪಟ್ಟದ ಸನ್ಮಾನ, ಬಾಂಬೆ ಗಲಭೆಯ ರೂವಾರಿಗೆ ಮರಣದಂಡನೆ ಎಂಬುದಾಗಿ ವಿಷಾದ ವ್ಯಕ್ತಪಡಿಸಿದರು. ಇವರಿಗೆಲ್ಲ  ಅಹಮದಾಬಾದ ಗಲಭೆಯ ಹಿಂದೆ ಗೋಧ್ರಾದಲ್ಲಿನ ನೂರಾರು ಜನ ಹಿಂದೂ ಕರಸೇವಕರ ಜೀವಂತ ದಹನದ ಘಟನೆ ಇತ್ತೆನ್ನುವುದು ಮರೆತೇ ಹೋಗಿದೆ. ಅದಕ್ಕಿಂತ, ತದನಂತರ ಮುಸ್ಲಿಂ ಭಯೋತ್ಪಾದಕರಿಂದ ಇಂಥದ್ದೇ ಇತರ ಅನೇಕ ಹಿಂಸಾಕಾಂಡಗಳ ಸಂದರ್ಭದಲ್ಲಿ ಹಿಂದೂಗಳು ಹೀಗೇನೂ ಪ್ರತಿಕ್ರಿಯಿಸದೇ ಸಂಯಮಿಸಿಕೊಂಡಿದ್ದು ಮರೆತೇ ಹೋಗಿದೆ.  ಆಶ್ಚರ್ಯವೆಂದರೆ ಮೋದಿಯನ್ನು ವಿರೋಧಿಸುವ ಭರದಲ್ಲಿ ಅನೇಕ ಸೆಕ್ಯುಲರ್ ಚಿಂತಕರೂ ಇಂಥ ಅಪಾಯದ ಹಾದಿಯನ್ನು ತುಳಿಯುತ್ತಿದ್ದಾರೆ. Read more…

Categories: Uncategorized
%d bloggers like this: