ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 22: ಶಂಕರಾಚಾರ್ಯರು ಮತ್ತು ಜಾತಿವ್ಯವಸ್ಥೆಯ ಕಥೆ

ಪ್ರೊ. ರಾಜಾರಾಮ ಹೆಗಡೆ.

  ಶಂಕರಾಚಾರ್ಯರು ಇಂದು ಒಂದು ವರ್ಗದ ಬುದ್ಧಿಜೀವಿಗಳ ಟೀಕೆಗೆ ಗುರಿಯಾಗಿದ್ದಾರೆ. ಅವರೆಂದರೆ ಜಾತಿ ವ್ಯವಸ್ಥೆಯ ವಿನಾಶವನ್ನು ಪ್ರತಿಪಾದಿಸುವವರು. ಜಾತಿ ವ್ಯವಸ್ಥೆ ಎಂಬ ಕಥೆಯ ಸಾರವಿಷ್ಟು: ಇಂದು ಭಾರತದಲ್ಲಿ ಕಂಡುಬರುವ ಸಕಲ ಜಾತಿಗಳನ್ನೂ, ಅವುಗಳ ಪದ್ಧತಿಗಳನ್ನೂ ಹಾಗೂ ತರತಮಗಳನ್ನೂ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ರಚಿಸಿದರು ಹಾಗೂ ತಮ್ಮ ಧರ್ಮಶಾಸ್ತ್ರಗಳೆಂಬ ಕಾನೂನುಗಳನ್ನು ಮಾಡಿ ಅವು ಮುಂದುವರೆಯುವಂತೆ ನೋಡಿಕೊಂಡರು. ಈ ಕಥೆಯನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕಾದರೆ ಅದಕ್ಕೆ ಆಧಾರಗಳು ಬೇಕೇ ಬೇಕು. ಶಂಕರಾಚಾರ್ಯರು ಅಂಥದ್ದೊಂದು ಆಧಾರ ಎಂಬುದಾಗಿ ಈ ಬುದ್ಧಿಜೀವಿಗಳು ನಂಬಿದ್ದಾರೆ. ಶಂಕರರ ತತ್ವಜ್ಞಾನ ಹಾಗೂ ಜಿಜ್ಞಾಸೆಗಳು ಈ ವರ್ಗಕ್ಕೆ ಅಪ್ರಸ್ತುತ. ಅವರ ತತ್ವಜ್ಞಾನವೇ ಬ್ರಾಹ್ಮಣಶಾಹಿಯ ಒಂದು ಕಣ್ಕಟ್ಟಾಗಿರುವುದರಿಂದ ಅದಕ್ಕೆ ಬಲಿಯಾಗಬಾರದು ಎಂಬ ಎಚ್ಚರಿಕೆ ಕೂಡ ಇವರಲ್ಲಿ ಸದಾ ಜಾಗೃತವಾಗಿ ಇರುತ್ತದೆ.

  ಆದರೆ ಶಂಕರರ ಸಿದ್ಧಾಂತವನ್ನು ಪರಿಚಯಿಸಿಕೊಂಡ ಯಾರಿಗಾದರೂ ಅವರು ಎಲ್ಲಾ ಬಿಟ್ಟು ಜಾತಿಭೇದವನ್ನು ಎತ್ತಿ ಹಿಡಿಯಲಿಕ್ಕಾಗಿ ತಮ್ಮ ಜೀವ ಸವೆಸಿದರು ಎಂಬುದು ಹಾಸ್ಯಾಸ್ಪದವಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ತಾವು ಪ್ರತಿಪಾದಿಸುವ ಜ್ಞಾನವು ಜಾತಿ, ಒಣ ಪಾಂಡಿತ್ಯ, ತರ್ಕ, ಶಾಸ್ತ್ರ ಇತ್ಯಾದಿಗಳನ್ನು ಮೀರಿದ್ದು ಎಂಬುದನ್ನು ಅವರು ಸ್ಪಷ್ಟವಾಗಿಯೇ ಸಾರುತ್ತಾರೆ. ಜ್ಞಾನಿಯಾದವನಲ್ಲಿ ‘ಜಾತಿ ಭೇದ’ ಅಳಿಯುತ್ತದೆ ಹಾಗೂ ಎಲ್ಲರಲ್ಲೂ ನಾನೇ ಇದ್ದೇನೆ ಎನ್ನುವ ಅನುಭವವಾಗುತ್ತದೆ ಎನ್ನುತ್ತಾರೆ.  ಇಂಥ ಹೇಳಿಕೆಗಳು ಜಾತಿಭೇದವನ್ನು ಗಟ್ಟಿಮಾಡುತ್ತವೆ ಎನ್ನಬಹುದಾದರೆ ಜಾತಿಭೇದ ಅಳಿಯಬೇಕು ಎನ್ನುತ್ತಿರುವ ಇಂದಿನ ಎಲ್ಲ ಬುದ್ಧಿಜೀವಿಗಳ ಹೇಳಿಕೆಗಳೂ ಅದೇ ಕೆಲಸವನ್ನು ಮಾಡುತ್ತಿವೆ ಎಂದೇಕೆ ಹೇಳಬಾರದು? ಹಾಗಾಗಿ ಶಂಕರರ ಮೇಲಿನ ಆಪಾದನೆಯು ತರ್ಕಬದ್ಧವಾಗಿ ಕಾಣಿಸುವುದಿಲ್ಲ. ಹಾಗಾದರೆ ಈ ಆಪಾದನೆಯು ಎಲ್ಲಿಂದ ಹುಟ್ಟಿಕೊಂಡಿತು?

  ಭಾರತೀಯ ಮತಗಳ ಇತಿಹಾಸವನ್ನು ಕ್ರಿಶ್ಚಿಯಾನಿಟಿಯ ಇತಿಹಾಸದ ಮಾದರಿಯಲ್ಲಿ ಕಟ್ಟಿದಾಗ ಶಂಕರರ ಈ ಆಧುನಿಕ ರೂಪವು ಸಿದ್ಧವಾಯಿತು. ಅಂದರೆ ಈ ಆಧುನಿಕ ಇತಿಹಾಸದ ಪ್ರಕಾರ ಬ್ರಾಹ್ಮಣರೆಂಬ ಕ್ಯಾಥೋಲಿಕರ ವಿರುದ್ಧ ಹೋರಾಡಿದ ಬೌದ್ಧ ಮತವು ಬ್ರಾಹ್ಮಣ ಪುರೋಹಿತಶಾಹಿಯನ್ನು ಹಿಮ್ಮೆಟ್ಟಿಸಿತು. ಅದಕ್ಕೆ ಪ್ರತಿಯಾಗಿ ಯುರೋಪಿನಲ್ಲಿ ಚರ್ಚಿನ ಸುಧಾರಣೆಗೆ ವಿರೋಧ ಹಾಗೂ ಅದರ ಪ್ರತಿ ಸುಧಾರಣೆಗಳು ನಡೆದ ಮಾದರಿಯಲ್ಲಿ ಬ್ರಾಹ್ಮಣ ಪುರೋಹಿತ ಶಾಹಿಯು ಶಂಕರರ ನೇತೃತ್ವದಲ್ಲಿ ಬೌದ್ಧರ ಮೇಲೆ ಪ್ರತಿ ದಾಳಿ ಮಾಡಿ ಹಿಂದೂಯಿಸಂ ಹಾಗೂ ಬ್ರಾಹ್ಮಣತ್ವದ ಪುನರುತ್ಥಾನ ಮಾಡಿತು. ಈ ಪ್ರತಿ ಸುಧಾರಣೆಯಲ್ಲಿ ಹಿಂಸಾತ್ಮಕ ದಾಳಿಗಳು ಇರುವಂತೆಯೇ ಆಂತರಿಕ ಸುಧಾರಣೆಗಳೂ ಇದ್ದವು. ಪಾಶ್ಚಾತ್ಯ ಇತಿಹಾಸಕಾರರು ಶಂಕರರನ್ನು ಹೀಗೆ ಅರ್ಥೈಸಿದರು. ಹಾಗೂ  ಇಂದು ಶಂಕರರ ಅಭಿಮಾನಿಗಳು ಕೂಡ ಈ ಇತಿಹಾಸವನ್ನು ನಂಬುತ್ತಾರೆ. ಶಂಕರರು ಅವೈದಿಕ ಮತಗಳನ್ನು ಹಿಮ್ಮೆಟ್ಟಿಸಲು ಭಾರತದಾದ್ಯಂತ ಸಂಚರಿಸಿದರು ಹಾಗೂ ನಾಲ್ಕು ಮಠಗಳನ್ನು ಸ್ಥಾಪಿಸಿದರು ಎಂದೂ ಹೇಳುತ್ತಾರೆ. ಹಾಗೂ ಶಂಕರರ ಕೃತ್ಯಗಳು ಹಾಗೂ ಮಠಗಳಿಂದಾಗಿ ಬ್ರಾಹ್ಮಣ ಕರ್ಮಠತೆ ಹಾಗೂ ಹಿಂದೂಯಿಸಂ ಪುನರುಜ್ಜೀವನಗೊಂಡವು ಎನ್ನುತ್ತಾರೆ. ಅಂದರೆ ಶಂಕರರು ಹಿಂದೂಯಿಸಂನ ಪುನರುತ್ಥಾನಕಾರರು ಎಂಬ ಕಥೆಯೂ, ಅವರು ಜಾತಿ ವ್ಯವಸ್ಥೆ ಹಾಗೂ ಬ್ರಾಹ್ಮಣ ಪುರೋಹಿತಶಾಹಿಯನ್ನು ಗಟ್ಟಿಮಾಡಿದ ಕಥೆಯೂ ಒಂದೇ ನಾಣ್ಯದ ಎರಡು ಮುಖಗಳು ಮಾತ್ರ.

  ಯುರೋಪಿಯನ್ನರು ಕ್ರಿಶ್ಚಿಯಾನಿಟಿಯ ಕುರಿತ ತಮ್ಮ ಕಥೆಯನ್ನು ತಲೆಯೊಳಗೆ ಇಟ್ಟುಕೊಂಡು ಭಾರತೀಯ ಇತಿಹಾಸವನ್ನು ಬರೆಯಲು ಪ್ರಾರಂಭಿಸಿದಾಗ ಮಧ್ಯಕಾಲದಲ್ಲಿ ಭಾರತದಲ್ಲಿ ಬೌದ್ಧ ಮತವು ಅವನತಿ ಹೊಂದಿದ್ದು ಕಂಡು ಬಂದಿತು. ಮುಖ್ಯವಾಗಿ ಪ್ರಾಕ್ತನ ಶಾಸ್ತ್ರಜ್ಞರು ಬೌದ್ಧ ಸ್ಮಾರಕಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಪ್ರಾಚೀನ ಕಾಲದ ಬೌದ್ಧ ಸ್ಮಾರಕಗಳೆಲ್ಲವೂ ಮಧ್ಯಕಾಲದಲ್ಲೇ ಹಾಳು ಬಿದ್ದದ್ದು ಹಾಗೂ ಅಷ್ಟರ ನಂತರ ಹಿಂದೂ ದೇವಾಲಯಗಳು ವಿಫುಲವಾಗಿ ಸೃಷ್ಟಿಯಾದದ್ದೂ ಕಂಡು ಬಂದಿತು. ಇದನ್ನು ಅರ್ಥಮಾಡಿಕೊಳ್ಳಲು ಕೆಲವು ಪ್ರಾಕ್ತನ ಶಾಸ್ತ್ರಜ್ಞರು ಶಂಕರರ ಕಥೆಯನ್ನು ಬಳಸಿಕೊಂಡರು. ಆಗ ಶಂಕರಾಚಾರ್ಯರು ಭಾರತದಾದ್ಯಂತ ಬೌದ್ಧ ಸ್ತೂಪಗಳನ್ನೆಲ್ಲ ಹಾಳುಮಾಡಿ ಬೌದ್ಧ ಮತವನ್ನು ಭಾರತದಿಂದ ಓಡಿಸಿದರು ಎಂಬ ಕಥೆಯು ಸೃಷ್ಟಿಯಾಯಿತು. ಆದರೆ ಶಂಕರರ ಕುರಿತಂತೆ ಈ ಮೇಲಿನ ಅವಶೇಷಗಳನ್ನು ಹೀಗೆ ಅರ್ಥೈಸಲಿಕೆ ಕ್ರಿಶ್ಚಿಯಾನಿಟಿಯ ಕಥೆಯನ್ನು ಬಿಟ್ಟರೆ ನಮಗೆ ಬೇರೆ ಸುಸಂಬದ್ಧವಾದ ಪ್ರಮೇಯಗಳಿಲ್ಲ.

