ಮುಖ ಪುಟ > Cultural Studies, Culture, Dharma, Hindu, Hinduism, Religion, Ritual > ಸಂಪ್ರದಾಯಗಳ ಸುತ್ತ

ಸಂಪ್ರದಾಯಗಳ ಸುತ್ತ

ಸಂಸ್ಕೃತಿ ಸಂಕಥನ – ೩

– ರಮಾನಂದ ಐನಕೈ

ವಿದ್ಯಾವಂತರೆನಿಸಿಕೊಂಡ ನಮಗೆಲ್ಲ ಒಂದು ತೊಂದರೆ ಇದೆ. ಅದೇನೆಂದರೆ ನಮ್ಮ ಜೀವನಶೈಲಿಯೊಂದಿಗೆ ಅನಿವಾರ್ಯವಾಗಿ ಪಾಲಿಸಲೇಬೇಕಾದ ಸಂಪ್ರದಾಯಗಳು. ಇದನ್ನು ಪಾಲಿಸದಿದ್ದರೆ ನಾವು ಸಮುದಾಯದಿಂದ ಹೊರಗುಳಿಯತ್ತೇವೆ. ಕೆಲವೊಮ್ಮೆ ಮಾನಸಿಕವಾಗಿ ನಮ್ಮೊಳಗೇ ಅಭದ್ರತೆಗೊಳಗಾಗುತ್ತೇವೆ. ಹಾಗಂತ ಸಂಪ್ರದಾಯವನ್ನು ಪಾಲಿಸಲು ನಮ್ಮ ವೈಚಾರಿಕತೆ ಅನುವು ಮಾಡಿಕೊಡುವುದಿಲ್ಲ. ನಾವು ಭೌತಿಕವಾಗಿ ಬದುಕುತ್ತಿರುವುದು ಸಂಪ್ರದಾಯದ ಸಮಾಜದಲ್ಲಿ. ಮಾನಸಿಕವಾಗಿ ಬದುಕುತ್ತಿರುಉವದು ವೈಚಾರಿಕತೆಯೆಂಬ ಭ್ರಮೆಯಲ್ಲಿ. ಯಾಕೆ ಹೀಗಾಗುತ್ತಿದೆ? ನಮ್ಮ ಸಂಪ್ರದಾಯಗಳಲ್ಲಿ ನಮಗೇಕೆ ಅರ್ಥ ಕಾಣುತ್ತಿಲ್ಲ? ಅಥವಾ ಅರ್ಥ ಹುಡುಕುವ ಹಠವಾದರೂ ಏಕೆ? ಇವುಗಳಿಗೆಲ್ಲ ಅರ್ಥ ಇರಲೇಬೇಕೆಂದಿದೆಯೇ? ಸ್ವತಂತ್ರ ಭಾರತದ 60 ವರ್ಷ ಕಳೆದರೂ ಇಂಥ ಗೊಂದಲಗಳಿಂದ ಮುಕ್ತರಾಗದೇ ಇದ್ದದ್ದು ನಿಜಕ್ಕೂ ಗಂಭೀರವಾಸ್ತವ.

