ಅಂಕಣ: ನವನೀತ

rajaram hegdeಕಂತು 51: ಪಾಪಯೋನಿ ಎಂಬುದು ಏನನ್ನು ಸೂಚಿಸುತ್ತದೆ?

ಪ್ರೊ. ರಾಜಾರಾಮ ಹೆಗಡೆ 

ಭಗವದ್ಗೀತೆಯ 9ನೆಯ ಅಧ್ಯಾಯದ 32ನೆಯ ಶ್ಲೋಕದಲ್ಲಿ ಬರುವ ಪಾಪಯೋನಿ-ಪುಣ್ಯಯೋನಿ ಎಂಬ ಶಬ್ದಗಳ ಕುರಿತು ಇತ್ತೀಚೆಗೆ ಸಾಕಷ್ಟು ವಿವಾದ ನಡೆಯಿತು. ಈ ಶ್ಲೋಕದ ಕುರಿತ ಆಕ್ಷೇಪಣೆಯೆಂದರೆ ಇದು ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎನ್ನುತ್ತದೆ. ಭಾರತದ ಜನರಲ್ಲಿ ಮುಕ್ಕಾಲುಪಾಲಿಗಿಂತಲೂ ಅಧಿಕ ಜನರೇ ಸ್ತ್ರೀ, ಶೂದ್ರ, ವೈಶ್ಯರಾಗಿದ್ದಾರೆ. ಬಹುಜನರ ಮನಸ್ಸಿಗೆ ನೋವುಂಟುಮಾಡುವ ಭಗವದ್ಗೀತೆಯನ್ನು ಏಕೆ ಗೌರವಿಸಬೇಕು? ಜೊತೆಗೇ ಶ್ರೀಕೃಷ್ಣನೇ ನಾಲ್ಕು ವರ್ಣಗಳನ್ನು ಗುಣ ಕರ್ಮ ವಿಭಾಗಗಳ ಆಧಾರದ ಮೇಲೆ ಸೃಷ್ಟಿಸಿದ್ದಾನೆ ಎಂದು ಭಗವದ್ಗೀತೆ ಹೇಳುತ್ತದೆ. ಸ್ತ್ರೀಯರನ್ನು ಹಾಗೂ ಕೆಳವರ್ಣದವರನ್ನು ಪಾಪಯೋನಿಗಳು, ಅವರಿಗೆ ಸದ್ಗತಿ ಇಲ್ಲ, ಹಾಗಾಗಿ ಅವರು ಕೀಳು ಎಂಬುದಾಗಿ ಬಿಂಬಿಸಲು ಮೇಲಿನ ಸಾಲುಗಳನ್ನು ಬ್ರಾಹ್ಮಣ ಪುರೋಹಿತಶಾಹಿಯು ಸೇರಿಸಿದೆ ಎಂಬುದು ಆರೋಪ.