 ಶಂಕರರ ಅಭಿಮಾನಿಗಳಿಗೆ ಈ ಮೇಲಿನ ನಿರೂಪಣೆಯು ಶಂಕರರ ತೇಜೋವಧೆ ಮಾಡುತ್ತಿದೆ ಎಂದೆನಿಸುತ್ತದೆ, ಆದರೂ ಕೂಡ ಅವರಿಗೆ ಪ್ರಚಲಿತದಲ್ಲಿರುವ ಪುನರುತ್ಥಾನದ ಇತಿಹಾಸದ ಕುರಿತು ಹೆಮ್ಮೆಯೇ ಇದೆ. ಅಂದರೆ ಶಂಕರರು ಹಿಂದೂಯಿಸಂನ ಪುನರುತ್ಥಾನ ಮಾಡಿಲ್ಲ ಎಂದರೆ ಅವರಿಗೆ ಸರಿಯೆನಿಸುವುದಿಲ್ಲ. ಬಹುಶಃ ಇದಕ್ಕೆ ಕಾರಣ ಎಂದರೆ ಶಂಕರರ ಕುರಿತಂತೆ ಶಂಕರರ ಜೀವನ ಚರಿತ್ರೆ ಹಾಗೂ ದಿಗ್ವಿಜಯದ ಕುರಿತ ವಿಭಿನ್ನ ಕಥನಗಳು ಹಾಗೂ ಅದನ್ನಾಧರಿಸಿದ ಸ್ಥಳೀಯ ಪ್ರತೀತಿಗಳನ್ನು ತಪ್ಪಾಗಿ ಅಥರ್ೈಸಿದ್ದು. ಅದರಲ್ಲಿ ಶಂಕರರು ಪರಮತ ಖಂಡನೆಯನ್ನು ಮಾಡಿ, ಅನ್ಯರನ್ನೆಲ್ಲ ಸೋಲಿಸಿ ಅದ್ವೈತ ದರ್ಶನವನ್ನು ಸ್ಥಾಪಿಸಿದ ವರ್ಣನೆಗಳು ಬರುತ್ತವೆ. ಅವರ ಕಾಲದ ಅನೇಕ ವಿದ್ವಾಂಸರು ತಮ್ಮ ಪಕ್ಷವನ್ನು  ಸಮರ್ಥಿಸಿಕೊಳ್ಳಲಾಗದೇ ಸೋತು ಅವರ ಶಿಷ್ಯತ್ವವನ್ನು ಸ್ವೀಕರಿಸಿದ ಚಿತ್ರಣಗಳೂ ಬರುತ್ತವೆ. ಆದರೆ ಈ ಗೆಲುವು ಬೌದ್ಧಿಕ ಸ್ವರೂಪದ್ದೇ ಹೊರತೂ ಹೊಡೆದಾಟದ ಅಥವಾ ಯುದ್ಧದ ರೂಪದಲ್ಲಿ ಇತ್ತು ಎಂಬ ಅಭಿಪ್ರಾಯವನ್ನು ಯಾವ ಕೃತಿಗಳೂ ನಿಡುವುದಿಲ್ಲ. ಕ್ರುಸೇಡ್ ಹಾಗೂ ಜಿಹಾದ್ಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಅವು ಹೊಡೆದಾಟದ ಹಾಗೆ ಕಾಣುವ ಸಂಭವ ಇದೆ. ಆದರೆ ಭಾರತೀಯರಿಗೆ ಕ್ರುಸೇಡ್ ಅಥವಾ ಜಿಹಾದ್ಗಳಿಗೆ ಸಮನಾದ ಪರಿಕಲ್ಪನೆಗಳು ಗೊತ್ತಿರಲಿಲ್ಲ. ಈ ವ್ಯತ್ಯಾಸವನ್ನು ಹಿಂದೂಯಿಸಂನ ಪುನರುತ್ಥಾನದ ವಕ್ತಾರರು ಗಮನಿಸುವುದು ಅತ್ಯಗತ್ಯ.

  ಇದರ ಜೊತೆಗೇ ಶಂಕರರು ಅದೈತ ದರ್ಶನದ ರೂಪದಲ್ಲಿ ವೇದಾಂತವನ್ನು ಬೌದ್ಧಾದಿ ನಾಸ್ತಿಕ ಮತಗಳಿಗೆ ಪ್ರತಿಯಾಗಿ ತರ್ಕಬದ್ಧವಾಗಿ ಸ್ಥಾಪಿಸಿದವರು. ಅವರ ಸಿದ್ಧಾಂತವು ಬ್ರಹ್ಮಜ್ಞಾನ ಅಥವಾ ಪರಮಾತ್ಮ ತತ್ವದ ಪ್ರತಿಪಾದನೆಯಾಗಿದೆ. ವೇದಾಂತದ ಆಸ್ತಿಕ ದರ್ಶನವು ಉಪನಿಷತ್ತುಗಳ ಕಾಲದ ನಂತರ ಕಳೆದುಕೊಂಡ ಪ್ರಭೆಯನ್ನು ಶಂಕರರಲ್ಲಿ ಮತ್ತೊಮ್ಮೆ ಗಳಿಸಿಕೊಂಡಿತಷ್ಟೇ ಅಲ್ಲ, ತದನಂತರ ಅದು ಪುನಃ ಜಿಜ್ಞಾಸೆಯ ವಸ್ತುವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಪ್ರಾಧಾನ್ಯತೆ ಹೊಂದಿತು. ಅಂದರೆ ಈ ಅರ್ಥದಲ್ಲಿ ಶಂಕರರು ವೇದಾಂತ ದರ್ಶನ ಹಾಗೂ ಬ್ರಾಹ್ಮಣ ಕಲ್ಪನೆಯ ಮಹತ್ವವನ್ನು ಪುನಃ ಪ್ರಚಲಿತದಲ್ಲಿ ತಂದರು. ಜೊತೆಗೇ ವರ್ಣಧರ್ಮದ ಕಲ್ಪನೆ ಹಾಗೂ ವೈದಿಕ ವಿಧಿಗಳನ್ನು ಕೇಂದ್ರೀಕರಿಸಿಕೊಂಡ ಚರ್ಚಿಗೆ ಹೊಸ ಪ್ರಸ್ತುತತೆಯನ್ನು ಕೂಡ ನೀಡಿದರು. ಶಂಕರರು ವೇದಮಾರ್ಗವನ್ನು ಪ್ರಚುರಗೊಳಿಸಿದರು ಎಂಬ ವಾಕ್ಯವು ಭಾರತೀಯ ಸಂದರ್ಭದಲ್ಲಿ ಈ ರೀತಿಯಲ್ಲಿ ಮಾತ್ರವೇ ಅರ್ಥಪಡೆದುಕೊಳ್ಳಬಹುದು. ಅವರು ಸೈನ್ಯ, ಕಾನೂನು ಹಾಗೂ ಪ್ರಭುತ್ವವನ್ನಾಧರಿಸಿದ ಬ್ರಾಹ್ಮಣ ಶಾಹಿಯನ್ನು ಸ್ಥಾಪಿಸಲಿಲ್ಲ.

  ಆದರೆ ಈ ಘಟನೆಯನ್ನು ಇದಕ್ಕೆ ಅರ್ಥಾರ್ಥ ಸಂಬಂಧವಿಲ್ಲದ ಕ್ರಿಶ್ಚಿಯನ್ ಇತಿಹಾಸಕ್ಕೆ ಸಮೀಕರಿಸಿದರೆ ಅದು ಹೀಗೆ ವಿರೂಪಗೊಳ್ಳುವುದು ಸ್ವಾಭಾವಿಕ. ವೇದಾಂತ ದರ್ಶನವೆಂದರೆ ತರತಮಗಳ ವ್ಯವಸ್ಥೆಯನ್ನು ಎತ್ತಿಹಿಡಿದ ಮಧ್ಯಕಾಲೀನ ಕ್ಯಾಥೋಲಿಕ್ ಚರ್ಚಲ್ಲ ಎಂಬುದು ಉಪನಿಷತ್ತುಗಳ ಮೇಲೆ ಅವಸರದಿಂದ ಕಣ್ಣು ಹಾಯಿಸಿದರೂ ಕಂಡುಬರುವ ವಿಷಯ. ಶಂಕರರು ಪರಮಾತ್ಮವು ಜ್ಞಾನದಿಂದ ಸಿದ್ಧಿಸತಕ್ಕದ್ದೇ ಹೊರತೂ ಕೇವಲ ವೈದಿಕ ಕರ್ಮದಿಂದಲ್ಲ ಎಂಬುದಾಗಿ ಪ್ರತಿಪಾದಿಸುತ್ತಾರೆ. ಹಾಗೂ ಚಂಡಾಲರಾದಿಯಾಗಿ ಎಲ್ಲ ಜಾತಿಯವರಿಗೂ ಬ್ರಹ್ಮಜ್ಞಾನ ಸಾಧ್ಯ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಇಷ್ಟೆಲ್ಲವನ್ನೂ ಕಡೆಗಣಿಸಿ ಶೂದ್ರರಿಗೆ ವೇದಾಧಿಕಾರ ಇಲ್ಲ ಎಂಬುದಾಗಿ ಅವರು ನೀಡಿದ ಒಂದು ತಾಂತ್ರಿಕ ಹಾಗೂ ತಾರ್ಕಿಕ ನಿರ್ಣಯವನ್ನು ಮಾತ್ರ ಅವರ ಜಾತಿಯತೆಗೆ ಆಧಾರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಏಕೆಂದರೆ ಅದಕ್ಕೆ ಒತ್ತು ನೀಡದಿದ್ದರೆ ಪಾಶ್ಚಾತ್ಯ ಇತಿಹಾಸವು ಸುಳ್ಳಾಗಿ ಬಿಡುತ್ತದೆಯಲ್ಲ? ಈ ವರಸೆಗೇನೆನ್ನುತ್ತೀರಿ?

Categories: Uncategorized
  1. ಸೀತಾ
    ಜೂನ್ 14, 2015 ರಲ್ಲಿ 8:44 ಫೂರ್ವಾಹ್ನ

    ಹೆಗಡೆ ಸರ್, ಶಂಕರ ಮಧ್ವ ಬಸವ ಪುರಂದರ ಕನಕ ಮೊದಲಾದ ಪುರಾತನರನ್ನು ಜೀವಪರವೋ ಜೀವವಿರೋಧಿಯೋ ಎಂದು ವಿಂಗಡಿಸುವ ಕನ್ನಡ ಸಾಹಿತಿಗಳ ಮನೋಭಾವದ ಬಗ್ಗೆ ಏನನ್ನು ಹೇಳುತ್ತೀರಿ? ಉದಾಹರಣೆಗೆ ನೋಡಿ: http://ladaiprakashanabasu.blogspot.in/2015/06/blog-post_13.html

    “ಕನಕರಷ್ಟೇ ಅಲ್ಲ, ಇವತ್ತು ನಮ್ಮೆಲ್ಲ ಪುರಾತನರು, ಅವರ ಕಲೆ-ಸಾಹಿತ್ಯ-ತತ್ವಗಳು ಜೀವಪರವಾಗಿವೆ ಎನ್ನಲು ಎರಡು ಅಗ್ನಿಪರೀಕ್ಷೆಗಳನ್ನು ಹಾದು ಬರಬೇಕಾಗಿದೆ:
    ಅವರು/ಅವರ ಸಂವೇದನೆಗಳು ಶೋಷಿತಪರ, ಅಧಿಕಾರಹೀನರ ಪರವಾಗಿವೆಯೇ?
    ಅವು ಲಿಂಗ ಅಸಮಾನತೆ, ತಾರತಮ್ಯ ಗುರುತಿಸುವ ಲಿಂಗಸೂಕ್ಷ್ಮತೆಯನ್ನು ಹೊಂದಿವೆಯೇ?”

    “ಕನಕರಲ್ಲಷ್ಟೇ ಅಲ್ಲ, ಸಾಮಾಜಿಕ ತಾರತಮ್ಯ ವಿರೋಧಿಸಿ, ಮೇಲ್ಜಾತಿ ಪಾರಮ್ಯವನ್ನು ಪ್ರಶ್ನಿಸಿ, ಜಾತಿನಾಶ ಪ್ರತಿಪಾದಿಸುವ ಬಹುತೇಕ ಪುರಾತನ ಹಾಗೂ ಸಮಕಾಲೀನ ಚೇತನಗಳು ಲಿಂಗತಾರತಮ್ಯ ವಿಷಯಕ್ಕೆ ಬಂದರೆ ಅದರ ವಿರುದ್ಧ ದನಿಯೆತ್ತುವುದಿರಲಿ, ಗ್ರಹಿಸಿರುವುದಕ್ಕೆ ಪುರಾವೆ ಸಿಗುವುದೂ ಕಷ್ಟವಾಗಿದೆ. “

    Like

  2. Seetha
    ಆಗಷ್ಟ್ 14, 2015 ರಲ್ಲಿ 11:30 ಅಪರಾಹ್ನ

    Sir, the story of vaidikas depriving Dalits of education and knowledge is repeated ad nauseam by our progressive thinkers. Here is another example: _http://www.vartamaana.com/2015/08/13/%e0%b2%a8%e0%b3%8d%e0%b2%af%e0%b2%be%e0%b2%af%e0%b2%be%e0%b2%82%e0%b2%97%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a6%e0%b2%b2%e0%b2%bf%e0%b2%a4-%e0%b2%ae%e0%b2%a4%e0%b3%8d%e0%b2%a4%e0%b3%81/

    Like

  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