ಸಂಪ್ರದಾಯ ಅಂದರೆ ತಲೆತಲಾಂತರದಿಂದ ನಡೆಸಿಕೊಂಡು ಬಂದ ಆಚರಣೆಗಳು. ನಮ್ಮ ಹಿರಿಯರು ಅವರ ಹಿರಿಯರನ್ನು ಅನುಕರಿಸಿದರು. ಅವರ ಹಿರಿಯರು ಅವರ ಹಿರಿಯರನ್ನು… ಹೀಗೆ ಯಾಕೆ ಆಚರಿಸಬೇಕೆಂದು ಯಾರೂ ಯಾರನ್ನೂ ಪ್ರಸ್ನಿಸಲಿಲ್ಲ. ಪ್ರಶ್ನಿಸುವ ಜಿಜ್ಞಾಸ ಹುಟ್ಟಲೇ ಇಲ್ಲ. ಏಕೆಂದರೆ ಎಲ್ಲರೂ ಅದು ತಮ್ಮದು ಎಂದು ನಂಬಿದ್ದರು. ಪ್ರೀತಿಸುತ್ತಿದ್ದರು. ಸ್ವಾತಂತ್ರ್ಯಾನಂತರ ನಮಗೆ ಸಂಪ್ರದಾಯಗಳ ಕುರಿತು ಹೆಚ್ಚು ಪ್ರಶ್ನೆಗಳು ಏಳಲು ಶುರುವಾಗಿವೆ. ಅದಕ್ಕೆ ಕಾರಣ ನಾವು ಪ್ರಭಾವಿಸಿಕೊಂಡ ಎರವಲು ವೈಚಾರಿಕತೆ ಅಥವಾ ವಿಚಾರವಾದ. ಅದು ನಮ್ಮ ಶಿಕ್ಷಣ ಹಾಗೂ ಓದುತ್ತಿರುವ ಸಮಾಜವಿಜ್ಞಾನಗಳಿಂದ ಸೃಷ್ಟಿಯಾದದ್ದು. ಪರೋಕ್ಷವಾಗಿ ಹೇಳಬಹುದಾದರೆ ಪಾಶ್ಚಾತ್ಯರು ಹೇಳಿಕೊಟ್ಟ ಕಂಠಪಾಠ. ಅವರ ಪ್ರಕಾರ ವೈಚಾರಿಕತೆಯತ್ತ ಸಾಗುವುದೇ ಪ್ರಗತಿ ಅಥವಾ ನಾಗರಿಕತೆಯ ಲಕ್ಷಣ. ಭಾರತೀಯ ಸಂಪ್ರದಾಯಗಳು (ಹಿಂದೂ ರಿಲಿಜನ್) ಅವೈಚಾರಿಕವಾದ್ದರಿಂದ ಭಾರತ ಹಿಂದುಳಿದ ದೇಶ. ಇಲ್ಲಿಯ ಜನ ಮೂಢರು ಮತ್ತು ದಡ್ಡರು. ಅರ್ಥವಿಲ್ಲದ ಆಚರಣೆಗಳನ್ನು ಮಾಡುವವರು ಎಂಬಿತ್ಯಾದಿ. ಇದೇ ನಿಜ ಎಂದು ನಾವೆಲ್ಲ ನಂಬಿಕೊಂಡಿದ್ದರಿಂದ ನಮ್ಮ ಸಂಪ್ರದಾಯಗಳು ನಮಗೆ ಅರ್ಥಹೀನ ಅನಿಸುತ್ತದೆ.