  ಈ ಕುರಿತು ಇತ್ತೀಚೆಗೆ ಬೆಲ್ಜಿಯಂ ಗೆಂಟ್ ವಿಶ್ವವಿದ್ಯಾಲಯದ ತತ್ವಶಾಸ್ತ್ರದ ಪ್ರೊಫೆಸರ್ ಬಾಲಗಂಗಾಧರ ಅವರು ನೀಡಿದ ವಿವರಣೆಯು ನನಗೆ  ಆಸಕ್ತಿಪೂರ್ಣವಾಗಿ ಕಂಡಿರುವುದರಿಂದ ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಶ್ಲೋಕದ ಭಾಷಾಂತರ ಹೀಗಿದೆ: ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೂ ಪಾಪಯೋನಿಗಳು ಮುಂತಾದ ಯಾರೇ ಆಗಿರಲಿ, ಅವರೂ ಕೂಡ ನನ್ನಲ್ಲಿ ಶರಣಾಗಿ ಪರಮಗತಿಯನ್ನೇ ಪಡೆಯುತ್ತಾರೆ. ಪುಣ್ಯಶೀಲರಾದ ಬ್ರಾಹ್ಮಣರು ಹಾಗೂ ರಾಜರ್ಷಿ ಭಕ್ತಜನರು ನನ್ನಲ್ಲಿ ಶರಣಾಗಿ ಪರಮಗತಿ ಪಡೆಯುತ್ತಾರೆ, ಇದರಲ್ಲಿ ಹೇಳುವುದಾದರೂ ಏನಿದೆ? ಅದಕ್ಕಾಗಿ ಸುಖರಹಿತವಾದ, ಕ್ಷಣಭಂಗುರವಾದ ಈ ಲೋಕವನ್ನು ಹೊಂದಿದ ನೀನು ನನ್ನನ್ನು ಭಜಿಸು. ಈ ಮೇಲಿನ ಶ್ಲೋಕದಲ್ಲಿ ಮೊದಲ ಭಾಗದಲ್ಲಿ ಪಾಪಯೋನಿ ಎಂದರೆ ಹುಟ್ಟಿನ ಕುರಿತು ಹೇಳಿದರೆ ಎರಡನೆಯ ಭಾಗದಲ್ಲಿ ಪುಣ್ಯ ಎಂದರೆ ಸಾಧನೆಯ ಕುರಿತು ಹೇಳುತ್ತದೆ ಎಂಬುದು ಆ ಶ್ಲೋಕಗಳಲ್ಲೇ ಸ್ಪಷ್ಟವಾಗಿದೆ. ಇಲ್ಲಿ ಪುಣ್ಯಯೋನಿ ಎಂಬ ಪದಪ್ರಯೋಗವಿಲ್ಲ ಎಂಬುದನ್ನು ಗಮನಿಸಬೇಕು. Read more…

Categories: Uncategorized

ಅಂಕಣ: ನವನೀತ

rajaram hegdeಕಂತು 50:ಯಥೇಚ್ಛಸಿ ತಥಾ ಕುರು

ಪ್ರೊ. ರಾಜಾರಾಮ ಹೆಗಡೆ 

ನಮ್ಮ ಪ್ರಾಚೀನ ಮಹಾಕಾವ್ಯ ಹಾಗೂ ಪುರಾಣಗಳ ಕುರಿತು ಇಂದು ಅನೇಕ ಚರ್ಚೆಗಳು ವಿವಾದಗಳು ಎದ್ದುಕೊಂಡಿವೆ.  ಇಂಥ ವಿವಾದಗಳು ಅವುಗಳಲ್ಲಿ ಕಾಣಿಸಿಕೊಳ್ಳುವ ನಿರ್ಧಿಷ್ಟ ಸಾಲುಗಳ ಅಥವಾ ಘಟನೆಗಳ ಕುರಿತಾಗಿ ಇರುತ್ತವೆ. ಉದಾಹರಣೆಗೆ ಭಗವದ್ಗೀತೆಯಲ್ಲಿ ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎಂದು ಸೂಚಿಸಿದ್ದು, ಸೀತಾ ಪರಿತ್ಯಾಗ, ಅಗ್ನಿ ಪರೀಕ್ಷೆ, ಶಂಭೂಕವಧೆ, ಏಕಲವ್ಯ ಇತ್ಯಾದಿ ಪ್ರಕರಣಗಳು, ಇತ್ಯಾದಿ. ಇಂಥ ಭಾಗಗಳು ನಮ್ಮ ಇಂದಿನ ನ್ಯಾಯ ಕಲ್ಪನೆಗೆ ವಿರುದ್ಧವಾಗಿವೆ ಎಂಬುದು ಆಕ್ಷೇಪಣೆ. ಅದರಲ್ಲೂ  ಹೀಗೆ ಆಕ್ಷೇಪಿಸುವವರು ಶೂದ್ರ ಹಾಗೂ ಸ್ತ್ರೀಯರ ಕುರಿತ ಅಸಮಾನತೆಯನ್ನು ಸಾರುವ, ಅವರಿಗೆ ಧಾರ್ಮಿಕ, ಸಾಮಾಜಿಕ ಸ್ಥಾನಮಾನವನ್ನು ನಿರಾಕರಿಸುವ ಹೇಳಿಕೆಗಳು ಇಂಥ ಗ್ರಂಥಗಳಲ್ಲಿ ಬರುತ್ತವೆ ಎಂಬುದನ್ನು ಎತ್ತಿ ತೋರಿಸುತ್ತಾರೆ. ಮತ್ತೊಂದು ಪಕ್ಷದವರು ಆ ಸಾಲುಗಳಿಗೆ ಅಂಥ ಅರ್ಥವನ್ನು ಹಚ್ಚಬಾರದು ಎಂದು ಅದರ ಅರ್ಥನಿರೂಪಣೆಯನ್ನು ಬೇರೆ ರೀತಿಯಲ್ಲಿ ಮಾಡಿ ತೋರಿಸಿ ಸರ್ಮಥಿಸಲು ಯತ್ನಿಸುತ್ತಾರೆ. ಇನ್ನೂ ಕೆಲವರು ಈ ಗ್ರಂಥಗಳ ತಾತ್ವಿಕ ಮಹತ್ವವನ್ನು ಅರಿಯಬೇಕೇ ಹೊರತೂ ಇಂಥ ಸಾಲುಗಳಿಗೆ ಮಹತ್ವ ನೀಡಬಾರದು ಎನ್ನುತ್ತಾರೆ.

 ಆದರೆ ನಮ್ಮ ಪ್ರಾಚೀನ ಗ್ರಂಥಗಳ ಕುರಿತ ಆಧುನಿಕ ಆಕ್ಷೇಪಣೆಗಳು ನಿರಾಧಾರ ಎಂಬುದನ್ನು ಇಂದಿನವರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವುಗಳ ಸಮರ್ಥಕರು ಸಫಲರಾದಂತಿಲ್ಲ. ಉದಾಹರಣೆಗೆ ಪಾಪಯೋನಿ ಎಂಬುದು ನಮ್ಮ ಸಮಾನತೆ ಹಾಗೂ ನ್ಯಾಯ ಕಲ್ಪನೆಗೆ ಧಕ್ಕೆತರುವುದಿಲ್ಲ, ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದ್ದು ಅಥವಾ ಸೀತೆಯನ್ನು ಅಗ್ನಿ ಪ್ರವೇಶ ಮಾಡಿಸಿದ್ದು ಸರಿ ಎಂಬಿತ್ಯಾದಿಗಳನ್ನು ಉಳಿದವರಿಗೆ ಮನದಟ್ಟು ಮಾಡುವುದು ಹೋಗಲಿ ಅದನ್ನು ಹೇಳುವವನಿಗೇ ಅದು ಸರಿ ಎನಿಸುತ್ತದೆಯೆ? ಶೂದ್ರ, ಸ್ತ್ರೀ ಮುಂತಾದ ಪ್ರಭೇದಗಳನ್ನು ಭಾವಿಸದಿದ್ದರೂ ಕೂಡ ಅಂಥ ಕೆಲಸವು ನ್ಯಾಯ ಅನ್ನಿಸುತ್ತದೆಯೆ? ಹಾಗಾಗಿ ಇಂದು ಆ ಸಾಲುಗಳಿಗೆ ನಾವು ಯಾವ ಅರ್ಥ ಹಚ್ಚುತ್ತೇವೆಯೋ ಆ ಅರ್ಥದಲ್ಲಂತೂ ಅವುಗಳನ್ನು ಸರ್ಮಥಿಸುವ ಪ್ರಶ್ನೆಯೇ ಇಲ್ಲ. ಅಂಥ ಸಾಲುಗಳನ್ನು ಬೇರೆ ಕಾರಣಗಳಿಗಾಗಿ ಸರ್ಮಥಿಸುವವರು ತಮ್ಮ ಕಾರಣವನ್ನು ಮನದಟ್ಟು ಮಾಡಲು ಸೋತರೆ ವಿದ್ಯಾವಂತರಿಗೆ ಅವರು ಶೂದ್ರ ಹಾಗೂ ಸ್ತ್ರೀ ವಿರೋಧಿಗಳಾಗಿ ಕಾಣುವುದರಲ್ಲಿ ಆಶ್ಚರ್ಯವೇ ಇಲ್ಲ. Read more…

Categories: Uncategorized
%d bloggers like this: