ಅಂಕಣ: ವಸಾಹತುಶಾಹಿಯ ವಿಶ್ವರೂಪ

October 7, 2014 Leave a comment

ಕಂತು 62: ಭಾರತೀಯರಿಗೆ ಸಾಂಸ್ಥಿಕ ಧ್ಯೇಯೋದ್ದೇಶಗಳು ಅರ್ಥವಾಗುತ್ತವೆಯೆ?

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತಕ್ಕೆ 1947 ಅಗಸ್ಟ್ 15ರಂದು ವಸಾಹತು ಪ್ರಭುತ್ವದಿಂದ ಮುಕ್ತಿ ದೊರೆತು ಅದು ಸ್ವತಂತ್ರವಾಗಿ 67 ವರ್ಷಗಳಾಗಿವೆ. ಈ ಸ್ವತಂತ್ರ ರಾಷ್ಟ್ರಕ್ಕೆ ಪ್ರಜಾಪ್ರಭುತ್ವವೆಂಬ ಸರ್ಕಾರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಪ್ರತೀ ವರ್ಷ ಅಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಆದಿನ ಭಾಷಣಕಾರರು ಹಿಂದಿನ ವರ್ಷಗಳ ಸಫಲತೆ-ವಿಫಲತೆಗಳ ಪಟ್ಟಿಯನ್ನು ನೀಡಿ ಮುಂದೆ ಏನೇನು ಸಾಧಿಸಬೇಕಾಗಿದೆ ಎಂಬುದನ್ನು ನಮಗೆ ತಿಳಿಸುತ್ತಾರೆ. ಹೆಚ್ಚಿನ ಭಾಷಣಗಳಲ್ಲಿ ವಿಫಲತೆಯ ಕುರಿತು ವಿಷಾದವೇ ತುಂಬಿರುತ್ತದೆ. ವರ್ಷದಿಂದ ವರ್ಷಕ್ಕೆ ನಮ್ಮ ವಿಫಲತೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಕಾನೂನು-ರಕ್ಷಣೆಯ ವ್ಯವಸ್ಥೆ ದಯನೀಯವಾಗಿ ಹಾಳಾಗುತ್ತಿದೆ. ಬಡತನ, ಶೋಷಣೆ, ಭ್ರಷ್ಟಾಚಾರ, ಜಾತಿ ಹಾಗೂ ಮಹಿಳಾ ದೌರ್ಜನ್ಯ, ಕೋಮು ಘರ್ಷಣೆ, ಇವೆಲ್ಲ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿವೆ. ಇವುಗಳ ಜೊತೆಗೆ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ರಾಜಕಾರಣ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ರಾಜಕಾರಣದಲ್ಲಿ ಅಪರಾಧಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಚುನಾವಣೆಗಳಲ್ಲಿ ಹಣ ಹೆಂಡದ ಚೆಲ್ಲಾಟ ಜಾಸ್ತಿಯಾಗುತ್ತಿದೆ. ಸರ್ಕಾರೀ ವಲಯವು ವಿಫಲವಾಗಿ ಹಿಮ್ಮೆಟ್ಟುತ್ತಿದೆ. ಸರ್ಕಾರೀ ಉದ್ಯಮಗಳು ಹಾಗೂ ಕೈಗಾರಿಕೆಗಳು ಒಂದೊಂದಾಗಿ ಮುಚ್ಚಿವೆ. ಖಾಸಗೀಕರಣ ಇನ್ನಿಲ್ಲದಂತೇ ಪ್ರಬಲವಾಗುತ್ತಿದೆ. ಸರ್ಕಾರೀ ಶಾಲೆಗಳು ಮುಚ್ಚುತ್ತಿವೆ, ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ರಾಜಕೀಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವು ತಾಂಡವವಾಡುತ್ತಿವೆ. ಹೀಗೆ ವೈಫಲ್ಯತೆಗಳ ಪಟ್ಟಿ ಬೆಳೆಯುತ್ತಲೇ ಇದೆ.

‘ನಮ್ಮ ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಸ್ವಾತಂತ್ರ್ಯ ಹೋರಾಟಗಾರರು ಜೀವ, ಮನೆ ಮಠ ಕಳೆದುಕೊಂಡರು, ಅವರೆಲ್ಲರೂ ಈ ಭಾಗ್ಯಕ್ಕಾಗಿ ಜೀವತೆತ್ತರೆ?’ ಎಂದು ಅಳಿದುಳಿದ ಸ್ವಾತಂತ್ರ್ಯ ಹೋರಾಟಗಾರರು ಅಲವತ್ತುಗೊಳ್ಳುವುದನ್ನು ನಾವು ನೋಡುತ್ತೇವೆ. ‘ಸರ್ಕಾರ ಎನ್ನುವುದು ಭಸ್ಮಾಸುರ ಇದ್ದಹಾಗೇ, ಅದು ಕೈಯಿಟ್ಟ ಸಂಸ್ಥೆಯೇ ನಾಶವಾಗುತ್ತದೆ’ ಎಂಬ ಸಿನಿಕ ಹೇಳಿಕೆಗಳೂ ಕೇಳಲಿಕ್ಕೆ ಸಿಗುತ್ತವೆ. ರಾಜಕಾರಣವು ಇಂದು ಒಂದು ಲಾಭದಾಯಕ ಉದ್ಯಮವಾಗಿದೆ. ನಮ್ಮ ರಾಜಕಾರಣಿಗಳು ಹಾಗೂ ಅಧಿಕಾರ ಶಾಹಿಗಳು ಒಟ್ಟಿಗೇ ಸೇರಿ ಸಾಕಷ್ಟು ಪರಿಶ್ರಮ ಪಟ್ಟು ಅಂತೂ ಅದನ್ನು ಲಾಭದಾಯಕ ಉದ್ದಿಮೆಯನ್ನಾಗಿ ಮಾಡಲು ಯಶಸ್ವಿಯಾಗಿದ್ದಾರೆ. ಮೊದಮೊದಲು ನಮ್ಮ ಜನಪ್ರತಿನಿಧಿಗಳು ನಮ್ಮೆಲ್ಲರಂತೇ ಬಸ್ಸುಗಳಲ್ಲಿ ಓಡಾಡಿಕೊಂಡಿದ್ದರು. ಇತ್ತೀಚೆಗೆ ಅವರು ಹೋಗಲಿ, ಅವರ ಚೇಲಾಗಳ ಚೇಲಾಗಳೂ ಕೂಡ ಕೋಟ್ಯಾಧೀಶರಾಗುತ್ತಿದ್ದಾರೆ. ಮಂತ್ರಿಮಂಡಲವನ್ನು ರಚಿಸುವಾಗ ಲಾಭದಾಯಕ ಖಾತೆಗಳಿಗಾಗಿ ಪೈಪೋಟಿ ಎಷ್ಟು ತೀವ್ರವಾಗಿ ನಡೆಯುತ್ತದೆಯೆಂದರೆ ಆ ಸಲುವಾಗಿ ಪಕ್ಷಗಳು ಒಡೆದದ್ದೂ ಇದೆ, ಸರ್ಕಾರಗಳು ಬಿದ್ದದ್ದೂ ಇದೆ. ಈ ಲಾಭ ಎಲ್ಲಿಂದ ಬರುತ್ತದೆ? ನಮ್ಮ ಪ್ರಭುತ್ವವು ಜನಕಲ್ಯಾಣದ ಹಾಗೂ ಆಡಳಿತದ ಸಲುವಾಗಿ ರಚಿಸಿಕೊಂಡ ಸಂಸ್ಥೆಗಳು ಹಾಗೂ ವಿಭಾಗಗಳಿಂದ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಶಿಕ್ಷಕರಿಂದ ಹಿಡಿದು ನ್ಯಾಯಾಧೀಶರವರೆಗೆ ನೇಮಕಾತಿಗಳಿಂದ ಅದು ಹರಿದು ಬರುತ್ತದೆ, ವರ್ಗಾವರ್ಗಿಯಿಂದ ಹರಿದು ಬರುತ್ತದೆ. ಅಭಿವೃದ್ಧಿ ಕಾಮಗಾರಿಯಿಂದ ಬರುತ್ತದೆ, ಜನಕಲ್ಯಾಣದ ಯೋಜನೆಗಳಿಂದ ಬರುತ್ತದೆ. ಸರ್ಕಾರದ ಉಸ್ತುವಾರಿಗೆ ಒಂದು ಸಂಸ್ಥೆಯನ್ನೋ, ಅಧಿಕಾರವನ್ನೋ ನೀಡಿರಿ, ಅಲ್ಲಿ ನಡೆಯುವ ಆಡಳಿತವೆಂದರೆ ಈ ಸಂಪನ್ಮೂಲವನ್ನು ಒಟ್ಟುಗೂಡಿಸುವ ಕೆಲಸ. ಈ ಕೆಲಸವನ್ನು ಎಷ್ಟು ಭರಾಟೆಯಿಂದ ಮಾಡುತ್ತಾರೆಂದರೆ ಆ ಹೊಡೆತಕ್ಕೆ ಸಂಸ್ಥೆಯ ಗುಣಮಟ್ಟವೇ ಕಿತ್ತುಕೊಂಡು ಹೋಗಿರುತ್ತದೆ. Read more…

Categories: Uncategorized

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

September 27, 2014 Leave a comment

ಕಂತು 61: ಭಯೋತ್ಪಾದನೆ: ಅಪರಾಧದ ಹೊಸ ಅವತಾರ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

           ಇಂದು ಪ್ರಪಂಚವನ್ನು ಅತ್ಯಂತ ತೀಕ್ಷ್ಣವಾಗಿ ಕಾಡುವ ಸಮಸ್ಯೆಗಳಲ್ಲಿ ಭಯೋತ್ಪಾದನೆಯೂ ಒಂದು. ಅದರಲ್ಲೂ ನಮ್ಮ ಮಾಧ್ಯಮಗಳಿಗಂತೂ ಕಳೆದ ಹಲವಾರು ವರ್ಷಗಳಿಂದ ಈ ಸುದ್ದಿಗಳು ಮೃಷ್ಟಾನ್ನ ಭೋಜನಗಳಾಗಿವೆ. ಮನುಷ್ಯರನ್ನು ಕೊಲ್ಲುವುದು, ವಿಧ್ವಂಸಕಾರೀ ಕೃತ್ಯಗಳನ್ನು ನಡೆಸುವುದು, ಇತ್ಯಾದಿಗಳ ಮೂಲಕ ಭಯವನ್ನು ಉಂಟುಮಾಡಿ ತಮ್ಮ ಗುರಿಯನ್ನು ಸಾಧಿಸುವುದನ್ನು ಭಯೋತ್ಪಾದನೆ ಎಂಬುದಾಗಿ ಗುರುತಿಸುತ್ತೇವೆ. ಈ ಮಾರ್ಗವನ್ನು ಮಾನವರು ತುಳಿಯಲಿಕ್ಕೆ ಪ್ರಾರಂಭಿಸಿ 200ಕ್ಕೂ ಹೆಚ್ಚು ವರ್ಷಗಳಾಗಿವೆ ಎನ್ನಲಾಗುತ್ತಿದೆ. ಮೊಟ್ಟಮೊದಲು ಇದು ಐರೋಪ್ಯ ದೇಶಗಳಲ್ಲಿ ಪ್ರಾರಂಭವಾಯಿತು. ಇಂದು ಕಾಣುವ ರೀತಿಯ ಭಯೋತ್ಪಾದನೆಯು ಕಾಣಿಸಿಕೊಂಡು 50 ವರ್ಷಗಳೂ ಆಗಿಲ್ಲ. ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಾಮತ್ತಾಗಿ ಬಾಂಬು ಸಿಡಿಸುವುದು, ಮುಗ್ಧರ ನರಮೇಧವನ್ನು ಮಾಡುವುದು ಪ್ರಧಾನವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಮೊದಲು ಈ ತಂತ್ರವನ್ನು ಬಳಸಿದರು. ಭಾರತದಲ್ಲೂ ಕೂಡ ಎಲ್ಟಿಟಿಇ, ಬೋಡೋ, ನಕ್ಸಲ್, ಇತ್ಯಾದಿ ಯೋಧರಿಂದ ಇಂಥ ಕಾರ್ಯಗಳು ನಡೆದಿವೆ.

          ಇವುಗಳಲ್ಲಿ ಹೆಚ್ಚಿನವುಗಳು ಒಂದು ಸಮುದಾಯಕ್ಕೆ ಒಂದು ಭೂಭಾಗದ ಮೇಲೆ ಸ್ವಾಮ್ಯವನ್ನು ಸ್ಥಾಪಿಸಲಿಕ್ಕಾಗಿ ನಡೆದಿವೆ. ಇವರು ತಾವು ಯಾರ ಬಿಡುಗಡೆಗಾಗಿ ಅಥವಾ ಏಳ್ಗೆಗಾಗಿ ಹೋರಾಡುತ್ತಿದ್ದೇವೆ ಎನ್ನುತ್ತಾರೋ ಆ ಸಮುದಾಯದ ಯುವಕರ ಸೈನ್ಯವನ್ನು ಕಟ್ಟುತ್ತಾರೆ. ಇಂಥ ಹೋರಾಟಗಾರರು ತಮ್ಮ ಉದ್ದೇಶಕ್ಕಾಗಿ ಪ್ರಾಣವನ್ನೂ ತೆರಲು ತಯಾರಿರುತ್ತಾರೆ. ಮೈಗೇ ಬಾಂಬನ್ನು ಕಟ್ಟಿಕೊಂಡು ಅಥವಾ ಕಾರು, ವಿಮಾನುಗಳನ್ನು ಬಳಸಿಕೊಂಡು ಸಾಯಲು ತಯಾರಾಗಿಯೇ ಇಂಥ ಕೆಲಸವನ್ನು ಮಾಡುತ್ತಾರೆ. ಅಂದರೆ ಅವರು ಸಂಪೂರ್ಣವಾಗಿ ತಮ್ಮ ಜೀವನವನ್ನೇ ಈ ಹೋರಾಟದ ಉದ್ದೇಶಗಳಿಗಾಗಿ ಮುಡುಪಾಗಿಟ್ಟಿರುತ್ತಾರೆ.

          ಇಂಥ ಭಯೋತ್ಪಾದನೆಗಳ ಕುರಿತು ವಿಶ್ಲೇಷಿಸುವ ಬರವಣಿಗೆಗಳಲ್ಲಿ ಈ ಭಯೋತ್ಪಾದಕರಿಗೆ ಒಂದು ಸಕಾರಣ ಇರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅದು ಸಮಕಾಲೀನ ವ್ಯವಸ್ಥೆಯಲ್ಲಿ ಅಡಗಿರುವ ಅನ್ಯಾಯದಿಂದ ಹುಟ್ಟುತ್ತದೆ. ಅಥವಾ ಒಂದು ಸಮುದಾಯಕ್ಕೆ ಆದ ಅನ್ಯಾಯಕ್ಕೆ ಪ್ರತೀಕಾರವಾಗಿ ಅಥವಾ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಇರುತ್ತದೆ ಎನ್ನುತ್ತಾರೆ. ಉದಾಹರಣೆಗೆ ಎಲ್ಟಿಟಿಇಯ ಕುರಿತು ನಡೆಯುವ ಚರ್ಚೆಗಳಲ್ಲಿ ಸಿಂಹಳೀಯರಿಂದ ಅಲ್ಲಿನ ತಮಿಳರಿಗೆ ಆದ ಅನ್ಯಾಯದ ಕುರಿತ ವಿಷಯವೂ ಸೇರಿರುತ್ತದೆ. ಇಲ್ಲದಿದ್ದರೆ ಏಕೆ ಪ್ರಭಾಕರನ್ ಎಂಬವನು ಅದರ ಮುಂದಾಳುವಾಗಿ ಬೆಳೆದ? ಅವನು ಹೇಳಿದಂತೇ ಕೇಳುವ ಪಡೆಯೊಂದು ಏಕೆ ಹುಟ್ಟಿಕೊಳ್ಳಬೇಕು? ಅಂದರೆ ಸಮುದಾಯವೊಂದು ತನಗಾದ ಅನ್ಯಾಯವನ್ನು ಪ್ರತಿಭಟಿಸುವ ಕಾರಣವಿಲ್ಲದಿದ್ದರೆ ಇಂಥ ಸಂಘಟನೆಗಳು ಹೇಗೆ ಅಸ್ತಿತ್ವಕ್ಕೆ ಬರಲು ಸಾಧ್ಯ? ಎಂಬುದಾಗಿ ತರ್ಕಿಸಿ ಇಂಥ ಅನ್ಯಾಯವನ್ನು ಗುರುತಿಸಿ ಅದರ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣವನ್ನು ಹುಡುಕುತ್ತೇವೆ. ಆದರೆ ವಿಚಿತ್ರವೆಂದರೆ ಇಷ್ಟೆಲ್ಲ ಕಾರಣಗಳನ್ನು ಒಪ್ಪಿಕೊಳ್ಳುವ ನಮಗೆ ಅವರು ಅಪರಾಧಿಗಳೇ ಎಂಬುದರಲ್ಲಿ ಸಂಶಯವಿರುವದಿಲ್ಲ. Read more…

Categories: Uncategorized

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

September 15, 2014 Leave a comment

ಕಂತು 60: ಮನುಷ್ಯರೆಲ್ಲರೂ ಯಾವುದರಲ್ಲಿ ಸಮಾನರು?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದು ಜಗತ್ತಿನಾದ್ಯಂತ ನಡೆಯುತ್ತಿರುವ ಸಾಮಾಜಿಕ ಚಳವಳಿಗಳಿಗಳು ಒಂದಿಲ್ಲೊಂದು ಅಸಮಾನತೆಗಳನ್ನು ತೊಡೆಯಲು ಕಂಕಣಬದ್ಧವಾಗಿವೆ, ‘ಲಿಂಗ ಅಸಮಾನತೆ’, ‘ಜಾತಿ ಅಸಮಾನತೆ’, ‘ಜನಾಂಗ ಅಸಮಾನತೆ’, ‘ವರ್ಗ ಅಸಮಾನತೆ’ ಇತ್ಯಾದಿಗಳು ನಾಶವಾದರೆ ಮಾತ್ರವೇ ಮನುಕುಲದ ಕಲ್ಯಾಣ ಸಾಧ್ಯ ಎಂಬುದಾಗಿ ಇಂಥ ಹೋರಾಟಗಳನ್ನು ಬೆಂಬಲಿಸುವ ಚಿಂತಕರೂ ಕೂಡ ಭದ್ರವಾಗಿ ನಂಬಿಕೊಂಡಿದ್ದಾರೆ. ಯುರೋಪಿನಲ್ಲಿ ಆಗಿಹೋದ ಸಾಮಾಜಿಕ ಚಿಂತಕರು ಇಂಥ ಅಸಮಾನತೆಗಳನ್ನು ತೊಡೆಯುವುದು ಹೇಗೆ ಎಂಬ ಕುರಿತು ಗಹನವಾದ ಜಿಜ್ಞಾಸೆಗಳನ್ನು ನಡೆಸಿದ್ದಾರೆ ಹಾಗೂ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅಂದರೆ ಸಮಾನತೆ ಎಂಬುದೊಂದು ಮಾನವ ಕಲ್ಯಾಣದ ಸಾಧನೆಗಾಗಿ ಆಧುನಿಕರು ಆವಿಷ್ಕರಿಸಿದ ಮಂತ್ರವಾಗಿದೆ. ‘ಮನುಷ್ಯರಲ್ಲಿ ತಾರತಮ್ಯ ಮಾಡುವುದು ತಪ್ಪು, ಎಲ್ಲರೂ ಸಮಾನರು’ ಎಂದು ಹೇಳಲಾಗುತ್ತದೆ. ಎಲ್ಲಿ ಅಸಮಾನತೆ ಇರುತ್ತದೆಯೋ ಅಲ್ಲಿ ಶೋಷಣೆ, ಅನ್ಯಾಯ ಇರುತ್ತವೆ ಎಂದೂ ಹೇಳಲಾಗುತ್ತದೆ. ಹಾಗಾಗಿ ಸಮಾನತೆ ಮನುಷ್ಯನ ಒಂದು ಹಕ್ಕು ಎಂಬುದಾಗಿ ನಮ್ಮ ಸಂವಿಧಾನವೂ ಮಾನ್ಯಮಾಡಿದೆ. ಇದನ್ನೇ ಆದರ್ಶವಾಗಿಟ್ಟುಕೊಂಡು ‘ನಾವೆಲ್ಲರೂ ಒಂದೇ’ ಎಂಬ ಘೋಷಣೆಗಳು ಹುಟ್ಟಿವೆ.

ಸ್ವಾತಂತ್ರ್ಯ, ಸಮಾನತೆ ಇತ್ಯಾದಿ ಮೌಲ್ಯಗಳು ನಮಗೆ ಯುರೋಪಿನ ಜ್ಞಾನೋದಯ ಯುಗದ ಚಿಂತಕರ ಕೊಡುಗೆಗಳಾಗಿವೆ. ಪ್ರತೀ ಮನುಷ್ಯನು ಇತರ ಮನುಷ್ಯರೂ ಕೂಡ ತನ್ನಷ್ಟೇ ಸಮಾನ ಎಂದು ಭಾವಿಸಬೇಕು. ಹಾಗೆ ಭಾವಿಸದಿರುವುದು ಅಮಾನುಷ ಎಂಬುದಾಗಿ ಇಂದಿನ ನಾವಿಂದು ನಂಬಿದ್ದೇವೆ. ಸಮಾಜದಲ್ಲಿ ತರ ತಮಗಳನ್ನು ಪ್ರತಿಪಾದಿಸುವವರು ರಾಕ್ಷಸರೇ ಸರಿ ಎಂಬುದಾಗಿ ಬೊಬ್ಬೆ ಹೊಡೆಯುವವರೂ ಇದ್ದಾರೆ. ಭಾರತೀಯರಿಗೆ ಅಸಮಾನತೆ ಎಂದಕೂಡಲೇ ನೆನಪಿಗೆ ಬರುವುದೇ ಜಾತಿ ವ್ಯವಸ್ಥೆ. ಜಗತ್ತಿನ ಯಾವ ಸಮಾಜದಲ್ಲೂ ಇಲ್ಲದ ಒಂದು ಕ್ರೂರ ವ್ಯವಸ್ಥೆ ಇಲ್ಲಿದೆ ಎನ್ನಲಾಗುತ್ತದೆ ಹಾಗೂ ಅದೇ ಜಾತಿ ತರತಮದ ವ್ಯವಸ್ಥೆ. ಪಾಶ್ಚಾತ್ಯರು ಭಾರತೀಯ ಸಮಾಜವನ್ನು ಚಿತ್ರಿಸತೊಡಗಿದ ದಿನದಿಂದಲೂ ಈ ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆಯ ಕರಾಳತೆಯ ಕುರಿತು ಸಾಕಷ್ಟು ಕಥೆಗಳನ್ನು ಪ್ರಚಲಿತದಲ್ಲಿ ತಂದಿದ್ದಾರೆ. Read more…

Categories: Uncategorized

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

August 30, 2014 Leave a comment

ಕಂತು 59: ಪಾಶ್ಚಾತ್ಯ ನೈತಿಕ ಸಿದ್ಧಾಂತಗಳು ಮತ್ತು ಭಾರತೀಯರ ನೈತಿಕತೆ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ನಮ್ಮ ಸುತ್ತ ಇರುವ ಜನರಲ್ಲಿ ಎರಡು ಪ್ರಕಾರದವರನ್ನು ನೋಡುತ್ತೇವೆ: 1. ಮೊದಲನೆಯವರು ತಾವು ಜನರೊಂದಿಗೆ ಒಡನಾಡುವಾಗ ಅಥವಾ ವಿಚಾರ ವಿನಿಮಯ ಮಾಡಿಕೊಳ್ಳುವಾಗ ನೀತಿ ಜಿಜ್ಞಾಸೆಯನ್ನು ಅಡ್ಡತರುವುದಿಲ್ಲ. ಬಹುತೇಕ ಭಾರತೀಯರು ಹಾಗೇ ವರ್ತಿಸುತ್ತಾರೆ. ಸಂಪ್ರದಾಯಸ್ಥ ಭಾರತೀಯನೊಬ್ಬನು ಅನ್ಯ ಮನುಷ್ಯರನ್ನು ಹಾಗೂ ವಿಚಾರಗಳನ್ನು ಅನ್ಯ ಎಂದಷ್ಟೇ ಗ್ರಹಿಸುತ್ತಾನೆ. ಹಾಗೂ ಒಂದೊಮ್ಮೆ ತನಗೆ ಸಮ್ಮತವಲ್ಲದಿದ್ದರೆ ಉದಾಸೀನರಾಗಿದ್ದುಬಿಡುತ್ತಾನೆ. ಸಂಪರ್ಕವನ್ನೇ ಕಡಿದುಕೊಳ್ಳುತ್ತಾನೆ. ಆದರೆ ಅಂಥ ಜನರ ವಿರುದ್ಧ ಹೋರಾಟಕ್ಕಿಳಿಯುವುದಿಲ್ಲ ಅಥವಾ ತನಗಾಗದ ವಿಚಾರಗಳನ್ನು ಹತ್ತಿಕ್ಕಲು ಪ್ರಯತ್ನಿಸುವುದಿಲ್ಲ. ಇಂಥವರಲ್ಲಿ ಯಾವುದೇ ಧೂರ್ತತೆಯಾಗಲೀ, ಅವಕಾಶವಾದವಾಗಲೀ ಇರುವುದಿಲ್ಲ. ಅದು ಅವರ ಜೀವನಕ್ರಮ ಅಷ್ಟೆ. ಇದು ಭಾರತೀಯ ಸಾಂಪ್ರದಾಯಿಕ ಸಮಾಜದ ಸದಸ್ಯರಲ್ಲಿ ಕಂಡುಬರುವ ಪ್ರತಿಕ್ರಿಯೆ.

2. ಎರಡನೆಯ ಪ್ರಕಾರದವರು ಪ್ರತೀ ವಿಚಾರದ ಕುರಿತೂ, ನಿರ್ಣಯದ ಕುರಿತೂ ನೀತಿ ಜಿಜ್ಞಾಸೆಯನ್ನು ತರುತ್ತಾರೆ. ಹಾಗೂ ತಮ್ಮ ಧೋರಣೆಗೆ ಅವು ವಿರುದ್ಧವಾಗಿದ್ದರೆ ಅದು ಅನೈತಿಕ ಎಂದೂ ಭದ್ರವಾಗಿ ನಂಬಿರುತ್ತಾರೆ. ಅಷ್ಟೇ ಅಲ್ಲ, ಅಂಥ ವಿಚಾರಗಳನ್ನು ಮಂಡಿಸಿದವರನ್ನು ದ್ವೇಷಿಸುವ ಮಟ್ಟಕ್ಕೂ ಹೋಗುತ್ತಾರೆ. ಅಂಥ ವಿಚಾರಗಳನ್ನು ಹತ್ತಿಕ್ಕಲು ಯಾವ ಮಾರ್ಗವನ್ನಾದರೂ ಅವರು ಹಿಡಿಯುತ್ತಾರೆ. ತಾವು ನಂಬಿಕೊಂಡ ನೈತಿಕತೆಯ ಬಗ್ಗೆ ಅವರಿಗೆಷ್ಟು ಅಚಲ ಶ್ರದ್ಧೆ ಇರುತ್ತದೆಯೆಂದರೆ ವಿರೋಧಿಗಳನ್ನು ಮಟ್ಟ ಹಾಕಲು ಯಾವ ಮಾರ್ಗವನ್ನು ಹಿಡಿದರೂ ಅದು ಸಮರ್ಥನೀಯ ಎಂಬುದು ಅವರ ಧೋರಣೆ. ಇವರು ನೈತಿಕ ಕಾಳಜಿಗಳನ್ನು ಹೊಂದಿದವರು. ಇಂಥವರು ಬಹುತೇಕವಾಗಿ ಪಾಶ್ಚಾತ್ಯ ಚಿಂತನೆಗಳಿಂದ ಪ್ರಭಾವಿತರಾದ ಬುದ್ಧಿಜೀವಿಗಳು ಹಾಗೂ ವಿಭಿನ್ನ ವಿಮೋಚನಾ ಹೋರಾಟಗಳಲ್ಲಿ ತೊಡಗಿಕೊಂಡವರಾಗಿದ್ದಾರೆ. ಈ ಒಂದು ವಿಷಯಕ್ಕೆ ಸಂಬಂಧಿಸಿದಂತೇ ಸಾಮಾನ್ಯ ಭಾರತೀಯನೊಬ್ಬನ ವರ್ತನೆಗೂ ಈ ಮೇಲಿನ ಪ್ರಕಾರದವರಿಗೂ ಮೂಲಭೂತ ವ್ಯತ್ಯಾಸವಿದ್ದಂತೇ ತೋರುತ್ತದೆ. Read more…

Categories: Uncategorized

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

August 22, 2014 Leave a comment

ಕಂತು 58: ವ್ಯಕ್ತಿ ಮತ್ತು ಸಮಾಜ: ಪೂರ್ವ ಪಶ್ಚಿಮಗಳ ಭಿನ್ನತೆ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದಿನ ವಿದ್ಯಾವಂತ ಆಧುನಿಕರಿಗೂ, ಅವಿದ್ಯಾವಂತ ಸಂಪ್ರದಾಯಸ್ಥರಿಗೂ ನಡುವೆ ಒಂದು ವ್ಯತ್ಯಾಸವು ಎದ್ದು ಕಾಣುವಂತಿದೆ. ಇಂದಿನವರಿಗೆ ವ್ಯಕ್ತಿ ಸ್ವಾತಂತ್ರ್ಯದ ಅರಿವು ಬಹಳ ಮುಖ್ಯ. ಒಬ್ಬನಿಗೆ/ಳಿಗೆ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳುವುದು ಅತ್ಯಂತ ಮುಖ್ಯ ಎನ್ನಿಸುತ್ತದೆ. ತನ್ನ ಜೀವನಕ್ಕೆ ಸಂಬಂಧಿಸಿ ತಾನೇ ನಿರ್ಣಯ ತೆಗೆದುಕೊಳ್ಳುವುದು ಮುಖ್ಯ ಎನ್ನಿಸುತ್ತದೆ. ನಮ್ಮ ಸುತ್ತಲಿನ ಬಂಧುಗಳು ಹಾಗೂ ಹಿರಿಯರು ತಮ್ಮನ್ನು ಹತ್ತಿಕ್ಕಲಿಕ್ಕೇ ಇರುವರೇನೋ ಎಂಬಂತೇ ಭಾವಿಸಿಕೊಂಡು ಅವರಿಂದ ತನ್ನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಇಂದಿನ ಯುವಕ ಯುವತಿಯರ ಭಾಷೆಯಲ್ಲಿ ಹೇಳುವುದಾದರೆ ಹಿರಿಯರು ತಮ್ಮ ಅಭಿಪ್ರಾಯವನ್ನು ಅವರ ಮೇಲೆ ಹೇರಲು ಬರುತ್ತಾರೆ. ಅದರಂತೇ ಇಂದಿನ ವಿಮೋಚನಾವಾದಿಗಳು ಹೇಳುವಂತೇ, ‘ಹಿಂದಿನ ಕಾಲದಲ್ಲಿ ನಮ್ಮ ಅಪ್ಪ ಅಮ್ಮಂದಿರಿಗೆ ತಮ್ಮದೇ ಧ್ವನಿ ಇರಲಿಲ್ಲ. ಅವರ ಜೀವನವನ್ನು ರೂಪಿಸಿದವರೇ ಹಿರಿಯರು’. ಅವರ ಒಪ್ಪಿಗೆಯನ್ನೂ ಕೇಳದೇ ಅವರ ಮದುವೆಯನ್ನು ಹಿರಿಯರು ತಾವೇ ನಿಶ್ಚಯಮಾಡುತ್ತಿದ್ದರು, ಇಂಥದ್ದೇ ರೀತಿಯಲ್ಲಿ ಜೀವಿಸಬೇಕೆಂದು ನಿರ್ಬಂಧಿಸಿದ್ದರು, ಅನೇಕ ಕಠಿಣ ಪದ್ಧತಿಗಳನ್ನು ಹಾಗೂ ಆಚರಣೆಗಳನ್ನು ಒತ್ತಾಯಪೂರ್ವಕವಾಗಿ ಹೇರುತ್ತಿದ್ದರು. ಇವರೂ ಕೂಡ ಅವರಿವರಿಗೆ ಇಷ್ಟ ಎಂದೋ, ಅವರಿವರು ಆಡಿಕೊಳ್ಳುತ್ತಾರೆ ಎಂದೋ, ಭೀತರಾಗಿಯೋ ಮನಸ್ಸಿಲ್ಲದೇ ಮೌನವಾಗಿ ಅವನ್ನು ಅನುಭವಿಸುತ್ತಿದ್ದರು. ಇಷ್ಟೇ ಅಲ್ಲ, ಅವರ ಜೀವನವೇ ವ್ಯರ್ಥವಾಯಿತು ಹಾಗೂ ಇಂಥ ಜೀವನದಲ್ಲಿ ಶೋಷಣೆ, ತೊಳಲಾಟ ಹಾಗೂ ದುರಂತವಲ್ಲದೇ ಬೇರೇನೂ ಇರಲಾರದು ಎಂಬಂತೇ ಬಿಂಬಿಸಲಾಗುತ್ತದೆ.

ಏಕೆ ಇಂಥ ಜೀವನವು ವ್ಯರ್ಥವೆಂದರೆ ತಮ್ಮ ಇಚ್ಛೆಯ ಪ್ರಕಾರ ಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅಂದರೆ, ಮನುಷ್ಯರು ತಮ್ಮ ಇಚ್ಛೆಯ ಪ್ರಕಾರ ಜೀವನ ನಡೆಸಿದರೆ ಮಾತ್ರ ಜೀವನವು ಸಾರ್ಥಕವಾಗುತ್ತದೆ ಎಂಬ ನಂಬಿಕೆ ಇವರೆಲ್ಲರಿಗೂ ಇರುವುದು ಸ್ಪಷ್ಟ. ಕೇಳಲಿಕ್ಕೇನೋ ಇದು ಹಿತವಾಗಿದೆ. ಆದರೆ ಸ್ಪಷ್ಟವಾಗುವುದಿಲ್ಲ. ಅಂದರೆ ನಮ್ಮ ಹಿರಿಯರು ಕೇವಲ ತಮ್ಮ ಹಿರಿಯರ ಇಚ್ಛೆ ಹಾಗೂ ನಿರ್ಣಯವನ್ನಾಧರಿಸಿಯೇ ಬದುಕಿದ್ದರೆ? ಅವರ ಜೀವನದಲ್ಲಿ ಅವರಿಗೆ ಬೇಕಾದಂತೆ ಏನನ್ನೂ ಮಾಡಿಕೊಳ್ಳಲಿಲ್ಲವೆ? ಅವರ ಜೀವನದಲ್ಲಿ ಸುಖದ ಕ್ಷಣಗಳೇ ಇರಲಿಲ್ಲವೆ? ಅಥವಾ ಅವರ ಜೀವನವನ್ನು ಅವರು ರೂಪಿಸಿಕೊಂಡೇ ಇಲ್ಲವೆ? ಈ ಪ್ರಶ್ನೆಗಳಿಗೆ ಸಂಪೂರ್ಣವಾಗಿ ನಕಾರಾತ್ಮಕ ಉತ್ತರ ನೀಡುವುದು ನಮ್ಮ ಅನುಭವಕ್ಕೆ ವಿರುದ್ಧವಾದ ಹೇಳಿಕೆಯಾಗಬಹುದು. ಅದೇ ರೀತಿಯಲ್ಲಿ ಮತ್ತೊಂದು ಥರದ ಪ್ರಶ್ನೆಗಳು ಏಳುತ್ತವೆ: ಸ್ವ ಇಚ್ಛೆಯ ಪ್ರಕಾರ ಜೀವಿಸುತ್ತೇವೆನ್ನುವವರು ನಿಜವಾಗಿಯೂ ಅಂಥ ಮುಕ್ತ ಜೀವನವನ್ನು ನಡೆಸಲು ಸಾಧ್ಯವೆ? ಅಂದರೆ, ಪ್ರತೀ ವ್ಯಕ್ತಿಯೂ ತನಗೆ ಬೇಕಾದ ಹಾಗೆ ಇರುತ್ತೇನೆ ಎಂದರೆ ಯಾವುದೇ ಸಮಾಜವು ತನ್ನ ಅಸ್ತಿತ್ವವನ್ನು ಇಟ್ಟುಕೊಳ್ಳಲು ಹೇಗೆ ಸಾಧ್ಯ? ಅಂಥವರಿಗೆ ಸಂಬಂಧಗಳು ಹೇಗೆ ಸಾಧ್ಯ? ಸಮಾಜಕ್ಕೆ ಇರುವ ನಮ್ಮ ಬಾಧ್ಯಸ್ತಿಕೆಯನ್ನು ಹೇಗೆ ನಿರ್ವಹಿಸುವುದು? ನಾವೇ ತೆಗೆದುಕೊಂಡ ನಿರ್ಣಯಗಳು ಸ್ವಂತವೆಂದು ಹೇಗೆ ಹೇಳುತ್ತೀರಿ? ಪ್ರಚಲಿತ ವಿಚಾರಗಳು, ಪೂರ್ವಾಗ್ರಹಗಳು, ವ್ಯವಸ್ಥೆಗಳು, ನಮ್ಮ ಇಚ್ಛೆಗಳನ್ನು ನಿಯಂತ್ರಣ ಮಾಡುತ್ತಿಲ್ಲವೆಂದು ಹೇಗೆ ಹೇಳುತ್ತೀರಿ? ಇಂಥ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರವಿಲ್ಲ. ಹಾಗಾಗಿ ನಮ್ಮ ಜೀವನವನ್ನು ನಿರ್ಣಯಿಸಲು ನಾವು ಸ್ವತಂತ್ರರು ಎಂಬ ಹೇಳಿಕೆಯು ಕೂಡ ಅನುಭವಕ್ಕೆ ನಿಲುಕುವುದಿಲ್ಲ. Read more…

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

August 16, 2014 Leave a comment

ಕಂತು 57: ಮಾನವ ಹಕ್ಕುಗಳ ಪರಿಕಲ್ಪನೆ ಎಲ್ಲಾ ಸಂಸ್ಕೃತಿಗಳಲ್ಲೂ ಇದೆಯೆ?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

 

ಮನುಷ್ಯನು ಹುಟ್ಟುತ್ತಲೇ ಅನೇಕ ಹಕ್ಕುಗಳನ್ನು ಪಡೆದುಕೊಂಡು ಹುಟ್ಟಿರುತ್ತಾನೆ ಎಂಬುದಾಗಿ ನಮಗೆ ಸ್ಕೂಲುಗಳಲ್ಲಿ ಕಲಿಸಲಾಗಿದೆ. ಆಧುನಿಕ ಸಂವಿಧಾನಗಳು ತಮ್ಮ ಪ್ರಜೆಗಳಿಗೆಲ್ಲ ಕೆಲವು ಮೂಲಭೂತ ಹಕ್ಕುಗಳನ್ನು ನೀಡುತ್ತವೆ. ಇವುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ರಿಲಿಜನ್ನಿನ ಹಕ್ಕು, ಶೋಷಣೆಯನ್ನು ವಿರೋಧಿಸುವ ಹಕ್ಕು ಇತ್ಯಾದಿಗಳಿವೆ. ಇಂಥ ಮೂಲಭೂತ ಹಕ್ಕುಗಳನ್ನು ಪಾಶ್ಚಾತ್ಯ ಸಂವಿಧಾನಗಳಿಂದ ಸ್ವೀಕರಿಸಿ ನಮ್ಮ ಸಂವಿಧಾನದಲ್ಲಿ ಕೂಡ ಅಳವಡಿಸಿಕೊಳ್ಳಲಾಗಿದೆ. ಅನ್ಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದರೆ ಅಪರಾಧವಾಗುತ್ತದೆ. ಏಕೆಂದರೆ ಪ್ರಭುತ್ವವೊಂದು ಕಾನೂನುಗಳ ಮೂಲಕ ಈ ಹಕ್ಕನ್ನು ತನ್ನ ಪ್ರಜೆಗಳಿಗೆ ನೀಡಿರುತ್ತದೆ. ಪ್ರಜೆಗಳು ಈ ಹಕ್ಕುಗಳನ್ನು ಕಾನೂನು ಬದ್ಧ ಅಧಿಕಾರದಿಂದ ಚಲಾಯಿಸಬಹುದು. ಉದಾಹರಣೆಗೆ ಚುನಾವಣೆಯಲ್ಲಿ ಮತಹಾಕುವ ಪ್ರಜೆಯೊಬ್ಬನು ತನ್ನ ಮತದಾನದ ಹಕ್ಕನ್ನು ಚಲಾಯಿಸುತ್ತಾನೆ.

ಆದರೆ ಇಂದು ಇಂಥ ಪ್ರಭುತ್ವಗಳಲ್ಲೂ ಕೂಡ ಸಾರ್ವಜನಿಕ ಕ್ಷೇತ್ರದಲ್ಲಿ ಈ ಹಕ್ಕುಗಳ ಜೊತೆಗೇ ಮತ್ತೊಂದು ರೀತಿಯ ಹಕ್ಕುಗಳ ವಿಚಾರವು ಪದೇ ಪದೇ ಪ್ರಸ್ತಾಪವಾಗುತ್ತದೆ. ಅದೆಂದರೆ ಮಾನವ ಹಕ್ಕು. ಇದು ಸಾಧಾರಣವಾಗಿ ಪ್ರಭುತ್ವಗಳ ವಿರುದ್ಧದ ಹೋರಾಟವೇ ಆಗಿರುತ್ತದೆ. ಈ ಮಾನವ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ವಿಶ್ವಸಂಸ್ಥೆಯು ಟೊಂಕ ಕಟ್ಟಿ ನಿಂತಿದೆ. ವಿಶ್ವಾದ್ಯಂತ ಸರ್ಕಾರೇತರ ಸಂಘಟನೆಗಳು ಹುಟ್ಟಿಕೊಂಡಿವೆ. ವಿಭಿನ್ನ ರಾಷ್ಟ್ರಗಳು, ಸರ್ಕಾರೀ ಸಂಸ್ಥೆಗಳು ಹಾಗೂ ಆಡಳಿತಗಾರರು ತೆಗೆದುಕೊಂಡ ನೀತಿಗಳನ್ನು ಖಂಡಿಸಿ ಅವುಗಳ ವಿರುದ್ಧ ಹೊರಾಟಕ್ಕೆ ಬೆಂಬಲ ನೀಡುವುದೇ ಅವುಗಳ ಗುರಿ. ಯಾವುದೋ ದೇಶದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಅನ್ಯ ದೇಶಗಳ ಮಾನವ ಹಕ್ಕುಗಳ ಸಂಘಟನೆಗಳು ಹೋರಾಡಬಹುದು. ಅಂದರೆ ಈ ಮಾನವ ಹಕ್ಕು ಎನ್ನುವುದು ನಿರ್ದಿಷ್ಟ ಪ್ರಭುತ್ವಕ್ಕೆ ಸೀಮಿತವಾಗಿಲ್ಲ. ಅದು ಸಮಸ್ತ ಮಾನವ ಜನಾಂಗಕ್ಕೇ ಇರುವ ಹಕ್ಕು ಎನ್ನಲಾಗುತ್ತದೆ. ಹಾಗಾಗಿ ಮಾನವ ಹಕ್ಕುಗಳ ಸಲುವಾಗಿ ಹೋರಾಟ ನಡೆಸುವ ಹಕ್ಕನ್ನು ಯಾವ ಪ್ರಭುತ್ವಗಳೂ ನಿರಾಕರಿಸುವಂತಿಲ್ಲ. ಏಕೆಂದರೆ ಇವುಗಳು ಕಾನೂನಿನಿಂದ ದತ್ತವಾದ ಹಕ್ಕುಗಳಲ್ಲ. ಇಂಥ ಹಕ್ಕುಗಳು ಪ್ರಜೆಯೊಬ್ಬನಿಗೆ ಹುಟ್ಟಿನಿಂದಲೇ ಬರುತ್ತವೆ ಹಾಗೂ ಅವನಿಂದ ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎನ್ನಲಾಗುತ್ತದೆ. Read more…