ದುರಂತ ಅಂದರೆ ಭಾರತದಲ್ಲೀಗ ಎರಡು ಪಂಗಡಗಳಾಗಿವೆ. ಪ್ರಗತಿಪರರು ಮತ್ತು ಪ್ರತಿಗಾಮಿಗಳು.ಇಲ್ಲಿ ಸಂಪ್ರದಾಯವನ್ನು ಪ್ರಶ್ನಿಸುವವರು ಹಾಗೂ ವಿರೋಧಿಸುವವರು ಪ್ರಗತಿಪರರು.ಬಹಳಷ್ಟು ಪ್ರಗತಿಪರರಿಗೆ ಇದೊಂದೇ ಬಂಡವಾಳ. ಇವರೇ ಸಂಪ್ರದಾಯಗಳನ್ನು ಸಮರ್ಥಿಸುವವರನ್ನು ಪ್ರತಿಗಾಮಿಗಳು ಎಂದು ನಾಮಕರಣ ಮಾಡಿದ್ದಾರೆ. ಸಂಪ್ರದಾಯ ಮೂಢನಂಬಿಕೆಗಳನ್ನು ಪೋಷಿಸುತ್ತದೆ. ಹಿಂದಿನವರು ಮಾಡಿದರೆಂಬ ಕಾರಣಕ್ಕೆ ನಾವು ಕೆಲವು ಆಚರಣೆಗಳನ್ನು ಮಾಡುತ್ತೇವೆಯೇ ವಿನಾ ಅದನ್ನು ಏಕೆ ಮಾಡಬೇಕೆಂಬುದೇ ಗೊತ್ತಿಲ್ಲ. ಇದು ವಿಚಾರವಂತರ ಲಕ್ಷಣವಲ್ಲ. ಅವರಿಗೆ ಭೂಷಣವೂ ಅಲ್ಲ ಎಂಬುದು ಪ್ರಗತಿಪರವಾದ. ಹಾಗಾಗಿ ಸಂಪ್ರದಾಯಗಳು ಅವೈಜ್ಞಾನಿಕ, ಅನೈತಿಕತೆ ಎಂಬಿತ್ಯಾದಿ ದೂರುಗಳನ್ನು ಪದೇಪದೇ ಕೇಳುತ್ತೇವೆ. ಆದರೆ  ಇಂಥ ವಾದಗಳಿಗೆ ಸ್ಪಷ್ಟತೆ ಇಲ್ಲ. ಪಾಶ್ಚಾತ್ಯರು ಉಲ್ಲೇಖಿಸಿದಅದೆಷ್ಟೋ ಆಚರಣೆಗಳು ಇಂದು ಇಲ್ಲವೇ ಇಲ್ಲ. ತಾನಾಗೇ ಅಳಿದುಹೋಗಿದೆ. ಹಲವಷ್ಟನ್ನು ಕಾನೂನಿನಿಂದ ನಿಷೇಧಿಸಲಾಗಿದೆ. ಆದಾಗ್ಯೂ ನಮ್ಮ ಸಂಪ್ರದಾಯಗಳು ಅನಾಗರಿಕ ಎಂದು ಗಿಳಿಪಾಠ ಮಾಡುವುದರಲ್ಲಿ ಅರ್ಥವಿದೆಯೇ? ಸಂಪ್ರದಾಯಗಳಲ್ಲಿ ಇಷ್ಟೆಲ್ಲ ಕೆಡುಕುಗಳಿದ್ದರೆ ಭಾರತದೇಶ ಸಾವಿರಾರು ವರ್ಷ ಹೇಗೆ ಉಳಿದು ಬೆಳೆದು ಬಂದಿದೆ? ನಮಗೆ ನಮ್ಮ ಸಂಪ್ರದಾಯದ ಕುರಿತು ಈ ರೀತಿಯ ನಕಾರಾತ್ಮಾಕ ಭಾವನೆ ಬೆಳೆಯಲು ಕಾರಣವೇನು?

ನಾವು ಮನುಷ್ಯನ ಮುಂದುವರಿಕೆಯನ್ನು ಗುರುತಿಸುವುದು ಪಾಶ್ಚಾತ್ಯರು ಹಾಕಿಕೊಟ್ಟ ಮಾನದಂಡದ ಮೇಲೆ. ಅದಾವುದೆಂದರೆ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಈ ಹಿನ್ನೆಲೆಯಲ್ಲಿ ಸೃಷ್ಟಿಸಿಕೊಂಡ ಹಲವು ತತ್ವಗಳು. ಅದಕ್ಕಾಗೇ ಪಶ್ಚಿಮದ ನಾಗರಿಕತೆ ನಮಗೆ ಪ್ರಗತಿಯ ಪ್ರತೀಕವಾಗಿ ಕಾಣುತ್ತದೆ. ಅವರನ್ನು ಅನುಕರಿಸಿ ಅವರಂತೆ ಆಗುವುದೇ ನಮ್ಮ ಪ್ರಗತಿಯ ಕನಸಾಗಿದೆ! ಭಾರತದ ಹಳೆಯದನ್ನೆಲ್ಲ ತ್ಯಜಿಸಿ ಪಾಶ್ಚಾತ್ಯರ ಹೊಸತ್ನನ ಅಳವಡಿಸಿಕೊಳ್ಳುತ್ತ ಹೋಗುವುದೇ ದೇಶದ ಪ್ರಗತಿ ಅಂದುಕೊಳ್ಳಲಾಗಿದೆ. ಇದಕ್ಕಾಗೇ  ನಮ್ಮ ಸಂಪ್ರದಾಯಗಳು ಕನಿಷ್ಟ ಪಶ್ಚಿಮದ  ಸಂಪ್ರದಾಯಗಳು ಶ್ರೇಷ್ಠ ಎಂದೆನಿಸುವುದು. ಆರತಿ ಎತ್ತಿ ಹುಟ್ಟುಹಬ್ಬ ಆಚರಿಸಿದರೆ ಹಿಂದುಳಿಯುವಿಕೆ, ಕೇಕ್ ಕತ್ತರಿಸಿ ‘ಹ್ಯಾಪಿ ಬರ್ತಡೆ’ ಅಂದರೆ ಮುಂದುವರಿದ ಲಕ್ಷಣ. ಯಾಕೆ ಹೀಗೆ? ಇದೆಲ್ಲ ಅರ್ಥವಾಗಬೇಕಾದರೆ ನಮ್ಮ ಮಸ್ತಕಕ್ಕೆ ಮೆತ್ತಿಕೊಂಡ ತಪ್ಪು ತಿಳುವಳಿಕೆಯನ್ನು ತೊಳೆದುಕೊಳ್ಳಬೇಕು.

ಪಾಶ್ಚಾತ್ಯರು ತಮ್ಮ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಕಣ್ಣಲ್ಲಿ ಭಾರತವನ್ನು ನೋಡಿದ್ದರು ಎಂಬುದನ್ನು ಗಮನಿಸಬೇಕು. ಮೂತರ್ಿಪೂಜೆ ಮಾಡುವವರು ನೀತಿಭ್ರಷ್ಟರು, ಮೂಢನಂಬಿಕೆಯವರು ಎಂಬುದು ಅವರ ಸಿದ್ಧಾಂತ. ಹಾಗಾಗಿ ಭಾರತೀಯರ ಸಂಪ್ರದಾಯಗಳೆಲ್ಲವೂ ಭ್ರಷ್ಟ ಧಾಮರ್ಿಕ ಆಚರಣೆಗಳೆಂಬ ಅರ್ಥದಲ್ಲಿ ನೋಡಿದರು. ಇದನ್ನೇ ಹಿಂದೂಯಿಸಂ ಎಂದು ಕರೆದರು. ಭಾರತೀಯ ಸಂಸ್ಕೃತಿ ಮೂಢ ಆಚರಣೆಯಲ್ಲಿ ಮುಳುಗಿ ಭ್ರಷ್ಟಗೊಂಡಿದೆ ಎಂಬರ್ಥದ ಇತಿಹಾಸ ಬರೆದರು. ಇದನ್ನೇ ಭಾರತದ ಸುಧಾರಣಾವಾದಿಗಳೂ ಕೂಡ ವೇದವಾಕ್ಯ ಎಂದು ನಂಬಿದರು. ಪಾಶ್ಚಾತ್ಯರಿಗೆ ನಮ್ಮ ಕುರಿತಾದ ಅನುಭವ ಹಾಗಿತ್ತು. ಅದನ್ನೇ ಬರೆದುಕೊಂಡರು. ನಮ್ಮ ‘ಅನುಭವ’ ಅವರ ಅನುಭವಕ್ಕಿಂತ ಬೇರೆ ಅನಿಸಲೇ ಇಲ್ಲ ನಮ್ಮವರಿಗೆ. ಇಂದಿಗೂ ಕೂಡ ಅನಿಸುತ್ತಿಲ್ಲ. ಅಷ್ಟರಮಟ್ಟಿಗೆ ವಸಾಹತು ಪ್ರಭಾವ ನಮ್ಮನ್ನು ಕುರುಡರನ್ನಾಗಿ ಮಾಡಿದೆ. ಇದೇ ಇಂದಿನ ವಿದ್ಯಾವಂತರ ಸಮಸ್ಯೆ.

ವಸಾಹತು ಆಳ್ವಿಕೆಯ ಕಾಲದಲ್ಲಿ ಹಾಗೂ ಆಧುನಿಕ ಭಾರತದಲ್ಲಿ ಸಾಂಪ್ರದಾಯಿಕ ಆಚರಣೆಗಳ ಕುರಿತು ಇದೇ ವಿಚಾರವಾದ ಮುಂದುವರಿಯುತ್ತಾ ಬಂದಿತು. ಪ್ರಗತಿಪರರು ಪಾಶ್ಚಾತ್ಯಚಿಂತನೆಗಳನ್ನು ಆಧಾರವಾಗಿಟ್ಟುಕೊಂಡು ಸಂಪ್ರದಾಯದ ಅರ್ಥಹೀನತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದರು. ಸಂಪ್ರದಾಯಗಳನ್ನು ನೆಚ್ಚಿಕೊಂಡ  ವಿದ್ಯಾವಂತರಿಗೆ ದೊಡ್ಡ ಸವಾಲೇ ಎದುರಾಯಿತು. ಆಗ ಅವರು ಸಂಪ್ರದಾಯಗಳಲ್ಲಿ ವೈಜ್ಞಾನಿಕ ಕಾರಣಗಳನು ಹುಡುಕಲು ಆರಂಭಿಸಿದರು. ಏಕೆಂದರೆ ಸಂಪ್ರದಾಯಗಳು ಅವೈಜ್ಞಾನಿಕ ಎಂಬ ಕಾರಣಕ್ಕೆ ಮೌಢ್ಯ ಎಂದದ್ದರಿಂದ ಅವನ್ನು ಸಂಪೂರ್ಣ ವೈಜ್ಞಾನಿಕರಣಗೊಳಿಸುವ ಪ್ರಯತ್ನ ನಡೆಯಿತು. ಯಜ್ಞ ಮಾಡುವುದು, ಮಂತ್ರ ಹೇಳುವುದು, ತೀರ್ಥ ಕುಡಿಯುವುದು- ಎಲ್ಲದಕ್ಕೂ ವೈಜ್ಞಾನಿಕ ಕಾರಣ ಹುಡುಕುವ ಪ್ರಯತ್ನ ನಡೆಯಿತು. ಆಗ ಅಲ್ಪಸ್ವಲ್ಪ ವಿಜ್ಞಾನ ತಿಳಿದವರಿಗೆ ಇದನ್ನು ನಂಬುವುದು ಇನ್ನೂ ಕಷ್ಟವಾಯಿತು. ಸಂಪ್ರದಾಯ ಮತ್ತು  ವೈಜ್ಞಾನಿಕ ಕಾರಣಕ್ಕೆ ಏಕೆ ಸಂಬಂಧ ಇರಬೇಕು ಎಂದು ಯಾರೂ ಪ್ರಶ್ನಿಸಲೇ ಇಲ್ಲ.

ವಿದ್ಯಾವಂತರಾದಂತೆ ವೈಚಾರಿಕತೆ ಬೆಳೆಯುತ್ತದೆ. ಆದ್ದರಿಂದ ಸಂಪ್ರದಾಯ ಪಾಲಿಸಿದರೆ ತಮಗೆ ವೈಚಾರಿಕತೆ ಇಲ್ಲ ಎಂದು ತಿಳಿಯುತ್ತಾರೆಂಬ ಕೀಳರಿಮೆ ಅನೇಕ ವಿದ್ಯಾವಂತರಿಗಿದೆ. ಹಾಗಾದರೆ ಸಂಪ್ರದಾಯವಾದಿಗಳಿಗೆ ವೈಚಾರಿಕತೆಯೇ ಇಲ್ಲ ಅನ್ನೋಣವೇ? ಸಂಪ್ರದಾಯದ ಪರವಾಗಿದ್ದ ವಿದ್ಯಾವಂತರಲ್ಲಿ ವೈಜ್ಞಾನಿಕ ಪ್ರಜ್ಞೆ ಇಲ್ಲವೆಂದರ್ಥವೇ? ಎಷ್ಟೋ ವಿಜ್ಞಾನಿಗಳು ದೇವರ ಫೋಟೋ ಪೂಜಿಸುವುದು, ಹಣೆಗೆ ಕುಂಕುಮ ಇಡುವುದು ಇತ್ಯಾದಿಗಳನ್ನು ನೋಡುತ್ತೇವೆ. ಅಂದಾಕ್ಷಣ ಅವರು ವಿಜ್ಞಾನಿಗಳಲ್ಲ. ಅವರಿಗಿಂತ ಸಂಪ್ರದಾಯಬಿಟ್ಟವರೇ ವಿಜ್ಞಾನಿಗಳೆಂದು ಒಪ್ಪಿಕೊಳ್ಳಲು ಸಾಧ್ಯವೇ? ಸಂಪ್ರದಾಯ ಅವೈಜ್ಞಾನಿಕವಾಗಿದ್ರೆ ಸಂಪ್ರದಾಯದ ಭಾರತದಲ್ಲಿ ಎಷ್ಟೆಲ್ಲ ವಿಜ್ಞಾನ ಹೇಗೆ ಬೆಳೆಯುತ್ತಿತ್ತು? ಶಾಸ್ತ್ರೋಕ್ತ ಪೂಜೆ ಮಾಡಿ ರಾಕೆಟ್ ಹಾರಿಸಿದರೆ ಪೂಜೆ ಮಾಡಿದ್ದರಿಂದ ರಾಕೆಟ್ ಹಾರಿತು ಎಂಬುದು ಎಷ್ಟು ಹಾಸ್ಯಾಸ್ಪದವೋ ಪೂಜೆ ಮಾಡುವುದರಿಂದ ರಾಕೆಟ್ ಹಾರುವುದಿಲ್ಲ ಎಂಬ ವಾದವೂ ಅಷ್ಟೇ ಹಾಸ್ಯಾಸ್ಪದ. ಇಲ್ಲಿ ಎಂಥವನಿಗೂ ಸ್ಪಷ್ಟವಾಗುತ್ತದೆ. ರಾಕೆಟ್ಗ ಪೂಜೆ ಮಾಡುವುದು ನಮ್ಮ ಸಂಪ್ರದಾಯ ಹಾಗೂ ನಂಬಿಕೆ. ರಾಕೆಟ್ ಹಾರುವುದು ವಿಜ್ಞಾನದಿಂದ. ಹೀಗಿದ್ದಾಗ ಮುಜುಗರ ಪಡುವುದು ಏನಿದೆ? ಹಾಗಾಗಿ ಸಂಪ್ರದಾಯ ಬೇರೆ, ವಿಜ್ಞಾನ ಬೇರೆ, ವೈಚಾರಿಕತೆ ಬೇರೆ. ಇವೆಲ್ಲವೂ ಒಟ್ಟಿಗೇ ಇರಬೇಕೆಂದೇನೂ ಇಲ್ಲ. ಒಟ್ಟಿಗೆ ಇರಬಾರದೆಂಬ ನಿಯಮವೂ ಇಲ್ಲ. ಇದು ಮುಂದುವರಿದಿರುವಿಕೆ ಅಥವಾ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾರದು.

ವಿಜ್ಞಾನ ಶ್ರೇಷ್ಟ ಎಂದು ನಂಬಿಕೊಂಡಾಕ್ಷಣ ಸಂಪ್ರದಾಯ ಕನಿಷ್ಠ ಎಂದು ಏಕೆ ಭಾವಿಸಬೇಕು? ವಿಜ್ಞಾನ ಬೇರೆ ಸಂಪ್ರದಾಯ ಬೇರೆ. ವಿಜ್ಞಾನ ಈ ಪ್ರಪಂಚದ ಕುರಿತು ಜ್ಞಾನಗಳಿಸುವ ಸಾಧನವಾದರೆ ಸಂಪ್ರದಾಯ ಈ ಸಮುದಾಯ ಕಟ್ಟುವ ಸಾಧನವಾಗಿದೆ. ಜಗತ್ತಿನಲ್ಲಿ ಸಮುದಾಯ ಜೀವನನ  ಎಲ್ಲೆಲ್ಲಿದೆಯೋ ಅಲ್ಲೆಲ್ಲ ಒಂದಲ್ಲ ಒಂದು ರೀತಿಯ ಸಂಪ್ರದಾಯ ಇದ್ದೇ ಇದೆ.

ಸಂಪ್ರದಾಯ ಅಂದರೆ ಏನೆಂದು ಯಾರಾದರೂ ನಮ್ಮನ್ನು ಕೇಳಿದರೆ ತಕ್ಷಣ ಎತ್ತರಿಸಲು ಸಾಧ್ಯವಾಗದು. ಏಕೆಂದರೆ ಸಂಪ್ರದಾಯ ಇರುವುದು ಆಚರಿಸಲಿಕ್ಕೇ ವಿನಾ ಅದರ ಕುರಿತು ವ್ಯಾಖ್ಯಾನ ನೀಡಲಿಕ್ಕಲ್ಲ. ಸಂಪ್ರದಾಯದ ಲಕ್ಷಣಗಳೇ ಅದರ ಶಕ್ತಿಯನ್ನು ಸೂಚಿಸುತ್ತವೆ.

1. ಸಂಪ್ರದಾಯಗಳು ಆಚರಣೆಯಲ್ಲೇ ಅಸ್ತಿತ್ವವನ್ನು ಹೊಂದಿರುತ್ತವೆಯೇ ವಿನಾ ಯಾವುದೇ ವೈಜ್ಞಾನಿಕ ಸಿದ್ಧಾಂತಗಳನ್ನಾಧರಿಸಿಯಲ್ಲ. ಇದಕ್ಕೆ ಸಿದ್ಧ ಶಾಸನಗಳಿಲ್ಲ. ಹಿಂದಿನವರನ್ನು ನೋಡಿ ಆಚರಣೆಗಳನ್ನು ಕಲಿಯಲಾಗುತ್ತದೆ.

2. ಕಾಲಕ್ಕೆ ತಕ್ಕಂತೆ ಬದಲಾಗುವುದೇ ಸಂಪ್ರದಾಯದ ಗುಣ. ನಾವು ಸಂಪ್ರದಾಯವನ್ನು ಪಾಲಿಸುವುದೊಂದೇ ಅಲ್ಲ, ಅದನ್ನು ಬದಲಿಸುತ್ತಲೂ ಇರುತ್ತೇವೆ. ಹೀಗಿದ್ದಾಗ ಸಂಪ್ರದಾಯ ನಿಂತ ನೀರಿನಂತೆ ಅನ್ನುವುದು ಯಾವ ಸೀಮೆಯ ವೈಚಾರಿಕತೆ?

3. ಸಂಪ್ರದಾಯಗಳು ಇದನ್ನು ಹೀಗೇ ಮಾಡಬೇಕೆಂದು ಕಟ್ಟಳೆ ಹೇರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತೇವೆ.

4. ಸಂಪ್ರದಾಯಗಳು ಅವುಗಳ ಆಚರಣೆಗೆ ವಿಶೇಷ ಅರ್ಥ ವ್ಯಾಖ್ಯಾನ ನೀಡುವುದಿಲ್ಲ.

5. ಒಂದು ಸಂಪ್ರದಾಯ ಯಾವತ್ತೂ ಇನ್ನೊಂದು ಸಂಪ್ರದಾಯವನ್ನು ದ್ವೇಷಿಸುವುದಿಲ್ಲ, ಗೌರವಿಸುತ್ತದೆ.

  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