Categories: Uncategorized

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

August 8, 2014 Leave a comment

ಕಂತು 56: ‘ಮನುಷ್ಯನು ಹುಟ್ಟಾ ಸ್ವತಂತ್ರ’ ಎಂದರೇನು?
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

‘ಮನುಷ್ಯನು ಹುಟ್ಟಾ ಸ್ವತಂತ್ರ’ ಎಂಬ ಹೇಳಿಕೆ ಇಂಗ್ಲೀಷಿನಲ್ಲಿದೆ. ಇದು ‘ಮ್ಯಾನ್ ಇಸ್ ಬಾರ್ನ್ ಫ್ರೀ’ ಎಂಬ ಇಂಗ್ಲೀಷ್ ವಾಕ್ಯದ ತರ್ಜುಮೆಯಾಗಿದೆ. ನಾವೆಲ್ಲ ಇದನ್ನು ಅನೇಕ ಬಾರಿ ಕೇಳಿರುತ್ತೇವೆ. ಅಷ್ಟೇ ಅಲ್ಲ ಅದೊಂದು ಸಾರ್ವತ್ರಿಕ ಸತ್ಯ ಎಂದೂ ನಂಬಿದ್ದೇವೆ. ಮನುಷ್ಯನಿಗೆ ಸ್ವಾತಂತ್ರ್ಯ ಏಕೆ ಬೇಕು? ಎಂಬ ಪ್ರಶ್ನೆಗೆ ಅವನು ಹುಟ್ಟಾ ಸ್ವತಂತ್ರನಾಗಿರುವುದರಿಂದ ಅದು ಅವನ ಜನ್ಮಸಿದ್ಧ ಹಕ್ಕು ಎನ್ನಲಾಗುತ್ತದೆ. ಹಾಗಾಗಿಯೇ ಪ್ರಭುತ್ವದ ಬಹುಮುಖ್ಯ ಜವಾಬ್ದಾರಿಯೆಂದರೆ ಅದರ ಪ್ರಜೆಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು. ಅವುಗಳಲ್ಲಿ ವಾಕ್ ಸ್ವಾತಂತ್ರ್ಯ, ರಿಲಿಜನ್ನಿನ ಸ್ವಾತಂತ್ರ್ಯ ಇತ್ಯಾದಿಗಳಿವೆ. ಯಾವುದೇ ವ್ಯಕ್ತಿಯ ಇಂಥ ಸ್ವಾತಂತ್ರ್ಯವನ್ನು ಅಪಹರಣ ಮಾಡುವುದು ತಪ್ಪು ಹಾಗೂ ಅನೈತಿಕ ಎನ್ನಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ತೀರಾ ಜನಪ್ರಿಯವಾದ ಶಬ್ದ. ಯಾರದಾದರೂ ಲೇಖನ, ಭಾಷಣ ಅಥವಾ ಪುಸ್ತಕಗಳ ವಿರುದ್ಧವಾಗಿ ಪ್ರತಿಭಟನೆಗಳು ನಡೆದರೆ, ಅಥವಾ ಪ್ರಭುತ್ವವು ಅದನ್ನು ನಿಷೇಧಿಸಿದರೆ ನಮ್ಮ ಬುದ್ಧಿ ಜೀವಿಗಳು ಮೊದಲು ಎತ್ತುವ ಆಕ್ಷೇಪಣೆಯೆಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದು.

ಈ ಶಬ್ದಗಳು ನಮಗೆ ಅರ್ಥವಾಗಿವೆಯೆ? ಮನುಷ್ಯನು ಹುಟ್ಟಾ ಸ್ವತಂತ್ರ ಎಂದರೇನು? ಆಗತಾನೇ ಹುಟ್ಟಿದ ಶಿಶುವಿಗೆ ಏನು ಸ್ವಾತಂತ್ರ್ಯವಿರುತ್ತದೆ? ಬಹುಶ: ಮನುಷ್ಯರಲ್ಲೇ ಅದು ಅತ್ಯಂತ ಪರತಂತ್ರ ಜೀವಿ. ಅದಕ್ಕೆ ಅಳುವುದೊಂದನ್ನು ಬಿಟ್ಟು ಸ್ವಂತವಾಗಿ ಏನನ್ನೂ ಮಾಡುವ ಶಕ್ತಿ ಇರುವುದಿಲ್ಲ. ಇದನ್ನು ಸ್ವತಂತ್ರ ಅಭಿವ್ಯಕ್ತಿ ಎನ್ನಲೂ ಸಾಧ್ಯವಿಲ್ಲ. ಅದಕ್ಕೆ ಮಾತೂ ಬರುವುದಿಲ್ಲ, ಭಾಷೆಯೂ ಬರುವುದಿಲ್ಲ. ಅದನ್ನು ಹಡೆದ ತಾಯಿ ಬೀದಿಗೆಸೆದು ಹೋದರೆ ಅದು ಸಾಯುತ್ತದೆ. ಹಾಗಾಗಿ ಇಂಥ ಅವಸ್ಥೆಯಲ್ಲಿ ಅದಕ್ಕೆ ನಮ್ಮ ಈ ಯಾವ ಸ್ವಾತಂತ್ರ್ಯಗಳನ್ನು ಆರೋಪಿಸಲೂ ಸಾಧ್ಯವಿಲ್ಲ. ಹಾಗಾದರೆ ನಾವು ದೊಡ್ಡವರು ಆಗತಾನೇ ಹುಟ್ಟಿದ ಶಿಶುವಿನ ಮೇಲೆ ಆಣೆಮಾಡಿ ಅನುಭವಿಸುವ ಈ ಸ್ವಾತಂತ್ರ್ಯಗಳೆಲ್ಲ ಎಲ್ಲಿಂದ ಪ್ರಸ್ತುತವಾಗುತ್ತವೆ? Read more…

Follow

Get every new post delivered to your Inbox.

Join 1,283 other followers

%d bloggers like this: